ಶ್ರೀವೇದವ್ಯಾಸಾಯ ನಮಃ
ಶ್ರೀಹರಿಯು ಸ್ವಪ್ನಾವಸ್ಥೆಯಲ್ಲಿ ಯಾರಿಗೆ ಹೇಗೆ ಪ್ರೇರಣೆ ಮಾಡುತ್ತಾನೋ ಹೇಳಲಾಗದು. ಜ್ಞಾನಿಗಳು ಮತ್ತು ಆಚಾರಶೀಲರಾದವರಿಗೆ ಅವನ ಪ್ರಾಶಸ್ತ್ಯವೆನ್ನುವುದು ಖಂಡಿತ. ಆದರೆ ಎಷ್ಟೋ ಬಾರಿ ಮೇಲ್ನೋಟಕ್ಕೆ ಅತ್ಯಂತ ಸಾಧಾರಣಸ್ವರೂಪದಲ್ಲಿ ಕಾಣುವ ಜನರಿಗೂ ಅವನಿಂದ ವಿಶೇಷವಾದ ಅನುಭವಗಳಾಗಿರುತ್ತವೆ. ಇಂತಹುದೇ ಒಂದು ಮೈನವಿರೇಳಿಸುವ ಒಂದು ಘಟನೆಯು ನನ್ನ ಅರಿವಿಗೆ ಬಂದಿತು.
ಈ ಘಟನೆಯು ಕೇವಲ ಒಂದು ವಾರದ ಹಿಂದೆ ನಡೆದುದು. ಇದನ್ನು ನಾನು ಇಲ್ಲಿ ಹೇಳುತ್ತಿರುವುದು ಪವಾಡವೆನ್ನುವ ದೃಷ್ಟಿಯಿಂದ ಅಲ್ಲ. ಗುರುಗಳ ಮೇಲೆ ಸಿರಿಕೃಷ್ಣನ ಒಲವು ಎಷ್ಟರಮಟ್ಟಿಗೆ ಇದೆ ಎನ್ನುವ ಒಂದು ವಿಷಯವನ್ನು ತಿಳಿಸುವ ಉದ್ದೇಶದಿಂದ ಈ ಬರೆಹವನ್ನು ಬರೆದಿದ್ದೇನೆ. ಸಜ್ಜನರಿಗೆ ಇದು ಸ್ಪೂರ್ತಿದಾಯಕವಾದರೆ ಸಂತಸ. ಖಾಸಗೀತನದ ಗೌಪ್ಯತೆಯನ್ನು ಕಾಪಾಡಲೋಸುಗ ಇದರಲ್ಲಿ ಬರುವ ಪ್ರಮುಖವ್ಯಕ್ತಿಗಳ ವಾಸ್ತವ ಹೆಸರುಗಳನ್ನು ಇಲ್ಲಿ ಹೇಳಿಲ್ಲ.
