ಕೃಷ್ಣಮಠದಿಂದ ಸುಮಾರು ೪ ಕಿ.ಮೀ ದೂರ ಉತ್ತರಕ್ಕೆ ಬೈಕು ಓಡಿಸಿದರೆ ಕುದುಕ್ಕುಳಿ ಎನ್ನುವ ಊರು ಸಿಗುತ್ತದೆ. ಊರು ಎನ್ನುವುದಕ್ಕಿಂತ ಚಿಕ್ಕ ಕಾಡು ಎನ್ನುವುದು ಸರಿ. ಇದು ಈಗ ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿದೆ.
ಈ ಕುದುಕ್ಕುಳಿಯಲ್ಲಿ ಒಂದು ಚಿಕ್ಕದಾದ ಆದರೆ ದಟ್ಟವಾದ ಕಾಡಿನ ಮಧ್ಯ ಒಂದು ಪುಟ್ಟ ಶಿವಾಲಯವು ಇದೆ. ಈ ಶಿವನ ಹೆಸರು ಶ್ರೀಮಹಾಲಿಂಗೇಶ್ವರ. ನೀವು ಊಹೆ ಮಾಡಲೂ ಸಾಧ್ಯವಾಗದಂತಹ ಸುಂದರವಾದ ಜಾಗವಿದು. ನಿಜಕ್ಕೂ ಹೃದಯಕ್ಕೆ ತಂಪೆರೆವುದು. ಉಡುಪಿಗೆ ಬಂದಾಗ ನೋಡಲೇಬೇಕಾದ ಜಾಗ. ಹೊರಗಿನ ಜನರಿಗೆ ಇಂಥದೊಂದು ತಪೋವನವಿದೆ ಇಲ್ಲಿ ಎಂದು ಕಲ್ಪನೆಮಾಡಲೂ ಸಾಧ್ಯವಿಲ್ಲ. ಸಂಜೆ ೫ಕ್ಕೆಲ್ಲಾ ಕತ್ತಲೆಯು ಆವರಿಸುವಷ್ಟು ದಟ್ಟವಾದ ವೃಕ್ಷರಾಶಿ ಇಲ್ಲಿದೆ. ಇದರ ಮಧ್ಯದಲ್ಲಿ ಉಮಾಮನೋಹರನು ನೆಲೆಸಿದ್ದಾನೆ. ಎಷ್ಟು ಪ್ರಾಚೀನ ಎನ್ನುವುದಕ್ಕೆ ನಿಖರ ದಾಖಲೆಗಳೇನಿಲ್ಲ. ಆದರೆ ಅಷ್ಟಮಂಗಲ ಪ್ರಶ್ನೆಯ ಪ್ರಕಾರ ಶ್ರೀಪರಶುರಾಮದೇವರಿಂದ ಪ್ರತಿಷ್ಟೆ ಆಗಿದೆ ಎಂದು ಸ್ಥಳಪುರಾಣವು ಹೇಳುತ್ತದೆ.
ಶಿವನಿಗೊಂದು ಪುಟ್ಟ ಗುಡಿ, ಅದರ ಸುತ್ತ ಚಿಕ್ಕದೊಂದು ಪ್ರದಕ್ಷಿಣಾಪಥ, ಈ ಪಥದಲ್ಲೊಂದು ಚಿಕ್ಕ ಬಾವಿ. ಪ್ರಧಾನಗುಡಿಯ ಹಿಂಭಾಗದಲ್ಲಿ ವನದುರ್ಗೆಯ ಸನ್ನಿಧಿ, ಮುಂಭಾಗದಲ್ಲಿ ನಾಗಬ್ರಹ್ಮಸ್ಥಾನವು ಇವೆ. ಈ ದೇವತಾಸನ್ನಿಧಿಗಳ ಕಟ್ಟಡಗಳು ಮಾತ್ರವೇ ಇಲ್ಲಿನ ಮಾನವ ನಿರ್ಮಿತಿಗಳು. ಉಳಿದುದೆಲ್ಲವೂ ವನಸಿರಿ ಮಾತ್ರವೇ. ಈ ಬಾವಿಯು ಯಾವಾಗಲೂ ನೀರಿನಿಂದ ತುಂಬಿರುವುದು. ಮಳೆಗಾಲದಲ್ಲಂತೂ ನೀರು ಉಕ್ಕಿ, ಗುಡಿಯ ಪ್ರಾಕಾರದಲ್ಲಿ ಹರಿದು, ಮುಂದೆ ಕಾಡೊಳಗೆ ಸಾಗಿ ಇನ್ನೆಲ್ಲೋ ಅಂತರ್ಜಲನಿಧಿಯಾಗುತ್ತದೆ.
