ಮಿಥಿಲಾ ವಿಶ್ವವಿದ್ಯಾಲಯ

ಮೊದಲ ಭಾಗವನ್ನು ಸಹ ಓದಿ. https://eeshavasyam.com/myblog/navadvipa_1/

ಸ್ವಾಮಿ, ಬಿಹಾರವು ಸಾಮಾನ್ಯವಾದ ರಾಜ್ಯವಲ್ಲ! ಬಹು ವಿಖ್ಯಾತ ವಿದ್ವಾಂಸರು ಹುಟ್ಟಿ ಬೆಳೆದು, ಪರಂಪರೆಯನ್ನು ಬೆಳೆಸಿದ ದೊಡ್ಡ ಸ್ಥಾನವದು. ಅಯೋಗ್ಯರ ಕೈಗೆ ಸಿಕ್ಕು ವಿದ್ಯಾವಿಹಾರವು ಇಂದು ಹೆಸರನ್ನು ಹಾಳುಮಾಡಿಕೊಂಡಿದೆಯಷ್ಟೆ.

ಇಂದಿನ ನೇಪಾಳದ ದಕ್ಷಿಣ ಭಾಗ ಮತ್ತು ಬಿಹಾರದ ಬಹುಭಾಗವು ಪ್ರಾಚೀನವಾದ ಮಿಥಿಲಾ ದೇಶವಾಗಿತ್ತು. ಬಹುದೊಡ್ಡ ಜ್ಞಾನಿಯಾದ ಸೀರಧ್ವಜ ಜನಕ ಮಹಾರಾಜನ ಕಾಲದಿಂದಲೂ ಇದು ಬಹುದೊಡ್ಡ ವಿಶ್ವವಿದ್ಯಾಲಯವೇ ಆಗಿದೆ. ಯಾರಪ್ಪಾ ಈ ಸೀರಧ್ವಜ ಎಂದರೆ, ಸೀತಾದೇವಿಯ ಅಪ್ಪ 🙂 . ಅಂದರೆ ಇದು ಎಷ್ಟು ಹಳೆಯ ಯೂನಿವರ್ಸಿಟಿ ಇರಬೇಕು ಲೆಕ್ಕ ಹಾಕಿ.

ಕಲಿಯುಗದಲ್ಲೂ ಇದು ಖ್ಯಾತವಾದ ವಿದ್ಯಾಕೇಂದ್ರವೇ ಆಗಿತ್ತು. ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡುವವರ ಸ್ವರ್ಗವಿದು ಮಿಥಿಲಾ ವಿಶ್ವವಿದ್ಯಾಲಯ. ಅಂದಿನ ನೈಯಾಯಿಕರೆಲ್ಲರೂ ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಹಾತೊರೆಯುತ್ತಿದ್ದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಗಂಗೇಶ ಉಪಾಧ್ಯಾಯರು (ಸುಮಾರು ೧೩ನೆ ಶತಮಾನ) ಪ್ರಾಚೀನ ನ್ಯಾಯಶಾಸ್ತ್ರಕ್ಕೆ ಒಂದು ಹೊಸ ಚೌಕಟ್ಟನ್ನು ಹಾಕಿ ನವೀನ ನ್ಯಾಯಶಾಸ್ತ್ರವನ್ನು ಜಗತ್ತಿಗೆ ಕೊಡಮಾಡಿದವರು. ಇವರ ತತ್ವಚಿಂತಾಮಣಿ ಗ್ರಂಥವು ಇಂದಿಗೂ ನವೀನ ನ್ಯಾಯಶಾಸ್ತ್ರದ ಬುನಾದಿಯಾಗಿದೆ. ಗಂಗೇಶರು ರೂಪಿಸಿದ ನವೀನನ್ಯಾಯದ ಪದ್ಧತಿಯನ್ನು ವಾಕ್ಯಾರ್ಥದಲ್ಲಿ ವ್ಯಾಪಕವಾಗಿ ಇಂದಿಗೂ ಬಳಸಿಕೊಳ್ಳುತ್ತಾರೆ.

