ಮಧ್ಯಪ್ರದೇಶದ ವರಾಹ ಕ್ಷೇತ್ರಗಳು

ವರಾಹಸ್ವಾಮಿಯು ಪ್ರಕಟಗೊಂಡ ದಿನವಿದು. ಹಿರಣ್ಯಾಕ್ಷನೆಂಬ ರಿಯಲ್ ಎಸ್ಟೇಟ್ ದೈತ್ಯನಿಂದ ಶ್ರೀಧರಣೀದೇವಿಯನ್ನು ರಕ್ಷಿಸಿ, ಎತ್ತಿಕೊಂಡು ಬಂದ ದಿನ.  ದೇವಿಯು ತಾನೇ ಈ ಎಲ್ಲರನ್ನೂ ಶಾಶ್ವತ ಕತ್ತಲೆಯ ಕೂಪಕ್ಕೆ ತಳ್ಳುವ ಸಮರ್ಥಳಾದರೂ ಆಕೆಯು ತನ್ನ ಸ್ವಾಮಿಯ ಕೈಹಿಡಿದುಕೊಂಡೇ ನೀರೊಳಗಿನಿಂದ ಎದ್ದು ಬರಲು ಕಾದಿದ್ದಳು. ಒಡೆಯನಿಗೆ ಧರಣೀಧರನೆಂಬ ಹೆಸರು ಕೊಡಲು ಇಷ್ಟವಾಕೆಗೆ.

ಸ್ವಾಮಿಯಾದರೂ ಎಷ್ಟು ಮುತುವರ್ಜಿಯಿಂದ, ಅದೆಷ್ಟು ಪ್ರೇಮದಿಂದ ತನ್ನ ರಾಣಿಯನ್ನು ಎತ್ತಿಕೊಂಡು ಬಂದಿದ್ದಾನೆ ಎಂದು ನೋಡಿ.

ವರಾಹ ದೇಗುಲಗಳು ತೀರಾ ಅಪರೂಪ ಅಲ್ಲದಿದ್ದರೂ, ಸುಲಭವಾಗಿ ನೋಡಲಂತೂ ಸಿಗುವುದಿಲ್ಲ. ನಾನು ಇದುವರೆಗೆ ದರ್ಶಿಸಿರುವ ಕೆಲವು ವರಾಹ ಕ್ಷೇತ್ರಗಳನ್ನು ನಾನಿಲ್ಲಿ ಪಟ್ಟಿ ಮಾಡಿದ್ದೇನೆ. ನೀವು ಕೂಡ ದರ್ಶನ ಮಾಡಿರುವ ಬೇರೆ ಕ್ಷೇತ್ರಗಳಿದ್ದರೆ ಅವುಗಳನ್ನು ಕಮೆಂಟಿನಲ್ಲಿ ತಿಳಿಸಬಹುದು.

1. ಶ್ರೀಮುಷ್ಣ – ತಮಿಳುನಾಡು
2. ಹಲಸಿ – ಮರಾಠಿಮಯವಾದ ಕನ್ನಡನಾಡು
3. ತಿರುಮಲೆ – ಆಂಧ್ರಪ್ರದೇಶ
4. ಐರಣ (ಎರಾನ್) – ಮಧ್ಯಪ್ರದೇಶ
5. ಖಜುರಾಹೋ – ಮಧ್ಯಪ್ರದೇಶ
6. ಮಝೋಲಿ – ಮಧ್ಯಪ್ರದೇಶ
7. ಬಿಲ್ಹರಿ – ಮಧ್ಯಪ್ರದೇಶ
8. ಸಿಂಹಾಚಲ – ಆಂಧ್ರಪ್ರದೇಶ
9. ಕಮಲಾಪುರ – ಹಂಪಿ
10. ಬದಾಮಿ 2ನೇ ಗುಹೆ – ಕನ್ನಡನಾಡು
11. ಹಂಪಿಯಲ್ಲಿ ಒಂದು ಬಹಳ ದೊಡ್ಡ ವರಾಹದೇವರ ಗುಡಿಯೂ ಇದೆ. ಆದರೆ ಪ್ರತಿಮೆಯಿಲ್ಲ.
12. ಮೈಸೂರರಮನೆಯ ವರಾಹನ ಗುಡಿ

