ಶ್ರೀಹರಿವಾಯುಸ್ತುತಿಯ ಹಿನ್ನೆಲೆ ಹಾಗು ಮಹಿಮೆ

ಆಚಾರ್ಯ ಮಧ್ವರ ವಿದ್ವತ್ತಿಗೆ ತಲೆಬಾಗಿ ಅವರ ಶಿಷ್ಯತ್ವ ವಹಿಸಿದವರಲ್ಲಿ ತ್ರ್ವಿವಿಕ್ರಮ ಪಂಡಿತರದ್ದು ವೈಶಿಷ್ಟ್ಯಪೂರ್ಣವಾದ ವ್ಯಕ್ತಿತ್ವ. ಇವರು ಆಚಾರ್ಯರಲ್ಲಿ ಕೇವಲ ಪಂಡಿತನೊಬ್ಬನ್ನು ಮಾತ್ರ ಕಾಣಲಿಲ್ಲ. ಆಚಾರ್ಯರ ಮೂಲರೂಪಗಳಾದ ಹನುಮ ಹಾಗು ಭೀಮಸೇನರನ್ನೂ ಪ್ರತ್ಯಕ್ಷವಾಗಿ ಕಂಡವರು ಇವರು. ಒಮ್ಮೆ ಭಗವತ್ಪಾದರು ಶ್ರೀಕೃಷ್ಣನ ಪೂಜೆಯಲ್ಲಿ ನಿರತರಾಗಿದ್ದಾಗ ತ್ರಿವಿಕ್ರಮಪಂಡಿತರು ಗರ್ಭಗೃಹದಲ್ಲಿ ಇಣುಕಿನೋಡಿದರು. ಇದು ಸಹಜವಾದ ಕುತೂಹಲ ಮಾತ್ರವಲ್ಲದೆ ಗುರುಗಳ ಪೂಜಾವೈಭವವನ್ನು ಕಣ್ಣಾರೆ ನೋಡುವ ಆಶಯವೂ ಆಗಿತ್ತು. ಹೀಗೆ ಒಳಗೆ ನೋಡಿದಾಗ ಅವರ ಕಣ್ಣು ಹಾಗು ಹೃದಯಕ್ಕೆ ಹಬ್ಬವೇ ಆಯಿತು. ಶ್ರೀಪೂರ್ಣಪ್ರಜ್ಞರು ತಮ್ಮ ಮೂರೂ ಅವತಾರಗಳಲ್ಲಿ ಭಗವಂತನ ಆರಾಧನೆಯನ್ನು ಮಾಡುತ್ತಿರುವಂತಹ ಅಪೂರ್ವ ದೃಶ್ಯವು ತ್ರಿವಿಕ್ರಮಪಂಡಿತರಿಗೆ ಕಾಣಿಸಿತು. ಹನುಮನಾಗಿ ಶ್ರೀರಾಮದೇವರ ಸೇವೆ, ಭೀಮನಾಗಿ ಶ್ರೀಕೃಷ್ಣನ ಪೂಜೆ ಹಾಗು ಮಧ್ವರಾಗಿ ಶ್ರೀವೇದವ್ಯಾಸರ ಕೈಂಕರ್ಯವನ್ನು ಆಚಾರ್ಯ ಮಧ್ವರು ಕೈಗೊಂಡಿದ್ದರು. ಈ ಘಟನೆಯನ್ನು ನೋಡಿದಾಗಲೇ ತ್ರಿವಿಕ್ರಮ ಪಂಡಿತರ ಹೃದಯವು ವಾಯುದೇವರ ಈ ಲೀಲೆಯನ್ನು ವರ್ಣಿಸಲು ತೊಡಗಿತು. ಆಗ ಹೊರಬಂದ ಸುಂದರವರ್ಣನೆಯೇ ಇಂದು ಸುಪ್ರಸಿದ್ಧವಾಗಿರುವ ಶ್ರೀವಾಯುಸ್ತುತಿ. ವಾಯುದೇವರ ಮೂರೂ ಅವತಾರಗಳ ವರ್ಣನೆ ಈ ಸ್ತೋತ್ರದಲ್ಲಿ ಇದೆ.