ಗಂಗೇಶ ಉಪಾಧ್ಯಾಯರ ಶಿಷ್ಯ ಪರಂಪರೆಯಲ್ಲಿ ಪಕ್ಷಧರ ಮಿಶ್ರರದ್ದು ದೊಡ್ಡ ಹೆಸರು. ಇವರ ವೈದುಷ್ಯವು ಎಲ್ಲರ ಊಹೆಗೂ ಮೇಲ್ಮಟ್ಟದ್ದು. ಇವರದ್ದೇ ಒಂದು ಕಥೆ.

ಇವರ ವಾಸ್ತವ ಹೆಸರು ಜಯದೇವ ಮಿಶ್ರ ಎಂದು. ಪಕ್ಷಧರ ಎಂಬುದು ಇವರ ಬಿರುದು. ಇದಕ್ಕೆ ಹಲವು ಸ್ವಾರಸ್ಯಕರವಾದ ಕಾರಣಗಳನ್ನು ಹೇಳುತ್ತಾರೆ.

  1. ರಾತ್ರಿಯಲ್ಲಿ ಪಕ್ಷಿಯ ಹಾಗೆ ಏಕಾಗ್ರತೆಯಿಂದ ಕುಳಿತು ಒಂದೇ ನಿಲುವಿನಲ್ಲಿ ಶಾಸ್ತ್ರಾರ್ಥ ಪ್ರಬಂಧಗಳನ್ನು ಬರೆಯುತ್ತಿದ್ದರಂತೆ. ಪಕ್ಷಿಯ ಹಾಗೆ ಏಕಾಗ್ರತೆ ಇತ್ತು ಆದ್ದರಿಂದ ಪಕ್ಷಧರ (ಪಕ್ಷ = ರೆಕ್ಕೆ. ಪಕ್ಷವುಳ್ಳದ್ದು ಪಕ್ಷಿ).
  2. ಗಂಗೇಶ ಉಪಾಧ್ಯಾಯರ ತತ್ವಚಿಂತಾಮಣಿ ಗ್ರಂಥಕ್ಕೆ ಅಲೋಕ ಎನ್ನುವ ಒಂದು ವ್ಯಾಖ್ಯಾನವನ್ನು ಜಯದೇವ ಮಿಶ್ರರು ರಚಿಸಿದ್ದಾರೆ. ಈ ವ್ಯಾಖ್ಯಾನವು ತತ್ವಚಿಂತಾಮಣಿ ಗ್ರಂಥಕ್ಕೆ ಅಲ್ಲಿಯವರೆಗೆ ಇದ್ದ ಎಲ್ಲ ವ್ಯಾಖ್ಯಾನಗಳನ್ನು ಮೀರಿ ಹೆಸರುಗಳಿಸಿತು. ಈ ವ್ಯಾಖ್ಯಾನವನ್ನು ಜಯದೇವರು ಕೇವಲ 15 ದಿನಗಳಲ್ಲಿ (ಒಂದು ಪಕ್ಷ) ರಚಿಸಿದರಂತೆ. ಕೇವಲ ಒಂದೇ ಪಕ್ಷದಲ್ಲಿ ಇದನ್ನು ರಚಿಸಿದ್ದಕ್ಕೆ ಪಕ್ಷಧರ ಎಂಬ ಬಿರುದು ಸಂದಿತು.
  3. ಒಮ್ಮೆ ಬಹು ದೊಡ್ಡ ವಾಕ್ಯಾರ್ಥವು ನಡೆಯಿತು. ಇದರಲ್ಲಿ ಪ್ರತಿಪಕ್ಷದವರನ್ನು 15 ದಿನಗಳ ಕಾಲ ವಾದದಲ್ಲಿ ಹಿಡಿದು ಇಟ್ಟುಕೊಂಡಿದ್ದರಂತೆ. ಒಂದು ಪಕ್ಷ ಕಾಲ ವಾಕ್ಯಾರ್ಥ ಮಾಡಿದ್ದರಿಂದಲೂ ಪಕ್ಷಧರ ಎಂಬ ಬಿರುದು ಬಂದಿತು.
  4. ಯಾವ ಪಕ್ಷದಲ್ಲೇ ನಿಂತರೂ ವಾದವನ್ನು ಹಿಡಿದಿಟ್ಟು ಜಯಿಸುವ ಅಪ್ರತಿಮ ಸಾಮರ್ಥ್ಯ ಅವರಲ್ಲಿತ್ತು. ಹೀಗೆ ಯಾವ ವಾದದ ಪಕ್ಷದಲ್ಲೂ ಸೋಲ ಒಪ್ಪಿಕೊಳ್ಳದೆ ‘ಪಕ್ಷವನ್ನು ಕಾಯ್ದುಕೊಳ್ಳುವ ಸಾಮರ್ಥ್ಯ’ ಇದ್ದುದರಿಂದ ಅವರಿಗೆ ‘ಪಕ್ಷಧರ’ ಎಂಬ ಅನ್ವರ್ಥನಾಮ ಬಂದಿತು. ಒಟ್ಟಿನಲ್ಲಿ ಜಯದೇವ ಮಿಶ್ರರು ಜಗತ್ತಿಗೆ ಪಕ್ಷಧರ ಮಿಶ್ರರೆ ಆಗಿ ಹೋದರು.

