ಶ್ರೀವ್ಯಾಸರಾಜರ ಯಾಚನೆ

ಶಮಯನ್ ಭವಸಂತಾಪಂ ರಮಯನ್ ಸಾಧುಚಾತಕಾನ್ |
ಕೃಷ್ಣಮೇಘಕೃಪಾದೃಷ್ಟಿವೃಷ್ಟ್ಯಾ ಪುಷ್ಣಾತು ಮಾಮಪಿ ||
ಇದು ಶ್ರೀವ್ಯಾಸರಾಜಗುರುಸಾರ್ವಭೌಮರು ಶ್ರೀಕೃಷ್ಣನನ್ನು ಪ್ರಾರ್ಥಿಸಿರುವ ಒಂದು ಅನನ್ಯವಾದ ರೀತಿ. ಚಂದ್ರಿಕಾಗ್ರಂಥದ ಮಂಗಲಾಚರಣೆ ಇದು.
ಚಾತಕವು ಅತ್ಯಂತ ಸದಾಚಾರಿ ಪಕ್ಷಿ. ಬಹಳ ಮಡಿ. ಅವರಿವರು ಮುಟ್ಟಿದ ನೀರಿರಲಿ, ನೆಲದ ಮೇಲೆ ಹರಿವನೀರು ಕೂಡ ಇದಕ್ಕೆ ಬೇಡ. ಬಾಯಾರಿದ್ದರೂ ಕೂಡ ಅದು ಅಲ್ಲಿಲ್ಲಿಯ ನೀರನ್ನು ಒಪ್ಪುವುದಿಲ್ಲ. ಮಳೆನೀರೇ ಆಗಬೇಕು ಇದಕ್ಕೆ. ಮಳೆಯನ್ನು ಹೊತ್ತ ಅರಳೆಗಳು ಆಗಸದಲ್ಲಿ ದಟ್ಟೈಸುವುದೇ ತಡ, ಇದು ಬಾಯ್ದೆರೆದು ಕೂಡುತ್ತದೆ. ಮಳೆ ಬಂದು ತನ್ನೊಳಗಿನ ಉರಿಯನ್ನು ತಂಗೊಳಿಸುವುದು ಎನ್ನುವ ದಿಟವಾದ ಭರವಸೆಯಿದಕ್ಕೆ. ಅಂತಿಮವಾಗಿ ಕಪ್ಪುಮೋಡವು ಈ ಭರವಸೆಯನ್ನು ಗೆಲ್ಲಿಸಿಯೇ ಬಿಡುತ್ತದೆ. ಕಪ್ಪುಮೋಡದ ಹೃದಯವದು. ಕರುಣೆ.
ಹೀಗೆ ಬಾಯ್ದೆಗೆದು ಕೂಡುವುದನ್ನು ಡಿಮ್ಯಾಂಡ್ ಎಂದು ಪರಿಗಣಿಸಬಾರದು. ಯಾಚನೆ ಎಂದು ಗ್ರಹಿಸಬೇಕು. ಶುದ್ಧವಾದದ್ದನ್ನೇ ಕೊಡು ಎಂದು ಅದು ಯಾಚನೆ ಮಾಡುತ್ತದೆ. ಚಾತಕ ಎಂದರೇನೇ ಕೇಳಿ ಪಡೆದಕೊಳ್ಳುವುವ ಎಂದರ್ಥ. ಕೊಡುವವರೆಗೂ ಅದೆಷ್ಟೇ ದಿನಗಳಾದರೂ ಕೂಡ ಅದು ತನ್ನ ಹೊಟ್ಟೆಯನ್ನು ಸುಟ್ಟುಕೊಳ್ಳುತ್ತಾ ಸುಮ್ಮನಿರುವುದೇ ಹೊರತು ಬೇರೆ ನೀರನ್ನು ಮುಟ್ಟದು. ಈ ಸುಟ್ಟುಕೊಳ್ಳುವುದೇ ತಪಸ್ಸು. ಹೊಟ್ಟೆಯು ಹೀಗೆ ಸುಟ್ಟು ಹಣ್ಣಾಗುವ ಸಮಯಕ್ಕೆ ಕಪ್ಪುಮೋಡಗಳು ದಟ್ಟೈಸುವುವು. ಶುದ್ಧ ಚೈತನ್ಯವು ಚಾತಕದ ನರನಾಡಿಗಳಲ್ಲಿ ತುಂಬಿಕೊಳ್ಳುವುದು.
