ಶ್ರೀ ವೇದವ್ಯಾಸಾಯ ನಮಃ
ಇವಳು ನಮ್ಮ ಪಾಪಗಳನ್ನು ತನ್ನ ತಾಪದಿಂದ ಸುಟ್ಟು ನಮಗೆ ತಂಪೆರೆವ ತಪತೀ ನದಿ. ತಾಪೀ ಎನ್ನುವುದು ಇವಳ ಮತ್ತೊಂದು ಹೆಸರು. ಹಿಂದಿಗರು ತಪ್ತಿ ಎಂದು ಕರೆವರು. ಪಯೋಷ್ಣೀ ಎಂದು ಮಹಾಭಾರತದಲ್ಲಿ ಹೇಳಿರುವ ನದಿ ಈ ತಪತಿಯೇ ಎಂದು ಆಧುನಿಕ ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ. ಸೂರ್ಯ ಇವಳ ಅಪ್ಪಯ್ಯ. ಛಾಯಾದೇವಿ ಇವಳವ್ವೆ. ಸೂರ್ಯಪುತ್ರೀ ಎನ್ನುವುದು ಅನ್ವರ್ಥನಾಮ.
ವಿಭಿನ್ನ ಹೆಸರುಗಳು ಇದ್ದರೂ ಕೂಡ ಅವೆಲ್ಲವೂ ನದಿಯ ಗುಣಧರ್ಮವನ್ನು ಕುರಿತೇ ಹೇಳುತ್ತಿರುವ ಒಂದು ಸ್ವಾರಸ್ಯವನ್ನು ನಾವಿಲ್ಲಿ ಗಮನಿಸಬಹುದು. ಅದೇನೆಂದರೆ ತಪತಿಯು ಉಷ್ಣಪ್ರಕೃತಿಯುಳ್ಳವಳು ಎಂದು.
ಇವಳ ಉಷ್ಣ ಪ್ರಕೃತಿಗೆ ಇವಳು ಸೂರ್ಯಪುತ್ರಿ ಆಗಿರುವುದೂ ಒಂದು ಕಾರಣವಿರಬಹುದೇನೋ ಎಂಬುದು ನನ್ನ ಊಹೆ. ಆದರೆ ವಾದಿರಾಜ ಗುರುಸಾರ್ವಭೌಮರು ಬಹಳ ಸುಂದರವಾಗಿ ಇವಳ ಹೆಸರ ಹಿನ್ನೆಲೆ ಮತ್ತು ಇವಳಲ್ಲಿ ಮೀಯುವುದರ ಫಲವನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.
ಕಥಮ್ ತಾಪಭಿದಾ ತೇ ಅಂಬ! ತಾಪಘ್ನ್ಯಾ ಇತಿ ಸಂಶಯಃ |
ಅಘತಾಪಪ್ರದಾಯಿನ್ಯಾಸ್ತವ ಸಂದರ್ಶನಾದ್ಗತಃ ||
ಅಮ್ಮಾ ತಾಪೀ! ನಿನ್ನಲ್ಲಿ ಸ್ನಾನ ಮಾಡಿದರೆ, ನಿನ್ನ ನೀರನ್ನು ಕುಡಿದರೆ ನಮ್ಮ ತಾಪವು ಕಡಿಮೆಯಾಯಾಗುತ್ತದೆ. ಹೀಗಿರುವಾಗ ನಿನಗೆ ತಾಪೀ ಎನ್ನುವ ಹೆಸರು ಹೇಗೆ ಸರಿಯಾಗುತ್ತದೆ ಎಂಬ ಒಂದು ಸಂಶಯವಿತ್ತು. ಆದರೆ ಪಾಪಗಳಿಗೆ ತಾಪವನ್ನು ಕೊಡುವ ನಿನ್ನ ದರ್ಶನದಿಂದ ಅದು ದೂರವಾಯಿತು ಎಂದು ಗುರುಗಳು ತಪತಿಯನ್ನು ವರ್ಣಿಸಿದ್ದಾರೆ.
