ವಾಗ್ಬೊಮ್ಮಲೇ ಬೊಮ್ಮಲು ರಾ – ಶ್ರೀರಾಮಚಂದ್ರತೀರ್ಥರು

ಶ್ರೀವಿದ್ಯಾಶ್ರೀಶತೀರ್ಥಶ್ರೀಪಾದಂಗಳವರು ಶ್ರೀರಾಮಚಂದ್ರತೀರ್ಥರ ವೃಂದಾವನಕ್ಕೆ ಮಂಗಳಾರತಿ ಮಾಡುತ್ತಿರುವ ಚಿತ್ರದ ಕೃಪೆ : ಶ್ರೀಪವನ್ ಭಾರದ್ವಾಜ್

ವಂದಾರುಕಲ್ಪತರವೇ ವಾದಿಕೈರವಭಾನವೇ |
ಶ್ರೀರಾಮಚಂದ್ರಗುರವೇ ನಮಃ ಕಾರುಣ್ಯಸಿಂಧವೇ ||

ಶ್ರೀವ್ಯಾಸರಾಜಮಠದ ಶ್ರೀರಾಮಚಂದ್ರತೀರ್ಥರು ಅತ್ಯಂತ ಪ್ರಭಾವಶಾಲೀ ವ್ಯಕ್ತಿತ್ವವುಳ್ಳವರು. ಶ್ರೀಮಠದ ಸಂಪ್ರದಾಯಪ್ರವರ್ತಕರು ಎಂದೇ ಇವರನ್ನು ಪರಿಗಣಿಸಿದ್ದಾರೆ. ಇದರರ್ಥ ಇವರ ಮೊದಲು ಸಂಪ್ರದಾಯಗಳು ಇದ್ದಿಲ್ಲ ಎಂದಲ್ಲ. ಕೆಲವೊಮ್ಮೆ ಹಿಂದೆ ಆಚರಿಸದೇ ಇದ್ದ ಕೆಲವು ವಿಧಿವಿಧಾನಗಳನ್ನು, ಅವು ನಡೆಸಲು ಹಿರಿಯರು ಒಪ್ಪುವುದಿಲ್ಲ.ಇದಕ್ಕೆ ಕಾರಣಗಳೇನೇ ಇರಲಿ ಶಾಸ್ತ್ರಕ್ಕೆ ಸಮ್ಮತವಾಗಿದ್ದಾಗ್ಯೂ ಕೂಡ ಅವುಗಳ ಆಚರಣೆಯು ಕಂಡುಬಂದಿರುವುದಿಲ್ಲ. ಇನ್ನೂ ಕೆಲವೊಮ್ಮೆ ಭಿನ್ನವಾದ ಪ್ರಮಾಣವಾಕ್ಯಗಳಿಂದಾಗಿ ಏಕಾದಶಿ, ತಿಥಿ, ಹಬ್ಬಗಳ ಆಚರಣೆಯಲ್ಲಿ ಗೊಂದಲವಾಗುವುದುಂಟು. ಇಂತಹ ಗೊಂದಲಗಳನ್ನು ಶಾಶ್ವತವಾಗಿ ನಿವಾರಿಸಬೇಕೆಂದರೆ “ಇದು ಸರಿ, ಇದರಂತೆ ಆಚರಿಸಿ, ಇದು ಬೇಡ, ಇದರ ಅಗತ್ಯವಿಲ್ಲ” ಎಂಬ ನಿರ್ಣಯವನ್ನು ತೆಗೆದುಕೊಳ್ಳಲು ನಿರ್ದುಷ್ಟವಾದ ವಿವೇಕ, ಅಗಾಧವಾದ ಆತ್ಮವಿಶ್ವಾಸ ಮತ್ತು ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳುವ ಹಳೆಯ ಮಂದಿಯನ್ನು ಪಕ್ಕಕ್ಕೆ ಸರಿಸುವ ಧೈರ್ಯವು ಬೇಕು. ಇಂತಹ ವಿಶಿಷ್ಟಗುಣಗಳ ಖನಿಯಾಗಿದ್ದವರು ಶ್ರೀರಾಮಚಂದ್ರತೀರ್ಥರು. ಇವರು ಮಾಡಿಟ್ಟ ನಿರ್ಣಯಗಳನ್ನೇ ಇಂದಿಗೂ ಶ್ರೀವ್ಯಾಸರಾಜಗುರುಸಾರ್ವಭೌಮರ ಪರಂಪರೆಯಲ್ಲಿ ಪಾಲಿಸಿಕೊಂಡು ಬಂದಿರುವುದು. ಮುಂದಿನ ಪೀಳಿಗೆಗೆ ಶಾಸ್ತ್ರೋಕ್ತ ಆಚರಣೆಗಳಲ್ಲಿ ಗೊಂದಲವಿರಬಾರದು ಎನ್ನುವ ಕರುಣೆ ಅವರಲ್ಲಿ ಅಪಾರವಾಗಿ ಇತ್ತು.

