ತುಂಗನಾಥನತ್ತ ಪಯಣ – ಭಾಗ 3/4

ತುಂಗನಾಥನ ದರ್ಶನದ ಅಪೇಕ್ಷೆಯು ನನಗೆ ಇದ್ದಿದ್ದು ನಿಜವೇ. ಆದರೆ ವಾಸ್ತವದಲ್ಲಿ ನಾನು ಅತಿ ಹೆಚ್ಚು ಉತ್ಸುಕನಾಗಿದ್ದು ಈ ಮಹಾಪರ್ವತದ ದರ್ಶನಕ್ಕಾಗಿ. ಚೌಖಂಬಾ ಎನ್ನುವುದು ಇದರ ಹೆಸರು. ಪರ್ವತಕ್ಕಿಂತ ಮೊದಲು ಈ ಹೆಸರು ನನಗೆ ಚೌಖಂಬಾ ಪ್ರಕಾಶನದ ಸಂಸ್ಕೃತಸಾಹಿತ್ಯದ ಪ್ರಕಟಣೆಗಳ ಮೂಲಕ ತಿಳಿದಿತ್ತು. ರಾಮ ಶಬ್ದವನ್ನು ಬಾಯಿಪಾಠ ಮಾಡುವ ಪುಸ್ತಕದ ಮೇಲೆ ನೋಡಿದ್ದೆ. ಎಷ್ಟೋ ವರ್ಷಗಳ ನಂತರ ಇದು ಸುಪ್ರಸಿದ್ಧ (ಆದರೆ ನನಗೂ ತಿಳಿದಿಲ್ಲದ 😉 ) ಹಿಮಪರ್ವತದ ಹೆಸರು ಎಂದು ಗೊತ್ತಾಗಿ ನೋಡುವ ಕುತೂಹಲ ಬೆಳೆಯುತ್ತಾ ಹೋಯಿತು. ಅಂತೂ ಇದು ಸುಮಾರು 15 ವರ್ಷಗಳ ಕನಸು ಎನ್ನಲು ಅಡ್ಡಿಯಿಲ್ಲ.

ಪರ್ವತದ ಫೋಟೋ ತೆಗೆಯಲಿಕ್ಕೆ ಮೋಡಗಳ ದೇವನಾದ ಪರ್ಜನ್ಯನು ಬಿಡಲೇ ಇಲ್ಲ. ಹಾಗಾಗಿ ಈ ಲೇಖನದಲ್ಲಿ ವಿಶೇಷ ಚಿತ್ರಗಳೇನೂ ಇಲ್ಲ.

