ಸಪ್ತಕೋಟೀಶ್ವರ – ಗೋವಾ

ದಶದೀಪಗಳು 3/10: ಶ್ರೀಸಪ್ತಕೋಟೀಶ್ವರ
ಗೋವೆಯನ್ನು. ಸಾವಿರಾರು ವರ್ಷಗಳಿಂದಲೂ ಅನೇಕ ರಾಜವಂಶಗಳು ಇದನ್ನು ಆಳಿವೆ. ಈ ರಾಜವಂಶಗಳಲ್ಲಿ ಅನೇಕರು ಗೋವೆಯನ್ನು ದೋಚಿದರು. ಕೆಲವರು ಸಮೃದ್ಧಿಗೊಳಿಸಿದರು. ಕದಂಬರ ಕಾಲವು ನಿರ್ವಿವಾದವಾಗಿ ಗೋವೆಯು ಹೆಚ್ಚಿನ ಸುಖವನ್ನು ಕಂಡ ಕಾಲವು.
ಗೋವೆಯ ಕದಂಬರು ಶ್ರೀಸಪ್ತಕೋಟೀಶ್ವರನ ಆರಾಧಕರು. ಕದಂಬರು ಟಂಕಿಸಿದ್ದ ಹೊನ್ನಿನ ನಾಣ್ಯಗಳಲ್ಲಿ ಶ್ರೀಸಪ್ತಕೋಟಿಶ್ವರವರಲಬ್ಧ ವರಪ್ರಸಾದ ಎಂಬ ವಾಕ್ಯವನ್ನು ನೋಡಬಹುದು. ಇದು ಶ್ರೀಸಪ್ತಕೋಟೀಶ್ವರನ ಮೇಲೆ ಅವರಿಗಿದ್ದ ಭಕ್ತಿಯ ಒಂದು ಕುರುಹು. ಈ ಸಪ್ತಕೋಟಿಶ್ವರನ ದೇವಾಲಯವನ್ನು ನಿರ್ಮಿಸಿದ್ದು ಶಿವಚಿತ್ತಪರಮಾದಿದೇವನ ಆಳ್ವಿಕೆಯಲ್ಲಿ. ಈತನ ರಾಣಿಯಾದ ಕಮಲಾದೇವಿಯು ಮಹಾ ಸಾಹಸಿಯೂ, ಸಮರ್ಥಳೂ, ಧರ್ಮವನ್ನು ತಿಳಿದವಳೂ ಆಗಿದ್ದವಳು. ಅನೇಕ ಮಂದಿರಗಳನ್ನು ಈ ಮಹಾದೇವಿಯು ಕಟ್ಟಿಸಿದ್ದಾಳೆ.
ಸಪ್ತಕೋಟೀಶ್ವರನ ದೇವಾಲಯವೂ ಅದರಲ್ಲಿ ಒಂದು. ಬಹಳ ವೈಭವದಿಂದ ಕೂಡಿದ್ದ ದೇವಾಲಯವಾಗಿತ್ತು ಇದು.
ಮಹಾದಾಯಿ ನದಿಯು ಪಣಜಿಯ ಬಳಿ ದೀವರ್ ಎಂಬ ದೊಡ್ಡ ದ್ವೀಪವೊಂದನ್ನು ನಿರ್ಮಿಸಿದೆ. (ದೀವರ್ ಎನ್ನುವ ಶಬ್ದವೇ ದ್ವೀಪ ಎನ್ನುವುದನ್ನು ಸೂಚಿಸುತ್ತದೆ.) ಸ್ಥಳಪುರಾಣದ ಪ್ರಕಾರ ಏಳು ಜನಋಷಿಗಳು ಕೋಟಿ ವರ್ಷ ತಪಸ್ಸು ಮಾಡಿ ರುದ್ರದೇವರನ್ನು ಒಲಿಸಿಕೊಂಡ ದ್ವೀಪವಿದು. ಹೀಗಾಗಿ ಸಪ್ತಕೋಟೀಶ್ವರ ಎಂಬ ಹೆಸರು ಈ ಸದಾಶಿವನಿಗೆ. ಮಹಾರಾಣಿ ಕಮಲಾದೇವಿಯು ಸಪ್ತಕೋಟೀಶ್ವರನಿಗೆ ಭವ್ಯವಾದ ಆಲಯವನ್ನು ಕಟ್ಟಿಸಿದಳು. ಈ ಕಟ್ಟಡ ನಿರ್ಮಾನವಾಗಿದ್ದು 12ನೆಯ ಶತಮಾನದಲ್ಲಿ. ಎತ್ತಲಿಂದ ಬರಬೇಕೆಂದರೂ ಕೂಡಾ ಮಹದಾಯಿ ನದಿಯಲ್ಲಿ ದೋಣಿಯ ಮೂಲಕವೇ ಈ ದೇವಾಲಯಕ್ಕೆ ಬಂದು ಸೇರಬೇಕಿತ್ತು. ಗುಡಿಯು ನಿರ್ಮಾಣವಾದ ಜಾಗದ ಹೆಸರು ನಾರ್ವೆ ಎಂದು.