ಸರೋಜಮ್ಮ ಹೈದರಾಬಾದಿನವರು. ನಿಯೋಗಿ ಪಂಥದ ಬ್ರಾಹ್ಮಣರು. ತೆಲುಗು ಇವರ ಮನೆಮಾತು. ಕನ್ನಡ ಬಾರದು. ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿ. ಸುಸಂಸೃತರು. ಆದರೆ ಮುದ್ದಾದ ಮಗಳನ್ನು ಒಬ್ಬರೇ ಬೆಳೆಸಬೇಕಾದ ಅನಿವಾರ್ಯತೆಗೆ ಸಿಲುಕಿದವರು. ಇವರ ಮಗಳನ್ನು ದೇವರು ಬಹಳ ಜತನದಿಂದ ರೂಪಿಸಿದ್ದಾನೆ. ದಂತದಿಂದ ಅಲ್ಲ, ಪಾಂಡ್ಸ್ ಪೌಡರಿನಿಂದಲೇ ನಿರ್ಮಿಸಿದ್ದಾನೆ ಎನಿಸುವುದು. ಅಷ್ಟು ಮುದ್ದಾಗಿದ್ದಾಳೆ. ಡಿಗ್ರಿ ಕೊನೆಯವರೆಗೆ ಓದಿದ್ದಾಳೆ. ಆದರೆ ಎಲ್ಲೋ ಒಂದು ಪ್ರಾರಬ್ಧದ ಫಲದಿಂದಾಗಿ ಇವಳ ಲೌಕಿಕಬುದ್ಧಿಯ ಬೆಳವಣಿಗೆ ನಿಂತು ಹೋಗಿದೆ. ಹಿಂದೆ ಓದಿರುವುದೆಲ್ಲ ನೆನಪು ಇರುವುದಾದರೂ ಹೊಸದಾದ ಯಾವ ವಿಷಯವನ್ನೂ ಸ್ವೀಕರಿಸಲು ಸ್ಮರಣಕೋಶಗಳು ಒಪ್ಪುತ್ತಿಲ್ಲ. ಎಲ್ಲವನ್ನೂ ಮಗುವಿನಂದದಿ ನಿಧಾನವಾಗಿ ಒತ್ತಿ ಒತ್ತಿ ಹೇಳಿಕೊಡಬೇಕು. ಜೋರಾಗಿ ಹೇಳಿದರೆ ಮಗುವು ಸಂಪೂರ್ಣ ನರ್ವಸ್ ಆಗಿ ಬೆವೆಯಲಾರಂಭಿಸುತ್ತದೆ. ಹೀಗಾದಾಗ್ಯೂ ಸರೋಜಮ್ಮ ತಾವು ಧೃತಿಗೆಟ್ಟಿರುವುದನ್ನು ತೋರಗೊಡದೆ ಓರ್ವ ಹೆಂಗಸಾಗಿ ಮಗಳನ್ನು ಸಮರ್ಥವಾದ ದಾರಿಯಲ್ಲಿ ಬೆಳೆಸುತ್ತಿದ್ದಾರೆ. ಆದರ ತಾಯಿಯಾಗಿ ಅವರಿಗೆ ಒಂದು ಚಿಂತೆಯು ಇದ್ದೇ ಇದೆ. ಮಗುವಿನ ವಯಸ್ಸು 24 ಆಯಿತು ಎನ್ನುವುದೇ ಆ ಚಿಂತೆಯು. ಆ ಚಿಂತೆಯನ್ನೂ ವಿಶಿಷ್ಟವಾಗಿ ತೊಲಗಿಸಿಬಿಡೋಣವೆನ್ನುವುದು ಸರ್ವೋತ್ತಮನ ಸಂಕಲ್ಪವಿರಬೇಕು. ತಾಯಿ ಮಗಳಿಬ್ಬರೂ ಜೀವೋತ್ತಮರಾದ ಹನುಮಪ್ಪನ ಭಕ್ತರಾಗಿರುವೂ ಇದಕ್ಕೆ ಒಂದು ಕಾರಣವಿರಬಹುದೇನೋ.
