ಪ್ರೇಮವೆಂಬಾ ಪಂದ್ಯದಲ್ಲಿ

(ಈಮೇಲಿನಲ್ಲಿ ಬಂದ ಎಳೆಗಥೆಯೊಂದರ ಎಳೆದ ಕಥೆಯಿದು)

“ನಾನು ಛೊಲೋ ಕಾಣಿಸ್ತೀನೇನು ನಿಂಗs?” ಕೇಳಿದಳು ಸುಜಾತೆ. “ಹೂಂ” ಅಂದ ರಮೇಶ. “ನಾ ಅಂದ್ರ ಎಷ್ಟು ಪ್ರೀತಿ ನಿಂಗS?” ಮತ್ತೆ ಕೇಳಿದಳು. “ಭಾsಳ” ಎಂದ. ಭಾಳs ಅಂತಂದ್ರ ಎಷ್ಟು ಭಾಳs? ಅಂತ ಪ್ರಶ್ನೆ ಬಂತು. ಎಲ್ಲ್ಯಂತ ಹುಡುಕ್ಲ್ಯವಾ ಅದಕ್ಕೂ ಒಂದು ಸ್ಕೇಲು? ಅಂದ ರಮೇಶ. ಸುಜಾತೆಗೆ ಪಿಚ್ಚೆನಿಸಿತು, ಆದರೂ ಕೇಳಿದಳು. “ಅಲ್ಲೋ ಸ್ಕೇಲು ಯಾಕ ಬೇಕು? ಮನಸಿನಾಗಿಂದು ಹೇಳಲಿಕ್ಕೆ? ಖರೇ ಅಂದ್ರ ಇದು ಮನಸಿನ ಮಾತು ಅಲ್ಲ, ಎದೀ ಒಳಾಗಿಂದು ಹೌದೋ ಅಲ್ಲೋ?”

ಈ ಒಂದರ ಹಿಂದೆ ಒಂದು ಬಂದ ಪ್ರಶ್ನೆಗಳು ರಮೇಶನಿಗೇನೂ ಹೊಸತಲ್ಲ. ಆತ ಸುಜಾತೆಯನ್ನು ಪ್ರೀತಿಸುವುದು ನಿಜ. ಅದು ಕಲಂಕರಹಿತವಾಗಿದ್ದುದು ಸಹ ನಿಜ. ಸುಜಾತಳು ರಮೇಶ ತನ್ನನ್ನು ಎಷ್ಟು ಪ್ರೀತಿ ಮಾಡುತ್ತಾನೆಂದು ಮೇಲಿಂದ ಮೇಲೆ ಕೇಳಿ ಆನಂದ ಪಡುತ್ತಾಳೆಂಬುದೂ ಸಹ ಆತನಿಗೆ ಗೊತ್ತು. ಆದರೆ ಪ್ರೀತಿಯ ಆಳವನ್ನು “ಹೇಳು” “ಹೇಳು” ಎಂದು ಹೀಗೆ ಅವಳು ಪದೇ ಪದೇ ಕೇಳುವುದು ಇತ್ತೀಚೆಗೆ ಯಾಕೋ ಸ್ವಲ್ಪ ಕಿರಿ ಕಿರಿ ಮಾಡತೊಡಗಿತ್ತು.

ಸುಜಾತೆ ಜಾಣೆ ಹಾಗು ಭಾವಜೀವಿ. ಇತರರೊಂದಿಗೆ ಮಾತು ಇಲ್ಲವೇ ಇಲ್ಲ ಎನ್ನುವಷ್ಟು ಮೌನಿ. ಆದರೆ  ಇತರರ ಎದುರು ಆಡದ ಆ ಎಲ್ಲ  ಮಾತುಗಳನ್ನೂ ರಮೇಶನೆದುರು ಆಡಲೇ ಬೇಕು!. ಅದರಲ್ಲಿಯೇ ಸಂತಸ. ರಮೇಶ ಅವಳಿಗಿಂತಲೂ ಸ್ವಲ್ಪ ಹೆಚ್ಚೇ ಅನ್ನುವಷ್ಟು ಭಾವುಕ, ಆದರೆ ತನ್ನಲ್ಲಿ ನಡೆಯುವ ಮಾನಸಿಕ ತುಮುಲಗಳನ್ನು ಪ್ರೇಯಸಿಯ ಎದುರಿಗೆ ಕೂಡ ಹೊರಬಿಡದ ಗಂಭೀರ. ಇದು ಸುಜಾತೆಯನ್ನು ಯಾವಾಗಲೂ ಗೊಂದಲಕ್ಕೀಡುಮಾಡುವ ಒಂದು ವಿಷಯ. ನಮ್ಮಿಬ್ಬರಲ್ಲಿ ಯಾರು ಹೆಚ್ಚು ಪ್ರೀತಿಸುತ್ತಾರೆ ಅನ್ನುವ ಒಂದು ಚಿಂತೆಯೇ ಅವಳ ಬೆಳಗು ಮತ್ತು ರಾತ್ರಿಯ ಚಟುವಟಿಕೆಯಾಗಿ ಹೋಗಿತ್ತು. ತಾನೇ ಹೆಚ್ಚು ಪ್ರೀತಿ ಮಾಡುವುದು, ಅವನಿಗೆ ನನ್ನಷ್ಟು ಪ್ರೀತಿ ಇಲ್ಲ ಎನ್ನುವ ಅನಗತ್ಯವಾದ ಕೊರಗಿನಲ್ಲಿಯೇ ನಿದ್ರಿಸುತ್ತ  ಅದೇ ಕೊರಗಿನಲ್ಲಿ ಏಳುತ್ತಿದ್ದಳು. ಇಂದು ಮಾಡಿದ ಪ್ರಶ್ನೆಯು ಕೂಡ ಆ ಕೊರಗಿನದ್ದೇ ಒಂದು ಭಾಗ!

