ಕೈ ಹಿಡಿದವರಾರು?

ನಾನಿನ್ನೂ ಉದ್ಯೋಗದಲ್ಲಿ (ಅಂದರೆ ಸಂಬಳ ಬರುವ ಉದ್ಯೋಗ) ಇರಲಿಲ್ಲ. ಹಾಗೆಂದು ವಿದ್ಯಾರ್ಥಿಯಾಗಿ ಪಾಠ ಕಲಿಯುವ ಸೌಭಾಗ್ಯವನ್ನೂ ನಾನು ಬಳಸಿಕೊಳ್ಳುವ ಜಾಣನಾಗಿರಲಿಲ್ಲ.  ಶ್ರೀಗಳವರ ಸಂಚಾರದಲ್ಲಿ ಪಾರಾಯಣ ಮಾಡುವುದು, ಶ್ರೀಗಳವರಿಗೆ ಚಿಕ್ಕ ಪುಟ್ಟ ಸಹಾಯ ಮಾಡುವುದು ಇದು ನನ್ನ ಕೆಲಸ. ಇಷ್ಟು ಮಾತ್ರಕ್ಕೇ ನನ್ನ ಅಹಂಕಾರ ಬ್ರಹ್ಮರಂಧ್ರದಾಟಿ ಹೋಗಿ ಬರುತ್ತಿತ್ತು. ರಾಯರ ಕರುಣೆಗೆ ಪಾತ್ರರಾದ ಶ್ರೀಸುಶಮೀಂದ್ರತೀರ್ಥರು ನನ್ನ ಕಣ್ಣು ತೆರೆಸಿದ ಮಹಾನುಭಾವರು.

ಈ ಘಟನೆ ನಡೆದು ಸುಮಾರು ೮-೧೦ ವರ್ಷಗಳಾಗಿವೆ. ಇದು ಇತರರಿಗೆ ಅತಿ ಸಾಮಾನ್ಯವೆಂದೆನಿಸಿದಲ್ಲಿ ಆಶ್ಚರ್ಯವೇನಿಲ್ಲ. ಆದರೆ ನನಗೆ ನನ್ನ ವಯಕ್ತಿಕ ಮನೋವ್ಯಾಪಾರವು ಚೆನ್ನಾಗಿ ತಿಳಿದಿದೆಯಾದ ಕಾರಣ ನನ್ನ ಮಟ್ಟಿಗೆ ಇದೊಂದು ಮಹತ್ವದ ಘಟನೆ.

ಈ ಅನುಭವವನ್ನು ನೀವು ಓದುವ ಮೊದಲು ತಿರುಮಕೂಡಲಿನ ಮಠ, ನದಿಗಳ ಸಂಗಮ, ನದಿಯಲ್ಲಿ ಇಳಿಯುವ ವ್ಯವಸ್ಥೆ ಹೀಗೆ ಒಟ್ಟಾರೆ ಪರಿಸರದ ಚಿತ್ರಣವನ್ನು ನಿಮ್ಮ ಮುಂದಿಡುವುದು ಅವಶ್ಯಕವೆಂದು ನಾನು ಭಾವಿಸುವೆ. ತ್ರಿಮಕೂಟವಂದು ಈ ಸ್ಥಳದ ಪ್ರಾಚೀನ ಹೆಸರು. ಕಾವೇರಿ ಹಾಗು ಕಪಿಲಾ ನದಿಗಳ ಸಂಗಮ ಕ್ಷೇತ್ರವಿದು. ಹಾಗೆಯೆ ಸ್ಪಟಿಕಸರೋವರ ತೀರ್ಥವೂ ಈ ಸಂಗಮದ ಮಧ್ಯದಲ್ಲಿದೆ ಎಂದು ಸ್ಥಳ ಮಹಿಮೆಯು ವರ್ಣಿಸುತ್ತದೆ. ಹೀಗಾಗಿ ಇದು ಪ್ರಸಿದ್ಧವಾದ ತ್ರಿವೇಣಿಸಂಗಮ.  ವ್ಯಾಸರಾಜ ಮಠದ ಬಲಿಷ್ಠ ಕೋಟೆ ಎನ್ನಲಡ್ಡಿಯಿಲ್ಲ.  ಇಲ್ಲಿನ ಮಠವು ನದಿಯಿಂದ ಅತಿ ಎತ್ತರದ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ. ನದಿಗೆ ಸ್ನಾನಕ್ಕೆ ಹೋಗಲು ಸುಮಾರು ೫೦+ ಮೆಟ್ಟಿಲುಗಳನ್ನು ಇಳಿಯಬೇಕು. ಬಹಳ ವರ್ಷಗಳ ಹಿಂದೆ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಬಳಸಿ ಈ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಳಿಯುವುದೇನೋ ಸುಲಭ, ಆದರೆ ಎತ್ತರದ ಮೆಟ್ಟಿಲುಗಳಾದ್ದರಿಂದ ತಿರುಗಿ ಹತ್ತಿ ಬರುವಾಗ ಆಯಾಸ ಆಗುವುದು.  ನದಿಯಲ್ಲಿ ನೀರಿನ ಮಟ್ಟವು ಸಹಜವಾಗಿಯೆ ಹೆಚ್ಚು ಕಡಿಮೆಯಾಗುತ್ತಿರುವುದು. ಕೊನೆಯ ಮೆಟ್ಟಿಲಿನಿಂದ ನೀರು ಸಾಕಷ್ಟು ಕೆಳಗೆ ಇರಬಹುದು ಅಥವಾ ನೀರು ಕೊನೆಯ ನಾಲ್ಕಾರು ಮೆಟ್ಟಿಲುಗಳನ್ನು ಮುಳುಗಿಸಿರಲೂ ಬಹುದು.  ಜಾಗ್ರತೆಯಾಗಿ ಇಳಿದು ಸ್ನಾನ ಮಾಡಿ (ಧೈರ್ಯವಿದ್ದಲ್ಲಿ ಈಜಾಡಿ, ಮೋಜು ಮಾಡಿ) ಬರಬಹುದು.

