Prayers for Shri Modi ji

23.05.2018 ರಂದು ಮಹೇಶ್ ವಿಕ್ರಮ್ ಹೆಗ್ಗಡೆಯವರು ಮಾಡಿದ ಟ್ವೀಟೊಂದು ಯಥಾಪ್ರಕಾರ ಫೇಸ್ ಬುಕ್ ಮತ್ತು ಟ್ವೀಟರಿನಲ್ಲಿ ಕಲರವ ನಡೆಸಿದೆ. ಮೋದಿಯವರ ಕ್ಷೇಮಚಿಂತನೆಯದು. ಅದನ್ನು ಮಾಧ್ವ ಬ್ರಾಹ್ಮಣರ ಗುಂಪಿನಲ್ಲಿ ಮತ್ತೊಬ್ಬರು ಶೇರ್ ಮಾಡಿದ್ದಾರೆ. ಬಾಲು ಮತ್ಚೇರಿ ಎನ್ನುವ ಮತ್ತೊಬ್ಬರು ಇದಕ್ಕೆ ಸುಸಂಸ್ಕೃತವಾದ ಶಬ್ದಗಳಲ್ಲಿಯೇ ಪ್ರತಿಕ್ರಿಯೆಯನ್ನು ಬರೆದಿದ್ದಾರೆ. ಅರಸೊತ್ತಿಗೆಯಲ್ಲವಾದ್ದರಿಂದ ಪ್ರಾರ್ಥನೆ ಮಾಡುವ ಅಗತ್ಯವಿಲ್ಲವೆಂದು ಅವರ ಅಭಿಪ್ರಾಯ. ಆದರೆ ಆಲೋಚನೆಗೆ ಹಚ್ಚುವ ಪ್ರತಿಕ್ರಿಯೆ ಅದು.

ಮೊನ್ನೆ ಕೆಲ ದಿನಗಳ ಹಿಂದೆ ಯಾರೋ ಒಬ್ಬರು ಒಂದು ವಿಚಿತ್ರ ಡಿಮ್ಯಾಂಡ್ ಇಟ್ಟಿದ್ದರು. ರಾಜಕೀಯ ಏನೇ ಇರಲಿ ೪೦ ರೂಪಾಯಿಗೆ ಪೆಟ್ರೋಲು ಬೇಕು ಎಂದು. ಅದಕ್ಕೆ ನನ್ನ ಕುತೂಹಲದ ಪ್ರಶ್ನೆಯೊಂದಕ್ಕೆ ಹಿರಿಯರೊಬ್ಬರು ನನ್ನನ್ನು ಕಾಂಗ್ರೆಸ್ ಬಾಲವೆಂದು ಭಾವಿಸಿ ನನಗೆ ಚುರುಕು ಮುಟ್ಟಿಸಿದ್ದರು.

ಈ ನನ್ನ ಲೇಖನವು ಈ ಇಬ್ಬರು ಸಜ್ಜನರ ಮಾತಿಗೆ ಒಂದೇ ಪ್ರತಿಕ್ರಿಯೆಯಾಗಿ ಬರೆದಿರುವುದೇ ಹೊರತು ಕುಹಕದಿಂದ ಅಲ್ಲ.

ಕೆಳಗೆ ಇರುವುದು ಮಹೇಶ್ ವಿಕ್ರಮರ ಟ್ವೀಟು.

ಬಾಲು ಅವರ ಪ್ರತಿಕ್ರಿಯೆ ಇಲ್ಲಿದೆ.

ಆತ್ಮೀಯರೆ ಬಹುಶಃ ನಿಮ್ಮ ಅನಿಸಿಕೆ ಕಾರ್ಯರೂಪಕ್ಕೆ ತರಲು ಇದು ಅರಸೊತ್ತಿಗೆಯ ಕಾಲವಲ್ಲ. ನಾವು ನಮ್ಮ ತಂದೆ ತಾಯಿಗಳ ಆರೋಗ್ಯಕ್ಕೆ ಪ್ರಾರ್ಥಿಸೋಣ. ಮೋದಿಯವರು ಬಂದ ಮೇಲೆ ಪೆಟ್ರೋಲ್ 80 ಆಯ್ತು ಅಂತ ಬಯ್ಯುವವರು 2 ರೂಪಾಯಿಗೆ ಒಂದು ಜಿ.ಬಿ.ಸಿಗುವಂತೆ ಮಾಡಿದ ಮೋದಿ ಸಾಧನೆ ಶ್ಲಾಘಿಸುವುದಿಲ್ಲ.ಆದರೆ ಜಿ.ಬಿ.ಗಳಿಂದ ವಾಹನಗಳು ಓಡುವುದಿಲ್ಲವೆಂಬ ವಾಸ್ತವ ಮೋದಿ ಭಕ್ತರು ತಿಳಿಯಬೇಕು. ಮೋದಿಗಾಗಿ ಪ್ರತಿನಿತ್ಯ ನಾವೆಲ್ಲ ದಿನಾ ಪ್ರಾರ್ಥನೆ ಮಾಡಬೇಕೆಂಬುದು ಅಂಧಾಭಿಮಾನವಷ್ಟೆ.

