ಆದರೆ ಈ ವಿಷಯವನ್ನು ಕುರಿತು ಇನ್ನೂ ಆಳವಾಗಿ ನೋಡಿದರೆ ಶ್ರೀಕೃಷ್ಣನ ನಿಜವಾದ ರಥವೆಂದರೆ ಪ್ರಾಣದೇವರೇ ಆಗಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಶ್ರೀವಿಷ್ಣುಸಹಸ್ರನಾಮದಲ್ಲಿ ವರದೋ ವಾಯುವಾಹನಃ ಎಂದಿರುವುದು ಇದನ್ನೇ. ವಿಷ್ಣುವು ವಾಯುವಿನ ಮೇಲೆ ಕುಳಿತು ವರಗಳನ್ನು ಕೊಡುವವನು ಎಂದು ಇದರ ಅರ್ಥ. ಈ ಅರ್ಥದಲ್ಲಿ ರಥಾಭಿಮಾನಿದೇವತೆಗಳೂ ಮತ್ತು ರಥವನ್ನು ಎಳೆವ ಅದೃಷ್ಟಶಾಲಿಗಳ ಅಂತರಂಗದಲ್ಲೂ ನಿಂತು ಕಮಲಾನಾಥನನ್ನು ಹೊತ್ತು ತಿರುಗಾಡಿಸುವವರು ಪ್ರಾಣದೇವರೇ ಆಗಿದ್ದಾರೆ. ಸಹಜವಾಗಿಯೇ ಸಂತಸದ ಸರ್ವಶ್ರೇಷ್ಠಾನುಭವವು ದೊರೆಯುವುದು ಮುಖ್ಯಪ್ರಾಣದೇವರಿಗೆ ಮಾತ್ರ. ಉಳಿದವರಿಗೆಲ್ಲ ಆಗುವುದು ಅವರವರ ಯೋಗ್ಯತಾನುಸಾರವಾದ ಆನಂದಾನುಭವ.