ಬಿರುದಿಗೆ ಕಾರಣ ಏನೇ ಇರಲಿ. ಜಯದೇವರ ವಿದ್ವತ್ತು ಮೇಲ್ಮಟ್ಟದ್ದು ಎನ್ನುವುದರಲ್ಲಿ ಸಂದೇಹವಿಲ್ಲ. ಅವರು ಪಕ್ಷಧರರೇ ಹೌದು.

ಮಿಥಿಲೆಯ ಕಲಿಕಾ ಪದ್ಧತಿ ಹಾಗು ಪರೀಕ್ಷಾ ಪದ್ಧತಿಗಳೆರಡೂ ಬಹು ಕಠಿಣವಾಗಿದ್ದವು.

ಮಿಥಿಲೆಯಲ್ಲಿ ನ್ಯಾಯಶಾಸ್ತ್ರವನ್ನು ಕಲಿಯ ಬಯಸುವ ಯಾರೇ ಆಗಲಿ, ತತ್ವಚಿಂತಾಮಣಿ ಅಲೋಕವನ್ನು ಓದುವುದು ಕಡ್ಡಾಯವಾಗಿತ್ತು. ಆದರೆ ಮೂಲ ಗ್ರಂಥಗಳನ್ನು ಅಥವಾ ಟಿಪ್ಪಣಿಗಳನ್ನು ಘಟಿಕಾ ಸ್ಥಾನದ ಹೊರಗೆ ಹೊರಗೆ ಒಯ್ಯದಂತೆ ಕಟ್ಟುನಿಟ್ಟಿನ ನಿಯಮ ಮಾಡಿದ್ದರು. ವಿಷಯವನ್ನು ನೆನಪಿನಲ್ಲಿ ಮಾತ್ರ ಇಟ್ಟುಕೊಳ್ಳಬೇಕಿತ್ತು ಅಷ್ಟೇ. ಇದು ಜ್ಞಾನದ ರಹಸ್ಯ ರಕ್ಷಣೆಗಾಗಿಯೇ ಹೊರತು ಪೇಟೆಂಟ್ ರೀತಿಯ ರಕ್ಷಣೆಯಲ್ಲ.
ಅಂತಿಮ ಪರೀಕ್ಷೆಯಂತೂ ವಿಶಿಷ್ಟವೂ ಕ್ಲಿಷ್ಟವೂ ಆದುದು. ಶಲಾಕ ಪರೀಕ್ಷೆ ಎಂದು ಅದರ ಹೆಸರು.

