ಶ್ರೀಜಿತಾಮಿತ್ರರ ಸನ್ನಿಧಿಯಲ್ಲಿ ಪ್ರಕಟವಾದ ಶ್ರೀಸುಶಮೀಂದ್ರತೀರ್ಥರ ಔಷಧೀಯ ಜ್ಞಾನ

ಶ್ರೀಜಿತಾಮಿತ್ರತೀರ್ಥರ ಸನ್ನಿಧಾನದಲ್ಲಿ ಶ್ರೀಸುಶಮೀಂದ್ರತೀರ್ಥರು ಸೂಕ್ಷ್ಮವಾಗಿ ತೋರಿಸಿದ ತಮ್ಮ ಜ್ಞಾನದ ಒಂದು ಚಿಕ್ಕ ಘಟನೆ ಇದು. ಹಿಂದೊಮ್ಮೆ ಅವರು ನೆಲ್ಲಿ ಮರದ ಕಾಂಡವನ್ನು ಬಾವಿಯಲ್ಲಿ ಹಾಕಿಸಿದ ಘಟನೆಯನ್ನು ನೀವೆಲ್ಲ ಓದಿರಬಹುದು. ಇದು ಕೂಡ ಅವರ ಔಷಧೀಯ ಜ್ಞಾನದ ಬಗ್ಗೆಯೇ ಇರುವ ಮತ್ತೊಂದು ಲೇಖನ.

ಶ್ರೀಸುಶಮೀಂದ್ರತೀರ್ಥ ಶ್ರೀಪಾದರೊಂದಿಗೆ ನಾವು ನಾಲ್ಕು ಜನ ವಿದ್ಯಾರ್ಥಿಗಳಿಗೆ ಮೊದಲ ಸಂಚಾರವದು. ನಿತ್ಯದ ಸಿಬ್ಬಂದಿವರ್ಗದವರ ಮಧ್ಯ ನಮ್ಮನ್ನು ತೂರಿಸದೆ ನಮಗೆಂದೇ ಪ್ರತ್ಯೇಕವಾದ ಒಂದು ಗಾಡಿಯನ್ನೂ ಶ್ರೀಗಳವರು ವ್ಯವಸ್ಥೆ ಮಾಡಿದ್ದರು. ನಾನು, ಗಂಗಾವತಿ ಶ್ರೀನಿವಾಸ, ಹರಪನಹಳ್ಳಿ ನಾಗರಾಜ ಮತ್ತು ಜೇವರ್ಗಿ ಶ್ರೀಪಾದ ಹೀಗೆ ನಾಲ್ಕು ಜನರು ನಾವುಗಳು ಆಗ ಜೊತೆಯಲ್ಲಿ ಇದ್ದದ್ದು. ನಮ್ಮ ಜೊತೆಯಲ್ಲಿ ಯೋಗೀಶ (ಈಗ ಮೈಸೂರಿನಲ್ಲಿದ್ದಾನೆ) ಎಂಬುವನು ಕೂಡ ಶ್ರೀಗಳ ದ್ವಾರಪಾಲಕನಾಗಿ ಇದ್ದ. ಹೈದರಾಬಾದಿನಲ್ಲಿ ನಾಲ್ಕು ದಿನಗಳ ವಾಸ್ತವ್ಯದ ನಂತರ ಶ್ರೀಜಿತಾಮಿತ್ರತೀರ್ಥರ ಆರಾಧನೆಗೆಂದು ನಾವು ಜಿತಾಮಿತ್ರಗಡ್ಡೆಗೆ ಬಂದೆವು. ಆಗ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಕೂಡ ಅಲ್ಲಿಗೆ ಆಗಮಿಸಿ, ಅಲ್ಲಿ ನಡೆದ ಶ್ರೀವಿಷ್ಣುಮಹಾಯಾಗದಲ್ಲಿ ಭಾಗವಹಿಸಿದ್ದರು.

ಈ ಗಡ್ಡೆ ಎಂದರೆ ಒಂದು ಕೃಷ್ಣಾ ಹಾಗೂ ಭೀಮಾನದಿಗಳ ಮಧ್ಯ ಇರುವ ಎತ್ತರದ ಒಂದು ಮಣ್ಣಿನ ದಿಬ್ಬ. ಈ ಗಡ್ಡೆಗೆ ಬಂದು ಸೇರಲು ಅನುಕೂಲವಾದ ಮಾರ್ಗವು ಭೀಮಾನದಿಯ ದಂಡೆಯಿಂದ ಇದೆ. ಈ ಭೀಮಾನದಿಯ ದಂಡೆಯಿಂದ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ನಡೆದು, ಪುನಃ ನದಿಯ ಪಾತ್ರದ ಒಳಗೆ ಮರಳ ಮೇಲೆ ನಡೆದು ಶ್ರೀಜಿತಾಮಿತ್ರ ರಾಯರ ಸನ್ನಿಧಿಯನ್ನು ಸೇರಬೇಕು. ಅಂದು ಕೂಡ ಶ್ರೀಗಳು ದಂಡೆಯ ಮೇಲೆ ಬಂದಿಳಿದರು. ಅವರು ಬಂದದ್ದೇ ತಡ ನೂರಾರು ಜನರು ಅವರ ದರ್ಶನ ಮಾಡಿ, ನಮಸ್ಕರಿಸಲು ಧಾವಿಸಿ ಬಂದರು. ಸುಡುಬಿಸಿಲು ಇತ್ತು. ಆ ಕಾಯ್ದು ಹೋಗಿದ್ದ ಮರಳ ಮೇಲೆಯೆ ಎಲ್ಲರೂ ಶ್ರೀಗಳವರ ದರ್ಶನಕ್ಕೆ ಕಾಯ್ದು, ಅವರು ಬರುವ ಮಾರ್ಗದ ಎರಡೂ ಬದಿಯಲ್ಲಿ ನಿಂತರು. ಅವರಲ್ಲಿ ಯಾರೋ ಒಬ್ಬರು ಶ್ರೀಗಳವರ ಕಾಲಿಗೆ ಬಿಸಿ ತಾಕಬಾರದು ಎಂತು ತಮ್ಮ ಮೇಲು ವಸ್ತ್ರವನ್ನೇ ತೆಗೆದು ಆ ಮರಳ ಮೇಲೆ ಹಾಸಿದರು. ಅಷ್ಟೇ! ಮುಂದಿನ ಕ್ಷಣದಲ್ಲಿ ಎಲ್ಲರೂ ತಮ್ಮ ತಮ್ಮ ಮೇಲು ವಸ್ತ್ರವಗಳನ್ನು ತೆಗೆದು ದಾರಿಯುದ್ದಕ್ಕೂ ಹಾಸಿದರು. ಎಲ್ಲರಿಗೂ ಶ್ರೀಗಳವರ ತಮ್ಮ ವಸ್ತ್ರದ ಮೇಲೆ ಕಾಲು ಇಡಲೇಬೇಕು ಎನ್ನುವ ತವಕ. ಇನ್ಯಾರೋ ಕೆಲವರು ತಮ್ಮ ತಮ್ಮ ಮಕ್ಕಳ ಟವೆಲ್ಲುಗಳನ್ನು ಕೂಡ ಹಾಸಿ ಅದರ ಮೇಲೆ ಶ್ರೀಗಳವರ ಕಾಲ್ಧೂಳಿಯನ್ನು ಪಡೆದು ಧನ್ಯರಾದರು. ಅಂತೂ ಎಲ್ಲರ ಈ ಸಂಭ್ರಮದ ಮಧ್ಯ ಶ್ರೀಗಳವರು ನಿಧಾನಕ್ಕೆ ನಡೆದು ಗಡ್ಡೆಯ ಸಮೀಪದವರೆಗೆ ಬಂದರು. ಇಲ್ಲಿ ಒಂದು ಚಿಕ್ಕ ಘಟನೆ ನಡೆಯಿತು.

ಮಸರಕಲ್ ಎನ್ನುವ ಊರಿನಿಂದ ಬಂದ ಒಬ್ಬ ಮಧ್ಯವಯಸ್ಕರು ಶ್ರೀಗಳವರ ಕಾಲಿಗೆ ತಮ್ಮ ವಸ್ತ್ರವನ್ನು ತಂದು ಹಾಸುವ ಧಾವಂತದಲ್ಲಿ ಎಲ್ಲೋ ಒಂದು ಕಡೆ ಬಂಡೆಗಲ್ಲಿನ ಸಂದಿನಲ್ಲಿ ಕಾಲು ಇರುಕಿಸಿಕೊಂಡು ಗಾಯ ಮಾಡಿಕೊಂಡಿದ್ದರು. ರಕ್ತವೂ ಸಾಕಷ್ಟು ಸುರಿದಿತ್ತು. ಆದರೆ ಅವರಿಗೆ ಅದರ ಕಡೆ ಗಮನವೇ ಹೋಗಿದ್ದಿಲ್ಲ. ದುರ್ದೈವದಿಂದ ಅವರಿಗೆ ತಮ್ಮ ವಸ್ತ್ರವನ್ನು ಹಾಸುವ ಅವಕಾಶವೂ ಸಿಕ್ಕಿದ್ದಿಲ್ಲ. ಅದೇ ಹಳಹಳಿಯಲ್ಲಿ ಗಡ್ಡೆಯ ಒಂದೆಡೆ ಆತ ನಿಂತಿದ್ದರು. ಶ್ರೀಗಳವರು ಗಡ್ಡೆಯ ಸಮೀಪ ಬಂದಾಗ ಅವರ ಕಡೆ ಆ ಭಕ್ತರ ಕಡೆಗೆ ಹೋಯಿತು. ಅವರು ಒಂದು ಕ್ಷಣ ನಿಂತು “ಕಾಲಿಗೇಕೆ ಅಷ್ಟು ರಕ್ತ ಬಂದಿದೆ?” ಎಂದು ಅವನನ್ನೇ ಕೇಳಿದರು. ಶ್ರೀಗಳವರು ವಿಚಾರಿಸಿದ ಸಂತಸಕ್ಕೆ ಆ ಭಕ್ತರಿಗೆ ಮಾತೇ ಹೊರಡಲಿಲ್ಲ ಎನಿಸುತ್ತದೆ. ಪಾಪ ತೊದಲತೊಡಗಿದರು. ಶ್ರೀಗಳವರು ತಮ್ಮ ಜೊತೆಗೆ ಇದ್ದ ಯೋಗೀಶನನ್ನು ಕರೆದು ಹತ್ತಿರ ಕಲ್ಲಿನ ಸಂದಿಯೊಂದರ ಬಳಿ ಬೆಳೆದಿದ್ದ ಒಂದು ಸಸ್ಯವನ್ನು ತೋರಿಸಿ “ಇದರ ಹೂವು ಎಲೆ ಕಾಂಡ ಎಲ್ಲವನ್ನೂ ಜಜ್ಜಿ ರಸ ಮಾಡಿ ಅವನಿಗೆ ಹಚ್ಚಿಕೊಳ್ಳಲು ಹೇಳು. ರಕ್ತ ಬರುವುದು ನಿಲ್ಲುತ್ತದೆ” ಎಂದು ತಿಳಿಸಿಕೊಟ್ಟರು. ಇಷ್ಟು ಹೇಳಿದವರೇ ಮುಂದಿನ ಕಾರ್ಯಕ್ಕೆ ಹೊರಟರು.

ಇತ್ತ ಈ ಭಕ್ತರು ಶ್ರೀಗಳವರು ಸೂಚಿಸಿದ ಗಿಡದ ಔಷಧವನ್ನು ಪ್ರಯೋಗ ಮಾಡಿಕೊಂಡು, ಮುಂದೆ ಒಂದು ಗಂಟೆಯಲ್ಲಿ ತಮ್ಮ ಗಾಯ ಗುಣವಾದದ್ದನ್ನು ತೋರಿಸಿ, ಶ್ರೀಗಳವರ ಮಂತ್ರಾಕ್ಷತೆಯನ್ನು ಪಡೆದು ಹೋದರು. ಶ್ರೀಗಳವರಿಂದಲೇ ಔಷಧಸೂಚನೆಯನ್ನು ಪಡೆದ ಆ ಅದೃಷ್ಟವಂತರು ಈಗ ಎಲ್ಲಿದ್ದಾರೋ ತಿಳಿಯದು. ಅವರ ವಂಶವು ಸುಖವಾಗಿರಲಿ.

ಶ್ರೀಗಳವರು ತೋರಿಸಿದ ಸಸ್ಯ ಅತ್ಯಪರೂಪವಾದದ್ದೇನಲ್ಲ. ಎಲ್ಲ ಊರಲ್ಲಿಯೂ ಕಳೆಗಿಡವೆಂದೇ ಪರಿಗಣಿಸಿರುವ ಒಂದು ಪುಟಾಣಿ ಸಸ್ಯವದು. ಮಕ್ಕಳಿಗೆ ಇದರ ತಲೆ ಎಗರಿಸುವ ಆಟವೇ ಒಂದು ಮಜಾ (ಈಗಿನ ಮಕ್ಕಳಿಗೆ ಇದೆಲ್ಲ ಭಾಗ್ಯವಿಲ್ಲವೆನ್ನಿ). ಎಡಗೈಯಲ್ಲಿ ಹಿಡಿದುಕೊಂಡು, ಬಲಗೈಯಿಂದ ಕೇರಂ ಕಾಯಿನ್ ಹೊಡೆಯುವ ರೀತಿ ಒಂದು ಏಟು ಕೊಟ್ಟರೆ ಈ ಹೂವು ಶತ್ರುವಿನ ತಲೆಯಂತೆ ಹಾರಿ ಹೋಗುತ್ತದೆ. ಇಷ್ಟು ಹೇಳಿದ ತಕ್ಷಣ ನಿಮಗೆ ಈ ಗಿಡದ ಚಿತ್ರ ಕಣ್ಣಮುಂದೆ ಬಂದಿರಲಿಕ್ಕೂ ಸಾಕು. ಹಾಗೆ ಬಂದಿದ್ದರೆ ನಿಮ್ಮ ಊಹೆ ಸರಿಯೇ ಆಗಿರುತ್ತದೆ. ಒಂದು ವೇಳೆ ಇನ್ನೂ ನೋಡಿಲ್ಲವೆಂದರೆ ಈ ಕೆಳಗೆ ಚಿತ್ರವನ್ನು ಹಾಕಿದ್ದೇನೆ. ನೋಡಿ ಒಮ್ಮೆ.

Tridax_Procumbensಈ ಗಿಡದ ಸಂಸ್ಕೃತ ಹೆಸರು ಜಯಂತಿ (ಸೇವಂತಿ ಎನ್ನುವ ಹೆಸರೇ ಜಯಂತಿ ಎನ್ನುವುದರ ಲೋಕಲೈಸ್ಡ್ ಆವೃತ್ತಿ). ಕನ್ನಡ ಹೆಸರು ನೆಲ ಸೇವಂತಿ. ಹಳ್ಳಿಯ ಹೆಸರು ಅಟ್ಟಿಗೆ ಸೊಪ್ಪು. ಇನ್ನೂ ಗ್ರಾಮ್ಯನಾಮ ಬೇಕೆಂದರೆ ಗಬ್ಬು ಶಾವಂತಿಗೆ ಅನ್ನುವುದನ್ನೂ ಪರಿಗಣಿಸಿರಿ. ಸುಂದರವಾದ, ಬಹೂಪಯೋಗಿಯಾದ ಈ ಹೂವಿಗೆ ಗಬ್ಬು ಎನ್ನುವ ಹೆಸರು ಯಾಕೆ ಬಂತೋ ದೇವರೇ ಬಲ್ಲ. Tridax Daisy ಅಥವಾ Coat Button ಎಂದು ಇಂಗ್ಲೀಷರು ಕರೆವರು. ಲ್ಯಾಟಿನ್ ಪದಕೋಶವು Tridax Procumbens ಎಂದು ಈ ಹೂವನ್ನು ಕರೆದಿದೆ. ಹೂವಿನ ಉಳಿದೆಲ್ಲ ಮಾಹಿತಿಗಳು ಇಂಟರ್ನೆಟ್ಟಿನಲ್ಲಿ ಹೇರಳವಾಗಿ ಸಿಗುತ್ತವೆ. ಆದರೆ ಶ್ರೀಗಳವರು ಅಂತಹ ಜೋರು ಗದ್ದಲದ ಉತ್ಸವದ ಸಮಯದಲ್ಲಿ ಕೂಡ ಈ ಒಂದು ಸಂಗತಿಯನ್ನು ಗಮನಿಸಿ ಭಕ್ತನೊಬ್ಬನ ವೇದನೆಯನ್ನು ಶಮನಮಾಡಿದ್ದು, ತನ್ಮೂಲಕ ತಮ್ಮೊಳಗಿದ್ದ ಜ್ಞಾನವನ್ನು ಸೂಕ್ಷ್ಮವಾಗಿ ಪ್ರಕಟಿಸಿದ ವಿಷಯವನ್ನು ಹೇಳಿ, ಅವರ ಸ್ಮರಣೆಯನ್ನು ಮಾಡುವುದಷ್ಟೇ ನನ್ನ ಉದ್ದೇಶ. ಅವರ ಸ್ಮರಣೆಯೇ ನಮ್ಮೆಲ್ಲರ ದೈಹಿಕ ಹಾಗು ಮಾನಸಿಕ ವ್ಯಾಧಿಗಳಿಗೆ ಔಷಧ.

ಇನ್ನೂ ಒಂದು ಘಟನೆಯು ಇದೆ. ಅದನ್ನು ಮುಂದೊಮ್ಮೆ ಅವರೇ ಪ್ರೇರಣೆ ಮಾಡಿ ಬರೆಸಬೇಕಷ್ಟೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.