ಈಗ ಒಂದು ವಾರದ ಹಿಂದೆ ಗಿರಿಜಮ್ಮನವರಿಗೆ ಒಂದು ಸ್ವಪ್ನ ಕಂಡಿದೆ. “ಇಷ್ಟರಲ್ಲೇ ಮಣಿಪಾಲಕ್ಕೆ ಹೋಗುವ ಸಂದರ್ಭ ಬರುವುದು. ಆಗ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಂದ ಇದಕ್ಕೆ ಪರಿಹಾರವಾಗಿ ಪ್ರಸಾದವನ್ನು ಸ್ವೀಕರಿಸಿ ಬಾ” ಎಂದು ಅವರಿಗೆ ಆ ಸ್ವಪ್ನದಲ್ಲಿ ಸೂಚನೆ ದೊರಕಿದೆ. ವಿಶೇಷವೆಂದರೆ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರನ್ನು ಅಲ್ಲಿಯವರೆಗೂ ಅವರು ನೋಡಿಯೂ ಇಲ್ಲ, ಅವರ ಬಗ್ಗೆ ಕೇಳಿಯೂ ಇಲ್ಲ. ಉಡುಪಿಯ ಕೃಷ್ಣಮಠವು ದ್ವಾರಕೆಯಂತೆಯೇ ಒಂದು ಪ್ರಸಿದ್ಧ ಕೃಷ್ಣಮಂದಿರವೆಂಬುದಷ್ಟೇ ಅವರ ತಿಳುವಳಿಕೆ. “ಮಣಿಪಾಲಕ್ಕೆ ಹೋಗುವ ಕೆಲಸವೇನಿಲ್ಲವಲ್ಲ?” ಎಂಬ ಅವರ ಪ್ರಶ್ನೆಗೆ ಮುಂದಿನ ದಿನವೇ ಉತ್ತರ ದೊರಕಿದೆ, ಒಂದು ಆಫೀಸ್ ಆದೇಶದ ಮೂಲಕ. ಹೆಚ್ಚಿನ ತರಬೇತಿಗಾಗಿ 5 ದಿನಗಳ ಮಟ್ಟಿಗೆ ಮಣಿಪಾಲಕ್ಕೆ ಹೋಗಬೇಕು ಎಂಬುದೇ ಆ ಆದೇಶದ ಸಾರವಾಗಿತ್ತು.!
ಮಣಿಪಾಲಕ್ಕೆ ಬಂದ ದಿನವೇ ಅವರು ಶ್ರೀಕೃಷ್ಣಮಠಕ್ಕೂ ಆಗಮಿಸಿ ಶ್ರೀಗುರುಗಳನ್ನು ಕಾಣಲು ಪ್ರಯತ್ನಿಸಿದ್ದಾರೆ. ಆದರೆ ಒತ್ತಡದ ಕಾರ್ಯಭಾರದಿಂದ ಗುರುಗಳ ದರ್ಶನ ಇವರಿಗೆ ಆ ದಿನ ಆಗಿಲ್ಲ. ಮುಂದಿನ ದಿನ ತಮ್ಮ ತರಬೇತಿಯ ಅವಧಿಯು ಮುಗಿದ ನಂತರ ಕಾಯ್ದಿದ್ದು ಶ್ರೀಗಳವರನ್ನು ಭೇಟಿ ಮಾಡಿದ್ದಾರೆ. ಆದರೆ ರಾತ್ರಿಯೂ ಸಭಾಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ಶ್ರೀಗಳವರಿಗೆ ಇವರಿಗೆ ಹೆಚ್ಚಿನ ಸಮಯವನ್ನು ಕೊಡಲಾಗಿಲ್ಲ. ಇವರು ತೆಲುಗು ಮಾತನಾಡುತ್ತಿದ್ದರಿಂದ ಶ್ರೀಗಳವರು ನನ್ನನ್ನು ಕರೆಸಿ “ಇವರೊಂದಿಗೆ ಮಾತನಾಡು ಸ್ವಲ್ಪ. ನಾಳೆ ಅಥವಾ ನಾಡಿದ್ದು ಇವರಿಗೆ ಮಂತ್ರಾಕ್ಷತೆಯನ್ನು ಕೊಡುತ್ತೇನೆ” ಎಂದು ತಮ್ಮ ಕಾರ್ಯಕ್ಕೆ ತೆರಳಿದರು. ನನ್ನ ಆಫಿಸಿನಲ್ಲಿ ಕುಳಿತು ಸರೋಜಮ್ಮನವರು ನಾನು ಮೇಲೆ ವಿವರಿಸಿರುವ ತಮ್ಮ ಅನುಭವವನ್ನು ವಿವರಿಸಿದರು. “ನಾವು ಗುರುಗಳ ಬಳಿ ಪರಿಹಾರವನ್ನು ಪಡೆದುಕೊಂಡೇ ಹೋಗುತ್ತೇವೆ” ಎಂದು ದೃಢಮನಸ್ಕರಾಗಿ ಹೇಳಿದರು.