ಶ್ರೀವ್ಯಾಸರಾಯ ಮುನಿಗಳ ವಿದ್ಯಾಶಿಷ್ಯರೂ, ಮುಂದೆ ಶ್ರೀಕವೀಂದ್ರತೀರ್ಥರಮಠದ ಪೀಠಾಧಿಪತಿಗಳೂ ಆದ ಶ್ರೀವಿಜಯೀಂದ್ರತೀರ್ಥರ ಬಳಿ ಶ್ರೀರಾಮಚಂದ್ರತೀರ್ಥರು ವಿದ್ಯಾರ್ಜನೆಯನ್ನು ಮಾಡಿದವರು. ಚಿಕ್ಕವಯಸ್ಸಿನಿಂದಲೇ ಪ್ರಾರಂಭಿಸಿ, ಬಹುಕಾಲದವರೆಗೆ ಅವರಲ್ಲಿ ಅಧ್ಯಯನ ಮಾಡಿದ್ದಾರೆಂದು ನಾವು ಎರಡೂ ಮಠಗಳ ಪರಂಪರೆಯನ್ನು ಕಾಲಾನುಕ್ರಮದ ರೀತಿಯಲ್ಲಿ ನೋಡಿದರೆ ತಿಳಿಯಬಹುದು.

ಕಂಬಾಲೂರು ಎಂಬ ಅಗ್ರಹಾರವೊಂದರಲ್ಲಿ ಶ್ರೀಗುರುಗಳ ಅವತಾರವಾಯಿತು. ಈ ಕಂಬಾಲೂರು ಇಂದಿನ ಕರ್ನೂಲು ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಶ್ರೀಶೈಲ, ಯಾಗಂಟಿ, ಅಹೋಬಲ ಕ್ಷೇತ್ರಗಳಿರುವ ನಲ್ಲಮಲೆ ಪರ್ವತಸಾಲಿನ ಕೆಳಗೆ ತಂಪಾಗಿ ನೆಲೆಸಿರುವ ಊರಿದು. ಆಗ ಯಾವ ಜಿಲ್ಲೆಯಲ್ಲಿತ್ತೋ ತಿಳಿಯದು. ಆದರೆ ಪರಿಸರದ ಭಾಷೆಯು ಅಂದೂ ಇಂದೂ ತೆಲುಗೇ.

