ರಥೋತ್ಸವವೆಂಬ ಅದ್ಭುತ ಮಕ್ಕಳಾಟ

ಶ್ರೀವಿಜಯದಾಸರ ಹೃದಯವಾಸಿಗಳಾದ ಶ್ರೀರಾಘವೇಂದ್ರಗುರ್ವಂತರ್ಯಾಮಿ ಭಾರತೀರಮಣಮುಖ್ಯಪ್ರಾಣಾಂತರ್ಗತ ವಾಸಿಷ್ಠಕೃಷ್ಣಾಯ ನಮಃ

ನಾಳೆ ಕಾರ್ತಿಕ ಮಾಸದ ದ್ವಾದಶಿ. ಎಲ್ಲ ದೇವತೆಗಳಿಗೆ ಯೋಗನಿದ್ರೆಯಲ್ಲಿ ತೊಡಗಿದ ದಾಮೋದರನನ್ನು ಎಬ್ಬಿಸುವ ಕೆಲಸ. ಇದನ್ನು ಪ್ರಬೋಧೋತ್ಸವ ಎಂದು ಕರೆವರು. ಮಲಗಿದ ಮಹಾಶಿಶುವನ್ನು ಅವರು ಎಬ್ಬಿಸಿದ ನಂತರ ಅವನಿಗೆ ಬಗೆಬಗೆಯ ಅಲಂಕಾರಗಳಿಂದ ಸಿಂಗರಿಸಿ, ಮುದ್ದಾಡಿ, ಆಟವಾಡಿಸಿ ತಾವು ದಣಿವ ತವಕ ಭುವಿಯಲ್ಲಿರುವ ದೇವತಾಂಶರಿಗೆ. ದೇವತೆಗಳ ಮತ್ತು ದೇವತಾಂಶರ ಈ ವ್ಯಾಪಾರಗಳನ್ನು ನೋಡಿ ಹೃದಯದಲ್ಲಿಯೇ ನಲಿವ ಭಾಗ್ಯ ಸಾತ್ವಿಕರಿಗೆ. ಈ ಆನಂದೋದ್ಯಾನಕ್ಕೆ ಕಾರ್ತಿಕ ಶುದ್ಧ ದ್ವಾದಶಿಯು ಹೆಬ್ಬಾಗಿಲು. ಜ್ಞಾನ ಮತ್ತು ಭಕ್ತಿಗಳು ಎರಡು ಕೀಲಿಕೈಗಳು.

ರಜೆಯ ಮೇಲೆ ಹೋಗಿದ್ದ ರಥಗಳು ರಥಬೀದಿಗೆ ಬಂದಾಗಿದೆ. ಬಗೆಬಗೆಯ ಬಾವುಟಗಳು, ದೇವರ ಚಿತ್ರಪಟಗಳು ಮತ್ತು ವರ್ಣಮಯವಾದ ಲೈಟಿನ ಸರಗಳನ್ನು ತಮ್ಮ ಮೈಮೇಲೆಲ್ಲ ಧರಿಸಿಕೊಂಡಾಗಿದೆ. ನಾಳೆಯಿಂದ ಅವುಗಳಿಗೆ ತ್ರಿಭುವನಮೋಹನನನ್ನು ತಿರುಗಾಡಿಸುವ ಕೆಲಸ! ರಥೋತ್ಸವವನ್ನೂ ಅದರಿಂದ ಹೊರಹೊಮ್ಮುವ ಬೆಳಕನ್ನೂ ನೋಡುವುದು ಒಂದು ಆನಂದದಾಯಕವಾದ ಅನುಭವವು. ರಥಬೀದಿಯಲ್ಲಿ ಮತ್ತೊಂದು ಎಂಟು ತಿಂಗಳುಗಳ ಕಾಲ ಈ ಅನುಭವವನ್ನು ಪಡೆಯುವ ಅವಕಾಶವು ದೊರೆಯಲಿದೆ.

