ಲಾಲಿಪಾವನ ಚರಣ

ನಿನ್ನೆ ನನಗೆ ದೊರಕ್ಕಿದ್ದು ಒಂದು ಅಪೂರ್ವ ಅವಕಾಶ.
 
ನಾನು ಪ್ರತಿನಿತ್ಯ ಮಠದ ಹಿಂಬಾಲಿಗಿಂದ ಮನೆಗೆ ವಾಪಸ್ಸು ಹೋಗುವವನು. ಆದರೆ ನಿನ್ನೆ ಮುಂಬಾಗಿಲಿನಿಂದಲೇ ಹೊರಟೆ! ಮಧ್ವಸರೋವರದ ಕಡೆ ಇಳಿಯುವವನಿದ್ದೆ, ಅಷ್ಟರಲ್ಲಿ “ಬಾರಲೇ ಇಲ್ಲಿ” ಎಂದು ಕೃಷ್ಣಯ್ಯನು ನನ್ನನ್ನು ಒಳಗೆ ಎಳೆದ. “ತನ್ನನ್ನು ನೋಡಲು ಕರೆಯುತ್ತಾನೆ ಕರಿಯ ಚೆಲುವ!” ಎಂದುಕೊಂಡು ಒಳಹೋದೆ. ಆದರೆ ಅವನು ತನ್ನನ್ನು ನೋಡಲು ಅಲ್ಲ ಕರೆದದ್ದು! “ನನ್ನ ಭಕ್ತನನ್ನು ನೋಡು ಬಾ” ಎಂದು ಕರೆದಿದ್ದ. ಒಳ ಹೋದರೆ ಅಷ್ಟೇ! ನನ್ನ ಹೊರಗಿವಿಗಳು ತಮ್ಮ ಕೆಲಸ ನಿಲ್ಲಿಸಿ ಕೇಳುವ ಕೆಲಸವನ್ನು ಹೃದಯಕ್ಕೆ ಒಪ್ಪಿಸಿಬಿಟ್ಟವು!
 
ಕೃಷ್ಣಯ್ಯನ ಮುಂದೆ ಮಧುರವಾಗಿ “ನಾರಾಯಣನ ನೆನೆ” ಹಾಡು ಕೇಳಿ ಬರುತ್ತಿತ್ತು, ಟಪ್ ಟಪ್ ಎಂಬ ಚಿಟಿಕೆಯೊಡನೆ. ಹಾಡುತ್ತಿದ್ದವರು ಉಡುಪಿಯಲ್ಲಿ ಖ್ಯಾತರಾದ ಗುರುಪ್ರಸಾದ ಭಟ್! ಯಾನೇ ಸಜ್ಜನ ಗುರಣ್ಣ! ಅವರ ಹೃದಯದಿಂದ ಹೊಮ್ಮುತ್ತಿದ್ದ ದೇವರನಾಮವು ಬೇರೆಲ್ಲವನ್ನೂ ಮರೆಸುವ ಮಾಧುರ್ಯವನ್ನು ಹೊಂದಿತ್ತು. ನಾನು ಹೋದಾಗ ಆ ಹಾಡು ಕೊನೆಯ ಭಾಗಕ್ಕೆ ಬಂದಿತ್ತು. ಚೂರು ಬೇಸರವಾಯಿತು ಮುಗಿದೇ ಹೋಯಿತಲ್ಲ ಎಂದು. ಆದರೆ, ಬೇಸರವು ಕ್ಷಣದಲ್ಲಿ ಮಾಯವಾಯಿತು! ಯಾಕೆಂದರೆ, ಪಾವನಚರಣನು ಲಾಲಿಯನ್ನು ಕೇಳುವ ಬಯಕೆಯನ್ನು ಹೊಂದಿದ್ದ! ತನ್ನ ಲಾಲಿಯನ್ನು ಕೇಳಿಸುವ ಮೂಲ ನನ್ನ ಅಘಹರಣವನ್ನು ಮಾಡುವ ವೇಂಕಟರಮಣನಾಗುವ ಇಚ್ಛೆಯುಳ್ಳವನಾಗಿದ್ದ!
 
ಬೇರೆ ಯಾರಿಗೆ ಏನೆನಿಸಿತೋ ಏನೋ ಗೊತ್ತಿಲ್ಲ. ನನ್ನ ಮಟ್ಟಿಗಂತೂ ಬಹಳ ಸಂತಸದ ಕ್ಷಣ. ಸಂತಸವನ್ನು ಎಲ್ಲರೊಂದಿಗೂ ಹಂಚಬೇಕಲ್ಲವೇ? ಅದಕ್ಕಾಗಿ ಹಾಡನ್ನು ನನ್ನ ಮತಿಗೆ ತಿಳಿದ ಹಾಗೆ ರಿಕಾರ್ಡು ಮಾಡಿಕೊಂಡಿದ್ದೇನೆ. ವಾಸ್ತವವಾಗಿ ಶ್ರೀಕೃಷ್ಣಮಠದಲ್ಲಿ ಮೊಬೈಲ್ ಫೋನ್ ಬಳಕೆ ನಿಷಿದ್ಧ. ಈ ನಿಯಮವನ್ನು ಮುರಿದಿದ್ದಕ್ಕಾಗಿ ನಾನು ಶ್ರೀಶ್ರೀಪಾದರಲ್ಲಿ ಮನಸಾ ಕ್ಷಮೆಯನ್ನು ಕೇಳುತ್ತೇನೆ. ಇದು ನನ್ನ ವ್ಯಕ್ತಿಗತ ಲಾಭಕ್ಕಾಗಿ ಮಾಡಿರುವುದಲ್ಲ.
 
ಗುರಣ್ಣ ಅವರು ಶ್ರೀಗುರುಗಳ, ಮುಖ್ಯಪ್ರಾಣರ ಮತ್ತು ಶ್ರೀಕೃಷ್ಣದೇವರ ಕೃಪೆಗೆ ಪಾತ್ರರಾದವರು. ಸಾಕಷ್ಟು ಸಂಪತ್ತನ್ನೂ ಮತ್ತು ಮನಸಾರೆಯಾಗಿ ಆ ಸಂಪತ್ತನ್ನು ದಾನ ಮಾಡುವ ಉದಾರ ಹೃದಯವನ್ನೂ ಅವರಿಗೆ ದಯಪಾಲಿಸಿದ್ದಾರೆ ಹರಿವಾಯುಗುರುಗಳು. ಆದರೂ ಚೂರೂ ಅಹಂಕಾರವನ್ನು ಬೆಳೆಸಿಕೊಳ್ಳದೆ ಎಲ್ಲರೊಂದಿಗೂ ಅಣ್ಣ ಅಣ್ಣ ಎಂದೇ ಮಾತನಾಡಿಸುವ ಸಜ್ಜನ ಇವರು. ಇಂತಹ ಸೌಜನ್ಯ ಇರುವುದರಿಂದಲೇ ಏನೋ ಇವರ ಹಾಡು ಬಾಯಿಯಿಂದ ಬರದೆ, ಹೃದಯದಿಂದ ಹೊರಬರುತ್ತದೆ.
 
ಇಂತಹವರ ಸಂತತಿ ಸಾವಿರವಾಗಲಿ.
ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

2 Comments

  1. PR
    May 6, 2025
    Reply

    sir – please share recording of guranna

    • ರಘು
      May 7, 2025
      Reply

      I have updated the article with the recording.

      thank you

Leave a Reply to PRCancel reply

This site uses Akismet to reduce spam. Learn how your comment data is processed.