ಮುಂದೆ 13ನೇ ಶತಮಾನದಲ್ಲಿ ಕದಂಬರ ವಂಶದ ಪತನವಾಯಿತು. ಬಹುಮನಿ ಸುಲ್ತಾನರು ರಾಜ್ಯವನ್ನು ಗೆದ್ದುಕೊಂಡು ಸುಲಿಗೆಗೆ ಇಳಿದರು. ಈ ಸಮಯದಲ್ಲಿ ಈ ಸಪ್ತಕೋಟೀಶ್ವರನ ಆಲಯವನ್ನು ನಿರ್ನಾಮ ಮಾಡಿ ಹಾಕಿದರು. ಮುಂದೆ, ವಿಜಯನಗರದ ಸಾಮ್ರಾಜ್ಯ ಉದಯವಾಯಿತಲ್ಲ. ಆ ರಾಜ್ಯದ ಉಗಮಕ್ಕೆ ಕಾರಣೀಪುರುಷರುಗಳಲ್ಲಿ ಒಬ್ಬನಾದ ಮಾಧವ ಎಂಬ ಮಂತ್ರಿಯು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ. ದೇವಾಲಯದ ನಿತ್ಯದ ಬಳಕೆಗಾಗಿ ಒಂದು ವಿಶಾಲವಾದ ಸರೋವರವನ್ನೂ ನಿರ್ಮಿಸಿಕೊಟ್ಟನೀತ. ಇದರ ಹೆಸರು ಮಾಧವ ತೀರ್ಥ ಎಂದೇ ಇದೆ. ಈ ಮಾಧವರಾಯನು ಚಂದ್ರಗುತ್ತಿಯ ಅರಸನಾಗಿದ್ದ ಮಾರಪ್ಪನ ಪ್ರಧಾನ ಮಂತ್ರಿಯಾಗಿದ್ದವನು, ಮುಂದೆ ವಿಜಯನಗರದ ಮೊದಲನೆ ಹರಿಹರರಾಯನ ಪ್ರಧಾನಿಯಾದವನು. ಇವನು ಗೋವೆಯ ಸಮೃದ್ಧಿಗಾಗಿ ಮಾಡಿದ ಕಾರ್ಯಕ್ರಮಗಳದ್ದೇ ಮತ್ತೊಂದು ಲೇಖನವಾಗಬಲ್ಲದು. ಗೋವಾದ ಪ್ರಸಿದ್ಧವಾದ ರಾಯ ಭಂಡಾರ (ಈಗಿನ ರಾಯ್ ಬಂದರ್) ಇವನದ್ದೇ ನಿರ್ಮಾಣವು.
