​​​ನೀ ಕರುಣದಿಂದ ಪಾಲಿಸದೆ ಇದ್ದರೆ

ನೀ ಕರುಣದಿಂದ ಪಾಲಿಸದೆ ಇದ್ದರೆ ಇನ್ನುನಾಕಾಣೆ ಮನ್ನಿಸುವರ
ಸಾಕಾರಿ ರೂಪ ಸರ್ವೋತ್ತಮನೆ ಸಲಹೊ ಪರಾಕು ಮಾಡದೆ ಎನ್ನನು

ಗುರುಹಿರಿಯರನು ಕಂಡು ದುರುಳತನದಲಿ ನಾನು ಚರಣಕೆರಗದೆ ಪೋದೆನೊ
ಸ್ಮರನಬಾಣಕೆ ಸಿಲುಕಿ ಪರಸತಿಗೆ ಮನಸಿತ್ತು ದುರ್ಗತಿಗೆ ಒಳಗಾದೆನೊ
ವರಸಕಲಸಂಪದವು ಬರಿದೆ ಬಯಸುತೆ ನಿಮ್ಮ ಚರಣವನು ನಾ ಮರೆತೆನೋ
ಪರಮಪೌರುಷನೆ ನಿನ್ನ ಪಾದದೊಲೊಮೆನಗಿತ್ತು ಕರಪಿಡಿದಿ ಕಡೆ ಹಾಯಿಸೈ ||

ಆರು ಮಂಗಗಳೆಂಬ ಕ್ರೂರವೈರಿಗಳಿಂದ ಗಾರಾದೆ ಅವರ ದೆಸೆಗೆ
ಮಾರಿಹಬ್ಬದ ಕುರಿಯು ಮೆಲುವಂತೆ ತಿನುವಂತೆ ತೋರುತಿದೆ ಮತಿಯು ಎನಗೆ
ಘೋರಪಾತಕವೆಂಬ ವಾರಿಧಿಯ ದಾಟಿಸುವ ಚಾರುತರ ಬಿರುದು ನಿನಗೆ
ಮಾರನಯ್ಯನೆ ನಿನ್ನ ಮಹಿಮೆಗಳ ಕೇಳಾಡಿ ಕೂಡಿದೆನು ನಿಮ್ಮಡಿಗಳ ||

ಹಲವು ಜನುಮಗಳಲ್ಲಿ ಬಲುನೊಂದು ಬಾಯಾರಿ ಬಳಲುತ್ತ ತಿರುಗುತಿಹೆನೊ
ಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆ ಮನೆಮನೆಯ ಅಲೆಯುತಿಹೆನೊ
ಜಲದಮೇಲಿನ ಗುಳ್ಳೆಯಂತಿಪ್ಪ ಈ ದೇಹ ನೆಲೆ ಎಂದು ನೆಚ್ಚುತಿಹೆನೊ
ಜಲಜನಾಭನೆ ನಿನ್ನ ಮಹಿಮೆಯನು ಪೊಗಳುವೆನೊ ಚೆಲುವ ಹಯವದನ ಕಾಯೋ ||

 
Featured image courtesy : www.framepool.com

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Eke mamate kottu danisuve?

ಏಕೆ ಮಮತೆ ಕೊಟ್ಟು ದಣಿಸುವಿ ರಂಗ
ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ  || ಪಲ್ಲವಿ. ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ –
ಗೆನ್ನನೊಪ್ಪಿಸುವುದು ನೀತವೆ
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ
ನಿನ್ನ ನೇಮಕೆ ಪ್ರತಿಕೂಲನೆ || 1 ||

ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ
ತನುವ್ಯಾರೊ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿ೦ದಿನ ದೇಹದ೦ತಲ್ಲವೆ || 2 ||

ಇ೦ದ್ರಿಯ೦ಗಳು ವಿಷಯದಿ೦ದ ತೆಗಯೆ
ಗೋವಿ೦ದ ಎನ್ನ ವಶಕೆ ಬಾರವೊ
ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
ಬ೦ಧಕಶಕುತಿಗೆ ನಮೋ ನಮೋ || 3 ||