ಇಲ್ಲಿ ಇರುವಷ್ಟು ಹೊತ್ತೂ ನಗರಕ್ಕೆ ಸಮೀಪದಲ್ಲಿಯೇ ಇದ್ದೇವೆ ಎಂಬುದೇ ತಿಳಿಯದಷ್ಟು ಪ್ರಶಾಂತವಾದ ಸನ್ನಿಧಿಯಿದು. ಅನೇಕ ಪಕ್ಷಿಗಳ ಕಲರವ, ವಿಚಿತ್ರವಾದ ಕೀಟಗಳ ದರ್ಶನ, ಅಪರೂಪದ ಕೆಲವು ಕಾಡುಕುಸುಮಗಳನ್ನು ಇಲ್ಲಿ ನೀವು ನೋಡಿ ಸಂತಸ ಪಡಬಹುದು. ಮಳೆಗಾಲ ಅಲ್ಲದಿದ್ದರೆ ವಿದ್ಯಾರ್ಥಿಗಳು ಬಂದು ಓದುತ್ತಾ ಕೂಡಲು ಹೇಳಿ ಮಾಡಿಸಿದಂತಹ ಸ್ಥಳವಿದು. ಏಕಾಂತವೂ, ದೈವಿಕತೆಯೂ ಒಂದೆಡೆ ಲಭ್ಯ.
ಇಲ್ಲಿ ನಿತ್ಯವೂ ಎರಡೂ ಹೊತ್ತು ವೇದೋಕ್ತವಾದ ಪೂಜೆಯು ನಡೆಯುತ್ತದೆ. ಶಿವರಾತ್ರಿ, ಶ್ರಾವಣ, ಕಾರ್ತಿಕಮಾಸಗಳಲ್ಲಿ ವಿಶೇಷವಾದ ಉತ್ಸವಗಳು ನಡೆಯುತ್ತವೆ. ಬಾಗಿಲ ಕಿಂಡಿಯಿಂದ, ದೀಪದ ಬೆಳಕಿನಲ್ಲಿ ಶ್ರೀಮಹಾಲಿಂಗೇಶ್ವರನನ್ನು ದರ್ಶಿಸುವುದು ಮನಸ್ಸಿಗೆ ಅಲೌಕಿಕವಾದ ಸಂತಸವನ್ನು ನೀಡುತ್ತದೆ. ನಿತ್ಯದಲ್ಲಿ ನಾಲ್ಕಾರು ಹೂವುಗಳನ್ನು ಬಿಟ್ಟರೆ ಬೇರೆ ಏನೂ ಕವಚ ಇತ್ಯಾದಿಗಳ ಅಲಂಕಾರವಿರದು. ಹೀಗೆ ಸಹಜವಾಗಿ ನೋಡುವುದು ವಿಶೇಷವೇ ಸರಿ. ನಿತ್ಯದಲ್ಲಿ ಯಾರೂ ಬರದೆ ಇರುವ ಇಂತಹ ಸ್ಥಳಗಳಲ್ಲಿ ಬಂದು, ಒಂದು ದಿನವೂ ತಪ್ಪಿಸದೆ ಪೂಜೆಯನ್ನು ಸಲ್ಲಿಸುವ ಅರ್ಚಕರು ನಿಜಕ್ಕೂ ಪುಣ್ಯಾತ್ಮರೇ ಸರಿ.
ಶ್ರೀಸ್ಥಳದ ಮಹಿಮೆಗಳನ್ನು ನಾನು ಕೇಳಿ ತಿಳಿದದ್ದಿಷ್ಟು.