ಇನ್ನು ಮುಂದೆ ಇರುವುದು ನನ್ನ ಪ್ರತಿಕ್ರಿಯೆ.

ಅರಸೊತ್ತಿಗೆ ಎಂಬುದು ಕೇವಲ ಒಂದು ಶಬ್ದವಷ್ಟೇ. ಪ್ರಾಚೀನ ಕಾಲದಲ್ಲಿ ರಾಜರು ಕಿರೀಟ, ಈಟಿ, ಭಲ್ಲೆ, ಕುದುರೆ ಹೂಡಿದ ರಥ ಎಲ್ಲವನ್ನೂ ಇಟ್ಟು ಕೊಂಡಿದ್ದರು. ಈಗಿನ ನೇತಾರರಿಗೆ ಆ ಭೌತಿಕ ಅಲಂಕಾರಗಳಿ ಮಾತ್ರ ಇಲ್ಲ . ಉಳಿದಂತೆ ಅರಸೊತ್ತಿಗೆಯ ಎಲ್ಲ ಅರ್ಥ, ಸೌಲಭ್ಯಗಳು, ಆಳುಕಾಳುಗಳು, ಆಧುನಿಕರೀತಿಯ ಸೇನೆ, ವಾಹನ ಈಗಲೂ ಇವೆ, ಯಾವಾಗಲೂ ಇದ್ದೇ ಇರುತ್ತವೆ.

ಆದರೆ ಇಷ್ಟು ದಿನ ಪ್ರಧಾನ ಮಂತ್ರಿಗಳಾದವರಲ್ಲಿ / ರಾಷ್ಟ್ರಾಧ್ಯಕ್ಷರಾದವರಲ್ಲಿ ಪ್ರಾತಃಸ್ಮರಣೀಯರಾದ ಶಾಸ್ತ್ರಿ ಅವರು, ಸ್ವಲ್ಪ ಮಟ್ಟಿಗೆ ವಾಜಪೇಯೀ ಅವರನ್ನು ಬಿಟ್ಟರೆ ಕುಟುಂಬದ ಹಿತಾಸಕ್ತಿಯ ಬಗ್ಗೆ ಏನೂ ತಲೆ ಕೆಡೆಸಿಕೊಳ್ಳದೆ ಸರ್ಕಾರ ನಡೆಸುತ್ತಿರುವ ಪ್ರಧಾನಿಗಳು ಎಂದರೆ ಮೋದಿ ಅವರು ಮಾತ್ರ. ಮೊರಾರ್ಜಿಯವರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ರಾಷ್ಟ್ರಾಧ್ಯಕ್ಷರ ವಿಷಯ ಬಂದಾಗ ಈ ವಿಷಯದಲ್ಲಿ ಹೆಮ್ಮೆಯನ್ನು ಶ್ರೀರಾಜೇಂದ್ರಪ್ರಸಾದರು, ಶ್ರೀಸರ್ವೇಪಲ್ಲಿ ರಾಧಾಕೃಷ್ಣರು ಮತ್ತು ಶ್ರೀಅಬ್ದುಲ್ ಕಲಾಮರ ಬಗ್ಗೆ ಮಾತ್ರ ತಾಳಬಹುದೇನೋ.