ಅರಿತು ಅರಿತು ಎನಗರೆಲವವಾದರು
ವಿರಕುತಿ ವಿಷಯದಿ ಬಾರದು
ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ (ಸ್ಮರಣೆಯೊಂದಲ್ಲದೆ)
ಮರುಳು ನೀಗುವ ಬಗೆಗಾಣೆನೊ || 4 ||

ಎ೦ದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ
ಅ೦ದೆ ಉದ್ಧರಿಸಯ್ಯ ಕರುಣಿಯೆ
ಸು೦ದರ ವಿಗ್ರಹ ಗೋಪಾಲವಿಠಲ ಸುಖ
ಸಾ೦ದ್ರ ಭವಮೋಚಕ ನಮೋ ನಮೋ ||5 ||

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Neene Parama Pavanee

ಕಾಖಂಡಕಿಯ ಶ್ರೀಮಹೀಪತಿದಾಸರು  ತಮ್ಮ ಕುಲಸ್ವಾಮಿನಿಯಾದ ಶ್ರೀಲಕ್ಷ್ಮಿಯನ್ನು ಸ್ತುತಿಸಿ ಬರೆದ ಹಾಡು ಇದು.  ಬೃಂದಾವನಿ ರಾಗ ಇರಬಹುದೆಂದು ನನ್ನ ಊಹೆ. ತಿಳಿದವರು ಸರಿಪಡಿಸಿ.

ನೀನೆ ಪರಮಪಾವನಿ ನಿರಂಜನೀ ।।ಪ॥

ಆದಿನಾರಾಯಣೀ ಸಾಧುಜನವಂದಿನೀ
ಸದಾನಂದರೂಪಿಣಿ ಸದ್ಗತಿಸುಖದಾಯಿನೀ ।।ಅ.ಪ॥

ಲಕ್ಷುಮಿರೂಪಿಣಿ ಸಾಕ್ಷಾತ್ಕಾರಿಣೀ
ರಕ್ಷ ರಕ್ಷಾತ್ಮಿಣೀ ಅಕ್ಷಯಪದದಾಯಿನೀ ।।1।।

ಅನಾಥರಕ್ಷಿಣೀ ದೀನೋದ್ಧಾರಿಣೀ
ಅನಂತಾನಂತಗುಣಿ ಮುನಿಜನಭೂಷಣೀ ।।2।।

ದಾರಿದ್ರ್ಯಭಂಜನೀ ದುರಿತವಿಧ್ವಂಸಿನೀ
ಪರಮಸಂಜೀವಿನಿ ಸುರಮುನಿರಂಜನೀ ।।3।।

ಸ್ವಾಮಿ ಶ್ರೀ ಗುರುವಿನೀ ಬ್ರಹ್ಮಾನಂದರೂಪಿಣೀ
ಮಹಿಪತಿಕುಲಸ್ವಾಮಿನೀ ಪರಮಪಾವನೀ ।।4।।

ಹಾಡನ್ನು ಇಲ್ಲಿ ಕೇಳಬಹುದು ಉನ್ನಿಕೃಷ್ಣನ್ ಅವರ ಧ್ವನಿಯಲ್ಲಿ ಮಧುರವಾಗಿ ತೇಲಿಬಂದಿದೆ.

Devanagari Version

नीनॆ परमपावनि निरंजनी ।।प॥

आदिनारायणी साधुजनवंदिनी
सदानंदरूपिणि सद्गतिसुखदायिनी ।।अ.प॥

लक्षुमिरूपिणि साक्षात्कारिणी
रक्ष रक्षात्मिणी अक्षयपददायिनी ।।1।।

अनाथरक्षिणी दीनोद्धारिणी
अनंतानंतगुणि मुनिजनभूषणी ।।2।।

दारिद्र्यभंजनी दुरितविध्वंसिनी
परमसंजीविनि सुरमुनिरंजनी ।।3।।

स्वामि श्री गुरुविनी ब्रह्मानंदरूपिणी
महिपतिकुलस्वामिनी परमपावनी ।।4।।

 