ಗಂಗೋತ್ರಿಯ ಅಂಗಳದ ಸುತ್ತ

ಗಂಗೆಯು ದೇವಲೋಕದಿಂದ ಭೂಲೋಕಕ್ಕೆ ಧುಮುಕಿದ್ದು ಎಲ್ಲರಿಗೂ ಗೊತ್ತು. ಹಾಗೆ ಧುಮುಕಿದ ಜಾಗೆಯು ಇಂದು ಒಂದು ನೂರಾರು ಚದುರ ಮೈಲಿ ಹರಡಿಕೊಂಡಿರುವ ಒಂದು ಮಹಾ ಮಹಾ ಮಹಾ ಮಂಜುಗಡ್ಡೆ. ಇದನ್ನೇ ವೈಜ್ಞಾನಿಕವಾಗಿ ಹಿಮನದಿ ಎಂದು ಕರೆಯುತ್ತಾರೆ.  ಈ ಹಿಮನದಿಯ ಕೊರಕಲುಗಳ ಸಂದಿಯಿಂದ ಹೊರಬರುವ ನೂರಾರು ಚಿಲುಮೆಗಳೇ ಗಂಗಾನದಿಗೆ ಸ್ರೋತಗಳು. ಈ ಚಿಲುಮೆಗಳು ಹಾಗು ಹಿಮನದಿಯನ್ನು ಒಟ್ಟಾಗಿ ಗಂಗೋತ್ರಿ ಗ್ಲೇಸಿಯರ್ ಎಂದು ಕರೆಯುತ್ತಾರೆ. (ಪ್ರಮುಖವಾದ ಒಂದು ಧಾರೆಗೆ  ಗೋಮುಖವೆಂದು ಹೆಸರು. ಇದು ಗಂಗಾನದಿಯ ಮೂಲವೆಂದು ಹೇಳುತ್ತಾರೆ)  ಈ ಹಿಮನದಿಯನ್ನು  ಎತ್ತರೆತ್ತರದ ಅನೇಕ ಪರ್ವತಗಳು ಸುತ್ತುವರೆದಿವೆ. ಈ ಎಲ್ಲ ಪರ್ವತಗಳನ್ನು ಗಂಗೋತ್ರಿ  ಪರ್ವತಸಮೂಹ ಎಂದು ಕರೆಯಲಾಗುತ್ತದೆ. ಎಲ್ಲವುಗಳೂ ಒಂದಕ್ಕಿಂತ ಒಂದು ಭವ್ಯ ಹಾಗೂ ಮನೋಹರವಾಗಿವೆ. ಆದರೆ ಕೇದಾರಪರ್ವತ, ಶಿವಲಿಂಗ, ಭೃಗು, ಭಗೀರಥ,  ಮೇರು ಹಾಗು ಚೌಖಂಬಾ ಪರ್ವತಗಳ ಸೌಂದರ್ಯವು ಸುಪ್ರಸಿದ್ಧವಾಗಿವೆ. ಈ ಎಲ್ಲಾ ಪರ್ವತಗಳಲ್ಲಿ ಅತಿ ಎತ್ತರವಾಗಿ ಇರುವುದು ಚೌಖಂಬಾ. ಈ ಪರ್ವತಕ್ಕೆ ನಾಲ್ಕು ಶಿಖರಗಳು ಇವೆ. ಹೀಗಾಗಿಯೇ ಇದಕ್ಕೆ ಚೌಖಂಬಾ ಎನ್ನುವ ಹೆಸರು ಬಂದಿದೆಯೋ ಏನೋ. (ಚೌ= ನಾಲ್ಕು ಖಂಬಾ=ಕಂಬಗಳು). ಸರ್ಕಸ್ಸಿನ ಗುಡಾರದ ಮಧ್ಯ ನಾಲ್ಕು ಕಂಬಗಳನ್ನು ಚುಚ್ಚಿ ಅದನ್ನು ಎತ್ತಿ ನಿಲ್ಲಿಸಿದಾಗ ಅದು ತನ್ನ ಸುತ್ತಮುತ್ತಲಿರುವ ಚಿಕ್ಕಪುಟ್ಟ ಟೆಂಟುಗಳ ಮಧ್ಯ ಭವ್ಯವಾಗಿ ಹೇಗೆ ಕಾಣಿಸುವುದೋ ಅದೇ ರೀತಿ ಇದೆ ಚೌಖಂಬಾ ಪರ್ವತ.

ಚೌಖಂಬಾ ಮಹಾಶಿಖರ

ಈ ಪರ್ವತವೇ ಎಲ್ಲಕ್ಕೂ ಎತ್ತರವಾದರೂ ಇದಕ್ಕೆ ಇರುವ ನಾಲ್ಕೂ ಶಿಖರಗಳು ಒಂದೇ ಎತ್ತರದಲ್ಲಿ ಇಲ್ಲ. ಇವುಗಳನ್ನು ಚೌಖಂಬಾ 1, 2,3 ಹಾಗು 4 ಎಂದು ಗುರುತಿಸುತ್ತಾರೆ. 23410 ಅಡಿಗಳಷ್ಟು ಎತ್ತರವಿರುವ ಚೌಖಂಬಾ 1 ಎಲ್ಲಕ್ಕೂ ಎತ್ತರದ ಶಿಖರವು. ಉಳಿದವುಗಳು ಕ್ರಮವಾಗಿ 23196, 22949, ಹಾಗು 22847 ಅಡಿಗಳಷ್ಟು ಎತ್ತರವಿದ್ದು ಸಾಹಸಿಗಳಿಗೆ ಸವಾಲು ಹಾಕುತ್ತಾ ನಿಂತಿವೆ.

ಗಂಗೋತ್ರಿ ಹಿಮನದಿಯು ಬಹು ವಿಶಾಲವಾಗಿ ಹರಡಿಕೊಂಡಿದೆ ಎಂದು ತಿಳಿಯಿತಷ್ಟೆ. ಅದರ ಸುತ್ತಲೂ ಅನೇಕ ಪರ್ವತಗಳಿವೆ ಎಂದೂ ಗೊತ್ತಾಯಿತು. ಆದರೆ ಬೇರೆ ಬೇರೆ ಪರ್ವತಗಳನ್ನು ಏರಲು, ಅಥವಾ ಸಮೀಪಿಸಲು ಬೇರೆ ಬೇರೆ ಜಿಲ್ಲಾ ಕೇಂದ್ರಗಳ ಮೂಲಕ ಹಾಯ್ದು ಬರಬೇಕು. ಹಿಮಾಲಯದ ಸಂಕೀರ್ಣ ಭೂರಚನಯೇ ಇದಕ್ಕೆ ಕಾರಣವಾಗಿದೆ. ಭೌಗೋಳಿಕವಾಗಿ ಈ ಗ್ಲೇಸಿಯರ್ ಇರುವ ಪ್ರದೇಶವು ಉತ್ತರಕಾಶಿ ಜಿಲ್ಲೆಗೆ ಸೇರಿದೆ. ಈ ಚೌಖಂಬಾ ಪರ್ವತವು ಇರುವುದು ಗ್ಲೇಸಿಯರಿನ ಪೂರ್ವಭಾಗಕ್ಕೆ. ಈ ಭಾಗವು ಉತ್ತರಕಾಶಿಗಿಂತಲೂ ಚಮೋಲಿ ಜಿಲ್ಲೆಗೆ ಹತ್ತಿರ. ಪ್ರಸಿದ್ಧ ಬದರಿಕಾಶ್ರಮಕ್ಕೆ ಇದು ಪಶ್ಚಿಮ ದಿಕ್ಕಿನಲ್ಲಿದೆ.  ಯಾರಿಗಾದರೂ ಧೈರ್ಯ, ಸಾಮರ್ಥ್ಯ ಮತ್ತು ಅದೃಷ್ಟ ಮೂರೂ ಒಟ್ಟಿಗೆ ಇದ್ದರೆ ಪರ್ವತದ ಬುಡದಿಂದ ಬದರೀ ನಾರಾಯಣನ ಕ್ಷೇತ್ರಕ್ಕೆ ನಡೆದುಕೊಂಡೇ ಹೋಗಬಹುದು. ಈ ಮೂರರಲ್ಲಿ ಮೊದಲನೆಯದ್ದು ಇಲ್ಲದಿರುವವರು ಪ್ರಯತ್ನವನ್ನೇ ಮಾಡಲಾರರು. ಕೊನೆಯ ಎರಡು ಅಂಶಗಳು ಇಲ್ಲದಿರುವವರು ಬದರಿಯ ಬದಲು ನೇರವಾಗಿ ನಾರಾಯಣನ ಊರಿಗೇ ಹೋಗಬಹುದು.

ಅಲ್ಲಿಂದ ಬದರಿಗೆ ಬರುವುದು ಒಂದು ಕಡೆ ಇರಲಿ. ಅದು ನಮ್ಮಂಥ ಸಾಧಾರಣರಿಂದ ಆಗದ ಕೆಲಸ. ಆದ್ದರಿಂದ ಪರ್ವತದ ಕಡೆಗೆ ಹೋಗುವ ವಿಚಾರವನ್ನಷ್ಟೇ ನೋಡೋಣ.

ಹಿಮಾಲಯದ ಎಲ್ಲ ಪರ್ವತಗಳಂತೆ ಚೌಖಂಬಾ ಪರ್ವತವೂ ಕೂಡಾ ಕಷ್ಟಸಾಧ್ಯವಾದ ಹಾದಿಯುಳ್ಳದ್ದು.  ಕೇದಾರನಾಥ, ತುಂಗನಾಥ, ಪೌರಿ, ಔಲಿ, ಮಧ್ಯಮಹೇಶ್ವರ, ದೇವರಿಯಾ ತಾಲ್ ಹೀಗೆ ಅನೇಕ ಕಡೆಗಳಿಂದಲೂ ಇದರ ಶಿಖರ ನಮ್ಮ ದೃಷ್ಟಿಗೆ ಗೋಚರವಾಗುವಂತಹುದು. ಅದೃಷ್ಟವಿದ್ದಲ್ಲಿ ಹೃಷೀಕೇಶದಿಂದ 50 ಕಿಮೀ ದೂರ ಬಂದ ನಂತರ ಒಂದು ತಿರುವಿನಲ್ಲಿಯೂ ಕಾಣಿಸುತ್ತದೆ. ಆಗಸ ನಿರ್ಮಲವಾಗಿರಬೇಕು ಅಷ್ಟೇ. ಆದರೆ ಇಷ್ಟೆಲ್ಲ ಕಡೆಗಳಿಂದ ಕಾಣಿಸಿದರೂ ಸಹ ಈ ಪರ್ವತದ ಬುಡಕ್ಕೆ ಹೋಗಿ ಸೇರುವುದು ಅತ್ಯಂತ ಕಷ್ಟಕರ. ಚೆನ್ನಾಗಿ ಬಲ್ಲವರ ಪ್ರಕಾರ ಈ ಪರ್ವತದ ಮೇಲೆ ನಾಲ್ಕು ಕಡೆಗಳಿಂದ ಹತ್ತಬಹುದು. ಅದು ಪರ್ವತದ ಮೇಲೆ ಹೋಗುವ ಮಾತಾಯಿತು. ಆದರೆ ತುದಿಗೆ ಹೋಗುವ ಮೊದಲು ಪರ್ವತದ ಹತ್ತಿರವಾದರೂ ಹೋಗಬೇಕಲ್ಲ. ಅದಕ್ಕೆ ಈ ಲೇಖನದ ಮೊದಲ ಭಾಗದಲ್ಲಿ ಹೇಳಿದಂತೆ ರುದ್ರಪ್ರಯಾಗದ ಕವಲಿನ ಮೂಲಕ ಬದರೀನಾಥಕ್ಕೆ ತಲುಪಬೇಕು. ಯಾಕೆಂದರೆ ಚೌಖಂಬಾಕ್ಕೆ ಹೋಗುವ ದಾರಿಯ ಬಾಗಿಲು ಇರುವುದು ಅಲ್ಲಿಯೇ. ತುಂಗನಾಥನ ಬಳಿ ಸಿಗುವುದು ಪರ್ವತದ ಸುಂದರವಾದ ನೋಟ ಮಾತ್ರ.

ಬದರೀನಾಥದಿಂದ ಪೂರ್ವದಿಕ್ಕಿನಲ್ಲಿ ಮೂರು ಕಿಮೀ ದೂರದಲ್ಲಿ ಮಾಣಾ ಎಂಬುವ ಪುಟ್ಟ ಗ್ರಾಮವಿದೆ. ಇದು ಈ ಭಾಗದಲ್ಲಿ ಭಾರತದ ಕಡೆಯ ಜನವಸತಿ ಇರುವ ಹಳ್ಳಿ. ಇಲ್ಲಿಂದ ಮುಂದೆ ಉತ್ತರಕ್ಕೆ ತಿರುಗಿ ನಾರಾಯಣ ಪರ್ವತವನ್ನು ಬಳಸಿಕೊಂಡು ಬದರಿಗೆ ಸಮಾನಾಂತರವಾಗಿ ಪಶ್ಚಿಮದತ್ತ ಮುಂದೆ ಸುಮಾರು 25 ಕಿಲೋ ಮೀಟರುಗಳಷ್ಟು ಕಾಲ್ನಡಿಗೆಯಲ್ಲಿ ಸಾಗಬೇಕು.

ಇದು ಮಹಾ ದುರ್ಗಮವಾದ, ಜೀವಕ್ಕೆ ಸಂಚಕಾರ ತರಬಲ್ಲ ಹಿಮನದಿಗಳನ್ನು ದಾಟಿಕೊಂಡು ಹೋಗಬೇಕಾದ ರಸ್ತೆ. ಆದರೆ ದಾರಿಯಲ್ಲಿ ಅದ್ಭುತವಾದ ವಸುಧಾರಾ ಜಲಪಾತ, ಅಲ್ಲಿಂದ ಮುಂದೆ ಲಕ್ಷ್ಮೀವನ ಎಂಬ ಸುಂದರ ಕಾಡು ನಿಮಗೆ ಕಾಣ ಸಿಗುತ್ತವೆ.  ಇಲ್ಲಿಗೆ ಅರ್ಧ ದಾರಿ ಕ್ರಮಿಸಿದಂತಾಯ್ತು. ವಸುಧಾರಾ ಜಲಪಾತದಲ್ಲಿ ಚತುರ್ಮುಖ ಬ್ರಹ್ಮದೇವರು ತಪಸ್ಸು ಮಾಡಿ ಹಯಗ್ರೀವದೇವರಿಂದ ಜ್ಞಾನದ ಅನುಗ್ರಹವನ್ನು ಪಡೆದರು.  ಲಕ್ಷ್ಮೀವನದಲ್ಲಿ ಭೂರ್ಜ ಎನ್ನುವ ವೃಕ್ಷಗಳು ಇವೆ. ಈ ವೃಕ್ಷಗಳ ತೊಗಟೆಯು ಕಾಗದದಷ್ಟು ತೆಳ್ಳಗೆ ಇರುತ್ತವೆ. ಇವುಗಳ ಮೇಲೆಯೇ ಪ್ರಾಚೀನರು ಗ್ರಂಥಗಳನ್ನು ಬರೆಯುತ್ತಿದ್ದುದು. ಈಗ ಇದು ಒಂದು ರಕ್ಷಿತಾರಣ್ಯ. ಇಲ್ಲಿ ಈ ವೃಕ್ಷದ ತೊಗಟೆಯನ್ನು ಕಿತ್ತುವ ಹಾಗೆ ಇಲ್ಲ.  ಈ ಲಕ್ಷ್ಮೀ ವನವನ್ನು ದಾಟಿ ಮುಂದೆ ಸುಮಾರು 15 ಕಿ.ಮೀ  ನಡೆದರೆ ಚೌಖಂಭಾ ಪರ್ವತದ ಬುಡವನ್ನು ತಲುಪಬಹುದು. ಈ ದಾರಿಯಲ್ಲಿ ಬಂದರೆ ನೀವು ಪರ್ವತದ ಆಗ್ನೇಯ ಭಾಗಕ್ಕೆ ಅಥವಾ ಪೂರ್ವದಿಕ್ಕಿಗೆ ಬಂದು ಸೇರುತ್ತೀರಿ. ಇದಿಷ್ಟಕ್ಕೆ ಸುಮಾರು 2 ದಿನಗಳ ಸಮಯ ತಗುಲುವುದು.

ಚೌಖಂಭಾಪರ್ವತದ ಶಿಖರಾಗ್ರವು ಭೂಗೋಳ ರಚನಾಶಾಸ್ತ್ರದ ಪ್ರಕಾರ ಅಲ್ಟ್ರಾ ಪ್ರಾಮಿನೆಂಟ್ ಪೀಕ್ ಎನ್ನುವ ವರ್ಗದಲ್ಲಿ ಪರಿಗಣಿತವಾಗಿದೆ. ಪರ್ವತವೊಂದರ ಉನ್ನತ ದಿಬ್ಬದಿಂದ ಶಿಖರಾಗ್ರಕ್ಕೆ ಇರುವ ಎತ್ತರವು 1500 ಮೀಟರಿಗಿಂತಲೂ ಎತ್ತರವಿದ್ದರೆ  ಅದನ್ನು ಹೀಗೆ ಕರೆಯುತ್ತಾರೆ. ಸಂಕ್ಷಿಪ್ತವಾಗಿ ಅಲ್ಟ್ರಾ ಎಂದೂ ಅನ್ನುತ್ತಾರೆ.  ಈ ಪರ್ವತವನ್ನು ಹತ್ತಲು 1938 ಹಾಗು 1939ರಲ್ಲಿ ಪ್ರಯತ್ನಗಳು ನಡೆದವಾದರೂ ಅವು ವಿಫಲಗೊಂಡವು. ಎವರೆಸ್ಟ್ ಪರ್ವತವನ್ನು ಹತ್ತುವ ಒಂದೇ ಒಂದು ವರ್ಷದ ಮೊದಲು, ಅಂದರೆ 1952ರಲ್ಲಿ ಇಬ್ಬರು ಸ್ವಿಸ್ ಪ್ರಜೆಗಳು ಯಶಸ್ವಿಯಾಗಿ ಪರ್ವತದ ಆರೋಹಣವನ್ನು ಮಾಡಿದರು.

ಇಷ್ಟು ಎತ್ತರವಿರುವ ಶಿಖರದ ಮೇಲೆ ಸಂಗ್ರಹವಾಗುವ ಹಿಮವು ನಿರಂತರವಾಗಿ ಕರಗುತ್ತಾ ಕೆಳಗೆ ಹರಿದು ಬರುತ್ತದೆ. ಹೀಗೆ ಹಲವಾರು ಪರ್ವತಗಳ ಮಧ್ಯ ಈ ನೀರು ಇಳಿದು ಬರುತ್ತಾ ಮತ್ತೆ ಘನೀಭವಿಸುವುದು. ಇದರ ವಿಸ್ತಾರ ಅಗಾಧವಾಗಿರುತ್ತದೆ. ಇದುವೆ ಗ್ಲೇಸಿಯರ್. ಚೌಖಂಬಾ ಪರ್ವತವು ತನ್ನ ಎಲ್ಲ ಮೂಲೆಗಳಲ್ಲಿಯೂ ಈ ರೀತಿಯ ಹಿಮನದಿಯ ಹೊದಿಕೆಯನ್ನು ಹೊದ್ದಿಕೊಂಡಿದೆ. ಇವುಗಳಲ್ಲಿ ಪ್ರಖ್ಯಾತವಾದುದು ಭಗೀರಥ್ ಖರಕ್ ಗ್ಲೇಸಿಯರ್. ಈ ಹಿಮನದಿಯೇ ಬದರಿಯಲ್ಲಿ ಕಾಣುವ ಅಲಕನಂದಾ ನದಿಯ ನೀರಿನ ಪ್ರಧಾನ ಮೂಲ.  ಪರ್ವತದ ಆಗ್ನೇಯ ದಿಕ್ಕಿನಲ್ಲಿ ಸತೋಪಂಥ ಎನ್ನುವ ಪರಿಶುಭ್ರವಾದ ಸರೋವರವಿದೆ. ಈ ಸರೋವರದ ನೀರಿನ ಮೂಲವೂ ಸಹ ಚೌಖಂಬಾದ ಆಗ್ನೇಯ ಭಾಗದಲ್ಲಿರುವ ಸತೋಪಂಥ್ ಗ್ಲೇಸಿಯರ್.  ತುಸು ದೂರದಲ್ಲಿಯೇ ಈ ಹಿಮನದಿಯ ನೀರು ಮುಂದುವರೆದು ಅಲಕನಂದೆಯೊಂದಿಗೆ ಒಂದಾಗುತ್ತದೆ.

ಪಾಂಡವರು ತಮ್ಮ ಕೊನೆಯ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಸ್ವರ್ಗಕ್ಕೆ ಹೊರಟರು ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಹೀಗೆ ಸ್ವರ್ಗಕ್ಕೆ ತೆರಳಲು ಅವರು ಆಯ್ದುಕೊಂಡಿದ್ದು ಈ ಚೌಖಂಬಾ ಪರ್ವತದ ದಾರಿಯೇ ಎಂದು ಹೇಳುತ್ತಾರೆ. ಈ ಸತೋಪಂಥ ಗ್ಲೇಸಿಯರಿನ ಮೇಲ್ಭಾಗದಲ್ಲಿ ಸ್ವರ್ಗಾರೋಹಿಣಿ ಪರ್ವತಕ್ಕೆ ಒಂದು ದಾರಿ ಉಂಟು.  ಸಾಹಸಿಗಳು ಈ ದಾರಿಯಲ್ಲಿ ಚಾರಣ ನಡೆಸಿರುವ ಉದಾಹರಣೆಗಳುಇವೆ. ಅಂದ ಹಾಗೆ, ಈ ಸ್ವರ್ಗಾರೋಹಿಣಿ ಪರ್ವತವಿರುವುದು ಉತ್ತರಕಾಶಿಯ ಜಿಲ್ಲೆಯ ಸರಸ್ವತೀ ಪರ್ವತ ವಲಯದಲ್ಲಿ. ಚೌಖಂಭಾದಿಂದ ವಾಯುವ್ಯಕ್ಕೆ ಸುಮಾರು 45 ಕಿ.ಮೀ ದೂರದ ಕಠಿಣಾತಿ ಕಠಿಣ ಕಾಲ್ದಾರಿಯದು.

ಮ್ಮ್ಮ್, ಇದು ಬರೆದಷ್ಟೂ ಬೆಳೆಯುವ ವಿಷಯ. ಇಲ್ಲಿಗೆ ಇದನ್ನು ನಿಲ್ಲಿಸುತ್ತೇನೆ.  ಚೌಖಂಭಾಕ್ಕೆ ಭೇಟಿ ನೀಡುವವರು ಇದಕ್ಕೆಂದೇ ಇರುವ ವೃತ್ತಿಪರ ಸಂಸ್ಥೆಗಳನ್ನು ಸಂಪರ್ಕಿಸಬಹುದು.  ಲಕ್ಷ್ಮೀವನದವರೆಗಿನ ಕಾಲ್ದಾರಿಯ ಅನುಭವ ನನ್ನದು. ಉಳಿದದ್ದು ಅನುಭವಸ್ಥರಿಂದ ಕೇಳಿ, ವಿಕಿಯನ್ನು ಗೋಳಾಡಿಸಿ ಪಡೆದದ್ದು. ಲೇಖನದ ಆರಂಭದಲ್ಲಿ ಚೌಖಂಬಾ ಪರ್ವತವು ಸರ್ಕಸ್ಸಿನ ಟೆಂಟಿನಂತಿದೆ ಅಂದೆನಲ್ಲ, ಇಲ್ಲಿಗೆ  ಹೋಗಿ ಬರುವುದೂ ಕೂಡ ಒಂದು ಸರ್ಕಸ್ಸೇ. ಅ ಸರ್ಕಸ್ಸಿನ ಆನಂದ ಕ್ಷಣಿಕವಾದರೆ ಈ ಸರ್ಕಸ್ಸಿನ ಆನಂದವು ಶಬ್ದಗಳಿಗೆ ನಿಲುಕದು. ಅದನ್ನೇನಿದ್ದರೂ ಅನುಭವಿಸಬೇಕಷ್ಟೇ. ಈ ಅನುಭವಕ್ಕಾಗಿಯೇ ನಾನು ಪರಿತಪಿಸಿದ್ದು.

ಹೀಗೊಂದು ಕಲ್ಪನೆ ಮಾಡಿಕೊಳ್ಳೋಣ. ನೀವು ಯಾರದೋ ಒಂದು ಮನೆಗೆ ಬಂದಿದ್ದೀರಿ. ಅದು ಬಹುಮಹಡಿಯ ಕಟ್ಟಡ. ಲಿಫ್ಟಿನಲ್ಲಿ ಬಂದಿರಿ ಆದ್ದರಿಂದ ಎಷ್ಟು ಎತ್ತರ ಬಂದೆ ಎನ್ನುವ ಕಲ್ಪನೆಯೇ ನಿಮಗೆ ಇಲ್ಲ.  ಮನೆಯ ಒಳಗೆ ನಿಮಗೆ ಒಂದು ವಿಶಾಲವಾದ ಪರದೆಯು ಕಾಣಿಸುತ್ತದೆ. ಮೂರೂ ಕಡೆಗಳಲ್ಲಿ ಗೋಡೆ, ಒಂದು ಬದಿಯಲ್ಲಿ ಮಾತ್ರ ಗೋಡೆಯಷ್ಟಗಲದ ಪರದೆ.  ಅಲಂಕಾರಕ್ಕೆಂದು ಹಾಕಿದ್ದಾರೆಂದು ಭಾವಿಸಿ ಸುಮ್ಮನೆ ಇರುತ್ತೀರಿ. ಆದರೆ ಸ್ವಲ್ಪ ಹೊತ್ತಿನ ನಂತರ ಸುಮ್ಮನೆ ಕುತೂಹಲದಿಂದ ಒಂದು ಸಲ ಪರದೆಯನ್ನು ಎಳೆದ ತಕ್ಷಣ ಅಲ್ಲಿ ಗೋಡೆಯ ಬದಲು ಆ ಅಪಾರ್ಟ್ಮೆಂಟಿನ ಎದುರು ಭಾಗದಲ್ಲಿರುವ ಗಗನಚುಂಬಿ ಕಟ್ಟಡಗಳೂ ಕೆಳಗೆ ಆಳವಾದ ಕಂದಕವೂ, ಅಲ್ಲಿ ಓಡಾಡುತ್ತಿರುವ ಕಡ್ಡಿಪೆಟ್ಟಿಗೆಯ ಗಾತ್ರದ ವಾಹನಗಳೂ ಕಂಡಾಗ ಹೇಗೆ ಅನ್ನಿಸುತ್ತದೆ? ಒಂದೇ ಒಂದು ಕ್ಷಣ ಭಯಮೂಡುತ್ತದೆ. ನಂತರ ಆ ಭಯ ಮಾಯವಾಗಿ ಆ ಅನುಭವವನ್ನು ಆಸ್ವಾದಿಸಲು ತೊಡಗುತ್ತೀರಿ ತಾನೆ? ಸ್ವಲ್ಪ ಹೊತ್ತಿಗೆ ಬುದ್ಧಿ ತಿಳಿಯಾಗಿ ನೀವು ಬಂದಿರುವುದು 33ನೇ ಮಹಡಿ ಎಂದು ಗೊತ್ತಾಗುತ್ತದೆ. ಅಲ್ಲವೇನು?

ಈಗ ಅಪಾರ್ಟ್ಮೆಂಟಿನ ಜಾಗದಲ್ಲಿ ಪರ್ವತಗಳನ್ನೂ, ಲಿಫ್ಟಿನ ಜಾಗದಲ್ಲಿ ಕಾಲ್ದಾರಿಯನ್ನು,  ಎದುರಿಗೆ ಗಗಗನಚುಂಬಿ ಕಟ್ಟಡದ ಜಾಗದಲ್ಲಿ ಮಹಾಪರ್ವತವನ್ನೂ, ಅದರ ಕೆಳಗೆ ರಭಸವಾಗಿ ಹರಿಯುತ್ತಿರುವ ನದಿಯೊಂದನ್ನೂ ಕಲ್ಪಿಸಿಕೊಳ್ಳಿ.  ಸಂತಸವಾಗದೆ ಇರುತ್ತದೆಯೇ? ನಾನು ಈ ಬಾರಿಯ ಭೇಟಿಯಲ್ಲಿ ತಪ್ಪಿಸಿಕೊಂಡಿದ್ದು ಇಂತಹುದು ಒಂದು ರೋಚಕವಾದ  ಅನುಭವವನ್ನು.  ಬೂದುವರ್ಣದ ಮೋಡದ ದಟ್ಟ ಪರದೆಯ ಹಿಂದೆ ಇದ್ದ ಅಗಾಧಗಾತ್ರದ ಪರ್ವತಾವಳಿಯ ಸಂಪೂರ್ಣ ದರ್ಶನವಾಗಲೇ ಇಲ್ಲ.

ಏನು ನೋಡಿದೆ ನಾನು?

ಏನು ನೋಡಬೇಕಿತ್ತು?

Image Source : Wikipedia

ಅದೃಷ್ಟ  ನನ್ನ ಜೊತೆಗೆ ಇದ್ದಿದ್ದು ಒಂದೇ ಒಂದೇ ಕ್ಷಣ ಮಾತ್ರ. ಹಾಗಾಗಿ ಚೌಖಂಬಾದ ಚೂರೇ ಚೂರು ದರ್ಶನವಾಯಿತು. ಆ ಆನಂದವೂ ಅದ್ಭುತವೇ. ಆದರೆ ಸಂಪೂರ್ಣ ನೋಡಲು ಆಗಲಿಲ್ಲವಲ್ಲ ಎನ್ನುವ ಒಂದು ಹಳಹಳಿ ಇತ್ತು.  ಅದನ್ನು ಮರೆಸಿದ್ದು ಶ್ರೀ ತುಂಗನಾಥನ ದೇಗುಲದ ದರ್ಶನ.

– ಮುಂದಿನ ಸಂಚಿಕೆಯಲ್ಲಿ ಮುಕ್ತಾಯವಾಗುತ್ತದೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.