ಇದನ್ನು ನೋಡಿ. ಇದುವರೆಗೆ ನೀವು ನೋಡಿರದ ಯಾವುದೋ ಒಂದು ಹುಳವಿದ್ದೀತು ಎಂದುಕೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಆದರೆ ಇದು ಹುಳವಲ್ಲ. ನೋಡಲಷ್ಟೇ ಅಂಜಿಕೆ ಹುಟ್ಟಿಸುವಂತೆ ಇದೆ. ಆದರೆ ವಾಸ್ತವದಲ್ಲಿ ಇದು ಮುಗುಳ್ನಗುವನ್ನು ಅರಳಿಸುವ ಗಿಡವೊಂದರ ಬೇರುಗಡ್ಡೆಯು. ನಯ್ದಿಲೆಯ ಗಡ್ಡೆಯಿದು.
ಚೂರು ಅಪರೂಪವೆನಿಸುವ ವ್ಯಾನ್ವಿಸಾ ಎನ್ನುವ ತಳಿಯ ಮಗಳು ಇದು ಈ ಚಿತ್ರದಲ್ಲಿರುವುದು. ತಾವರೆ ಮತ್ತು ನೈದಿಲೆಗಳಿಗೆ ಪರಮಪ್ರಿಯವಾದ ಗೌಡದೇಶದಿಂದ ತರಿಸಿಕೊಂಡಿದ್ದೇನೆ.
ಗೌಡದೇಶವೆಂದರೆ ಇಂದಿನ ಬಂಗಾಲವು. ಅದರಲ್ಲೂ ಇದು ಹುಟ್ಟಿ ಇಲ್ಲಿಯತನಕ ಹೂವನ್ನು ಅರಳಿಸಿದ್ದು ನವದ್ವೀಪ ಎನ್ನುವ ಜಾಣರ ಊರಿನಲ್ಲಿ. ಅಲ್ಲಿನಿಂದಲೇ ತರಿಸಿಕೊಂಡಿದ್ದೇನೆ. ಗೌಡ ಎಂದರೇನೇ ಸಿಹಿ ಎಂಬರ್ಥವಿದೆ. ಇಂತಹ ಸಿಹಿನಾಡಿನ ಈ ನವದ್ವೀಪವೆಂದರೆ ನನಗೆ ಚೂರು ಸೆಂಟಿಮೆಂಟು ಹೆಚ್ಚು. ಯಾಕೆಂದು ಲೇಖನದ ಕೊನೆಗೆ ತಿಳಿಯುವುದು.
ಭಾಗೀರಥಿ ನದಿಯ ಸುಪರ್ ಫರ್ಟೈಲ್ ದಂಡೆಯ ಮೇಲೆ ಇದೆ ಈ ನವದ್ವೀಪ. ಬಹಳ ದೊಡ್ಡದಾದ ನದಿಯಿದು ಭಾಗೀರಥಿ. ಎಷ್ಟು ದೊಡ್ಡದೆಂದರೆ ಒಂದಾನೊಂದು ಕಾಲದಲ್ಲಿ ಈ ನದಿಯ ನಡುವೆ ಜನವಸತಿಸಹಿತವಾದ ಒಂಬತ್ತು ದ್ವೀಪಗಳೇ ಇದ್ದವು. ಈಗ ನದಿಯ ವಿಸ್ತಾರವನ್ನು ಲೆಕ್ಕ ಹಾಕಿ.