Transliteration

nIne paramapAvani niraMjanI

AdinArAyaNI sAdhujanavaMdinI
sadAnaMdarUpiNi sadgatisuKadAyinI

lakShumirUpiNi sAkShAtkAriNI
rakSha rakShAtmiNI akShayapadadAyinI

anAtharakShiNI dInOddhAriNI
anaMtAnaMtaguNi munijanaBUShaNI

dAridryaBaMjanI duritavidhvaMsinI
paramasaMjIvini suramuniraMjanI

svAmi SrI guruvinI brahmAnaMdarUpiNI
mahipatikulasvAminI paramapAvanI

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಾಘವೇಂದ್ರಂ ತಂ ಆಶ್ರಯೇ

ರಾಘವೇಂದ್ರ ಗುರುಸಾರ್ವಭೌಮರು ಅದ್ವಿತೀಯ ವೈಣಿಕರೆನ್ನುವುದು ಅವರ ಎಲ್ಲ ಭಕ್ತರಿಗೂ ಗೊತ್ತು.  ಯಾವ ವರ್ಗದ ಸಂಗೀತಗಾರರೇ ಆಗಲಿ ರಾಯರ ಬಳಿ ಬಂದು ಪ್ರಾರ್ಥನೆ ಮಾಡಿದಲ್ಲಿ ಅವರಿಗೆ ಸಂಗೀತವು ಒಲಿಯುವುದ ಶತಸ್ಸಿದ್ಧ. ಈ ಕಾರಣದಿಂದ ಎಷ್ಟೇ ಉಚ್ಚತರಗತಿಯ ಕಲಾವಿದರಿದ್ದರೂ ಮಂತ್ರಾಲಯಕ್ಕೆ ಬಂದು ಗುರುರಾಜರ ಮುಂದೆ ಸಂಗೀತದ ಸೇವೆಯನ್ನು ಸಲ್ಲಿಸಲು ಹಾತೊರುವುದು ಸಹಜ.  ನಾನು ನೋಡಿರುವಂತೆ ದಿನಕ್ಕೆ ಒಬ್ಬನಾದರೂ ಕಲಾವಿದ ಮಠದ ಯಾವುದಾದರೂ ಮೂಲೆಯಲ್ಲಿ ಕುಳಿತು ಶ್ರದ್ಧಾವಂತ ವಿದ್ಯಾರ್ಥಿಯಾಗಿ ರಾಯರ ಮುಂದೆ ಪರೀಕ್ಷೆ ಒಪ್ಪಿಸುವಂತೆ ರಾಗಾಲಾಪನೆಯನ್ನು ಮಾಡುತ್ತಿರುತ್ತಾನೆ.  ಪ್ರಖ್ಯಾತ ಕಲಾವಿದರೂ ಸಹ ಇಲ್ಲಿಗೆ ಬಂದು ತಮ್ಮ ಪಾಡಿಗೆ ತಾವು ಹಾಡಿ, ಧನ್ಯರಾಗಿ ಮರಳಿಹೋಗುವುದನ್ನು ಸಹ ನಾನು ಹಲವಾರು ಬಾರಿ ನೋಡಿದ್ದೇನೆ.  ಸಂಗೀತವನ್ನು ಸವಿಯುವ ರಸಿಕರೇನಾದರೂ ನೀವಾಗಿದ್ದಲ್ಲಿ ಸುಮ್ಮನೆ ಈ ಸಂಗೀತಗಾರರ ತಲ್ಲೀನತೆಯ ಪರಿಯನ್ನು ನೋಡುತ್ತ ಕುಳಿತುಬಿಡುವಿರಿ.  ಆ ಮಟ್ಟಿಗೆ ನಾನೊಬ್ಬ ಅದೃಷ್ಟಶಾಲಿ.