ಇಂದಿರಾ ಗಾಜಿನ ಮನೆಯ ಬಳಿಯ ಹುಲ್ಲಿನ ಮೇಲೆ ಅಂಗಾತ ಮಲಗಿದ್ದ ಆತ ಒಂದೊಂದೇ ಹುಲ್ಲನ್ನು ತಿರುಗಿಸಿ ತಿರುಗಿಸಿ ಕಿತ್ತುತ್ತಾ ಇನ್ನೇನೋ ಯೋಚನೆಯಲ್ಲ್ಲಿತೊಡಗಿದ್ದ. ಅವನ ತಲೆಯ ಬಳಿ ಕೂತು ಸುಜಾತೆ ಈ ಆಳಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿದ್ದಳು. ಇಬ್ಬರೂ ಓದಿಕೊಂಡವರು.  ಕಾಲೇಜಿನ ಓದಿಗೆ ತಮ್ಮ ಲೆವೆಲ್ಲನ್ನು ಸೀಮಿತಗೊಳಿಸದೆ ತಮ್ಮ ಜ್ಞಾನವನ್ನು ನಿರಂತರವಾಗಿ ಸಾಣೆ ಹಿಡಿಯುವುದು ಇಬ್ಬರಿಗೂ ಖುಷಿ ಕೊಡುವ ಸಂಗತಿ. ಇಷ್ಟರಲ್ಲಿಯೇ ತಮ್ಮದೇ ಆದ ಕಂಪನಿಯೊಂದನ್ನು ಪ್ರಾರಂಭಿಸುವ ಹಂತದಲ್ಲಿದ್ದರು.

ಆಕೆ ಹುಬ್ಬಳ್ಳಿಯಲ್ಲಿಯೇ ಭೂಮರಡ್ಡಿ ಕಾಲೇಜಿನ ಇಂಜಿನಿಯರಿಂಗ್ ಪದವೀಧರೆ, ಮುಂದೆ ಅಹಮದಾಬಾದಿನ ಮ್ಯಾನೇಜ್ಮೆಂಟ್ ಕಾಲೇಜಿನಿಂದ ಎಂಬಿಎ ಪದವಿಯನ್ನು ಸಹ ಪಡೆದವಳು. ಈತ ಕಾಮರ್ಸ್ ಪದವೀಧರ. ಸೀಯೇ ಮಾಡಬೇಕೆಂದು ಕೊಂಡಿದ್ದವನು ದಿಕ್ಕುಬದಲಿಸಿ ಪುಣೆಯಲ್ಲಿ ಎಂಬಿಎ ಪದವಿ ಪಡೆದ, ಮಾರ್ಕೇಟಿಂಗಿನಲ್ಲಿ  ಮಿನುಗುವ ಕನಸು ಕಾಣತೊಡಗಿದ್ದ. ಆದರೆ ಓದಬೇಕೆಂದುಕೊಂಡಿದ್ದು ಮತ್ತು ಓದಿದ್ದು ಒಂದಕ್ಕೂ ತಾಳಮೇಳವಿಲ್ಲದಂತೆ ರೈಲ್ವೇ ಪರೀಕ್ಷೆ, ಬ್ಯಾಂಕಿನ ಪರೀಕ್ಷೆಗಳನ್ನು ಒಂದರ ಹಿಂದೆ ಒಂದರಂತೆ ಬರೆದು ವಿಫಲನಾಗತೊಡಗಿದ. ಈ ಹಂತದಲ್ಲಿ ಸುಜಾತಳು ಅವನನ್ನು ಹತ್ತಿರ ಕೂಡಿಸಿಕೊಂಡು “ಅಲ್ಲೋ ತಲ್ಯಾಗ ವಿದ್ಯಾಬುದ್ಧಿ, ಎದೀ ವಳಾಗ ಆಸೀ ಇಟಗೊಂಡವ, ಈ ಸರ್ಕಾರೀ ನವಕರೀ ಸಲುವಾಗಿ ಯಾಕ ತಲಿ ವಡಕೊಳ್ಳೀಕತೀ? ನಾವs ಒಂದು ಹೊಸಾದು ಕಂಪನಿ ಚಾಲೂ ಮಾಡಿದ್ರ ಆತು, ಹೆಂಗಂದ್ರೂ ಈಗ ಮೋದಿ ಗವರ್ನ್ಮೆಂಟಿನಾಗ ಮುದ್ರಾ, ಸ್ಟಾರ್ಟಪ್ಪು ಅವು ಇವು ಅಂತ ಹೇಳಿ ಭಾಳ ಸ್ಕೀಮು ಇದ್ದs ಇದ್ದಾವಲ್ಲೋ? ನನಕಿಂತ ಶಾಣೇತ ಇದ್ದೀಯಪ, ಡಲ್ ಯಾಕ ಅಗ್ತೀ? ನಂಗ ಭಾಳ ಸಂಗ್ಟ ಆಗ್ತದೋ  ಅಪ್ಪೀ, ಪ್ಲೀಸ್ ಸಪ್ಪನೆ ಮಾರಿ ಮಾಡಕೋಬ್ಯಾಡೋ ಪ್ಚು ಪ್ಚು ಪ್ಚು ಅಂತ ಮುತ್ತಿನ ಮಳೆಗೆರೆದು ಇನಿಯನನ್ನು ಡಿಪ್ರೆಶನ್ನಿನಿಂದ ಹೊರತರಲು ಹರಸಾಹಸ  ನಡೆಸಿದ್ದಳು. “ಏ ಇಲ್ಲೇ!, ಹಂಗೇನೂ ಇಲ್ಲ, ಆರಾಮನ ಇದ್ದೇನಿ ನಾನು” ಎಂಬ ರಮೇಶನ ಮಾತು ಸಂಪೂರ್ಣ ಸತ್ಯವಲ್ಲ ಎಂದು ಸುಜಾತೆ ಬಲ್ಲಳು.