Sri Panduranaga Deavaru, Sri Yantrodhara and 108 Mukhyaprana, Tiruma koodalu
Sri Panduranaga Deavaru, Sri Yantrodhara and 108 Mukhyaprana

ಶ್ರೀ ವ್ಯಾಸರಾಜಮಠದ ಹಿಂದಿನ ಶ್ರೀಗಳವರಾದ ಶ್ರೀವಿದ್ಯಾವಾಚಸ್ಪತಿತೀರ್ಥರ, ನನ್ನ ಶ್ರೀಮಠದ ಶ್ರೀಸುಶಮೀಂದ್ರತೀರ್ಥರ ಹಾಗು ಶ್ರೀಪಾದರಾಜಮಠದ ಶ್ರೀವಿಜ್ಞಾನನಿಧಿತೀರ್ಥ ಶ್ರೀಪಾದಂಗಳವರ ನಡುವೆ ಒಂದು ವಿಶಿಷ್ಟವಾದ ಸ್ನೇಹವಿತ್ತು. ಬಹಳ ಮಂದಿಗೆ ಈ ವಿಷಯ ತಿಳಿದಿದೆ. ಶ್ರೀವಿದ್ಯಾವಾಚಸ್ಪತಿತೀರ್ಥರಿಗೆ ತಿರುಮಕೂಡಲಿನಲ್ಲಿ ಶ್ರೀಪ್ರಾಣದೇವರ ನೂರ ಎಂಟು ವಿಗ್ರಹಗಳು, ಶ್ರೀಯಂತ್ರೋದ್ಧಾರ ಪ್ರಾಣಾದೇವರು ಹಾಗು ಶ್ರೀಪಾಂಡುರಂಗದೇವರನ್ನು ಪ್ರತಿಷ್ಠಾಪಿಸಬೇಕೆನ್ನುವ ಅಭಿಪ್ರಾಯವಾಯಿತು. ಸರಿ, ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರು ತಮ್ಮ ಇಬ್ಬರೂ ಯತಿಸ್ನೇಹಿತರನ್ನು  ಶ್ರೀಗಳವರನ್ನು ತಿರಮಕೂಡಲಿಗೆ ಆಹ್ವಾನಿಸಿದರು. ಅದೊಂದು ಅಪೂರ್ವವಾದ ಸಂಘಟನೆ. ಶ್ರೀವಾಚಸ್ಪತಿಗಳು ನೂರೆಂಟು ಪ್ರಾಣದೇವರನ್ನು, ಶ್ರೀವಿಜ್ಞಾನನಿಧಿಗಳು ಶ್ರೀಯಂತ್ರೋದ್ಧಾರನನ್ನೂ ಹಾಗು ಶ್ರೀಸುಶಮೀಂದ್ರರು ಶ್ರೀಪಾಂಡುರಂಗನನ್ನೂ ಏಕಕಾಲದಲ್ಲಿ ಪ್ರತಿಷ್ಠಾಪಿಸಿದ ಹೃದಯಂಗಮ ಕಾರ್ಯಕ್ರಮ.  ಪ್ರತಿಷ್ಠಾಪನೆಯ ದಿನ ನಾನು ಶ್ರೀಸುಶಮೀಂದ್ರತೀರ್ಥರಿಗೆ ಪ್ರತಿಷ್ಠಾಪನಾ ಕಾರ್ಯದಲ್ಲಿ ಸಹಾಯಕನಾಗಿರುವ ಅವಕಾಶ ಒದಗಿತ್ತು. ಆದರೆ ದಿನಾಂಕ ನನಗೆ ನೆನಪಿಲ್ಲ.

