ಶಮ್ಯಾಪ್ರಾಸ – ಕಾಷ್ಠಮೌನ

ಜಗತ್ತಿಗೆ ಜ್ಞಾನದ ರುಚಿಯನ್ನು ತೋರಿಸಿದ ಶ್ರೀವೇದವ್ಯಾಸದೇವರು ನೆಲೆಸಿರುವುದು ಹಿಮಾಲಯದ ಉತ್ತರ ಭಾಗದಲ್ಲಿ. ಹಿಮಪರ್ವತಗಳಿಂದ ಸುತ್ತುವರೆದ ಬೆಚ್ಚನೆಯ ತಪ್ಪಲಿನಲ್ಲಿ ಅವರ ಆಶ್ರಮವಿದೆ. ಬದರಿಕಾಶ್ರಮ ಎನ್ನುವುದು ಅವರ ಆಶ್ರಮದ ಹೆಸರು. ಈ ಬದರಿಕಾಶ್ರಮವು ಇರುವ ಪ್ರದೇಶ ಬಹು ರಮಣೀಯವಾಗಿದೆ. ಇದಕ್ಕೆ ಶಮ್ಯಾಪ್ರಾಸವೆನ್ನುವ ಮುದ್ದಾದ ಹೆಸರು ಇದೆ.

ಚುಟುಕಾಗಿ ಹೇಳುವುದಾದರೆ ಶಮ್ಯಾಪ್ರಾಸವೆಂದರೆ ಯಜ್ಞಶಾಲೆಯೆಂದರ್ಥ. ಇದಕ್ಕೆ ಈ ಹೆಸರು ಬರಲು ಸ್ವಾರಸ್ಯಕರವಾದ ಕಾರಣವಿದೆ.

ಶಮ್ಯಾ ಎನ್ನುವುದು ಕಟ್ಟಿಗೆಯಿಂದ ಮಾಡಿದ ಒಂದು ಯಜ್ಞಸಾಧನ. ಖದಿರ ಎನ್ನುವ ಮರದ ಕಟ್ಟಿಗೆಯಿಂದ ಇದನ್ನು ತಯಾರಿಸಲಾಗುತ್ತದೆ. ನೋಡಲು ನಮ್ಮ ಗರಡಿಯ ಪೈಲ್ವಾನರ ಗದೆಯಂತೆ ಇರುತ್ತದೆ. ಮೂರು ಅಡಿಗಳಷ್ಟು ಎತ್ತರದ ಆಯುಧ ಇದು. ಇದು ತುದಿಯ ಭಾಗದಲ್ಲಿ ಎಂಟು ಇಂಚಿನಷ್ಟು ಅಗಲವಿರುತ್ತದೆ. ಈ ಭಾಗದಲ್ಲಿ ಯಜ್ಞದ ಯಜಮಾನನ ಹೆಂಡತಿಯು ಯಾಗಸಮಯದಲ್ಲಿ ತಲೆಗೆ ಸುತ್ತಿಕೊಳ್ಳಬೇಕಾದ ವಸ್ತ್ರಗಳನ್ನು ಇಡಲಾಗುತ್ತದೆ. ಈ ಶಮ್ಯಾವನ್ನು ಕೃಷ್ಣಾಜಿನದ ಮೇಲೆ ಇರಿಸಿ, ಅದರ ಮೇಲೆ ಬೀಸುವಕಲ್ಲನ್ನು ಇಟ್ಟು ಯಾಗಕ್ಕೆ ಬೇಕಾದ ಅಕ್ಕಿಹಿಟ್ಟು ಮೊದಲಾದ ಹವಿಸ್ಸಿನ ಪದಾರ್ಥಗಳನ್ನು ತಯಾರಿಸಿಕೊಳ್ಳಬೇಕು. ಇದು ಅಗ್ನೀಧ್ರ ಎನ್ನುವ ಋತ್ವಿಜನ ಕೆಲಸ.

ಈ ಆಯುಧದ ಮತ್ತೊಂದು ಕೆಲಸ ಹೀಗೆ ಇದೆ. ಯಾಗದ ಪ್ರಧಾನ ವೇದಿಯನ್ನು ನಿರ್ಮಿಸುವ ಸ್ಥಳದಲ್ಲಿ ನಿಂತುಕೊಂಡು ಯಜ್ಞಮಾಡುವವರ ಸಮೂಹದ ವ್ಯಕ್ತಿಯೋರ್ವ ಈ ಶಮ್ಯಾವನ್ನು ತನ್ನ ಶಕ್ತಿಯನ್ನು ಉಪಯೋಗಿಸಿ ದೂರಕ್ಕೆ ಎಸೆಯಬೇಕು. ಅದು ಬೀಳುವ ಸ್ಥಳದವರೆಗೂ, ಪ್ರಧಾನವೇದಿಯನ್ನು ಕೇಂದ್ರವಾಗಿಟ್ಟುಕೊಂಡು ವೃತ್ತಾಕಾರವಾದ ಯಾಗಶಾಲೆಯನ್ನು ನಿರ್ಮಿಸಬೇಕು. ಇದುವೆ ಶಮ್ಯಾಪ್ರಾಸ. ಪ್ರಾಸ ಎಂದರೆ ಎಸೆಯುವುದು ಎಂದು ಸಂಸ್ಕೃತದಲ್ಲಿ ಅರ್ಥವಿದೆ. ಶಮ್ಯಾವನ್ನು ಎಸೆದು ನಿರ್ಮಿಸಿದ ಶಾಲೆಯಾದ್ದರಿಂದ ಶಮ್ಯಾಪ್ರಾಸವೆನ್ನುವ ಹೆಸರು. ಹೀಗೆ ಎಸೆಯುವ ವಿಧಿಗೆ ಶಮ್ಯಾಕ್ಷೇಪವಿಧಿಃ ಎಂದು ಹೆಸರು.