ಸಜ್ಜನರೂ ಕೂಡ ಚಾತಕಪಕ್ಷಿಗಳೇ. ಇವರು ಕೂಡ ಕಲಿಗಾಲ ಎನ್ನುವ ಬರಗಾಲದಲ್ಲಿ ಬದುಕುವವರು. ಇವರಿಗೂ ಒಡಲ ಉರಿ ಉಂಟು. ಇವರ ನಾಲಗೆಯು ಕೂಡ ಒಣಗಿದೆ. ಮನಸ್ಸು ಮಾಡಿದರೆ ಕಲಿಪುರುಷನು ಕೊಟ್ಟ ನೀರನ್ನು ಕುಡಿದು ತಮ್ಮ ಧಗೆಯನ್ನು ಕಡಿಮೆ ಮಾಡಿಕೊಂಡು ಬಿಡಬಹುದು. ಆದರೆ ಸಜ್ಜನರ ಪಾಲಿಗೆ ಇದು ಮೈಲಿಗೆಯ ನೀರು! ಇದನ್ನು ಕುಡಿದು ಅಂತಃಕರಣಕ್ಕೆ ಕಿಲುಬು ಹಿಡಿಸಿಕೊಳ್ಳುವುದು ಇವರಿಗೆ ಬೇಡ. ದೇಹವು ಕ್ಷಯಿಸಿದರೂ ಅಡ್ಡಿಯಿಲ್ಲ. ಕಲಿಮಲಕಲುಷಿತವಾದ ಇಂಬು ಬೇಡವೇ ಬೇಡ ಇವರಿಗೆ. ಹೀಗೆ ಅಶುದ್ಧವಾದುದರಿಂದ ಮನಸ್ಸು-ದೇಹ ಎರಡನ್ನೂ ತುಂಬಿಸಿಕೊಳ್ಳುವುದಕ್ಕಿಂತ, ಮೈ-ಮನಗಳನ್ನು ತಾಪಕ್ಕೆ ಒಡ್ಡಿಕೊಳ್ಳುವುದು ಸಜ್ಜನರ ನಡತೆ. ಈ ತಾಪಕ್ಕೊಳಗಾಗುವುದೇ ತಪಸ್ಸು. ಇದು ಸಜ್ಜನರ ಮಡಿ. ಇದುವೇ ಇವರ ಆಚಾರ. ಇವರ ತಾಪವನ್ನು ಪರಿಹರಿಸಲು ಕೂಡ ಒಂದು ಕಪ್ಪುಮೋಡವೇ ಬರಬೇಕು. ಅದುವೇ ನೀರೆರೆಯಬೇಕು. ಆ ನೀರಿನಿಂದಲೇ ಈ ಮಹಾತ್ಮರ, ಈ ಸಂಸಾರದ ಉರಿಯು ತಣಿಯಬೇಕು. ಅದಕ್ಕಾಗಿ ಇವರ ಯಾಚನೆ.
ಈ ತಾಪವನ್ನು ಕಡಿಮೆ ಮಾಡಲೂ ಒಂದು ಅಮೋಘವಾದ ಕಪ್ಪು ಮೋಡವು ಬಂದೇ ಬರುತ್ತದೆ. ಅದುವೇ ಸಾಕ್ಷಾತ್ ಶ್ರೀಕೃಷ್ಣ ಎಂಬ ಮೋಡವು. ಈ ಮೋಡವು ಬಂದು ಹೃದಯವನ್ನೇ ತೆರೆದುಕೊಂಡು ಕುಳಿತಿರುವ ಸಜ್ಜನರು ಎಂಬ ಚಾತಕಪಕ್ಷಿಗಳ ಒಡಲನ್ನು ತಂಪು ಮಾಡುತ್ತದೆ.
ಭವದ ಬೆಂಕಿಯನ್ನಾರಿಸಿ, ಈ ಸಜ್ಜನರೆಂಬ ಚಾತಕಪಕ್ಷಿಗಳನ್ನು ರಮಿಸಿದ ಈ ಶ್ರೀಕೃಷ್ಣಮೇಘವು ಕೃಪೆ ಎಂಬ ತನ್ನ ಕಣ್ಣೋಟದ ಮಳೆಯನ್ನು ನಮ್ಮ ಮೇಲೆ ಕೂಡ ಎರೆಯಲಿ. ನಮ್ಮನ್ನು ಪುಷ್ಟಿಗೊಳಿಸಲಿ ಎಂದು ಶ್ರೀವ್ಯಾಸರಾಜರಂತಹ ಮಹಾ ತಪಸ್ವಿಗಳು ಯಾಚನೆಯನ್ನು ಮಾಡಿದ್ದಾರೆ. ಇದು ಅವರು ತಮಗಾಗಿ ಮಾಡಿಕೊಂಡ ಯಾಚನೆಯಲ್ಲ. ನಮಗಾಗಿ ಮಾಡಿರುವ ಯಾಚನೆ. ಪ್ರಹ್ಲಾದನಾಗಿದ್ದಾಗ್ಯೂ ಅವರು ಇದನ್ನೇ ಮಾಡಿದ್ದು. ತನ್ನವರಿಗಾಗಿ ಯಾಚನೆ.