ಆ ದಿನ ನಸುಕಿನಲ್ಲಿ ಶ್ರೀಗಳವರು “6:10 (1)  ಕ್ಕೆ ಸ್ನಾನಕ್ಕೆ ಕರ್ಕೊಂಡು ಹೋಗು” ಎಂದರು. ಸರಿ ಅದರಂತೆ ಶ್ರೀಗಳವರನ್ನು ಸ್ನಾನಕ್ಕೆ ಕರೆದೊಯ್ಯಲು ಅಣಿ ಮಾಡಿಕೊಂಡೆ. ಇನ್ನೂ ಸಾಕಷ್ಟು ಸಮಯಾವಕಾಶ ಇದ್ದಿದ್ದರಿಂದ ಅಲ್ಲಿಯೇ ಇದ್ದ ಬೆತ್ತದ ಕುರ್ಚಿಯೊಂದರ ಮೇಲೆ ಶ್ರೀಗಳವರು ಕುಳಿತರು. ಸುಶಮೀಂದ್ರರು ಎಂದರೆ ಅದೊಂದು ಆಕರ್ಷಣೆ ಕೇಂದ್ರವಿದ್ದಂತೆ. ಎಲ್ಲರೂ ಬಂದು ಬಂದು ನಮಸ್ಕರಿಸತೊಡಗಿದರು. ನೇರವಾಗಿ ಶ್ರೀಗಳವರೊಡನೆ ಮಾತನಾಡಲು ಭಯವೋ, ಸಂಕೋಚವೋ ಅಥವಾ ಗೌರವವೋ! ಒಟ್ಟಿನಲ್ಲಿ ಬಂದವರೆಲ್ಲ “ಸ್ವಾಮಿಗಳು ಮುದ್ರೆ ಹಾಕ್ತಾರೇನು?”  “ಒಂದು ಯಂತ್ರ (2) ಕೊಡ್ಸಿ” “ಮಂತ್ರಾಕ್ಷತೆ ಕೊಡಿಸಿ” ಎಂದೆಲ್ಲ ನನ್ನನ್ನು ಕೇಳತೊಡಗಿದರು. ಇದರಿಂದ ನನಗೆ ಜಂಭ ಮೂಡಿ ನನ್ನ ಮೂಗು ಅಗಲವಾಗತೊಡಗಿತು!. ಶ್ರೀಗಳವರು ಮಂತ್ರಾಕ್ಷತೆ, ಯಂತ್ರ ಕೊಡಲು ಆರಂಭಿಸಿದಾಕ್ಷಣ ಜನ ಸಂಮರ್ದಗೊಳ್ಳತೊಡಗಿತು. ನಾನು ಸ್ವಲ್ಪ ಸ್ವಲ್ಪವಾಗಿ ಬಂದ ಜನರ ಮೇಲೆ ದರ್ಪ ತೋರಿಸಲು ಆರಂಭಿಸಿದೆ “ಮೈ ಮೇಲೆ ಯಾಕೆ ಬೀಳ್ತೀರಿ?”, “ಎರಡೂ ಕೈ ಚಾಚಲು ಗೊತ್ತಾಗುವುದಿಲ್ಲವೇನು?”, ” ದೊಡ್ಡವರನ್ನು ಮುಟ್ಟಬಾರದೂ ಅಂತ ಗೊತ್ತಗದಿದ್ದರೆ ಹೇಗೆ” , “ಹಿಂದೆ ಸರ್ಕೊಳ್ಳಿ” ಎಂದೆಲ್ಲ ಒರಲತೊಡಗಿದೆ.  ಜನರೆಲ್ಲ ನನ್ನ ಮಾತಿಗೆ ಗೌರವ ಕೊಟ್ಟರೋ ಅಥವಾ ಭಯಪಟ್ಟರೋ ಅಥವಾ ಬಯ್ದುಕೊಂಡರೋ ಅನ್ನುವುದನ್ನು ಈಗ ಆ ಮನೋಭಿಮಾನಿ ರುದ್ರದೇವನೇ ಹೇಳಬೇಕು.  ಮಂತ್ರಾಕ್ಷತೆ ತೆಗೆದುಕೊಂಡವರಿಗೆಲ್ಲ ಈ ಘಟನೆಯ ನೆನಪಾದರೂ ಯಾಕಿದ್ದೀತು?