ಹೀಗೆ ನಿರ್ಮಿಸಿದ ಯಾಗಶಾಲೆಯಲ್ಲಿ ಯಜ್ಞಪುರುಷನ ಆರಾಧನೆಯು ನಡೆಯುತ್ತದೆ. ಯಾಗ ಮಧ್ಯದಲ್ಲಿ ಅಗ್ನಿಕುಂಡದಿಂದ ಕೆಂಡವು ಹಾರಿ ಹೊರಗೆ ಬೀಳುವುದು ಸಹಜ. ಆ ಅಗ್ನಿಯ ತುಣುಕು ಶಮ್ಯಾಪ್ರಾಸದ ಒಳಗಡೆಯೇ ಬಿದ್ದಲ್ಲಿ ಅದನ್ನು ‘ಕವಿರಗ್ನಿಃ’ ಎನ್ನುವ ಮಂತ್ರವನ್ನು ಹೇಳುತ್ತಾ ಋತ್ವಿಜರೆಲ್ಲರೂ ಅದಕ್ಕೆ ಪ್ರದಕ್ಷಿಣೆ ಮಾಡಬೇಕು, ನಂತರ ಅದನ್ನು ತಿರುಗಿ ಯಜ್ಞಕುಂಡದಲ್ಲಿ ಸೇರಿಸಬೇಕು. ಒಂದು ವೇಳೆ ಅಗ್ನಿಯು ಹಾರಿ ಶಮ್ಯಾಪ್ರಾಸದ ಹೊರಗೆ ಬಿದ್ದಲ್ಲಿ ಹೋಮಕುಂಡದಲ್ಲಿರುವ ಅಗ್ನಿಯನ್ನೇ ಆ ಜಾಗಕ್ಕೆ ತೆಗೆದುಕೊಂಡು ಹೋಗಿ ಸೇರಿಸಿ ಆ ದಿನವೆಲ್ಲ ಋತ್ವಿಜರು ಆ ಅಗ್ನಿಯ ಬಳಿಯೇ ವಾಸ ಮಾಡಬೇಕು. ಇದು ವಿಧಿ.

ಶಮ್ಯಾಕ್ಷೇಪವಿಧಿಯ ಮತ್ತೊಂದು ಆಚರಣೆಯು ಹೀಗಿದೆ. ಶಮ್ಯಾವನ್ನು ಬೀಸಿ ಎಸೆದು ಅದು ಎಲ್ಲೆಲ್ಲಿ ಬೀಳುವುದೋ ಅಲ್ಲೆಲ್ಲ ಶಮ್ಯಾಪ್ರಾಸವನ್ನು ನಿರ್ಮಿಸಿ ಯಾಗವನ್ನು ಮಾಡಬೇಕು. ಹೀಗೆ ಯಾಗವನ್ನು ಆಚರಿಸುತ್ತ ಭೂಮಂಡಲವನ್ನು ಸುತ್ತಬೇಕು. ಬಲಿ ಚಕ್ರವರ್ತಿಯು ಅಶ್ವಮೇಧವನ್ನು ಮಾಡಿದ್ದು ಈ ವಿಧಾನದಲ್ಲಿಯೇ.

ಈ ಎರಡೂ ವಿಧಾನಗಳು ಈಗ ಪ್ರಚಲಿತದಲ್ಲಿವೆಯೋ ಇಲ್ಲವೋ ಎನ್ನುವುದನ್ನು ಚರ್ಚೆ ಮಾಡುವುದು ಬೇಡ. ಶಮ್ಯಾಪ್ರಾಸವೆಂದರೆ ಯಾಗಶಾಲೆ ಎಂದರ್ಥ ಎನ್ನುವುದು ನಿರ್ವಿವಾದವೆಂದಾಯಿತು.

ಮನೋಹರವಾದ ಪರಿಸರವದು. ಆ ರಮಣೀಯತೆಯನ್ನು ಬಾಯಲ್ಲಿ ಹೇಳಲಾಗದು. ವೇದವ್ಯಾಸದೇವರೇ ನೆಲೆಸಿರುವ ಆಶ್ರಮದ ಯಾಗಶಾಲೆ ಎಂದಮೇಲೆ ಸೌಂದರ್ಯಕ್ಕೇನು ಕಡಿಮೆ? ಆದರೆ ಆ ಸೌಂದರ್ಯವನ್ನು ನಿರಂತರವಾಗಿ ಅನುಭವಿಸಬೇಕೆಂದರೆ ದೇವತೆಗಳಿಗೆ ಮತ್ತು ಮಹಾತ್ಮರಿಗೆ ಮಾತ್ರವೇ ಸಾಧ್ಯ. ಅಷ್ಟೊಂದು ಪರಿಶುದ್ಧ ಸೌಂದರ್ಯ ಅಲ್ಲಿನದು. ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸರವು ಹೇಗಿತ್ತು ಎಂಬುದನ್ನು ಮಧ್ವವಿಜಯವು ಈ ಹೀಗೆ ಸಂಕ್ಷಿಪ್ತವಾಗಿ ನಮ್ಮೆದುರಿಗೆ ತೋರಿಸುತ್ತದೆ.

ಅಥ ಹೈಮವತೇ ತಟಾಂತರೇ
ಬದರೀಷಂಡ ವಿಶೇಷ ಮಂಡಿತಮ್ |
ಪರಮಾಶ್ರಮಮಾಶ್ರಯಂ ಶ್ರಿಯಃ
ಸಕಲಜ್ಞಃ ಸ ದದರ್ಶ ವಿಶ್ರುತಮ್ || (7:1)

ಹಿಮವರ್ಷರವಿಪ್ರಭಾಸಹಾಃ |
ಪೃಥುಸತ್ಪ್ರಥಿತಾ ದ್ವಿಜಾಶ್ರಯಾಃ ||
ಅಪಿವಿಷ್ಣುಪದಸ್ಪೃಶೋಽಲಸ |
-ನ್ನುಭಯೇ ಯತ್ರ ವಿಚಿತ್ರ ಶಾಖಿನಃ || (7:2)

ಶ್ರವಣಾಮೃತಗೀರ್ಗಣೈರ್ದ್ವಿಜೈಃ |
ಶುಕಮುಖ್ಯೈಃ ಶುಭಪಕ್ಷಿಬಿರ್ಯುತಮ್ ||
ಕಮಲೇಷ್ಟತಮಸ್ಥಿರಾಂತರೈ|
-ರಪಿ ಹಂಸೈಃ ಪರಮೈರಮೇಚಕೈಃ || (7.3)