ಅಂತೂ  ನಲ್ಲೆಯ ಮುತ್ತಿನ ಪ್ರಭಾವವೋ ಅಥವಾ “ನಾನು ಹಿಂಗs ಹಿಂದ ಬಿದ್ರ ಮುಂದ ಶಗಣೀ ತಿನಬೇಕಾಗ್ತದs” ಎನ್ನುವ ವಾಸ್ತವಪ್ರಜ್ಞೆಯೋ ಗೊತ್ತಿಲ್ಲ, ರಮೇಶ ಸ್ವಲ್ಪ ಚೈತನ್ಯಭರಿತನಾದ.

ಕಂಪನಿ ಕಟ್ಟುವ ಯೋಜನೆಗಳ ಮಧ್ಯ ಕೂಡಾ ಇತ್ತೀಚೆಗೆ ರಮೇಶ ಮತ್ತೊಂದು ಬ್ಯಾಂಕಿನ ಪರೀಕ್ಷೆಯನ್ನು ಬರೆದು ಬಂದಿದ್ದ. ಪಾಸಾಗಬಲ್ಲೆನೆಂಬ ಭರವಸೆ ಕೂಡ ಇತ್ತು. ಹೀಗಾಗಿ ಕಂಪನಿ ಕಟ್ಟುವ ಕನಸಿನೊಂದಿಗೆ ಇನ್ನೊಂದು ಪ್ಯಾರಲಲ್ ಕನಸು ಕಾಣತೊಡಗಿದ. ತಾನು ಪರೀಕ್ಷೆ ಪಾಸಾಗಿ ಬ್ಯಾಂಕಿನ ಮ್ಯಾನೇಜರನಾಗಿ, ಸುಜಾತೆಯ ಕೈಹಿಡಿಯುವುದು. ಆಕೆಯ ಹೆಸರಿನಲ್ಲಿ ಬ್ಯಾಂಕಿನ ಸಾಲತೆಗೆದುಕೊಂಡು ಫೀನಿಕ್ಸ್ ಗ್ಲೋಬಲ್ ಇಂಕ್ ಎನ್ನುವ ಕಂಪನಿಯನ್ನು ಶುರುಮಾಡುವುದು. ಇಬ್ಬರೂ ಒಂದು ವಿಲ್ಲಾ ಖರೀದಿಸಿ ಆರಾಮವಾಗಿ ಇರುವುದು. “ಅಮಾ! ನೋಡಿಲ್ಲೆ. ಇನ್ಮ್ಯಾಲೆ ಪದ್ದವ್ವತ್ತಿ ಮಗ ಸುಧಿ ಹಂಗs ರೊಕ್ಕಾ ಘಳಿಸ್ಯಾನs, ಹಿಂತಾ ಮನಿ ಕಟ್ಸ್ಯಾನs ಅದು ಇದು ಸುಡುಗಾಡು ಸುಂಟಿಕೊಂಬು ಅನಕೋತ, ಕೊರಗಬ್ಯಾಡ. ನೀನು ಸೈತ ಆರಾಮಾಗಿ ಈ ಈಜೀ ಚೇರ ಮ್ಯಾಲೆ ಕುತಗೊಂಡು ಹರಿಕಥಾಮೃತಸಾರ ಓದಕೋತ ಇರು, ಆತಿಲ್ಲೋ!” ಎಂದು ತನ್ನ ಅತೃಪ್ತ ಮಾತೃದೇವಿಗೆ ಒಂದು ಕಂಫರ್ಟ್ ಕೊಡುವ ಪ್ರಯತ್ನ. ಹೀಗೆ ನಡೆದಿತ್ತು ಮುಂಗೇರಿಲಾಲನ ಹಸೀನ್ ಸಪನಾ!