ಮೋದಿಯವರು 24 ಗಂಟೆಯೂ ಸರಿಯಾದ ಕೆಲಸವನ್ನೇ ಮಾಡುತ್ತಾರೆ ಎಂದು ನಾನೇನು ಹೇಳುವುದಿಲ್ಲ. ಎಲ್ಲಾ ಸರ್ಕಾರದಲ್ಲೂ ತಪ್ಪುಗಳಾಗುವುದು ಸಹಜ. ಆದರೆ ದೇಶವು ವಿನಾಶದತ್ತ ಹೋಗುವ ಅರಿವು ಇದ್ದೂ ತಪ್ಪು ಮಾಡಿದ ಸರ್ಕಾರಗಳ ಮುಂದೆ ಮೋದಿಯವರ ತಪ್ಪುಗಳು ಅತ್ಯಂತ ಕ್ಷಮಾರ್ಹ. ತಪ್ಪುಗಳನ್ನೇ ಪರಿಗಣಿಸುವುದಾದರೆ ಮೋದಿಯವರು ಮತ್ತು ಕಾಂಗ್ರೆಸ್ ನವರ ಅನುಪಾತ 15:85 ಆಗುತ್ತದೆ. ಇದನ್ನು ತಿಳಿಯಲು ಮೀಮುಗಳು ಅಥವಾ ಇನ್ನಿತರ ಫೇಕ್‍ಬುಕ್ ಪೋಸ್ಟುಗಳ ಮೊರೆ ಹೋಗುವ ಅಗತ್ಯವೇನಿಲ್ಲ. ನಮಗೆ ತಿಳುವಳಿಗೆ ಬಂದ ನಂತರವೇ ಆಳಿದ ಎಲ್ಲ ಸರ್ಕಾರಗಳ ಸಾಧನೆಯನ್ನು ಮತ್ತು ಎಸಗಿರುವ ತಪ್ಪುಗಳನ್ನೇ ಶ್ರೀವಾಜಪೇಯೀ ಮತ್ತು ಮೋದಿಯವರ ಸರ್ಕಾರಗಳೊಂದಿಗೆ ತುಲನೆ ಮಾಡಿ ನೋಡಿ. ವಿಷಯ ನಿಮಗೇ ತಿಳಿಯುತ್ತದೆ.

ನೋಟು ರದ್ದು ಮಾಡಿರುವ ಘಟನೆಯನ್ನು ಪದೇ ಪದೇ ಹೇಳುವುದರಿಂದ ಇನ್ನಿತರ ಸಾಧನೆಯನ್ನು ಮಸುಕುಗೊಳಿಸಲಾಗದು. ಅಲ್ಲದೆ, ಅದನ್ನು ಹೇಳುವಾಗ ಮೋದಿಯವರಿಗಿಂತ ಮೊದಲು ನೋಟು ರದ್ದು ಮಾಡಿದ್ದು ನೆಹರೂ ಎನ್ನುವುದು ಕೂಡ ಗಮನದಲ್ಲಿರಲಿ. ಇತರ ದೇಶಗಳ ಜೊತೆ ಆತ್ಮವಿಶ್ವಾಸದ ಧಾರ್ಷ್ಟ್ಯವನ್ನು ತೋರದೆ ಮೈ ಮೇಲೆ ಕಷ್ಟಗಳನ್ನು ಹಾಕಿಕೊಂಡಿದ್ದು ಸಹ ಇವರದೇ ಇನ್ನಿತರ ಆಳ್ವಿಕೆಯ ಕಾಲದಲ್ಲಿ. ಎಮರ್ಜೆನ್ಸಿಯನ್ನು ಹೇರಿದ್ದಕ್ಕಿಂತಲೂ ವಿಚಿತ್ರವೇನಲ್ಲ ನೋಟ್ ರದ್ದತಿಯ ತೀರ್ಮಾನ. ಮೋದಿಯವರ ನೋಟ್ ರದ್ದತಿಯಿಂದ ಆಗಿರುವ ಹಿನ್ನಡೆಯ ಮೇಲೆ ಈಗಾಗಲೇ ದೇಶವು ಲಕ್ಷಾಂತರ ಹೆಜ್ಜೆಗಳನ್ನು ಹಾಕಿ ಮುನ್ನಡೆಯತ್ತ ಕೂಡ ಸಾಗಿರುವುದು ಸತ್ಯವಲ್ಲವೇನು?

ಇನ್ನು ಪೆಟ್ರೋಲ್ ದರ ಏರಿಕೆಯನ್ನು ಕಾಂಗ್ರೆಸ್ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ತುಲನೆ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ ಅನೇಕರು. ಪೆಟ್ರೋಲ್ ದರ ಹೆಚ್ಚಳಕ್ಕೆ ರಾಜಕೀಯ ನೀತಿಗಳೂ ಕೂಡ ಕಾರಣವೆನ್ನುವುದು ಒಪ್ಪೋಣ. ಆದರೆ ಅದು ಅರ್ಧ ಮಾತ್ರ ಸತ್ಯ. ವಾಸ್ತವವಾಗಿ ಅಂತಾರಾಷ್ಟ್ರೀಯವಾಗಿ ತೈಲ ಬೆಲೆ ಏರುವುದು ಎರಡು ಕಾರಣಗಳಿಂದ.