ಮುಂದಿನ ದಿನ ಕೂಡ ಶ್ರೀಗಳವರ ದರ್ಶನವಾಗಿಲ್ಲ ಅವರಿಗೆ. “ಎರಡು ಮೂರು ದಿನಗಳಲ್ಲಿ ಸಾಧ್ಯವಾದಾಗಲೆಲ್ಲ ಶ್ರೀಗಳವರನ್ನು ಪೂಜಾಸಂದರ್ಭದಲ್ಲಿ ನೋಡಿದ್ದೇವೆ. ಅವರ ಮುಖದಲ್ಲಿ ಇರುವ ಪ್ರಶಾಂತತೆಯು ನಮ್ಮಲ್ಲಿ ಒಂದು ದೊಡ್ಡ ಭರವಸೆಯನ್ನು ಮೂಡಿಸಿದೆ. ಹಾಗಾಗಿ ಅವರಿಂದ ಫಲವನ್ನು ಸ್ವೀಕರಿಸಿಯೇ ಹೋಗುತ್ತೇವೆ” ಎಂದು ಕುಳಿತರೂ ಕೂಡ ಶ್ರೀಗಳವರ ದರ್ಶನವು ಸಂಪೂರ್ಣವಾಗಲಿಲ್ಲ. ಹಾಗಾಗಿ ನಿನ್ನೆ ರಾತ್ರಿಯ ಊಟವನ್ನು ಬಿಟ್ಟು ಶ್ರೀಗಳವರು ಬರುವುದನ್ನೇ ಕಾದುಕೊಂಡು ಕೂತಿದ್ದರು. ಆದರೆ ನಿನ್ನೆ ಕೂಡ ಶ್ರೀಗವಳರು ಮತ್ತೊಂದು ಕಾರ್ಯಕ್ರಮಕ್ಕೆ ಹೋಗುವ ತುರ್ತಿನಲ್ಲಿಯೇ ಇದ್ದರು. ಅವರು ಇನ್ನೇನು ಕಾರ್ಯಕ್ರಮಕ್ಕೆ ಹೊರಡುವಾಗ ನಾನು ಅವರಲ್ಲಿ ಇವರನ್ನು ಕುರಿತು ಬಿನ್ನವಿಸಿಕೊಂಡೆ. ಸ್ವಾಮಿಗಳು ಆ ಒತ್ತಡದಲ್ಲೂ ಒಂದು ಕ್ಷಣ ನಿಂತು, ತಮ್ಮ ಮನೋಮಂದಿರದಲ್ಲಿ ತಮ್ಮ ಆರಾಧ್ಯಮೂರ್ತಿಯನ್ನು ಧ್ಯಾನಿಸಿ ಪರಿಹಾರವೊಂದನ್ನು ಹೇಳಿಯೇ ಮುಂದೆ ಹೋದರು. ಅಷ್ಟು ಕಾರ್ಯಭಾರದಲ್ಲಿಯೂ ಕೂಡ ತಮ್ಮ ಬಗ್ಗೆ ಕರುಣೆಯನ್ನು ತೋರಿದ ಶ್ರೀಗಳವರ ಬಗ್ಗೆ ತಾಯಿಮಗಳಿಬ್ಬರೂ ಹೃದಯವನ್ನೇ ತುಂಬಿಸಿಕೊಂಡು ನಿಂತಿದ್ದರು. ಪರಿಹಾರದ ಕ್ರಮವನ್ನು ನಾನು ಇವರಿಗೆ ವಿವರಿಸುತ್ತ ಕುಳಿತಿದ್ದಾಗಲೇ ಶ್ರೀಗಳವರ ಮತ್ತೊಮ್ಮೆ ನನ್ನನ್ನು ಕರೆದು” ಈ ತಾಯಿ ಜಪ ಮಾಡುವಾಗ ಯಾವ ರೀತಿ ಚಿಂತನೆಯನ್ನು ಮಾಡಬೇಕು” ಎಂಬದನ್ನು ಮತ್ತೊಮ್ಮೆ ವಿವರಿಸಿದರು. ಅವರು ಹೇಳಿದ ಕ್ರಮ ಎಷ್ಟು ಸರಳವಾಗಿತ್ತೆಂದರೆ, ಸರೋಜಮ್ಮನವರು ತಕ್ಷಣವೇ ಅದನ್ನು ಗ್ರಹಿಸಿ ಮನನ ಮಾಡಿಕೊಳ್ಳಲು ಆರಂಭಿಸಿದರು.