ರಮೇಶನ ಈ ಕನಸಿಗೆ ಕಾರಣವಿಲ್ಲದಿದ್ದಿಲ್ಲ.  ಬ್ಯಾಂಕೊಂದರ ರಿಸೋರ್ಸ್ಫುಲ್ ಹುದ್ದೆಯಲ್ಲಿದ್ದ ಆತನ ಡೊಡ್ಡಪ್ಪ ಹೇಳಿದ್ದರು. “ನೀನು ಬರೇ ಎಕ್ಸಾಮು ಪಾಸು ಮಾಡಿಕೋ ಸಾಕು, ಇಂಟರ್ವ್ಯೂ ಅದೂ ಇದೂ ಎಲ್ಲಾ ನಾನು ಬಾಯಪಾಸ್ ಮಾಡಿಸಿ, ನಿನ್ನ ಒಂದು ಕುರ್ಚಿ ಮ್ಯಾಲೆ ಕೂಡಿಸಿದ ಮ್ಯಾಲೇನ ರಿಟಾಯರ್ ಆಗ್ತೇನಂತ” ಎಂದು.  ಆ ಒಂದು ಭರವಸೆಯ ಎಳೆಯನ್ನು ಹಿಡಿದುಕೊಂಡೇ ರಮೇಶ ತನ್ನ ರತ್ನಗಂಬಳಿಯನ್ನು ನೇಯ್ದಿದ್ದ. ಆ ರತ್ನಗಂಗಳಿಯು ಮಾಯಾಗಂಬಳಿಯಾಗಿ ಬದಲಾಗಿ ರಮೇಶ ಮತ್ತು ಸುಜಾತೆಯನ್ನು ಜಗತ್ತಿನ ಎಲ್ಲೆಡೆ ಸುತ್ತಾಡಿಸತೊಡಗಿತ್ತು.

ಅಂದ ಹಾಗೆ ಈ ಇಂಕು ಏನು ಕೆಲಸಮಾಡುವುದು ಎನ್ನುವದರ ಬಗ್ಗೆ ಆತನಿಗೆ ಚಿಂತೆ ಇದ್ದಿಲ್ಲ. ಅದನ್ನು ಸುಜಾತೆ ನಿಭಾಯಿಸಬಲ್ಲಳು. ಆದರೆ ಯಾವ ಸ್ಕೀಮಿನಡಿ ಸಾಲ ತೆಗೆದುಕೊಳ್ಳುವುದು? ಪ್ರೋಸೀಜರು ಏನಿರಬಹುದು ಎನ್ನುವ ಚಿಂತೆ ಆತನಿಗೆ ಶುರುವಾಗಿತ್ತು. ಸಾಲದ ಪ್ರೊಸೀಜರಿನ ಆ ಚಿಂತೆಯಿಂದಾಗಿಯೇ ಆತ  ಮಾಯಾ ಜಮಖಾನೆಯ ಹಾರಾಟದ ಆನಂದವನ್ನು ಸಂಪೂರ್ಣವಾಗಿ ಅನುಭವಿಸಲಾರದೆ ಹೋಗಿದ್ದ. ಯಥಾ ಪ್ರಕಾರ ನಾಲ್ಕಾರು ದಿನದಿಂದ ಮಬ್ಬಾಗಿ ಕುಳಿತಿದ್ದ.

ಒಂದು ಮಧ್ಯಾಹ್ನ ಸುಜಾತೆ ಕಾಲ್ ಮಾಡಿ “ಬ್ಯಾಂಕಿಗೆ ಹೋಗಿ ಬರೋಣು, ಬಾ” ಎಂದು ಹೇಳಿದಳು. ಹೊರಡುವಾಗ ಅಪ್ಪ “ಅಂವಾ ಮಹಾಬಲ ದೀಕ್ಷಿತ ಅಂತಂದು ಮ್ಯಾನೇಜರ್, ಭಾಳ ಛೊಲೋ ಮನಶ್ಯಾ ಇದ್ದಾನ. ಲೋನು ಯದಕ್ಕ ತೊಗೊಳೀಕತೀರಿ, ಏನು ಕಥಿ ಅನ್ನೋದು ಸ್ವಲ್ಪ ಕ್ಲಿಯರ್ ಆಗಿ ಮಾತಾಡು, ಗುಮ್ಮನಗುಸುಕನಗತೆ ಕೂಡಬ್ಯಾಡ. ಸ್ವಲ್ಪನ ಸ್ವಲ್ಪು ಓಪನ್ ಆಗು. ಸುಜ್ಜಿಗೆ ಯಲ್ಲಾ ನಾನು ಹೇಳೇನಿ ಅಕೀನs ಯಲ್ಲಾ ಮಾತಾಡ್ತಾಳ ಖರೆ. ಆದ್ರs ನೀನು ಇಷ್ಟು ಸ್ವಾಭಿಮಾನಿ  ಆದ್ರ ಕಷ್ಟ ಆಗ್ತದಪಾ. ಮ್ಮ್, ಆಗವಲ್ತ್ಯಾಕ, ಹೋಗಿ ಬಾ, ಒಳ್ಳೇದಾಗ್ಲಿ” ಎಂದು ಶುಭಹಾರೈಸಿ ಕಳಿಸಿದ್ದರು.