ಸುಮನೋನಿಕರೇಣ ಪೂರಿತಂ |
ಸ್ವಮನೋಽಭೀಷ್ಟದಮಲ್ಪದುರ್ಗಮಮ್ ||
ಅಪರಸ್ಪರಮತ್ಸರಪ್ರಜಂ |
ನನು ವೈಕುಂಠಮಿವಾಚ್ಯುತಾಲಯಮ್ || (7:4)

ಸರ್ವಜ್ಞರಾದ ಮಧ್ವಾಚಾರ್ಯರು ಹಿಮಾಲಯವನ್ನು ದಾಟಿ ಮತ್ತೊಂದು ತಟದಲ್ಲಿ ಬದರೀ ವೃಕ್ಷಗಳ (ಬೋರೆ, ಎಲಚೀ ಹಣ್ಣು, రేగి పండు, jujube, bair fruit, बेर फल) ಮಹಾ ಸಮೂಹವೊಂದನ್ನು ಕಂಡರು. ಆ ಸಮೂಹದ ಮಧ್ಯದಲ್ಲಿ ಚಂದದ ಒಂದು ಆಶ್ರಮವನ್ನೂ ನೋಡಿದರು. ಅದು ಲಕ್ಷ್ಮೀದೇವಿಗೆ ಪರಮಪ್ರಿಯವಾದ ಸ್ಥಳವು. ಅದುವೆ ಶ್ರೀವೇದವ್ಯಾಸರ ಆಶ್ರಮ. ಬದರಿಕಾಶ್ರಮ. ಬದರೀಮರಗಳಿಂದ ಆವೃತವಾದ ಆಶ್ರಮವಾದ್ದರಿಂದ ಇದಕ್ಕೆ ಆ ಹೆಸರು. ಇದು ಸುಪ್ರಸಿದ್ಧ ಸ್ಥಳವು. (7:1)

ಬದರೀವೃಕ್ಷಗಳ ಜೊತೆಗೆ ಈ ಕಾನನದಲ್ಲಿ ಇನ್ನಿತರ ಅನೇಕ ಜಾತಿಗಳ ಅಸಂಖ್ಯ ಮರಗಳೂ ಇದ್ದವು. ಈ ಮರಗಳು ಆಕಾಶವನ್ನು ಮುಟ್ಟುವಷ್ಟು ಎತ್ತರವಾದವುಗಳು. ಹಿಮಾಲಯದಿಂದ ಬೀಳುವ ಹಿಮವನ್ನೂ , ಆಗಾಗ ಬೀಳುವ ತೀಕ್ಷ್ಣಬಿಸಿಲನ್ನೂ, ಮಳೆಯನ್ನೂ ತಡೆಗಟ್ಟುವಷ್ಟು ಸಮರ್ಥವಾದವುಗಳು. ಈ ಎಲ್ಲ ಅನುಕೂಲಗಳು ಇರುವುದರಿಂದ ಅನೇಕ ವಿಧವಾದ ಪಕ್ಷಿಗಳು ಆ ಮರಗಳಲ್ಲಿ ವಾಸವಾಗಿದ್ದವು. ಪರಿಶುದ್ಧ ಮನಸ್ಸುಳ್ಳ, ಶ್ವೇತವರ್ಣದ ಹಂಸಗಳು, ಮನೋಹರವಾದ ರೆಕ್ಕೆಯುಳ್ಳ, ಕಿವಿಗೆ ಇಂಪಾಗುವಂತೆ ಮಾತನಾಡುವ ಗಿಳಿಗಳೂ ಅಲ್ಲಿದ್ದವು. ತಪಸ್ಸು ಮಾಡಲಿಕ್ಕೆ ಏನೇನು ಸೌಕರ್ಯಗಳು ಬೇಕೋ ಅವೆಲ್ಲವನ್ನೂ ಈ ವನವು ಒದಗಿಸುತ್ತಿತ್ತು. ಭಗವಂತನ ಗುಣಗಳನ್ನು ಹೃದಯಕ್ಕೆ ಮುಟ್ಟುವ ಹಾಗೆ ವರ್ಣಿಸುವ ಶುಕಾಚಾರ್ಯರು ಕೂಡ ಈ ಆಶ್ರಮದವಾಸಿಗಳೇ ಆಗಿದ್ದರು. ಹೀಗಾಗಿ ಅನೇಕ ಋಷಿ ಮುನಿಗಳು ಇಲ್ಲಿ ವಾಸಮಾಡುತ್ತಾ ತಪಸ್ಸನ್ನು ಆಚರಿಸುತ್ತಾ, ಅನೇಕ ಹೋಮಗಳನ್ನು ಮಾಡಿ ಅದರ ಮೂಲಕ ಬ್ರಾಹ್ಮಣರಿಗೂ ಆಶ್ರಯದಾತರಾಗಿದ್ದರು. ಇವರಲ್ಲಿ ಪರಸ್ಪರ ಮತ್ಸರವೆಂಬುದೇ ಇರಲಿಲ್ಲ. ವೈಕುಂಠದಂತೆ ಕಂಗೊಳಿಸುವ ಈ ಮನೋಹರವಾದ ಪ್ರದೇಶವನ್ನು ಆಚಾರ್ಯ ಮಧ್ವರು ಕಂಡರು.(7:2,3)