ಈ ಎಲ್ಲ ದ್ವೀಪಗಳಲ್ಲಿ ಇದ್ದವರು ಮಹಾ ಮಹಾ ಮೇಧಾವಿಗಳೆನಿಸಿದ ವಿದ್ವಾಂಸರು. ಎಲ್ಲೆಡೆ ವಿದ್ಯಾಪೀಠಗಳೇ, ಎಲ್ಲೆಲ್ಲೂ ನೈಯಾಯಿಕರೇ ನಡೆದಾಡುತ್ತಿದ್ದುದು. ವಾಸುದೇವ ಸಾರ್ವಭೌಮರೆಂಬ ದೈವಿಕ ಪ್ರತಿಭೆ, ರಘುನಾಥ ಶಿರೋಮಣಿ ಎನ್ನುವ ಮೇಧಾವಿ,ತರ್ಕಶಾಸ್ತ್ರಕ್ಕೇ ಅಲಂಕಾರರೆನಿಸಿದ ಜಗದೀಶ ತರ್ಕಾಲಂಕಾರರು, ನ್ಯಾಯಶಾಸ್ತ್ರ ವಿಶಾರದ ಗಂಗೇಶೋಪಾಧ್ಯಾಯರು, ಮಥುರಾನಾಥ ತರ್ಕವಾಗೀಶರು, ಧರ್ಮಶಾಸ್ತ್ರಕ್ಕೆ ಕರದೀಪದಂತಿದ್ದ ರಘುನಂದನ ಭಟ್ಟಾಚಾರ್ಯರು ಹೀಗೆ ಒಬ್ಬರೇ ಇಬ್ಬರೇ! ನ್ಯಾಯಶಾಸ್ತ್ರದ ದೊಡ್ಡಾನೆಗಳೆಲ್ಲವೂ ಒಂದಲ್ಲ ಒಂದು ರೀತಿ ನವದ್ವೀಪ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಓಡಾಡಿಕೊಂಡಿದ್ದವುಗಳೇ.
ಈ ವಿದ್ಯೆಯು ಇಲ್ಲಿಗೆ ಹರಿದು ಬಂದ ಮೂಲ ಸೆಲೆ ಮಿಥಿಲಾದೇಶ. ಅದು ಅತ್ಯಂತ ಪ್ರಾಚೀನ ಘಟಿಕಾಸ್ಥಾನ. ವಾಸುದೇವ ಸಾರ್ವಭೌಮರು ಅಲ್ಲಿದ್ದ ಪಕ್ಷಧರಮಿಶ್ರರ ಬಳಿ ಸಂಪೂರ್ಣ ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿ, ಅದನ್ನೆಲ್ಲಾ ಬಾಯಿಪಾಠದಿಂದಲೆ ತಮ್ಮ ಎದೆಗಿಳಿಸಿಕೊಂಡು ಘಟಿಕಾಸ್ಥಾನವನ್ನೇ ಮಿಥಿಲೆಯಿಂದ ನವದ್ವೀಪಕ್ಕೆಸ್ಥಾನಾಂತರ ಮಾಡಿಬಿಟ್ಟರು.
ನವದ್ವೀಪದ ವಿದ್ವಾಂಸರನ್ನು ಸೋಲಿಸಿದ ಮೇಲೆಯೇ ಪಂಡಿತನೆನಿಸಿಕೊಳ್ಳಲು ಅರ್ಹನು ಎನ್ನುವಷ್ಟರ ಮಟ್ಟಿಗೆ ಇತ್ತು ಇಲ್ಲಿನ ವಿದ್ವನ್ಮಂಡಳಿ. ಯಾರೇ ವಾಕ್ಯಾರ್ಥಕ್ಕೆ ಬಂದರೂ ಅವರನ್ನು ಸೋಲಿಸುತ್ತಿದ್ದರು.
ಇಂತಹ ಮಹಾಮಹೋಪಾಧ್ಯಾಯರನ್ನೂ ಮೂಕವಿಸ್ಮಿತರನ್ನಾಗಿ ಮಾಡಲು ದಕ್ಷಿಣದಿಂದ ಒಂದು ನಿಜಬೆಳಕಿನ ಶಲಾಕೆಯು ಹೊರಹೊಮ್ಮಿತು. ಯಾವುದದು ಶಲಾಕೆ ಎಂಬುದನ್ನು ಮುಂದಿನ ಲೇಖನದಲ್ಲಿ ನೋಡುವಾ
Be First to Comment