ಈ ಯಾಚನೆಯ ವಿಧಾನವನ್ನೇ ನಾವು ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವವನ್ನು ತಂಪಾಗಿರಿಸಿಕೊಳ್ಳಬೇಕು. ಇತರ ಹಕ್ಕಿಗಳಂತೆ ಸಿಕ್ಕಸಿಕ್ಕಿದ್ದನ್ನು ಕುಡಿದು ತಿಂದು ಮೈಮನಗಳನ್ನು ಕೊಳಕಾಗಿಸಿಕೊಳ್ಳದೆ ಚಾತಕದಂತೆ ಕಾಯ್ದು ಸ್ವಚ್ಚ ನೀರನ್ನೇ ಕುಡಿಯಬೇಕು. ಸಿಕ್ಕಸಿಕ್ಕದ್ದನ್ನು ತಿನ್ನಬಾರದು ಎಂದರೆ, ನಮ್ಮ ಸಿದ್ಧಾಂತವನ್ನು ಬಿಟ್ಟು ಸಿಕ್ಕಸಿಕ್ಕ ತಾಮಸ ಶಕ್ತಿಗಳ ಮೊರೆಹೋಗಬಾರದು ಎಂದೂ ಅರ್ಥಮಾಡಿಕೊಳ್ಳಬೇಕು. ಹೆದ್ದೈವನಾದ ಸಿರಿಕೃಷ್ಣನ ಒಲುಮೆ ಆಗುವತನಕವೂ ಯಾಚನೆಯನ್ನು ಮಾಡುತ್ತಿರಬೇಕು ಎಂಬ ಸ್ಪಷ್ಟಸಂದೇಶವನ್ನು ಇಲ್ಲಿ ಗುರುಸಾರ್ವಭೌಮರು ಕೊಟ್ಟಿದ್ದಾರೆ.
ಶ್ರೀವ್ಯಾಸರಾಜರು ಹೇಳಿಕೊಟ್ಟದ್ದನ್ನೇ ಶ್ರೀಪುರಂದರದಾಸರೂ ಹೇಳಿದ್ದು. ಬೇಡಿದರೆ ಎನ್ನ ಒಡೆಯನ ಬೇಡುವೆ, ಒಡೆಯಗೆ ಒಡಲನು ತೋರುವೆ, ಎನ್ನ ಬಡತನ ಬಿನ್ನಹ ಮಾಡುವೆ ಎಂದು. ಅಲ್ಲವೇ. ಈ ಮಹಾರಾಯರು ಹೇಳಿದ್ದನ್ನೇ ನಾವು ಕೂಡ ಮಾಡುವುದು ಸಂ-ಪ್ರದಾಯ ಎನ್ನಿಸುತ್ತದೆ. ಇದೇ ಸರಿಯಾದ ದಾರಿ. ಸುತ್ತಿದಲ್ಲೇ ಸುತ್ತಿಸದ, ಅಪಾಯವಿಲ್ಲದ ದಾರಿ.