ಹದಿನೈದು ದಿನಗಳ ಕೆಳಗೆ ಮದರಾಸಿನಿಂದ ಡಾ. ಆರ್. ಗಣೇಶ್ ಹಾಗು ಎಸ್. ಎಸ್. ಮುರಳಿ ಇಬ್ಬರೂ ಮಂತ್ರಾಲಯಕ್ಕೆ ಬಂದು ಶ್ರೀರಾಯರ ಸನ್ನಿಧಿಯಲ್ಲಿ ಸಂಗೀತ ಸೇವೆಯನ್ನು ಸಲ್ಲಿಸಿ ಹೋದರು. ಈ ಇಬ್ಬರೂ ನನ್ನ ಸ್ನೇಹಿತರಾಗಿರುವುದು ಸಹ ರಾಯರು ನನ್ನ ಮೇಲೆ ಮಾಡಿರುವ ಒಂದು ಕೃಪೆ ಎಂದು ಭಾವಿಸುವೆ. ಇಬ್ಬರೂ ಹುಟ್ಟಿದ್ದು ಸಾಂಪ್ರದಾಯಿಕ ಅದ್ವೈತಿಗಳ ಕುಟುಂಬದಲ್ಲಿ. ಆದರೆ ಇವರು ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ತೋತ್ರ, ಮಂಗಳಷ್ಟಕ, ನಾಮಾವಳಿ ಹಾಗು ಇನ್ನಿತರ ಹರಿದಾಸರ ಕೀರ್ತನೆಗಳನ್ನು ಭಕ್ತಿಭರಿತರಾಗಿ ಹೇಳುವುದನ್ನು ನಾನು ಹಲವಾರು ಬಾರಿ ನೋಡಿ ಸಂತಸಪಟ್ಟಿದ್ದೇನೆ. ಸಾಮಾನ್ಯವಾಗಿ ತಮಿಳು ಭಾಷಿಕರು ಇನ್ನಿತರ ಭಾಷೆಗಳನ್ನು ಉಚ್ಚರಿಸುವಾಗ ಸಂಭವಿಸಬಹುದಾದ ಉಚ್ಚಾರದ ವ್ಯತ್ಯಾಸಗಳು ರಾಯರ ವಿಷಯದಲ್ಲಿ ಆಗಬಾರದು ಎನ್ನುವ ದೃಷ್ಟಿಯಿಂದ ನನ್ನ ಬಳಿ ಹಲವಾರು ಬಾರಿ ಇವುಗಳನ್ನು ಹೇಳಿ ವ್ಯತ್ಯಾಸಗಳಾದಲ್ಲಿ ಸರಿಪಡಿಸಿಕೊಂಡಿದ್ದಾರೆ. ಪ್ರತಿನಿತ್ಯ ಶ್ರೀಗುರುರಾಜರ ಸ್ತೋತ್ರವನ್ನು ಹೇಳುವುದು ಮಾತ್ರವಲ್ಲ ಶ್ರೀಮಠದ ಗುರುಪರಂಪರೆಯ ಬಗ್ಗೆಯೂ ವಿವರವಾಗಿ ತಿಳಿದುಕೊಂಡಿದ್ದಾರೆ.  ನನ್ನ ಮಟ್ಟಿಗೆ ಹೇಳುವುದಾದಲ್ಲಿ ಇದು ಅತ್ಯುತ್ತಮ ನಡುವಳಿಕೆಗೆ ಉದಾಹರಣೆ.

ಸಾಮಾನ್ಯವಾಗಿ ನಾನು ಯಾರದೇ ಸಂಗೀತದ ಕಚೇರಿಗೆ ಹೋದಲ್ಲಿ ಕಲಾವಿದರಲ್ಲಿ ಮೋಹನಕಲ್ಯಾಣಿ ಅಥವಾ ಮೋಹನ ರಾಗದ ಒಂದಾದರೂ ಕೃತಿಯನ್ನು ಹಾಡಲು ವಿನಂತಿಸಿಕೊಳ್ಳುತ್ತೇನೆ. ನನಗೆ ಈ ರಾಗಗಳೆಂದರೆ ಅತೀವ ಪ್ರೀತಿ.  ಗಣೇಶ್ ಮತ್ತು ಮುರಳಿ ಇಬ್ಬರಲ್ಲಿ ನನಗೆ ಸಲಿಗೆಯಿರುವುದರಿಂದ ಮಂತ್ರಾಲಯಕ್ಕೆ ಬಂದಾಗಲೆಲ್ಲ ಈ ರಾಗದಲ್ಲಿ ಆಲಾಪನೆ ಮಾಡಲು ಕೇಳುತ್ತೇನೆ. ಆದರೆ ಈ ಬಾರಿ ನನಗೆ ಕೆಲಸದ ಅತೀವ ಒತ್ತಡವಿದ್ದುದರಿಂದ ಇಬ್ಬರು ನಡೆಸಿದ ಸಂಗೀತೆ ಸೇವೆಯಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಆದರೆ ನನ್ನ ಪುಟ್ಟ ಆಫೀಸಿನಲ್ಲಿಯೇ ಕುಳಿತು ಈ ಸಂಗೀತ ಕಚೇರಿಯನ್ನು ಕಂಪ್ಯೂಟರಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ.