ಇದನ್ನು ಅವರೊಂದಿಗೆ ಚರ್ಚಿಸುತ್ತಾ ಇದ್ದಾಗ ಮತ್ತೊಂದು 5 ನಿಮಿಷದ ನಂತರ, ಶ್ರೀಗಳವರು ತಾವಾಗಿಯೇ ಮತ್ತೊಮ್ಮೆ ನನ್ನ ಆಫೀಸಿನೊಳಗೆ ಬಂದರು. ತಾವು ಪರಿಹಾರರೂಪವಾಗಿ ಹೇಳಿದ ಮಂತ್ರವನ್ನು “ಕೇವಲ ಕಂಠದಿಂದ ಮಾಡದೆ, ಯಾವ ರೀತಿಯಾಗಿ ಹೃದಯದ ಒಳಗೆ ಚಿಂತನೆಯನ್ನು ನಡೆಸಬೇಕು?” ಎನ್ನುವ ಕ್ರಮವನ್ನು ಮತ್ತೊಮ್ಮೆ ಸರಳವಾಗಿ ಹೇಳಿಕೊಟ್ಟರು. ಶ್ರೀಗಳವರ ಈ ಒಂದು ಸರಳವಾದ ವ್ಯಕ್ತಿತ್ವಕ್ಕೆ ತಾಯಿ ಮಗಳಿಬ್ಬರಿಗೂ ಹೇಳಲಾಗದ ಆನಂದವಾಗಿದ್ದು ಅವರ ಮುಖದಲ್ಲಿಯೇ ಸ್ಪಷ್ಟವಾಗಿತ್ತು. “ಕೃಷ್ಣದೇವರು ಒಳ್ಳೆಯದನ್ನು ಮಾಡಲಿ” ಎಂದು ಪ್ರಾರ್ಥಿಸಿ ಶ್ರೀಗಳವರು ಮುಂದಿನ ಕಾರ್ಯಕ್ರಮಕ್ಕೆ ಹೊರಟರು.
ಶ್ರೀಗಳವರ ಮಂದಹಾಸ, ಪ್ರಶಾಂತತೆ ಮತ್ತು ಕೃಪಾಶೀಲ ಮನೋಭಾವವದ ಪರಿಚಯವಾದ ಸರೋಜಮ್ಮನವರ ಕಣ್ಣುಗಳು ತುಂಬಿಬಂದಿದ್ದವು. ಅವರ ಹೃದಯದಿಂದ ಹೊರಟಿದ್ದು ಒಂದೇ ಒಂದು ಮಾತು. “ಎಂತೋ ಗೊಪ್ಪ ಪ್ರೇಮಮೂರ್ತಿ ಅಂಡಿ ಆಯನ!! (ಎಂತಹ ದೊಡ್ಡ ಪ್ರೇಮಮೂರ್ತಿ ಅವರು!) ಎಂದು.”
ಹೌದು. ಗುರುಗಳು ಪ್ರೇಮಮೂರ್ತಿಯೇ ಹೌದು. ಸಧ್ಯಕ್ಕೆ ಅವರಿರುವುದು ಅಗಾಧವಾದ ಒತ್ತಡದಲ್ಲಿ. ಆದರೂ ಕೂಡ ಅದರ ಪ್ರಭಾವವನ್ನು ಯಾರ ಮೇಲೂ ಹಾಕದೆ ನಗುತ್ತಲೇ ಇರುತ್ತಾರೆ. ಆ ನಗುವು ಅವರ ಹೃದಯದ ಒಳಗೆ ನಡೆಯುತ್ತಿರುವ ಶ್ರೀಕೃಷ್ಣನ ಮಂಗಳಾರತಿಯ ಬೆಳಕಿನ ಪ್ರಭೆಯು.