ನಮ್ಮ ತಾಪವ ಕಳೆವಳೇ ಆದರೂ ಪಾಪಗಳಿಗೆ ಬಿಸಿಮುಟ್ಟಿಸುವವಳು ಆದ್ದರಿಂದ ತಾಪೀ ಎನ್ನುವ ಹೆಸರು ಸರಿಯಾದದ್ದೇ ಆಗಿದೆ ಎಂಬುದು ಇದರ ತಾತ್ಪರ್ಯ. ಇವಳ ದರ್ಶನಮಾತ್ರದಿಂದಲೇ ನಮ್ಮ ಪಾಪಗಳು ಪರಿಹಾರ ಆಗುತ್ತವೆ ಎಂಬ ಒಂದು ಸೂಚನೆಯನ್ನೂ ಗುರುಗಳು ಕೊಟ್ಟಿದ್ದಾರೆ .
ಶನಿ, ಯಮುನೆ, ಯಮರಾಯ, ಅಶ್ವಿನಿದೇವತೆಗಳು ಮತ್ತು ಭದ್ರಾದೇವಿ ಇವಳ ಒಡಹುಟ್ಟಿದವರು.
ನರ್ಮದೆ ಮತ್ತು ಗೋದವಾರಿಯರ ಮಧ್ಯದಲ್ಲಿ ಇರುವ ವಿಶಾಲ ಭೂಪ್ರದೇಶ ಈ ಜೀವದಾಯಿನಿಯ ಕಾರ್ಯಕ್ಷೇತ್ರವು. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಕಾಡಲ್ಲಿ ಇವಳ ಉಗಮಸ್ಥಾನವಿದೆ. ಅದರ ಹೆಸರು ಹೆಸರೇ ಮೂಲತಪತಿ. ಅಲ್ಲಿಂದ ಪಶ್ಚಿಮ ದಿಕ್ಕಿಗೆ ಹರಿದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಿದು ಸೂರತ್ತಿನ ಬಳಿ ತನ್ನ ಇನಿಯನಾದ ಸುಮುದ್ರರಾಜ ವರುಣನನ್ನು ಸೇರುತ್ತಾಳೆ.
ಅಕ್ಕನ ಮನೆ ಎನ್ನುವ ಸಲಿಗೆ ಇಂದಲೋ ಏನೋ ತಮ್ಮಂದಿರಾದ ಅಶ್ವಿನೀಕುಮಾರರು ಇವಳ ದಂಡೆಯ ಮೇಲೆ ತಪಸ್ಸು ಮಾಡಿ ಮಹಾರುದ್ರದೇವರನ್ನು ಒಲಿಸಿಕೊಂಡಿದ್ದಾರೆ ಇವರ ಮುಂದೆ ಪ್ರಕಟವಾದ ರೂಪಕ್ಕೆ ಅಶ್ವಿನೀಕುಮಾರೇಶ್ವರ ಎಂದೇ ಹೆಸರು. ಸೂರತ್ತಿನ ಬಳಿ ಈ ಮಂದಿರವಿದೆ .
ನೀವೇನಾದರೂ ತಾಪೀ ಸ್ನಾನವನ್ನು ಮಾಡಬೇಕು ಎಂದಲ್ಲಿ ಒಳ್ಳೆಯ ಸ್ಥಳ ಮಹಾರಾಷ್ಟ್ರದ ಭೂಸಾವಲ್. ಈ ಚಿತ್ರವನ್ನು ಅಲ್ಲಿಯೇ ಕ್ಲಿಕ್ಕಿಸಿದ್ದು ಮೊನ್ನೆ. ಸೂರತ್ತಿನ ಬಳಿಯೂ ತಪತೀನದಿಯ ಸ್ನಾನ ಮಾಡಬಹುದು. (ಸೂರತ್ತಿಗೆ ಹೋದಾಗ ಮನೆಯಲ್ಲಿರುವ ಬೀರುವಿನಲ್ಲಿ ಅನಗತ್ಯವಾದ ಮತ್ತೊಂದು ಸೀರೆಯು ಸೇರುವ ಅಪಾಯ ಇಲದಿಲ್ಲ. ಯಾವುದಕ್ಕೂ ಹುಷಾರು) .
Be First to Comment