  1. ಭೌತಿಕವಾಗಿ ಕಚ್ಚಾತೈಲವು ಕ್ಷಯಿಸುತ್ತಾ ಹೋಗುವ ನಿಧಿ.
  2. ತೈಲ ಉತ್ಪಾದಿಸುವ ರಾಷ್ಟ್ರಗಳ ಇಬ್ಬಗೆಯ ನೀತಿ.

1. ತೈಲ ನಿಕ್ಷೇಪವು ಖಾಲಿಯಾಗುತ್ತಾ ಹೋದಂತೆ ಅದರ ಬೆಲೆ ಹೆಚ್ಚುತ್ತಲೇ ಹೋಗುತ್ತದೆ. ಎಲ್ಲ ದೇಶಗಳಲ್ಲಿಯೂ ಇದು ಹೆಚ್ಚುತ್ತಲೇ ಹೋಗುವುದು ಅನಿವಾರ್ಯ.  ಜಾಗತಿಕವಾಗಿ ತೈಲದ ಬಳಕೆ ಹೆಚ್ಚುತ್ತಿರುವುದರ ಪರಿಣಾಮವಾಗಿ ನಮ್ಮಲ್ಲಿ ಮೋದಿಯೇ ಇರಲಿ, ಅರ್ಥಶಾಸ್ತ್ರ ನಿಪುಣರಾದ ಮನಮೋಹನರೇ ಇರಲಿ. ಬೆಲೆಯನ್ನು ಕಡಿಮೆ ಮಾಡಲಾಗದು. ನಿಜವೇನೆಂದರೆ ಮೋದಿಯವರ ಸರ್ಕಾರವಲ್ಲದೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಸರ್ಕಾರವಿದ್ದಿದ್ದರೆ ಈಗ ಮೋದಿಯವರ ಸಮಯದಲ್ಲಿ ಏನು ಬೆಲೆ ಏರಿದೆಯೋ ಅದಕ್ಕಿಂತಲೂ ಹೆಚ್ಚು ಏರಿಕೆಯಾಗಿರುತ್ತಿತ್ತು. ಅವರ ಆಳ್ವಿಕೆಯ ಸಮಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯ ಪಟ್ಟಿಯನ್ನು ನೋಡಿ ಒಮ್ಮೆ. ಎಲ್.ಪಿ.ಜಿಯ ದರಗಳ ವಿಷಯದಲ್ಲಿ ಕೂಡ ಇದೇ ವಿಚಾರವು ಅನ್ವಯಿಸುತ್ತದೆ.