ಹೋಗಿಯೂ ನೋಡದಿರುವ ಸನ್ನಿಧಿಗಳು
1. ಪುಷ್ಕರ
2. ಮಹಾಬಲಿಪುರಂ
3. ಕಲ್ಲಹಳ್ಳಿ

ನೋಡಲೇಬೇಕೆಂದುಕೊಂಡಿರುವ ಕ್ಷೇತ್ರಗಳು
1. ಲಲಿತಪುರ – ಉತ್ತರಪ್ರದೇಶ
2. ಉದಯಗಿರಿ, ವಿದಿಶಾ – ಮಧ್ಯಪ್ರದೇಶ
3. ಬಾಂಧವಗಡ ಅರಣ್ಯ – ಮಧ್ಯಪ್ರದೇಶ

ಶ್ರೀಮುಷ್ಣ ಮತ್ತು ಕಮಲಾಪುರದ ವರಾಹಪ್ರತಿಮೆಗಳು ಮಾತ್ರ ಪುಟ್ಟ ಗಾತ್ರದ್ದು. ಉಳಿದೆಲ್ಲವು ಅತ್ಯಂತ ಭವ್ಯವಾದ ಸನ್ನಿಧಿಗಳು.

ಮೇಲಿನ ಪಟ್ಟಿಯಲ್ಲಿ ಹೆಚ್ಚಿನ ವರಾಹ ಕ್ಷೇತ್ರಗಳು ಮಧ್ಯಪ್ರದೇಶದಲ್ಲಿಯೇ ಇರುವುದು ಗಮನಾರ್ಹ.

ಈಗಿನ ಮಧ್ಯಪ್ರದೇಶವು ಇಂದು ಬೇರೆ ಬೇರೆ ಚೂರುಗಳಾಗಿದ್ದರೂ, ಬಹಳ ಹಿಂದೆ ಉತ್ತರಪ್ರದೇಶ, ರಾಜಸ್ಥಾನ, ಮತ್ತು ಬಿಹಾರದ ಹಲವು ದೊಡ್ಡ ದೊಡ್ಡ ಪ್ರದೇಶಗಳನ್ನು ಒಳಗೊಂಡ ಅತ್ಯಂತ ದೊಡ್ಡ ರಾಜ್ಯವಾಗಿತ್ತು. ಹೆಚ್ಚಿನ ಪ್ರದೇಶ ಹೆಚ್ಚಿನ ಕಾಲ ಗುಪ್ತರ ಆಳ್ವಿಕೆಗೆ ಒಳಪಟ್ಟಿದ್ದ ರಾಜ್ಯವಿದು. ಇವರ ಕಾಲದಲ್ಲಿ ಮಧ್ಯಪ್ರದೇಶದ ಅನೇಕ ಕಡೆಯಲ್ಲಿ ವೈಷ್ಣವ ಮಂದಿರಗಳನ್ನು ಅವರು ನಿರ್ಮಿಸಿದ್ದಾರೆ. ಹೆಚ್ಚಿನ ಕಡೆಗಳಲ್ಲಿ ಭಾರೀ ಭವ್ಯವಾದ ಶ್ರಿವರಾಹದೇವರ ಶಿಲ್ಪಗಳನ್ನು ಅವರು ನಿರ್ಮಿಸಿದ್ದಾರೆ. ಈ ಎಲ್ಲ ಶಿಲ್ಪಗಳೂ ಹೆಚ್ಚು ಕಡಿಮೆ ಒಂದೇ ರೀತಿಯೇ ಇವೆ. ಖಜುರಾಹೋ ದೇವಾಲಯದಲ್ಲಿರುವ ವರಾಹದೇವರ ಗುಡಿಯು ಚಂದೇಲ ವಂಶದವರು ನಿರ್ಮಿಸಿದ್ದು. ಅದು ಸಹ ಇದೇ ರೀತಿಯ (ನಾಲ್ಕು ಕಾಲುಗಳ ಮೇಲೆ ನಿಂತಿರುವ ಕಾಡುವರಾಹದ ಭಂಗಿ) ಶೈಲಿಯದು. ಇಲ್ಲಿಯಂತೂ ವರಾಹರಾಯನು ಮೈಮೇಲೆ ಇಡೀ ದೇವತಾಸಮೂಹವನ್ನೇ ಹೊತ್ತುಕೊಂಡು ನಿಂತಿದ್ದಾನೆ.