ನಮ್ಮ ಸಪ್ತಕೋಟೀಶ್ವರನ ಗುಡಿಯು ಮುಂದೆ ಪೋರ್ಚುಗೀಸರ ಹಾವಳಿಗೆ ಒಳಗಾಯಿತು. ಈ ನೀಚರು, ಶ್ರೀಸಪ್ತಕೋಟೀಶ್ವರನ ಗುಡಿಯನ್ನು ಪೂರ್ತೀ ಬುಡಮೇಲುಮಾಡಿ ಅದರ ಮೇಲೆ ತಮ್ಮ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿಕೊಂಡುಬಿಟ್ಟರು. ನಾರ್ವೆ ಎಂದಿದ್ದ ಊರ ಹೆಸರು ಇವರ ಬಾಯಲ್ಲಿ ನರೋಆ ಎಂದಾಯಿತು. ಶಿವಲಿಂಗವನ್ನು ತಮ್ಮ ಕಟ್ಟಡದ ಬಾವಿಯ ನೀರುಸೇದುವ ಜಾಗದಲ್ಲಿ ಬಕೆಟ್ಟನ್ನು ಇಡುವ ಕಲ್ಲಿನಂತೆ ಬಳಸಿಕೊಳ್ಳಲು ಆರಂಬಿಸಿದರು. ಮುಂದೆ ಕೆಲವು ವೈದಿಕರು ಈ ಶಿವಲಿಂಗವನ್ನು ಅಲ್ಲಿಂದ ಗುಟ್ಟಾಗಿ ಸಾಗಿಸಿ ಈ ದುರವಸ್ಥೆಯಿಂದ ತಾತ್ಕಾಲಿಕವಾಗಿ ಪಾರು ಮಾಡಿದರು. ಅದನ್ನು ಅಲ್ಲಿಂದ ನದಿಯ ಮೂಲಕ ಸಾಗಿಸಿ ದಿವಚಲೀ (ಈಗಿನ ಬಿಚೋಲಿಂ) ಎನ್ನುವ ತಾಲ್ಲೂಕಿನ (ಅಂದಿನ ಕಂದಾಯ ಗ್ರಾಮವದು) ಹತ್ತಿರ ಇರುವ ಸ್ಥಾಪಿಸಿ, ಕಳ್ಳತನದಲ್ಲಿಯೇ ಪೂಜಾದಿಗಳನ್ನು ನೆರವೇರಿಸುತ್ತಿದ್ದರು. ನಮ್ಮವರು ಈ ದುರವಸ್ಥೆಯಿಂದ ಪಾರಾಗಲು ಬರೋಬ್ಬರಿ ನೂರೆಂಟು ವರ್ಷಗಳು ಬೇಕಾದವು. ಈ ದೈನ್ಯದಿಂದ ಕಾಪಾಡಲು ಮತ್ತೊಬ್ಬ ಯುಗಪುರುಷನ ಅವತಾರವಾಯಿತು. ಆತನೇ ಹಿಂದೂ ಹೃದಯ ಸಾಮ್ರಾಟ ಶಿವಾಜಿರಾವ್ ಭೋಂಸಲೇ.
ಶಿವಾಜಿ ಮಹಾರಾಜರು ಪೋರ್ಚುಗೀಸರನ್ನು ನಿಧಾನವಾಗಿ ಸೋಲಿಸುತ್ತಾ ಬಂದು, ಈ ನಾರ್ವೇ ಪ್ರಾಂತ್ಯವನ್ನೂ ವಶಪಡಿಸಿಕೊಂಡು, ಶ್ರೀಸಪ್ತಕೋಟಿಶ್ವರನ ದೇವಾಲಯದ ಪುನುರುಜ್ಜೀವನಕ್ಕೆ ಅಪ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಈ ಗುಡಿಯು ಮತ್ತೊಮ್ಮೆ ದುರವಸ್ಥೆಗೆ ಒಳಗಾಗಲಿಲ್ಲ. ಆದರೆ ಮೂಲ ಸ್ಥಾನದಿಂದ ಶಾಶ್ವತವಾಗಿ ಬೇರ್ಪಟ್ಟಿತು. ಪ್ರಾಯಶಃ ಪೋರ್ಚುಗೀಸರ ಪ್ರಭಾವದಿಂದ ಸಂಪೂರ್ಣ ಮೈಲಿಗೆಗೆ ಒಳಗಾದ ಜಾಗದಲ್ಲಿ ಗುಡಿಯನ್ನು ಕಟ್ಟಲು ಶಿವಾಜಿರಾಜರ ಮನಸ್ಸು ಒಪ್ಪಲಿಲ್ಲವೆನಿಸುತ್ತದೆ. ಈ ಜಾಗವು ಕೂಡಾ ನಾರ್ವೆ ಎಂದೇ ಹೆಸರಾಯಿತು. ಅದು ಹಳೆಯ ನಾರ್ವೆ. ಇದು ಹೊಸತು.