2.. ತೈಲ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಮೂಲಭೂತವಾಗಿ ಇಸ್ಲಾಂ ಮತವನ್ನು ಪಾಲಿಸುತ್ತವೆ. ಇವುಗಳಲ್ಲಿಯೂ ಅನೇಕ ರಾಷ್ಟ್ರಗಳು ಅಮೆರಿಕ ಮತ್ತು ಕೆಲ ಯುರೋಪ್ ರಾಷ್ಟ್ರಗಳ ಮರ್ಜಿಗೆ ಒಳಪಟ್ಟಿವೆ. ಈ ಕೊಲ್ಲಿ ರಾಷ್ಟ್ರ+ಅಮೇರಿಕ+ಯುರೋಪ್ ದೇಶಗಳ ರಾಜಕೀಯದ ವಿಷವರ್ತುಲವೇ ಜಾಗತಿಕ ಕಚ್ಚಾತೈಲದ ದರನಿಯಂತ್ರಣದ ನೀತಿಯನ್ನು ರೂಪಿಸುವುದು. ಅಮೇರಿಕವು ತನಗೆ ಬೇಕಾದ ಹಾಗೆ ದರವನ್ನು ರೂಪಿಸಿಕೊಂಡರೆ ಯುರೋಪಿಗೆ ತನ್ನದೇ ಆದ ದರವನ್ನು ನಿಗದಿಗೊಳಿಸಿಕೊಳ್ಳುತ್ತದೆ. ಒಪೆಕ್ ರಾಷ್ಟ್ರಗಳು ಇನ್ನಿತರ ದೇಶಗಳಿಗೆ ತನ್ನದೇ ಆದ ನೀತಿಗಳ ಆಧಾರದ ಮೇಲೆ ದರವನ್ನು ಕಡಿಮೆ ಮಾಡುತ್ತವೆ. ಧರ್ಮವೂ ಈ ನೀತಿಗಳಲ್ಲಿ ಒಂದು. ಕಡಿಮೆ ಎಂದಾಕ್ಷಣ ಫೇಕ್ ಬುಕ್ಕಿನ ಮೀಮ್ ಸುಳ್ಳರು ಹೇಳುವಂತೆ ಹದಿನಾರು ರೂಪಾಯಿಗೆ ಲೀಟರು, ಇಪ್ಪತ್ತು ರೂಪಾಯಿಗೆ ಲೀಟರು ಅನ್ನುವಂತೇನೂ ಇಲ್ಲ. ಆದಾಗ್ಯೂ ಒಪೆಕ್ ರಾಷ್ಟ್ರಗಳು ಇತರೆಡೆಗೆ ಮಾಡಿಕೊಂಡ ಈ ನಷ್ಟವನ್ನು ತುಂಬಿಕೊಳ್ಳುವುದೇ ಭಾರತ ಮತ್ತು ಅವರ ಪ್ರಕಾರ ಕಾಫಿರರಾದವರ ದೇಶಗಳಿಗೆ ಮಾರಿದ ತೈಲದ ಬ್ಯಾರಲ್ಲುಗಳ ಮೂಲಕ. ಒಂದು ವೇಳೆ ಈ ಬೆಲೆಯ ವ್ಯತ್ಯಾಸವು ಏನೇ ಇರಲಿ, ಜಾಗತಿಕವಾಗಿ ಪ್ರತಿಯೊಂದು ಕಡೆಯೂ ಪೆಟ್ರೋಲು ದರ ತನ್ನದೇ ಆದ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಅಂತಾರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆ ಇಳಿದರೂ ಭಾರತಕ್ಕೆ ಅದು ಬಹಳ ದೊಡ್ಡ ಮಟ್ಟದ ಬದಲಾವಣೆಯಾಗದು. ಬಳಕೆದಾರರ ಪ್ರಮಾಣವೂ ಹೇರಳವಾಗಿರುವುದು ಕೂಡ ಇದಕ್ಕೆ ಕಾರಣ.

