ಎಂಥ ಒತ್ತಡದ ಸಂದರ್ಭದಲ್ಲಿಯೂ ತನ್ನ ಚಿತ್ತವನ್ನು ಕದಡಿಕೊಳ್ಳಲಾರದೆ, ಮಾಡಬೇಕಾದ ಕರ್ತವ್ಯವನ್ನು ಮಾಡಿಯೇ ಮಾಡುತ್ತಾನೆ ಎನ್ನುವುದು ಜ್ಞಾನಿಯ ಲಕ್ಷಣ. ಈ ಲಕ್ಷಣವು ನಮ್ಮ ಗುರುಗಳಿಗೆ ತದ್ವತ್ತಾಗಿ ಹೊಂದುತ್ತದೆ.
ಮಾರ್ಚ್ 20, 2020ರಂದು ಶ್ರೀಪಾದರು ತಮಿಳುನಾಡಿನ ಈರೋಡಿನಲ್ಲಿದ್ದರು. ದೊಡ್ಡ ಕಾರ್ಖಾನೆಯೊಂದರ ಭೇಟಿಗೆ ಅದರ ಮಾಲಕರು ಶ್ರೀಗಳವರನ್ನು ಪ್ರಾರ್ಥಿಸಿಕೊಂಡಿದ್ದರು. 20 – 24ರವರೆಗೆ ಈರೋಡಿನ ಕಾರ್ಯಕ್ರಮ ನಿಗದಿಯಾಗಿತ್ತು. 20ರಂದು ಏಕಾದಶಿ ಹಾಗೂ 21ರಂದು ದ್ವಾದಶಿ ತಿಥಿಗಳು. ನಿಗದಿತ ಕಾರ್ಯಕ್ರಮಗಳಿಗೆ ಎಲ್ಲ ಸಿದ್ಧತೆಗಳೂ ಆಗಿದ್ದವು. ಆದರೆ 20ನೇ ತಾರೀಖಿನಂದು ಒಂದು ರಾಷ್ಟ್ರಮಟ್ಟದ ಘೋಷಣೆಯೊಂದು ಹೊರಬಿದ್ದಿತು. ರಾಷ್ಟ್ರದ ಜನತೆಯ ಹಿತಕ್ಕಾಗಿ ಮಾರ್ಚ್ 22ರಂದು ರಾಷ್ಟ್ರಾದ್ಯಂತ ಜನತಾ ಕರ್ಫ್ಯೂವನ್ನು ಜಾರಿ ಮಾಡಲಾಗುತ್ತದೆ ಎಲ್ಲರೂ ಸಹಕರಿಸಬೇಕು ಎಂಬುದೇ ಆ ಘೋಷಣೆ.
ಶ್ರೀಗಳವರು ತಕ್ಷಣ ಯೋಚನೆ ಮಾಡಿ, ತಮ್ಮ ಮುಂದಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ “ನಾಳೆ ಬೆಳಿಗ್ಗೆ ಪಾರಣೆ ಮುಗುಸಿಕೊಂಡು ಸಂಜೆಯ ಒಳಗಾಗಿ ಉಡುಪಿಯನ್ನು ಮುಟ್ಟಿಕೊಂಡು ಬಿಡೋಣ. ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ವರ್ಷ ಇಡೀ ಹೀಗೆಯೆ ಇರುವ ಲಕ್ಷಣಗಳಿವೆ. ಹೀಗಾಗಿ ಕರ್ಪ್ಯೂ ಇರುವಷ್ಟು ದಿನವೂ ಮಠದಲ್ಲಿಯೇ ಇದ್ದು, ಸುಧಾಪಾಠವನ್ನು ಮಾಡೋಣ” ಎಂದು ತೀರ್ಮಾನಿಸಿದರು. ಕಾರ್ಯಕ್ರಮದ ಆಯೋಜಕರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಲಾಯಿತು. ಆದರೆ ಬಹಳ ಜನರಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲವಾದ್ದರಿಂದ ಮಾರನೆಯ ದಿನ, ಅಂದರೆ ದ್ವಾದಶಿಯಂದು ಬೆಳಿಗ್ಗೆ ಶ್ರೀರಾಮದೇವರ ಪೂಜೆಯ ದರ್ಶನ ಮತ್ತು ಪಾರಣೆಗೆಂದು ಆಗಮಿಸಿದ್ದರು. ಇವರೆಲ್ಲರ ತೀರ್ಥಪ್ರಸಾದ, ಮಂತ್ರಾಕ್ಷತೆಯ ವಿತರಣೆ ಮುಗಿಯುವುದು ತಡವಾದಷ್ಟೂ ಉಡುಪಿಗೆ ಮುಟ್ಟುವುದು ಕ್ಲಿಷ್ಟವಾಗುವುದು ಎಂದು ಶ್ರೀಗಳವರ ಮನಸ್ಸಿನಲ್ಲಿ ಚಿಂತೆ ಮೊದಲಾಯ್ತು.