ಕೋರ್ಸು ಮುಗಿಸಿದ ವಿದ್ಯಾರ್ಥಿಯ ಎದುರು ನ್ಯಾಯಶಾಸ್ತ್ರದ ಎಲ್ಲ ತಾಳಪಾತ್ರಗಳನ್ನು ಒಂದರ ಮೇಲೆ ಒಂದನ್ನು ಇಟ್ಟು, ಒಂದು ಬೆಳ್ಳಿಯದೋ ತಾಮ್ರದ್ದೋ ಸೂಜಿಯಿಂದ ಗ್ರಂಥದ ಪತ್ರಗಳ ಮಧ್ಯ ಚುಚ್ಚಬೇಕು. Random ಆಗಿ ಅದು ಎಲ್ಲಿಗೆ ಚುಚ್ಚಿರುತ್ತದೋ ವಿದ್ಯಾರ್ಥಿಯು / ಅನುವಾದಕನು ಆ ಸಾಲು, ಪದದಿಂದ ಶಸ್ತ್ರಾರ್ಥವನ್ನು ಪ್ರಾರಂಭಿಸಬೇಕು. ಇದರಲ್ಲಿ ತೇರ್ಗಡೆಯಾದವರಿಗೆ ಮಾತ್ರ ಪದವಿಯನ್ನು ನೀಡಲಾಗುತ್ತಿತ್ತು.
ಭಾಗೀರಥಿಯ ದಂಡೆಯ ನವದ್ವೀಪದಿಂದ ವಾಸುದೇವ ಭಟ್ಟಾಚಾರ್ಯನೆಂಬ ಒಬ್ಬ ಮೇಧಾವಿಯೂ ಪಕ್ಷಧರರಲ್ಲಿ ಬಂದು ಅಧ್ಯಯನ ಮಾಡಿ ಶಲಾಕ ಪರೀಕ್ಷೆಯಲ್ಲಿ ಗೆದ್ದ. ಈತ ಬಾಲಮೇಧಾವಿಯು. ತಂದೆಯಾದ ನರಹರಿ ವಿಶಾರದರಲ್ಲಿಯೇ ಶಾಸ್ತ್ರವನ್ನು ಓದಿ ಬಲ್ಲವ. ಈಗ ನವೀನನ್ಯಾಯವನ್ನು ಸಹ ಜೀರ್ಣಿಸಿಕೊಂಡ. ಕೇವಲ ನ್ಯಾಯ ಮಾತ್ರವಲ್ಲ, ಇನ್ನಿತರ ಶಾಸ್ತ್ರಗಳಲ್ಲೂ ಇವನು ಅಪ್ರತಿಮನಾಗಿ ಗುರುಗಳಿಂದ ಸಾರ್ವಭೌಮ ಎಂಬ ಬಿರುದನ್ನೂ ಪಡೆದ. ವಾಸುದೇವ ಸಾರ್ವಭೌಮನಾದ.

ಮೇಧಾವಿಯಾದರೆ ಏನಾಯ್ತು? ನಿಯಮಾವಳಿಯಲ್ಲಿ ಏನು ರಾಜಿ ಇದ್ದಿಲ್ಲ. ನವೀನ ನ್ಯಾಯದ ಗ್ರಂಥಗಳನ್ನು ಪ್ರತಿ ಮಾಡಿಕೊಂಡು ಹೊರಗೆ ಒಯ್ಯುವಂತಿಲ್ಲ ಎಂಬ ನಿಯಮ ಇವನಿಗೂ ಅನ್ವಯವಾಗಿತ್ತು. ಕಾಗದದ ಮೇಲೆ ಬರೆದು ಒಯ್ಯುವಂತಿಲ್ಲ ಆದರೆ ಮೆದುಳಿನಲ್ಲಿ ಬರೆದುಕೊಳ್ಳಲು ಅವಕಾಶವಿತ್ತಲ್ಲ. ಅದನ್ನೇ ಬಳಸಿಕೊಂಡ ಈತ. ತತ್ವಚಿಂತಾಮಣಿಯನ್ನೂ ಅಲೋಕವನ್ನೂ ಅಕ್ಷರಶಃ ಎದೆಗೂಡಿನಲ್ಲಿಯೇ ತುಂಬಿಕೊಂಡು ನವದ್ವೀಪಕ್ಕೆ ಹಿಂದಿರುಗಿದ. ಮುಂದೆ ನವದ್ವೀಪದಲ್ಲಿಯೇ ಹೊಸ ವಿದ್ಯಾಪೀಠವನ್ನು ಕಟ್ಟಿ ಜ್ಞಾನವನ್ನು ಹರಿಸತೊಡಗಿದ. ಮಿಥಿಲೆಯಲ್ಲಿದ್ದ ವಿಶ್ವವಿದ್ಯಾಲಯವು ನವದ್ವೀಪಕ್ಕೆ ಸ್ಥಲಾಂತರಗೊಂಡುಬಿಟ್ಟಿತು.