ಕೆಲವರು ರೈತರಿಗೆ ಟ್ಯಾಕ್ಸ್ ಹಾಕಿದರೆ ಪೆಟ್ರೋಲು ದರ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯವನ್ನೂ ಹೊಂದಿದ್ದಾರೆ. ವಾಸ್ತವವಾಗಿ ಇದು ರೈತರ ಹೆಸರಿನಲ್ಲಿ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ಹೇಳಬೇಕಾದ ಮಾತು. ಈ ರೀತಿಯಾದ ಅನೈತಿಕ ಮನೋಭಾವದ ಪೊಳ್ಳು ಕೃಷಿಕರು ಎಲ್ಲ ಪಕ್ಷದಲ್ಲಿಯೂ ಇದ್ದೇ ಇದ್ದಾರೆ. ಆದರೆ ಕಾಂಗ್ರೆಸ್ಸಿನಲ್ಲಿ ಇವರ ಸಂಖ್ಯೆ ಹೆಚ್ಚು ಎನ್ನುವುದು ಸ್ಪಷ್ಟವೇ ಇದೆ. ತಮಿಳುನಾಡಿನ ರೈತರ, ಮಕ್ಕಳ ಪಕ್ಷವೆಂದು ಬೊಗಳೆ ಬಿಡುವ ಪಕ್ಷಗಳಲ್ಲಿಯ ಕೆಲವು ರಾಜಕೀಯ ನಾಯಕರ ಬಳಿ ಇರುವ ಭೂಮಿ ತಲಾ ೧೦೦೦೦ ಎಕರೆಗಳಿಗೂ ಹೆಚ್ಚು ಎಂದು ಅಲ್ಲಿನ ಆ ಪಾರ್ಟಿಗಳ ಮೂರ್ಖ ಹಿಂಬಾಲಕರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆಂಧ್ರದಲ್ಲಿಯೂ ಇದೇ ವಿಪರ್ಯಾಸ. ಜನತೆಯು ತಮ್ಮ ಹಿರಿಯರ ಜಮೀನನ್ನು ಕಬಳಿಸಿದ ರಾಜಕಾರಣಿಗಳನ್ನೂ ತಮ್ಮ ನಾಯಕರೆಂದು ಹೇಳಿಕೊಳ್ಳಲು ಏನೋ ಆನಂದ ಪಡುತ್ತಾರೆ. ಈ ಭೂಮಿಬಾಕ ರಾಜಕಾರಣಿಗಳ ನಾಲಿಗೆಯು ಬೆಂಗಳೂರಿನ ಮಧ್ಯಮ ವರ್ಗದವರ ಜೇಬಿನ ಹಣವನ್ನೂ ನೆಕ್ಕುತ್ತಿದೆ! ಬೆಂಗಳೂರಿನ ಅರ್ಧಕ್ಕೂ ಹೆಚ್ಚಿನ ರಿಯಲ್ ಎಸ್ಟೇಟಿನ ಬಂಡವಾಳ ಆಂಧ್ರದ ರಾಜಕಾರಣಿಗಳದ್ದು. ಆಂಧ್ರದಲ್ಲಿ ಬಿಜೆಪಿ ಸರ್ಕಾರ ಯಾವತ್ತು ಬಂದಿದೆ ಹೇಳಿ? ನಕಲಿ ರೈತರ ಬಗ್ಗೆ ಈ ಅಭಿಪ್ರಾಯವಿದ್ದರೆ ಅದು ಸರಿ. ಆದರೆ ರೈತರಿಂದಾಗಿ ಪೆಟ್ರೋಲು ದರ ಏರಿದೆ ಎನ್ನುವುದು ವಾಸ್ತವವಾಗಲಾರದು. ಒಂದು ಮಟ್ಟಕ್ಕೆ ರೈತರ ಉತ್ಪನ್ನಗಳಿಗೂ ಯೋಗ್ಯವಾದ ತೆರಿಗೆ ವಿಧಿಸುವುದು ಸರಿಯೇ ಆಗಿದೆ. ಆದರೆ ಶ್ರಮವಹಿಸಿ ದುಡಿವ ರೈತನನ್ನೂ ಈ ನೀಚರನ್ನೂ ಒಂದೆ ತಟ್ಟೆಯಲ್ಲಿ ತೂಗಿದರೆ ಮುಂದೆ ರೈತರು ಪ್ರಾಮಾಣಿಕರಾಗಿ ಉಳಿವರೇ?