ಶ್ರೀಗಳವರಿಗೆ ಶಾಸ್ತ್ರಪಾಠದಲ್ಲಿ ಅತ್ಯಂತವಾದ ಪ್ರೀತಿಯಿತ್ತು. ಸಂಸ್ಥಾನಪೂಜೆಗೆ ಎರಡನೆ ಸ್ಥಾನ, ಸುಧಾಪಾಠಕ್ಕೆ ಮೊದಲನೇ ಸ್ಥಾನವನ್ನು ಕೊಟ್ಟಿದ್ದರೆಂದರೆ ಇವರಿಗೆ ಶ್ರೀಮಧ್ವ-ಜಯ-ರಾಜೇಂದ್ರ-ವಿಬುಧೇಂದ್ರಾರ್ಯರ ವಾಕ್ಯಗಳ ಮೇಲೆ ಅದೆಷ್ಟು ಅದಮ್ಯವಾದ ಪ್ರೀತಿ ಇತ್ತು ಎನ್ನುವುದು ಅರಿವಾಗುತ್ತದೆ. ಶಿಷ್ಯರಿಗೆ ಸುಧಾಪಾಠವನ್ನು ಹೇಳಲು ತೊಡಗಿದರೆಂದರೆ ಹೊತ್ತಿನ ಪರಿವೆಯೇ ಇಲ್ಲದೆ ಹೋಗುತ್ತಿತ್ತು. ಬೆಳಿಗ್ಗೆ ನಸುಕಿನಲ್ಲಿ ಪ್ರಾರಂಭವಾದ ಪಾಠ ಸೂರ್ಯ ಪ್ರಖರನಾಗತೊಡಗಿದರೂ ಮುಂದುವರೆಯುತ್ತಿಂತೆ. ಇತರ ಪರಿಚಾರಕರು ಬಂದು ಸ್ವಾಮಿ ಹೊತ್ತಾಗಿದೆ ಪೂಜೆಗೆ. ಪೂಜೆಯನ್ನು ಮುಗಿಸಿ ಮತ್ತೆ ಪಾಠವನ್ನು ಮುಂದುವರೆಸಬಹುದಲ್ಲ ಎಂದು ಕೇಳಿದರೆ, ಶ್ರೀಗಳವರು ಸುಧಾಗ್ರಂಥವನ್ನು ತೋರಿಸುತ್ತಾ “ಈ ವಾಗ್ಬೊಮ್ಮಲೇ ಬೊಮ್ಮಲು ರಾ” ಎಂದು ನಕ್ಕು ಬಿಡುತ್ತಿದ್ದರಂತೆ. ಇದು ತೆಲುಗು ಭಾಷೆ. ಕನ್ನಡದಲ್ಲಿ ಇದರರ್ಥವೆಂದರೆ, “ಈ ಮಾತುಗಳೆಂಬ ಮೂರ್ತಿಗಳೇ ನಿಜವಾದ ಮೂರ್ತಿಗಳು ಕಣೋ” ಎಂಬುದಾಗಿ. ಮಧ್ವಶಾಸ್ತ್ರವಾಕ್ಯಗಳ ಮೇಲೆ ಅದೆಷ್ಟು ಆಳವಾದ ಪ್ರೀತಿಯಿತ್ತು ಇವರಿಗೆ ಎಂಬುದು ಈ ಅವರ ದಿವ್ಯವಾದ ನಗುಮಾತಿನಿಂದಲೇ ಗೊತ್ತಾಗುತ್ತದೆ.