ಸರಿ, 6 ಗಂಟೆ ಆಯ್ತು. ಶ್ರೀಗಳವರು ಸ್ನಾನಕ್ಕೆ ಹೋಗೋಣ ಎಂದು ಎದ್ದು ನಿಂತರು. ಇನ್ನೊಬ್ಬ ದ್ವಾರಪಾಲಕ ಬಂದು ಮಂತ್ರಾಕ್ಷತೆ ತಟ್ಟೆಯನ್ನು ತೆಗೆದುಕೊಂಡು ಹೋದ. ನಾನು ಶ್ರೀಗಳವರ ಕೈಹಿಡಿದುಕೊಂಡು ನದಿಬಾಗಿಲೆಡೆಗೆ ಬಂದೆ.  ಬರುವಾಗ ದಾರಿಯುದ್ದಕ್ಕೂ ಜನ ಸ್ವಾಮಿಗಳಿಗೆ ನಮಸ್ಕರಿಸುತ್ತಿದ್ದರು. ನನಗೇನೋ ವಿಚಿತ್ರವಾದ ಗರ್ವ! ಅವರೆಲ್ಲ ನನಗೆ ನಮಸ್ಕರಿಸುತ್ತಿದ್ದಾರೆ ಎಂಬಂತೆ.

ಶ್ರೀಗಳವರೊಡನೆ ಮೆಟ್ಟಿಲುಗಳ ಬಳಿ ಬಂದಾಗ ಇಳಿಯುವುದು ಸ್ವಲ್ಪ ಕಷ್ಟದ ಕೆಲಸ ಅನ್ನಿಸಿತು. ಮೆಟ್ಟಿಲುಗಳು ತುಂಬಾ ಎತ್ತರವಾಗಿದ್ದರಿಂದ ಅತೀ ನಿಧಾನವಾಗಿ ಇಳಿಸಿಕೊಂಡು ಬಂದೆ.  ನದಿಯ ಕಡೆಯಿಂದ ಎರಡನೆ ಮೆಟ್ಟಿಲಿನ ಮೇಲೆ ಶ್ರೀಗಳವರನ್ನು ಕುಳ್ಳಿರಿಸಿ ನಾನು ಕೊನೆಯ ಮೆಟ್ಟಿಲನ ಮೇಲೆ ಒಂದೆರಡು ಕ್ಷಣ  ಮೇಲೆ ನಿಂತು ಯಾವ ಕಡೆಯಿಂದ ಶ್ರೀಗಳವರನ್ನು  ನದಿಯಲ್ಲಿ ಇಳಿಸಿದರೆ ಕ್ಷೇಮ ಎಂದು ಅಲೋಚನ ಮಾಡಿದೆ. ಕೊನೆಯ ಮೆಟ್ಟಿಲು ಸಹ ಸೊಂಟದಷ್ಟು ಎತ್ತರವಿದ್ದಿದ್ದರಿಂದ ನಿಂತುಕೊಂಡೇ ನೀರಲ್ಲಿ ಇಳಿಯುವುದು ಕಷ್ಟವಾಗಿತ್ತು.  ಕುಳಿತುಕೊಂಡೇ ಇಳಿಯೋಣ ಎಂದರೆ ಯಾವ ಮೆಟ್ಟಿಲ ಮೇಲೆ ಕೂಡಬೇಕು ಎನ್ನುವ ಪ್ರಶ್ನೆ ಎದುರಾಯಿತು. ಯಾಕೆಂದರೆ ಮೆಟ್ಟಿಲುದ್ದಕ್ಕೂ ಹಾಸಿಗೆಯಷ್ಟು ದಪ್ಪದ ಪಾಚಿ ನೆಲೆಸಿತ್ತು. ಅತೀವವಾದ ಚಳಿಗಾಳಿಗೆ ನಿಲ್ಲುವುದೂ ಸಹ ಕಷ್ಟವಾಗತೊಡಗಿತ್ತು. ಅತ್ತ ಇತ್ತ ಅಡ್ಡಾಡಿ ಒಂದು ಕಡೆ ಪಾಚಿಯನ್ನು ತೆಗೆದು ಹಾಕಿ  ಶ್ರೀಗಳವರನ್ನು ಅಲ್ಲಿಗೆ ಕರೆತಂದೆ.  