ಈ ಚಿಂತೆಗೆ ಇಂಧನವೂ ಸಿಕ್ಕಿತು. ಪೂಜೆಯು ಮುಗಿದ ನಂತರ ಬಹಳ ಜನ ಶ್ರೀಗಳವರಲ್ಲಿ ಬಂದು ನಾವು ಉಪವಾಸವೇ ಇದ್ದೀವಿ, ಪಾದಪೂಜೆ ಸ್ವೀಕರಿಸಿ ಎಂದು ಪ್ರಾರ್ಥಿಸಿದರು. ಆಗಲಿ ಎಂದು ಪಾದಪೂಜೆಯನ್ನು ಮುಗಿಸಿದ ಆ ಎಲ್ಲರೂ ಮತ್ತೆ ಬಂದು ಶ್ರೀಗಳವರಲ್ಲಿ ತಪ್ತಮುದ್ರಾಪ್ರದಾನ ಮಾಡಿ ಎಂದು ಪ್ರಾರ್ಥನೆ ಮಾಡಿದರು. ಶ್ರೀಗಳವರ ಒಳಪ್ರಜ್ಞೆ ಬಹಳ ಜಾಗೃತವಾದದ್ದು. ಅವರು ಒಂದು ಕ್ಷಣ ಈ ಮುದ್ರಾಪ್ರದಾನಕ್ಕೆ ಒಪ್ಪಲಿಲ್ಲ. ಆ ಜನರಲ್ಲಿ ತಾವೇ ಕೇಳಿದರು. “ನೋಡಿ ನಿಮ್ಮಲ್ಲಿ ಬೇರೆ ಬೇರೆ ಗುರುಮಠದ ಸಂಪ್ರದಾಯದವರಿದ್ದೀರಿ. ನಾವು ನಿಮಗೆ ಮುದ್ರೆಯನ್ನು ಹಾಕಬಹುದೇ? ಏನೂ ತೊಂದರೆ ಇಲ್ಲ ತಾನೆ ನಿಮಗೆ?” ಎಂದು. ಆ ಭಕ್ತಜನರೇ ಶುದ್ಧ ಅಂತಃಕರಣದಿಂದ ಶ್ರೀಗಳವರಲ್ಲಿ ಮತ್ತೆ ಪ್ರಾರ್ಥಿಸಿಕೊಂಡರು. ನಂತರ ಶ್ರೀಗಳವರು ಮುದ್ರಾಪ್ರದಾನಕ್ಕೆ ಒಪ್ಪಿದರು. ಆದರೆ ಹೀಗೆ ಒಪ್ಪಿದ್ದೇ ತಡ ಅಲ್ಲಿ ಸುಮ್ಮನೆ ಕುಳಿತಿದ್ದ ಉಳಿದೆಲ್ಲರೂ ಮುದ್ರೆಗಾಗಿ ಮುಂದೆ ಬಂದುಬಿಟ್ಟರು. ಊರಿಗೆ ಹೊರಡುವ ಸಮಯ ಮತ್ತೂ ಮುಂದೋಡಿತು ಎಂದು ಶ್ರೀಗಳವರ ಮನದಲ್ಲಿ ಚಿಂತೆ ದಟ್ಟವಾಯ್ತು. ಆ ಜನರನ್ನೇ “ಉಡುಪಿಗೆ ರಾತ್ರಿಯ ಒಳಗೆ ತಲುಪಬಹುದಲ್ಲವೇ? ರಸ್ತೆಗಳು ಸರಿಯಾಗಿವೆಯೇ ಈಗ” ಎಂದೆಲ್ಲ ಕೇಳಿದರು. ಅನುಕೂಲವಾಗಿದೆ ಎಂದು ಅವರು ಹೇಳಿದರೂ ಒಂದು ಒತ್ತಡವಂತೂ ಶ್ರೀಗಳವರ ಮೇಲೆ ಇದ್ದಿದ್ದು ಸ್ಪಷ್ಟವೇ ಇತ್ತು. ಅಂತೂ ಮುದ್ರಾಧಾರಣೆ ಶುರು ಆಯಿತು.
