ಯತಿಚಕ್ರವರ್ತಿಗಳಾದ ಶ್ರೀವ್ಯಾಸತೀರ್ಥರನ್ನು ಜಗತ್ತಿಗೆ ಕೊಟ್ಟ ಮಹಾನುಭಾವರು ಶ್ರೀಬ್ರಹ್ಮಣ್ಯತೀರ್ಥರು. ಎಲ್ಲ ಮಂತ್ರಗಳನ್ನು ಅತಿಶ್ರೇಷ್ಠಮಟ್ಟದ ಅನುಸಂಧಾನದಿಂದ ಜಪಿಸಿ ಸಿದ್ಧಿಯನ್ನು ಪಡೆದ ಪೂತಾತ್ಮರಿವರು. ಇವರ ಜೀವನ ಚರಿತ್ರೆಯೆಲ್ಲವನ್ನೂ ಹೇಳುವ ಉದ್ದೇಶ ಇಲ್ಲಿಲ್ಲ. ಆದರೆ ಮೈನವಿರೇಳುವ ಒಂದು ಘಟನೆಯನ್ನು ಇಲ್ಲಿ ಹೇಳುವ ಪ್ರಯತ್ನ ಮಾಡುವೆ. ಈ ಸಂಗತಿಯನ್ನು ಮೊದಲಿಗೆ ನಾನು ಕೇಳಿದ್ದು ೧೦ ವರ್ಷಗಳ ಕೆಳಗೆ, ಪೂಜ್ಯ ಶ್ರೀಸುವಿದ್ಯೇಂದ್ರತೀರ್ಥರ ಉಪನ್ಯಾಸದಲ್ಲಿ.
ದೇವರಪೂಜೆಯನ್ನು ಮಾಡುವಾಗ ಅನುಕ್ರಮವಾಗಿ ತತ್ತ್ವನ್ಯಾಸ ಹಾಗು ಮಾತೃಕಾನ್ಯಾಸಗಳನ್ನು ಮಾಡುವುದು ಶಾಸ್ತ್ರ ನಿಯಮವಷ್ಟೇ. ಈ ಕ್ರಿಯೆಯು ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಸಮಯಾವಕಾಶವನ್ನು ಕೇಳುವುದು. ಸಾಮಾನ್ಯವಾಗಿ ಸಮಯಾವಕಾಶವಿಲ್ಲದವರು ಪ್ರತಿನಿತ್ಯದ fದೇವತಾರ್ಚನೆಯಲ್ಲಿ ಈ ಕ್ರಮವನ್ನು ಬಿಟ್ಟು ಮುಂದಿನ ಕ್ರಮಗಳನ್ನು ಅನುಸರಿಸುವರು. ಆದರೆ ಸಾಧಕರಿಗೆ ಇದಾವುದೂ ಲೆಕ್ಕವಲ್ಲ. ಅವರು ಪಾಂಗಿತವಾಗಿ ಪೂಜೆ ಮಾಡಿಯೇ ಸಿದ್ಧ. ಶ್ರೀಬ್ರಹ್ಮಣ್ಯತೀರ್ಥರು ಈ ರೀತಿಯ ಸಾಧಕರಿಗೆಲ್ಲ ಶಿರೋಮಣಿಗಳು. ಶ್ರೀಗೋಪಾಲಕೃಷ್ಣದೇವರ ಪೂಜೆಯ ಸಂದರ್ಭದಲ್ಲಿ ಕಲಶಪೂಜೆಯನ್ನು ಆಚಾರ್ಯಮಧ್ವರು ವಿವರಿಸಿದ ಮಂತ್ರಗಳ ಅನುಸಂಧಾನಪೂರ್ವಕ ಪಠಣದೊಂದಿಗೆ ಸಾವಧಾನವಾಗಿ ಮಾಡುತಿದ್ದರು. ಇವರ ಈ ಸಾವಧಾನವು ಇತರರಿಗೆ “ನಿಧಾನಗತಿ”ಯಾಗಿ ಕಾಣಿಸುತ್ತಿತ್ತು. ಅದರಲ್ಲೂ ಈ ಕ್ರಮವತ್ತಾದ ಪೂಜೆಯು ಶ್ರೀಗಳವರ ಬಲಸೇವೆಯ ಪರಿಚಾರಕನ ಮಟ್ಟಿಗೆ ಪ್ರತಿನಿತ್ಯವೂ ಸಹನೆಯ ಪರೀಕ್ಷೆಯಾಗಿ ಪರಿಣಿಮಿಸಿತ್ತು.