ಈಗ “ಮೊದಲು ನಾನು ಇಳಿದು ನಂತರ ಶ್ರೀಗಳವರನ್ನು ನದಿಯಲ್ಲಿ ಇಳಿಸುವುದೋ ಅಥವಾ ಶ್ರೀಗಳವರು ನದಿಯಲ್ಲಿ ಇಳಿದ ನಂತರ ನಾನು ಇಳಿಯುವುದೋ”  ಎನ್ನುವ ಆಲೋಚನೆಗೆ ಸಿಲುಕಿಕೊಂಡೆ. ಶ್ರೀಗಳವರೇ ಮೊದಲು ಇಳಿದಲ್ಲಿ, ನಾನು ಇಳಿಯುವಾಗ ಅವರ ಮೇಲೆ ನೀರು ಸಿಡಿದರೆ? ಅದೇ ರೀತಿ ನಾನು ಮೊದಲು ಇಳಿದರೆ ಶ್ರೀಗಳವರ ಕೈಹಿಡಿದುಕೊಳ್ಳುವವರು ಯಾರು ? ಅವರಿಗೆ ಬ್ಯಾಲೆನ್ಸ್ ತಪ್ಪಿದರೆ ಏನು ಮಾಡುವುದು? ಎಂದು ವಿಪರೀತವಾದ ಬುದ್ಧಿವಂತಿಕೆ ನನ್ನಲ್ಲಿ ತಲೆದೋರಿತು.

ಇದೇ ಗೊಂದಲದಲ್ಲಿ ನಿಂತುಕೊಂಡಿದ್ದಾಗ ಶ್ರೀಗಳವರ ಧ್ವನಿಕೇಳಿಸಿತು, “ಯಾಕೋ ನೀರಲ್ಲಿ ಇಳಿಯೋಲ್ವಾ? ಚಳಿಗೆ ಹೆದರಿಕೊಂಡ್ಯಾ” ಎಂದು. ನೋಡಿದರೆ ಶ್ರೀಗಳವರಾಗಲೇ ನೀರಲ್ಲಿ ಇಳಿದು ಒಂದು ಮುಳುಗು ಸಹ ಹಾಕಿ ಎದ್ದಿದ್ದಾರೆ!! ಓಹೋ ಎಂದು ಕೊಂಡು ನಾನು ಸಹ ಇಳಿಯಲು ಅನುವಾಗುವಾಗ ನಾನೇ ಆಯ ತಪ್ಪಿ ಧಡಾಲ್ ಎಂದು ನದಿಯಲ್ಲಿ ಬಿದ್ದೆ! ಬಿದ್ದ ರಭಸ, ವೇಗವಾಗಿ ಬೀಸುತ್ತಿದ್ದ ಗಾಳಿ ಹಾಗು ನೀರಿನಲ್ಲಿದ್ದ ಸೆಳೆತ ಎಲ್ಲವೂ ಸೇರಿ  ಎಲ್ಲಿದ್ದೇನೆ ಎಂಬುದೇ ತಿಳಿಯದೆ ಮೂಢನಂತೆ ಗಾಬರಿಯಾದೆ. ಅಷ್ಟೇ! ಶ್ರೀಗಳವರ ಕೈ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನನ್ನನ್ನು ಹಿಡಿದೆತ್ತಿ ಸುರಕ್ಷಿತವಾಗಿ ನಿಲ್ಲಿಸಿತು.  ಮೂಗಿನೊಳಗೆ ನೀರು ಸೇರಿಕೊಂಡು ನಾನು ಕೆಮ್ಮುತ್ತಿದ್ದಾಗೆ ಶ್ರೀಗಳವರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು “ರಾಘವೇಂದ್ರ ಅನ್ನು ಏನೂ ಅಗಲ್ಲ” ಎಂದರು. ಅವರ ಮಾತೆಂದರೆ ಮಹತ್ವದ ಮಂತ್ರವೇ ಸರಿ. ಒದ್ದಾಡುತ್ತಲೇ ರಾ….ಹ್ ಹ್ ಹ್…ಘ್…ಅ…ವೇಂದ್ರ ಎಂದ ಕೂಡಲೆ ಪವಾಡದಂತೆ ಕೆಮ್ಮು ನಿಂತು ಕಣ್ಣಿಗೆ ತಿಳಿಯಾದ ನೀರು ಕಾಣಿಸತೊಡಗಿತು.