ತೈಲದ ಬೆಲೆ ಏರುವಿಕೆಯ ವೇಗವನ್ನು ಬೇಕಾದರೆ ಸ್ವಲ್ಪ ತಗ್ಗಿಸಬಹುದೇನೊ. ಆದರೆ ನಿಲ್ಲಿಸವುದು ಆಗದ ಮಾತು. 40 ರೂಪಾಯಿಗೆ ಲೀಟರ್ ಪೆಟ್ರೋಲು ಕೊಡಿ ಎಂದು ನಿರೀಕ್ಷಿಸುವುದಂತೂ ಅಸಾಧುವಾದ ನಡೆಯಾಗುತ್ತದೆ. ನೆನಪಿರಲಿ. ನೀರು ಕೂಡ ಈಗ 25 ರೂಪಾಯಿಗೆ ಲೀಟರು.

ಒಂದು ವೇಳೆ ಪೆಟ್ರೋಲಿನ ದರ ನಮ್ಮಲ್ಲಿ ಏರಿಕೆಯಾದ ದಿನವೇ ಅಮೇರಿಕ ಅಥವಾ ಇನ್ನಿತರ ದೇಶಗಳಲ್ಲಿ ಏರಿಕೆಯಾಗದಿದ್ದರೂ ಕೂಡ ಮುಂದೊಂದು ದಿನ ಅಲ್ಲಿ ಕೂಡ ಏರಲೇ ಬೇಕು. ದುರ್ದೈವವೆಂದರೆ ಆ ದಿನದಲ್ಲಿ ನಮ್ಮಲ್ಲಿ ನಾವು ಇಲ್ಲಿ ಪೆಟ್ರೋಲಿಗೆ ಕೊಡಬೇಕಾದ ದರವು ಬಹಳ ಎತ್ತರಕ್ಕೆ ಹೋಗಿರುತ್ತದೆ. ಇತರೆಡೆಗಳಲ್ಲಿ ಬೆಲೆ ಏರಿದಾಗ್ಯೂ ಕೂಡ ನಮ್ಮಲ್ಲಿಯೂ ಅದನ್ನು ಖರೀದಿ ಮಾಡುವ ಮಟ್ಟಿಗೆ ನಮ್ಮ ಆರ್ಥಿಕತೆಯನ್ನು ಎತ್ತರಕ್ಕೆ ಏರಿಸಿಕೊಳ್ಳಬೇಕೇ ವಿನಾ ಪ್ರತಿಯೊಂದಕ್ಕೂ ಮೋದಿ/ಮನಮೋಹನರತ್ತ ನೋಡುವುದು ತಪ್ಪಾಗುತ್ತದೆ. ಹಾಗೆ ನೋಡಿದರೆ ಈ ದಿಶೆಯಲ್ಲಿ ಕೂಡ ಅರ್ಥತಜ್ಞರಾದ ಮನಮೋಹನರಿಗಿಂತ ಸ್ವಾಭಿಮಾನಿಗಳಾದ ಮೋದಿಯವರ ಹೆಜ್ಜೆಗಳೇ ಹೆಚ್ಚು ಸರಿಯಾಗಿವೆ. ಬೇಕಿದ್ದರೆ ಇಲ್ಲಿ ನೋಡಿ. ವಿಶ್ವಪ್ರಸಿದ್ಧ ಸುದ್ಧಿ ಸಂಸ್ಥೆಯಾದ ರಾಯ್ಟರ್ಸ್ ತನ್ನ ಜೂನ್ 1 2016 ರ ಆನ್ ಲೈನ್ ಆವೃತ್ತಿಯ ಪತ್ರಿಕೆಯಲ್ಲಿ ಭಾರತ ದೇಶವು ಇರಾನ್ ದೇಶದ ೬.೭ ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರವನ್ನು ಪ್ರಕಟಿಸಿದೆ. ಈ ಸಾಲವು ಹಿಂದಿನ ಸರ್ಕಾರವು ಮಾಡಿದ್ದು. ತೈಲ ಖರೀದಿಗೆಂದು. ನಮ್ಮ ದೇಶದಲ್ಲಿ ಬೆಲೆಯ ಏರಿಕೆಯನ್ನು ತಡೆಯಲು ಇರಾನ್ ದೇಶದ ಕಚ್ಚಾತೈಲವನ್ನು ಸಾಲರೂಪದಲ್ಲಿಯೇ ತಂದಿತ್ತು. ನಮ್ಮ ನಮ್ಮಲ್ಲಿಯೇ ಇರುವ ಸಾಲಗಾರರು ಮಾಡುವ ಹೊಂದಾಣಿಕೆಯ ತೆರದಿ. ಅವರು ಮಾಡಿದ ಸಾಲವನ್ನು ತೀರಿಸುತ್ತಿರುವುದು ಮೋದಿಯವರ ಸರ್ಕಾರ. ಇದನ್ನೆಲ್ಲ ಗಮನಿಸಿದಾಗ ಮೋದಿಯವರು ಮತ್ತು ಮೋದಿಯಂತಹವರೇ ನಮಗೆ ಬೇಕು ಎಂದು ಪ್ರಾರ್ಥನೆ ಮಾಡುವುದು ಒಳ್ಳೆಯದು.

ಈ ರೀತಿಯಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಇರುವ ಎಲ್ಲ ದಾರಿಗಳನ್ನೂ ಹಿಂದಿನ ಕಾಂಗ್ರೆಸ್ ಸರ್ಕಾರಗಳು ತಮ್ಮ ಯಥಾಶಕ್ತಿ ಮುಚ್ಚಿಯೇ ಹಾಕಿವೆ! ಈಗ ಆ ಮುಚ್ಚಿ ಹೋಗಿರುವ ಮಾರ್ಗಗಳನ್ನು ತೆಗೆಯಬೇಕು. ಜೊತೆಗೆ ಹೊಸದಾದ, ನಮ್ಮ ಸಂಸ್ಕೃತಿಗೆ ಹಾನಿ ಮಾಡಲಾರದ ಮಾರ್ಗಗಳನ್ನೂ ಹುಡುಕಬೇಕು. ಸಧ್ಯದ ಪರಿಸ್ಥಿತಿ ನೋಡಿದರೆ ಹೊಲಸು ಜನರು ಮೋದಿಯವರನ್ನ ಸ್ಥೈರ್ಯವನ್ನು ಕುಗ್ಗಿಸುವ ಎಲ್ಲ ವಿಧವಾದ ಅನೈತಿಕ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಹೀಗಿರುವಾಗ ಎಲ್ಲರಿಗಿಂತ ಪ್ರಾಮಾಣಿಕರೆನಿಸುವ ಮೋದಿಯವರ ಒಳಿತಿಗಾಗಿ ಪ್ರಾರ್ಥನೆ ಮಾಡುವುದರಲ್ಲಿ ತಪ್ಪೇನು? ಈ ಪ್ರಾರ್ಥನೆಯೊಂದಿಗೆ ನಮ್ಮಲ್ಲಿ ರಾಷ್ಟ್ರೀಯಪ್ರಜ್ಞೆ, ಪ್ರಾಮಾಣಿಕತೆ, ಶಿಸ್ತು, ದುಡಿದೇ ತಿನ್ನುವ ಮನೋಭಾವವು ಮೂಡಬೇಕು ಎನ್ನುವ ಆರ್ತಭಾವ ಕೂಡ ಇರಬೇಕು.