ಹೀಗೆ ಕಲ್ಪಿಸಿಕೊಳ್ಳಿ. ಮಂಜುಲವಾದ ಪ್ರದೇಶದಲ್ಲಿ ನೀವು ನಿಂತಿದ್ದೀರಿ. ನಿಮ್ಮ ಎದುರಿಗೆ ವಿಶಾಲವಾದ ನೀಲಾಗಸ, ಅದರ ಮುನ್ನೆಲೆಯಲ್ಲಿ ಎತ್ತರದ, ಹಿಮವನ್ನು ಹೊದ್ದ ಪರ್ವತಗಳು ; ಅದರ ತಪ್ಪಲಿನಲ್ಲಿ ಕಡುಹಸಿರಿನ ಕಾಡು, ಕಾಡನ್ನು ತೂರಿಕೊಂಡು ಬರುತ್ತಿರುವ ಮಧುರವಾದ ಹೋಮಧೂಮ, ಅದರ ಹಿಂದೆಯೇ ಬರುವ ಹಿತಕರವಾದ ವೇದಘೋಷ ಹಾಗು ಅದಕ್ಕೆ ಹಿಮ್ಮೇಳದಲ್ಲಿ ಚಿಲಿಪಿಲಿ ಎನ್ನುವ ಪಕ್ಷಿಗಳ ಕೂಗು! ಇದಕ್ಕಿಂತ ಶ್ರೇಷ್ಠವಾದ ಪ್ರದೇಶ ಭೂಮಿಯ ಮೇಲೆ ಎಲ್ಲಿ ಸಿಕ್ಕೀತು? ಆಅ.. ತಡೆಯಿರಿ. ಪ್ರದೇಶ ಸುಂದರವಾಗಿದೆಯೆಂದ ಮಾತ್ರಕ್ಕೆ ಅಲ್ಲಿ ಹೋಗಲು ನಮಗೆ ಅನುಮತಿ ಸಿಕ್ಕೀತು ಅಂತ ಏನಿಲ್ಲ.

ಹೂವುಗಳ ಸಮೂಹದಿಂದ ಶೋಭಿಸುತ್ತಿರುವ, ವೇದವ್ಯಾಸದೇವರ ವಾಸಸ್ಥಾನವಾಗಿರುವ, ವೈಕುಂಠಕ್ಕೆ ಸಮಾನವಾದ ಈ ಪ್ರದೇಶವು ಭಕ್ತರ ಎಲ್ಲ ಆಶಯಗಳನ್ನು ಪೂರೈಸುವುದು. ಇಲ್ಲಿ ವಾಸಿಸುವರು ದೇವತೆಗಳು, ಋಷಿಗಳು ಹಾಗು ಮುನಿಗಳು. ಇವರಿಗೆ ಇನ್ನೊಬ್ಬರನ್ನು ಕಂಡರೆ ಅಸೂಯೆಯೇ ಇಲ್ಲ. ಅಲ್ಪರಿಗೆ ಈ ಪ್ರದೇಶದಲ್ಲಿ ಹೋಗಲಿಕ್ಕೆ ಅವಕಾಶವೇ ಇಲ್ಲ. (ಅಲ್ಪದುರ್ಗಮಂ…7:4)

ತಾರತಮ್ಯವನ್ನು ಕಡೆಗಣಿಸದೆ, ಭಗವಂತನಾದ ವಿಷ್ಣುವನ್ನೇ ತಮ್ಮ ಗರಿಷ್ಠ ಮಟ್ಟದಲ್ಲಿ ಯಾರು ಪ್ರೀತಿಸುತ್ತಾರೋ, ಯಾರಿಗೆ ಈ ಪ್ರೀತಿಯು ರಕ್ತಗತವಾಗಿಯೇ ಬಂದಿದೆಯೋ ಅವರಿಗೆ ಮಾತ್ರ ಇಲ್ಲಿ ಇರುವ ಅವಕಾಶ ಇದೆ. ಶುಕಾಚಾರ್ಯರೇ ಮೊದಲಾದ “ಮುನಿ”ಗಳಿಗೆ ಈ ಜ್ಞಾನಪೂರ್ವಕ ಪ್ರೀತಿಯು ಇರುವುದು.

ಮುನಿಗಳೆಂದರೆ ಮೌನವಾಗಿದ್ದುಕೊಂಡು ಸಾಧನೆ ಮಾಡುವ ಚೇತನರು. ಇವರು ಲೌಕಿಕಜಗತ್ತಿನೊಂದಿಗೆ ಮಾತಿನ ಸಂಪರ್ಕವನ್ನು ಕಡಿದುಕೊಂಡವರು. ಭಗವಂತನ ಚಿಂತನೆಯೊಂದನ್ನು ಬಿಟ್ಟು, ಅವನ ಗುಣಗಾನಗಳನ್ನು ಬಿಟ್ಟು ಇವರಿಗೆ ಬೇರೆ ಯಾವ ಮಾತೂ ಇರುವುದಿಲ್ಲ. ವೇದವ್ಯಾಸರ ಮಾತುಗಳನ್ನು ಸಜ್ಜನರಿಗೆ ತಿಳಿಸಲು ಎಷ್ಟು ಮಾತು ಬೇಕೋ ಅಷ್ಟನ್ನು ಮಾತ್ರ ಆಡುವುದು ಇವರ ಸಂಕಲ್ಪ. ಈ ಮಾತುಗಳು ಕೂಡ ಪಾಠ ಮತ್ತು ಪ್ರವಚನದರೂಪದಲ್ಲಿಯೆ ಇರುತ್ತವೆ ಹೊರತಾಗಿ ಮಾತುಕತೆಯ ರೂಪದಲ್ಲಿ ಇರುವುದಿಲ್ಲ. ಶುಕಾಚಾರ್ಯರು ಈ ರೀತಿಯ ಮುನಿಗಳಲ್ಲಿ ಅಗ್ರಗಣ್ಯರು. ಭಗವಂತನ ಧ್ಯಾನದಹೊರತಾಗಿ ಅವರಿಗೆ ಬೇರೆ ಯಾವುದರ ಮೇಲೆಯೂ ಗಮನವೇ ಇರಲಿಲ್ಲ. ಆಚಾರ್ಯ ಮಧ್ವರ ಜೀವನವೂ ಹೀಗೆಯೇ. ಅವರು ಪರಮಾತ್ಮನ ವಾಣಿಯ ಹೊರತಾಗಿ ಬೇರೇನನ್ನೂ ನುಡಿದವರಲ್ಲ.

