ವಿನಯವೇ ಭೂಷಣ

ಗುರುಗಳ ಅನೇಕ ಗುಣಗಳಲ್ಲಿ ನನಗೆ ಬಹಳ ವಿಸ್ಮಯ ಎನ್ನಿಸುವಂತಹುದು ಅವರ ನೆನಪಿನ ತಿಜೊರಿಯ ಸಾಮರ್ಥ್ಯ. ಅದು ಬಹಳ ಆಳವಾದದ್ದು. ವೇದಾಂತ, ವ್ಯಾಕರಣ, ತರ್ಕ, ಸಾಹಿತ್ಯ ಹೀಗೆ ಯಾವುದೇ ವಿಷಯದಲ್ಲಿಯೂ ಹೋಗಿ ಅವರ ಬಳಿ ಸಂಶಯವೊಂದನ್ನು ಕೇಳಿದರೆ ತಕ್ಷಣವೇ ಪ್ರಮಾಣ ಸಹಿತವಾದ ಪರಿಹಾರವನ್ನು ಕೊಟ್ಟೇ ಬಿಡುತ್ತಾರೆ. ಹೀಗೆ ಪರಿಹಾರವನ್ನು ಮಾಡುವ ವಿಧಾನ ಬಹಳ ಚಂದ. ಮೊದಲು ಮುಗುಳ್ನಗುತ್ತಾರೆ. ನಂತರ ಪ್ರಮಾಣಗ್ರಂಥವನ್ನು ಉಲ್ಲೇಖಿಸಿ, ಇಂಥ ಕಡೆ , ಹೀಗೆ ಹೇಳಿದ್ದಾರೆ ಎಂದು ಬಹಳ ಖಚಿತವಾಗಿ ಹೇಳುತ್ತಾರೆ. ಹಿಂದೆಯೇ ಪ್ರಮಾಣಗ್ರಂಥವನ್ನು ತರಿಸಿ, ಕೇಳಿದವರಿಂದಲೇ ಆ ಪುಟವನ್ನು ತೆರೆಯಿಸಿ “ಇದೋ ನೋಡು, ಇಂಥ ಸಾಲಿನಲ್ಲಿ ಹೀಗೆ ಹೇಳಿದ್ದಾರೆ, ಹಾಗಾಗಿ ನಿನ್ನ ಸಂದೇಹಕ್ಕೆ ಇದುವೇ ಉತ್ತರ” ಎಂದು ತೋರಿಸಿಯೇ ಬಿಡುತ್ತಾರೆ. ಈ ಕ್ರಮವು ಸುಧಾ ಆಗಬಹುದು, ತಾತ್ಪರ್ಯ ನಿರ್ಣಯವಾಗಬಹುದು, ಮಧ್ವ ವಿಜಯವೂ ಆಗಬಹುದು. ಎಲ್ಲದಕ್ಕೂ ಇದೇ ಕ್ರಮವು. ಎಲ್ಲ ವಿಷಯಗಳೂ ಪಂಕ್ತಿಸಹಿತವಾಗಿ ಅವರ ಹೃದಯಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿ ನಿಂತಿವೆ.
ಗುರುಗಳ ವಿನಯವೂ ದೊಡ್ಡದೇ ಆಗಿದೆ. ಇಷ್ಟು ದೊಡ್ಡಮಟ್ಟದ ಜ್ಞಾನವು ಅವರದಾಗಿದ್ದರೂ ಸಹ, ಉಪನ್ಯಾಸ ಅಥವಾ ಪಾಠಕ್ಕೆ ಮೊದಲು ತಪ್ಪದೇ ಹೋಂ ವರ್ಕ್ ಮಾಡಿಕೊಳ್ಳುತ್ತಾರೆ. ಈ ಹೋಂ ವರ್ಕ್ ಮಾಡಿಕೊಳ್ಳುವುದು ವಿಷಯ ನೆನಪಿರಲಿ ಅಂತಲೋ, ಅನುಕ್ರಮಣಿಕೆ ಸರಿ ಇರಲಿ ಅಂತಲೋ ಅಲ್ಲ. ವೇದವ್ಯಾಸದೇವರ ಮಾತುಗಳನ್ನು ಹೇಳುವಾಗ ನಮ್ಮಿಂದ ಹೆಚ್ಚು ಕಡಿಮೆ ಆಗಬಾರದು ಎನ್ನುವುದು ಇದರ ಅಭಿಪ್ರಾಯ. ಇದನ್ನು ಅವರೇ ಹೇಳಿದ್ದರಿಂದ ನನಗೂ ತಿಳಿದಿದೆ. ಇದುವರೆಗೂ ಶ್ರೀಗಳವರ ಮಾತಿನಲ್ಲಾಗಲಿ, ಕೃತಿಯಲ್ಲಾಗಲಿ ಇಂತಹ “ಹೆಚ್ಚು-ಕಡಿಮೆಯನ್ನು” ನೋಡಿರುವ ವಿದ್ವಾಂಸರೇ ಇಲ್ಲ. ಆದರೂ ಸಹ ಜಾಗರೂಕರಾಗಿ ಇರುತ್ತಾರೆ ಎಂದರೆ ಶ್ರೀಟೀಕಾಕೃತ್ಪಾದರ, ಶ್ರೀರಾಯರ ಮೇಲ್ಪಂಕ್ತಿಯಾದ ವಿನಯವು ಶ್ರೀಗಳವರ ಹೃದಯದಲ್ಲಿ ಇಳಿದಿರುವುದನ್ನು ಅವರ ಈ ಕೃತಿಯಿಂದ ಸ್ಪಷ್ಟವಾಗಿ ನಾವು ತಿಳಿಯಬಹುದು.