ಐರಣ (ಎರಾನ್ ಎಂಬ ಈಗಿನ ಹೆಸರು)ದಲ್ಲಿ ಗುಪ್ತರು ನಿರ್ಮಿಸಿದ್ದು ಬಹುದೊಡ್ಡ ದೇವಾಲಯ ಸಮುಚ್ಚಯ. ಶ್ರೀಜನಾರ್ದನ ಮತ್ತು ಶ್ರೀವರಾಹ ಮತ್ತು ಶ್ರಿನರಸಿಂಹ ದೇವಾಲಯಗಳು ಇಲ್ಲಿ ಪ್ರಮುಖವಾದವುಗಳು. ಸ್ಥಳಿಯವಾಗಿ ಲಭ್ಯವಿರುವ ಮರಳುಗಲ್ಲು (Sand Stone – ದೆಹಲಿಯ ಎಲ್ಲ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿದ್ದು ಇದೇ ಕಲ್ಲಿನಲ್ಲಿ) ಬಳಸಿ ಈ ಶಿಲ್ಪವನ್ನು ನಿರ್ಮಿಸಲಾಗಿದೆ. ಬೇರೆಲ್ಲ ಕಡೆಗಿಂತಲೂ ಈ ಶಿಲ್ಪ ವಿಶೇಷವೆನಿಸಲು ಒಂದು ಕಾರಣವಿದೆ. ಇಲ್ಲಿ ಶ್ರೀಧರಣೀದೇವಿಯು ವರಾಹನ ಕೋರೆ ಒಂದನ್ನು ಹಿಡಿದುಕೊಂಡು, ನೇತಾಡುತ್ತಾ, ವರಾಹನೊಂದಿಗೆ ನೀರಿನಿಂದ ಮೇಲೆದ್ದು ಬಂದಿರುವಂತೆ ಶಿಲ್ಪವನ್ನು ನಿರ್ಮಿಸಲಾಗಿದೆ. ನೋಡಲು ಬಹು ಸೊಗಸಾದದ್ದು. ಈ ಪರಿಯ ಸಲಿಗೆ ಶ್ರೀವರಾಹನಲ್ಲಿ ಧರಣಿದೇವಿಗಲ್ಲದೆ ಮತ್ತ್ಯಾರಿಗೆ ಸಿಕ್ಕೀತು! ಅದೆಂತಹ ಸುಂದರವಾದ ಲೀಲೆಯಾಗಿತ್ತೋ ಇವರಿಗೆ ಇದು. ಕಲ್ಪನೆಯೇ ಎಷ್ಟೊಂದು ಆನಂದದಾಯಕವಾದುದು.

ಲಲಿತಪುರ ಜಿಲ್ಲೆಯ ದೇವಗಡ ಮತ್ತು ವಿದಿಶಾಜಿಲ್ಲೆಯ ಉದಯಗಿರಿಯ ವರಾಹ ಶಿಲ್ಪಗಳು ನಮಗೆಲ್ಲ ಪರಿಚಿತವಿರುವ ಶೈಲಿಯವು. ಆದರೆ ಬಹು ಎತ್ತರದ ನಿಲುವು ಹೊಂದಿವೆ.

ಇನ್ನು ಬಾಂಧವಗಢದ ವರಾಹದೇವರಂತೂ ಪ್ರಾಯಶಃ ಈ ಭೂಮಿಯ ಮೇಲೆ ಇರುವ ಅತ್ಯಂತ ಎತ್ತರದ ವರಾಹದೇವರ ಶಿಲ್ಪವಾಗಿದೆ. ಸುಮಾರು 20-22 ಅಡಿಗಳಷ್ಟು ಎತ್ತರದ ಶಿಲ್ಪವಿದು. ಪ್ರಾಚೀನಕಾಲದಿಂದಲೂ ಹುಲಿಗಳಿಂದ ಆವೃತವಾದ ಕ್ಷೇತ್ರವಿದು. ಸಧ್ಯಕ್ಕೆ ಇದು ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಒಂದು ಭಾಗ. ಇಲ್ಲಿಗೆ ಹೋಗಲು ಧೈರ್ಯ, ಸಹನೆ ಮತ್ತು ಸರ್ಕಾರಿ ಅನುಮತಿ ಈ ಮೂರರ ಅಗತ್ಯವಿದೆ. ನೈಜವಾದ ಭಕ್ತಿಯಿದ್ದರೆ ಈ ಮೂರನ್ನೂ ಸ್ವಾಮಿಯೇ ದೊರಕಿಸಿಕೊಡಬಲ್ಲ.