ಇಷ್ಟು ಮಾತ್ರಕ್ಕೆ, ಈ ಅಕ್ಷರಗಳಿಗಿಂತ ದೊಡ್ಡದೇನಲ್ಲ ಮೂಲಗೋಪಾಲಕೃಷ್ಣನ ಪೂಜೆ ಎಂದು ನಾವುಗಳು ತಿಳಿದುಕೊಂಡುಬಿಡಬಾರದು. ಸುಧಾಧಿಗ್ರಂಥಗಳಲ್ಲಿ ಸದಾ ಮುಳುಗಿದವರಿಗೆ ನೀರಿನ ಸ್ನಾನವು ಬೇಕೇ ಬೇಕೆಂಬುದೇನಿಲ್ಲ. ಅಂತಹ ವ್ಯಕ್ತಿ ಸದಾ ಶುಚಿ. ಶಾಸ್ತ್ರವಾಕ್ಯವು ಯಾವಾಗಲೂ ಮಡಿ. ಅಂತಹ ಮಾತುಗಳನ್ನೇ “ಸದಾ ಅಧ್ಯಯನ ಮಾಡುತ್ತಿರುವವನು” ಯಾವಾಗಲೂ ಮಡಿಯಾಗಿಯೇ ಇರುತ್ತಾನೆ ಎಂಬುದು ಶ್ರೀಗಳವರ ಚರಿತ್ರೆಯ ಈ ಒಂದು ಚಿಕ್ಕ ಸನ್ನಿವೇಶದಿಂದ ತಿಳಿದುಬರುತ್ತದೆ. ಇವೆಲ್ಲವೂ ಅವಧೂತರ ನಡತೆ. ಸುಲಭವಾಗಿ ನಮಗೆ ತಲೆಗೆ ತೋಚಿದಂತೆ ಅರ್ಥೈಸಬಾರದು. ಪಾಠ ಹೇಳುವುದರ ಮಧ್ಯ ಸಮಯವನ್ನು ಮಾಡಿಕೊಂಡು ಶ್ರೀಶ್ರೀಗಳವರು ಸಂಪ್ರದಾಯಬದ್ಧವಾಗಿಯೇ ಶ್ರೀಮೂಲಗೋಪಾಲಕೃಷ್ಣನ ಪೂಜೆಯನ್ನು ಸಹ ಮಾಡುತ್ತಿದ್ದರು. ಮಧ್ವಶಾಸ್ತ್ರದ ಕಲಿಕೆ ಮತ್ತು ಕಲಿಸುವಿಕೆ ಎಂಬುದು ಬಹುದೊಡ್ಡ ಜವಾಬ್ದಾರಿ ಎಂಬುದನ್ನು ಶ್ರೀಗಳವರು ಸ್ಪಷ್ಟವಾಗಿ ತಾವು ನಡೆದುಕೊಂಡು ಉಳಿದವರಿಗೆ ಆದರ್ಶವನ್ನು ಹಾಕಿಹೊಟ್ಟಿದ್ದಾರೆ.

ವಾದಿಗಳೆಂಬ ನಿಶಾಚರಿಗಳಿಗೆ ಸೂರ್ಯನಂತೆ ಇದ್ದವರು ಇವರು ಎಂಬ ಮಾತಿನಿಂದ ಇವರ ಜ್ಞಾನವು ದೊಡ್ಡ ಪ್ರಖರತೆಯನ್ನು ಹೊಂದಿತ್ತು ಎಂದು ಸುಲಭವಾಗಿ ತಿಳಿಯಬಹುದು. ಈ ಒಂದು ಖ್ಯಾತಿಗೆ ಮತ್ಸರಿಸಿದ ಕೆಲವರು ಇವರ ಪ್ರಾಣಹರಣಕ್ಕೆ ಯತ್ನಿಸುತ್ತಾರೆ. ಕೆಲವರು ಹಾವನ್ನು ಬಿಟ್ಟರು, ಇನ್ನು ಕೆಲವರು ಇವರು ಪಾಠ ಹೇಳುವಾಗ ತಲೆಯ ಮೆಲೆ ಒಂದು ಕಲ್ಲನ್ನು ಬೀಳಿಸುತ್ತಾರೆ. ಆದರೆ ಈ ವಿಷಯವು ಶ್ರೀಗಳವರಿಗೆ ಮೊದಲೇ ಗೋಚರವಾಗಿತ್ತು. ಏನೂ ತಲೆಯನ್ನೇ ಕೆಡಿಸಿಕೊಳ್ಳದೆ ಪಾಠಮಾಡುತ್ತಿದ್ದರವರು. ಮೇಲಿಂದ ಕಲ್ಲು ಜಾರಿ ಇವರನ್ನು ಕಚ್ಚಬಂದ ಹಾವಿನ ಮೇಲೆ ಬಿದ್ದು ಅದು ತಮೋಲೋಕಕ್ಕೆ ಹೋಯಿತು. ತಮ್ಮ ಮೇಲೆ ಇದ್ದ ಶ್ರೀಹರಿಕೃಪೆಯ ದ್ಯೋತಕವಿದು ಕಲ್ಲು ಎಂದೇ ಶ್ರೀಗಳವರು ಭಾವಿಸಿ ಅದನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದರು. ಮುಂದೆ ಅವರ ವೃಂದಾವನದ ಮೇಲೆ ಕೂಡ ಆ ಕಲ್ಲನ್ನು ಇರಿಸಲಾಯಿತು. ಇಂದಿಗೂ ಈ ಒಂದು ಕಲ್ಲನ್ನು ಅವರ ವೃಂದಾವನದ ಮೇಲೆ ನಾವು ನೋಡಬಹುದು. ಶ್ರೀಗಳವರ ವೃಂದಾವನ ವೆಲ್ಲೂರು ನಗರದ ಹೊರಗೆ, ಪಾಲಾರ್ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ.