ಮೋದಿ ಅವರ ಮೇಲಿನ ಅಂಧಾಭಿಮಾನಕ್ಕೆ ನನ್ನದೂ ಸಹಮತವಿಲ್ಲ. ಆದರೆ ಅವರ ಹಾಗೆ ಧೈರ್ಯದ ತೀರ್ಮಾನ ತೆಗೆದುಕೊಳ್ಳುವವರು, ಅಯೋಗ್ಯರಿಗೆ ತಲೆಬಾಗದಿರುವವರು, ಪ್ರಾಮಾಣಿಕರು ಯಾರಿದ್ದಾರೆ ಸಧ್ಯಕ್ಕೆ ಅನ್ನೋದು ಒಂದು ಪ್ರಶ್ನೆ. ಅಲ್ಲವೇ? ಕುಟುಂಬದ ಉದ್ಧಾರಕ್ಕಲ್ಲದೆ ಕೇವಲ ದೇಶದ ಒಳಿತಿಗಾಗಿಯೇ ಸೇವೆ ಸಲ್ಲಿಸುವ ಮನಸ್ಸಿನ ಒಬ್ಬೇ ಒಬ್ಬ ನಾಯಕನು ಒಂದು ವೇಳೆ ಇತರ ಪಕ್ಷದಲ್ಲಿ ಇದ್ದರೆ ಅವರ ಹೆಸರಿನಲ್ಲೂ ಪ್ರಾರ್ಥನೆ ಮಾಡೋಣ. ಅಷ್ಟಕ್ಕೂ ಅರಸರಿಗಾಗಿ ಪ್ರಾರ್ಥನೆ ಮಾಡಬಾರದು ಎಂದು ಎಲ್ಲಿದೆ? ಬ್ರಾಹ್ಮಣರು ಪ್ರಾರ್ಥನೆ ಮಾಡದಿದ್ದಲ್ಲಿ ಅದು ಧರ್ಮಬಾಹಿರರೆಂದೇ ಲೆಕ್ಕ. ಅಲ್ಲವೇನು? ದೇಶೋಽಯಂ ಕ್ಷೋಭರಹಿತಃ ಎಂಬಲ್ಲಿ ಈ ಆಶಯವು ಸ್ಪಷ್ಟವಾಗಿಯೇ ಇದೆ.

ದೇಶಕ್ಕೆ ಒಳ್ಳೆಯದು ಆಗಲಿ ಎಂದು ಪ್ರಾರ್ಥಿಸಿದರೆ ದೇಶಕ್ಕೆ ಒಳ್ಳೆಯದನ್ನು ಮಾಡುವವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದಂತೆಯೇ ಆಗುವುದು.ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲು ಮೋದಿ ಅವರು ನಮ್ಮ ಕುಟುಂಬದ ಸದಸ್ಯನೇ ಆಗಬೇಕೆಂದಿಲ್ಲ. ಆದರೆ ಅಷ್ಟೇ ಆತ್ಮೀಯತೆಯಿಂದ ಪ್ರಾರ್ಥಿಸುವುದೆಂದರೆ ಅದೊಂದು ಉದಾತ್ತವಾದ ವಿಚಾರವೇ ಹೌದು. ಆ ಉದಾತ್ತ ಮನೋಭಾವ ನಮ್ಮಲ್ಲಿ ಬರಲಿ.

ಮೋದಿ ಅವರ ಕೆಲಸಕ್ಕೆ ಜಯವಾಗಲಿ ಎಂದು ಪ್ರಾರ್ಥನೆ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಆ ಜಯದ ನಂತರ ಬಲದಿಂದ ಅವರ ಬುದ್ಧಿ ನಹುಷನಂತೆ ಬದಲಾಗದಿರಲಿ ಎಂದೂ ಪ್ರಾರ್ಥನೆ ಮಾಡೋಣ. ಯಾರ್ಯಾರಿಗೆ ಪ್ರಾರ್ಥನೆ ಮಾಡಲು ಮನಸ್ಸಿಲ್ಲವೋ ಅವರು ತಮ್ಮ ಪಾಡಿಗೆ ತಾವು ಇದ್ದರಾಯಿತು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.