ಇಬ್ಬರೂ ಬಂದು ಹೋದದ್ದು ಒಂದು ದಿನದ ಅಂತರದಲ್ಲಿ. ಅವರು ಸಂಗೀತ ಸೇವೆ ಸಲ್ಲಿಸುವಾಗ  ಇಬ್ಬರಿಂದಲೂ ಒಂದೊಂದು ರಸವತ್ತಾದ ಆಲಾಪನೆಯು ಮೂಡಿ ಬಂದಿದೆ.  ಈರ್ವರೂ ಶ್ರೀರಾಘವೇಂದ್ರವಿಜಯದಿಂದ ಆಯ್ದ ಒಂದೊಂದು ಶ್ಲೋಕವನ್ನು ಭಕ್ತಿಯುತವಾಗಿ ಆಲಾಪನೆಗಳನ್ನು ಮಾಡಿದ್ದಾರೆ. ಅವರು ಮಾಡಿದಾಗ ಹೊರಹೊಮ್ಮಿದ್ದು ಕೇವಲ ಮಾಧುರ್ಯಷ್ಟೇ ಅಲ್ಲ.  ಹೊರ ಹೊಮ್ಮಿದ್ದು ಕಲಾವಿದರು ಶ್ರೀರಾಯರ ಮೇಲಿಟ್ಟಿರುವ ಭಕ್ತಿಯ ತೀವ್ರತೆ.  ಡಾ. ಗಣೇಶರು ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ ಎನ್ನುವ ಶ್ಲೋಕವನ್ನು ಹಾಡಿದರೆ. ಮುರಳಿಯವರು ಮಾಡಿದ್ದು ಮೂಕೋಪಿ ಯತ್ಪ್ರಸಾದೇನ ಎನ್ನುವ ಪ್ರಸಿದ್ಧ ಶ್ಲೋಕದ ಆಲಾಪನೆ. ಆಶ್ಚರ್ಯವೆಂಬಂತೆ ಅದು ಮೋಹನಕಲ್ಯಾಣಿರಾಗದಲ್ಲಿಯೇ ಮೂಡಿ ಬಂದಿದೆ. ನಾನು ಕಛೇರಿಯಲ್ಲಿ ಭಾಗವಹಿಸದೇ ಹೋದರೂ ರಾಯರು ನನಗೋಸ್ಕರವೇನೋ ಎನ್ನುವಂತೆ ಇವರಿಂದ ನನಗೆ ಪ್ರಿಯವಾದ ರಾಗದಲ್ಲಿ ಹಾಡನ್ನು ಹೇಳಿಸಿದರು! ಹೌದು ಮತ್ತೆ! ರಾಯರಿಗೋಸ್ಕರ ನಡೆದ ಕಛೇರಿಗಳೇ ಇವುಗಳೆಲ್ಲ.  ಅದರಲ್ಲಿ ನನಗೆ ಪ್ರಿಯವಾದ ರಾಗವೇ ಮೂಡಿಬಂದಿರುವುದು ಸಹ ರಾಯರ ಕೃಪೆಯೇ.