ದೊಡ್ಡ ದೊಡ್ಡ ದಿಗ್ಗಜರೆ ವಾಸುದೇವ ಸಾರ್ವಭೌಮರಲ್ಲಿ ಶಾಸ್ತ್ರವನ್ನು ಓದಿದ್ದಾರೆ. ಶ್ರೀಕೃಷ್ಣ ಚೈತನ್ಯ ಪ್ರಭುಗಳು ಸಹ ಪೂರ್ವಾಶ್ರಮದಲ್ಲಿ ಶ್ರೀವಾಸುದೇವ ಸಾರ್ವಭೌಮರ ವಿದ್ಯಾಶಿಷ್ಯರು. ರಘುನಾಥ ಶಿರೋಮಣಿ, ರಘುನಂದನ ಭಟ್ಟಾಚಾರ್ಯ, ಕೃಷ್ಣಾನಂದ ಆಗಮವಾಗಿಶ ಎಂಬ ದೊಡ್ಡ ದೊಡ್ಡವರೆಲ್ಲರೂ ಶ್ರೀವಾಸುದೇವ ಸಾರ್ವಭೌಮರ ಗರಡಿಯ ಪಟುಗಳೇ.

ರಘುನಾಥ ಶಿರೋಮಣಿಗಳು ಬಾಲ್ಯದಲ್ಲೇ ಒಂದು ಕಣ್ಣಿನ ನೋಟವನ್ನು ಕಳೆದುಕೊಂಡಿದ್ದರು. ಆದರೆ ಇದು ಅವರ ಕಲಿಕೆಗೆ ಓದಿನಗ್ರಹಣಕ್ಕೆ ಏನು ಅಡ್ಡಿಯಾಗಿದ್ದಿಲ್ಲ. ಇವರು ಸಹ ತತ್ವಚಿಂತಾಮಣಿಗೆ ವ್ಯಾಖ್ಯಾನವನ್ನು ರಚಿಸಿದ್ದಾರೆ. ಬಹು ಪ್ರಸಿದ್ಧವಾದುದು ಇದು. ದೀಧಿತಿ ಎಂಬುದು ಈ ವ್ಯಾಖ್ಯಾನದ ಹೆಸರು. ಗುರುಗಳಲ್ಲಿ ವಾದವನ್ನು ನಡೆಸಿ, ಅವರಿಂದ ಶಿರೋಮಣಿ ಎಂಬ ಬಿರುದು ಪಡೆದವರು.