ಇಂದು ಸಂಜೆ ಸರೋಜಮ್ಮ ತಮ್ಮ ಮುದ್ದಿನ ಕರುವಿನೊಂದಿಗೆ ಹೈದರಾಬಾದಿಗೆ ಪಯಣಿಸಿದರು. ಶ್ರೀಗಳವರ ಕೈಯಿಂದ ಪಡೆದ ಮಂತ್ರಾಕ್ಷತೆಯು ಫಲವನ್ನು ಕೊಟ್ಟೇಕೊಡುವುದು ಎನ್ನುವ ವಿಶ್ವಾಸದೊಂದಿಗೆ. ರಕ್ಷತಿ ಇತಿ ಏವ ವಿಶ್ವಾಸಃ! ಅವರ ಜೀವನದಲ್ಲಿ ಮೂಡುವ ಹೊಸ ಬೆಳಕಿನ ಕಿರಣಗಳನ್ನು ಆಸ್ವಾದಿಸಲು ಶ್ರೀಹರಿವಾಯುಗುರುಗಳು ನಮಗೆ ಅವಕಾಶವನ್ನು ಕೊಡಬೇಕು ಎನ್ನುವುದು ನನ್ನ ಪ್ರಾರ್ಥನೆಯು.
ಈ ಸಂದರ್ಭದಲ್ಲಿ ನಾವು ತಿಳಿಯಬೇಕಾದ ಒಂದು ಸಂದೇಶವುಂಟು. ಕೆಲ ಗುಪ್ತಸಾಧಕರಿಗೆ ಈ ರೀತಿಯಾದ ಅವಸ್ಥೆಗಳು ಪ್ರಾರಬ್ಧರೂಪದಲ್ಲಿ ಬಂದಿರುತ್ತವೆ. ಭಗವಂತನನ್ನು ಕುರಿತು ವಿಶೇಷವಾದ ಜ್ಞಾನವಿಲ್ಲದೇ ಹೋದರೂ ಕೂಡ ಪರಿಶುದ್ಧ ಹೃದಯದಿಂದ, ಹಿರಿಯರು ಹೇಳಿಕೊಟ್ಟ ರೀತಿಯಲ್ಲಿ ಅವನ ಆರಾಧನೆಯನ್ನು ಮಾಡಬಲ್ಲರು. ಈ ರೀತಿಯಾದ ವಿಶೇಷ ಸಂದರ್ಭದಲ್ಲಿ ಭಗವಂತನು ಅವರ ಹೃದಯಶುದ್ಧಿಯನ್ನು ಪರಿಗಣಿಸಿ, ತಾನಾಗಿಯೇ ಆಗಲಿ ಅಥವಾ ಯೋಗ್ಯಗುರುಗಳ ಮೂಲಕವೋ ಆಗಲಿ ಅವರನ್ನು ಜ್ಞಾನಮಾರ್ಗದಲ್ಲಿ ತಂದು ನಿಲ್ಲಿಸುತ್ತಾನೆ. ದೇವಹೂತಿಯ ಚರಿತೆಯು ಇದಕ್ಕೆ ನಿದರ್ಶನವಾಗಬಲ್ಲದು.