ನನಗೆ ಈ ಚರಿತ್ರೆಯು ತಿಳಿದದ್ದು ಕೂಡ ಒಂದು ಸುಯೋಗವೇ ಸರಿ. ಈಗ ಸುಮಾರು ೧೮-೨೦ ವರ್ಷಗಳ ಕೆಳಗೆ ಶ್ರೀರಾಮಚಂದ್ರತೀರ್ಥರ ಆರಾಧನೆಯನ್ನು, ಕೆಲ ಸಜ್ಜನರು ಶ್ರೀಗಳವರ ಅವತಾರ ಸ್ಥಳವಾದ ಕಂಬಾಲೂರಿನಲ್ಲಿಯೇ ನಡೆಸಿದರು. ಆ ಸಂದರ್ಭದಲ್ಲಿ ಪಾಲ್ಗೊಳ್ಳುವ ಸುಯೋಗ ನನಗೂ ಒದಗಿತ್ತು. ಅಲ್ಲಿ ನಡೆದ ಜ್ಞಾನಯಜ್ಞದಲ್ಲಿ ಈ ಮೇಲ್ಕಂಡ ಎರಡು ಮಹಿಮಾಬಿಂದುಗಳು ಹೊರಹೊಮ್ಮಿದವು. ಆ ಆರಾಧನೆಯನ್ನು ನಡೆಸಿದವರು ಬೇರಾರೋ ಅಲ್ಲ. ಇಂದಿನ ಶ್ರೀಮಾಧವತೀರ್ಥ ಮಠದ ಹಿರಿಯಮಠಾಧೀಶರಾದ ಪೂಜ್ಯ ಶ್ರೀಶ್ರೀ ವಿದ್ಯಾಸಾಗರಮಾಧವತೀರ್ಥರು. ಇವರು ತಮ್ಮ ಪೂರ್ವಾಶ್ರಮದಲ್ಲಿ ಕೆಲವು ವಿದ್ವಾಂಸರನ್ನು ಏಕತ್ರಗೊಳಿಸಿ ಈ ಆರಾಧನೆಯನ್ನು ನಡೆಸಿದರು. ಕಂಬಾಲೂರು ಆಗ ಒಂದು ಕುಗ್ರಾಮವಷ್ಟೇ. ದೊಡ್ಡ ಸಾಹಸದ ಕೆಲಸ ಆ ಊರನ್ನು ಮುಟ್ಟುವುದು. ಸುತ್ತ ಭತ್ತದ ಗದ್ದೆಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಆರಾಧನಾ ಸಾಹಿತ್ಯವನ್ನೆಲ್ಲ ಕರ್ನೂಲಿನಿಂದಲೇ ಸಾಗಿಸಬೇಕು. ಆರಾಧನೆಗೆ ಒಂದು ಸೂಕ್ತವಾದ ಜಾಗವೂ ಅಲ್ಲಿದ್ದಿಲ್ಲ. ಆದರೆ ಅಲ್ಲಿನ ಪೋಸ್ಟ್ ಮಾಸ್ಟರ್ ಒಬ್ಬರು ತಮ್ಮ ಮನೆಯನ್ನೇ ಈ ಆರಾಧನೆಗೆ ಬಿಟ್ಟುಕೊಟ್ಟರು. ಅವರು ಮೂಲತಃ ಅದ್ವತಿಗಳು. ಆದರೆ ಆರಾಧನೆಯು ಅವರ ಮನೆಯಲ್ಲಿ ನಡೆದಾಗ ಅವರ ಸಂತೋಷವು ಮೇರೆ ಮೀರಿತ್ತು. ಧನ್ಯ ಜೀವರು ಅವರು.