ಕಾಷ್ಠಮೌನಮದಧಾದುಪವಾಸಂ
ಶುದ್ಧಮಪ್ಯಕೃತ ಶುದ್ಧಹೃದಿಚ್ಛನ್ |
ನಿತ್ಯತುಷ್ಟಹರಿತೋಷವಿಶೇಷಂ
ಚಿಂತಯನ್ ಪ್ರಭುಮನಂತಮಠಾಂತಃ || (6:44)

ಸ್ವಭಾವದಿಂದಲೇ ಮುನಿಗಳೆನಿಸಿದ ಶ್ರೀಮಧ್ವಾಚಾರ್ಯರು ಕೂಡ ಈ ಪ್ರದೇಶದ ಅನಂತಮಠ ಎಂಬಲ್ಲಿ ಭಗವಂತನ ಪ್ರೀತಿಗಾಗಿ ಕಾಷ್ಠಮೌನ ವ್ರತವನ್ನು ಹಾಗು ಉಪವಾಸವನ್ನು ಆಚರಿಸಿದ್ದಾರೆ. ನಾರಾಯಣನು ಆಚಾರ್ಯರ ವಿಷಯದಲ್ಲಿ ಯಾವತ್ತೂ ಸಂಪ್ರೀತನೇ. ಆದರೂ ಕೂಡ ಮಧ್ವರು ಅವನ ಅತಿಶಯವಾದ ಪ್ರೀತಿಯನ್ನು ಬಯಸಿ ಈ ಮೌನ ವ್ರತವನ್ನು ಆಚರಿಸಿದರು. ಅಂತೆಯೇ ಅವರು ಮುನಿತ್ರಯರಲ್ಲಿ ಮೊದಲನೆಯವರು. ತಮ್ಮ ಮಾತು ಪರಿಶುದ್ಧವಾದುದು ಎಂಬ ಅರಿವು ಅವರಿಗೆ ಇತ್ತು ಆದ್ದರಿಂದಲೇ ತಮ್ಮ ಮಾತಿಗಿಂತ ಮಿಗಿಲಾದ ನಲ್ನುಡಿಯು ಇನ್ನೊಂದು ಇಲ್ಲ ಎಂದು ಹೇಳುವಷ್ಟು ಧೈರ್ಯವಿತ್ತು. ಬೇರಾವ ಆಚಾರ್ಯನೂ ಈ ಮಾತನ್ನು ಹೇಳಿಲ್ಲ ಎಂಬುದನ್ನು ಗಮನಿಸಿ.

ಏನಿದು ಕಾಷ್ಠಮೌನ?

ಬೇರೆ ಯಾವ ಇಂದ್ರಿಗಳನ್ನಾದರೂ ಕಷ್ಟಪಟ್ಟು ನಿಗ್ರಹಿಸಬಹುದೇನೋ. ಆದರೆ ನಾಲಿಗೆಯನ್ನು ನಿಯಂತ್ರಿಸುವುದು ಅತೀವ ಕಷ್ಟ. ತಿನ್ನಲು ರುಚಿಯಾದ ಪದಾರ್ಥದಷ್ಟೇ ಇಷ್ಟವಾದುದು ಎಂದರೆ ಮಾತು! ಅದರಲ್ಲೂ ಇನ್ನೊಬ್ಬರನ್ನು ದೂಷಿಸುವ ಮಾತುಗಳೆಂದರೆ ಬಹಳ ಪ್ರೀತಿ ನಾಲಿಗೆಗೆ. ಅತ್ಯಂತ ಕಷ್ಟಪಟ್ಟರೆ ಮಾತ್ರ ನಾಲಿಗೆಯನ್ನು ನಿಯಂತ್ರಿಸಲು ಸಾಧ್ಯ. ಮೌನವ್ರತವು ಇಂತಹ ಒಂದು ಉಪಾಯ. ಈ ವ್ರತದಲ್ಲಿ ವ್ರತಿಗಳು ಮಾತನ್ನು ನಿಯಂತ್ರಿಸುವುದರ ಮೂಲಕ ಶಕ್ತಿಯನ್ನು ಉಳಿಸಿಕೊಂಡು, ಆ ಶಕ್ತಿಯನ್ನು ಭಗವಂತನ ಚಿಂತನೆಗಾಗಿ ಬಳಸುತ್ತಾರೆ.

ವಾಚಿಕ ಮೌನ, ಇಂದ್ರಿಯ ಮೌನ(ಅಕ್ಷ ಮೌನ), ಕಾಷ್ಠ ಮೌನ ಹಾಗು ಸುಷುಪ್ತಮೌನ ಎನ್ನುವ ನಾಲ್ಕು ಬಗೆಯ ಮೌನವ್ರತಗಳಿವೆ.

