ಶ್ರೀವಾದಿರಾಜರ ಯುಕ್ತಿದೀಪ

ಶ್ರೀಹರಿಹರರು ಒಂದೇ ಪ್ರತಿಮೆಯನ್ನಾಶ್ರಯಿಸಿ ಹರಿಹರ ಎನ್ನುವ ಊರಿನಲ್ಲಿ ನೆಲೆಸಿರುವುದು ಈಗ ತಿಳಿದ ವಿಷಯ.
ಹೀಗೆ ಶಿಲಾರೂಪಿಗಳಾಗುವ ಮೊದಲು ಅವರಿಬ್ಬರೂ ಒಂದೇ ಆಗಿ ಬಂದರು ಹೀಗಾಗಿ ಇಬ್ಬರಿಗೂ ಐಕ್ಯವನ್ನು ಹೇಳಿದಂತಾಯಿತು ಎಂದು ಹಲವರ ಅಭಿಪ್ರಾಯವಿದೆ. ಇದು ಅಭೇದದ ಚಿಂತನೆ. ಇದಕ್ಕೆ ಶ್ರೀವಾದಿರಾಜ ಪ್ರಭುಗಳು ಹೀಗೆ ಸಮಾಧಾನವನ್ನು ಕೊಡುತ್ತಾರೆ.
ಅರ್ಧನಾರೀಶ್ವರನ ದೇವಾಲಯದಲ್ಲಿ ಶಿವನ ಅರ್ಧಭಾಗ ಹೆಂಗಸೂ, ಇನ್ನರ್ಧಭಾಗ ಗಂಡಸು ರೂಪವೇ ಕಾಣುವುದು. ಆದರೆ ಇಲ್ಲಿಯೂ ಗಂಡ-ಹೆಂಡತಿ, ಗಂಡು-ಹೆಣ್ಣು ಎಂಬ ಭೇದವೇ ಇದೆ. ಈ ಭೇದದಿಂದ ಪಾರ್ವತೀ-ಪರಮೇಶ್ವರರಿಗೂ ಭೇದವೇ ಎಂಬುದು ಸಿದ್ಧವಾಯಿತು. ಅಲ್ಲದೆ, ಈ ದೇವರಿಗೆ ಅರ್ಧನಾರೀಶ್ವರ ಎಂದೇ ಕರೆಯುತ್ತಾರಾಗಲಿ ಕೇವಲ ಶಿವನೆಂದೋ ಅಥವಾ ಕೇವಲ ಪಾರ್ವತಿದೇವೆಯೆಂದೋ ಕರೆಯರು. ಅದೇ ರೀತಿ ಈ ಹರಿಹರದ ಸನ್ನಿಧಿಯಲ್ಲಿ ಸಹ ಒಂದೇ ಪ್ರತಿಮೆಯ ಎಡ-ಬಲಭಾಗಗಳಲ್ಲಿ ಇದ್ದರೂ ಪರಸ್ವರ ಭಿನ್ನರಾಗಿಯೇ ಇದ್ದಾರೆ . 1
ಇನ್ನೂ ಒಂದು ಅತ್ಯಂತ ಸ್ವಾರಸ್ಯಕರವಾದ ಸಮಾಧಾನವನ್ನೂ ಇಲ್ಲಿ ಶ್ರೀರಾಜರು ಕೊಟ್ಟಿದ್ದಾರೆ. ಅಪೂರ್ವವಾದ ಸಮಾಧಾನವಿದು. ಅದು ಹೀಗಿದೆ. ವತ್ಸನಾಭ ಎನ್ನುವ ವಿಷವೂ ಮತ್ತು ನಿರ್ವಿಷ ಎಂಬ ವಿಷಾಪಹಾರಿ ಔಷಧವೂ ಪರಸ್ಪರ ಭಿನ್ನಧರ್ಮವುಳ್ಳವುಗಳಾಗಿದ್ದರೂ ಒಂದೇ ಬಳ್ಳಿಯನ್ನು ಆಶ್ರಯಿಸಿಕೊಂಡಿವೆ. (ಗಿಡದ ಮೇಲ್ಭಾಗವು ನಿರ್ವಿಷ ಎಂಬ ಔಷಧಿ. ಬೇರಿನ ಭಾಗವು ವತ್ಸನಾಭ ಎಂಬ ವಿಷ) ಹೀಗೆ ವಿರುದ್ಧ ಧರ್ಮಗಳು ಒಂದೇ ಬಳ್ಳಿಯನ್ನಾಶ್ರಯಿಸಿವೆಯೋ ಅದೇ ರೀತಿ ಇಲ್ಲಿ ಪರಸ್ಪರ ಭಿನ್ನರಾಗಿದ್ದರೂ ಹರಿಹರರು ಒಂದೇ ಪ್ರತಿಮೆಯನ್ನಾಶ್ರಯಿಸಿದ್ದಾರೆ ಅಷ್ಟೇ. 2