ಮನೆಯಲ್ಲಿ ಶಿಶುಗಳನ್ನು ಬೆನ್ನಮೇಲೆ ಹೊತ್ತುಕೊಂಡು ಆನೆಯಾಗಿ ಆಟವಾಡಿಸುವ ಅಪ್ಪ, ಅಜ್ಜ, ಮಾಮಂದಿರಿಗೇ ಎಷ್ಟೋ ಸಂತೋಷವೆನಿಸುವುದು. ಮೊಣಕಾಲು ನೋವಾದರೂ ಲೆಕ್ಕಿಸದೆ ಈ ಆನೆಗಳು ಮನೆಯ ಮೂಲೆಯಲ್ಲೆಲ್ಲ ತಿರುಗಬಲ್ಲವು. ಹೀಗಿರುವಾಗ ಸಂತಸದ ಸೆಲೆಯೇ ಆಗಿರುವ ಶ್ರೀಕೃಷ್ಣನನ್ನು ತಮ್ಮ ಬೆನ್ನ ಮೇಲೆ ಹೊತ್ತು ತಿರುಗಾಡಿಸುವ ರಥಾಭಿಮಾನಿಗಳಿಗೆ ಆಗುವ ಸಂತಸದ ತೀವ್ರತೆಯನ್ನು ಅದಾರು ಹೇಳಬಲ್ಲರು? ಈ ಒಂದು ದೃಷ್ಟಾಂತವನ್ನು ಇಟ್ಟು ಕೊಂಡು ನೋಡಿದಾಗ ದೇವತಾವರ್ಗದಲ್ಲೆಲ್ಲ ರಥಾಭಿಮಾನಿದೇವತೆಗಳಿಗೇನೆ ಶ್ರೀಕೃಷ್ಣನನ್ನು ಅತಿ ಹೆಚ್ಚು ಆಟವಾಡಿಸುವ ಅದೃಷ್ಟ ದೊರಕಿದೆಯೆನಿಸುತ್ತದೆ.

ಆದರೆ ಈ ವಿಷಯವನ್ನು ಕುರಿತು ಇನ್ನೂ ಆಳವಾಗಿ ನೋಡಿದರೆ ಶ್ರೀಕೃಷ್ಣನ ನಿಜವಾದ ರಥವೆಂದರೆ ಪ್ರಾಣದೇವರೇ ಆಗಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಶ್ರೀವಿಷ್ಣುಸಹಸ್ರನಾಮದಲ್ಲಿ ವರದೋ ವಾಯುವಾಹನಃ ಎಂದಿರುವುದು ಇದನ್ನೇ. ವಿಷ್ಣುವು ವಾಯುವಿನ ಮೇಲೆ ಕುಳಿತು ವರಗಳನ್ನು ಕೊಡುವವನು ಎಂದು ಇದರ ಅರ್ಥ. ಈ ಅರ್ಥದಲ್ಲಿ ರಥಾಭಿಮಾನಿದೇವತೆಗಳ ಅಂತರಂಗ ಮತ್ತು ರಥವನ್ನು ಎಳೆವ ಅದೃಷ್ಟಶಾಲಿಗಳ ಅಂತರಂಗದಲ್ಲೂ ನಿಂತು ಕಮಲಾನಾಥನನ್ನು ಹೊತ್ತು ತಿರುಗಾಡಿಸುವವರು ಪ್ರಾಣದೇವರೇ ಆಗಿದ್ದಾರೆ. ಸಹಜವಾಗಿಯೇ ಸಂತಸದ ಸರ್ವಶ್ರೇಷ್ಠಾನುಭವವು ದೊರೆಯುವುದು ಮುಖ್ಯಪ್ರಾಣದೇವರಿಗೆ ಮಾತ್ರ.  ಉಳಿದವರಿಗೆಲ್ಲ ಆಗುವುದು ಅವರವರ ಯೋಗ್ಯತಾನುಸಾರವಾದ ಆನಂದಾನುಭವ.