ಒಂದು ದಿನ ತಡೆಯಲಾಗದೆ ಶ್ರೀಗಳವರಿಗೆ ಸಲಹೆ ಮಾಡಿದ. “ಸ್ವಾಮೀ!, ಬರೀ ಕಲಶಪೂಜೆಗೆ ಇಷ್ಟು ಹೊತ್ತು ಯಾಕೆ ಮಾಡ್ತೀರಿ? ಅದನ್ನ ಬೇಗ ಮಗಿಸಿ ಮುಂದಿನ ಪೂಜೆ ಮಾಡಬಹುದಲ್ಲ?” ಎಂದು. ಶ್ರೀಗಳವರು ನಸುನಕ್ಕರು. ಬಲಸೇವಕ ಮತ್ತೂ ಹೇಳಿದ. “ನಾಳೆಯಿಂದ ಪೂಜೆಯನ್ನು ಬೇಗ ಮಾಡಿ ಮುಗಿಸಿದಲ್ಲಿ ಎಲ್ಲರಿಗೂ ತಮ್ಮ ತಮ್ಮ ಕೆಲಸಗಳಿಗೆ ತೆರಳಲು ಅನುಕೂಲವಾಗುವುದು”. ಶ್ರೀಗಳವರ ಮತ್ತೂ ನಸುನಕ್ಕು ಹೇಳಿದರು. “ಓಹೋ ಹಾಗೋ? ನಾಳೆಯಿಂದ ಯಾಕೆ? ನಿನ್ನ ಸಲಹೆಯನ್ನು ಇಂದಿನಿಂದಲೇ ಕಾರ್ಯರೂಪಕ್ಕೆ ತರೋಣ, ಸರಿ, ಈ ಕಲಶವನ್ನು ಎತ್ತಿ ಆಚೆ ಇಡು, ಮುಂದಿನ ಪೂಜೆಯನ್ನು ಮಾಡಿದರಾಯ್ತು”. ಶ್ರೀಗಳಾವರ ಮಾತಿನಿಂದ ಬಲಸೇವಕನಿಗೆ ಸಂತಸವಾಯ್ತು. ಒಡನೆಯೆ ಆತ ಆ ಕಲಶವನ್ನು ಎತ್ತಿಡಲು ಮುಂದಾದ. ಆದರೆ ಕಲಶವನ್ನು ಅಲುಗಿಸಲು ಆಗಲಿಲ್ಲ. ಅದು ಸ್ವಲ್ಪ ಭಾರವಾಗಿದೆ ಎಂದೆನಿಸಿತು. ತಾನು ಕುಳಿತ ಜಾಗವೇ ಹೊಂದಾಣಿಕೆಯಾಗಿಲ್ಲವೆಂದು ಭಾವಿಸಿ ಒಂದಷ್ಟು ಮುಂದೆ ಸರಿದು ಕಲಶವನ್ನು ಎತ್ತಿಡಲು ಪ್ರಯತ್ನಿಸಿದ. ಉಹುಂ, ಕಲಶ ಸ್ಥಿರವಾಗಿಯೇ ಉಳಿಯಿತು! ಹುಬ್ಬೇರಿಸಿ ಮತ್ತೊಮ್ಮೆ ಪ್ರಯತ್ನಿಸಿದ ಆದರೂ ಆಗಲಿಲ್ಲ, ಕಲಶ ಇಷ್ಟೇಕ ಭಾರವಾಗಿದೆ ಎಂದು ಆಲೋಸುತ್ತಲೇ ಎದ್ದು ನಿಂತು ಕಲಶವನ್ನು ತೆಗೆಯುವ ಪ್ರಯತ್ನ ಮಾಡಿದ, ಆಗ ಅವನಿಗೆ ಅರಿವಾಯಿತು ತಾನು ಕುಳಿತ ಸ್ಥಾನ ಸರಿಯಾಗಿಯೇ ಇದೆ, ಆದರೆ ಕಲಶವು ಮಾತ್ರ ಅತಿಯಾದ ಭಾರವನ್ನು ಗಳಿಸಿಕೊಂಡಿದೆ ಎಂದು!. ಆತ ಪ್ರಶ್ನಾರ್ಥಕವಾಗಿ ಗುರುಗಳತ್ತ ನೋಡಿದ. ಗುರುಗಳ ಮುಖದಲ್ಲಿ ಮಂದಹಾಸ ಇದ್ದೇ ಇತ್ತು.
ಅವನಿಗಿಂತಲೂ ಮುನ್ನ ಗುರುಗಳೇ ಪ್ರಶ್ನೆ ಮಾಡಿದರು. “ಅಯ್ಯಾ! ಬ್ರಾಹ್ಮಣ, ನಾವೇನಾದರೂ ಬರೀ ಕಲಶಪೂಜೆಯನ್ನು ಮಾತ್ರ ಮಾಡಿದ್ದಲ್ಲಿ ನೀನು ಅದನ್ನು ಸುಲಭವಾಗಿ ಎತ್ತಿ ಇಡಬಹುದಿತ್ತು. ಆದರೆ ಪ್ರತಿನಿತ್ಯವೂ ತತ್ತ್ವಾಭಿಮಾನಿದೇವತೆಗಳು ಬಂದು ಪೂಜೆ ಸ್ವೀಕರಿಸಬೇಕಾದರೆ ಶ್ರದ್ಧೆ ಹಾಗು ಅನುಸಂಧಾನ ಬೇಡವೇ? ನಮ್ಮೀ ಅನುಸಂಧಾನವನ್ನು ಅವರು ಒಪ್ಪಿಕೊಂಡು ಬರಬೇಕಾದಲ್ಲಿ ಇಷ್ಟು ಮಾತ್ರವೂ ನಾವು ತಾಳ್ಮೆಯಿಂದ ಇರದಿದ್ದರೆ ಹೇಗೆ?”.
ಅಲ್ಲಿಗೆ ಬಲಸೇವಕನಿಗೆ ಕಲಶದ ತೂಕವು ಅಪರಿಮಿತವಾಗಿ ಹೆಚ್ಚಿದ್ದರ ಹಿನ್ನೆಲೆ ಸಂಪೂರ್ಣ ಅರ್ಥವಾಯಿತು. ತತ್ತ್ವಾಭಿಮಾನಿದೇವತೆಗಳು ಸಾಕ್ಷಾತ್ತಾಗಿ ಆ ಕಲಶದಲ್ಲಿ ಬಂದು ನಿಂತು ಗುರುಗಳ ಕೈಯಿಂದ ಪೂಜೆ ಸ್ವೀಕರಿಸುವ ಪರಿಯನ್ನು ಆತ ತಿಳಿದುಕೊಂಡ. ಗುರುಗಳ ಮಹಿಮೆಗೆ ಬೆರಗಾಗಿ ಕ್ಷಮೆಯಾಚಿಸಿದ.
ಒಂದಿಷ್ಟು ಎಕ್ಸ್ಟ್ರಾ ಮಾಹಿತಿ :
ದೇವರಿಗೆ ಮಾಡುವ ಷೋಡಷೋಪಚಾರಗಳಿಗೆಲ್ಲ ಅತಿ ಪವಿತ್ರವಾದ ನೀರು ಬೇಕು. ಗಂಗೆ, ಯಮುನೆ, ಸರಸ್ವತಿ ಇತ್ಯಾದಿ ಮಹಾನದಿಗಳ ನೀರಿನಿಂದಲೇ ಭಗವಂತನಿಗೆ ಅಭಿಷೇಕ ಮಾಡಬೇಕು. ಆದರೆ ಈ ನದಿಗಳಿಗೆ ಹೋಗಿ ನೀರು ತರಲಾಗುವುದಿಲ್ಲವಲ್ಲ! ಹಾಗಾಗಿ ಆಯಾ ನದಿಗಳ ಆಭಿಮಾನಿ ದೇವತೆಗಳನ್ನು ವಿಧಿವತ್ತಾದ ಮಂತ್ರಗಳಿಂದ ಅನುಸಂಧಾನ ಮಾಡಿ ನಮ್ಮೆದುರಿಗೆ ಇರುವ ನೀರಿನಲ್ಲಿ ಅವರನ್ನು ಆವಾಹಿಸಬೇಕು. ಹಾಗಾದಾಗ ಆ ಕಲಶದಲ್ಲಿ ಜಗತ್ತಿನ ಸಕಲತೀರ್ಥಗಳ ಸನ್ನಿಧಾನವು ಉಂಟಾಗಿ ಭಗವಂತನ ಪೂಜೆಗೆ ಯೋಗ್ಯವಾಗುವುದು. ಹೀಗಾಗಿ ಮೊದಲಿಗೆ ಕಲಶಪೂಜೆಯನ್ನು ಮಾಡುವುದು ಕ್ರಮ.
ಶ್ರೀಬ್ರಹ್ಮಣ್ಯತೀರ್ಥರ ಸನ್ನಿಧಾನದಲ್ಲಿ ಇಂದಿಗೂ ಶ್ರೇಷ್ಠಮಟ್ಟದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಬರಲಾಗಿದೆ. ಇವರ ವೃಂದಾವನ ಸನ್ನಿಧಾನ ಬೆಂಗಳೂರು – ಮೈಸೂರು ಹೆದ್ದಾರಿಯ ಮೇಲಿರುವ ಚನ್ನಪಟ್ಟಣದ ಬಳಿಯ ಅಬ್ಬೂರಿನಲ್ಲಿದೆ.
ಮಂತ್ರ ಹೇಳಿದ ಮಾತ್ರಕ್ಕೆ ದೇವತೆಗಳು ಬರುತ್ತಾರೆಯೋ ಎಂದು ಪ್ರಶ್ನೆಗೆ ಮೇಲಿನ ಘಟನೆಯೇ ಉತ್ತರ.
ಈಶಾವಾಸ್ಯಂ ಶರ್ಮ, ಬೆಳ್ಳಿಪುರ.
ಚಿತ್ರಕೃಪೆ : madhwamixer.blogspot.com
Lekhana adbuthvaagide.
Thanks for the support. But truly speaking, the story was originally told by Sri Suvidyendraru. I just recollected and reproduced it.
great mahiti about swamiji. kindly disclose many such instances to get more vishwas in adhyatma to all brahmins.