ವಾಸುದೇವ ಸಾರ್ವಭೌಮರ ಇನ್ನೊಬ್ಬ ಶಿಷ್ಯರು ಕೃಷ್ಣಾನಂದರು. ಆಗಮದಲ್ಲಿ ಸಿದ್ಧಹಸ್ತರು. ಇಂದು ಬಂಗಾಳದಲ್ಲಿ ಏನು ದಕ್ಷಿಣಕಾಳಿಯ ಆರಾಧನೆಯ ಕ್ರಮವನ್ನು ನೋಡುತ್ತೇವೆ, ಅದನ್ನು ವ್ಯವಸ್ಥಿತಗೊಳಿಸಿಕೊಟ್ಟದ್ದು ಇವರೇನೇ. ದೀಪಾವಳಿಯ ಸಂದರ್ಭದಲ್ಲಿ ಸಂಜೆ ನಡೆಸುವ ಕಾಳಿ ಪೂಜೆಗೆ ಶ್ಯಾಮಾಪೂಜೆ ಎಂದು ಹೆಸರು. ಅದನ್ನು ಸಹ ಪದ್ಧತಿ ಹಾಕಿಕೊಟ್ಟು, ಸಾರ್ವತ್ರಿಕಗೊಳಿಸಿದ್ದು ಇವರೇನೇ. ಆಗಮ ಶಾಸ್ತ್ರದಲ್ಲಿ ಇವರಿಗಿದ್ದ ಗತಿಯನ್ನು ನೋಡಿಇವರಿಗೆ ಆಗಮವಾಗಿಶರೆಂಬ ಬಿರುದನ್ನೂ ನೀಡಲಾಗಿತ್ತು.

ರಘುನಂದನ ಭಟ್ಟಾಚಾರ್ಯರಿಗೆ ಸ್ಮಾರ್ತ ಭಟ್ಟಾಚಾರ್ಯ ಎಂದೇ ಹೆಸರಿತ್ತು. ಸ್ಮೃತಿಗಳನ್ನು ಕ್ರೋಢೀಕರಿಸಿ, ಬಂಗಾಳದ ಸಾಮಾಜಿಕ, ಧಾರ್ಮಿಕ ಮತ್ತು ಕಾನೂನು ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಘುನಂದನರಿಗಿಂತ ಮೊದಲು ಬಂಗಾಳದಲ್ಲಿ ‘ಜೀಮೂತವಾಹನನ ದಾಯಭಾಗ’ ಪರಂಪರೆಯು ಪ್ರ ಚಲಿತದಲ್ಲಿತ್ತು. ರಘುನಂದನರು ನವ್ಯನ್ಯಾಯದ ವಿಶ್ಲೇಷಣಾತ್ಮಕ ಶೈಲಿಯನ್ನು ಬಳಸಿ ಧರ್ಮಶಾಸ್ತ್ರದ ನಿಯಮಗಳನ್ನು ಮರುಸಂಘಟಿಸಿದರು.ಬಂಗಾಳದ ಹಿಂದೂ ಸಮಾಜದಲ್ಲಿ ಪೂಜೆ, ಪುರಸ್ಕಾರ, ವಿವಾಹ, ಶ್ರಾದ್ಧ, ಸೂತಕ ನಿಯಮಗಳು ಮತ್ತು ಹಬ್ಬಗಳನ್ನು ಆಚರಿಸುವ ವಿಧಾನಕ್ಕೆ ಇವರು ನೀಡಿದ ತೀರ್ಪುಗಳೇ ಅಂತಿಮ ಪ್ರಾಮಾಣಿಕ ಪ್ರಮಾಣಗಳಾದವು.

ಈ ಪರಂಪರೆ ಇನ್ನು ದೊಡ್ಡದು. ಇಂತಹ ಮಹಾನ್ ದಿಗ್ಗಜರ ಪರಮ ಗುರುವಾದ ಪಕ್ಷಧರ ಮಿಶ್ರರ ಪಕ್ಷವನ್ನೇ ನಿರುತ್ತರವನ್ನಾಗಿ ಮಾಡಿದ ಶಲಾಕೆಯು ಒಂದು ದಕ್ಷಿಣಭಾರತದಿಂದ ಹೊರಟಿತು. ಅದೇನೆಂದು ಮುಂದಿನ ಲೇಖನದಲ್ಲಿ ನೋಡುವ. ಆ ಶಲಾಕೆಯು ಮಿಥಿಲಾ ಮತ್ತು ನವದ್ವೀಪದ ಜಾಣರ ಗುಂಪನ್ನೇ ಬೆರಗುಗೊಳಿಸಿ ಮಂದಹಾಸವನ್ನು ಬೀರಿತು. ಮುಂದಿನ ಭಾಗದಲ್ಲಿ ನೋಡೋಣ.

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.