ರಥವನ್ನು ಎಳೆವವರು ಅದೃಷ್ಟಶಾಲಿಗಳು ಎಂದು ಹೇಳಿರುವುದರಲ್ಲಿ ಕೂಡ ಅರ್ಥವಿದೆ. ರಥದ ಹಿಂದೆ ಮುಂದೆಯೇ ತಿರುಗಾಡಿಕೊಂಡಿದ್ದರೂ ಎಲ್ಲರಿಗೂ ರಥವನ್ನು ಎಳೆವ ಪ್ರೇರಣೆಯಾಗುತ್ತದೆ ಎಂದೇನಿಲ್ಲ. ರಥವನ್ನು ಎಳೆಯುತ್ತಿರುವವರು “ಗೋವಿಂದಾ ಗೋವಿಂದಾ” ಎಂದು ತಾರಕ ಸ್ವರದಲ್ಲಿ ಘೋಷಿಸುತ್ತಾ ರಥವನ್ನು ಎಳೆಯುತ್ತಿದ್ದರೂ ಬಹಳಷ್ಟು ಮಂದಿಗೆ ತಾವೂ ಹೋಗಿ ಕೈಜೋಡಿಸುವ ಮನಸ್ಸು ಆಗುವುದೇ ಇಲ್ಲ. ಬಹುತೇಕರು ಬದಿಯಲ್ಲಿ ನಿಂತು ಚಿಪ್ಸ್ ಮೆಲ್ಲುವುದರಲ್ಲೋ, ಸೆಲ್ಫೀ ತೆಗೆದುಕೊಳ್ಳುವುದರಲ್ಲೋ, ಲೈವ್ ಪ್ರಸಾರಮಾಡುವುದರಲ್ಲೋ ಮಗ್ನರು. ಅನೇಕ ಬಾರಿ ಮುದ್ದುಕೃಷ್ಣನು “ನಾನು ಮುಂದೆ ಹೊರಡುವುದೇ ಇಲ್ಲ, ಇಲ್ಲಿಯೆ ನಿಲ್ಲುವೆ” ಎಂದು ಹಟ ತೆಗೆಯುತ್ತಾನೆ. ಅವನ ರಥವಾದ ಹನುಮಂತದೇವರಿಗೋ ತನ್ನ ಒಡೆಯನ ಮಾತನ್ನು ನಡೆಸುವುದರಲ್ಲೇ ಆನಂದವಿದೆ. ಕೃಷ್ಣ ಹೇಳಿದಾಕ್ಷಣ ಕಾಣಿಯೂರು ಮಠದ ಮೂಲೆಗೋ ಅದಮಾರುಮಠದ ಮೂಲೆಗೋ ಹೋಗಿ ನಿಂತು ಬಿಡುತ್ತಾರೆ. ಅವರ ಬೆನ್ನ ಮೇಲಿರುವ ಕೃಷ್ಣನು “ಸಾಕು ಇನ್ನು, ಮುಂದೆ ಹೊರಡೋಣ ನಡಿ” ಎಂದ ನಂತರವೇ ಅವರು ಹಗ್ಗ ಹಿಡಿದ ಅದೃಷ್ಟಶಾಲಿಗಳ ಕೈಗಳಲ್ಲಿರುವ ದೇವತೆಗಳಿಗೆ ವಿಶೇಷಬಲವನ್ನು ಕೊಟ್ಟು ಅವರ ಮೂಲಕ ತಾವು ಮುಂದುವರೆಯುತ್ತಾರೆ. ಆದರೆ ಇಷ್ಟೆಲ್ಲ ಸಮಯ ಮತ್ತು ಅವಕಾಶ ಎರಡನ್ನು ಕೊಟ್ಟರೂ ಕೂಡ ಚಿಪ್ಸ್ ಅಥವಾ ಭೇಲ್ ಪುರಿ ಮೆಲ್ಲುವ ಕೈಗಳಿಂದ ಎಂಜಲರೂಪಿ ಕಲಿಯನ್ನು ದೂರ ಮಾಡಿಕೊಳ್ಳುವ ಮನಸ್ಸು ಹಗ್ಗದಾಚೆ ಇರುವವರಿಗೆ ಆಗುವುದೇ ಇಲ್ಲ. ಇದಕ್ಕೆಂದೇ ರಥವನೆಳೆವವರು ಅದೃಷ್ಟಶಾಲಿಗಳು ಎಂದು ಹೇಳಿದ್ದು. ಆದರೆ ಇದು ಕೇವಲ ಉತ್ಪ್ರೇಕ್ಷೆಯ ಮಾತಲ್ಲ. ಶ್ರೀವಿಜಯದಾಸರು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ ಮಾತು.