ಶ್ರೀಹರಿಯು ನಿಯಾಮಕನು, ಶಂಕರನು ಸಂಹಾರಕನು ಎಂಬುದು ಲೋಕಪ್ರಸಿದ್ಧವಾದ ವಿಷಯ. ಇವೆರಡೂ ವಿರುದ್ಧವಾದ ಧರ್ಮಗಳು. ಹೀಗಾಗಿ ಇಲ್ಲಿ ಶ್ರೀರಾಜರು ನಿರ್ವಿಷ-ವತ್ಸನಾಭಗಳ ಹೋಲಿಕೆಯನ್ನು ಶ್ರೀರಾಜರು ಮಾಡಿದ್ದಾರೆ. ಇಲ್ಲಿಯೂ ಅವರು ಕ್ರಮಪ್ರಕಾರವಾಗಿಯೇ, ಅಂದರೆ ಮೊದಲು ನಿಯಮನ(ನಿರ್ವಿಷ) ನಂತರ ಸಂಹಾರ(ವತ್ಸನಾಭ) ಸಮಾಧಾನವನ್ನು ಕೊಟ್ಟಿದ್ದಾರೆ.
ಈ ಎರಡನೆಯ ಶ್ಲೋಕವು ಶ್ರೀವಾದಿರಾಜ ಗುರುವರರ ಸರ್ವಜ್ಞತ್ವಕ್ಕೆ ಒಂದು ಸಾಕ್ಷಿಯಾಗಿದೆ. ಸಾಹಿತ್ಯ, ಸ್ತೋತ್ರ, ವೇದಾಂತದಂತೆಯೇ ಸಸ್ಯವಿಜ್ಞಾನವು ಕೂಡ ಅವರಿಗೆ ಸುಲಭವಾದ ವಿಷಯ ಎನ್ನುವುದು ಈ ಒಂದು ಅಪೂರ್ವವಾದ ಸಮಾಧಾನದಿಂದ ನಮಗೆ ತಿಳಿದು ಬರುತ್ತದೆ.
ಇತರರ ಆಚಾರ ವಿಚಾರಗಳಿಗೆ ನಮ್ಮಿಂದ ರಗಳೆಯಾಗದಂತೆ ನಾವು ನಡೆದುಕೊಳ್ಳುವುದು ಇಂದಿನ ಕಾಲದ ಅಗತ್ಯತೆಗಳಲ್ಲಿ ಒಂದು. ಆದರೆ ಹೀಗಿರುವ ಪ್ರಯತ್ನದಲ್ಲಿ ನಮ್ಮ ಸಿದ್ಧಾಂತದಿಂದ ನಾವೂ ಹಳಿತಪ್ಪದಂತೆ ಇರಲು ಶ್ರೀವಾದಿರಾಜ ಪ್ರಭುಗಳ ಇಂತಹ ಯುಕ್ತಿಭರಿತವಾದ ನಿರ್ದೇಶನಗಳು ಅತ್ಯಗತ್ಯ. ಅವರ ಈ ದೀಪವು ನಮಗೆ ಎಂದೆಂದೂ ದಾರಿ ತೋರುತ್ತಿರಲಿ ಎಂದು ಪ್ರಾರ್ಥಿಸೋಣ.
1. ಅರ್ಧನಾರೀಶ್ವರಶ್ಶಂಭುಃ ಯಥಾ ಭೇದೇಽಪಿ ದೃಶ್ಯತೇ |
ಮೂರ್ತೇರೇಕೈಕಭಾಗಸ್ಥೌ ತಥಾ ಹರಿಹರಾವಿಮೌ ||
2. ನಿರ್ವಿಷಂ ವತ್ಸನಾಭಶ್ಚ ಯಥೈಕಾಮಾಶ್ರಿತೌ ಲತಾಮ್ |
ತಥಾ ಹರಿಹರೌ ಭಿನ್ನತರಾವಪ್ಯೇಕಮೂರ್ತಿಗೌ ||
ಶ್ರೀಶೋಭನಕೃನ್ನಾಮದ ಪುರುಷೋತ್ತಮ ಮಾಸದ ಈ ಎರಡನೆಯ ತುಳಸೀದಳವು ಶ್ರೀಹರಿಗರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.