“ಕೇವಲ ಇಂದ್ರಿಯತರ್ಪಣವನ್ನು ಮಾಡುತ್ತಾ ನೈಜವಾದ ಆನಂದದಿಂದ ನಾನು ವಂಚಿತಳಾಗಿದ್ದೇನೆ. ನನಗೆ ಶಾಶ್ವತಾನಂದದ ಮಾರ್ಗವನ್ನು ತೋರು” ಎಂದು ಆಕೆ ಕಪಿಲದೇವನಲ್ಲಿ ಕೇಳುತ್ತಾಳೆ. “ನೇರವಾಗಿ ನೀನು ಆ ಮಾರ್ಗಕ್ಕೆ ಹೋಗಲಾಗದು ಎಂದು” ಭಗವಂತ ಹೇಳಿದ. ಆದರೆ ಅವಳ ಕೈ ಬಿಡಲಿಲ್ಲ. ತನ್ನೆದುರು ಆಕೆಯನ್ನು ಕುಳ್ಳಿರಿಸಿಕೊಂಡು ಉಪದೇಶವನ್ನು ಮಾಡಿ ಜ್ಞಾನಮಾರ್ಗಕ್ಕೆ ತಂದು ನಿಲ್ಲಿಸಿದ. ಈ ರೀತಿಯಾಗಿ ಸಾಧಕಳಾದ ದೇವಹೂತಿಯು ಮೋಕ್ಷಾರ್ಹರ ಸಾಲಿಗೆ ಸೇರಿದಳು. ಇದು ಯೋಗ್ಯರನ್ನು ದೇವರು ನಡೆಸಿಕೊಳ್ಳುವ ರೀತಿಯು. ಜ್ಞಾನದ ಬೆಂಬಲವುಳ್ಳ ಭಕ್ತಿಗೇ ಹೆಚ್ಚಿನ ಮಹತ್ವವು. ಜ್ಞಾನವಿಲ್ಲದಿದ್ದಲ್ಲಿ ಮೋಕ್ಷವು ಆಗದು. ಆದರೆ ಭಕ್ತನ ಯೋಗ್ಯತೆಯು ಚೆನ್ನಾಗಿದ್ದಲ್ಲಿ ಭಗವಂತನು ಜ್ಞಾನವನ್ನು ಅವನಲ್ಲಿ ತುಂಬಿಸಿ ತನ್ನ ಬಳಿಗೆ ಕರೆದುಕೊಳ್ಳುತ್ತಾನೆ.
ಸರೋಜಮ್ಮನವರ ಮಗಳನ್ನು ನಾನು ದೇವಹೂತಿಗೆ ಹೋಲಿಸುತ್ತಿಲ್ಲ. ಆವರ ಹಿಂದಿನ ಜನ್ಮದ ಸಾಧನೆಯನ್ನೂ ನಾವು ಬಲ್ಲವರಲ್ಲ. ಆದರೆ ಶ್ರೀಪ್ರಾಣನಾಥನ ಉಪಾಸಕರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಮೂಲಕ ತಾಯಿ ಮತ್ತು ಮಗಳಿಬ್ಬರೂ ತನ್ನೆಡೆಗೆ ಶರಣಾಗತರಾಗುವಂತಹ ಒಂದು ಸನ್ನಿವೇಶವನ್ನು ಶ್ರೀಕೃಷ್ಣನು ನಿರ್ಮಾಣಮಾಡಿದ. ಇದು ಅವರ ಹಿಂದಿನ ಜನ್ಮವು ಉತ್ತಮವಾಗಿರಲಿಕ್ಕೇ ಬೇಕು ಎನ್ನುವ ಅಭಿಪ್ರಾಯವನ್ನು ಪುಷ್ಟಿಗೊಳಿಸುತ್ತದೆ.
ಭಗವಂತನ ಲೀಲೆಗಳನ್ನು ನಿರಂತರವಾಗಿ ಕೇಳುತ್ತಿರುವುದರ ಮೂಲಕ ನಾವು ಕೂಡ ನಮ್ಮ ಪ್ರಾರಬ್ಧದ ಬೇಗೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅಂತಹ ಒಂದು ಅವಕಾಶ ನಮಗೆ ಇದ್ದೇ ಇದೆ. ಗುರುಗಳ ಮೂಲಕ. ಅದನ್ನು ನಾವೆಲ್ಲ ಸದುಪಯೋಗ ಪಡೆದುಕೊಳ್ಳೋಣ.
ಪ್ರೇಮಮೂರ್ತಿಯ ಚಿತ್ರ : ಜನ್ನಿದಾದ ಕ್ಯಾಪ್ಚರ್ ಮಾಡಿದ್ದು.
Be First to Comment