ಸ್ನಾನ ಮುಗಿಸಿ ಶ್ರೀಗಳವರೊಡನೆ ವಾಪಸ್ಸು ಬರುವಾಗ ಮಧ್ಯದಲ್ಲಿ ಒಂದು ಕಡೆ ನಿಂತು ಶ್ರೀಗಳವರು ಮಗುವಿನಂತೆ ತಮಾಶೆ ಮಾಡುತ್ತ “ನೀರಲ್ಲಿ ಬಿದ್ದೋದ ದಡ್ಡ, ದಡ್ಡ!” ಎಂದು ನಕ್ಕರು.  ಅ ಮನೋಜ್ಞವಾದ ನಗುವಿಗೆ ನನ್ನೆಲ್ಲ ದುಗುಡ ಹಾಗು ನಾಚಿಕೆಗಳು ಮಾಯವಾದವು.  ನನ್ನ ತಲೆತಿರುಗಿಸುತ್ತಿದ್ದ ಅಹಂಕಾರ ಶ್ರೀಗಳವರ ನಗುವಿನ ಅಲೆಗಳ ಏಟಿಗೆ ಚದುರಿ ಹೋಯಿತು.

ಪ್ರತಿಷ್ಠಾಪನೆಯಾದ ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ  ಮಧ್ಯಾಹ್ನ ವಿಶ್ರಾಂತಿಯ ಸಮಯದಲ್ಲಿ ಮತ್ತೊಮ್ಮೆ ಶ್ರೀಗಳವರು “ಹೆದರ್ಕೋಬೇಡ, ರಾಯರು ಇದಾರೆ” ಎಂದರು. ನನ್ನ ಮನಸ್ಸಿನಲ್ಲಿ ನೀರೊಳಗೆ ಬಿದ್ದ ಘಟನೆಯು ಮತ್ತೊಮ್ಮೆ ಮೂಡಿಬಂತು. “ನಾನು” ಶ್ರೀಗಳವರ ಕೈಹಿಡಿಕೊಂಡು ಅವರನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತೇನೆ. ಶ್ರೀಗಳವರನ್ನು “ನಾನು” ಸ್ನಾನಕ್ಕೆ ಕರೆದೊಯುತ್ತೇನೆ, ಸ್ವಾಮಿಗಳಿಗೆ ಅಪಾಯವಾಗದಂತೆ “ನಾನು” ನೋಡಿಕೊಳ್ಳುತ್ತೇನೆ ಎನ್ನುವ ಮಾತನ್ನು ನಾನು ಆಡುತ್ತಿದ್ದರೆ, ಗುರುರಾಜರು ಶ್ರೀಗಳವರ ಮುಖಾಂತರ ನನ್ನ ಅಹಂಕಾರ ತುಂಬಿದ ಮನಸ್ಸನ್ನು ತೊಳೆದು ಹಾಕಿದರು.  ನಾನು ಅವರ ಕೈಹಿಡಿದುಕೊಂಡು ಹೋಗುವುದಲ್ಲ, ಅವರೇ ನನ್ನ ಕೈಹಿಡಿದು ಮುನ್ನಡೆಸುವವರು ಹಾಗು ಕೈ ಹಿಡಿದು ಮೇಲೆ ಎತ್ತುವವರು ಎಂಬ ಸರಿಯಾದ ತಿಳುವಳಿಕೆಯು ನನ್ನಲ್ಲಿ ಮೂಡಿತು. ತಾತ್ಪೂರ್ತಿಕವಾಗಿ ಅವರು ನಮ್ಮ ಕೈಹಿಡಿದುಕೊಂಡು ನಡೆದಾಡಿದರೂ ಅದು ವಾಸ್ತವವಾಗಿ ನಮ್ಮ ಮೇಲೆ ಅವರು ಮಾಡುವ ಕೃಪೆಯೇ ಹೊರತಾಗಿ ನನಗೆ ಆ ಸಾಮರ್ಥ್ಯವಿದೆ ಎನ್ನುವ ಅಹಂಕಾರಕ್ಕೆ ಹಾಕುವ ಮನ್ನಣೆಯಲ್ಲ ಎನ್ನುವ ಅಭಿಪ್ರಾಯ ನನ್ನಲ್ಲಿ ಗಟ್ಟಿಯಾಗಿ ನೆಲೆಯೂರಿತು.