ಮಹಾಬಲ ದೀಕ್ಷಿತನು ನಿಜವಾಗಿಯೂ ಒಳ್ಳೆಯವನೇ ಇದ್ದ. ಸಾಲದ ಹಣ ತಕ್ಷಣವೇ ಸಿಗಲಿಲ್ಲವಾದರೂ ಅದನ್ನು ಪಡೆಯುವ ಸುಲಭರೀತಿಯನ್ನು ಹೇಳಿ, ಫಾರ್ಮುಗಳನ್ನು ತುಂಬಲು ಹೇಳಿ ಅಸಿಸ್ಟಂಟ್ ಮ್ಯಾನೇಜರನ ಕಡೆ ಏನೋ ಕೆಲಸವಿದೆ ಎಂದು ಹೊರಹೋದ. ಇವರಿಬ್ಬರೂ ಫಾರ್ಮನ್ನು ಭರ್ತಿ ಮಾಡಿದರು. ಸೈನು ಮಾಡುವಾಗ ಸುಜಾತಾ ರಾಘವೇಂದ್ರ ದೇಶಪಾಂಡೆ ಎಂದು ಆಕೆಯೂ ರಮೇಶ ಕುಲಕರ್ಣಿ ಎಂದು ಈತನೂ ಗೀಚಿದರು. ಕೆಳಗೆ ಪಾರ್ಟ್ನರ್ / ಓನರ್ / ಸ್ಟೇಕ್ ಹೋಲ್ಡರ್ ಎನ್ನುವ ಜಾಗದಲ್ಲಿ ಯಾವುದನ್ನು ಟಿಕ್ ಮಾಡಬೇಕೆಂಬುದು ತಿಳಿಯದೆ ರಮೇಶ ಗೊಂದಲಪಟ್ಟಾಗ ಆಕೆ ಪಾರ್ಟ್ನರ್ ಮೇಲೆ ಕಣ್ಣುತೋರಿಸಿ, ನಸುನಕ್ಕಳು. ಆಕೆಯ ಅಭಿಪ್ರಾಯದ ಪ್ರಕಾರ ಅಲ್ಲಿ ಗಂಡ ಹೆಂಡತಿ ಎಂದು ಇರಬೇಕಿತ್ತು ಎಂದು ಅವನಿಗೆ ಹೇಳಿದಳು. ಆದರೆ ರಮೇಶನ ಮನಸ್ಸು ಇನ್ನೇನೋ ಗೊಂದಲದಲ್ಲಿ ಮುಳುಗಿದ್ದರಿಂದ ಆತನ ಮುಖದಲ್ಲಿ ಏನೂ ಭಾವನೆಗಳು ಮೂಡಲಿಲ್ಲ. “ಏ ಏನೋಪ್ಪಾ ನೀ, ಒಂದು ಚೂರರs ಅರ್ಥ ಆಗಂಗಿಲ್ಲಲ್ಲ ನಿಂಗS, ಆಗ್ಲಿ ಈಗ ಸಧ್ಯಕ್ಕಂತೂ ಪಾರ್ಟನರ್ ಅಂತಂದು ಸೈನು ಮಾಡು” ಎಂದಳು.  ದೀಕ್ಷಿತನು ಬಂದು ಫಾರ್ಮನ್ನು ಪಡೆದು ಆದಷ್ಟು ಬೇಗ ನಿಮ್ಮ ಕನಸು ನೆರವೇರುತ್ತದೆ ಎಂದು ಹಾರೈಸಿ ಕಳಿಸಿದ.

ಬಹಳ ಬೇಗ ಕೆಲಸ ಮುಗಿದಿದ್ದರಿಂದ ಇಬ್ಬರೂ ಇಂದಿರಾ ಗಾಜಿನ ಮನೆಯ ಕಡೆಗೆ ಹೆಜ್ಜೆ ಬೆಳೆಸಿದರು. ಅಲ್ಲಿ ಇದ್ದಾಗಲೇ ರಮೇಶನ ಕೈಗಳು ಹುಲ್ಲು ಕಿತ್ತುವ ಘನಕಾರ್ಯದಲ್ಲಿ ತೊಡಗಿದ್ದು ಮತ್ತು  ಸುಜಾತೆಗೆ ಪ್ರೇಮದ ಆಳವನ್ನು ಅರಿಯುವ ತವಕ ಶುರುವಾಗಿದ್ದು. ತಾನು ಗಂಡಹೆಂಡತಿ ಎನ್ನುವ ಮಾತನ್ನು ಆಡಿದಾಗ ರಮೇಶನು ನಸುನಗದೇ ಇದ್ದುದು ಸುಜಾತೆಗೆ ಆಘಾತದಂತೆ ಆಗಿಬಿಟ್ಟಿತ್ತು. ಅದಕ್ಕೆಂದೇ ಮತ್ತೆ ಆಕೆ ಆ ಪ್ರಶ್ನೆಯನ್ನು ಮಾಡಿದಳು. ಅದಕ್ಕೂ ಸರಿಯಾದ ಉತ್ತರ ಬರದೇ ಇದ್ದಾಗ ಆ ತರಳೆಯು ” ಈ ಮಹರಾಯ ಚೇಂಜ್ ಆಗಂಗಿಲ್ಲ ಬಿಡು, ಆದರೂ ಸೈತ ಐ ಲವ್ ಹಿಮ್, ಹೀ ಈಸ್ ಮಾಯ್ ಮ್ಯಾನ” ಅಂದುಕೊಂಡಳು. ಮೂಡನ್ನು ಬದಲಾಯಿಸುವ ನಿಟ್ಟಿನಲ್ಲಿ “ಒಂದು ಚಾಲೆಂಜ್ ಅದs ಮಾಡ್ಲಿಕ್ಕೆ ಆಗ್ತದೇನೋ ನಿಂಗs?” ಅಂತ  ಕೇಳಿದಳು. ಪ್ರತಿಸಲವೂ ಚಾಲೆಂಜು ಹಾಕಿ ತಾನು ಗೆಲ್ಲ್ಚುವುದನ್ನೇ ನೋಡಲು ಸುಜಾತೆಯು ಸಂತಸ ಪಡುತ್ತಾಳೆಂದು ರಮೇಶನು ಬಲ್ಲ.