ಮಾಧವತೀರ್ಥವು ಮಾತ್ರ, ತನ್ನ ಪ್ರಾಚೀನ ಸೌಂದರ್ಯದ ಚಿಹ್ನೆಗಳನ್ನು ಹೊತ್ತು ಇಂದಿಗೂ ಹಳೆಯ ನಾರ್ವೆಯಲ್ಲಿ ಪೋರ್ಚುಗೀಸರ ಔರಸಪುತ್ರರ ಕಾಲುತೊಳೆಯುತ್ತಾ ಉಳಿದಿದೆ.
ಹೊಸದಾದ ದೇಗುಲವು ಪ್ರಾಚೀನವಾದ ಯಾವ ಲಕ್ಷಣವನ್ನೂ ಹೊಂದಿಲ್ಲ. ಪೋರ್ಚುಗೀಸರ ಶೈಲಿಯ ಕಟ್ಟಡವೇ ಇದೂ ಕೂಡಾ. ಆದರೆ ನಮ್ಮ ಪ್ರಾಚೀನರು ಪೂಜಿಸಿದ್ದ ಶಿವಾಲಯವಿದು ಎಂಬ ಹೆಮ್ಮೆಯಿಂದ ನಾವು ಇದನ್ನು ದರ್ಶಿಸಲೇಬೇಕು. ದೇವಾಲಯದ ಬಳಿ ಶಿವಾಜಿ ಮಹಾರಾಜರು ಜೀರ್ಣೋದ್ಧಾರ ಮಾಡಿದ ವಿವರಗಳ ಶಿಲಾಫಲಕವಿದೆ.
ಈ ನಾರ್ವೆಯು ಪಣಜಿಗೆ ಹತ್ತಿರವಾದ ಊರು. ಸುಮಾರು 15 ಕಿ.ಮೀ ದೂರವಾಗುವುದು. ಹೋಗಲು ಎರಡು ದಾರಿಗಳಿವೆ. ಒಂದು ರಾಯ್ ಬಂದರಿನ ಮೂಲಕ ದೊಡ್ಡ ದೋಣಿಯಲ್ಲಿ ನಿಮ್ಮ ಬೈಕ್ ಅಥವಾ ಕಾರನ್ನು ಹತ್ತಿಸಿಕೊಂಡು ಮಹದಾಯಿ ನದಿಯನ್ನು ದಾಟಿ ಪುನಃ ರಸ್ತೆಯ ಮೂಲಕ ಮುಂದುವರೆಯಬಹುದು. ಇದು ಬಹಳ ಸುಂದರವಾದ ಅನುಭವನ್ನು ಕೊಡುತ್ತದೆ. ಎರಡನೆಯದ್ದು ಚೂರು ಸುತ್ತಾಡಿಸಿಕೊಂಡು ಬರುವ ರಸ್ತೆ. ನಿಮಗೆ ಸಮಯಾವಕಾಶವಿದ್ದರೆ ಈ ದ್ವೀಪದಲ್ಲಿ ಒಂದು ಸಂಜೆಯನ್ನು ಕಳೆಯಬೇಕು. ಅದ್ಭುತವಾದ ನೈಸರ್ಗಿಕ, ವೈವಿಧ್ಯಮಯ ಸೌಂದರ್ಯದಿಂದ ಕೂಡಿದೆ. ಸೆಪ್ಟಂಬರ್ ಆದರೆ ನೂರಾರು ವಿವಿಧ ಪಕ್ಷಿಗಳನ್ನೂ ಇಲ್ಲಿ ನೋಡಬಹುದು. ಇದೊಂದು ಪಕ್ಷಿಧಾಮವೂ ಹೌದು.
ಗೂಗಲ್ ಮ್ಯಾಪ್ ಲೊಕೇಶನ್ ಇಲ್ಲಿದೆ.
ಹಳೆಯ ಗುಡಿ : https://maps.app.goo.gl/LMQMqVHsV9AmkPfS9
ಶೋಭನಕೃನ್ನಾಮ ಸಂವತ್ಸರದ ಮಧ್ವನವರಾತ್ರಿಯ ಮೂರನೆಯ ದೀಪವು, ಸಪ್ತಕೋಟೀಶ್ವರ ಮತ್ತು ಶ್ರೀಮಧ್ವರೊಳಗಿನ ಶ್ರೀದುರ್ಗೆ ಪರಶುರಾಮರಿಗೆ ಅರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.