  1. ಮಾತನ್ನು ಮಾತ್ರ ನಿಲ್ಲಿಸುವುದು ವಾಚಿಕ ಮೌನವೆನಿಸುತ್ತದೆ. ಊಟ ತಿಂಡಿಗಳ ನಿಯಂತ್ರಣವೇನೂ ಇದರಲ್ಲಿರದು. ಊಟ ಮಾಡುವಾಗ ಕೆಲವರು ಮಾತು ಆಡದೆ ಇರುವುದನ್ನು ನೋಡಿರುತ್ತೀರಲ್ಲ. ಇದೇ ಅದು. (ಬಹುತೇಕರು ಮಾತು ಆಡುವುದಿಲ್ಲವೇನೋ ಸರಿ. ಆದರೆ ಅಂಗಚೇಷ್ಟೆಗಳನ್ನು ಮಾಡುತ್ತಾ ಹಾಸ್ಯಾಸ್ಪದರಾಗಿದ್ದಲ್ಲಿ ಅವರು ಸಂಕಲ್ಪಭ್ರಷ್ಟರೇ ಹೌದು)
  2. ಕರ್ಮೇಂದ್ರಿಯಗಳೆನಿಸಿದ ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ ಇವುಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಅಕ್ಷಮೌನ. ಅಂದರೆ ಮೌನವ್ರತದ ಊಟವಷ್ಟೇ ಅಲ್ಲ. ದೇಹಶೃಂಗಾರದಂತಹ ವ್ಯವಹಾರಗಳನ್ನು ತ್ಯಜಿಸುವುದು ಇದರಲ್ಲಿ ಇರುತ್ತದೆ.
  3. ಕಾಷ್ಠಮೌನದಲ್ಲಿ ಮೇಲಿನ ಎರಡೂ ನಿಯಮಗಳು ಪಾಲಿಸಲ್ಪಡುತ್ತವೆ. ಮುಂದುವರೆದ ಭಾಗವಾಗಿ ದೇಹವನ್ನು ಕಟ್ಟಿಗೆಯಂತೆ ನಿರ್ವಿಕಾರಚಿತ್ತವಾಗಿ ಇರಿಸಿಕೊಳ್ಳಬೇಕು. ಅಂದರೆ ಜ್ವರ ತಾಪಾದಿಗಳನ್ನು ಗಮನಿಸದೆ, ಸುಖವನ್ನು ಕಲ್ಪಿಸದೆ, ಕರ್ಮೇಂದ್ರಿಯಗಳನ್ನು ನಿಯಂತ್ರಣದಲ್ಲಿರಿಸಿಕೊಂಡು ಜ್ಞಾನೇಂದ್ರಿಯಗಳನ್ನು ಉದ್ದೀಪನಗೊಳಿಸಿ ಭಗವಂತನಲ್ಲಿ ಏಕತ್ರಗೊಳಿಸಬೇಕು.
  4. ಸುಷುಪ್ತ ಮೌನವು ಕೊನೆಯ ಹಂತದ್ದು. ಮೇಲಿನ ಮೂರೂ ನಿಯಮಗಳನ್ನು ಸೇರಿಸಿಕೊಂಡು ನಾಲ್ಕನೆಯದ್ದಾಗಿ ನಿಶ್ಚಲನಾಗಿ ಇರುವ ಕ್ರಿಯೆಯು ಇಲ್ಲಿದೆ. ಲೌಕಿಕ ವ್ಯವಹಾರಗಳಿಂದ ಸಂಪೂರ್ಣ ವಿಮುಖನಾಗಿದ್ದುಕೊಂಡು, ಭಗವಚ್ಚಿಂತನೆಯಲ್ಲಿ ತೊಡಗುವುದು ಇಲ್ಲಿ ಕ್ರಮ. ಇಷ್ಟಾದರೂ ವ್ರತಿಯು ಎಚ್ಚರ ತಪ್ಪುವ ಹಾಗೆ ಇಲ್ಲ. ಮೊದಲನೆಯ ಮೂರು ವಿಧಾನಗಳಲ್ಲಿ ಸಾಮಾನ್ಯವಾಗಿ 48 ದಿನಗಳ ಅವಧಿಯಿದ್ದರೆ ಸುಷುಪ್ತಮೌನಕ್ಕೆ ಇಷ್ಟೇ ಎನ್ನುವ ಅವಧಿಯಿದ್ದಂತೆ ಕಾಣುವುದಿಲ್ಲ.

ಆಚಾರ್ಯ ಮಧ್ವರು ಮೂರನೆಯದಾದ ಕಾಷ್ಠಮೌನವನ್ನು ಮಾತ್ರ ಆಚರಿಸಿದರು, ಸುಷುಪ್ತ ಮೌನವನ್ನು ಮಾಡಿಲ್ಲ ಎಂದು ಹೇಳುವಂತಿಲ್ಲ. ಮೊದಲನೆಯ ಮೂರು ವ್ರತಗಳು ಮನುಷ್ಯರಿಂದಲೂ ಮಾಡಲು ಸಾಧ್ಯವಿರುವಂತಹುದು. ನೀವು ಕೂಡ ಮಾಡಬಹುದು ಎಂದು ನಮಗಾಗಿ ಆಚರಿಸಿ ತೋರಿಸಿದ್ದಾರೆ. ನಾಲ್ಕನೆಯದಾದ ಸುಷುಪ್ತಮೌನದಲ್ಲಿ ಅವರು ಯಾವಾಗಲೂ ಇರಬಲ್ಲರು. ಹಾಗೆ ನೋಡಿದರೆ ಯೋಗಿಗಳಿಗೆ ಈ ಕಷ್ಟದ ಸರ್ಕಸ್ ಬೇಡವೇ ಬೇಡ. ನಾಲಿಗೆ ಮಾತ್ರವಲ್ಲ, ಎಲ್ಲ ಇಂದ್ರಿಯಗಳನ್ನೂ ಅವರು ಬಹಳ ಸುಲಭವಾಗಿ ನಿಯಂತ್ರಿಸಬಲ್ಲರು. ಆದರೂ ಭಗವಂತನ ಪ್ರೀತಿಗಳಿಸುವ ಸಲುವಾಗಿಯೇ ಈ ವ್ರತಗಳನ್ನು ಆಚರಿಸುತ್ತಾರೆ. ಅದನ್ನು ಹುಲುಮಾನವರು ಮಾಡಲಾರರು.

ಶಮ್ಯಾಪ್ರಾಸದ ಪರಿಶುದ್ಧತೆಯು ಹೆಚ್ಚುವುದೇ ದೇವತೆಗಳ ಈ ರೀತಿಯಾದ ಸತ್ವಭರಿತ ಚಟುವಟಿಕೆಗಳಿಂದ. ಈ ಪರಿಶುದ್ಧತೆಯನ್ನು ಸಾಧಾರಣ ಮಾನವರಿಂದ ಪರಿಪಾಲಿಸಲು ಆಗದು ಎನ್ನುವ ಉದ್ದೇಶದಿಂದಲೇ ಇರಬೇಕು ನಮಗಾರಿಗೂ ಇಲ್ಲಿ ಪ್ರವೇಶಿಸಲಾಗದು. ಆದರೆ ಮಾಧ್ವಪ್ರಜ್ಞೆಯನ್ನು ಪ್ರತಿಕ್ಷಣವೂ ಹೃದಯದಲ್ಲಿ ಹೊತ್ತು ಶುದ್ಧಾಂತಃಕರಣರೇ ಆಗಿರುವ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರು ಮತ್ತು ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರಂತಹ ಸಂನ್ಯಾಸಿಗಳಿಗೆ ಇಲ್ಲಿ ಖಂಡಿತವಾಗಿಯೂ ಪ್ರವೇಶ ಉಂಟು.

1961ರಲ್ಲಿ ಶ್ರೀವಿದ್ಯಾಮಾನ್ಯತೀರ್ಥರು ಶಮ್ಯಾಪ್ರಾಸದ ಸಮೀಪದಲ್ಲಿಯೇ ಇದ್ದು ಕಾಷ್ಠಮೌನವ್ರತವನ್ನು ಆಚರಿಸಿದ್ದಾರೆ. ಇವರ ಜೊತೆಗೆ ಇದ್ದಿದ್ದು ಮೂವರು ಸಹಾಯಕರು ಮಾತ್ರ. ಪ್ರತಿನಿತ್ಯ ಬೆಳಿಗ್ಗೆ 4ಕ್ಕೆ ಎದ್ದು ಬೆಳಗಿನ ವಿಧಿಗಳನ್ನು ಮುಗಿಸುವುದು, ನಂತರ ಶೀತಲವಾದ ಅಲಕನಂದೆಯಲ್ಲಿ ಮುಳುಗುಹಾಕಿ ಸ್ನಾನ ಮಾಡುವುದು ನಂತರ ಬ್ರಹ್ಮಸೂತ್ರಭಾಷ್ಯಪಾಠ, ಗೀತಾಭಾಷ್ಯ ಪಾಠ, ಸಂಸ್ಥಾನ ಪೂಜೆ ಮಾಡುವುದು. ಮಧ್ಯಾಹ್ನ ಮತ್ತೊಮ್ಮೆ ಸ್ನಾನ, ಜಪ ಹಾಗು ಗ್ರಂಥಾವಲೋಕನ! ಇದು ವಿದ್ಯೆಯಿಂದ ಮಾನ್ಯರಾದ ವಿದ್ಯೆಗೆ ಮಾನ್ಯತೆ ತಂದು ಕೊಟ್ಟ ತಪಸ್ವಿಯ ಬದರೀವಾಸದ ದಿನಚರಿಯಾಗಿತ್ತು.

1991ರಲ್ಲಿ ಶ್ರೀವಿದ್ಯಾಧೀಶತೀರ್ಥರು ತಮ್ಮ ಗುರುಗಳ ಮೇಲ್ಪಂಕ್ತಿಯನ್ನು ಅನುಸರಿಸಿ 48ದಿನಗಳ ಕಾಲ ಕಾಷ್ಠಮೌನವ್ರತವನ್ನು ಆಚರಿಸಿದರು. ಗುರುಗಳಂತೆ ಅಲಕನಂದಾ ಸ್ನಾನ, ಪಾಠ, ಗ್ರಂಥಾವಲೋಕನ, ವಿಮರ್ಶೆ, ಸಂಸ್ಥಾನ ಪೂಜೆ ಇತ್ಯಾದಿಗಳನ್ನು ಚಾಚೂ ತಪ್ಪದೆ ಮಾಡಿ, ಪ್ರತಿನಿತ್ಯ ದೇವರಿಗೆ ಸಮರ್ಪಿಸಿದ ಒಂದು ಲೋಟದಷ್ಟು ಹಾಲನ್ನು ಮಾತ್ರವೇ ಕುಡಿದು ತಪಸ್ಸನ್ನು ಆಚರಿಸಿದ ಮಹಾನುಭಾವರು ಇವರು. ಇತರರು ಇತರೆಡೆ ಕಾಷ್ಠಮೌನವನ್ನು ಆಚರಿಸಿದ ಬಗ್ಗೆ ಕೇಳಿದ್ದೇವೆ. ಆದರೆ ಬದರಿಯಂತಹ ಪರಮಾದ್ಭುತ ಕ್ಷೇತ್ರದಲ್ಲಿ ಕಾಷ್ಠಮೌನವನ್ನು ಆಚರಿಸಿದ ಅವಕಾಶ ಮಧ್ವರ ನಂತರ ಯಾರಿಗೆ ದೊರೆತಿದೆ ಎಂಬುದನ್ನು ವಿದ್ಯಾಮಾನ್ಯತೀರ್ಥರಿಗಿಂತಲೂ ಹಿಂದಿನ ಇತಿಹಾಸದಲ್ಲಿ ನಾನು ಓದಿಲ್ಲ. ಗುರು ಮತ್ತು ಶಿಷ್ಯರಿಬ್ಬರೂ ಶಮ್ಯಾಪ್ರಾಸದಲ್ಲಿ ಕಾಷ್ಠಮೌನವನ್ನು ಆಚರಿಸಿದ ಉದಾಹರಣೆಯಂತೂ ಇದೊಂದೇ!.

ಈ ಈರ್ವರ ಮಾತುಗಳು ಕೂಡ ಶಮ್ಯಾಪ್ರಾಸದ ಗಿಳಿಗಳಂತೆ ಮಧುರವೇ. ನಾನು ಶ್ರೀವಿದ್ಯಾಮಾನ್ಯರ ನೇರ ಸಂಪರ್ಕದಲ್ಲಿ ಇರದೇ ಹೋದರೂ ಅವರ ಸೌಮ್ಯ ನಡುವಳಿಕೆ, ಇತರರಿಗೆ ನೋವಾಗದಂತೆ ಮಾತನಾಡುವ ಮೃದುತ್ವ ಇವಗಳ ಬಗ್ಗೆ ಸಾಕಷ್ಟು ಕೇಳಿ ಬಲ್ಲವನು. ಇನ್ನು ಶ್ರೀವಿದ್ಯಾಧೀಶತೀರ್ಥರ ಮಂದಹಾಸ, ಇತರರಿಗೆ ಕಷ್ಟಕೊಡದಿರುವಿಕೆ ಹಾಗು ಮಧುರವಾದ ಮಾತುಗಳೆಲ್ಲ ಎಲ್ಲ ಭಕ್ತರಿಗೂ ಚಿರಪರಿಚಿತ.

ಹೃದಯದಲ್ಲಿ ಯಾವಾಗಲೂ ರಾಮಕೃಷ್ಣವೇದವ್ಯಾಸರ, ಮಧ್ವರ ಚಿಂತನೆಗಳನ್ನೇ ತುಂಬಿಕೊಂಡ ಶ್ರೀವಿದ್ಯಾಧೀಶತೀರ್ಥರ ಸನ್ನಿಧಾನವೇ ನಮಗೆಲ್ಲ ಶಮ್ಯಾಪ್ರಾಸವು. ಇವರ ಕೃಪೆ ನಮ್ಮ ಮೇಲೆ ಸದಾ ಇರಲಿ.

******

ಅಡಿಬರಹಗಳು

1)ಬ್ರಹ್ಮನದ್ಯಾಃ ಸರಸ್ವತ್ಯಾ ಆಶ್ರಮಃ ಪಶ್ಚಿಮೇ ತಟೇ | ಶಮ್ಯಾಪ್ರಾಸ ಇತಿ ಪ್ರೋಕ್ತ ಋಷೀಣಾಂ ಸತ್ರವರ್ಧನಃ || ಭಾ 1-7-2 (ಮೂಲಕ್ಕೆ ಹೋಗಿರಿ)

2)ಖದಿರಮರಕ್ಕೆ ಕಗ್ಗಲಿ ಎಂದು ಕನ್ನಡದಲ್ಲಿ ಹೆಸರು. ಕಾಚಿನ ಮರ ಎಂಬುದು ಮತ್ತೊಂದು ಹೆಸರು. ಇದು ಶಮೀವೃಕ್ಷದ ಕುಟುಂಬಕ್ಕೆ ಸೇರಿದೆ. ಅಕೇಶಿಯಾ ಕ್ಯಾಟಿಚೂ ಎನ್ನುವುದು ಲ್ಯಾಟಿನ್ ಹೆಸರು. ಯೂಪಸ್ಥಂಬ ನಿರ್ಮಾಣಕ್ಕೆ , ಸ್ಕೃಕ್, ಸೃವಗಳನ್ನು ತಯಾರಿಸಲು ಕೂಡ ಇದೇ ಕಟ್ಟಿಗೆಯನ್ನು ಬಳಸಬೇಕು. (ಮೂಲಕ್ಕೆ ಹೋಗಿರಿ)

3) ಯದ್ಯಾಹಿತಾಗ್ನೇರಗ್ನಿರಪಕ್ಷಾಯೇದಾ ಶಮ್ಯಾಪರಾಸಾತ್ಪರಿ ವಾಜಪತಿಃ ಕವಿರಗ್ನಿರಿತಿ ತ್ರಿಃ ಪ್ರದಕ್ಷಿಣಂ ಪರಿಕ್ರಮ್ಯ ತಂ ಸಂಭರೇದಿದಂ ತ ಏಕಂ ಪರ ಉತ ಏಕಂ ತೃತೀಯೇನ ಜ್ಯೋತಿಷಾ ಸಂವಿಶಸ್ವ | ಸಂವೇಶನಸ್ತನುವೈ ಚಾರುರೇಧಿ ಪ್ರಿಯೇ ದೇವಾನಾಂ ಪರಮೇ ಜನಿತ್ರ ಇತಿ (ಆಪಸ್ತಂಬ ಶ್ರೌತ ಸೂತ್ರಗಳು 9.1.17) (ಮೂಲಕ್ಕೆ ಹೋಗಿರಿ)

4) ಸಧ್ಯದ ಬದರಿಯನ್ನು ಮಾತ್ರವೇ ನೋಡಿ ಬಂದವರಿಗೆ ಅಲ್ಲಿ ಬಿಸಿಲು ಎಲ್ಲಿಂದ ಬರುವುದು? ಎಂಬ ಪ್ರಶ್ನೆ ಬರುವುದೇನೊ. ನಿಜ. ಹಿಮಾಲಯ ಪ್ರಾಂತ್ಯದಲ್ಲಿ ಭಾರತದ ಇತರ ಭಾಗದಲ್ಲಿ ಇರುವಷ್ಟು ಕಾಲ ಬೇಸಿಗೆಯು ಇರುವುದಿಲ್ಲ. ಬೇಸಿಗೆಯು ಸುಮಾರು ೪೦ ದಿನಗಳಷ್ಟೇ ಇದ್ದರೂ ಅದರ ತೀಕ್ಷಣೆಯು ಮಾತ್ರ ಚರ್ಮವನ್ನು ಚುರುಗುಟ್ಟಿಸುವಷ್ಟೇ ಇರುತ್ತದೆ. ಸ್ವಾರಸ್ಯವೆಂದರೆ ಈ ಬಿಸಿಲನ್ನು ಹಿಂಬಾಲಿಸಿಕೊಂಡೇ ತಂಪುಗಾಳಿಯು ವೇಗವಾಗಿ ಬರುವುದು. ಹೀಗಾಗಿ ಬಿಸಿಲು ಹಾಗು ಚಳಿಯ ವಿಚಿತ್ರವಾದ ಅನೂಹ್ಯ ವರ್ತನೆಗಳು ಸಾಮಾನ್ಯ ಜನರಿಗೆ ಸಹಿಸಲು ಕಷ್ಟ. ಬದರಿಕಾಶ್ರಮದಲ್ಲಿ ಈ ವಿಲಕ್ಷಣವ್ಯವಹಾರಕ್ಕೆ ಎಡೆಯಿಲ್ಲ. (ಮೂಲಕ್ಕೆ ಹೋಗಿರಿ)

5) ವಿಷ್ಣೋಃ ಅತ್ಯುತ್ತಮತ್ವಾತ್ …. ಭಕ್ತಿಂ ಗರಿಷ್ಠಾ…. (ಶ್ರೀಹರಿವಾಯುಸ್ತುತಿ:15)(ಮೂಲಕ್ಕೆ ಹೋಗಿರಿ)

ಕೃತಜ್ಞತೆಗಳು

  • ಪ್ರೊ ಹಯವದನ ಪುರಾಣಿಕರು
  • ವಿದ್ವಾನ್ ಅನಂತ ವೈದ್ಯ

ಶಮ್ಯಾಪ್ರಾಸದ ಚಿತ್ರ ಕೃಪೆ  : https://progress.online/nauka/1169-5-faktov-sovremennoy-nauki-o-kotoryh-znali-eshche-v-drevney-indii

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

One Comment

  1. H.k.rajasimha
    March 7, 2018
    Reply

    Important information, thank you

Leave a Reply

This site uses Akismet to reduce spam. Learn how your comment data is processed.