ಒಂದಿಷ್ಟು ಎಕ್ಸ್ಟ್ರಾ ಮಾಹಿತಿ

೧) ಶ್ರೀಗಳವರ ಟೈಮ್ ಟೇಬಲ್ ಇತರರಿಗೆ ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಯಾವತ್ತೂ ಅವರು ಹೇಳಿದ ಸಮಯಕ್ಕೆ ಮೀರಿದವರಲ್ಲ. ಉದಾ : ಮಂತ್ರಾಕ್ಷತೆ ಕೊಡಲು ೯:೩೯ಕ್ಕೆ ಬರ್ತೀನಿ ಎನ್ನುವರು. ಇತ್ತ ಒಂಬತ್ತೂವರೆಯೂ ಅಲ್ಲ, ಅತ್ತ ಒಂಭತ್ತೂ ಮುಕ್ಕಾಲೂ ಅಲ್ಲ. ಮಧ್ಯದ ಸಮಯವನ್ನು ಹೇಳುವರು. ಸ್ವಾರಸ್ಯವೆಂದರೆ ೯.೩೯ಕ್ಕೆ ಸರಿಯಾಗಿ ಮಂತ್ರಾಕ್ಷತೆಯ ಕೋಣೆಯಲ್ಲಿ ಹಾಜರಿರುತ್ತಿದ್ದರು. ಹೀಗೆಯೇ ೭:೨೪, ೮:೧೧, ೪:೦೭ ಹೀಗೆ ಇರುತ್ತಿತ್ತು ಈ ಅವಧೂತರ ಗಡಿಯಾರ.

೨) ಯಂತ್ರ ಅಂದರೆ ಶ್ರೀಗಳವರು ಶ್ರೀಸಂತಾನಗೋಪಾಲಕೃಷ್ಣನ ಉಪಾಸನೆಯ ಬಲದಿಂದ ಕೊಡುವ ಒಂದು ತಾಯತ

ಶ್ರೀರುಗ್ಮಿಣೀಸಹಿತ ಪಾಂಡುರಂಗದೇವರು, ಶ್ರೀಯಂತ್ರೋದ್ಧಾರ ಹಾಗು ೧೦೮ ಶ್ರೀಪ್ರಾಣದದೇವರು ಚಿತ್ರದ ಮೂಲ ಇಲ್ಲಿದೆ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

5 Comments

  1. Pradeep
    November 25, 2013
    Reply

    Kannalli neeru bantu.. Dhanyavadagalu.. yidannu odhi nanna ahankara kooda haaro hoyitu….

  2. Umesh
    November 23, 2016
    Reply

    Om Sri Raghvendraya namaha

  3. Gopalvittal
    December 21, 2017
    Reply

    ಸ್ವಾಮಿಗಳ ‌ಮಹಿಮೆ ಅತ್ಯದ್ಭುತ.. ಸಾಷ್ಟಾಂಗ ಪ್ರಣಾಮಗಳು.

  4. ಗೋಪಾಲ್ ಬಳ್ಳಾರಿ
    October 19, 2018
    Reply

    ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು

  5. Sneharao
    November 23, 2018
    Reply

    🙏🙏🙏🙏🙏🙏🙏🙏

Leave a Reply

This site uses Akismet to reduce spam. Learn how your comment data is processed.