“ಹೇಳು” ಎನ್ನುತ್ತಾನೆಂದು ಸುಜಾತೆಯು ನಿರೀಕ್ಷೆಯಲ್ಲಿದ್ದಳು. ಆದರೆ ನಿಧಾನವಾಗಿ ರಮೇಶ “ಬರೇ ನೀ ಹೇಳಿದ ಚಾಲೆಂಜ್ ನಾನು ಮಾಡೇನಿ ಇಷ್ಟು ದಿನಾ, ಈ ಸಲೆ ನಾ ಒಂದು ಚಾಲೆಂಜು ಹಾಕ್ತೀನಂತ, ಮಾಡ್ಲಿಕ್ಕೆ ಆಗ್ತದೇನು ಹೇಳು?” ಅಂದ. ಸುಜಾತೆಗೆ ವ್ಯಕ್ತಪಡಿಸಲಾರದ ಆನಂದವೊಂದು ಆಯಿತು. “ಅವ್ವಯ್ಯ! ಅಂತೂ ಇಂವ ಓಪನ್ ಅಗ್ಲಿಕತಾನ” ಅಂದುಕೊಂಡು “ಹೇಳು, ಹೇಳು” ಎಂದಳು.

ನೋಡವಾs ದಿನಾ ನಾವಿಬ್ರೂ ಮೆಸೇಜು, ಈಮೇಲು, ಮಾತು ಎಲ್ಲಾ ಮಾಡ್ತೀವಿ, ಖರೆ. ನಿಂಗ ನನ್ನ ಬಿಟ್ಟು ಒಂದು ದಿನ ಸೈತ ಇರ್ಲಿಕ್ಕೆ ಆಗಂಗಿಲ್ಲ ಅಂತೀ, ಖರೆ ಹೌದಲ್ಲೋ? ಆದ್ರ ಈ ಚಾಲೆಂಜು ಹೆಂಗದs ಅಂದ್ರ ನಾಳೆ ಒಂದು ದಿನದ ಮಟ್ಟಿಗೆ ನೀನು ನಂಗs ಕಾಲ್ ಮಾಡಬಾರದು, ಮೆಸೇಜ್ ಮಾಡಬಾರದು, ಈ ಮೇಲ್ ಮಾಡಬಾರದು. 24 ಅವರ್ಸ್ ಚಾಲೆಂಜವಾ. ಮಾಡು ನೋಡೋಣಂತ. ನಂಗೂ ಖುಷಿ ಆಗತದ. ಅಂದ. ಮೊದಲೇ ಆಘಾತಗೊಂಡಿದ್ದ ಆ ಕೋಮಲೆಯು ಈಗ ಇನ್ನಷ್ಟು ಕ್ಷತಿಗೊಂಡಳು. “ಏ ಏನೋಪಾs ನೀ? ನಾ ಅಂದ್ರ ನಿಂಗ ತ್ರಾಸ ಅಗೇದ ಅಂದ್ರ ಹೇಳು. ಅಯ್ ವಿಲ್ ವಾಕ್ ಅವೇ, ಆದ್ರ ಇಂಥಾ ಮಾತು ಹೇಳಿ ಯಾಕ ಚುಟುಗುಮುಳ್ಳು ಆಡಸ್ಲಿಕತ್ತೀ? ಅಂಥಾದ್ದು ಆಗೇದರ ಏನು ನನ ಕಡಿಂದs” ಎಂದು  ಅಲವತ್ತುಗೊಂಡಳು. “ಅಂಥಾದ್ದು ಏನೂ ಇಲ್ಲೇವಾ!, ಹೇಳೋದು ಕೇಳು. ಇದು ಬರೇ ಒಂದು ಚಾಲೇಂಜ್ ಅದs. ಅಷ್ಟs. ಆದ್ರs ಮಾಡು ಇಲ್ಲಂದ್ರ ಇಲ್ಲs. ಈದರ್ ವೇ ಅಯ್ ಲವ್ ಯೂ, ಆದ್ರ ನೀನು ಇದನ್ನ ಗೆದ್ದೀ ಅಂದ್ರ ನಂಗ ಒಂಚೂರು ಖುಷಿ ಆಗೋದಂತ್ರೂ ಖರೇ ನೋಡವಾ” ಎಂದು ಪ್ರೇಯಸಿಯನ್ನು ಮತ್ತೊಮ್ಮೆ ಗೊಂದಲಕ್ಕೀಡುಮಾಡಿದ. ಆಕೆಗೆ ಇಂಥ ಹೃದಯಹಿಂಡುವ ಪಣ ಬೇಕಾಗಿಲ್ಲ. ಆದರೆ ಇವನನ್ನು ಸಂತೋಷಪಡಿಸುವುದಕ್ಕೆ ಇದೂ ಒಂದು ಪ್ರಯತ್ನವೆಂದು ಭಾವಿಸಿ ಒಪ್ಪಿಕೊಂಡಳು. “ನಾಳೇನs ಮಾಡ್ತೀನಂತ” ಎಂದೂ ತಾನೇ ಅಂದಳು. ಅವಳಿಗೆ  ಈ ವಿಷಮಗಳಿಗೆಯು ಆದಷ್ಟು ಬೇಗ ಬಂದು ತೊಲಗಿ ಹೋದರೆ ಸಾಕು ಅನ್ನಿಸಿತ್ತು.