2-3 ವರ್ಷಗಳ ಹಿಂದೆ ಶ್ರೀಭೀಮಸೇನದೇವರ ಬಗ್ಗೆ ಉಪನ್ಯಾಸವಿತ್ತು. 40-45 ದಿನಗಳ ಕಾಲ ನಡೆದ ಪ್ರವಚನವದು. ತಮ್ಮ ನಿತ್ಯದ ಎಲ್ಲ ಕರ್ತವ್ಯಗಳನ್ನು ಸಂಪೂರ್ತಿಮಾಡಿ, ನಂತರ ಉಪನ್ಯಾಸ ನಡೆಯುವ ಸ್ಥಳಕ್ಕೆ ಬಂದು ಕೂಡುತಿದ್ದರು. ಈ ಪ್ರವಚನವನ್ನು ನಾವು ಲೈವ್ ಕೊಡುವ ಉದ್ದೇಶದಿಂದ, ಪ್ರವಚನಕಾರರ ಸುತ್ತ ಮಾತ್ರವೇ ಲೈಟು ಹಾಕಿರುತ್ತಾ ಇದ್ದೆವು. ಬೇರೆ ಎಲ್ಲ ಕಡೆ ಕತ್ತಲೆ ಇರುತ್ತಿತ್ತು. ಶ್ರೀಗಳವರು ಸ್ಟುಡಿಯೋದಲ್ಲೇ ಒಂದೆಡೆ ಕುಳಿತು, ಎದುರಿಗೆ ವಿದ್ವಾಂಸರು ಪ್ರವಚನ ಮಾಡುತ್ತಿರುವಾಗ ಅದನ್ನು ಕೇಳುತ್ತಲೇ, ನಮಗೆ ತೊಂದರೆಯಾಗದಂತೆ, ಫೋನಿನ ಟಾರ್ಚ್ ಅನ್ನು ಬೆಳಗಿಸಿಕೊಂಡು, ಚಿಕ್ಕದಾಗಿ ಚೊಕ್ಕದಾಗಿ ತಮ್ಮ ಹೋಮ್ ವರ್ಕ್ ಅನ್ನು ಮುಗಿಸಿಕೊಂಡು ಬಿಡುತ್ತಿದ್ದರು. ಆ ದಿನದ ಪ್ರವಚನವು ಮುಗಿದ ನಂತರ ವಿದ್ವಾಂಸರು ಹೇಳಿದ ವಿಷಯವನ್ನು ಪ್ರಸ್ತಾವಿಸಿ ಅವರನ್ನು ಶ್ಲಾಘಿಸಿದ ನಂತರವೇ ತಮ್ಮ ಪ್ರವಚನವನ್ನು ಮಾಡುತ್ತಿದ್ದರು.
ಹೀಗೆ ಅವರು ತಮ್ಮ ಟಿಪ್ಪಣಿಗಳನ್ನು ತಯಾರು ಮಾಡಿಕೊಳ್ಳುತ್ತಿರುವಾಗ ಸೆರೆಹಿಡಿದ ಒಂದು ಸನ್ನಿವೇಶವಿದು. ಶ್ರೀಗಳವರ ಕಣ್ಣಿಗೇನೋ ತೊಂದರೆಯಾಗಿತ್ತು ಆಗ. ಆದರೂ ಉಪನ್ಯಾಸಕ್ಕೆ ರಜೆ ಹೇಳದೆ, ಕಂಗಳಿಗೆ ಔಷಧವನ್ನು ಹಾಕಿಕೊಂಡು, ಎರಡು ನಿಮಿಷಗಳ ನಂತರ ನೋಟ್ಸ್ ಬರೆದುಕೊಂಡರು. ಅಪರೂಪವಲ್ಲವೇ ಇಂತಹ ನಿಷ್ಠೆ, ಈ ಕಲಿಗಾಲದಲ್ಲಿ.
ಲೋಕದಲ್ಲಿ ಅನೇಕರು ವಿದ್ವಾಂಸರು. ಆದರೆ ಕೆಲವರು ಮಾತ್ರ ವಿನೀತರು. ಜ್ಞಾನಸಾಗರರಾಗಿದ್ದೂ ವಿನಯಶೀಲರಾಗಿರುವವರು ಅಪರೂಪ. ನಮ್ಮ ಗುರುಗಳು ಎಲ್ಲ ರೀತಿಯಿಂದಲೂ ಮೇಲ್ಪಂಕ್ತಿಯಾಗಿದ್ದಾರೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.