೧. ಶ್ರೀಪರಶುರಾಮದೇವರ ಪ್ರತಿಷ್ಠಾಪನೆ ಇದು
೨. ಹುಟ್ಟಿ ಬಹಳ ದಿನಗಳಾಗಿದ್ದರೂ ಮಾತು ಬರದೇ ಇರುವ ಮಕ್ಕಳ ಹೆಸರಿನಲ್ಲಿ ಶ್ರೀಮಹಾಲಿಂಗೇಶ್ವರನಿಗೆ ಸೇವೆ ಮಾಡಿಸಿದರೆ ಬೇಗ ಮಾತು ಬರುತ್ತವೆ.
೩. ಮದುವೆ ಆಗದೆ ಇದ್ದವರು ಇಲ್ಲಿನ ವನದುರ್ಗೆಗೆ ವಸ್ತ್ರಸಮರ್ಪಣೆ ಮಾಡಿದರೆ ಶೀಘ್ರವಾಗಿ ಕಲ್ಯಾಣವು ನಡೆಯುತ್ತದೆ.
೪. ಸುತ್ತಮುತ್ತಲಿನವರು ಸಾಕಿದ ಹಸು-ಕರುಗಳೇನಾದರೂ ತಪ್ಪಿಸಿಕೊಂಡಿದ್ದರೆ, ಅವರು ಇಲ್ಲಿ ಬಂದು ಪ್ರಾರ್ಥಿಸುತ್ತಾರೆ. ಅವರ ಪಶುಗಳು ಶೀಘ್ರವಾಗಿ ಮನೆಯನ್ನು ಸೇರುತ್ತವೆ.
೫. ದೇವರ ಪರ್ಮಿಷನ್ನು ಪಡೆಯದೆ ಈ ಕಾಡಿನಿಂದ ಕಟ್ಟಿಗೆಯನ್ನೇನಾದರೂ ಮನೆಗೆ ಒಯ್ದರೆ, ಕಟ್ಟಿಗೆಯನ್ನು ತೆಗೆದುಕೊಂಡು ಹೋದವನ ಮನೆಯಲ್ಲಿ ಖಂಡಿತವಾಗಿಯೂ ಹಾವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮತ್ತೆ ಇಲ್ಲಿಗೆ ಬಂದು ದೇವರಲ್ಲಿ ಕ್ಷಮಾಪಣೆಯನ್ನು ಕೇಳಿಕೊಂಡ ನಂತರ ಹಾವು ಕಾಣಿಸಿಕೊಳ್ಳದು.
ಈ ಐದನೆಯ ಮಹಿಮೆಯ ಪ್ರದರ್ಶನವೇ ಇಲ್ಲಿನ ಕಾಡು ಈಗಿನ ಮಟ್ಟಿಗಾದರೂ ಸುಸ್ಥಿತಿಯಲ್ಲಿ ಇರಲು ಕಾರಣವಿರಬಹುದು.
ಈ ಕ್ಷೇತ್ರವನ್ನು ನೋಡಲು ನೀವು ಬರಲೇಬೇಕು. ಇಲ್ಲಿಗೆ ತಲುಪುವುದು ಸುಲಭ. ಉಡುಪಿ ಶ್ರೀಕೃಷ್ಣನ ಮಠದ ಬಳಿಯಿರುವ ಯಾವುದೇ ಆಟೋ ರಿಕ್ಷಾವು ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬರಬಲ್ಲದು. ಆದರೆ ಆದಷ್ಟು ಬೇಗ ಬಂದರೆ ಮಾತ್ರವೇ ಸೌಂದರ್ಯವನ್ನು ಆನಂದಿಸಬಹುದು.
ಇನ್ನು ಒಂದು ೭-೮ ವರ್ಷಗಳ ನಂತರ ಈ ಕಾಡು ಹೀಗೆಯೇ ಉಳಿದಿರಬಹುದೇನೋ. ಆದರೆ ಸುತ್ತ ಮುತ್ತಲಿನ ಪರಿಸರವು, ನೈಸರ್ಗಿಕವಾಗಿಯೇ ಖಂಡಿತವಾಗಿಯೂ ಉಳಿದಿರುವುದಿಲ್ಲ. ಗುಡಿಯ ಸುತ್ತಲೂ ಈಗಾಗಲೇ ಖಾಸಗಿ ಜಾಗಗಳು ಮನೆ ನಿರ್ಮಾಣದ ಸೈಟುಗಳಾಗಿ ಗುರುತು ಹಾಕಿಸಿಕೊಂಡಿವೆ. ಹಲವು ಬಂಗಲೆಗಳೂ ತಲೆ ಎತ್ತಿವೆ. ಸರ್ಕಾರದ ಒಂದೆರಡು ಕಚೇರಿಗಳೂ ಇಲ್ಲಿವೆ. ನಿಧಾನವಾಗಿ ಮನೆಗಳ ನಿರ್ಮಾಣವು ಪ್ರಾರಂಭಗೊಂಡು ವೇಗವನ್ನು ಪಡೆಯುತ್ತವೆ.
ಗುಡಿಯು ಇರುವುದು ಒಂದು ನೈಸರ್ಗಿಕ ಗುಡ್ಡೆಯಂತಹ ರಚನೆಯ ಮೇಲೆ. ಗುಡಿಯ ಮುಂದೆ ೧೦೦-೧೫೦ ಮೀಟರು ದೂರದಲ್ಲಿ ಕೊಂಕಣ ರೈಲ್ವೆ ಲೈನು ಈ ಗುಡ್ಡೆಯನ್ನು ಸೀಳಿಕೊಂಡು ಹೋಗಿದೆ. ಭವಿಷ್ಯದಲ್ಲಿ ಈ ಲೈನು ಡಬ್ಲಿಂಗ್ ಆಗುವಂಥಾದ್ದು. ಆಗ ಮತ್ತಷ್ಟು ಮರಗಳನ್ನು ಕಡಿದು, ಇನ್ನಷ್ಟು ಜಾಗವನ್ನು ರೈಲ್ವೇಯು ತನ್ನ ತೆಕ್ಕೆಗೆ ಪಡೆಯುತ್ತದೆ. ಅಭಿವೃದ್ಧಿಯ ಹಾದಿಯಲ್ಲಿ ಇದು ಸಾಮಾನ್ಯವಾದ ಸಂಗತಿ. ಆದರೆ ಈ ನಮ್ಮ ಕಾಡುಮಲ್ಲೇಶ್ವರನ ಗುಡಿಯ ಮುಂದೆ ಆಗ ಇಷ್ಟು ದಟ್ಟವಾದ ಮರಗಳ ಸಂದಣಿಯಿರದು. ಆಗೆಲ್ಲ ರೈಲಿನಿಂದ ಪ್ರಯಾಣಿಕರು ಬಿಸಾಕಿದ ಎಂಜಲು ತಟ್ಟೆ ಲೋಟಗಳು, ಪ್ಲಾಸ್ಟಿಕ್ ಬಾಟಲುಗಳ ರಾಶಿಯದ್ದೇ ಪಾರುಪತ್ಯ ಇರುತ್ತದೆ. ಒಂದೆಡೆ ಜನಾವಾಸ. ಇನ್ನೊಂದೆಡೆ ಅಭಿವೃದ್ದಿಯ ರೇಖೆ. ಇವುಗಳ ಮಧ್ಯದಲ್ಲಿ ಈ ಸೌಂದರ್ಯವು ಉಳಿಯುವುದೇ ಅನುಮಾನ.
ಒಳ್ಳೆಯ ಕೆಲಸವನ್ನು ಬೇಗನೆ ಮಾಡಿ ಮುಗಿಸಬೇಕು. ಬೇಗನೆ ಬಂದು ದರ್ಶನ ಪಡೆಯಿರಿ.
ವಿ.ಸೂ : ನಿಮಗೆ ಗೈಡ್ ಬೇಕೆನಿಸಿದರೆ ನಮ್ಮಲ್ಲಿ ಎರಡು ಜವಾರಿ ಮಂಗಗಳು ಸಿಗುತ್ತವೆ.
Be First to Comment