ತಿರುಮಲೆಯಲ್ಲಿ ಒಮ್ಮೆ ಬ್ರಹ್ಮೋತ್ಸವದ ವೇಳೆ ವೆಂಕಟರಾಯನು ಹೀಗೆಯ ಹಟವನ್ನು ಹಿಡಿದು ನಿಂತ. ಆಗ ಶ್ರೀವಿಜಯದಾಸರ ಹೃದಯದಿಂದ “ಸಾಗಿ ಬಾರಯ್ಯ ಭವರೋಗದ ವೈದ್ಯನೆ” ಎನ್ನುವ ಕೃತಿಯು ಹೊರಹೊಮ್ಮಿತು. ಅದರಲ್ಲಿ “ಬೊಮ್ಮ ಮೊದಲು ಮನುಜೋತ್ತುಮರು ಕಡೆಯಾಗಿ……” ಎಂದು ಅವರು ಸ್ತುತಿಸುತ್ತಾರೆ. ಭವರೋಗದ ವೈದ್ಯನ ಈ ರಥವನ್ನು ಎಳೆಯಲು ಮೊದಲ ಸ್ಥಾನ ಯಾವಾಗಲೂ ಬ್ರಹ್ಮದೇವರಿಗೆ ಮೀಸಲು. ಮಧ್ಯದಲ್ಲಿ ತಾರತಮ್ಯೋಕ್ತವಾದ ರೀತಿಯಲ್ಲಿ ದೇವತೆಗಳಿಗೆ ಮತ್ತು ಕೊನೆಯ ಸ್ಥಾನದಲ್ಲಿ ಮನುಷ್ಯರಲ್ಲಿ ಉತ್ತಮರಾದವರಿಗೆ ಅವಕಾಶವಿದೆ. ಎಂದು ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅವರ ಪ್ರಾರ್ಥನೆಯಾದರೂ ಎಷ್ಟು ವಿನಯದಿಂದ ಕೂಡಿದೆ ನೋಡಿ. ಅಪರೋಕ್ಷ ಜ್ಞಾನವು ಅವರಿಗೆ ಸಿದ್ಧಿಯಾಗಿದ್ದರೂ ಕೂಡ ವಿನಯವನ್ನು ಅವರು ಬಿಟ್ಟಿಲ್ಲ. “ನಾನು ಉತ್ತಮ ಮನುಷ್ಯರ (ಅಂದರೆ ವೈಷ್ಣವರ) ದಾಸರ ಅಧಮ ಸೇವಕನು. ನಿನ್ನನ್ನು ಕೇಳಿಕೊಳ್ಳುತ್ತಿದ್ದೆನೆ ಸಾಗಿ ಬಾರಯ್ಯ” ಎಂದು. ಅವರ ಮಾತಿಗೆ ದೇವನು ಕರಗದಿರುವನೇ? ಅವನು ತನ್ನ ಹಟವನ್ನು ಸಡಿಸಿಲಿಸಿದ, ಅವನನ್ನು ಹೊತ್ತ ರಥರೂಪಿ ಪ್ರಾಣದೇವರು ಮುನ್ನಡೆದರು.

ಶ್ರೀವಿಜಯದಾಸರ ಈ ಪ್ರತ್ಯಕ್ಷಾನುಭವದ ಮಾತುಗಳಿಗೆ ಶ್ರೀಆನಂದತೀರ್ಥ ಭಗವತ್ಪಾದರು ನೂರಾರು ವರ್ಷಗಳ ಮೊದಲೇ ಸಹಿಯನ್ನು ಹಾಕಿದ್ದಾರೆ. ಭಗವತ್ಪಾದರು “ದುಃಖದಿಂದ ಬಿಡುಗಡೆ ಹೊಂದಿದ ಮುಕ್ತರು ಯಾರು” ಎಂಬುದನ್ನು ಸರಳವಾಗಿ-ಸ್ಪಷ್ಟವಾಗಿ “….. ದೇವರ್ಷಿ ಪಿತೃ ಪ ನರಾ ಇತಿ ಮುಕ್ತಾಸ್ತು ಪಂಚಧಾ” ಎಂದು ಒಂದೇ ಸಾಲಿನಲ್ಲಿ ಹೇಳಿದ್ದಾರೆ. ದೇವತೆಗಳು, ಋಷಿಗಳು, ಪಿತೃಗಳು, ಚಕ್ರವರ್ತಿಗಳು ಮತ್ತು ನರರಲ್ಲಿ ಉತ್ತಮರು ದುಃಖದಿಂದ ಬಿಡುಗಡೆಯನ್ನು ಹೊಂದಿದ್ದಾರೆ ಎಂಬುದು ಈ ಮಾತಿನ ತಾತ್ಪರ್ಯ. ದುಃಖದಿಂದ ಬಿಡುಗಡೆಯನ್ನು ಹೊಂದಿದೆ ಈ ಐದು ಚೇತನರೇ ರಥವನ್ನು ಎಳೆಯುವವರು. ಈ ಐದನೆಯವರಾದ ನರರನ್ನೇ “ಮನುಜೋತ್ತುಮರು ಎಂದು ಶ್ರೀದಾಸರಾಯರು ಹೇಳಿದ್ದು. ಇಂತಹ ನಿಮ್ಮ ದಾಸರ ಸಂಬಂಧಿಗಳ ಮನೆಯಲ್ಲಿ ಕೊನೆಯ ಸ್ಥಾನದಲ್ಲಿ ನಿಂತಿರುವ ಸೇವಕನು ನಾನು” ಎಂಬುದಾಗಿ ಅವರು ಹೇಳಿದ್ದು. ಅಂತೂ ರಥವನು ಎಳೆವವರ ಸಾಲಿನಲ್ಲಿ ತಮಗೆ ಕೊನೆಯಸ್ಥಾನ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಈ ಮಾತು ರಥವನ್ನು ಎಳೆವ ಕಾರ್ಯಕ್ಕಿರುವ ಗುರುತ್ವವನ್ನು ಮತ್ತು ಶ್ರೀಹರಿಯ ಮುಂದೆ ಅಭಿಮಾನವನ್ನು ಬಿಡಬೇಕು ಎಂಬ ಸೂಕ್ಷ್ಮವನ್ನು ತಿಳಿಸಿಕೊಡುತ್ತದೆ.

ಈಗ ಒಪ್ಪುತ್ತೀರಲ್ಲವೆ ರಥವನು ಎಳೆವಲು ನಾವು ಪ್ರಯತ್ನಪೂರ್ವಕವಾಗಿ ಮುಂದೆ ಬರಬೇಕು ಎಂದು? ಹೀಗೆ ಮುಂದೆ ಬಂದ ತಕ್ಷಣ ನಾವೆಲ್ಲರೂ ಮನುಜೋತ್ತುಮರಾಗಿಬಿಡುವುದಿಲ್ಲ. ಆದರೆ ಗುರುಗಳ ಕೃಪೆಯಂತೂ ದೊರೆಯುತ್ತದೆ. ಬ್ರಹ್ಮಾದಿಗಳ ವಿಶೇಷ ಸನ್ನಿಧಾನವು ರಥಯಾತ್ರೆಯನ್ನು ಮಾಡಿಸುವ ಶ್ರೀಶ್ರೀಪಾದರಲ್ಲಿ ಇರುತ್ತದೆ. ಆ ಒಂದು ಸನ್ನಿಧಾನವಿಶೇಷವು ನಮ್ಮ ಪ್ರಾರಬ್ಧಗಳನ್ನು ಖಂಡಿತವಾಗಿಯೂ ಕಡಿಮೆ ಮಾಡಬಲ್ಲದು.