ಅಂದ ಹಾಗೆ, ಶ್ರೀವ್ಯಾಸರಾಜರು ಕೃಷ್ಣಮೇಘನ ಉಪಾಸಕರಲ್ಲವೇ! ಅವರು ಕೂಡ ಯಾಚಕರ ಒಡಲನ್ನು ತಂಪು ಮಾಡಿದ್ದಾರೆ. ಮಾಡಿದ್ದಾರೆ ಏನು ಮಾಡುತ್ತಲೇ ಇದ್ದಾರೆ, ಈ ಭೂಮಿಯು ಇರುವ ತನಕವೂ ಮಾಡುತ್ತಲೇ ಇರುತ್ತಾರೆ. ದಕ್ಷಿಣ ಆಂಧ್ರ – ಪೂರ್ವ ಕರ್ನಾಟಕದ ಭೂಮಿಯು ಬರಗಾಲದಿಂದ ತತ್ತರಿಸುತ್ತಾ ಇರುವುದು. ಈ ವಿಶಾಲ ಭೂಮಿಯಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರು ನೂರಾರು ಊರುಗಳಲ್ಲಿ ಕೆರೆಗಳನ್ನು ಕಟ್ಟಿಸಿ ಅಲ್ಲಿನ ಜನರ ಹೊಟ್ಟೆಯನ್ನು ತಂಪುಗೊಳಿಸಿದರು. ಆ ಕೆರೆಗಳು ಸುಮ್ಮನೆ ಒಂದು ಚಿಕ್ಕ ನೀರಿನ ಹೊಂಡದಂತೆ ಇರುವವವಲ್ಲ. ಎಲ್ಲವೂ ಸಮುದ್ರದೋಪಾದಿಯ ಜಲಾಶಯಗಳೇ. ವರ್ಷವಿಡೀ ಭುವಿಗೂ ಆಯಿತು, ಊರಿಗೂ ಆಯಿತು ಎಂಬಂತೆ ನೀರನ್ನು ಪೂರೈಸಿದ ಸ್ರೋತಗಳಿವು.
ಇಂದಿಗೂ ಈ ಬಹುತೇಕ ಕೆರೆಗಳು ನೀರಿನಿಂದ ಭರ್ತಿಯಾಗಿಯೇ ಇವೆ. ಇವುಗಳೆಲ್ಲವನ್ನೂ ಸಮುದ್ರಗಳೆಂದೇ ಆಗಿನ ಹಿರಿಯರು ಕರೆದಿದ್ದಾರೆ. ಬಳ್ಳಾರಿ, ತುಮಕೂರು, ಅನಂತಪುರ, ಕಡಪಾ ಜಿಲ್ಲೆಗಳಲ್ಲಿ ಇರುವ ಸಮುದ್ರ/ಸಮುದ್ರಂ ಎಂಬ ಹೆಸರಿನ ಹಳ್ಳಿಗಳು ಈ ಬೃಹತ್ ಕೆರೆಗಳಿಂದಲೇ ಖ್ಯಾತವಾದವುಗಳು. ಬುಕ್ಕಸಮುದ್ರಮ್, ಜಕ್ಕಸಮುದ್ರಮ್, ರಾಮಸಮುದ್ರಮ್, ಭೀಮಸಮುದ್ರಮ್ ಇತ್ಯಾದಿ
ನಮ್ಮ ಕನ್ನಡ ವಲಯದ ಸಮುದ್ರಗಳು ಮುಂದೆ ಸಂದ್ರಗಳಾಗಿ ಪರಿವರ್ತನೆಯಾದವುಗಳು. ಬ್ರಹ್ಮಸಮುದ್ರ =ಬೊಮ್ಮಸಂದ್ರ, ದೇವಸಮುದ್ರ=ದೇವಸಂದ್ರ, ಭೈರವಸಮುದ್ರ=ಭೈರಸಂದ್ರ, ಖ್ಯಾತಸಮುದ್ರ= ಕ್ಯಾತ್ಸಂದ್ರ, ಇತ್ಯಾದಿ.
ಬೆಂಗಳೂರಿನಲ್ಲಿಯೂ ಶ್ರೀವ್ಯಾಸರಾಜರ ಈ ತಂಪೆರವ ಕೆರೆಗಳು ಇದ್ದಿರಲಿಕ್ಕೂ ಸಾಕು. ಸಂಶೋಧನೆಗಳು ನಡೆದರೆ ತಿಳಿದಾವು.
ಶ್ರೀವ್ಯಾಸರಾಜರ ಮೂಲಕ, ಶ್ರೀಹನುಮನ ಮೂಲಕ ಶ್ರೀಕೃಷ್ಣಮೇಘನ ಒಲವು ನಮ್ಮತ್ತಲೂ ಹರಿದು ಬರಲಿ ಎಂಬಂತೆ ನಮ್ಮ ನಡತೆಯನ್ನು ನಾವೆಲ್ಲ ಇರಿಸಿಕೊಳ್ಳೋಣ.
ಶ್ರೀಶೋಭನಕೃನ್ನಾಮದ ಪುರುಷೋತ್ತಮ ಮಾಸದ ಈ ಮೂರನೆಯ ತುಳಸೀದಳವು ಶ್ರೀಹರಿಗರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.