Dr. R. Ganesh

ಡಾ. ಗಣೇಶ್ ಮಾಡಿದ ಶ್ಲೋಕಾಲಾಪನೆ ಇದು

ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ |
ಕಾಮಿತಾಽಶೇಷಕಲ್ಯಾಣಕಲನಾ ಕಲ್ಪಪಾದಪೌ ||

ಅರ್ಥ: (ನಮ್ಮ) ಕಲ್ಯಾಣಮಯವಾದ ಎಲ್ಲ ರೀತಿಯ ಅಭೀಷ್ಟಗಳನ್ನು ಈಡೇರಿಸುವ ವಿಷಯದಲ್ಲಿ ಕಲ್ಪವೃಕ್ಷದಂತಿರುವ, ಸಕಲ ಮಂಗಲಕರವಾದ ಸಂಪತ್ತಿನಿಂದ ಕೂಡಿರುವಂತಹ ಶ್ರೀರಾಘವೇಂದ್ರತೀರ್ಥರ ಪಾದಕಮಲಗಳಲ್ಲಿ ನಾನು ನಮಸ್ಕಾರಗಳನ್ನು ಅರ್ಪಿಸುತ್ತೇನೆ.

ಶಬ್ದಾರ್ಥ : ಶ್ರೀಮತಃ = ಸಂಪತ್ತಿನಿಂದ ಕೂಡಿದ; ಪದಪಂಕಜ = ಪಾದಕಮಲ ಅರ್ಥಾತ್ ಕಮಲದಂತೆ ಕೋಮಲವಾದ ಪಾದಗಳು ; ಕಲ್ಪಪಾದಪಃ = ಕಲ್ಪವೃಕ್ಷ.

Download

 

A.S. Muraliಮುರಳಿಯವರು ಆಲಾಪಿಸಿದ ರಾಯರ ಶ್ಲೋಕ

ಮೂಕೋ‍ಽಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ  |
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ಅರ್ಥ: ಇದು ಶ್ರೀರಾಘವೇಂದ್ರವಿಜಯದ ಮೊದಲನೆಯ ಸರ್ಗದ ಮಂಗಳಾಚರಣೆಯ ಶ್ಲೋಕಗಳಲ್ಲಿ ಒಂದು. ಶ್ರೀರಾಯರನ್ನು ಆಶ್ರಯಿಸಿದರೆ ಉಂಟಾಗುವ ಸತ್ಪರಿಣಾಮಗಳನ್ನು ನಾರಾಯಣ ಪಂಡಿತಾಚಾರ್ಯರು ವರ್ಣಿಸುವ ಪರಿ ಇದು.
ಯಾರ ಕೃಪೆಯಿಂದ ಮಾತು ಬಾರದವನೂ ಸಹಸ್ರಹೆಡೆಗಳನ್ನು ಹೊಂದಿದ ಶೇಷದೇವರಂತೆ ಮಾತನಾಡಲು ತೊಡಗುತ್ತಾನೊ, ಖಾಲಿ ಕೈಯುಳ್ಳ ಅತಿ ದೀನನೂ ಸಹ ಮಹಾರಾಜನೇ ಆಗಿಬಿಡುತ್ತಾನೆಯೋ ಅಂತಹ (ಕೃಪೆಮಾಡುವ) ಶ್ರೀರಾಘವೇಂದ್ರರೇ ನಿಮ್ಮನ್ನೇ ನಾನು ಆಶ್ರಯಿಸುತ್ತೇನೆ.

ಶಬ್ದಾರ್ಥ  : ಮುಕುಂದಶಯನ = ವಿಷ್ಣುವಿನ ಹಾಸಿಗೆ ಅರ್ಥಾತ್ ಶೇಷದೇವರು. ರಿಕ್ತಃ = ಬರಿಗೈಯವನು, ಬಡವ.

Download Mookopi Yatprasadena Shloka

ಅಂದಹಾಗೆ : ಮೋಹನಕಲ್ಯಾಣಿ ರಾಗದ ಹಿನ್ನೆಲೆ ಸಹ ಆಸಕ್ತಿಕರವಾಗಿದೆ. ಇನ್ನೊಂದು ಸಲ ಬರೆಯುವೆ.


ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts