ತುಂಗನಾಥನತ್ತ ಪಯಣ 4/4

ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ತುಂಗನಾಥನ ಆಸುಪಾಸಿನಲ್ಲಿ ಇದ್ದೆ.  ಅತಿ ಅನ್ನುವಷ್ಟು ಉದ್ದವಾದ ಅನುಭವವನ್ನು ಬರೆದದ್ದೂ ಆಯ್ತು.  ಆದರೆ ಕೊನೆಯ ಕಂತನ್ನು ಬರೆದಿಟ್ಟೇ 6 ತಿಂಗಳುಗಳು ಕಳೆದಿವೆ. ಪೋಸ್ಟ್ ಮಾಡಲು ವಿಪರೀತ ಸೋಮಾರಿತನವನ್ನು ಮಾಡಿದೆ. ಈ ಮಧ್ಯದಲ್ಲಿ ಅದೆಷ್ಟು ಕೋಟಿ ಗ್ಯಾಲನ್ನುಗಟ್ಟಲೆ ನೀರು ಮಂದಾಕಿನಿ ಅಲಕನಂದೆಯರಲ್ಲಿ ಹರಿದು ಹೋಗಿದೆಯೋ ಎಂದು ಆ ನೀರನ್ನು ಸಂಗ್ರಹಿಸಿಟ್ಟುಕೊಂಡಿರುವ ಅಲಕನಂದೆಯ ಗಂಡನಾದ ವರುಣನೇ ಬಲ್ಲ . ಅಂತೂ ಇವತ್ತಿಗೆ ಸಮಯ ಬಂದಿತು.

ಹಿಂದಿನ ಕಂತುಗಳು ಭಾಗ 1 | ಭಾಗ 2 | ಭಾಗ 3

ಆನಂದದತ್ತ ಮುನ್ನಡೆ

ತುಂಗನಾಥದ ದಾರಿ

ಜಗದೀಸನು ನನ್ನ ಮುಖದಲ್ಲಿ ಮಿನುಗಿ ಕ್ಷಣಾರ್ಧದಲ್ಲಿ ಮಾಯವಾದ ಆನಂದವನ್ನು ನೋಡಿ ಹೇಳಿದ. “ಸಿತಂಬರ್ ಮೆ ಅಯ್ಯೇಗಾ ತೋ ಖೂಬ್ ಬರಫ್ ಔರ್ ಚೌಖಂಬಾ ದೋನೋ ಮಿಲೇಗಾ”. ಹೂಂಗುಟ್ಟುತ್ತಾ ಮುನ್ನಡೆದೆ. ದೇವಸ್ಥಾನದ ಶಿಖರ ಕಾಣಿಸಿತು. ಮುನ್ನಡೆಯುತ್ತಿದ್ದಂತೆ ಅಲ್ಲಿಯೇ ಒಂದು ತಿರುವಿನಲ್ಲಿ ಒಬ್ಬ ಪಾಂಡಾ ಮಹಾಶಯನು ನನ್ನನ್ನು ನೋಡಿದ. ಅವನಿಗೆ ಕುರಿಯೇ ಸಿಕ್ಕಿತೆಂದು ಭಾವನೆ ಮೂಡಿತೆನಿಸುತ್ತದೆ. ಕುರಿಯನ್ನು ಕೇಳದೆಯೇ ಮಸಾಲೆಯನ್ನು ಅರೆಯಲು ಅಲ್ಲಿಯೇ ಇದ್ದ ಒಬ್ಬ ಅಂಗಡಿಯವನಿಗೆ ಹೇಳಿದ.

ಮದರಾಸಿ ಎಂದು ಕರೆದುಬಿಟ್ಟರೆ ಕಷ್ಟ ಎಂದು ಕುರಿಯೇ “ನಾನು ಬೆಂಗಳೂರಿನವನು” ಎಂದು ಹೇಳಿತು. “ಅಚ್ಛಾ, ತೋ ಆಪ್ ಬೆಂಗಲೌರ್ ಸೆ ಹೈ” ಎನ್ನುತ್ತಾ ಪೂಜಾಸಾಮಾಗ್ರಿಗಳನ್ನು ಹಿಡಿದುಕೊಂಡು ಹಿಂಬಾಲಿಸಲು ಅಪ್ಪಣೆ ಮಾಡಿ ಹೊರಟ. ಬ್ಯಾ ಬ್ಯಾ ಎನ್ನಲೂ ಆಗದೆ ಕುರಿಯು ಹಿಂಬಾಲಿಸಿತು. ಒಂದು ರೀತಿ ಲಾಭವೇ ಆಯಿತು. ಆ ಪುರೋಹಿತನು “ಇದು ಬದರಿಗೆ ಹೋಗುವ ಒಳದಾರಿ” ಎಂದು ಒಂದು ಕಾಲ್ದಾರಿಯನ್ನು ತೋರಿಸಿದ.ಅಲ್ಲಿಂದ ಒಂದು ೧೦-೧೫ ಮೆಟ್ಟಿಲುಗಳನ್ನೇರಿದರೆ ತುಂಗನಾಥನ ಮಂದಿರವನ್ನು ತಲುಪುತ್ತೇವೆ.

ತುಂಗನಾಥ – ಗೋಪೇಶ್ವರದ ಒಳ ದಾರಿ

ಈ ಬೆಟ್ಟದ ಮೇಲೆ 12073 ಅಡಿಗಳ ಎತ್ತರದ ಭಾಗದಲ್ಲಿ ಇದ್ದುದರಲ್ಲಿಯೇ ಒಂದು ಸಮತಟ್ಟಾದ ನೆಲದ ಮೇಲೆ ತುಂಗನಾಥನ ಮಂದಿರವನ್ನು ನಿರ್ಮಿಸಲಾಗಿದೆ. ಮಂದಿರವೆಂದರೆ ಬದರಿನಾಥದಷ್ಟು ದೊಡ್ಡದೇನಲ್ಲ. ಪುಟ್ಟ ದೇಗುಲ ಇದು. ಗಾಂಧಾರ ಶೈಲಿಯ ಸರಳಗೋಪುರ, ಅದರ ಕೆಳಗೆ ಅದಕ್ಕಿಂತಲೂ ಸರಳವಾಗಿ ಜೋಡಿಸಿದ ಹಾಸುಗಲ್ಲುಗಳ ಒಂದು ಕೋಣೆಯೇ ಮಂದಿರ. ಇಷ್ಟೆ ಈ ಮುದ್ದಾದ ಗುಡಿಯ ಕಟ್ಟಡ. ಗರ್ಭಗುಡಿಗೂ ಅದರ ಮುಂದಿರುವ ಮಂಟಪಕ್ಕೂ ಹೆಚ್ಚಿನ ಅಂತರವೇನಿಲ್ಲ. ಮಧ್ಯ, ಮೇಲ್ಭಾಗದಲ್ಲಿ ತೊಲೆಯಂತಹ ಒಂದು ಶಿಲೆ ಇದೆ. ಅದರ ಹಿಂಭಾಗ ಗರ್ಭಗುಡಿ, ಮುಂಭಾಗವೇ ಮಂಟಪ. ಇವಿಷ್ಟೇ ತುಂಗನಾಥನ ಸ್ಥಿರಾಸ್ತಿ. “ನಿಮ್ಮ ಆಸ್ತಿಯನ್ನು ತೆಗೆದುಕೊಂಡು ನಾನೇನು ಮಾಡಲಿ, ನನ್ನ ಹಿಂದೆ ಮುಂದೆಲ್ಲ ಜಗನ್ನಾಥನೇ ಕೊಟ್ಟಿರುವ ಅಮಲವಾದ ಹಿಮಾಲಯವೇ ಇರುವಾಗ” ಎನ್ನುತ್ತಿದ್ದಾನೆ ತುಂಗನಾಥ. ಅದ್ಭುತವಾದ ಪ್ರಕೃತಿಯದು. ಎತ್ತರದಿಂದ ನೋಡಿದಾಗ ಹಿಮಾಲಯವು ಚೆನ್ನಾಗಿ ಕಾಣುತ್ತದೆ ಎಂದು ಎಲ್ಲರಿಗಿಂತ ಎತ್ತರದಲ್ಲಿ ತಾನೇ ಕುಳಿತುಕೊಂಡಿದ್ದಾನೆ. ಹೌದು. ಇದು ಜಗತ್ತಿನ ಅತಿ ಎತ್ತರದಲ್ಲಿರುವ ಶಿವಾಲಯ.

ಮನೋನಿಯಾಮಕ ತುಂಗನಾಥನ ಮನೆಯಿದು.

ಸ್ಥಳೀಯ ಚರಿತ್ರೆ.

ಹೆಚ್ಚಿನೆಡೆಗಳಲ್ಲಿ ಹೇಳುವಂತೆ ಇಲ್ಲಿಯೂ ಮಹಾಭಾರತಕ್ಕೆ ತಾಗಿರುವಂತಹ ಒಂದು ಕಥೆಯನ್ನು ಹೇಳುವರು. ಆದರೆ ಪ್ರಾಜ್ಞರಿಗೆ ಈ ಕಥೆಯು ರುಚಿಸದು. ಇದು ಮಹಾಭಾರತದ ಪ್ರಕ್ಷಿಪ್ತವೇ ಆಗಿರಬೇಕೆಂದು ನನ್ನ ಭಾವನೆ.

ಪಾಂಡವರು ಸ್ವಬಾಂಧವರ ಹತ್ಯೆಯನ್ನು ಮಾಡಿ ರಾಜ್ಯವನ್ನೇನೋ ಪಡೆದುಕೊಂಡರು. ಆದರೆ ಅದರೊಂದಿಗೆ ಪಾಪವು ಕೂಡ ಸಂಚಯವಾಯಿತು. “ಆ ಪಾಪದ ನಿವಾರಣೆಗಾಗಿ ರುದ್ರನ ಮೊರೆ ಹೋಗಿರಿ” ಎಂದು ಕುಲದ ಹಿರಿಯರಾದ ಭಗವಾನ್ ವೇದವ್ಯಾಸರು ಹೇಳಿದರು. ಅದರಂತೆ ಅವರಲ್ಲೆರೂ ರುದ್ರನನ್ನು ಪ್ರಾರ್ಥಿಸಲು ಕೈಲಾಸಕ್ಕೆ ಬಂದರು. ಆದರೆ ರುದ್ರದೇವರಿಗೆ ಈ ಪಾಪಭರಿತರ ಸಹವಾಸ ಬೇಕಿದ್ದಿಲ್ಲ. ಹಾಗಾಗಿ ಎತ್ತಿನ ರೂಪವನ್ನು ಧರಿಸಿ ಗುಪ್ತವಾಗಿ ಬೇರೆ ಸ್ಥಳದಲ್ಲಿ ಅಡಗಿಕೊಂಡರು (ಗುಪ್ತಕಾಶಿ ಎಂದು ಈಗ ಅದನ್ನು ಕರೆಯುತ್ತಾರೆ). ಆದರೂ ಪಾಂಡವರು ರುದ್ರದೇವರನ್ನು ಬಿಡದೆ ಬೆಂಬತ್ತಿದರು. ಕೊನೆಗೆ ಎತ್ತಿನ ರೂಪದಲ್ಲಿಯೇ ಅವರನ್ನು ಹಿಡಿದುಕೊಂಡರೆ ಅವರು ತಮ್ಮ ಅಂಗಾಗಗಳನ್ನೇ ಕಳಚಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪ್ರಕಟಗೊಂಡರು. (ಕೆಲವರು ಎಮ್ಮೆಯ ರೂಪದಲ್ಲಿ ಎಂದೂ ಹೇಳುವುದುಂಟು) ಆ ಐದು ಸ್ಥಳಗಳೇ ಪಂಚ ಕೇದಾರಗಳು. ಈ ಐದೂ ಸ್ಥಳಗಳಲ್ಲಿ ಪಾಂಡವರು ರುದ್ರದೇವರಿಗಾಗಿ ಮಂದಿರವನ್ನು ನಿರ್ಮಿಸಿದರು ಎಂದು ಈ ಮಹಾತ್ಮ್ಯೆಯು ಹೇಳುತ್ತದೆ. ಹೀಗೆ ಬಾಹುಗಳು ಪ್ರಕಟವಾದ ಜಾಗವೇ ತುಂಗನಾಥ.

ಮಂದಿರಗಳನ್ನು ಪಾಂಡವರೇ ನಿರ್ಮಿಸಿರಬಹುದು, ಅವರು ರುದ್ರದೇವರನ್ನು ಕುರಿತು ತಪಸ್ಸನ್ನು ಮಾಡಿರಲೂ ಬಹುದು. ಹೋಗಿ ರುದ್ರದೇವರನ್ನು ಒಲಿಸಿ ಪಾಶುಪತವನ್ನು ಪಡೆ ಎಂದು ಅರ್ಜುನನಿಗೆ ಶ್ರೀಕೃಷ್ಣನೇ ಹೇಳಿರುವುದು ಇದೆ. ಆದರೆ ಭೀಮಸೇನದೇವರು ರುದ್ರದೇವರನ್ನು ಕುರಿತು ತಪಸ್ಸು ಮಾಡಿರುವುದರ ಬಗ್ಗೆ ಮಹಾಭಾರತದ ಶುದ್ಧಪಾಠ ಏನು ಹೇಳುತ್ತದೋ ನೋಡಬೇಕು. ಇತರ ಪಾಂಡವರೂ ತಪಸ್ಸು ಮಾಡಿದ್ದಾರೆ ಎಂದೇ ಭಾವಿಸೋಣ. ಆದರೆ ಪಾಪಲೇಪವಾಯಿತು ಎನ್ನುವ ಅಭಿಪ್ರಾಯ ವೇದವ್ಯಾಸರಿಗೆ ಅಸಮ್ಮತವೇ ಆಗುತ್ತದೆ. ಯಾಕೆಂದರೆ “ಯುದ್ಧವನ್ನು ರಾಜ್ಯದಾಹದಿಂದ ಮಾಡದೆ, ಕೇವಲ ಅಧರ್ಮವನ್ನು ಶಿಕ್ಷಿಸಬೇಕೆಂಬ ನಿನ್ನ ಕರ್ತವ್ಯರೂಪದಿಂದ ಮಾಡು, ಲಾಭಾಲಾಭ ಜಯಾಜಯಗಳ ಚಿಂತೆಯನ್ನು ನನಗೆ ಬಿಡು. ನೀನು ಯುದ್ಧ ಮಾಡುತ್ತಿರುವವನು ಎಂದರೆ ಅದು ನಿನ್ನ ಅಜ್ಞಾನ. ವಾಸ್ತವವಾಗಿ ನಾನು ನಿನ್ನೊಳಗೆ ಇದ್ದು ಯುದ್ಧ ಮಾಡಿಸುತ್ತಿದ್ದೇನೆ” ಎಂದು ಹೃದಯಕ್ಕೆ ಮುಟ್ಟುವಂತೆ ತಿಳಿಹೇಳಿ, ಕೃಷ್ಣನೇ ಅಲ್ಲವೇ ಯುದ್ಧ ಮಾಡಿಸಿದ್ದು? “ಕರ್ತ್ಯವ್ಯಪ್ರಜ್ಞೆಯಿಂದ ಮಾಡಿದಾಗ ಪಾಪದ ಲೇಪವೆಲ್ಲಿಯದು” ಎಂದು ಕೂಡ ಅವನೇ ಹೇಳಿರುವಾಗ ಪಾಂಡವರಿಗೆ ಪಾಪವು ಬರಲಿಲ್ಲ ಎಂದೇ ಆಗುತ್ತದೆ. ಇತರರು ತಪಸ್ಸು ಮಾಡಿದರೇನೋ ಆದರೆ ಭೀಮಸೇನರಾಯರು ಈ ಉದ್ದೇಶದಿಂದ ಖಂಡಿತಾ ತಪಸ್ಸು ಮಾಡಲಾರರು. ಅವರಿಗೆ ಪಾಪದ ಲೇಪವು ಸರ್ವಾಥಾ ಆಗದು. ಈ ಒಂದು ಅಂಶವು ಈ ಸ್ಥಳ ಮಹಾತ್ಮ್ಯೆಯಲ್ಲಿ ಬಲವಂತವಾಗಿ ಸೇರಿಸಲ್ಪಟ್ಟಿದೆ ಅಷ್ಟೆ. ಆದರೆ ಸ್ಥಳೀಯರಿಗೆ ಈ ವಾದವು ಹೇಗೆ ರುಚಿಸೀತು? ವಾದಿಸಿದರೆ ನಾವು ಏಟು ತಿನ್ನಬೇಕಾದೀತು. ನಾವು ಕುರಿಗಳಾಗುವುದಂತೂ ಸರಿಯೇ, ಆದರೆ ಏಟನ್ನೂ ತಿಂದು ಬಾಲವನ್ನೂ ತಿರುಚಿಸಿಕೊಳ್ಳುತ್ತಾಇಲ್ಲಿಯೇ ಜನರನ್ನು ಹತ್ತಿಸಿಕೊಂಡು ಓಡಾಡುವ ಕತ್ತೆಗಳೂ ಆಗಬಾರದು ಎನ್ನುವ ಕಳಕಳಿಯಿಂದಲೇ ಆಚಾರ್ಯರು ಕೇದಾರದ ದರ್ಶನವನ್ನು ನಿಷೇಧಿಸಿದರೆನಿಸುತ್ತದೆ. ಕಮ್ಯುನಿಸ್ಟರೂ, ರ‍್ಯಾಶನಲಿಸ್ಟುಗಳೂ ಹೆಚ್ಚಾಗಿರುವ ಕೇರಳ, ಆಂಧ್ರ ಹಾಗು ಬಂಗಾಲದ ಕೆಲಭಾಗದ ಭೇಟಿಯನ್ನು ನಿಷೇಧಿಸಿರುವುದೂ ಕೂಡ ಇದೇ ಅಭಿಪ್ರಾಯದಲ್ಲಿ ಇರಬೇಕು.

“ಹಾಗಿದ್ದರೆ ನೀನ್ಯಾಕೆ ಈ ಊರಿಗೆ ಹೋದೆ” ಎಂದು ನೀವು ಕೇಳಬಹುದು. ನನ್ನ ಸಮಾಧಾನವಿಷ್ಟು. ಆಚಾರ್ಯರು ಕೇದಾರದ ದರ್ಶನಕ್ಕೆ ಮಾತ್ರ ನಿಯಂತ್ರಣವನ್ನು ಹೇರಿದ್ದಾರೆ, ತುಂಗನಾಥಕ್ಕೆ ಅಲ್ಲವಲ್ಲ ಎನ್ನುವ ಅಭಿಪ್ರಾಯದಲ್ಲಿ ನಾನು ಹೋಗಿಬಂದೆ. ಒಂದು ವೇಳೆ ಇದೂ ಕೂಡ ತಪ್ಪಾದಲ್ಲಿ ಮಹಾದೇವರೇ ನನ್ನ ಮನಸ್ಸನ್ನು ಶುದ್ಧಿಮಾಡಲಿ ಎಂದು ನೈಜವಾದ ಪ್ರಾರ್ಥನೆಯನ್ನು ಮಾಡುತ್ತೇನೆ.

ಶುದ್ಧಿ ಎನ್ನುವ ಮಾತು ಬಂದಾಗ ಈ ಸ್ವಾರಸ್ಯವು ನೆನಪಾಯಿತು. ತುಂಗನಾಥದ ಸುತ್ತಮುತ್ತಲಿರುವ ಪರಿಸರವು ಸ್ಪಟಿಕಸದೃಶವಾದ ಶುದ್ಧತೆಯನ್ನು ಹೊಂದಿದೆ. ಮಾನವಸ್ಪರ್ಷಕ್ಕೆ ಹೊರತಾದ ಪರಿಶುದ್ಧತೆಯು ಸದಾ ಇಲ್ಲಿ ನೆಲೆಮಾಡಿರುತ್ತದೆ. ಸನ್ನಿಧಿಯ ಸುತ್ತಮುತ್ತ ಸದಾಕಾಲ ಮೋಡಗಳ ಆಟ ನಡೆದೇ ಇರುತ್ತದೆ. ನಾನು ಹೋದಾಗ ಗುಡಿಯ ಹೊರಗೆ ಸುಮಾರು ೨೫-೩೦ ತಾಮ್ರದ ತಂಬಿಗೆಗಳನ್ನು ಇಟ್ಟಿದ್ದರು. ಆ ಎಲ್ಲ ತಂಬಿಗೆಗಳೂ ನೀರಿನಿಂದ ತುಂಬಿದ್ದವು. ಯಾರೋ ಹಿಡಿದಿಟ್ಟ ನೀರಲ್ಲ ಅದು. ಮೋಡಗಳ ಕಣಗಳಿಂದ ತಾವಾಗಿಯೇ ಬಸಿದು ತುಂಬಿರುವಂತಹವು!. ನೋಡಲು ಮಜವಾಗಿ ಕಂಡಿತು. ಅದರ ಹಿಂದೆಯೇ ನಮ್ಮ ಅಕ್ಕ ಮತ್ತು ಭಾವ ಬಂದಿದ್ದರೆ! ಎಂದೆನಿಸಿತು. ಇದಕ್ಕಿಂತಲೂ ಮಡಿಯ ನೀರು ಎಲ್ಲಿ ಸಿಕ್ಕೀತು ಅವರಿಗೆ? ನೀರಿಗೆ ಇರಲಿ, ಅವರಿಗೂ ಮೈಲಿಗೆ ಆಗುವ ಭಯವೇ ಇಲ್ಲ ಇಲ್ಲಿ. ಯಾರಾದರೂ ಎಷ್ಟು ಬಾರಿ ಮುಟ್ಟಿದರೂ ಮರುಕ್ಷಣದಲ್ಲಿಯೇ ಮೋಡಗಳ ಮಧುಪರ್ಕ ರೆಡಿಯೇ ಇರುತ್ತವೆ ಅವರನ್ನು ಮೀಯಿಸಲು! ಭಾವನ ಜಪಯಜ್ಞಕ್ಕೂ ಇದು ಅತ್ಯಂತ ಶ್ರೇಯಸ್ಕರವಾದ ಸ್ಥಳ. ಅಕ್ಕನಿಗಂತೂ ಪಾತ್ರೆ ತೊಳೆಯಲು ಯಥೇಚ್ಛವಾಗಿ ನೀರು, ಗ್ವಾಮಾ ಹಚ್ಚಲಿಕ್ಕೆ “ಯಥಾ+ಉಚಿತ” ಷಗಣಿಯೂ ಸಿಗುವುದು. ಯಾರೋ ಮುಟ್ಟಿದರು ಎನ್ನುವ ಸಂಶಯಕ್ಕೆ ಆಸ್ಪದವೇ ಇಲ್ಲ. “ಅಯ್ಯೋ ಇಲ್ಲಿ ಮನೆ ಮಾಡುವುದನ್ನು ಬಿಟ್ಟು ಚಾಮರಾಜಪೇಟೆಯಲ್ಲಿ ಮಾಡಿದ್ದಾರಲ್ಲ” ಎಂದು ಕ್ಷಣಕಾಲ ಮರುಗಿದೆ.

ತುಂಗನಾಥನ ತಂಬಿಗೆಗಳು

ಸನ್ನಿಧಾನ ವಿಶೇಷ

ದೇವರ ಸನ್ನಿಧಿಯಲ್ಲಿ ಒಳಗೆ ಹೆಜ್ಜೆ ಇಡುತ್ತಿದ್ದ ಹಾಗೆಯೇ ಹೇಳಲಾಗದ ಒಂದು ದೈವಿಕ ಅನುಭವವಾಯಿತು. ಕೇವಲ ವೈಬ್ರೇಶನ್ ಎಂದು ಹೇಳಿ ಅದಕ್ಕೆ ಅಪಚಾರ ಮಾಡಲಾರೆ. ಸಹಸ್ರಾರು ವರ್ಷಗಳ ದೈವೀ ಮಹತ್ವ ಅಲ್ಲಿ ಕೆನೆಗಟ್ಟಿದೆ ಎಂದು ಹೇಳಿದರೂ ಕಡಿಮೆಯೇ ಆದೀತು. ಸನ್ನಿಧಾನದ ಪ್ರಾಚೀನ ಶಕ್ತಿ ನನಗಂತೂ ಅನುಭವಕ್ಕೆ ಬಂತು. ಬಹಳ ಮಂಜುಲವಾದ ಪ್ರಕೃತಿಯಿಂದ ಕೂಡಿರುವ ಸನ್ನಿಧಾನವದು. ದೇಗುಲದ ಒಳಗೆ ನೀರು ಒಸರಿ ಒಸರಿ ನೆಲವೆಲ್ಲ ಒದ್ದೆಯಾಗಿತ್ತು. ಶಿವಲಿಂಗವು ವೈಪರೀತ್ಯದಿಂದ ಕೂಡಿರುವ ಹವಾಮಾನದ ಮಧ್ಯ ಇರುವುದರಿಂದಲೋ ಏನೋ ಒರಟಾಗಿ ಇರುವುದು. ಆದರೆ ಶಿಥಿಲವೇನಲ್ಲ. ಇಲ್ಲಿಆಗಮ ರೀತಿಯ ಪೂಜೆ ನಡೆಯುವುದು. ಸನ್ನಿಧಿಯ ಮಹಿಮೆಯು ಸ್ಪಷ್ಟವಾಗಿ ಗೋಚರವಾಗುವಂತೆ ಇದೆ. ನನಗಂತೂ ಹೇಳಲಾಗದಂತಹ ಸಂತೋಷವಾಯಿತು. ಅಷ್ಟೆತ್ತರಕ್ಕೆ ನಡೆದುಕೊಂಡು ಬಂದ ಶ್ರಮವೆಲ್ಲ ಪರಿಹಾರವಾಗುವಂತೆ ಇದೆ ಈ ಸನ್ನಿಧಿ. ಪಾಂಡಾ ಮಹಾರಾಜರನ್ನು ನೋಡಿ ಲಘುವಾಗಿ ಹೋಗಿದ್ದ ದೇಹವು ಮತ್ತೆ ರಘುವಾಗಿದ್ದು ಈ ಅಘೋರನ ದರ್ಶನವಾದಾಗಲೇ. ಅಪ್ಪ ಅಮ್ಮನ ಸಂಸ್ಕಾರಬಲದಿಂದಲೋ ಏನೋ ಆಚಾರ್ಯರು ಹೇಳಿಕೊಟ್ಟಿರುವ “ಧ್ಯೇಯಃ ಪಂಚಮುಖೋರುದ್ರೋ ಶುದ್ಧಸ್ಪಟಿಕಾಮಲಕಾಂತಿಮಾನ್….” ಶ್ಲೋಕವು ತಾನೇ ತಾನಾಗಿ ಹೃದಯದಲ್ಲಿ ಮೂಡಿತು. ಪುಣ್ಯಕ್ಕೆ ಆ ಸ್ಥಳೀಯ ಪಾಂಡಾ ಹಾಗು ದೇವಸ್ಥಾನದ ಅರ್ಚಕರು ಏನೂ ಕಿರಿಕಿರಿ ಮಾಡದೆ ಸಂತಸದಿಂದಲೇ ಮನಸ್ಸಿಗೆ ಬಂದಷ್ಟು ಹೊತ್ತು ಧ್ಯಾನಮಾಡಲು ಅನುವು ಮಾಡಿಕೊಟ್ಟರು. ನಂತರ ಅವರ ಸಮಾಧಾನಕ್ಕೊಂದಿಷ್ಟು ಪೂಜೆಯನ್ನೂ ಕೂಡ ಸಲ್ಲಿಸಿದ್ದಾಯಿತು.

ಶಿವಲಿಂಗದ ಹಿಂದೆ ಆದಿಶಂಕರರ ಚಪ್ಪಟೆಗಲ್ಲಿನ ಮೂರ್ತಿ, ಶಿವಪಂಚಾಯತನದ ಒಂದು ಪ್ರತಿಮೆಯು ಇರುವುವು. ಚಿಕ್ಕಪುಟ್ಟ ದೇವರುಗಳದ್ದೂ ಕೆಲವು ಮೂರ್ತಿಗಳನ್ನು ತೋರಿಸಿದರು ಪೂಜಾರರು. ಆದರೆ ನನ್ನ ಮನಸ್ಸು ಅಲ್ಲಿಯೇ ಇದ್ದ ಫಳಫಳ ಹೊಳೆಯುತ್ತಿದ್ದ ತಾಮ್ರದ ಪ್ರತಿಮೆಯೊಂದರ ಮೇಲೆ ನೆಟ್ಟಿತ್ತು. “ಯೇ ಭಗ್ವಾನ್ ಬೇದ್ಬ್ಯಾಸ್ ಜೀ ಹೈ” ಎಂದು ಪರಿಚಯಿಸಿದರು. ಚಿತ್ತಾಕರ್ಷಕವಾದ ಇದನ್ನು ಇವರು ವೇದವ್ಯಾಸದೇವರದ್ದೆಂದು ಹೇಳುತ್ತಾರೆ. ಅನುಸಂಧಾನ ಹಾಗೆ ಇದ್ದಲ್ಲಿ ಖಂಡಿತವಾಗಿಯೂ ಅದು ವೇದವ್ಯಾಸರೇ ಆಗಬಹುದು. ತೊಂದರೆಯೇನಿಲ್ಲ. ಆದರೆ ಪ್ರತಿಮೆಯ ರಚನೆಯನ್ನು ನೋಡಿದಾಗ ಮತ್ತೊಂದು ಜಿಜ್ಞಾಸೆ ಉಂಟಾಯಿತು. ಶುದ್ಧ ಗಾಂಧಾರಶೈಲಿಯ, ಧ್ಯಾನಮುದ್ರೆಯಲ್ಲಿ ಕುಳಿತಿರುವ, ಗುಂಗುರುಗೂದಲಿನ, ಯುವಾವಸ್ಥೆಯಲ್ಲಿರುವ ಯೋಗಿಯೊಬ್ಬನ ಪ್ರತಿಮೆಯದು. ಪ್ರತಿಮೆಯ ಹಿಂದೆ ಸುಂದರವಾದ ಪ್ರಭಾವಳಿಯೂ ಇದ್ದ ನೆನಪು ಇದೆ. ನೂರಾರು ವರ್ಷಗಳ ಹಿಂದೆ ಇಲ್ಲೆಲ್ಲ ಬೌದ್ಧರ ಪ್ರಭಾವ ಇತ್ತು ಎನ್ನುವ ಹಿನ್ನೆಲೆಯಲ್ಲಿ ಬೌದ್ಧಯೋಗಿ ಎಂತ ಊಹಿಸಿದೆ. ಆದರೆ ಪ್ರಾಮಾಣಿಕವಾಗಿಯೇ ಹೇಳಬೇಕೆಂದರೆ ಇದು ಜೈನರ ಮಹಾವೀರನ ಪ್ರತಿಮೆಯಂತೆ ಕಾಣುತ್ತದೆ.

ನಮಗೆ ಮಧ್ವವಿಜಯವು ವಿವರಿಸುವ ಪ್ರಕಾರ ವೇದವ್ಯಾಸರು ಅಪ್ರತಿಮ ಸೌಂದರ್ಯವುಳ್ಳವರೇ. ಆದರೆ ಜಟಾಧಾರಿಯಾಗಿಯೂ, ಗಡ್ಡವನ್ನು ಬಿಟ್ಟವರೂ, ಯೋಗಪಟ್ಟಿಕೆಯನ್ನು ಕಟ್ಟಿಕೊಂಡವರೂ ಆದ ಸ್ವರೂಪದಲ್ಲಿ ಕಾಣಿಸುವವರು. ಮಹಾಭಾರತದ ಪ್ರಕಾರ ಧೃತರಾಷ್ಟ್ರ ಹುಟ್ಟಿದಾಗ ವ್ಯಾಸರ ವಯಸ್ಸು ೬೬೦ವರ್ಷಗಳು!. (ವ್ಯಾಸಃ ಷಟ್ಶತವರ್ಶೀಯಃ ಧೃತರಾಷ್ಟ್ರಮಜೀಜನತ್) ಇಷ್ಟಾದರೂ ಇವರು ಮುದುಕರಲ್ಲ, ನಿಜ. ಆದರೆ ಯುವಕನಂತೆ ಅಂತೂ ಇವರ ಚಿತ್ರಣವಿಲ್ಲ. ಹಾಗೆಂದು ಹೇಳಿ ಈ ಚಿತ್ರಣಕ್ಕಿಂತಲೂ ವಿಭಿನ್ನವಾದ ಸ್ವರೂಪದಲ್ಲಿ ಅವರನ್ನು ನಾವು ಕಾಣುವುದು ಅಸಾಧ್ಯ ಎಂದು ಹೇಳಲಾಗದು. ಚಿಕ್ಕ ಮಗುವಿನಂತೆಯೂ ವ್ಯಾಸದೇವನನ್ನು ಪೂಜಿಸಬಹುದು. ಆದರೆ ಶಾಸ್ತ್ರಗಳು ಹೇಳಿರುವುದಕ್ಕಿಂತ ಬೇರೆ ರೀತಿಯಲ್ಲಿ ಚಿಂತನೆ ಮಾಡುವಷ್ಟು ಭಕ್ತಿ ಹಾಗು ಜ್ಞಾನವಿದ್ದರೆ ಮಾತ್ರ ಅದು ಸಾಧ್ಯವೇನೋ. ಒಂದು ವೇಳೆ ಶಿಲ್ಪಕಾರನು ಈ ಒಂದು ಅನುಸಂಧಾನದಲ್ಲಿಯೇ ಹೀಗೆ ವಿಭಿನ್ನವಾದರೀತಿಯಲ್ಲಿ ವೇದವ್ಯಾಸದೇವರ ಪ್ರತಿಮೆಯನ್ನು ನಿರ್ಮಿಸಿರುವುದೇ ಆದಲ್ಲಿ ತುಂಗನಾಥದಲ್ಲಿ ಇರುವ ವ್ಯಾಸರ ಪ್ರತಿಮೆಯು ಅಪೂರ್ವವಾದುದು ಎನ್ನುವುದರಲ್ಲಿ ಸಂದೇಹವಿಲ್ಲ. ಆಕರ್ಷಕವಾದ ಆ ಪ್ರತಿಮೆಯ ಫೋಟೋ ತೆಗೆದುಕೊಳ್ಳಲು ಪರವಾನಗಿ ದೊರೆಯಲಿಲ್ಲ. ಈ ಒಂದು ದರ್ಶನದ ಕಾರಣರಾದ ಶ್ರೀಗುರುರಾಜರ ಅಂತರ್ಯಾಮಿಯಾದ ಶಿವಾಂತರ್ಯಾಮಿ ಮಧ್ವರ ಹೃದಯವಾಸಿಯಾದ ಶ್ರೀವೇದವ್ಯಾಸದೇವರನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಅಲ್ಲಿಂದ ಹೊರಬಂದೆ.

ಸೇವೆ ಇತ್ಯಾದಿ

ದೇವಾಲಯದಲ್ಲಿ ರುದ್ರಾಭಿಷೇಕ, ಪಂಚಾಮೃತ, ನೈವೇದ್ಯ ಇತ್ಯಾದಿ ಸೇವೆಗಳನ್ನು ನಡೆಸುತ್ತಾರೆ. ಪಕ್ಕದಲ್ಲಿಯೇ ಪಾಕಶಾಲೆಯಿದೆ. ಅದಕ್ಕೆ ಹೊಂದಿಕೊಂಡೇ ಊಟದ ಹಜಾರವೂ ಇದೆ. ಇಷ್ಟವಿದ್ದವರು ಪ್ರಸಾದವನ್ನು ಸ್ವೀಕಾರ ಮಾಡಿಬರಬಹುದು.

ಹಿಮಾಲಯದ ಎಲ್ಲ ದೇವಸ್ಥಾನಗಳು ಚಳಿಗಾಲದವರೆಗೆ ಮಾತ್ರ ತೆರೆದಿರುತ್ತವೆ. ಚಳಿಗಾಲದ ಪ್ರಾರಂಭದಲ್ಲಿ ಮೂಲವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಿ, ಅಖಂಡ ದೀಪದಸ್ಥಾಪನೆ ಮಾಡಿ ತೆರೆಯನ್ನುಎಳೆಯುತ್ತಾರೆ. ಇದಕ್ಕೆ ಪಟಬಂಧ್ ಎನ್ನುತ್ತಾರೆ. ಅಲ್ಲಿಂದ ಮುಂದೆ ಆರು ತಿಂಗಳುಗಳ ಕಾಲ ಹಿಮಬೀಳದ ಜಾಗದಲ್ಲಿ ದೇವರ ಉತ್ಸವವಿಗ್ರಹಕ್ಕೆ ಪೂಜೆ ನಡೆಯುತ್ತದೆ. ಚೋಪಟಾದ ಸಮೀಪ ಇರುವ ಮಕ್ಕುಮಠ್ ಎನ್ನುವ ಊರಿನಲ್ಲಿ ನಮ್ಮ ಈ ತುಂಗರಾಯನ ಉತ್ಸವವಿಗ್ರಹವು ಚಳಿಗಾಲದ ಪೂಜೆಯನ್ನು ಸ್ವೀಕರಿಸುತ್ತವೆ.

ತುಂಗನಾಥ ಮಾತ್ರವಲ್ಲ, ಈ ಪ್ರಾಂತ್ಯದಲ್ಲಿರುವ ಎಲ್ಲ ಪ್ರಸಿದ್ಧ ದೇಗುಲಗಳ ಆಡಳಿತವು ಕೇದಾರನಾಥ-ಬದರೀನಾಥ ಸೇವಾ ಸಮಿತಿಗೆ ಒಳಪಟ್ಟಿದೆ. ಈ ದೇವಸ್ಥಾನದ ಬಳಿಯೇ ಒಂದು ಕಲ್ಲಿನ ಮಂಟಪದಲ್ಲಿ ಈ ಸಮಿತಿಯ ಪ್ರತಿನಿಧಿಯೊಬ್ಬರು ಕುಳಿತು ಅಧಿಕೃತವಾಗಿ ದಾನಗಳನ್ನು ಸ್ವೀಕರಿಸಿ ರಸೀದಿಯನ್ನು ಕೊಡುತ್ತಾರೆ. ಮನಸ್ಸಿಗೆ ತೋಚಿದಷ್ಟು ದೇಣಿಗೆಯನ್ನು ಕೊಡಬಹುದು. ಅನ್ನದಾನಕ್ಕಾಗಿ ದಾನ ಸಲ್ಲಿಸುವುದು ಹೆಚ್ಚಿನ ಜನರಿಗೆ ವಾಡಿಕೆ.

ಮುಖ್ಯ ಮಂದಿರದ ಹೊರಗೆ ಪಾರ್ವತೀದೇವಿಗೆ ಒಂದು ಆಲಯವುಂಟು. ಇದರ ಮುಂದೆ ಚಿಕ್ಕಚಿಕ್ಕ ಕಪಾಟುಗಳಂತಹ ಗುಡಿಗಳನ್ನು ನಿರ್ಮಿಸಿ ಕ್ಷೇತ್ರಪಾಲಕರು ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ತುಂಗನಾಥನ ಬಂಟನಾದ ಭೂತನಾಥನಿಗೊಂದು ಸ್ವಲ್ಪ ದೊಡ್ಡ ಗುಡಿಯುಂಟು. ಈ ಎಲ್ಲ ದೇವತೆಗಳಿಗೆ ಪೂಜೆಯಾದ ನಂತರ ಒಂದಿಷ್ಟು ಪ್ರಸಾದವನ್ನು ಅಲ್ಲಿಯೇ ಇರುವ ಹಿಮಾಲಯದ ಕಾಗೆಗಳಿಗೆ ಉಣಬಡಿಸುತ್ತಾರೆ. ಈ ಕಾಗೆಗಳ ಗಾತ್ರಮಾತ್ರ ಸ್ವಲ್ಪ ದಂಗುಬಡಿಸುವಷ್ಟು ದೊಡ್ಡದು. ಕೆಲವು ಕಾಗೆಗಳಂತೂ ಹಾರಾಡುತ್ತಿರುವ ಕಪ್ಪು ರಗ್ಬೀ ಚೆಂಡಿನಂತೆ ಕಂಡವು. ಪ್ರಸಾದವನ್ನು ತಿಂದು ತಿಂದು ಹಾಗಾಗಿದ್ದವೋ ಏನೋ ಗೊತ್ತಿಲ್ಲ. ಪ್ರಾಯಶಃ ಚಳಿಗಾಲದ ೬ ತಿಂಗಳು ಏನೂ ಸಿಗದೇ ಇದ್ದರೂ ಈಗ ತಿಂದ ಆಹಾರವನ್ನೇ ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ಕಡಿಮೆ ಆಹಾರದಲ್ಲಿ ಜೀವಿಸಲೆಂದು ಈ ವ್ಯವಸ್ಥೆ ಇದ್ದರೂ ಇರಬಹುದು. ಅಂತೂ ತುಂಗನಾಥನು ಇವುಗಳ ಯೋಗಕ್ಷೇಮವನ್ನೂ ವಹಿಸಿಕೊಂಡಿದ್ದಾನೆ. ಒಂದು ಚಿಕ್ಕ ಮಂಡಕ್ಕಿಚೀಲದ ಗಾತ್ರದ ಒಂದು ಕಾಗೆಯನ್ನು ಸಹ ನೋಡಿದೆ. ದಿಗಿಲುಗೊಂಡ ನನ್ನ ಮುಖವನ್ನು ನೋಡಿ ಪುರೋಹಿತರು “ಯೆ ಹೀ ಹೈ ಕಾಕ್ ಭುಸುಂಡೀ, ಕುಛ್ ಖಿಲಾಯಿಯೇ ಇಸೆ” ಎಂದರು. ಕಾಗೆಗೆ ತಿಂಡಿ ಹಾಕಲು ನಂದೇನೂ ಅಭ್ಯಂತರವಿರಲಿಲ್ಲ. ಆದರೆ ನೈಸರ್ಗಿಕವಾಗಿ ಜೀವಿಸುವ ಇವುಗಳಿಗೆ ಅನೈಸರ್ಗಿಕವಾದ ಬಿಸ್ಕೀಟು ಪಸ್ಕೀಟು ಹಾಕಲು ಮನಸ್ಸೊಪ್ಪಲಿಲ್ಲ. ಆದರೆ ಸುಮ್ಮನೆ ನಿಂತಿದ್ದರೆ ನನ್ನ ಟೋಪಿಯನ್ನೇ ಎಳೆದುಕೊಂಡು ಹೋದರೆ ಕಷ್ಟ ಎಂದು ಮುನ್ನಡೆದೆ.

ಪಾಂಡಾ ಕೇಳಿದ “ಎಲ್ಲಿ ಹೊರಟಿರಿ”?, “ಚಂದ್ರಶಿಲಾ ಪರ್ವತಕ್ಕೆ” ಎಂದೆ. ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ  ಈ ಶ್ಲೋಕವು ಸ-ಮಂಜ-ಸವೇ  ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.

ಚಂದ್ರಶಿಲಾ

ಚಂದ್ರಶಿಲಾ ಎನ್ನುವುದು ಈ ಪರ್ವತದ ತುತ್ತ ತುದಿ. ತುಂಗನಾಥನ ಮಂದಿರದಿಂದ ಅಂದಾಜು ಮತ್ತೊಂದು ಸಾವಿರ ಅಡಿ ಮೇಲೆ ಹತ್ತಿದರೆ ಈ ಸ್ಥಳವು ಸಿಗುತ್ತದೆ. ಅತ್ಯಂತ ದುರ್ಗಮವೇನಲ್ಲ. ರುದ್ರಮನೋಹರವಾಗಿದೆ.. ಕಡಿದಾದ ರಸ್ತೆ, ಚಿಕ್ಕ ಚಿಕ್ಕ ಝರಿಗಳು, ಸಹಸ್ರಾರು ಪುಟ್ಟಪುಟ್ಟ ಹೂವುಗಳ ಮಧ್ಯದಲ್ಲಿ ನಡೆದು ಕೊಂಡು ಹೋಗಬೇಕು. ಹತ್ತಿ ಇಳಿದು ಬರಲು ವಯಸ್ಕರಿಗೆ ಸುಮಾರು ೩+ ಗಂಟೆಗಳ ಅವಕಾಶ ಬೇಕು. ಮುದುಕರು ಕೇವಲ ಹೋಗಬಹುದು ಅಷ್ಟೇ

ಚಂದ್ರಶಿಲಾ ಪರ್ವತದ ತುದಿಗೆ ಹೋಗುವ ದಾರಿ
ಚಂದ್ರಶಿಲಾ ಪರ್ವತದ ತುದಿಗೆ ಹೋಗುವ ದಾರಿ
ಚಂದ್ರಶಿಲಾ ಪರ್ವತದ ತುದಿಗೆ ಹೋಗುವ ದಾರಿ
ಚಂದ್ರಶಿಲಾ ಪರ್ವತದ ತುದಿಯಲ್ಲಿ ಇರುವ ಗಂಗಾ ಮಂದಿರ

ಸಂಪೂರ್ಣ ತುದಿ ಮುಟ್ಟುವ ಮೊದಲು ಎತ್ತರವಾದ ಒಂದು ಸ್ಥಳದಲ್ಲಿ ಗಂಗಾದೇವಿಗೆ ಒಂದು ಪುಟ್ಟ ಮಂದಿರವನ್ನು ನಿರ್ಮಿಸಿದ್ದಾರೆ. ವಾಸ್ತವದಲ್ಲಿ ಇದೇ ಈ ಪರ್ವತದ ಅತಿ ಎತ್ತರದ ಕೇಂದ್ರ. ಇಲ್ಲಿಂದ ಒಂದು ಚೂರು, ಅಂದರೆ ಒಂದು ೨೫ ಹೆಜ್ಜೆ ಇಳುಕಲಿನಲ್ಲಿ ನಡೆದರೆ ಒಂದು ಅತ್ಯಂತ ಅಪಾಯಕಾರಿಯಾದ ಪರ್ವತದ ಕೋಡು ಇದೆ. ಇದುವೆ ಚಂದ್ರಶಿಲಾ. ಇಲ್ಲಿ ಕೂಡ ಒಂದು ಪುಟ್ಟ ಅಮೃತಶಿಲೆಯ ಮಂಟಪದಲ್ಲಿ ಪಂಚಮುಖರುದ್ರನ ಲಿಂಗವಿದೆ. ತುಂಗನಾಥದಲ್ಲಿ ಕಾಣಿಸಿಕೊಂಡ ಪ್ರಶ್ನೆಗೆ ಉತ್ತರವು ಇಲ್ಲಿ ದೊರಕಿತು. ಇದಕ್ಕೇನೇ ತುಂಗನಾಥ ಎಂದಿದ್ದರೂ ಸರಿ ಆಗುತ್ತಿತ್ತೇನೋ. ಅಷ್ಟು ತುದಿಯಲ್ಲಿ ಇದೆ ಇದು. ಆದರೆ ಗಾಳಿಯ ಪ್ರಚಂಡ ವೇಗಕ್ಕೆ ಮಂಟಪವು ಧ್ವಸ್ತವಾಗಿ ಹೋಗಿ ಕೇವಲ ಲಿಂಗ ಮಾತ್ರವೇ ಉಳಿದುಕೊಂಡಿದೆ.

ಈ ಜಾಗಕ್ಕೂ ಎರಡು ಕಥೆಗಳಿವೆ. ರಾವಣನನ್ನು ಕೊಂದ ನಂತರ ಈ ಜಾಗದಲ್ಲಿ ರಾಮನು ತಪಸ್ಸನ್ನು ಮಾಡಿದ ಎನ್ನುವುದೊಂದು ಕಥೆ. ಚಂದ್ರನು ತಪಸ್ಸು ಮಾಡಿದ್ದ ಎನ್ನುವುದು ಇನ್ನೊಂದು ಕಥೆ. ಕಥೆಯ ಪ್ರಾಮಾಣ್ಯವೇನೇ ಇರಲಿ, ಜಾಗವು ಮಾತ್ರ ಅದ್ಭುತವಾದದ್ದು. ಈ ತುದಿಯಲ್ಲಿ ಒಂದು 25-30 ಜನರಷ್ಟೇ ಕೂಡಬಹುದಾದ ಸ್ಥಳಾವಕಾಶವಿದೆ. ಅಲ್ಲಿ ನಿಂತರೆ ಭಗವಂತನ ಸೃಷ್ಟಿಯ ಪರಿಚಯವು ಅಮೋಘವಾದ ರೀತಿಯಲ್ಲಿ ಆಗುವುದು. ಮಾನವರಿರಲಿ, ದೇವತೆಗಳೂ ಮೈಮರೆವ ಸೌಂದರ್ಯವು ಇಲ್ಲಿ ನಿಂತರೆ ಕಾಣುವುದು. ಚೌಖಂಬಾ, ತ್ರಿಶೂಲ್, ಬಂದರ್ ಪೂಂಛ್, ನಂದಾದೇವೀ, ಕೇದಾರಪರ್ವತ, ಶಿವಲಿಂಗ ಪರ್ವತ ಹೀಗೆ ಎಲ್ಲವುಗಳ ದರ್ಶನವೂ ಒಂದೆಡೆ ಆಗುತ್ತದೆ. ಚಳಿಗಾಲದಲ್ಲಿ ಈ ಪರ್ವತದ ಮೇಲೆ ಕುಳಿತು ಸೂರ್ಯೋದಯವನ್ನು ನೋಡಲು ಅತ್ಯಂತ ಪೈಪೋಟಿ ಇರುತ್ತದೆ. ಇದಕ್ಕೆಂದೆ ಮಧ್ಯರಾತ್ರಿ 2ಕ್ಕೆ ಟ್ರೆಕ್ಕಿಂಗ್ ಶುರುವಾಗುತ್ತದಂತೆ. ಮಳೆಗಾಲ ಮುಗಿದ ನಂತರ ಈ ಅದ್ಭುತವನ್ನು ನೋಡಲೆಂದೇ ವಿದೇಶೀ ಸಾಹಸಿಗಳು ಬಂದು ನೆರೆಯುತ್ತಾರೆ. ಇತ್ತೀಚೆಗೆ ನಮ್ಮ ದೇಶದ ಯುವಜನಾಂಗವೂ ಇತ್ತ ಆಕರ್ಷಿತವಾಗುತ್ತಿದೆ.

ನನ್ನದು ದುರ್ದೈವ ಎಂದು ಹೇಳಲು ಮನಸ್ಸಾಗದು. ಆದರೆ ನಾನು ಬಂದ ವೇಳೆಯೇ ಮಳೆಗಾಲವಾದ್ದರಿಂದ ನನಗೆ ಈ ತುದಿಯಲ್ಲಿಯೂ ಮೋಡಗಳ ಹೊರತು ಏನೂ ಕಾಣಿಸಲಿಲ್ಲ. ಅಲ್ಲಿಯೇ ಒಂದು ಹತ್ತು ನಿಮಿಷಗಳನ್ನು ಕಳೆದು ಹತ್ತಿದ್ದಕ್ಕಿಂತ ವೇಗವಾಗಿ ಇಳಿದು ಬಂದು ತುಂಗನಾಥನ ಮಂದಿರವನ್ನು ಸೇರಿಕೊಂಡೆ. ಧೋ ಎಂದು ಮಳೆ ಶುರು ಆಯಿತು.

ಉಳಿದುಕೊಳ್ಳುವ ವ್ಯವಸ್ಥೆ

ಒಂದೆರಡು ದಿನ ದೇವಸ್ಥಾನದ ಪರಿಸರದಲ್ಲಿಯೇ ಇರುವ ಇಚ್ಛೆಯಿದ್ದಲ್ಲಿ ಸಮಿತಿಯವರೇ ನಿರ್ಮಿಸಿದ ಕೋಣೆಗಳಲ್ಲಿ ಇರಬಹುದು. ಮೊದಲೇ ಕಾಯ್ದಿರಿಸಿಕೊಳ್ಳಬೇಕು. ಕೋಣೆಗಳು ಸ್ವಚ್ಛವಾಗಿಯೇ ಇದ್ದರೂ ಲಕ್ಸುರಿಯನ್ನು ನಿರೀಕ್ಷಿಸುವ ಜನರಿಗೆ ಅಲ್ಲ. ಓ.ಕೆ. ಎನ್ನುವ ಮಟ್ಟದವು. ಇನ್ನು ಎಲ್ಲಿಯೂ ಇದ್ದು ಬರುವ ಮನಸ್ತತ್ವ ಇರುವ ಜನರಿಗೆ ದೇವಸ್ಥಾನದ ಬಳಿಯೇ ಕಾಲೀಕಮಲೀ ಬಾಬಾ ಪಂಥದವರ ಧರ್ಮಶಾಲೆಯಿದೆ.

ಸಂದರ್ಶನಕ್ಕೆ ಸೂಕ್ತ ಸಮಯ

ದೇವರದರ್ಶನಕ್ಕೆ ಬರುವುದಾದರೆ ನಮ್ಮ ಬೇಸಿಗೆಯ ಸಮಯದಲ್ಲಿ ಬರಬೇಕು, ಪ್ರಕೃತಿಯ ದರ್ಶನಕ್ಕೆ ಬರುವುದಾರೆ ಇಲ್ಲಿನ ಚಳಿಗಾಲದಲ್ಲಿ ಬರಬೇಕು. ಡಿಸೆಂಬರ್ ಇಂದ ಫೆಬ್ರುವರಿಯ ತನಕ ಇಲ್ಲಿ ಚಳಿ ಮತ್ತು ಹಿಮದ ಆಟ ನಡೆದಿರುತ್ತದೆ. ಆ ಸಮಯದಲ್ಲಿ ಪ್ರಕೃತಿಪ್ರೇಮಿಗಳಿಗೆ ಹೇಳಿಮಾಡಿಸಿದಂತೆ ಇರುತ್ತದೆ ಇಲ್ಲಿಯ ಪ್ರಕೃತಿ. ಹಿಮದ ಮೇಲೆ ನಡೆಯುತ್ತಾ, ಹಿಮಾವೃತ ಪರ್ವತಗಳನ್ನು ನೋಡುವ ವೈಭವ ಆಗ. ಆದರೆ ಸಾಹಸಿಗಳ ದಂಡೇ ಇಲ್ಲಿ ನೆರೆದಿರುವ ಕಾರಣ ಮೊದಲೇ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಗಳೊಂದಿಗೆ ಬರುವುದು ಒಳ್ಳೆಯದು.

ವಾಪಸ್ಸು (ಬದುಕಿ) ಬಂದಿದ್ದು

ನಾನು ಚೋಪಟಾದಿಂದ ಹೊರಡುವ ದಿನ ಮಳೆ ನಿಂತಿತ್ತು. ಸರಸರನೆ ಅಲ್ಲಿಂದ ಹೊರಟೆ. ಊಖೀಮಠ, ರುದ್ರಪ್ರಯಾಗ ಇಲ್ಲೆಲ್ಲ ಕಡೆಗಳಿಂದ ಇಳಿದು ಹತ್ತಿ ಬೇರೆ ಬೇರೆ ಗಾಡಿಗಳ ಮೂಲಕ ಪ್ರಯಾಣ ಮಾಡುವ ದೆಸೆ ಬಂದೊದಗುವ ಭಯವಿತ್ತು. ಈ ಭಯವನ್ನು ಹೆಚ್ಚಿಸುವ ಘಟನೆಯೊಂದು ನನ್ನ ಕಣ್ಣೆದುರೇ ನಡೆಯಿತು. ಚೋಪಟಾದಿಂದ ಸ್ವಲ್ಪವೇ ಮುಂದೆ ಬಂದಿದ್ದೆ.  ನಾನು ಕುಳಿತ ಗಾಡಿಯ ಮುಂದೆ ಬಸ್ಸೊಂದು ಹೋಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಬಲಭಾಗದಲ್ಲಿ ಪರ್ವತವು ಜರಿದು ಟನ್ನುಗಟ್ಟಲೆ ಕೆಸರು ನಿಮಿಷಮಾತ್ರದಲ್ಲಿ ಸುರಿದು ಬಿಟ್ಟಿತು.  ಬಸ್ಸಿನ ಮೇಲೆ ಬೀಳದೆ ಆ ಕೆಸರೆಲ್ಲ ಬಸ್ಸಿನ ಪಕ್ಕದಲ್ಲಿ ಸುರಿದು ಬಸ್ಸನ್ನೇ ಪರ್ವತದ ಎಡಭಾಗದ ಅಂಚಿಗೆ ನೂಕಿಬಿಟ್ಟಿತು.  ಆದರೆ ದೈವಕೃಪೆ ಆ ಬಸ್ಸಿನ ಮೇಲೆ ಇತ್ತು. ತುದಿಗೆ ಜರಿದ ಬಸ್ಸು ಕೆಳಗೆ ಬೀಳದ ಹಾಗೆಯೇ ನಿಂತಿತು.  ರಾಯರು ನನ್ನನ್ನು ಆ ಸ್ಥಳದಿಂದ ಸಾಕಷ್ಟು ದೂರದಲ್ಲಿ ನಿಲ್ಲಿಸಿದ್ದರು. ಏನೂ ತೊಂದರೆಯಾಗದೆ ಜೀವದಿಂದುಳಿದೆ.  ಸ್ಥಳೀಯರು ಸಾಹಸ ಮಾಡಿ ಆ ಬಸ್ಸನ್ನು ಉಕ್ಕಿನ ಹಗ್ಗಗಳಿಂದ ಎಳೆದು ನಮಗೆಲ್ಲ ದಾರಿಮಾಡಿ ಕೊಟ್ಟರು. ಪುಣ್ಯಕ್ಕೆ ಎಲ್ಲೂ ಇಳಿಯದೆ ನಿರಂತರವಾಗಿ ಪಯಣಿಸಿ ಹರಿದ್ವಾರಕ್ಕೆ ಬಂದು ಮುಟ್ಟಿದೆ. ಮುಂದೆ ದೆಹಲಿ ಮಾರ್ಗವಾಗಿ ಊರಿಗೂ ಬಂದು ತಲುಪಿದೆ.

ನನ್ನ ಈ ಯಾತ್ರೆಗೆ ಧನಸಹಾಯ ಮಾಡಿದ ಆ ದಂಪತಿಗಳಿಗೆ ಚಿರಋಣಿ ನಾನು. ರಾಯರು, ತುಂಗನಾಥನು, ಮುಖ್ಯಪ್ರಾಣನು ಮತ್ತು ಅವನ ಅಪ್ಪನಾದ ಪರಮಮುಖ್ಯಪ್ರಾಣನು ಸಂತಸವನ್ನು ಕೊಡಲಿ.

ನನ್ನ ಈ ಯಾತ್ರೆಯ ಅನುಭವವು ನಿಮಗೆ ಸಂತಸವನ್ನು ಕೊಟ್ಟಿದೆ ಎಂದು ಭಾವಿಸುವೆ. ಬರಿ ಸಂತಸವನ್ನು ಮಾತ್ರವಲ್ಲ, ಒಂದು ಬಾರಿ ಆದರೂ ತುಂಗನಾಥನೆಡೆಗೆ ನಡೆಯುವಂತಹ ಪ್ರೇರಣೆ ನಿಮಗೆ ಮೂಡಿದಲ್ಲಿ ನನ್ನ ಹೃದಯವು ಆ ಮಂಜುಲವಾದ ಕುದುರೆಯ ಗಂಟೆಯಂತೆಯೇ ಕಿಣಿಕಿಣಿಸುವುದು.

ಚಿತ್ರ ಮಾಲೆ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ತುಂಗನಾಥನತ್ತ ಪಯಣ – ಭಾಗ 3/4

ತುಂಗನಾಥನ ದರ್ಶನದ ಅಪೇಕ್ಷೆಯು ನನಗೆ ಇದ್ದಿದ್ದು ನಿಜವೇ. ಆದರೆ ವಾಸ್ತವದಲ್ಲಿ ನಾನು ಅತಿ ಹೆಚ್ಚು ಉತ್ಸುಕನಾಗಿದ್ದು ಈ ಮಹಾಪರ್ವತದ ದರ್ಶನಕ್ಕಾಗಿ. ಚೌಖಂಬಾ ಎನ್ನುವುದು ಇದರ ಹೆಸರು. ಪರ್ವತಕ್ಕಿಂತ ಮೊದಲು ಈ ಹೆಸರು ನನಗೆ ಚೌಖಂಬಾ ಪ್ರಕಾಶನದ ಸಂಸ್ಕೃತಸಾಹಿತ್ಯದ ಪ್ರಕಟಣೆಗಳ ಮೂಲಕ ತಿಳಿದಿತ್ತು. ರಾಮ ಶಬ್ದವನ್ನು ಬಾಯಿಪಾಠ ಮಾಡುವ ಪುಸ್ತಕದ ಮೇಲೆ ನೋಡಿದ್ದೆ. ಎಷ್ಟೋ ವರ್ಷಗಳ ನಂತರ ಇದು ಸುಪ್ರಸಿದ್ಧ (ಆದರೆ ನನಗೂ ತಿಳಿದಿಲ್ಲದ 😉 ) ಹಿಮಪರ್ವತದ ಹೆಸರು ಎಂದು ಗೊತ್ತಾಗಿ ನೋಡುವ ಕುತೂಹಲ ಬೆಳೆಯುತ್ತಾ ಹೋಯಿತು. ಅಂತೂ ಇದು ಸುಮಾರು 15 ವರ್ಷಗಳ ಕನಸು ಎನ್ನಲು ಅಡ್ಡಿಯಿಲ್ಲ.

ಪರ್ವತದ ಫೋಟೋ ತೆಗೆಯಲಿಕ್ಕೆ ಮೋಡಗಳ ದೇವನಾದ ಪರ್ಜನ್ಯನು ಬಿಡಲೇ ಇಲ್ಲ. ಹಾಗಾಗಿ ಈ ಲೇಖನದಲ್ಲಿ ವಿಶೇಷ ಚಿತ್ರಗಳೇನೂ ಇಲ್ಲ.

ಗಂಗೋತ್ರಿಯ ಅಂಗಳದ ಸುತ್ತ

ಗಂಗೆಯು ದೇವಲೋಕದಿಂದ ಭೂಲೋಕಕ್ಕೆ ಧುಮುಕಿದ್ದು ಎಲ್ಲರಿಗೂ ಗೊತ್ತು. ಹಾಗೆ ಧುಮುಕಿದ ಜಾಗೆಯು ಇಂದು ಒಂದು ನೂರಾರು ಚದುರ ಮೈಲಿ ಹರಡಿಕೊಂಡಿರುವ ಒಂದು ಮಹಾ ಮಹಾ ಮಹಾ ಮಂಜುಗಡ್ಡೆ. ಇದನ್ನೇ ವೈಜ್ಞಾನಿಕವಾಗಿ ಹಿಮನದಿ ಎಂದು ಕರೆಯುತ್ತಾರೆ.  ಈ ಹಿಮನದಿಯ ಕೊರಕಲುಗಳ ಸಂದಿಯಿಂದ ಹೊರಬರುವ ನೂರಾರು ಚಿಲುಮೆಗಳೇ ಗಂಗಾನದಿಗೆ ಸ್ರೋತಗಳು. ಈ ಚಿಲುಮೆಗಳು ಹಾಗು ಹಿಮನದಿಯನ್ನು ಒಟ್ಟಾಗಿ ಗಂಗೋತ್ರಿ ಗ್ಲೇಸಿಯರ್ ಎಂದು ಕರೆಯುತ್ತಾರೆ. (ಪ್ರಮುಖವಾದ ಒಂದು ಧಾರೆಗೆ  ಗೋಮುಖವೆಂದು ಹೆಸರು. ಇದು ಗಂಗಾನದಿಯ ಮೂಲವೆಂದು ಹೇಳುತ್ತಾರೆ)  ಈ ಹಿಮನದಿಯನ್ನು  ಎತ್ತರೆತ್ತರದ ಅನೇಕ ಪರ್ವತಗಳು ಸುತ್ತುವರೆದಿವೆ. ಈ ಎಲ್ಲ ಪರ್ವತಗಳನ್ನು ಗಂಗೋತ್ರಿ  ಪರ್ವತಸಮೂಹ ಎಂದು ಕರೆಯಲಾಗುತ್ತದೆ. ಎಲ್ಲವುಗಳೂ ಒಂದಕ್ಕಿಂತ ಒಂದು ಭವ್ಯ ಹಾಗೂ ಮನೋಹರವಾಗಿವೆ. ಆದರೆ ಕೇದಾರಪರ್ವತ, ಶಿವಲಿಂಗ, ಭೃಗು, ಭಗೀರಥ,  ಮೇರು ಹಾಗು ಚೌಖಂಬಾ ಪರ್ವತಗಳ ಸೌಂದರ್ಯವು ಸುಪ್ರಸಿದ್ಧವಾಗಿವೆ. ಈ ಎಲ್ಲಾ ಪರ್ವತಗಳಲ್ಲಿ ಅತಿ ಎತ್ತರವಾಗಿ ಇರುವುದು ಚೌಖಂಬಾ. ಈ ಪರ್ವತಕ್ಕೆ ನಾಲ್ಕು ಶಿಖರಗಳು ಇವೆ. ಹೀಗಾಗಿಯೇ ಇದಕ್ಕೆ ಚೌಖಂಬಾ ಎನ್ನುವ ಹೆಸರು ಬಂದಿದೆಯೋ ಏನೋ. (ಚೌ= ನಾಲ್ಕು ಖಂಬಾ=ಕಂಬಗಳು). ಸರ್ಕಸ್ಸಿನ ಗುಡಾರದ ಮಧ್ಯ ನಾಲ್ಕು ಕಂಬಗಳನ್ನು ಚುಚ್ಚಿ ಅದನ್ನು ಎತ್ತಿ ನಿಲ್ಲಿಸಿದಾಗ ಅದು ತನ್ನ ಸುತ್ತಮುತ್ತಲಿರುವ ಚಿಕ್ಕಪುಟ್ಟ ಟೆಂಟುಗಳ ಮಧ್ಯ ಭವ್ಯವಾಗಿ ಹೇಗೆ ಕಾಣಿಸುವುದೋ ಅದೇ ರೀತಿ ಇದೆ ಚೌಖಂಬಾ ಪರ್ವತ.

ಚೌಖಂಬಾ ಮಹಾಶಿಖರ

ಈ ಪರ್ವತವೇ ಎಲ್ಲಕ್ಕೂ ಎತ್ತರವಾದರೂ ಇದಕ್ಕೆ ಇರುವ ನಾಲ್ಕೂ ಶಿಖರಗಳು ಒಂದೇ ಎತ್ತರದಲ್ಲಿ ಇಲ್ಲ. ಇವುಗಳನ್ನು ಚೌಖಂಬಾ 1, 2,3 ಹಾಗು 4 ಎಂದು ಗುರುತಿಸುತ್ತಾರೆ. 23410 ಅಡಿಗಳಷ್ಟು ಎತ್ತರವಿರುವ ಚೌಖಂಬಾ 1 ಎಲ್ಲಕ್ಕೂ ಎತ್ತರದ ಶಿಖರವು. ಉಳಿದವುಗಳು ಕ್ರಮವಾಗಿ 23196, 22949, ಹಾಗು 22847 ಅಡಿಗಳಷ್ಟು ಎತ್ತರವಿದ್ದು ಸಾಹಸಿಗಳಿಗೆ ಸವಾಲು ಹಾಕುತ್ತಾ ನಿಂತಿವೆ.

ಗಂಗೋತ್ರಿ ಹಿಮನದಿಯು ಬಹು ವಿಶಾಲವಾಗಿ ಹರಡಿಕೊಂಡಿದೆ ಎಂದು ತಿಳಿಯಿತಷ್ಟೆ. ಅದರ ಸುತ್ತಲೂ ಅನೇಕ ಪರ್ವತಗಳಿವೆ ಎಂದೂ ಗೊತ್ತಾಯಿತು. ಆದರೆ ಬೇರೆ ಬೇರೆ ಪರ್ವತಗಳನ್ನು ಏರಲು, ಅಥವಾ ಸಮೀಪಿಸಲು ಬೇರೆ ಬೇರೆ ಜಿಲ್ಲಾ ಕೇಂದ್ರಗಳ ಮೂಲಕ ಹಾಯ್ದು ಬರಬೇಕು. ಹಿಮಾಲಯದ ಸಂಕೀರ್ಣ ಭೂರಚನಯೇ ಇದಕ್ಕೆ ಕಾರಣವಾಗಿದೆ. ಭೌಗೋಳಿಕವಾಗಿ ಈ ಗ್ಲೇಸಿಯರ್ ಇರುವ ಪ್ರದೇಶವು ಉತ್ತರಕಾಶಿ ಜಿಲ್ಲೆಗೆ ಸೇರಿದೆ. ಈ ಚೌಖಂಬಾ ಪರ್ವತವು ಇರುವುದು ಗ್ಲೇಸಿಯರಿನ ಪೂರ್ವಭಾಗಕ್ಕೆ. ಈ ಭಾಗವು ಉತ್ತರಕಾಶಿಗಿಂತಲೂ ಚಮೋಲಿ ಜಿಲ್ಲೆಗೆ ಹತ್ತಿರ. ಪ್ರಸಿದ್ಧ ಬದರಿಕಾಶ್ರಮಕ್ಕೆ ಇದು ಪಶ್ಚಿಮ ದಿಕ್ಕಿನಲ್ಲಿದೆ.  ಯಾರಿಗಾದರೂ ಧೈರ್ಯ, ಸಾಮರ್ಥ್ಯ ಮತ್ತು ಅದೃಷ್ಟ ಮೂರೂ ಒಟ್ಟಿಗೆ ಇದ್ದರೆ ಪರ್ವತದ ಬುಡದಿಂದ ಬದರೀ ನಾರಾಯಣನ ಕ್ಷೇತ್ರಕ್ಕೆ ನಡೆದುಕೊಂಡೇ ಹೋಗಬಹುದು. ಈ ಮೂರರಲ್ಲಿ ಮೊದಲನೆಯದ್ದು ಇಲ್ಲದಿರುವವರು ಪ್ರಯತ್ನವನ್ನೇ ಮಾಡಲಾರರು. ಕೊನೆಯ ಎರಡು ಅಂಶಗಳು ಇಲ್ಲದಿರುವವರು ಬದರಿಯ ಬದಲು ನೇರವಾಗಿ ನಾರಾಯಣನ ಊರಿಗೇ ಹೋಗಬಹುದು.

ಅಲ್ಲಿಂದ ಬದರಿಗೆ ಬರುವುದು ಒಂದು ಕಡೆ ಇರಲಿ. ಅದು ನಮ್ಮಂಥ ಸಾಧಾರಣರಿಂದ ಆಗದ ಕೆಲಸ. ಆದ್ದರಿಂದ ಪರ್ವತದ ಕಡೆಗೆ ಹೋಗುವ ವಿಚಾರವನ್ನಷ್ಟೇ ನೋಡೋಣ.