ಆ ಭಕ್ತರಿಗೆ ಮುದ್ರೆ ಹಾಕುವ ಸಂದರ್ಭದಲ್ಲಿ ಮುದ್ರೆಗಳು ವಿಪರೀತವಾಗಿ ಬಿಸಿಯಾಗಿಬಿಟ್ಟಿದ್ದವು. ಶ್ರೀಗಳವರು ಒಮ್ಮೆ ಜನರತ್ತ ಒಮ್ಮೆ ನೋಡಿದರು. ಅಲ್ಲಿ ಇದ್ದವರಲ್ಲಿ ವಯಸ್ಸಾದ ಮುದುಕರೇ ಹೆಚ್ಚಿನವರಿದ್ದರು. ಶ್ರೀಗಳವರು ವಿಪರೀತ ಕಾಯ್ದ ಮುದ್ರೆಗಳನ್ನು ಇವರಿಗೆ ಹಾಕಿದರೆ ಸಹಿಸಲು ಕಷ್ಟವಾಗುತ್ತದೆ ಎಂದು, ಆ ಮುದ್ರೆಗಳನ್ನು ತಮ್ಮ ಒದ್ದೆಯಾದ ವಸ್ತ್ರದಲ್ಲಿ ಒತ್ತಿ ಒತ್ತಿ, ಬಿಸಿಯನ್ನು ಕಡಿಮೆ ಮಾಡಿ, ಅದು ಸಹಿಸಲು ಸಾಧ್ಯವೇ ಎಂಬುದನ್ನು ತಮ್ಮ ಕೈಯಿಂದ ಪದೇ ಪದೇ ಮುಟ್ಟಿ ಖಚಿತಪಡಿಸಿಕೊಂಡರು. ಆ ವಯಸ್ಸಾದವರಿಗೂ ಮತ್ತು ಪುಟಾಣಿಗಳಿಗೂ ಅದು ತೊಂದರೆ ಮಾಡಲಾರದು ಎಂಬುದನ್ನು ಮನವರಿಕೆ ಮಾಡಿಕೊಂಡ ನಂತರವೇ ಮುದ್ರೆಯನ್ನು ಪ್ರದಾನ ಮಾಡಿದರು.
ಎಲ್ಲರಿಗೂ ಮುದ್ರೆ ಹಾಕಿ, ಎಲ್ಲರಿಗೂ ತೀರ್ಥ ಪ್ರಸಾದವನ್ನು ಸ್ವೀಕರಿಸಲು ತಿಳಿಸಿ, ನಂತರವೇ ಉಡುಪಿಗೆ ತಮ್ಮ ಪ್ರಯಾಣವನ್ನು ಬೆಳೆಸಿದರು. ಹೀಗೆ ಒಂದು ಒತ್ತಡದ ಸಂದರ್ಭದಲ್ಲಿಯೂ ಕೂಡ ತಮ್ಮ ಸ್ಥಿರಚಿತ್ತವನ್ನು ಕಾಪಾಡಿಕೊಂಡು, ಕರ್ತವ್ಯವನ್ನು ಮಾಡಿಯೇ ಮುಂದೆ ಸಾಗಿದರು. ಕರುಣೆ ಮತ್ತು ಕರ್ತವ್ಯಗಳನ್ನು ಒಟ್ಟಿಗೆ ನೋಡುವ ಭಾಗ್ಯವನ್ನು ನಮಗೆ ಒದಗಿಸಿದರು.
