ರಾಜೀವ ಮತ್ತು ಕೋಮಲೆ ಮೊದಲಿನಿಂದಲೂ ಒಟ್ಟಿಗೇ ಏನೂ ಇರಲಿಲ್ಲ. ಕಾಲೇಜಿನಲ್ಲೂ ಸಹ ಒಟ್ಟಿಗೆ ಓದಿರಲಿಲ್ಲ. ಒಂದೇ ಕಾಲೇಜು ಇರಲಿ ಒಂದೇ ಊರಿನವರು ಕೂಡ ಅಲ್ಲ. ಹಾಗಂತ ಅವರಿಬ್ಬರ ಮಧ್ಯ ಸ್ನೇಹ ಮೂಡಿ, ಪ್ರೇಮವಾಗಿದ್ದು ಅವರಿಬ್ಬರೂ ಟೀನ್ ಏಜ್ ಅನ್ನುವ ವಯಸ್ಸಿನಲ್ಲೂ ಅಲ್ಲ. ಇಬ್ಬರೂ ಸಾಕಷ್ಟು ಪ್ರೌಢರಾದ ಮೇಲೆಯೇ ಅವರಿಬ್ಬರ ಮಧ್ಯ ಪ್ರೇಮ ಅಂಕುರಿಸಿತು. ಆಷ್ಟು ಹೊತ್ತಿಗೆ ಇಬ್ಬರ ತಲೆಯ ಮೇಲೂ ಬಿಳಿಕೂದಲಿನ ದರ್ಶನ ಪ್ರಾರಂಭ ಆಗಿ ಬಹುಕಾಲ ಕಳೆದಿತ್ತು. ರಾಜೀವ ಲೆಕ್ಚರರು. ಕೋಮಲೆ ದೊಡ್ಡ ಖಾಸಗಿ ಕಂಪನಿಯಲ್ಲಿ ಆಡಿಟರು. ಇಬ್ಬರೂ ತಮ್ಮ ವೃತ್ತಿಯನ್ನು ಗೌರವಿಸುವವರು. ಕೈತುಂಬ ನೆಮ್ಮದಿಯನ್ನು ಇಟ್ಟುಕೊಂಡವರು. ಈಗಲೂ ಅವರಿಬ್ಬರು ಇರುವುದು ದೇಶದ ಈಶಾನ್ಯ ಹಾಗು ದಕ್ಷಿಣದ ತುದಿಗಳಲ್ಲಿ. ಅಂತೂ ಪ್ರೇಮ ಹೇಗೆ ಆಯಿತೋ ಅವರಿಬ್ಬರಿಗೇ ಗೊತ್ತು
ಯಾಕೋ ಏನೋ ಗೊತ್ತಿಲ್ಲ ಇಬ್ಬರ ಭೇಟಿ ಮಾತ್ರ ತುಂಬ ಅಪರೂಪ ಅನ್ನುವಷ್ಟು ಕಡಿಮೆ ಇತ್ತು. ಆದರೆ ಫೋನಿನಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಮಾತಿಗೆ ಅವಕಾಶವೊದಗಿತ್ತು. ಮಾತು ಕೂಡ ತುಂಬಾ ಪ್ರೌಢ. ಅಸಭ್ಯತೆಗೆ ಯಾವತ್ತೂ ಇಬ್ಬರೂ ಅವಕಾಶ ಕೊಟ್ಟಿರಲಿಲ್ಲ. ರಾತ್ರಿಯಿಡೀ ಮಾತನಾಡಿದರೂ ಸ್ನೇಹದ ಎಲ್ಲೆ ಮೀರದ ಮಾತುಕತೆ ಅದು. ಅಂಥಾದ್ದೇನು ಮಾತು ಇತ್ತು ಅವರಿಬ್ಬರ ಮಧ್ಯ ಎನ್ನುವುದು ಅವರಿಗೇ ಗೊತ್ತು.
ಅಂತೂ ಈ ವೈ ಫೈ ಪ್ರೀತಿ ಸುಮಾರು ಎರಡು ವರ್ಷ ನಡೆಯಿತು. ಮಧ್ಯದಲ್ಲಿ ಆಗೀಗ ಒಮ್ಮೆ ರಾಜೀವನ ಮನೆಗೆ ಬಂದು ಹೋದಳು ಕೋಮಲೆ. ಒಮ್ಮೆ ವಿರಸವಿಲ್ಲದೆ ಹೋದರೂ ದೂರವಿರುವ ಪ್ರಸಂಗ ಬಂತು ಇಬ್ಬರಿಗೂ. ಮನೆ ಬಿಟ್ಟು ಹೊರನಡೆದಳು ಮಾನಸಿಕ ಅರ್ಧಾಂಗಿ. ಮಾನಸಿಕರಾಯನಾದ ರಾಜೀವನಿಗೆ ಇದು ಇಷ್ಟವಿಲ್ಲ. ಆದರೆ “ಮನದನ್ನೆಯೇ ಆದರೂ ಬಲವಂತ ಮಾಡುವ ಅಧಿಕಾರ ನನಗಿಲ್ಲ” ಎಂದುಕೊಂಡು ಸುಮ್ಮನಾದ. ಮನೆಯ ಬಾಗಿಲನ್ನು ಮಾತ್ರ ಅವಳಿಗಾಗಿ ತೆರೆದೇ ಇಟ್ಟ. ಅವಳಿಗೆ ಯಾವತ್ತಾದರೂ ಮನೆಗೆ ಬರುವ ಮನಸ್ಸಾದಾಗ ಬಾಗಿಲು ಬಡಿಯುವ ಅಗತ್ಯವಿಲ್ಲದೆ ನೇರವಾಗಿ ಒಳಗೆ ಬರಲಿ ಎಂಬ ಆಸೆಯಿಂದ. ಅದೂ ಅಲ್ಲದೆ ಮನೆಯ ಬೀಗದ ಇನ್ನೊಂದು ಕೀ ಅವಳ ಹತ್ತಿರವೇ ಇತ್ತು. ಹಾಗಾಗಿ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಕೋಮಲವಾದ ಆಸೆ ಇಟ್ಟುಕೊಂಡೇ ಇದ್ದ ರಾಜೀವ. ಏನಾಯಿತು ಇಬ್ಬರ ಮಧ್ಯ ಅನ್ನುವುದು ಅವರಿಗೇ ಗೊತ್ತು.
ವೈಫೈ ಕನೆಕ್ಟಿವಿಟಿ ಲಾಸ್ ಆಗಿದ್ದು ಸರಿ ಸುಮಾರು ೧ ವರ್ಷ! ಈ ಮಧ್ಯದಲ್ಲಿ ಯಾವಾಗಲೋ ಒಮ್ಮೆ ಉಲ್ಕಾದರ್ಶನದಂತಹ ಮೂರ್ನಾಲ್ಕು ಈ ಮೇಲುಗಳು ಹಾರಾಡಿದ್ದವು. ಅದರಲ್ಲಿಯೂ ಕೂಡ ಪ್ರೇಮವು ನೇರವಾಗಿ ಕಾಣಿಸದೇ, ಪರಸ್ಪರರ ಹಿಂದಿನಿಂದ ಕಾಣಿಸಿತ್ತು. ಈಗೋ ಇರಬಹುದೋ ಏನೊ. ಅಂತೂ ಇಬ್ಬರೂ ಪರಸ್ಪರರನ್ನು ಬೈದುಕೊಳ್ಳದೆ, ತಮ್ಮನ್ನು ತಾವೇ ಬೈದುಕೊಂಡದ್ದೇ ಹೆಚ್ಚು. “ನನ್ನಿಂದಾಗಿ ನಿಮ್ಮ ನೆಮ್ಮದಿ ಹಾಳು ಆಯಿತು, ದೂರ ಇಡಿ ನನ್ನನ್ನು” ಎಂದು. ಹಾಂ, ಇಬ್ಬರೂ ಪರಸ್ಪರರನ್ನು ಬಹುವಚನದಲ್ಲಿಯೇ ಸಂಬೋಧಿಸುವುದು! ಅಗ್ನಿಸಾಕ್ಷಿ ಧಾರಾವಾಹಿಯ ಹೀರೋ ಹೀರೋಯಿನ್ನುಗಳಂತೆ. ಆಮೇಲಾಮೇಲೆ ಆ ಈಮೇಲುಗಳ ಸಂಖ್ಯೆಯೂ ಹೆಚ್ಚು ಕಡಿಮೆ ನಿಂತೇ ಹೋಗಿತ್ತು. ಹೀಗೆ ಯಾಕೆ ಎನ್ನುವುದು ಅವರಿಗೇ ಗೊತ್ತು.
ಇದ್ದಕ್ಕಿದ್ದ ಹಾಗೆ ಒಮ್ಮೆ ರಾಜೀವನಿಗೆ ಕೋಮಲೆಯ ಮನೆಗೆ ಭೇಟಿ ನೀಡುವ ಅವಕಾಶವೊಂದು ಬಂದಿತು. ಬಂದಿತು ಅನ್ನುವುದಕ್ಕಿಂತ, ಮಾಡಿಕೊಂಡ ಅನ್ನುವುದು ನಿಜ. “ಬರ್ತಾ ಇದೀನಿ” ಅಂತ ಈಮೇಲ್ ಮಾಡಿದ್ದ. “ಸಂತೋಷವಾಯ್ತು, ನೀವು ಬರ್ತಿರೋದು ಕೇಳಿ. ಈಗ ನಾನು ಮನೆ ಬದಲಾಯಿಸಿದ್ದೀನಿ, ಇದು ಹೊಸ ವಿಳಾಸ” ಅಂತ ಗೂಗಲ್ ಲೊಕೇಶನ್ನಿನೊಂದಿಗೆ ರಿಪ್ಲೈ ಬಂತು. ಬರ್ತಿರೋದು ’ಕೇಳಿ’ ಅನ್ನುವ ಶಬ್ದ ಸರಿಯೋ ಅಥವಾ ಬರ್ತಿರೋದು ’ತಿಳಿದು’ ಅನ್ನುವ ಶಬ್ದ ಬಳಸಬೇಕಿತ್ತೋ ಅಥವಾ ನೀವು ಬರ್ತಾ ಇರೋದು ಸಂತೋಷ ಎಂದು ಆಕೆ ಹೇಳಬೇಕಿತ್ತೋ ಅನ್ನುವ ಕಿರಿಕಿರಿ ಮಾಡಿಕೊಳ್ಳುತ್ತಲೇ ಫೋನಿನಲ್ಲಿ ಲೊಕೇಶನ್ ಸೇವ್ ಮಾಡಿಕೊಂಡು ಅವಳ ಮನೆಗೆ ಹೋದ. ಮನೆ ಚೆನ್ನಾಗಿತ್ತು. ಆದರೂ ತನ್ನದಲ್ಲದ ಯಾವುದೋ ಚಿಕ್ಕ ವಿಷಯಕ್ಕೆ ಮನಸ್ಸಿನಲ್ಲಿಯೇ ಬೇಸರಮಾಡಿಕೊಂಡ. ಆಮೇಲೇ ಆಕೆ ಪಾನಕ ಮಾಡಿಕೊಟ್ಟಳು. ಈತ ಕುಡಿದ. ನಗುವನ್ನ ಧರಿಸಿಕೊಂಡು ಇಬ್ಬರೂ ಮಾತನಾಡಿದರು. ಸಂಭಾಷಣೆಯುದ್ದಕ್ಕೂ ಇಬ್ಬರೂ ನಗುತ್ತಲೇ ಇದ್ದರು. ಸಹಜವಾದ ನಗು ಅಲ್ಲ ಎನ್ನುವುದು ಇಬ್ಬರಿಗೂ ಗೊತ್ತಿತ್ತು.
ಹೊರಡುವ ಸಮಯ ಆಯಿತು. “ಮನೆಯ ಬಾಗಿಲು ತೆಗೆದೇ ಇತ್ತು, ಒಂದು ಸಲವಾದರೂ ಯಾಕೆ ಬರಲಿಲ್ಲ? ಇನ್ನೊಂದು ಬೀಗದಕೈ ನಿನ್ನ ಹತ್ತಿರವೂ ಇದೆಯಲ್ಲ. ಒಂದು ಸಲವಾದರೂ ಬರುವ ಮನಸ್ಸು ಯಾಕೆ ಮಾಡಲಿಲ್ಲ?” ಅನ್ನುವ ಒಂದು ಮಾತನ್ನು ಕೇಳಬೇಕು ಎಂದುಕೊಂಡ. ಆದರೆ ಕೇಳಲಿಲ್ಲ. ಒಲ್ಲದ ಮನಸ್ಸಿನಿಂದಲೇ ಹೊರಟು ಬಂದ.
ಕೋಮಲೆಯ ಬಳಿ ಮನೆಯ ಇನ್ನೊಂದು ಕೀ ಇತ್ತು ಎನ್ನುವ ಮಾತು ಇರಲಿ, ಮನೆ ಎಲ್ಲಿದೆ ಎನ್ನುವ ವಿಷಯ ಕೂಡ ಆಕೆಗೆ ಮರೆತು ಹೋಗಿತ್ತು ಎನ್ನುವ ಮಾತು ರಾಜೀವನಿಗೆ ಮಾತ್ರ ಗೊತ್ತು..
***
ಮೀನುಗಳ ಚಿತ್ರ : www.psychologytoday.com
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ …… !!!!!!!!! 🙂 🙂 🙂 🙂 ……………..
ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡ ಅಪರೂಪದ ಉಪಮಾ ವಾಕ್ಯ : :::
..ಅಗ್ನಿಸಾಕ್ಷಿ ಧಾರಾವಾಹಿಯ ಹೀರೋ ಹೀರೋಯಿನ್ನುಗಳಂತೆ. …..