ಅಂದ ಹಾಗೆ ನನಗೆ ಈ ಆರಾಧನೆಯಲ್ಲಿ ಭಾಗವಹಿಸುವ ಅವಕಾಶವನ್ನು ಮಾಡಿಕೊಟ್ಟದ್ದು ಪೂಜ್ಯರಾದ ಶ್ರೀಶ್ರೀ ಗಿರಿಆಚಾರ್ಯರು. (ಶ್ರೀ ಶ್ರೀ ಸುಬುಧೇಂದ್ರತೀರ್ಥರ ಪೂರ್ವಶ್ರಮದ ತಂದೆಯವರು). ಅವರು ಅಂದಿನ ಆರಾಧನೆಯಲ್ಲಿ ಅಲಂಕಾರ ಪಂಕ್ತಿಯಲ್ಲಿ ಕುಳಿತಿದ್ದರು. ಎಂದೂ ಅಲಂಕಾರ ಪಂಕ್ತಿಯಲ್ಲಿ ಕೂಡದ ಆಚಾರ್ಯರು, ಶ್ರೀರಾಮಚಂದ್ರತೀರ್ಥರ ಆರಾಧನಾ ಸಂದರ್ಭದಲ್ಲಿ ಮಾತ್ರ ಸಂತೋಷದಿಂದಲೇ ಭಾಗವಹಿಸಿದ್ದರು. ಇದು ಜ್ಞಾನಿಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ತೋರಿಕೊಡುವ ಒಂದು ಚರ್ಯೆಯೇ ಸರಿ.

ಶ್ರೀರಾಘವೇಂದ್ರತೀರ್ಥ ಮಹಾಪ್ರಭುಗಳು ಕೂಡಾ, ತಮ್ಮ ಪೂರ್ವಾಶ್ರಮದಲ್ಲಿ ಶ್ರೀರಾಮಚಂದ್ರತೀರ್ಥರಲ್ಲಿ ವಿದ್ಯಾರ್ಜನೆಯನ್ನು ಮಾಡಿದ್ದಾರೆಂದು ಹಿರಿಯರ ಮಾತಿದೆ. ಎಂತಹ ಆದರ್ಶವಾದ ನಡುವಳಿಕೆಯಲ್ಲವೇ ಇದೆಲ್ಲ. ಶ್ರೀವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀಸುರೇಂದ್ರರಿಗೆ ಕೊಟ್ಟರು, ಹಾಗೆ ಕೊಟ್ಟ ವಿಜಯೀಂದ್ರರಲ್ಲಿ ಶ್ರೀರಾಮಚಂದ್ರತೀರ್ಥರು ಪಾಠ ಹೇಳಿಸಿಕೊಂಡರು, ಶ್ರೀರಾಮಚಂದ್ರತೀರ್ಥರಲ್ಲಿ ಶ್ರೀರಾಯರು ಪಾಠ ಹೇಳಿಸಿಕೊಂಡಿದ್ದಾರೆ! ಇಂತಹ ಒಂದು ಅಪೂರ್ವವಾದ ಬಾಂಧವ್ಯ ಇಂದಿಗೂ ಮುಂದುವರೆಯಲಿ ಎಂಬುದು ನನ್ನ ಹೆಬ್ಬಯಕೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.