ಊರಿಗೆ ಹೊರಡುವ ಅರ್ಜೆಂಟಿದೆ ಹೀಗಾಗಿ ಮುದ್ರಾಧಾರಣೆ ಕ್ಯಾನ್ಸಲ್ ಎಂದಿದ್ದರೂ ಸಾಕು ಯಾರೂ ಜಗಳವಾಡುತ್ತಿರಲಿಲ್ಲ. ಒಂದು ವೇಳೆ ಅರ್ಜೆಂಟಿನಲ್ಲಿಯೇ ಬಿಸಿಯಾದ ಮುದ್ರೆಗಳನ್ನು ಒತ್ತಿದ್ದರೂ ಯಾರೂ ತಪ್ಪು ತಿಳಿಯುತ್ತಿದ್ದಿಲ್ಲ. ಶ್ರೀಗಳವರ ಒತ್ತಡವನ್ನು ಅವರೆಲ್ಲ ಅರ್ಥಮಾಡಿಕೊಳ್ಳುವಷ್ಟು ವಿವೇಕಿಗಳೇ ಇದ್ದರು. ಆದರೂ ಭಕ್ತರ ಅಗತ್ಯಕ್ಕೆ ಶ್ರೀಗಳವರು ಮನ್ನಣೆಯನ್ನು ಕೊಟ್ಟರು. ಭಕ್ತರ ದೈಹಿಕ ಕ್ಷಮತೆಯನ್ನೂ ಅರ್ಥಮಾಡಿಕೊಂಡರು. ಜೊತೆಗೆ, ಇತರ ಗುರುಮಠಗಳ ಸಂಪ್ರದಾಯಕ್ಕೆ ತಾವು ಭಂಗ ತರಬಾರದು ಎಂಬ ಪ್ರಜ್ಞೆ ಶ್ರೀಗಳವರಲ್ಲಿ ಯಾವಾಗಲೂ ಇದ್ದೇ ಇರುವುದು ಗಮನಾರ್ಹ. ಇಲ್ಲಿರುವುದು ಆ ದಿನದ ವಿಡಿಯೋನೇ.
ಶ್ರೀಗಳವರಿಂದ ಹೀಗೆ ಮುದ್ರಾಂಕನವನ್ನು ಮಾಡಿಸಿಕೊಂಡವರ ದೀಕ್ಷೆ ಬಹಳ ದೊಡ್ಡದು. ಅವರ ಮನೆತನಗಳೆಲ್ಲ ಚೆನ್ನಾಗಿ ಬೆಳಗಲಿ.
ಕೊರೊನಾ ರೋಗವು ವರ್ಷವಿಡೀ ದೇಶವನ್ನು ಬಾಧಿಸಲಿದೆ. ಇದೊಂದು ರಾಷ್ಟ್ರೀಯ ಪ್ರಾರಬ್ಧವಾಗಲಿದೆ ಎಂಬುದನ್ನು ಅವರ ತಪಸ್ವೀ ಮನಸ್ಸು ಮೊದಲೇ ಕಂಡುಕೊಂಡಿತ್ತು. ರಾಷ್ಟ್ರನಾಯಕನ ಮಾತಿನಲ್ಲಿ ಅರ್ಥವಿದೆ ಎಂದು ಅದಕ್ಕೆ ಗೌರವ ಕೊಟ್ಟು ಕೊಟ್ಟು ಶ್ರೀಗಳವರು, ಕರ್ಫ್ಯೂ ಮೊದಲಾಗುವ ಮೊದಲೇ ಉಡುಪಿಯನ್ನು ಸೇರಿಕೊಂಡರು. ಸೈದ್ಧಾಂತಿಕ ಧರ್ಮ ಮತ್ತು ರಾಷ್ಟ್ರಧರ್ಮ ಎರಡೂ ಕೂಡ ಪಾಲಿಸಲೇಬೇಕಾದ ಕರ್ತವ್ಯಗಳು ಎಂಬುದನ್ನು ತಾವು ನಡೆದುಕೊಂಡು ನಮಗೆ ತೋರಿಸಿಕೊಟ್ಟರು.
“ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ” ಎಂಬುದು ಒಂದು ಸುಭಾಷಿತ. ಇದು ಸುಭಾಷಿತವೋ ಅಥವಾ ಯಾರೋ ಒಬ್ಬ ಅನುಭಾವಿಯ ಮಾತೋ ನನಗೆ ತಿಳಿಯದು. ಆದರೆ ಸೂಕ್ತಿಯ ಮೊದಲಾರ್ಧಕ್ಕೆ ನಮ್ಮ ಶ್ರೀಗಳವರು ಒಂದು ಸವಾಲು ಎನಿಸಿದ್ದಾರೆ. ಶಾಸ್ತ್ರಗಳು ಬರೆದಿಟ್ಟಂತೆಯೇ ಅವರ ಜೀವನವಿದೆ, ಅವರ ಜೀವನವು ನಮಗೆಲ್ಲ ಬರೆದಿಟ್ಟುಕೊಳ್ಳಲೇಬೇಕಾದ ಮಹಿಮೆಗಳಿಂದ ಕೂಡಿದೆ.
Be First to Comment