ಶ್ರೀಕೃಷ್ಣಮಠದಲ್ಲಿ ಕಾರ್ತಿಕಶುದ್ಧ ದ್ವಾದಶಿಯ ವಿಶೇಷಗಳು

ನಾಳೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ತುಳಸಿಯನ್ನು ಸ್ಥಾಪಿಸಿ ಕ್ಷೀರಾಬ್ಧಿಯನ್ನು ನಡೆಸಲಾಗುತ್ತದೆ. ಇದು ಕ್ಷೀರಸಾಗರದಲ್ಲಿ ಆಲದೆಲೆಯ ಮೇಲೆ ಮಲಗಿದ ಶಿಶುರೂಪಿ ಪರಮಾತ್ಮನ ಪೂಜೆ. ಈ ದಿವಸ ಸಂಸ್ಥಾನದ ಎಲ್ಲ ಪ್ರತಿಮೆಗಳಿಗೂ ಈ ಮಂಟಪದಲ್ಲಿಯೇ ಪೂಜೆಯು ನಡೆಯುವುದು. ಮಧ್ವಸರೋವರದಲ್ಲಿ ಇರುವ ಕಲ್ಲುಸೇತುವೆಗೆ ಮತ್ತೊಂದೆರಡು ಮರದ ಹಲಗೆಗಳನ್ನು ಜೋಡಿಸಿ ಅದನ್ನು ವಿಸ್ತರಿಸಲಾಗುತ್ತದೆ. ಇದರ ಮೇಲೆ ನಡೆದುಕೊಂಡು ಹೋಗಿ ಶ್ರೀಶ್ರಿಪಾದರು ಪೂಜೆಯನ್ನು ನೆರವೇರಿಸುವರು. ಇದಕ್ಕೆ ಸಂಬಂಧಪಟ್ಟ ವ್ಯವಸ್ಥೆಗಳೂ ಈಗಾಗಲೇ ಆಗಿವೆ.

ಸಂಜೆ ಭಗವಂತನು ಎದ್ದ ಸಂತಸವನ್ನು ದೀಪಗಳನ್ನು ಹಚ್ಚುವುದರ ಮೂಲಕ ಆಚರಿಸಲಾಗುವುದು. ರಥಬೀದಿಯ ಎರಡೂ ಬದಿಗಳಲ್ಲಿ ಇದಕ್ಕಾಗಿ ಕಟ್ಟಿಗೆಯ ದೀಪಸ್ಥಂಬಗಳನ್ನು ನೆಡಲಾಗಿರುತ್ತದೆ. ಶ್ರೀಪಾದರೇ ಮೊದಲಾಗಿ ಎಲ್ಲ ಭಕ್ತರು ಇವುಗಳ ಮೇಲೆ ದೀಪಗಳನ್ನು ಇರಿಸಿ, ರಥೋತ್ಸವದ ಸಮಯದಲ್ಲಿ ಅವುಗಳನು ಬೆಳಗಿಸುತ್ತಾರೆ. ಸಂಜೆ ಸುಮಾರು ೪ ಗಂಟೆಯಿಂದ ದೀಪಗಳನ್ನು ಇರಿಸುವ ಕಾರ್ಯವು ಮೊದಲಾಗುತ್ತದೆ. ನೀವುಗಳು ಉಡುಪಿಯಲ್ಲಿದ್ದರೆ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಬಹುದು.

ಪ್ರಬೋಧೋತ್ಸವ, ರಥೋತ್ಸವ ಮತ್ತು ಲಕ್ಷದೀಪೋತ್ಸವಗಳಿಗೆ ಸಂಬಂಧಪಟ್ಟಂತೆ ಕೆಲವು ಚಿತ್ರಗಳನ್ನು ಸೆರೆಹಿಡಿವ ಅವಕಾಶ ಇಂದು ದೊರಕಿತು. ಮಠದಲ್ಲಿಯೇ ಹಿಂದಿನ ವರ್ಷಗಳಿಂದಲೂ ಇರುವ ಮಣ್ಣಿನ ಹಣತೆಗಳೊಂದಿಗೆ ಹೊಸದಾಗಿಯೂ ಸಾವಿರಾರು ಹಣತೆಗಳನ್ನು ಪ್ರತೀಪರ್ಯಾಯದಲ್ಲಿ ಖರೀದಿಸಲಾಗುವುದು. ಅವುಗಳನ್ನು ಬಳಸುವ ಮೊದಲು ನೀರಿನಲ್ಲಿ ನೆನೆಸಿ ಇಡಲಾಗುತ್ತದೆ. ಹಾಗೆ ಮಾಡಿದಲ್ಲಿ ಹಣತೆಗಳು ಎಣ್ಣೆಯನ್ನು ಹೀರಿಕೊಳ್ಳವು. ಬತ್ತಿಯು ಮಾತ್ರವೇ ಎಣ್ಣೆಯನ್ನು ಹೀರಿಕೊಂಡು ಬಹಳ ಹೊತ್ತು ಬೆಳಗುತ್ತದೆ. ಮನೆಯಲ್ಲಾದರೆ ಈ ಹೊಸಹಣತೆಗಳನ್ನು ಬಕೆಟ್ಟಿನಲ್ಲಿ ಮುಳುಗಿಸಿ ಇಡಬಹುದು. ಆದರೆ ಉಡುಪಿಯಲ್ಲಿ ಆ ಕೆಲಸಕ್ಕೆ ಮಧ್ವಸರೋವರವೇ ಪ್ರಶಸ್ತ. ಆ ಹೊಸ ಹಣತೆಗಳನ್ನು ಮಧ್ವಸರೋವರದಲ್ಲಿ ಮುಳುಗಿಸುವ ಒಂದು ಪುಟ್ಟ ವಿಡಿಯೋ ಕೂಡ ಇದೆ.

ಈ ಎಲ್ಲ ಚಿತ್ರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ ಎನ್ನುವ ಆಲೋಚನೆಯಲ್ಲಿದ್ದೆ. ಆಗ ಈ ಒಂದು ಚಿಂತನೆಯನ್ನು ಶ್ರೀಗುರುರಾಜರು ತಲೆಯಲ್ಲಿ ಮೂಡಿಸಿದರು. ಉಡುಪಿಗೆ ಅಥವಾ ಮಂತ್ರಾಲಯಕ್ಕೆ ಅಥವಾ ತಿರುಪತಿ ಇತ್ಯಾದಿ ಕ್ಷೇತ್ರಗಳಲ್ಲಿ ನೀವು ಇದ್ದಾಗ ರಥೋತ್ಸವವದಲ್ಲಿ ಈ ಚಿಂತನೆಯೊಂದಿಗೆ ಭಾಗವಹಿಸಿದರೆ ಶ್ರೀಹರಿಯು ಖಂಡಿತವಾಗಿಯೂ ಸಂಪ್ರೀತನಾಗುವನು.

ಸಾಗಿ ಬಾರಯ್ಯ ಹಾಡು

ಶ್ರೀವಿದ್ಯಾಭೂಷಣರ ಧ್ವನಿಯಲ್ಲಿ

ಶ್ರೀಅನಂತ ಕುಲಕರ್ಣಿಯವರ ಧ್ವನಿಯಲ್ಲಿ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

One Comment

  1. Akshay
    December 1, 2018
    Reply

    ತುಂಬಾ ಅರ್ಥಕಲ್ಪಿತ ಉಡುಪಿಯ ರಥೋತ್ಸವ.!!
    ನನಗೆ ಇರುವ ಒಂದು ಸಂಶಯವೆಂದರೆ ರಥೋತ್ಸವ ಶುರುವಾಗುವ ಮುನ್ನ ಅಷ್ಠಮಠಾಧೀಶರು ಒಟ್ಟಿಗೆ ಇರುತ್ತಾರೆ, ರಥ ತಮ್ಮ ತಮ್ಮ ಮಠಗಳಿಗೆ ಹತ್ತಿರ ಬಂದಂತೆ ಆಯಾ ಸ್ವಾಮಿಗಳು ತಮ್ಮ ಮಠಕ್ಕೆ ತೆರಳಿಬಿಡುತ್ತಾರಲ್ಲ ಏನಿದರ ವೈಶಿಷ್ಟ್ಯ?

Leave a Reply

This site uses Akismet to reduce spam. Learn how your comment data is processed.