ನಂತರ ಪಂಡಿತರು ಇದನ್ನು ಆಚಾರ್ಯ ಮಧ್ವರ ಮುಂದೆ ಇಟ್ಟಾಗ ಹಸನ್ಮುಖರಾದ ಅವರು ಇನ್ನೆರಡು ಶ್ಲೋಕಗಳನ್ನು ತಾವೇ ರಚಿಸಿ ಅವುಗಳಿಂದ ವಾಯುಸ್ತುತಿಯನ್ನು ಸಂಪುಟೀಕರಿಸುವಂತೆ (ಪ್ರಾರಂಭ ಹಾಗು ಕೊನೆಯಲ್ಲಿ ಈ ಶ್ಲೋಕಗಳನ್ನು ಹೇಳುವುದು) ನಿರ್ದೇಶಿಸಿದರು. ಆ ಎರಡು ಶ್ಲೋಕಗಳು ಶ್ರೀನರಸಿಂಹದೇವರ ಉಗುರಿನಲ್ಲಿರುವ ಅನಂತ ಶಕ್ತಿಯನ್ನು ವಿವರಿಸುತ್ತವೆ. ಹೀಗಾಗಿ ಕೇವಲ ವಾಯುಸ್ತುತಿಯಾಗಿದ್ದ ತ್ರಿವಿಕ್ರಮಪಂಡಿತರ ರಚನೆಯು ಶ್ರೀಹರಿವಾಯುಸ್ತುತಿಯಾಗಿ ಪರಿಣಮಿಸಿತು.

ವಾಯುದೇವರ ಲೀಲೆಯನ್ನು ಕಂಡದ್ದು ಮಾತ್ರವಲ್ಲದೆ ತಮ್ಮ ರಚನೆಗೆ ವಾಯುದೇವರಿಂದಲೇ ನರಸಿಂಹದೇವರ ಮುದ್ರಾಂಕನವನ್ನು ಪಡೆದ ಮಹಾನುಭಾವರು ಶ್ರೀತ್ರಿವಿಕ್ರಮ ಪಂಡಿತರು. ಇದೇ ರೀತಿಯಾದ ಘಟನೆಯನ್ನು ಆಚಾರ್ಯ ಮಧ್ವರು ಗೀತಾಭಾಷ್ಯವನ್ನು ವೇದವ್ಯಾಸದೇವರಿಗೆ ಸಮರ್ಪಿಸಿದಾಗ ನಡೆಯಿತು. ” ಗೀತೆಯ ಅರ್ಥವನ್ನು ಶಕ್ತಿಯಿದ್ದಷ್ಟು ವಿವರಿಸುತ್ತೇನೆ” ಎಂದು ಆಚಾರ್ಯರು ಬರೆದಿದ್ದಾಗ ಅದನ್ನು “ಗೀತೆಯ ಅರ್ಥವನ್ನು *ಒಂದಿಷ್ಟು ಮಾತ್ರ* ವಿವರಿಸುತ್ತೇನೆ”  ಎಂಬುದಾಗಿ ಒಂದು ಮುದ್ದಾದ ತಿದ್ದುಪಡಿಯನ್ನು ವೇದವ್ಯಾಸದೇವರು ಮಾಡಿದರು.

ಈ ಎರಡೂ ಘಟನೆಗಳಲ್ಲಿ ಆದ ತಿದ್ದುಪಡಿಗಳು ಸಾಮಾನ್ಯವಾದವುಗಳಲ್ಲ. ಮೊದಲನೆಯ ತಿದ್ದುಪಡಿಯಿಂದ ಮಧ್ವರು ತಮ್ಮ ಹಾಗು ಭಗವಂತನ ಅನನ್ಯವಾದ ಬಾಂಧವ್ಯವನ್ನು ಜಗತ್ತಿಗೆ ತೋರಿಸಿಕೊಟ್ಟರೆ ಎರಡನೆಯ ತಿದ್ದುಪಡಿಯಿಂದ ವೇದವ್ಯಾಸರು ಆ ಕೆಲಸವನ್ನು ಮಾಡಿದರು.

(ಊರಿಗೆ ಹೋಗುವ ಹೊತ್ತಾಯಿತು… ಬಂದು ಮುಂದುವರೆಸುತ್ತೇನೆ.)

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.