ಹಿಮಾಲಯದ ಎಲ್ಲ ಪರ್ವತಗಳಂತೆ ಚೌಖಂಬಾ ಪರ್ವತವೂ ಕೂಡಾ ಕಷ್ಟಸಾಧ್ಯವಾದ ಹಾದಿಯುಳ್ಳದ್ದು.  ಕೇದಾರನಾಥ, ತುಂಗನಾಥ, ಪೌರಿ, ಔಲಿ, ಮಧ್ಯಮಹೇಶ್ವರ, ದೇವರಿಯಾ ತಾಲ್ ಹೀಗೆ ಅನೇಕ ಕಡೆಗಳಿಂದಲೂ ಇದರ ಶಿಖರ ನಮ್ಮ ದೃಷ್ಟಿಗೆ ಗೋಚರವಾಗುವಂತಹುದು. ಅದೃಷ್ಟವಿದ್ದಲ್ಲಿ ಹೃಷೀಕೇಶದಿಂದ 50 ಕಿಮೀ ದೂರ ಬಂದ ನಂತರ ಒಂದು ತಿರುವಿನಲ್ಲಿಯೂ ಕಾಣಿಸುತ್ತದೆ. ಆಗಸ ನಿರ್ಮಲವಾಗಿರಬೇಕು ಅಷ್ಟೇ. ಆದರೆ ಇಷ್ಟೆಲ್ಲ ಕಡೆಗಳಿಂದ ಕಾಣಿಸಿದರೂ ಸಹ ಈ ಪರ್ವತದ ಬುಡಕ್ಕೆ ಹೋಗಿ ಸೇರುವುದು ಅತ್ಯಂತ ಕಷ್ಟಕರ. ಚೆನ್ನಾಗಿ ಬಲ್ಲವರ ಪ್ರಕಾರ ಈ ಪರ್ವತದ ಮೇಲೆ ನಾಲ್ಕು ಕಡೆಗಳಿಂದ ಹತ್ತಬಹುದು. ಅದು ಪರ್ವತದ ಮೇಲೆ ಹೋಗುವ ಮಾತಾಯಿತು. ಆದರೆ ತುದಿಗೆ ಹೋಗುವ ಮೊದಲು ಪರ್ವತದ ಹತ್ತಿರವಾದರೂ ಹೋಗಬೇಕಲ್ಲ. ಅದಕ್ಕೆ ಈ ಲೇಖನದ ಮೊದಲ ಭಾಗದಲ್ಲಿ ಹೇಳಿದಂತೆ ರುದ್ರಪ್ರಯಾಗದ ಕವಲಿನ ಮೂಲಕ ಬದರೀನಾಥಕ್ಕೆ ತಲುಪಬೇಕು. ಯಾಕೆಂದರೆ ಚೌಖಂಬಾಕ್ಕೆ ಹೋಗುವ ದಾರಿಯ ಬಾಗಿಲು ಇರುವುದು ಅಲ್ಲಿಯೇ. ತುಂಗನಾಥನ ಬಳಿ ಸಿಗುವುದು ಪರ್ವತದ ಸುಂದರವಾದ ನೋಟ ಮಾತ್ರ.

ಬದರೀನಾಥದಿಂದ ಪೂರ್ವದಿಕ್ಕಿನಲ್ಲಿ ಮೂರು ಕಿಮೀ ದೂರದಲ್ಲಿ ಮಾಣಾ ಎಂಬುವ ಪುಟ್ಟ ಗ್ರಾಮವಿದೆ. ಇದು ಈ ಭಾಗದಲ್ಲಿ ಭಾರತದ ಕಡೆಯ ಜನವಸತಿ ಇರುವ ಹಳ್ಳಿ. ಇಲ್ಲಿಂದ ಮುಂದೆ ಉತ್ತರಕ್ಕೆ ತಿರುಗಿ ನಾರಾಯಣ ಪರ್ವತವನ್ನು ಬಳಸಿಕೊಂಡು ಬದರಿಗೆ ಸಮಾನಾಂತರವಾಗಿ ಪಶ್ಚಿಮದತ್ತ ಮುಂದೆ ಸುಮಾರು 25 ಕಿಲೋ ಮೀಟರುಗಳಷ್ಟು ಕಾಲ್ನಡಿಗೆಯಲ್ಲಿ ಸಾಗಬೇಕು.

ಇದು ಮಹಾ ದುರ್ಗಮವಾದ, ಜೀವಕ್ಕೆ ಸಂಚಕಾರ ತರಬಲ್ಲ ಹಿಮನದಿಗಳನ್ನು ದಾಟಿಕೊಂಡು ಹೋಗಬೇಕಾದ ರಸ್ತೆ. ಆದರೆ ದಾರಿಯಲ್ಲಿ ಅದ್ಭುತವಾದ ವಸುಧಾರಾ ಜಲಪಾತ, ಅಲ್ಲಿಂದ ಮುಂದೆ ಲಕ್ಷ್ಮೀವನ ಎಂಬ ಸುಂದರ ಕಾಡು ನಿಮಗೆ ಕಾಣ ಸಿಗುತ್ತವೆ.  ಇಲ್ಲಿಗೆ ಅರ್ಧ ದಾರಿ ಕ್ರಮಿಸಿದಂತಾಯ್ತು. ವಸುಧಾರಾ ಜಲಪಾತದಲ್ಲಿ ಚತುರ್ಮುಖ ಬ್ರಹ್ಮದೇವರು ತಪಸ್ಸು ಮಾಡಿ ಹಯಗ್ರೀವದೇವರಿಂದ ಜ್ಞಾನದ ಅನುಗ್ರಹವನ್ನು ಪಡೆದರು.  ಲಕ್ಷ್ಮೀವನದಲ್ಲಿ ಭೂರ್ಜ ಎನ್ನುವ ವೃಕ್ಷಗಳು ಇವೆ. ಈ ವೃಕ್ಷಗಳ ತೊಗಟೆಯು ಕಾಗದದಷ್ಟು ತೆಳ್ಳಗೆ ಇರುತ್ತವೆ. ಇವುಗಳ ಮೇಲೆಯೇ ಪ್ರಾಚೀನರು ಗ್ರಂಥಗಳನ್ನು ಬರೆಯುತ್ತಿದ್ದುದು. ಈಗ ಇದು ಒಂದು ರಕ್ಷಿತಾರಣ್ಯ. ಇಲ್ಲಿ ಈ ವೃಕ್ಷದ ತೊಗಟೆಯನ್ನು ಕಿತ್ತುವ ಹಾಗೆ ಇಲ್ಲ.  ಈ ಲಕ್ಷ್ಮೀ ವನವನ್ನು ದಾಟಿ ಮುಂದೆ ಸುಮಾರು 15 ಕಿ.ಮೀ  ನಡೆದರೆ ಚೌಖಂಭಾ ಪರ್ವತದ ಬುಡವನ್ನು ತಲುಪಬಹುದು. ಈ ದಾರಿಯಲ್ಲಿ ಬಂದರೆ ನೀವು ಪರ್ವತದ ಆಗ್ನೇಯ ಭಾಗಕ್ಕೆ ಅಥವಾ ಪೂರ್ವದಿಕ್ಕಿಗೆ ಬಂದು ಸೇರುತ್ತೀರಿ. ಇದಿಷ್ಟಕ್ಕೆ ಸುಮಾರು 2 ದಿನಗಳ ಸಮಯ ತಗುಲುವುದು.

ಚೌಖಂಭಾಪರ್ವತದ ಶಿಖರಾಗ್ರವು ಭೂಗೋಳ ರಚನಾಶಾಸ್ತ್ರದ ಪ್ರಕಾರ ಅಲ್ಟ್ರಾ ಪ್ರಾಮಿನೆಂಟ್ ಪೀಕ್ ಎನ್ನುವ ವರ್ಗದಲ್ಲಿ ಪರಿಗಣಿತವಾಗಿದೆ. ಪರ್ವತವೊಂದರ ಉನ್ನತ ದಿಬ್ಬದಿಂದ ಶಿಖರಾಗ್ರಕ್ಕೆ ಇರುವ ಎತ್ತರವು 1500 ಮೀಟರಿಗಿಂತಲೂ ಎತ್ತರವಿದ್ದರೆ  ಅದನ್ನು ಹೀಗೆ ಕರೆಯುತ್ತಾರೆ. ಸಂಕ್ಷಿಪ್ತವಾಗಿ ಅಲ್ಟ್ರಾ ಎಂದೂ ಅನ್ನುತ್ತಾರೆ.  ಈ ಪರ್ವತವನ್ನು ಹತ್ತಲು 1938 ಹಾಗು 1939ರಲ್ಲಿ ಪ್ರಯತ್ನಗಳು ನಡೆದವಾದರೂ ಅವು ವಿಫಲಗೊಂಡವು. ಎವರೆಸ್ಟ್ ಪರ್ವತವನ್ನು ಹತ್ತುವ ಒಂದೇ ಒಂದು ವರ್ಷದ ಮೊದಲು, ಅಂದರೆ 1952ರಲ್ಲಿ ಇಬ್ಬರು ಸ್ವಿಸ್ ಪ್ರಜೆಗಳು ಯಶಸ್ವಿಯಾಗಿ ಪರ್ವತದ ಆರೋಹಣವನ್ನು ಮಾಡಿದರು.

ಇಷ್ಟು ಎತ್ತರವಿರುವ ಶಿಖರದ ಮೇಲೆ ಸಂಗ್ರಹವಾಗುವ ಹಿಮವು ನಿರಂತರವಾಗಿ ಕರಗುತ್ತಾ ಕೆಳಗೆ ಹರಿದು ಬರುತ್ತದೆ. ಹೀಗೆ ಹಲವಾರು ಪರ್ವತಗಳ ಮಧ್ಯ ಈ ನೀರು ಇಳಿದು ಬರುತ್ತಾ ಮತ್ತೆ ಘನೀಭವಿಸುವುದು. ಇದರ ವಿಸ್ತಾರ ಅಗಾಧವಾಗಿರುತ್ತದೆ. ಇದುವೆ ಗ್ಲೇಸಿಯರ್. ಚೌಖಂಬಾ ಪರ್ವತವು ತನ್ನ ಎಲ್ಲ ಮೂಲೆಗಳಲ್ಲಿಯೂ ಈ ರೀತಿಯ ಹಿಮನದಿಯ ಹೊದಿಕೆಯನ್ನು ಹೊದ್ದಿಕೊಂಡಿದೆ. ಇವುಗಳಲ್ಲಿ ಪ್ರಖ್ಯಾತವಾದುದು ಭಗೀರಥ್ ಖರಕ್ ಗ್ಲೇಸಿಯರ್. ಈ ಹಿಮನದಿಯೇ ಬದರಿಯಲ್ಲಿ ಕಾಣುವ ಅಲಕನಂದಾ ನದಿಯ ನೀರಿನ ಪ್ರಧಾನ ಮೂಲ.  ಪರ್ವತದ ಆಗ್ನೇಯ ದಿಕ್ಕಿನಲ್ಲಿ ಸತೋಪಂಥ ಎನ್ನುವ ಪರಿಶುಭ್ರವಾದ ಸರೋವರವಿದೆ. ಈ ಸರೋವರದ ನೀರಿನ ಮೂಲವೂ ಸಹ ಚೌಖಂಬಾದ ಆಗ್ನೇಯ ಭಾಗದಲ್ಲಿರುವ ಸತೋಪಂಥ್ ಗ್ಲೇಸಿಯರ್.  ತುಸು ದೂರದಲ್ಲಿಯೇ ಈ ಹಿಮನದಿಯ ನೀರು ಮುಂದುವರೆದು ಅಲಕನಂದೆಯೊಂದಿಗೆ ಒಂದಾಗುತ್ತದೆ.

ಪಾಂಡವರು ತಮ್ಮ ಕೊನೆಯ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಸ್ವರ್ಗಕ್ಕೆ ಹೊರಟರು ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಹೀಗೆ ಸ್ವರ್ಗಕ್ಕೆ ತೆರಳಲು ಅವರು ಆಯ್ದುಕೊಂಡಿದ್ದು ಈ ಚೌಖಂಬಾ ಪರ್ವತದ ದಾರಿಯೇ ಎಂದು ಹೇಳುತ್ತಾರೆ. ಈ ಸತೋಪಂಥ ಗ್ಲೇಸಿಯರಿನ ಮೇಲ್ಭಾಗದಲ್ಲಿ ಸ್ವರ್ಗಾರೋಹಿಣಿ ಪರ್ವತಕ್ಕೆ ಒಂದು ದಾರಿ ಉಂಟು.  ಸಾಹಸಿಗಳು ಈ ದಾರಿಯಲ್ಲಿ ಚಾರಣ ನಡೆಸಿರುವ ಉದಾಹರಣೆಗಳುಇವೆ. ಅಂದ ಹಾಗೆ, ಈ ಸ್ವರ್ಗಾರೋಹಿಣಿ ಪರ್ವತವಿರುವುದು ಉತ್ತರಕಾಶಿಯ ಜಿಲ್ಲೆಯ ಸರಸ್ವತೀ ಪರ್ವತ ವಲಯದಲ್ಲಿ. ಚೌಖಂಭಾದಿಂದ ವಾಯುವ್ಯಕ್ಕೆ ಸುಮಾರು 45 ಕಿ.ಮೀ ದೂರದ ಕಠಿಣಾತಿ ಕಠಿಣ ಕಾಲ್ದಾರಿಯದು.

ಮ್ಮ್ಮ್, ಇದು ಬರೆದಷ್ಟೂ ಬೆಳೆಯುವ ವಿಷಯ. ಇಲ್ಲಿಗೆ ಇದನ್ನು ನಿಲ್ಲಿಸುತ್ತೇನೆ.  ಚೌಖಂಭಾಕ್ಕೆ ಭೇಟಿ ನೀಡುವವರು ಇದಕ್ಕೆಂದೇ ಇರುವ ವೃತ್ತಿಪರ ಸಂಸ್ಥೆಗಳನ್ನು ಸಂಪರ್ಕಿಸಬಹುದು.  ಲಕ್ಷ್ಮೀವನದವರೆಗಿನ ಕಾಲ್ದಾರಿಯ ಅನುಭವ ನನ್ನದು. ಉಳಿದದ್ದು ಅನುಭವಸ್ಥರಿಂದ ಕೇಳಿ, ವಿಕಿಯನ್ನು ಗೋಳಾಡಿಸಿ ಪಡೆದದ್ದು. ಲೇಖನದ ಆರಂಭದಲ್ಲಿ ಚೌಖಂಬಾ ಪರ್ವತವು ಸರ್ಕಸ್ಸಿನ ಟೆಂಟಿನಂತಿದೆ ಅಂದೆನಲ್ಲ, ಇಲ್ಲಿಗೆ  ಹೋಗಿ ಬರುವುದೂ ಕೂಡ ಒಂದು ಸರ್ಕಸ್ಸೇ. ಅ ಸರ್ಕಸ್ಸಿನ ಆನಂದ ಕ್ಷಣಿಕವಾದರೆ ಈ ಸರ್ಕಸ್ಸಿನ ಆನಂದವು ಶಬ್ದಗಳಿಗೆ ನಿಲುಕದು. ಅದನ್ನೇನಿದ್ದರೂ ಅನುಭವಿಸಬೇಕಷ್ಟೇ. ಈ ಅನುಭವಕ್ಕಾಗಿಯೇ ನಾನು ಪರಿತಪಿಸಿದ್ದು.

ಹೀಗೊಂದು ಕಲ್ಪನೆ ಮಾಡಿಕೊಳ್ಳೋಣ. ನೀವು ಯಾರದೋ ಒಂದು ಮನೆಗೆ ಬಂದಿದ್ದೀರಿ. ಅದು ಬಹುಮಹಡಿಯ ಕಟ್ಟಡ. ಲಿಫ್ಟಿನಲ್ಲಿ ಬಂದಿರಿ ಆದ್ದರಿಂದ ಎಷ್ಟು ಎತ್ತರ ಬಂದೆ ಎನ್ನುವ ಕಲ್ಪನೆಯೇ ನಿಮಗೆ ಇಲ್ಲ.  ಮನೆಯ ಒಳಗೆ ನಿಮಗೆ ಒಂದು ವಿಶಾಲವಾದ ಪರದೆಯು ಕಾಣಿಸುತ್ತದೆ. ಮೂರೂ ಕಡೆಗಳಲ್ಲಿ ಗೋಡೆ, ಒಂದು ಬದಿಯಲ್ಲಿ ಮಾತ್ರ ಗೋಡೆಯಷ್ಟಗಲದ ಪರದೆ.  ಅಲಂಕಾರಕ್ಕೆಂದು ಹಾಕಿದ್ದಾರೆಂದು ಭಾವಿಸಿ ಸುಮ್ಮನೆ ಇರುತ್ತೀರಿ. ಆದರೆ ಸ್ವಲ್ಪ ಹೊತ್ತಿನ ನಂತರ ಸುಮ್ಮನೆ ಕುತೂಹಲದಿಂದ ಒಂದು ಸಲ ಪರದೆಯನ್ನು ಎಳೆದ ತಕ್ಷಣ ಅಲ್ಲಿ ಗೋಡೆಯ ಬದಲು ಆ ಅಪಾರ್ಟ್ಮೆಂಟಿನ ಎದುರು ಭಾಗದಲ್ಲಿರುವ ಗಗನಚುಂಬಿ ಕಟ್ಟಡಗಳೂ ಕೆಳಗೆ ಆಳವಾದ ಕಂದಕವೂ, ಅಲ್ಲಿ ಓಡಾಡುತ್ತಿರುವ ಕಡ್ಡಿಪೆಟ್ಟಿಗೆಯ ಗಾತ್ರದ ವಾಹನಗಳೂ ಕಂಡಾಗ ಹೇಗೆ ಅನ್ನಿಸುತ್ತದೆ? ಒಂದೇ ಒಂದು ಕ್ಷಣ ಭಯಮೂಡುತ್ತದೆ. ನಂತರ ಆ ಭಯ ಮಾಯವಾಗಿ ಆ ಅನುಭವವನ್ನು ಆಸ್ವಾದಿಸಲು ತೊಡಗುತ್ತೀರಿ ತಾನೆ? ಸ್ವಲ್ಪ ಹೊತ್ತಿಗೆ ಬುದ್ಧಿ ತಿಳಿಯಾಗಿ ನೀವು ಬಂದಿರುವುದು 33ನೇ ಮಹಡಿ ಎಂದು ಗೊತ್ತಾಗುತ್ತದೆ. ಅಲ್ಲವೇನು?

ಈಗ ಅಪಾರ್ಟ್ಮೆಂಟಿನ ಜಾಗದಲ್ಲಿ ಪರ್ವತಗಳನ್ನೂ, ಲಿಫ್ಟಿನ ಜಾಗದಲ್ಲಿ ಕಾಲ್ದಾರಿಯನ್ನು,  ಎದುರಿಗೆ ಗಗಗನಚುಂಬಿ ಕಟ್ಟಡದ ಜಾಗದಲ್ಲಿ ಮಹಾಪರ್ವತವನ್ನೂ, ಅದರ ಕೆಳಗೆ ರಭಸವಾಗಿ ಹರಿಯುತ್ತಿರುವ ನದಿಯೊಂದನ್ನೂ ಕಲ್ಪಿಸಿಕೊಳ್ಳಿ.  ಸಂತಸವಾಗದೆ ಇರುತ್ತದೆಯೇ? ನಾನು ಈ ಬಾರಿಯ ಭೇಟಿಯಲ್ಲಿ ತಪ್ಪಿಸಿಕೊಂಡಿದ್ದು ಇಂತಹುದು ಒಂದು ರೋಚಕವಾದ  ಅನುಭವವನ್ನು.  ಬೂದುವರ್ಣದ ಮೋಡದ ದಟ್ಟ ಪರದೆಯ ಹಿಂದೆ ಇದ್ದ ಅಗಾಧಗಾತ್ರದ ಪರ್ವತಾವಳಿಯ ಸಂಪೂರ್ಣ ದರ್ಶನವಾಗಲೇ ಇಲ್ಲ.

ಏನು ನೋಡಿದೆ ನಾನು?

ಏನು ನೋಡಬೇಕಿತ್ತು?

Image Source : Wikipedia

ಅದೃಷ್ಟ  ನನ್ನ ಜೊತೆಗೆ ಇದ್ದಿದ್ದು ಒಂದೇ ಒಂದೇ ಕ್ಷಣ ಮಾತ್ರ. ಹಾಗಾಗಿ ಚೌಖಂಬಾದ ಚೂರೇ ಚೂರು ದರ್ಶನವಾಯಿತು. ಆ ಆನಂದವೂ ಅದ್ಭುತವೇ. ಆದರೆ ಸಂಪೂರ್ಣ ನೋಡಲು ಆಗಲಿಲ್ಲವಲ್ಲ ಎನ್ನುವ ಒಂದು ಹಳಹಳಿ ಇತ್ತು.  ಅದನ್ನು ಮರೆಸಿದ್ದು ಶ್ರೀ ತುಂಗನಾಥನ ದೇಗುಲದ ದರ್ಶನ.

– ಮುಂದಿನ ಸಂಚಿಕೆಯಲ್ಲಿ ಮುಕ್ತಾಯವಾಗುತ್ತದೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ತುಂಗನಾಥನತ್ತ ಪಯಣ ಭಾಗ-2/4

ಅತ್ಯಂತ ಆರ್ಭಟದಿಂದ ಕೂಡಿದ ಮಳೆ ಅದು. ಮಧ್ಯದಲ್ಲಿ ಪರ್ವತಗಳೇ ಸೀಳಿದವೇನೋ ಎಂಬ ಸಿಡಿಲುಗಳ ಆರ್ಭಟ ಬೇರೆ.   ಸಮಾಧಾನದಿಂದ ಇರುವವರಿಗೆ ನಿಜವಾಗಿಯೂ ಅದು ವೇದಘೋಷದಂತೆ ಕ್ರಮಬದ್ಧವಾಗಿ ಕೇಳಿಸುವುದು. ಇದು ಉತ್ಪ್ರೇಕ್ಷೆಯಲ್ಲ. ಅಷ್ಟೊಂದು ಸುಂದರವಾದ ಅನುಭವ ಅದು. ಕಣ್ಣಿಗೆ ಏನೇನೂ ಕಾಣದು. ಆದರೆ ಮಳೆಯ ಸದ್ದು ಮಾತ್ರ ನಿಮ್ಮ ಹೃದಯದೊಂದಿಗೆ ಮಾತಿಗಿಳಿದಿರುತ್ತದೆ. ಒಮ್ಮೆಯಾದರೂ ಅನುಭವಿಸಿ ಅದನ್ನು.  ಇರಲಿ, ತುಂಗನಾಥಪರ್ವತವನ್ನು ಹತ್ತುವ ಉದ್ದೇಶ ಇಲ್ಲದಿದ್ದರೆ ನಾನು ರಾತ್ರಿಯೆಲ್ಲಾ ಆ ಮಳೆಯ ಆರ್ಭಟವನ್ನು ಚೆನ್ನಾಗಿಯೇ ಅಸ್ವಾದಿಸುತ್ತಿದ್ದೆನೇನೋ. ಬೆಳಿಗ್ಗೆಯಾದರೂ ಮಳೆ ನಿಂತಿರುತ್ತದೋ  ಇಲ್ಲವೋ ಎನ್ನುವ ತಳಮಳದಲ್ಲಿಯೇ ನಿದ್ರೆ ಬಂದು ರಾತ್ರಿ ಕಳೆಯಿತು.

002-tunganatha 001-tunganatha

ಬೆಳಗ್ಗೆ ಸ್ವಾಮೀಜೀ ಚಾಯ್ ಲಾಂವೂ ಕ್ಯಾ ಎನ್ನುವ ಲಕ್ಷ್ಮಣನ ಕ್ಷೀಣಸ್ವರವು ಕೇಳಿಸಿ ಎಚ್ಚರವಾಯಿತು. ಚಹಾ ಬೇಡ ಎಂದು ಹೇಳುತ್ತಾ ಹೊರಗೆ ಬಂದು ನೋಡಿದೆ. ಮಳೆ ಸಂಪೂರ್ಣ ನಿಂತಿತ್ತು. ಆದರೆ ಮೋಡಗಳು ಮಾತ್ರ ದಟ್ಟಗೆ ಮೇಳೈಸಿಯೇ ಇದ್ದವು.  ಗಂಟಿಕ್ಕಿದ ಹುಬ್ಬನ್ನು ನೋಡಿ ಲಕ್ಷ್ಮಣ ಮತ್ತೆ ಹೇಳಿದ. “ಮಳೆ ಬರುವುದಿಲ್ಲ ಎಂದು ಹೇಳಲಾಗದು. ಆದರೆ ನೀವು ನೋಡಬೇಕೆಂದಿರುವುದನ್ನು ದೇವರು ತೋರಿಸಿಯೇ ತೋರಿಸುತ್ತಾನೆ. ಹೋಗಿಬನ್ನಿ. “

ಬೆಳಗಿನ ಎಲ್ಲ ವ್ಯವಹಾರಗಳನ್ನೂ ಮುಗಿಸಿ ಆಯಿತು. ಆದದ್ದಾಗಲಿ ಎಂದು ಲಕ್ಷ್ಮಣನ ಮಾತಿನ ಮೇಲೆ ವಿಶ್ವಾಸವಿಟ್ಟು ಬೆಟ್ಟ ಹತ್ತಲು ಪ್ರಾರಂಭಿಸಿದೆ.  ಮೂರ್ನಾಲ್ಕು ಚಿಕ್ಕ ಪುಟ್ಟ ಗಂಟೆಗಳನ್ನು  ಕಟ್ಟಿರುವ ಒಂದು ಚಿಕ್ಕ ಸ್ವಾಗತದ್ವಾರದ ಮೂಲಕ ಪಯಣ ಶುರುವಾಗುತ್ತದೆ.

003-tunganath

ತುಂಗನಾಥವು ಹತ್ತಲು ಅಸಾಧ್ಯವಾದ ಬೆಟ್ಟವೇನೋ ಅಲ್ಲ. ಅದೂ ಅಲ್ಲದೆ ಚೋಪತಾದಿಂದಲೇ ಬೆಟ್ಟವೇರಲು ದಾರಿಯನ್ನು ನಿರ್ಮಿಸಿದ್ದಾರೆ. ಆದಾಗ್ಯೂ ಸಮುದ್ರಮಟ್ಟದಿಂದ ಬಹಳ ಎತ್ತರದಲ್ಲಿ ಇರುವ ಸ್ಥಳವಾದ್ದರಿಂದ ಆಮ್ಲಜನಕದ ಕೊರತೆಯು ಕಾಡುವುದು. ದಕ್ಷಿಣದೇಶದ ಜನರಿಗೆ ಸ್ವಲ್ಪ ಉಸಿರಾಟದ ತೊಂದರೆಯಾಗುವ ಸಾಧ್ಯತೆ ಇದೆ.   ಅಭ್ಯಾಸವಿಲ್ಲದವರು ನಿಧಾನವಾಗಿ ಏರಬೇಕು. ಚೋಪತಾದಿಂದ 4-5 ಕಿಲೋಮೀಟರು ದೂರದ ಏರು ನಡಿಗೆಯ ಮಾರ್ಗವಿದು. ಸಾಧಾರಣ ಸ್ಥಳದಲ್ಲಾದರೆ ಈ ದೂರಕ್ಕೆ 40 ನಿಮಿಷಗಳು ಸಾಕಾಗಬಹುದೇನೋ. ಆದರೆ ಇಲ್ಲಿ ಸುಮಾರು 4-5 ಗಂಟೆಗಳಷ್ಟು ಸಮಯ ಬೇಕಾಗಬಹುದು. ಅಂದರೆ ಹೋಗುವುದಕ್ಕೆ ಮತ್ತು ಬರುವುದಕ್ಕೆ ಸೇರಿ ಸುಮಾರು 8-10 ಗಂಟೆಯ ಪ್ರಯಾಸ ಎನ್ನ ಬಹುದು.  ಹಣಕಾಸಿನ ಅನುಕೂಲವಿದ್ದವರಿಗೆ ಕುದುರೆಗಳೂ ಉಪಲಬ್ಧವಿವೆ. ಸುಮಾರು 800 ರೂಪಾಯಿಗಳಷ್ಟು ಹಣವು ಕರೆದುಕೊಂಡು ಹೋಗಿ ಬರಲು ವೆಚ್ಚವಾಗುವುದು. ಹೋಗಿ ಬರುವುದಕ್ಕೆ 5ಗಂಟೆಗಳಷ್ಟು ಸಮಯವಾಗುವುದು.

011-tunganath

ಪಯಣದ ಶುರುವಿನಲ್ಲಿಯೇ ಸ್ಥಳೀಯ ಕುರಿಗಾಹಿಯೊಬ್ಬ ಜೊತೆಯಾದ. ಹೆಸರೇನೆಂದು ಕೇಳಿದೆ. ಜಗದೀಸ್ ಎಂದು ಹೇಳಿ ನಕ್ಕ. ” ಸ್ ಅಲ್ಲ ಶ್ ಅನ್ನು” ಎಂದರೆ “ಅದೇ ಅನ್ನುತ್ತಿದ್ದೀನಲ್ಲ” ಅಂದ! ಆಗ ನಾನು ನಕ್ಕೆ. ಗಢವಾಲೀ ಶೈಲಿಯ ಅವನ ಗ್ರಾಮ್ಯ ಹಿಂದಿಗೆ ಮನಸೋತು ಅವನೊಡನೆ ಮಾತನಾಡುತ್ತ ಹೆಜ್ಜೆ ಹಾಕಿದೆ.  ಮಾತು ಆಡುತ್ತಾ ನಾನು ಬಂದಿರುವ ಮುಖ್ಯ ಉದ್ದೇಶವನ್ನು ಅವನಿಗೆ ಹೇಳಿದೆ.  ಮೋಡಗಳೇನೋ ಇಷ್ಟೊಂದು ಇವೆ. ಆದರೆ ಅದೃಷ್ಟ ನಿಮಗೆ ಎದುರಾಗಲಾರದು ಎಂದು ಹೇಗೆ ಹೇಳಲಾದೀತು? ಎಂದು ಆತ ಹೇಳಿ ನನ್ನ ಉತ್ಸಾಹವನ್ನು ಮತ್ತಷ್ಟು ಚಿಗುರಿಸಿದ. ಚಂದ್ರಶಿಲಾ ಪರ್ವತಕ್ಕೆ ಹೋಗುವ ಮನಸ್ಸಿದೆ ಎಂದು ಹೇಳಿದೆ. ಅಷ್ಟು ದೂರ ಯಾಕೆ ಹೋಗ್ತೀರಿ? ಬರೀ ಮೋಡಗಳೇ ಇವೆ. ನಿಮಗೆ ಬೇಕಾಗಿರುವುದು ಇಲ್ಲಿಂದಲೇ ಕಾಣಿಸುವುದಲ್ಲ! ಎಂದು ಹೇಳಿ ಕೋಟಿನ ಜೇಬಿನಲ್ಲಿಯೇ ಇಟ್ಟುಕೊಂಡಿದ್ದ ತನ್ನ ಕೈಯನ್ನು ಹೊರತೆಗೆಯದೇ ಕೈಯನ್ನು ಜೇಬಿನ ಸಮೇತ ಎತ್ತಿ ಕೋಟಿನ ತುದಿಯಿಂದಲೇ ಉತ್ತರ ದಿಕ್ಕನ್ನು ತೋರಿಸಿದ.  ಏನಿತ್ತು ಅಲ್ಲಿ?  ಲಕ್ಷಗಟ್ಟಲೆ ಎಕರೆ ಬೂದುವರ್ಣದ ಮೋಡಗಳು. ಅಷ್ಟೇ. ಅವುಗಳನ್ನು ನೋಡಿ ಅಷ್ಟೇನೂ ಸಂತಸವೆನಿಸಲಿಲ್ಲ ನನಗೆ.

004-tunganath

ಶಿಖರದೆಡೆಗೆ ಹೋಗುವ ಮಾರ್ಗವು ಅತ್ಯಂತ ಮನೋಹರವಾಗಿದೆ. ದಾರಿಯನ್ನು ಚೌಕಾಕಾರದ ಕಲ್ಲುಗಳಿಂದ ನಿರ್ಮಿಸಿದ್ದಾರೆ. ಅವುಗಳ ಮೇಲೆ ನಿರ್ಭಯವಾಗಿ ನಡೆಯಬಹುದು. ಅಕಸ್ಮಾತ್ ಕಾಲು ಜಾರಿದರೂ ಸಹ ಪಾತಾಳಸೇರಿ ಮಾಯವಾಗುವ ಭಯವಿಲ್ಲ. ಏಕೆಂದರೆ, ಬಿದ್ದರೂ ಸಹ ನೀವು ಉರುಳಿಕೊಂಡು ಹೋಗಿ ವಿಶಾಲವಾದ ಹುಲ್ಲು ಹಾಸಿನ ಮೇಲೆಯೇ ಸೇರುತ್ತೀರಿ. ಬರೀ ಹುಲ್ಲುಹಾಸು ಎಂದರೆ ಅರ್ಥವಾಗಲಿಕ್ಕಿಲ್ಲ. ಎಂಥದಪ್ಪಾ ಅಂದರೆ ರಿಶಿಕಪೂರನು ಜಯಪ್ರದಾಳೊಂದಿಗೆ ಪ್ರಣಯದ ಹಾಡು ಹಾಡುತ್ತಾನಲ್ಲ ಅಂತಹ ಹುಲ್ಲುಗಾವಲು! ಎಲ್ಲಿ ನೋಡಿದರೂ ಹಸಿರು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ! ಅರ್ಥವಾಯಿತಲ್ಲ!

ಬುಗ್ಯಾಲ್

ಹಿಮಾಲಯದ ಜೈವಿಕ ವ್ಯವಸ್ಥೆಯು ಕೌತುಕಮಯ ಹಾಗು ಅತ್ಯಂತ ಸಂಕೀರ್ಣವಾಗಿದೆ. ಒಂದೇ ಸ್ಥಳವು ಋತುಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ಜೀವಿಗಳಿಗೆ ವಾಸಸ್ಥಳವಾಗುವುದು ಅಥವಾ ಆಹಾರ ದೊರೆಯುವ ತಾಣವಾಗಿ ಬದಲಾಗುವುದು.  ಮೇಲೆ ಹೇಳಿರುವ ಹುಲ್ಲುಗಾವಲು ಕೂಡ ಇಂತಹುದೇ ಒಂದು ಸ್ಥಳ. ಗಢವಾಲೀ ಭಾಷೆಯಲ್ಲಿ ಬುಗ್ಯಾಲ್ ಎಂದು ಕರೆಯುತ್ತಾರೆ. ಅಸಂಖ್ಯವಾದ ಪರ್ವತಗಳ ಮಧ್ಯದಲ್ಲಿ ಅಲ್ಲಲ್ಲೇ ಬೆಟ್ಟಗಳ ಇಳಿಜಾರು ಅಥವಾ ಬೆಟ್ಟದ ಮೇಲಿನ ವಿಶಾಲವಾದ ಸಮತಟ್ಟು ಬಯಲುಗಳಲ್ಲಿ ನಿಸರ್ಗವು ರೂಪಿಸಿರುವ ಸುಂದರ ತೋಟಗಳಿವು.  ಬೆಟ್ಟದ ಒಂದು ಬದಿ ದಟ್ಟವಾದ ಕಾಡು ಇದ್ದರೆ ಇನ್ನೊಂದು ಬದಿಗೆ ಹೀಗೆ ವಿಶಾಲವಾದ ಬುಗ್ಯಾಲು ರೂಪುಗೊಂಡಿರುತ್ತದೆ. ಇವು  ಅತ್ಯಂತ ಸೂಕ್ಷ್ಮವಾದ ಪ್ರಾಕೃತಿಕ ನೆಲೆಗಳು. ಇಲ್ಲಿಯವರೆಗೂ ನಾಗರಿಕತೆಯ ಸ್ಪರ್ಷವಿಲ್ಲದೆಯೆ ಪರಿಶುದ್ಧವಾಗಿ ಉಳಿದುಕೊಂಡು ಬಂದಿವೆ. ಕೇವಲ ಹುಲ್ಲು ಮಾತ್ರವಲ್ಲದೆ ಅಸಂಖ್ಯವಾದ ವರ್ಣಮಯ ಹೂವಿನ ಗಿಡಗಳಿಗೂ ಈ ಬುಗ್ಯಾಲು ಆಶ್ರಯ ತಾಣ. ಈ ಹೂವುಗಳ ಮಕರಂದಕ್ಕೆ ಆಕರ್ಷಿತವಾಗಿ ಬರುವ ಪುಟ್ಟ ಪುಟ್ಟ ಚಿಟ್ಟೆಗಳದ್ದೂ, ಪತಂಗಗಳದ್ದೂ ಮತ್ತೊಂದು ಲೋಕ.

ಚಳಿಗಾಲದಲ್ಲಿ ಈ ಹುಲ್ಲುಗಾವಲು ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತದೆ. ಬೇಸಿಗೆ ಶುರುವಾದ ನಂತರ ಮತ್ತೆ ಹಸಿರು ಚಿಗುರೊಡೆದು ನಿಧಾನವಾಗಿ ಹಸುಗಳೂ ಕುರಿಗಳೂ ಕುರುಂ ಕುರುಂ ಎಂದು ಹುಲ್ಲು ತಿನ್ನಲು ಬರುತ್ತವೆ. ಪಶುಪಾಲಕರಿಗೆ 3-4 ತಿಂಗಳ ಕಾಲ ಈ ಸ್ಥಳವೇ ಹಳ್ಳಿಯಾಗಿಯೂ ಪರಿವರ್ತನೆಯಾಗುತ್ತದೆ.  ಯಾತ್ರಿಕರನ್ನು ಹೊತ್ತು ಬೆಟ್ಟ ಹತ್ತುವ ಕುದುರೆಗಳಿಗೂ ಇದೇ ಜಾಗವು ಊಟದ ಕೇಂದ್ರ.

ಚೋಪತಾ, ತುಂಗನಾಥ, ಔಲಿ ಹಾಗು ಬೇದಿನೀ ಎನ್ನುವ ಬುಗ್ಯಾಲುಗಳು ಬದರಿ ಹಾಗು ಕೇದಾರದ ಸುತ್ತುಮುತ್ತಲಿನ ಪ್ರಾಂತ್ಯದಲ್ಲಿ ಕಂಡುಬರುತ್ತವೆ. ಇವುಗಳನ್ನು ತಲುಪುವ ಮಾರ್ಗವು ಸುಲಭ. ಇನ್ನಿತರ ಚಿಕ್ಕ ಪುಟ್ಟ ಹುಲ್ಲುಗಾವಲುಗಳನ್ನು ಕೂಡ ಅಲ್ಲಲ್ಲಿ ನೋಡಬಹುದು.  ಗೋಪೇಶ್ವರದಿಂದ ಚೋಪತಾಕ್ಕೆ ಬರುವ ಮಾರ್ಗದಲ್ಲಿ ಒಂದೆಡೆ ಸುಂದರ ಬುಗ್ಯಾಲಿನಲ್ಲಿ ಆಧುನಿಕರು ಟೆಂಟು ಹೋಟೆಲಿನಂತಹುದನ್ನು ಸ್ಥಾಪಿಸಿ ಏನೇನೋ ಸಾಹಸಕ್ರೀಡೆಗಳನ್ನು ಆಯೋಜಿಸುತ್ತಿದ್ದುದನ್ನು ನಾನು ನೋಡಿದೆ. ಈ ರೀತಿಯ ಚಟುವಟಿಕೆಗಳು ನಿಸರ್ಗಕ್ಕೆ ಹಾನಿಯನ್ನುಂಟು ಮಾಡದಿದ್ದರೆ ಸಾಕು.

ಅಗಾಧವಾಗಿ ಹರಡಿರುವ ತಿಳಿ ಹಸಿರು ಹುಲ್ಲುಗಾವಲು, ಅದರ ಹಿಂದೆ ದಟ್ಟ ಹಸಿರಿನ ಅರಣ್ಯ, ಅವುಗಳ ಹಿಂದೆ ಗಗನಕ್ಕೆ ಮುತ್ತು ಕೊಡುತ್ತಿರುವ ಹಿಮಾಚ್ಛಾದಿತ ಪರ್ವತದ ತುದಿಗಳು, ಅವುಗಳ ಮೇಲೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮೋಡಗಳು, ಆ ಮೋಡಗಳ ಹಿಂದೆ ಪರಿಶುಭ್ರ ನೀಲವರ್ಣದ ಆಗಸ! ಇದು ಬುಗ್ಯಾಲುಗಳ ಬಳಿ ನೀವು ನಿಂತಾಗ ಕಾಣುವ ಸ್ವರ್ಗಸದೃಶವಾದ ನೋಟ. ಆದರೆ ನಾನು ಈ ಮಾರ್ಗದಲ್ಲಿ ನಡೆಯುತ್ತಿದ್ದ ದಿನದಂದು ಮೇಘಗಳೇ ರಾಜ್ಯಭಾರ ನಡೆಸಿದ್ದವು. ಬೂದುವರ್ಣದ ಮಂಜು ಬಿಟ್ಟರೆ ಏನೂ ಕಾಣಲಿಲ್ಲ.  ಅಗಾಧವಾದ ಮಂಜಿನ ಮಧ್ಯ ಅನೇಕ ಕುದುರೆಗಳು, ದಟ್ಟ ಕೂದಲಿನ ಹಸುಗಳು ಹಾಗು ಕುರಿಗಳ ಮಂದೆಗಳು ಅಲ್ಲಲ್ಲಿ ಮೇಯುತ್ತಿದ್ದವು.  ಕುದುರೆಗಳ ಕೊರಳಗಂಟೆಯ ಇಂಪಾದ ಸದ್ದು ಕೇಳುತ್ತಾ ಮುನ್ನಡೆದೆ. ಮನಸ್ಸು ಮಾತ್ರ ಪದೇ ಪದೇ ಪ್ರಶ್ನಿಸುತ್ತಲೇ ಇತ್ತು. ಮೋಡಗಳು ಸ್ವಲ್ಪವಾದರೂ ತೆರವಾಗುವುವೋ ಇಲ್ಲವೋ ಎಂದು. ಮನಸ್ಸನ್ನು ಓದಿದವನಂತೆ ಜಗದೀಶನೆಂದ.  “ಇನ್ನೂ ಸ್ವಲ್ಪ ದೂರ ನಡೆದರೆ ಆ ಸ್ಥಳವು ಬರುತ್ತದೆ. ದೇವರ ಇಚ್ಛೆ ಇರಲಿ”

 005-tunganath 006-tunganath013-tunganath 014-tunganath 015-tunganath 016-tunganath 017-tunganath 018-tunganath 019-tunganath

ಮಧ್ಯದಲ್ಲಿ ಒಂದು ಕಡೆ ಜಲಪಾತವೊಂದು ಮೆಟ್ಟಿಲುಗಳನ್ನು ಧ್ವಂಸಮಾಡಿ ಹಾಕಿತ್ತು. ಅದನ್ನು ಎಗರಿಕೊಂಡು ದಾಟಿದ್ದಾಯ್ತು. ದಾರಿಗುಂಟ ಬೆಳೆದ ವಿವಿಧ ವರ್ಣಗಳ ಪುಟ್ಟ ಪುಟ್ಟ ಹೂವುಗಳನ್ನು ನನ್ನ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿಯುತ್ತಾ ಸಾಗಿದ್ದೆವು. ಸುಮಾರು 1.5 ಕಿ.ಮೀ ದೂರದ ನಂತರ ಒಂದೆಡೆ ಕುಳಿತು ದಟ್ಟಕೆಂಪುವರ್ಣದ ಹೂವಿನ ಫೋಟೋ ತೆಗೆದವನು ಎದ್ದು ನಿಂತೆ. ವಿಮಾನದಲ್ಲಿ ಕುಳಿತಂತೆ ಭಾಸವಾಯಿತು. ವಿಮಾನದ ಕಿಟಕಿಯ ಮೂಲಕ ಕಾಣಿಸುವ ಮೋಡಗಳ ರಾಶಿಯ ಮಧ್ಯದಲ್ಲಿ ಕಾಣಿಸುವ ರೀತಿಯಲ್ಲೇ ನೀಲಾಗಸದ ಕಿಂಚಿತ್ ದರ್ಶನವಾಯಿತು. ಆದರೆ ಅದೊಂದು ಅತ್ಯಪೂರ್ವ ದರ್ಶನ ನನಗೆ ಸಿಕ್ಕಿದ್ದು. ಮತ್ತೆ ಅದನ್ನು ನೋಡಲು ಎಷ್ಟು ವರ್ಷಗಳಾಗುವವೋ, ಎಷ್ಟು ಸಹಸ್ರ ಮೈಲು ಪ್ರಯಾಣಮಾಡಬೇಕಾದೀತೋ ಎನ್ನುವ ಪ್ರಜ್ಞೆಯೇ ನನಗೆ ಇರಲಿಲ್ಲ.  ಜಗದೀಶ ನನ್ನ ಕೈಯನ್ನು ಜೋರಾಗಿ ಅಲುಗಿಸಿ “ಬೇಗ ನೋಡಿಬಿಡಿ, ಇದಕ್ಕೆಂದೇ ಅಷ್ಟೊಂದು ದೂರದಿಂದ ಬಂದಿದ್ದೀರಿ” ಎಂದು ಹೇಳಿದ.

ಒಂದು ನಿಮಿಷಕ್ಕೂ ಕಡಿಮೆಯ ಅವಧಿ ಅದು.  ಅಷ್ಟು ಮಾತ್ರದ ದರ್ಶನವನ್ನು ಆ ಮಹಾಪರ್ವತ ಕೊಟ್ಟೇಬಿಟ್ಟಿತು. ಸಂಪೂರ್ಣವೇನಲ್ಲ, ಶಿಖರದರ್ಶನ ಮಾತ್ರ ಆಗಿದ್ದು.  ಆದರೆ ನೋಡು ನೋಡುತ್ತಿದ್ದಂತೆಯೇ ಪುನಃ ಮೇಘಗಳ ಮಹಾ ಮಾಲೆಯೊಂದು ಮತ್ತೆ ಪರ್ವತವನ್ನು ಮುಚ್ಚಿಯೇ ಬಿಟ್ಟಿತು.  ಅಷ್ಟು ಮಾತ್ರಕ್ಕೇ ನನ್ನ ಹೃದಯ ಕುಣಿದಾಡಿತು.  ನನಗೆ  ಅರಿವಿಲ್ಲದಂತೆ ಕಣ್ಣೀರು ಧಾರೆಯಾಗಿ ಹರಿದು ಬಂದಿತು. ಹತ್ತಾರು ವರ್ಷಗಳ ಕನಸಾಗಿದ್ದ ಚೌಖಂಬಾ ಪರ್ವತವನ್ನು ನಾನು ಮೊದಲಬಾರಿಗೆ ನೋಡಿದ್ದು ಹೀಗೆ.

009-tunganath 008-tunganath007-tunganath

 ಮುಂದುವರೆಯುವುದು.

ಮೊದಲನೆಯ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿರಿ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ತುಂಗನಾಥನತ್ತ ಪಯಣ – ಭಾಗ 1

“ಬಾ ತೋರಿಸು ನಿನ್ನ ಯೋಗ್ಯತೆಯನ್ನು, ನೋಡಿಯೇ ಬಿಡುತ್ತೇನೆ” ಎನ್ನುತ್ತಾ ಏಕಕಾಲದಲ್ಲಿಯೇ ಪೂಜಾಪ್ರಿಯರನ್ನೂ, ಆಧ್ಯಾತ್ಮಜೀವಿಗಳನ್ನೂ, ಬೆಟ್ಟವೇರುವ ಸಾಹಸಿಗಳನ್ನೂ ಕೆಣಕಿ ತನ್ನೆಡೆ ಸೆಳೆಯುವ ಸಾಮರ್ಥ್ಯ ಇರುವ ಪ್ರಾಕೃತಿಕ ನೆಲೆ ಎಂದರೆ ಹಿಮಾಲಯ. ಇದರಲ್ಲಿ ಸಂಶಯವಿಲ್ಲ. ಆದರೆ ಅತ್ತ ಕರ್ಮಠರ ಪಟ್ಟಿಯಲ್ಲಾಗಲಿ ಇತ್ತ ಆಧ್ಯಾತ್ಮ ಚಿಂತಕರ ಮಧ್ಯದಲ್ಲಾಗಲೀ ಅಥವಾ ಈ ಸಾಹಸಿಗಳ ಹಿಂಡಿನಲ್ಲಾಗಲೀ ಎಲ್ಲಿಯೂ ಸ್ಪಷ್ಟವಾಗಿ ಕಾಣಿಸದಿರುವ ನನ್ನಂತಹ ಒಂದು ಚುಕ್ಕೆಗೂ ಸಹ ಹಿಮಾಲಯವು ಆಕರ್ಷಣೆಯ ಕೇಂದ್ರವಾಗಿರುವುದು ನನ್ನ ಮಟ್ಟಿಗೆ ಒಂದು ಸೋಜಿಗವೇ ಸರಿ.

ಹಿಮಾಲಯದ ಬಗ್ಗೆ ಎಲ್ಲಿಯೇ ಆಗಲಿ ಲೇಖನವು ಕಾಣಿಸಿದರೆ ಅದನ್ನು ಮೇಲಿಂದ ಮೇಲೆ ಓದುವ ಹವ್ಯಾಸ ನನಗೆ. ನನ್ನಲ್ಲಿ ಹಿಮಾಲಯವನ್ನು ಕುರಿತಾದ ಅನೇಕ ಪುಸ್ತಕಗಳೂ ಇವೆ. ಎಲ್ಲವನ್ನೂ ಅನೇಕ ಬಾರಿ ಓದಿದ್ದೇನೆ. ಇವುಗಳಲ್ಲಿ  ಭಾರತಸಂಚಾರಿ ಕೃಷ್ಣ ಗೋಸಾವಿ ಅವರು ಬರೆದಿರುವ ಹಿಮಾಲಯದರ್ಶನ ಎನ್ನುವ ಪುಸ್ತಕವು ನನ್ನ ಹೃದಯಕ್ಕೆ ಅತಿ ಹತ್ತಿರವಾಗಿರುವ ಪುಸ್ತಕ. ಇದು ೧೯೬೦ರ ಆಸುಪಾಸಿನಲ್ಲಿ ಮುದ್ರಿತವಾದದ್ದು.  ಭಾರತೀಯ ದರ್ಶನಗಳ ಹಿನ್ನೆಲೆಯಲ್ಲಿ ಹಿಮಪರ್ವತಗಳ ವರ್ಣನೆ, ಸ್ಥಳ ಮಹಾತ್ಮೆ, ಈ ಶಿಖರಗಳನ್ನು ತಲುಪುವ ಮಾರ್ಗ, ಮಾರ್ಗಮಧ್ಯದಲ್ಲಿ ಒದಗಬಹುದಾದ ಸಂಕಟಗಳು,  ಶಿಖರವನ್ನು  ತಲುಪಿದ ನಂತರ ಸಿಂಚನವಾಗುವ ಸಂತಸ ಹೀಗೆ ಎಲ್ಲವನ್ನೂ ಅವರು ಬಹಳ ಸುಂದರವಾದ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ. ಆಚಾರ್ಯ ಮಧ್ವರ ಮಾತುಗಳನ್ನು ಸಾಕಷ್ಟು ಸಲ ಉಲ್ಲೇಖಿಸುವ ಈ ಪುಸ್ತಕವನ್ನು ಈಗಾಗಲೇ ೫೦ ಸಲವಾದರೂ ಓದಿದ್ದೇನೆ ಅನಿಸುತ್ತದೆ. ಪ್ರತೀ ಸಲ ಓದಿದಾಗಲೂ ಒಂದೊಂದು ಹೊಸ ಪರ್ವತವನ್ನು ನೋಡಬೇಕೆಂದು ಆಸೆ ಮೂಡುವುದು. ಆದರೆ ಹಣ, ಸಮಯ, ಅದೃಷ್ಟ ಎಲ್ಲವೂ ಒದಗಿ ಬರಬೇಕಲ್ಲವೆ? ಸಮಯ ಮತ್ತು ಅದೃಷ್ಟಕ್ಕಿಂತಲೂ ಹಣದ್ದೇ ನಿಜವಾದ ಅಭಾವ ಎಂದರೆ ಸರಿಯಾದೀತೇನೊ.

ಒಂದಿಷ್ಟು ಅದೃಷ್ಟವಿದೆಯೋ ಏನೊಪ್ಪ!. ಪ್ರತಿ ಸಲವೂ ಯಾರಾದರೂ ಒಬ್ಬ ಮಹಾನುಭಾವರ ಮೂಲಕ ಭಗವಂತ ನನ್ನ ಆನಂದಯಾತ್ರೆಗೆ ಪ್ರಾಯೋಜಕತ್ವವನ್ನು ಕೊಡಿಸುತ್ತಾನೆ. ಈ ಸಲವೂ ಹಾಗೆಯೇ ಆಯಿತು. ಒಬ್ಬ ಸಾತ್ವಿಕರು ನನ್ನ ಯಾತ್ರೆಯ ಸಂಪೂರ್ಣ ವೆಚ್ಚವನ್ನು ನೋಡಿಕೊಂಡರು. ಅವರಿಂದಾಗಿ ಬದರೀನಾರಾಯಣನ ದರ್ಶನವು ಆಯಿತು. ಆದರೆ ನನಗೆ ಅದಕ್ಕಿಂತಲೂ ಹೆಚ್ಚು ಚೆಲುವಿನ ಪ್ರದೇಶವೊಂದನ್ನು ನೋಡುವ ಅಭಿಪ್ರಾಯವು ಇತ್ತು. ಚೋಪತಾ ಮತ್ತು ತುಂಗನಾಥದ ದರ್ಶನವು ಬಹಳದ ಬಯಕೆ ನನ್ನದು. ಅವರಿಂದಾಗಿ ಅದೂ ಕೂಡ ಈ ಬಾರಿ ಕೈಗೂಡಿತು.

ಹಿಮವತ್ಪರ್ವತದಲ್ಲಿ ೫ ಶಿವಕ್ಷೇತ್ರಗಳು ಅತ್ಯಂತ ಪ್ರಸಿದ್ಧ. ಕೇದಾರ, ಮಧ್ಯಮಹೇಶ್ವರ, ತುಂಗನಾಥ, ರುದ್ರನಾಥ ಮತ್ತು ಕಲ್ಪೇಶ್ವರ ಎನ್ನುವವೇ ಆ ಐದು ಕ್ಷೇತ್ರಗಳು. ಇವುಗಳೆಲ್ಲವೂ ಹಿಮಾಲಯದ ಗಡವಾಲ್ ಪ್ರಾಂತ್ಯದ ದೇಗುಲಗಳು. ತುಂಗನಾಥವು ಎಲ್ಲಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿರುವ ಗುಡಿ. ಇದು ರುದ್ರಪ್ರಯಾಗ ಜಿಲ್ಲೆಯಲ್ಲಿದೆ.

ನಮಗೆ ತಾರತಮ್ಯವಾಗಿ ಕೇದಾರಕ್ಕಿಂತಲೂ ಬದರಿಯು ಹೆಚ್ಚಿನದು. ಎರಡು ಮಾತಿಲ್ಲ. ಆದಾಗ್ಯೂ ಯಾವುದೇ ಪೂರ್ವಾಗ್ರಹವಿಲ್ಲದೆ ಹೇಳುವುದಾದಲ್ಲಿ ಪ್ರಕೃತಿಯ ಸೌಂದರ್ಯದ ದೃಷ್ಟಿಯಲ್ಲಿ  ಕೇದಾರವೇ ಹೆಚ್ಚಿನ ಅಂಕವನ್ನು ಗಳಿಸುವುದು. ಆದರೆ ಇಲ್ಲಿರುವ ಮಹಾದೇವನ ದರ್ಶನವನ್ನು ಯಾಕೋ ನಮ್ಮ ಆಚಾರ್ಯರು ಬೇಡ ಅಂದಿರುವರು. ಗರ್ಭಗೃಹದ ಒಳಗೆ ಹೋಗಿ ತಪೋನಿರತನಾದ ಕೇದಾರನಾಥನಿಗೆ ಕಿರಿ ಕಿರಿ ಮಾಡುವುದರ ಬದಲು ಕೇದಾರ ಪರ್ವತದ ಆರೋಹಣವನ್ನು ಮಾಡಿ ಸುತ್ತಮುತ್ತಲಿನ ಪ್ರಕೃತಿಯನ್ನು ಅನುಭವಿಸುವುದಕ್ಕೆ ಏನೂ ಅಡ್ಡಿ ಇಲ್ಲ ಎಂದು ನನ್ನ ಅಭಿಪ್ರಾಯ. ಬಹು ಸುಂದರವಾದ ಸ್ಥಳ ಇದು. ಆದರೆ ಹತ್ತಲು ಆರೋಗ್ಯವೂ ಸಹ ಬೇಕೇ ಬೇಕು. ೧೧೦೦೦ ಅಡಿಗಳಷ್ಟು ಮೇಲೆ ಇರುವ ಪರ್ವತದ ತುದಿ ಇದು. ವಾಹನಗಳು ಹೋಗಲಾರವು. ಕಾಲ್ನಡಿಗೆಯೇ ಗತಿ. ನಡೆಯಲಾಗದವರು ಕುದುರೆಯನ್ನೋ ಸ್ಥಳೀಯ ಗುಡ್ಡಗಾಡು ಮಂದಿಯು ಹೊರುವ ತೊಟ್ಟಿಲನ್ನೋ ಆಶ್ರಯಿಸಬೇಕು. ಒಟ್ಟು ೧೪ ಕಿಮೀ ದುರ್ಗಮ ಪಯಣವಿದು. ಇತ್ತೀಚೆಗೆ ಹೆಲಿಕಾಪ್ಟರುಗಳು ಕೂಡ ಇವೆ. ಆಟೋ ಸ್ಟ್ಯಾಂಡುಗಳ ರೀತಿಯಲ್ಲಿ ದಾರಿಯುದ್ದಕ್ಕೂ ಸುಮಾರು ೧೪ಕ್ಕೂ ಹೆಚ್ಚಿನ ಹೆಲಿಕಾಪ್ಟರು ಸ್ಟ್ಯಾಂಡುಗಳಿವೆ. ಹೋಗಿ ಬರುವುದಕ್ಕೆ ಒಬ್ಬರಿಗೆ ಸುಮಾರು ೧೫೦೦೦ ವರಹಗಳ ವೆಚ್ಚವಾಗುವುದು!. ಅಂತೂ ಆರೋಗ್ಯದ ಭಾಗ್ಯವಿಲ್ಲದವರಿಗೆ ನಡೆದು ಹೋಗುವುದೂ ಜೇಬಿನ ಭಾಗ್ಯವಿಲ್ಲದವರಿಗೆ ಯಂತ್ರಗಿತ್ತಿಯ ಸಂಗವೂ ಅಸಾಧ್ಯದ ಮಾತೇ ಸರಿ.

ಇಷ್ಟರ ಮಟ್ಟಿನ ಕೋಟಲೆಗಳು ಇಲ್ಲದೆ ಇದಕ್ಕಿಂತಲೂ ಚೆಲುವಿನ ತಾಣವೊಂದನ್ನು ನೋಡಲು ಇಷ್ಟವಿದ್ದಲ್ಲಿ ತುಂಗನಾಥ ನಿಮಗೆ ಹೇಳಿಮಾಡಿಸಿದ ಜಾಗ.

ಹರಿದ್ವಾರದಿಂದ ಮೇಲ್ಭಾಗದಲ್ಲಿ ೧೫೦ ಕಿಮೀ ದೂರದಲ್ಲಿ ರುದ್ರಪ್ರಯಾಗ ಎನ್ನುವ ಸ್ಥಳ ಬರುತ್ತದೆ. ಇದು ಒಂದು ಜಂಕ್ಷನ್. ಕೇದಾರಕ್ಕೆ ಹಾಗು ಬದರೀನಾಥಕ್ಕೆ ಇಲ್ಲ್ಲಿ ದಾರಿ ಕವಲೊಡೆಯುತ್ತದೆ. ಊರಿನ ಮಧ್ಯಭಾಗದಲ್ಲಿ ಅಲಕನಂದಾ ಹಾಗು ಮಂದಾಕಿನಿಯರ ಸಂಗಮವು ಆಗುತ್ತದೆ. ಅಲಕನಂದೆಯ ಕಿರುಬೆರಳನ್ನು ಹಿಡಿದುಕೊಂಡು ಹೋದರೆ ಬದರಿಯೂ ಮಂದಾಕಿನಿಯ ಜೊತೆಗೆ ಮಾತನಾಡುತ್ತ ಹೋದರೆ ಕೇದಾರವೂ ನಿಮ್ಮ ಯಾತ್ರೆಯ ಅಂತಿಮ ಸ್ಥಳವಾಗುತ್ತವೆ. ಕೇದಾರಕ್ಕೆ ಹೋಗುವ ದಾರಿಯಲ್ಲಿ ಸುಮಾರು ೨೦ ಕಿಮೀ ಕ್ರಮಿಸಿದ ನಂತರ ದಾರಿಯು ಮತ್ತೊಮ್ಮೆ ಕವಲಾಗುವುದು. ಎಡದ ದಾರಿ ಕೇದಾರಕ್ಕೆ ಹೋಗುವುದು. ಬಲದ ದಾರಿ ಚೋಪತಾ ಎನ್ನುವ ಊರಿನ ಮೂಲಕ ಗೋಪೇಶ್ವರ ಎನ್ನುವ ಸ್ಥಳಕ್ಕೆ ಹೋಗುತ್ತದೆ. ಅಲ್ಲಿಂದ ಮುಂದೆ ಚಮೋಲಿ ಎನ್ನುವ ಊರಿನಲ್ಲಿ ಪುನಃ ಬದರಿಯ ಹೆದ್ದಾರಿಗೆ ಸೇರುತ್ತದೆ. ನಾನು ಬದರಿಯಿಂದ ಈ ದಾರಿಯ ಮೂಲಕವೇ ಬಂದು ಚೋಪತಾ ಗ್ರಾಮಕ್ಕೆ ಸೇರಿಕೊಂಡಿದ್ದು. ಚೋಪತಾ ಗ್ರಾಮವು ತುಂಗನಾಥದ ಬೇಸ್ ಕ್ಯಾಂಪ್ ಎನ್ನಬಹುದು. ಇಲ್ಲಿಂದ ಸುಮಾರು ೫ ಕಿಮೀ ದೂರದ ಕಷ್ಟಸಾಧ್ಯ ಚಾರಣದ ಮೂಲಕ ತುಂಗನಾಥವನ್ನು ತಲುಪಬಹುದು. ಅಲ್ಲಿಂದ ಮುಂದೆ ಮತ್ತೆ ಸುಮಾರು ೩ ಕಿ.ಮೀ ದೂರ ಇನ್ನಷ್ಟು ಕಷ್ಟಪಟ್ಟು ನಡೆದರೆ ಸ್ವರ್ಗಸದೃಶವಾದ ಚಂದ್ರಶಿಲಾ ಪರ್ವತದ ತುದಿಯನ್ನು ಸೇರಬಹುದು.

A wild flower
A wild flower
Mystical Mountains
Mystical Mountains
A leopard dotted moth, camouflaged between the rubles
A leopard dotted moth, camouflaged between the rubles
A white beauty
A white beauty
ಚೆಲುವ ಹೂವ ಹಿಂದೆ ಮಹಾನ್ ಪರ್ವತ
ಚೆಲುವ ಹೂವ ಹಿಂದೆ ಮಹಾನ್ ಪರ್ವತ
ಗೋಪೇಶ್ವರ - ಗುಪ್ತಕಾಶಿ ರಸ್ತೆ. ಚೋಪಟಾದ ಬಳಿ ಪರ್ವತದ ನೆತ್ತಿಯ ಮೇಲೆ ಇರುವ ತಿರುವು
ಗೋಪೇಶ್ವರ – ಗುಪ್ತಕಾಶಿ ರಸ್ತೆ. ಚೋಪಟಾದ ಬಳಿ ಪರ್ವತದ ನೆತ್ತಿಯ ಮೇಲೆ ಇರುವ ತಿರುವು

chopta-008 chopta-009

Watch Tover at Chopta Curve
ಚೋಪತಾ ಕಣಿವೆ ವೀಕ್ಷಣಾ ಗೋಪುರ
Wilde flower on a clif
Wilde flower on a cliff
A Rapid near Chopta
A Rapid near Chopta
Pristine pure spring
Pristine pure spring
A carnivorous plant. A close of Pitcher Plant, perhaps.
A carnivorous plant. A close of Pitcher Plant, perhaps.

ಈ ಸರಹದ್ದಿನಲ್ಲಿ ಮನುಷ್ಯರ ವಾಸ್ತವ್ಯ ಇರುವ ಸ್ಥಳಗಳಲ್ಲೆಲ್ಲಾ ಚೋಪತಾ ಅತ್ಯಂತ ಸುಂದರವಾದ ಪ್ರದೇಶವೆನ್ನಲು ಅಡ್ಡಿ ಇಲ್ಲ. ಸಮುದ್ರ ಮಟ್ಟದಿಂದ ೮೦೦೦ ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ, ಪರಿಶುಭ್ರವಾದ ಹವಾಮಾನವುಳ್ಳ ಪುಟ್ಟ ಗ್ರಾಮವಿದು. ಇಲ್ಲಿ ನಿಂತು ನೋಡಿದಾಗ ಸುತ್ತಮುತ್ತಲಿನ ಅನೇಕ ಪರ್ವತಗಳ ನೆತ್ತಿಯು ಬಹು ಮೋಹಕವಾಗಿ ಕಾಣಿಸುವುದು. ಭೌಗೋಳಿಕವಾಗಿ ಈ ಸ್ಥಳವು ಕೇದಾರನಾಥ ವನ್ಯಜೀವಿ ಸ್ಥಳದ ಒಂದು ಭಾಗ. ಪರಿಶುದ್ಧ ನೀರಿನ ಪುಟ್ಟ ಝರಿಗಳು, ಊಹಿಸಲೂ ಆಗದ ವರ್ಣದ ಹೂವುಗಳು, ಕೀಟಾಹಾರಿ ಸಸ್ಯಗಳು, ಕಚಗುಳಿ ಇಡುವ ಮೋಡಗಳೇ ನಿಮಗೆ ಈ ಊರಿನಲ್ಲಿ ಸಿಗುವ ಸಂಗಾತಿಗಳು. ಅದೃಷ್ಟವು ಚೆನ್ನಾಗಿ ಇದ್ದರೆ ಕಸ್ತೂರಿ ಮೃಗಗಳು ಕೂಡ ಕಾಣಿಸುತ್ತವೆ.

ನಾನು ಇಲ್ಲಿಗೆ ಬಂದು ಸೇರಿದಾಗ ಸಂಜೆ ಸುಮಾರು ೬ಗಂಟೆ ಆಗಿತ್ತು. ನಮ್ಮನ್ನು ಸ್ವಾಗತಿಸಿದ್ದು ಅಲ್ಲಿಯೇ ಮೇಯುತ್ತಿದ್ದ ಸಾಕು ಕುದುರೆಗಳ ಗಂಟೆಯ ಕಿಣಿ ಕಿಣಿ ಮಾಧುರ್ಯ ಮತ್ತು  ಬಹು ಇಂಪಾಗಿ ಆದರೆ ಕ್ಷೀಣವಾಗಿ ಕೇಳಿಸುತ್ತಿದ್ದ ಕಾಡು ಪಕ್ಷಿಗಳ ಕಲರವ. ಇವುಗಳ ಹೊರತಾಗಿ ಅಲ್ಲಿ ಕೇಳಿಬಂದ ದೊಡ್ಡ ಸದ್ದು ಎಂದರೆ ಅಲ್ಲಿಯೇ ಇರುವ ಹೋಟೆಲಿನ ಒಲೆಯ ಮೇಲೆ ಕುದಿಯುತ್ತಿದ್ದ ಚಹಾದ್ದು!

ಅಲ್ಲಿಯೇ ಇರುವ ಒಂದು ಧರ್ಮಶಾಲೆಯ ಉಸ್ತುವಾರಿಯವನು, ಲಕ್ಷ್ಮಣ ಎಂಬಾತ ಬಂದು ಉಳಿದುಕೊಳ್ಳುವ ವ್ಯವಸ್ಥೆಗೆ ಸಹಾಯ ಮಾಡಿದ. ಆತನೊಡನೆ ಮಾತನಾಡುತ್ತ ವಾತಾವರಣದ ಅರಿವು ಮೂಡಿಸಿಕೊಂಡೆ. ಆದರೆ ಮನದಲ್ಲಿ ಯಾವ ಉದ್ದೇಶಕ್ಕೆ ತುಂಗನಾಥಕ್ಕೆ ಹೊರಟಿದ್ದೆನೋ ಆ ಉದ್ದೇಶವೇ ಈಡೇರದಿರುವ ಭಯವು ಹೊರಗೆ ಇದ್ದ ದಟ್ಟ ಕಾರ್ಮೋಡಗಳಿಗಂತಲೂ ಹೆಚ್ಚಿಗೆ ಕವಿಯಿತು. ಬೇಡವೆಂದರೂ ಕಣ್ಣಂಚಿನಲ್ಲಿ ನೀರು ಮೂಡಿತು. ಅದನ್ನು ನೋಡಿದ ಆತ ದೇವರಿದ್ದಾನೆ. ಪ್ರಯತ್ನ ಮಾಡಿರಿ ಎಂದು ಹೇಳಿ, ತನ್ನ ಮುಂದಿನ ಕೆಲಸಕ್ಕಾಗಿ ಹೊರಟು ಹೋದ.

ಸಂಜೆ ೭ಕ್ಕೆಲ್ಲ ನೀರವ ಮೌನ ವ್ಯಾಪಿಸಿತು. ಧ್ಯಾನಶೀಲ ಮನಸ್ತತ್ವದವರಿಗೆ ಹೇಳಿದ ಮಾಡಿಸಿದ ನಿಃಶಬ್ದವದು. ಆದರೆ ಅಷ್ಟು ಶುದ್ಧ ಮನಸ್ಸು ನನಗೆಲ್ಲಿ ಬರಬೇಕು? ಏನೋ ಆಲೋಚನೆ ಮಾಡುತ್ತ ಕೂತಿದ್ದಾಗ ಮೇಲೆ ಕವಿದಿದ್ದ ಮೋಡಗಳ ಎಲ್ಲ ಹೊಲಿಗೆಗಳೂ ಒಟ್ಟಿಗೇ ಹರಿದು ಬಿಟ್ಟವು! ಹರಿದ ಮೋಡಗಳಿಂದ ಹೊರಬಂದ ವರ್ಷಧಾರೆಯಲ್ಲಿ ನನ್ನ ಕನಸೂ ಕೊಡ ಕರಗಿ ಹೋಗತೊಡಗಿತು. ಇಂತಹ ಸ್ಥಿತಿಯಲ್ಲಿ ಯಾವ ಧ್ಯಾನ ಮಾಡಲಿ? ಆದರೆ ಕನಸು ಪೂರ್ತಿಯಾಗಿ ಕೊಚ್ಚಿಕೊಂಡು ಹೋಗದಂತೆ ತಡೆದದ್ದು ಲಕ್ಷ್ಮಣ ಹೇಳಿದ “ದೇವರಿದ್ದಾನೆ” ಎನ್ನುವ ಭರವಸೆಯೊಂದೆ!  ಅಂತೂ ಯಾವುದಕ್ಕೂ ಮನಸ್ಸು ತಯಾರಾಗುತ್ತಿದ್ದಂತೆಯೇ ನಿದ್ರೆಯೂ ಆವರಿಸಿತು. ಬೆಳಗಿನವರೆಗೆ ಮಳೆ ಸುರಿದಂತೆಯೆ ಇತ್ತು.

ಎಚ್ಚರವಾಗಿದ್ದು ಬಹು ಬೇಗನೆ. ಮಂದಹಾಸ ಮೂಡಲು ಕಾರಣವಿತ್ತು. ಮಳೆಯ ಸುದ್ದಿ ಇದ್ದಿಲ್ಲ. ಅಲ್ಲಿಂದ ಮುಂದೆ ನಡೆದದ್ದೆಲ್ಲ ಲಕ್ಷ್ಮಣ ಹೇಳಿದಂತೆ “ದೇವರಿದ್ದಾನೆ” ಎನ್ನುವ ಮಾತಿನ ಮ್ಯಾಜಿಕ್ಕೇ!

– ಮುಂದುವರೆಯುತ್ತದೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts