ತಾಮಡಿ ಸುರ್ಲಾ ಮಹಾದೇವ ಮಂದಿರ – ಗೋವಾ

ಶ್ರೀಹರಿವಾಯುಗುರುಭ್ಯೋ ನಮಃ

ದಶದೀಪಗಳು 4/10: ಶ್ರೀಮಹಾದೇವ ಮಂದಿರ – ತಾಂಬಡೀ ಸುರ್ಲಾ

ಗೋವಾ ಕದಂಬರ 12ನೆಯ ದೊರೆಯಾದ ಶಿವಚಿತ್ತ ಪರಮಾದಿದೇವ ಮತ್ತು ಆತನ ಪತ್ನಿಯಾದ ರಾಣಿ ಕಮಲಾದೇವಿಯರು ಆದರ್ಶ ರಾಜ-ರಾಣಿಯರು. ಶಿವಚಿತ್ತನು ಗೋವೆಯ ಅನೇಕ ಕಡೆಗಳಲ್ಲಿ ಅಗ್ರಹಾರಗಳನ್ನೂ ಮತ್ತು ಬ್ರಹ್ಮಸ್ಥಾನಗಳನ್ನೂ ನಿರ್ಮಿಸಿದ್ದಾನೆ. ರಾಣಿ ಕಮಲಾದೇವಿಯು ದೊಡ್ಡ ಹೃದಯದ ದೈವಭಕ್ತೆ. ಗೋವೆಯ ಬೋರಿ, ಪೆಡ್ನೆ, ಖಂಡೆಪಾರ್ ಮತ್ತಿತರ ಸ್ಥಳಗಳಲ್ಲಿ ಶಿವಾಲಯಗಳನ್ನೂ, ಬೆಳಗಾವಿಯ ಸಮೀಪದ ದೇಗಾವೆಯಲ್ಲಿ ಕಮಲಾನಾರಾಯಣ ಮಂದಿರವನ್ನೂ ಕಟ್ಟಿಸಿ ಆಸ್ತಿಕರ ಸೇವೆಗೈದವಳು. ಬೋರಿಯಲ್ಲಿ ನವದುರ್ಗಾ ದೇವಾಲಯದ ಸ್ಥಾಪನೆಯೂ ಈಕೆಯದ್ದೇ ಎಂದು ಹೇಳುತ್ತಾರೆ. ಗೋವೆಯಲ್ಲಿ ಈಕೆ ಕಟ್ಟಿಸಿದ ಶಿವಾಲಯಗಳ ಪ್ರತಿಶತ 99ನ್ನು ಬಹುಮನಿಯವರೂ ಮತ್ತು ಪೋರ್ಚುಗೀಸರೂ ನಾಶಮಾಡಿದ್ದಾರೆ. ಒಂದೇ ಒಂದು ದೇವಾಲಯವು ಮಾತ್ರ ಪವಾಡಸದೃಶ ಎನ್ನುವಂತೆ 99.5% ಸುಭದ್ರವಾಗಿ ಉಳಿದುಕೊಂಡು ಬಂದಿದೆ. ಇದುವೆ ತಾಮಡಿ ಸುರ್ಲಾದ ಮಹಾದೇವ ಮಂದಿರ.

ಸುರ್ಲಾ ಎನ್ನುವುದು ಒಂದು ಚಿಕ್ಕ ನದಿ. ಮಹಾದಾಯಿಯ ಒಂದು ಕವಲು ಎಂದರೂ ಅಡ್ಡಿಯಿಲ್ಲ. ತಾಮಡಿ ಎಂದರೆ ತಾಮ್ರವರ್ಣ ಎಂದರ್ಥ. ಇಲ್ಲಿ ಕಬ್ಬಿಣದ ಅದಿರು ಹೇರಳವಾಗಿ ನಿಕ್ಷಿಪ್ತವಾಗಿದೆ. ಭೂಮಿಯ ಬಣ್ಣವು ಕೆಂಪು ಆದ್ದರಿಂದ ತಾಮಡಿ ಸುರ್ಲಾ ಎಂದು ಇದಕ್ಕೆ ಹೆಸರು ಬಂದಿದೆ. ಪ್ರಾಚೀನ ಹೆಸರೇನೋ ತಿಳಿಯದು.

ಗೋವಾದಲ್ಲಿ ಸುಸ್ಥಿರವಾಗಿ ಉಳಿದುಕೊಂಡು ಬಂದಿರುವ ಏಕೈಕ ಪ್ರಾಚೀನ ಮಂದಿರವಿದು ಮಹಾದೇವನ ಆಲಯ. ಇಂತಹುದೊಂದು ಸುಂದರವಾದ ಪುಟ್ಟ ಆಲಯವು ಇಲ್ಲಿರಬಹುದು ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲು ಆಗದ ಜಾಗದಲ್ಲಿದೆ ಇದು. 365 ಡಿಗ್ರಿಯಲ್ಲಿಯೂ ದಟ್ಟ ಕಾಡಿನಿಂದ ಸುತ್ತುವರೆದಿದೆ. ಕನ್ನಡ ನಾಡಿನ ಸರಹದ್ದಿಗೆ ಸಮೀಪದಲ್ಲಿದೆ.

ದೇವಾಲಯವು ಕದಂಬ ಮತ್ತು ಹೇಮಾಡಪಂತಿ ಮಿಶ್ರಣದ ಶೈಲಿಯಲ್ಲಿದೆ. ಗಾತ್ರದಲ್ಲಿ ಬಹಳ ದೊಡ್ಡದೇನಲ್ಲ. ಶಿಲ್ಪಕಲೆಗಿಂತ ಹೆಚ್ಚಾಗಿ ಇಲ್ಲಿ ದೇವಾಲಯದ ರಕ್ಷಣೆಯ ತಂತ್ರಗಳಿಗೆ ಹೆಚ್ಚು ಒತ್ತುಕೊಟ್ಟಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕದಂಬರ ಆಳ್ವಿಕೆಯ ದೇವಾಲಯಗಳಲ್ಲಿ ಹೆಚ್ಚಿನವುಗಳು ಮಳೆ ಹೆಚ್ಚು ಬರುವ ಸ್ಥಳದಲ್ಲಿಯೇ ಇರುವುದರಿಂದ, ಮಳೆನೀರು ಸರಾಗವಾಗಿ ಜಾರಿ ಹೋಗುವಂತೆ, ದೊಡ್ಡ ದೊಡ್ಡ ಚಪ್ಪಡಿಕಲ್ಲುಗಳನ್ನು ಹೊದಿಸಿ ನಿರ್ಮಿಸಿದವು. ಇದೂ ಕೂಡಾ ಅಷ್ಟೆ. ಇಲ್ಲಿನ ಗೋಪುರದ ಕಲಶದಲ್ಲಿ ಇದ್ದ ಕಮಲಾಕಾರದ ಕಲಶವು ನಷ್ಟವಾಗಿದೆ. ಉಳಿದ ಗೋಪುರವು ಗಟ್ಟಿಯಾಗಿ ನಿಂತಿದೆ. ಗರ್ಭಗುಡಿ, ಅಂತರಾಳ ಮತ್ತು ನಂದಿಮಂಟಪ ಇವಿಷ್ಟು ಈ ಪುಟ್ಟ ಮಂದಿರದ ಭಾಗಗಳು. ನಂದಿಯ ಶಿರವನ್ನು ನೀಚರು ತುಂಡರಿಸಿದ್ದಾರೆ. ಗರ್ಭಗುಡಿಯಲ್ಲಿ ಮಹಾದೇವನ ಪುಟಾಣಿ ಲಿಂಗವಿದೆ. ಜಾಗೃತಿಯು ಮನಸ್ಸಿಗೆ ಅನುಭವಕ್ಕೆ ಬರುತ್ತದೆ.

ಗೋವೆಯು ಪೂರ್ತಿ ಮುರಗಲ್ಲಿನ ( laterite ) ರಾಜ್ಯವು. ಆದರೆ ಈ ದೇವಾಲಯವು ಬಸಾಲ್ಟ್ ಕಲ್ಲಿನ ನಿರ್ಮಾಣ. ಇದಕ್ಕೆ ಬೇಕಾಗಿರುವ ಕಲ್ಲನ್ನು ಹೊರರಾಜ್ಯದಿಂದ ತರಿಸಲಾಗಿರುವುದು ಸ್ಪಷ್ಟ. ಪ್ರಾಯಶಃ ಕರ್ನಾಟಕದಿಂದಲೇ ಪೂರೈಕೆಯಾಗಿರಬಹುದು. ಕಲ್ಲನ್ನು ತರಿಸುವುದು ಪರಿಶ್ರಮದ ಕಾರ್ಯವಾದ್ದರಿಂದ ದೇವಾಲಯದ ಚಿಕ್ಕದಾದ ಗಾತ್ರಕ್ಕೆ ಸೀಮಿತಗೊಳಿಸಿರಬಹುದು.

ಶಿಲ್ಪಕಲೆಯು ಅಸಾಧಾರಣ ಎನ್ನುವಷ್ಟು ಮಟ್ಟಿಗೆ ಇಲ್ಲದಿದ್ದರೂ ಮನಸ್ಸನ್ನು ಸೆಳೆಯುವಷ್ಟುಮಟ್ಟಿಗೆ ಇದ್ದೇ ಇದೆ. ಗರ್ಭಗುಡಿಯ ಜಾಲಂಧ್ರಗಳು, ಮೇಲ್ಚಾವಣಿ ಎಲ್ಲವೂ ಸುಂದರವಾದ ಕೆತ್ತನೆಗಳಿಂದ ಕೂಡಿವೆ.

ಅಂತರಾಳದ (ಗರ್ಭಗುಡಿ ಮತ್ತು ನಂದಿಮಂಟಪದ ಮಧ್ಯದ ಆವರಣ) ಮುಂಭಾಗದಲ್ಲಿ ನಾಲ್ಕು ಗೂಡುಗಳನ್ನು ನಿರ್ಮಿಸಲಾಗಿದೆ. (ಇವುಗಳನ್ನು ದೇವಕೋಷ್ಟಕಗಳು ಎನ್ನುತ್ತಾರೆ). ಒಂದರಲ್ಲಿ ವಿಷ್ಣು, ಮತ್ತೊಂದರಲ್ಲಿ ಮಹಿಷಮರ್ದಿನಿ, ಇನ್ನೊಂದರಲ್ಲಿ ಗಣಪತಿ ಮತ್ತೊಂದರಲ್ಲಿ ನಾಗರಾಜನನ್ನು ಪ್ರತಿಷ್ಠಾಪಿಸಲಾಗಿದೆ. ನಾಲಕ್ಕೂ ಚಿಕ್ಕ ಚಿಕ್ಕ ಗೋಪುರಗಳನ್ನು ಕೆತ್ತಲಾಗಿದೆ. ನಂದಿ ಮಂಟಪದ ಕಂಬವೊಂದರ ಮೇಲೆ, ಕುದುರೆಯನ್ನು ತುಳಿಯುತ್ತಿರುವ ಆನೆಯನ್ನು ಕೆತ್ತಿದ್ದಾರೆ.

ದೇವಾಲಯವನ್ನು ನಿರ್ಮಿಸಿರುವ ಪರಿಸರವಂತೂ ಅನನ್ಯವಾದ ಸೌಂದರ್ಯದಿಂದ ಕೂಡಿದೆ. ಗುಡಿಯ ಮುಂದೆ, ಎರಡು ಮೆಟ್ಟಿಲು ಇಳಿದರೆ ಸಾಕು ಮಂಜುಳವಾದ ತೊರೆಯಲ್ಲಿ ಕೈಯಿಟ್ಟು ಆನಂದಿಸಬಹುದು. ಇದನ್ನು ಸ್ಥಳೀಯರು ರಗಾಡೋ ನದಿ ಎನ್ನುತ್ತಾರೆ. ಈ ನದಿಯು ಮುಂದೆ ಮಹಾದಾಯಿ ನದಿಯಲ್ಲಿ ಸೇರುತ್ತದೆ. ಅನಧಿಕೃತ ಗಣಿಗಾರಿಕೆಯ ಅಡ್ಡ ಪರಿಣಾಮವಾಗಿ ಈ ನದಿಯು ಇತ್ತೀಚೆಗೆ ಯಾವಾಗಲೂ ಒಣಗಿಯೇ ಇರುತ್ತದೆ.

ಈ ಗುಡಿಗೆ ಆರ್ಥಿಕವಾಗಿ ಬೆಂಬಲವಿಲ್ಲದಿದ್ದರೂ ನಿತ್ಯದ ಶಾಸ್ತ್ರೋಕ್ತ ಪೂಜೆಗೆ ಅದು ಅಡ್ಡಿಯಾಗಿಲ್ಲ. ಶಿವರಾತ್ರಿಯಂದು ಉತ್ಸವವು ನಡೆಯುತ್ತದೆ. ಅಕ್ಷಯ್ಯತೃತೀಯಾದಂದು ಸುತ್ತಲಿನ ಗ್ರಾಮಗಳ ಹೆಂಗಳೆಯರು ಫ್ಹುಗಡಿ ಢಾಲೋ ಎನ್ನುವ ಉತ್ಸವವನ್ನು ಕೂಡಾ ನಡೆಸುತ್ತಾರೆ.

ದೇವಾಲಯವು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಕೂಡಾ.

ಈ ಸ್ಥಳವನ್ನು ತಲುಪುವುದು ಅಸಾಧ್ಯ ಎನ್ನುವಷ್ಟು ಕಷ್ಟವೇನಿಲ್ಲ. ದಾರಿಯು ಬಹಳ ಚೆನ್ನಾಗಿದೆ. ಆದರೆ ಸರ್ಕಾರದ ಯಾವುದೇ ಬಸ್ಸು, ಇತರ ಸ್ಥಳೀಯ ಸಾರಿಗೆಯ ಯಾವುದೇ ವ್ಯಾನು ಇಲ್ಲಿಗೆ ಬಂದು ಹೋಗುವುದಿಲ್ಲ. ಸ್ವಂತ ವಾಹನದಲ್ಲಿ ಮಾತ್ರವೇ ಇಲ್ಲಿ ಹೋಗಬಹುದು.

ಜಗತ್ಪ್ರಸಿದ್ಧ ದೂಧ್ ಸಾಗರ ಜಲಪಾತ ಇದೆಯಲ್ಲ. ಅದು ಇರುವುದು ಭಗವಾನ್ ಮಹಾವೀರ ನ್ಯಾಶನಲ್ ಪಾರ್ಕಿನಲ್ಲಿ. ಈ ನಮ್ಮ ಮಹಾದೇವನ ಊರು ಈ ಪಾರ್ಕಿಗೆ ಹೊಂದಿಕೊಂಡೇ ಇದೆ. ಈ ನ್ಯಾಶನಲ್ ಪಾರ್ಕಿನ ಕಾರ್ ಪಾರ್ಕಿಂಗ್ ಜಾಗದಿಂದ, ಅಥವಾ ಮೊಲೆಮ್ ಚೆಕ್ ಪೋಸ್ಟ್ ಎನ್ನುವ ಜಾಗದಿಂದ ಈ ಊರಿಗೆ ಅಂಕುಡೊಂಕಾದ ಆದರೆ ಉತ್ತಮವಾದ ಟಾರು ರಸ್ತೆಯಿದೆ. ರಸ್ತೆಯು ಈ ಗುಡಿಗೆ ಬಂದು ಕೊನೆಯಾಗುತ್ತದೆ.ಅಲ್ಲಿಂದ ಮುಂದೆ ಯಾವುದೇ ಊರು ಇಲ್ಲ. ಅಭಯರಾಣ್ಯ ಆದ್ದರಿಂದ ಇಲ್ಲಿಗೆ ಪ್ರವೇಶಕ್ಕೆ ಸಂಜೆ ನಾಲ್ಕರವರೆಗೆ ಮಾತ್ರ ಅವಕಾಶ. ದಟ್ಟ ಕಾಡಿನ ಮಧ್ಯ ಇರುವ ಗುಡಿ. ಸುತ್ತ ಮುತ್ತ ಮನುಷ್ಯರ ವಸತಿ ಇಲ್ಲ. ಆದರೆ ಗುಡಿಯ ಬಳಿ ಸೋಡಾ, ಐಸ್ ಕ್ರೀಮು, ಚುರುಮುರಿ ಮತ್ತು ಬೋಂಡಾಗಳನ್ನು ಮಾರುವ ಅಂಗಡಿಗಳಿವೆ. ಆದರೆ ಇವರೆಲ್ಲರೂ ಮಧ್ಯಾಹ್ನವೇ ಜಾಗ ಖಾಲಿ ಮಾಡುತ್ತಾರೆ. ಹೋಗುವವರು ತಿಂಡಿ ಮತ್ತು ನೀರನ್ನು ತೆಗೆದುಕೊಂಡು ಹೋಗುವುದು ಉತ್ತಮ. ನೀರಿನ ಬಾಟಲಿಗಳನ್ನು ವಾಪಸ್ಸು ತಮ್ಮೊಂದಿಗೇನೇ ತರುವುದು ಕರ್ತವ್ಯ ಕೂಡಾ.

ಗೋವಾ ಸಂಬಂಧಿತ ಲೇಖನಗಳ ಫೋಟೋಗಳು ಬಹುತೇಕವು ನನ್ನ ಸಂಗ್ರಹದವು. ಆದರೆ ಆ ಸಂಗ್ರಹವನ್ನು ಬಹಳ ಹಿಂದೆಯೇ ಇಂಟರ್ ನೆಟ್ಟಿನಲ್ಲಿಯೇ ಹುಡುಕಿ ಮಾಡಿದ್ದು. ನಾನು ಅರ್ಧ ಸೆಂಚುರಿಗೆ ಐದೆ ರನ್ನು ಬಾಕಿ ಇರುವವನು. ಹೀಗಾಗಿ ಮೂಲವು ಮರೆತು ಹೋಗಿದೆ. ಆದರೆ ಅವುಗಳನ್ನು ಇಂಟರ್ ನೆಟ್ಟಿನಲ್ಲಿ ಹಾಕಿದ ಮಹನೀಯರಿಗೆ ನನ್ನ ಮನಸ್ಪೂರ್ವಕ ಕೃತಜ್ಞತೆಗಳನ್ನು ನಾನು ಸಲ್ಲಿಸುವೆನು..

ತಾಮಡಿ ಸುರ್ಲಾ ದೇವಾಲಯದ ಗೂಗಲ್ ಮ್ಯಾಪ್ ಲೊಕೇಶನ್ ಇಲ್ಲಿದೆ. ಇಲ್ಲಿಯೇ ದೇವಾಲಯದ ಸುಂದರವಾದ ಚಿತ್ರಗಳು ಹೇರಳವಾಗಿವೆ ನೋಡಬಹುದು.

https://maps.app.goo.gl/HihiqPWqZPpY7Ukd9

ಶೋಭನಕೃನ್ನಾಮ ಸಂವತ್ಸರದ ಮಧ್ವನವರಾತ್ರಿಯ ನಾಕನೆಯ ದೀಪವು, ಮಹಾದೇವನ, ಶ್ರೀಮಧ್ವರೊಳಗಿನ ಶ್ರೀದುರ್ಗೆ ಪರಶುರಾಮರಿಗೆ ಅರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.