ಹಲಸಿಯಲ್ಲಿರುವ ಶ್ರೀವರಾಹದೇವರು ಸನ್ನಿಧಿಯು ನನಗೆ ಅತ್ಯಂತ ಇಷ್ಟವಾದ ಜಾಗ. ಕದಂಬರ ಯುಗದ್ದು ಇದು. ಇಲ್ಲಿ ತಂತ್ರಸಾರಾಗಮರೀತ್ಯಾ ಪೂಜೆಯು ನಡೆಯುವುದು ನಮಗೆ ಹೆಚ್ಚು ಮಹತ್ವದ್ದು. ಇಲ್ಲಿಗೆ ಒಂದು ಸಾಹಸ ಯಾತ್ರೆಯನ್ನು ಮಾಡುವ ಯೋಗ ನನಗೆ ದೊರಕಿತ್ತು, ಸುಮಾರು 6 ವರ್ಷಗಳ ಕೆಳಗೆ. ಅದರದ್ದೇ ಪ್ರತ್ಯೇಕ ಲೇಖನವು ಇಲ್ಲಿದೆ. https://eeshavasyam.com/myblog/halasi/

ಗುಪ್ತರಾಜರ ಕಾಲವು ಭಾರತದ ಸ್ವರ್ಣಯುಗ ಎಂದೇ ಇಡೀ ಪ್ರಪಂಚವು ಪರಿಗಣಿಸಿದೆ. ಈ ವರಾಹನ ಆರಾಧನೆಯೇ ಇದಕ್ಕೆ ಕಾರಣವಲ್ಲದೆ ಮತ್ತೇನೂ ಅಲ್ಲ.

ಮೇಲೆ ಹೇಳಿರುವ ಮಧ್ಯಪ್ರದೇಶದ ಕ್ಷೇತ್ರಗಳಿಗೆ ನಾನು ಭೇಟಿ ಕೊಟ್ಟದ್ದು 2003-2007ರ ಮಧ್ಯದಲ್ಲಿ. ಆಗ ನನ್ನ ಬಳಿ ಮೊಬೈಲ್ ಫೋನ್ ಇದ್ದಿಲ್ಲ. ಹೀಗಾಗಿ ಯಾವ ಫೋಟೋಗಳು ಕೂಡ ನನ್ನಲ್ಲಿ ಇಲ್ಲ. ಆದರೆ ಇಂಟರ್ ನೆಟ್ಟಿನಲ್ಲಿ ಸಾಕಷ್ಟು ಫೋಟೋ ಮತ್ತು ಮಾಹಿತಿಯು ಲಭ್ಯವಿದೆ.

ಶ್ರೀವರಾಹದೇವರನ್ನು ನಾವು ಮನೆ ಕಟ್ಟಲು ವರ ಕೇಳುವ ಮಟ್ಟಿಗೆ ಮಾತ್ರವೇ ಸೀಮಿತಗೊಳಿಸಿಕೊಂಡಿದ್ದೇವೆ. ನಾವು ಮನುಷ್ಯರು. ಇಂತಹ ಆಸೆಯೊಂದು ಇರುವುದು ತಪ್ಪಲ್ಲ. ಆದರೆ ಇದಕ್ಕೆ ಮೀರಿದ, ಊಹೆ ಮಾಡಲೂ ಆಗದ ಕೃಪೆಯನ್ನು ವರಾಹದೇವರು ಮಾಡಬಲ್ಲ. ಸಹನೆ, ಕ್ಷಮೆ, ಕ್ಷಾಂತಿ ಮತ್ತು ತಪಸ್ಸು ಇವುಗಳು ಭೂದೇವಿಯ ಲಕ್ಷಣಗಳು. ಇವೆಲ್ಲವನ್ನೂ ನಾವು ನಮ್ಮ ತಮೋಗುಣ ಎನ್ನುವ ನೀರಿನಲ್ಲಿ ಮುಳುಗಿಸಿಕೊಂಡಿದ್ದೇವೆ. ಶ್ರೀವರಾಹರಾಯನು ಈ ಗುಣಗಳನ್ನು ಮೇಲೆತ್ತಿಕೊಟ್ಟು ನಮ್ಮಿಂದ ಸಾಧನೆಯನ್ನು ಮಾಡಿಸಲಿ ಎಂದು ಪ್ರಾರ್ಥಿಸೋಣ. ನಮ್ಮ ಬದುಕು ಕೂಡ ಸ್ವರ್ಣಯುಗದಲ್ಲಿ ಇರುವಂತೆ ಆಗಲಿ.

ಮೇಲೆ ಇರುವ ವರಾಹದೇವರ ಚಿತ್ರದ ಕೃಪೆ : ವಿಕಿಪಿಡಿಯಾ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.