ಪಾರ್ಕಿನಿಂದ ಇಬ್ಬರೂ ಎದ್ದು ನಿಧಾನಕ್ಕೆ ಮನೆಯಕಡೆ ಹೊರಟರು. ಪಂದ್ಯ ಶುರುವಾಗಲು ಇನ್ನೂ ಸಾಕಷ್ಟು ಸಮಯ ಇತ್ತು. ಆದರೆ ಸುಜಾತೆ ನಾಳೆ ನಷ್ಟವಾಗಲಿರುವ ಸಂತಸದ ಕೋಟಾವನ್ನು ಇಂದೇ ಭರ್ತಿ ಮಾಡಿಕೊಂಡಳು. ಎಲ್ಲ ಮೆಸೇಜುಗಳಿಗೂ ರಮೇಶ ರೋಮ್ಯಾಂಟಿಕ್ಕಾಗಿಯೇ ಪ್ರತಿಸ್ಪಂದಿಸಿದನಾದ ಕಾರಣ ಸುಜಾತೆಯ ಹೃದಯ ಚಿಟ್ಟೆಯಂತೆ ಹಾರಾಡಿ, ರಮೇಶನ ಮನೆಗೆ ಹೋಗಿ ಅವನಿಗೆ ಮುತ್ತಿಕ್ಕಿ ಅಲ್ಲಿಂದ ಪ್ರತಿಮುತ್ತೊಂದನ್ನು ತಂದಿತು.

ಪಂದ್ಯ ಶುರುವಾದ ಕ್ಷಣದಿಂದ ಸುಜಾತೆಯು ನಾರ್ಮಲ್ಲಾಗಿಯೇ ಇರಲು ಶತಪ್ರಯತ್ನ ಮಾಡತೊಡಗಿದಳು. ಇದೇ ಸುಸಮಯ ಎಂದು ತಮ್ಮ ಹೊಸ ಕಂಪನಿಗೆ ಬೇಕಾದ ಎಲ್ಲ ದಾಖಲಾತಿಗಳನ್ನು ಒಟ್ಟು ಮಾಡಿ ಇಟ್ಟಳು. ಅದಾದರೂ ಎಷ್ಟು ಹೊತ್ತು? ೧ ಗಂಟೆಯಲ್ಲಿ ಮುಗಿದೇ ಹೋಯಿತು. ಸಂಬಂಧಪಟ್ಟ ಇತರರೊಡನೆ ಕೆಲಸಮಯ ಚರ್ಚೆ ಮಾಡಿದಳು. ಅದೂ ಮುಗಿಯಿತು. ತನ್ನ ತಂದೆಯ ಜೊತೆಗೆ ಸ್ವಲ್ಪ ಚರ್ಚೆ ಮಾಡಿ ಕಂಪನಿ ಲಾ ಮತ್ತು ರಿಜಿಸ್ಟ್ರೇಷನ್ ವಿಷಯದಲ್ಲಿ ಸಲಹೆ ಪಡೆದಳು. ಎಲ್ಲವೂ ಮುಗಿದು ಹೋದವು. ಮುಂದೇನು? ವೆಬ್ಸೈಟು ಮಾಡಬೇಕಲ್ಲ? ಅದಕ್ಕೆ ಬೇಕಾದ ಕಂಟೆಂಟನ್ನು ತಯಾರು ಮಾಡತೊಡಗಿದಳು. ಪುಣ್ಯಕ್ಕೆ ಅದು ಸುಮಾರು ಹೊತ್ತಿನವರೆಗೆ ನಡೆಯಿತು. ” ಚಾಲೇಂಜು ನಂಗ ಅದs, ಆತಗ ಏನೂ ಅಲ್ಲs, ಏನರ ಈ ಮೇಲು ಕಳಿಸ್ಯಾನೇನೋ” ಎಂದು ನೋಡಿದರೆ ಒಂದೂ ಇದ್ದಿಲ್ಲ. ರಿಫ್ರೆಶ್ ಬಟನ್ ಒತ್ತಿ ಒತ್ತಿ ಸಾಕಾಯಿತು, ಆದರೂ ಒಂದೂ ಈ ಮೇಲ್ ಇದ್ದಿಲ್ಲ.

“ಏನಾಗೇದ ಇತಗs? ಒಂದರs ಮೆಸೇಜು ಇಲ್ಲಲ್ಲ? ಮಾಮೀಗೆ ಕಾಲ್ ಮಾಡ್ಯರ ನೋಡ್ಲೇನು?” ಎಂದು ಕೊಂಡಳು, ಆದರೆ ಅದು ಕೂಡ ಪಂದ್ಯದ ವಯೋಲೇಶನ್ ಆದರೆ ಕಷ್ಟ ಎಂದು ಸುಮ್ಮನಾದಳು.  ಹೀಗಾಗಿ ಮಧ್ಯ ಮಧ್ಯ ಅನೇಕ ಮೆಸೇಜುಗಳು, ತನ್ನ ತುಮುಲಗಳಿಗೆ ಸರಿ ಹೊಂದುವ ಇಮೇಜುಗಳು, ಜಿಫ್ಫಿಗಳು ಎಲ್ಲವನ್ನೂ ಬರೆದು ಬರೆದು ಈ ಮೇಲ್ ಡ್ರಾಫ್ಟಿನಲ್ಲಿ ಇಟ್ಟುಕೊಂಡಳು. ೨೪ಗಂಟೆಗಳ ನಂತರ ಎಲ್ಲವನ್ನೂ ಪ್ರವಾಹದೋಪಾದಿಯಲ್ಲಿ ಕಳಿಸುವ ಉಮೇದಿನಲ್ಲಿ ಇದ್ದಳು. ಆಕೆಗೆ ಪಂದ್ಯದಲ್ಲಿ ದೈಹಿಕವಾಗಿ ಗೆದ್ದರೂ ಮಾನಸಿಕವಾಗಿ ತಾನು ಸೋತವಳೇ ಎಂದು ಮುಂದೆಂದೋ ತನ್ನ ಗಂಡನಿಗೆ ತೋರಿಸಬೇಕಾಗಿತ್ತು.

ರಾತ್ರಿ ಇಡೀ ಎಚ್ಚರವಾಗಿಯೇ ಇದ್ದು ೨೪ಗಂಟೆಗಳು ಮುಗಿದು ಮರುನಿಮಿಷಕ್ಕೇ ಒಂದಾದ ಮೇಲೆ ಒಂದರಂತೆ ಡ್ರಾಫ್ಟನ್ನು ತೆಗೆದು ಸೆಂಡ್.. ಸೆಂಡ್… ಸೆಂಡ್ ಅನ್ನುತ್ತಾ ಸೆಂಡ್ ಬಟನ್ ಮೇಲೆ ಟ್ಯಾಪ್ ಮಾಡುತ್ತಾ ಕುಳಿತಳು. ಈ ಮೇಲ್ ಕಳುಹಿಸಲಿಕ್ಕೆಯೇ ಸುಮಾರು ೨೦ ನಿಮಿಷಗಳನ್ನು ತೆಗೆದುಕೊಂಡಳು. ಆದರೆ ಆಕೆ ಕಣ್ಣಲ್ಲಿ ನೀರು ತುಂಬಲು ಪ್ರಾರಂಭಿಸಿದ್ದು ಒಂದಕ್ಕಾದರೂ ಉತ್ತರ ಬಾರದಿದ್ದಾಗ. ಅವಳ ತಾಯಿ ಸುಧಾಬಾಯಿಗೆ ಮಗಳ ಈ ಸೆನ್ಸೆಟಿವ್ ಗುಣ ಚೆನ್ನಾಗಿ ಪರಿಚಯವಿತ್ತು. ಹಾಗಾಗಿ ಅಷ್ಟಾಗಿ ಲಕ್ಷ್ಯಕ್ಕೆ ತಂದುಕೊಳ್ಳದೆ ತಮ್ಮ ಬೆಳಗಿನ ಕಾರ್ಯಗಳನ್ನು ಸಾಂಗವಾಗಿ ನಡೆಸಿದ್ದರು. ಆದರೆ ಯಾವಾಗ ಮಗಳ ಕೋಣೆಯಿಂದ ಮಗಳು ಸುಡ್ರ್ ಸುಡ್ರ್ ಎಂದು ಗಟ್ಟಿಯಾಗಿ ಮೂಗು ಏರಿಸಿಕೊಳ್ಳುವ ಸದ್ದು  ಕೇಳಿಬಂತೋ ಆಗ ಒಳಗೆ ಬಂದು “ಯಾಕs? ಏನಾತುs? ಯಾಕ ಅಳ್ಳೀಕತ್ತೀ? ಎಂದು ಅಕ್ಕರೆಯಿಂದ ಮಗಳನ್ನು ಸಮೀಪಿಸಿದ್ದೇ ತಡ ಸುಜಾತೆಯ ಸಹನೆಯ ಕಟ್ಟೆ ಒಡೆದು ಅಮ್ಮನನ್ನು ಅಪ್ಪಿಕೊಂಡು “ಈ ರಮೇಶ ಯಂಥಾ ಕೆಟ್ಟಂವ ಇದ್ದಾನ ನೋಡು, ಈ ಅಡ್ನಾಡಿ ಚಾಲೇಂಜು ಹಾಕಿದ್ದೂ ಅಲ್ಲದಂಗ ಈಗ ಒಂದಕ್ಕರೆ ರಿಪ್ಲೈ  ಮಾಡವಲ್ಲ, ರಿಫ್ರೆಶ್ ಮಾಡಿ ಮಾಡಿ ಸಾಕಾತು ನಂಗನಕೂ” ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಸುಧಾಬಾಯಿಯ ಅಮಾಯಕ ಮನಸ್ಸಿಗೆ ಈ ರಿಪ್ಲೈ ಮತ್ತು ರಿಫ್ರೆಶ್ ಅನ್ನುವ  ಎರಡು ಶಬ್ದಗಳೇ ಮಗಳ ದುಃಖಕ್ಕೆ ಕಾರಣವಾಗಿವೆ ಎಂದು ತೋರಿದವು. ಆದರೆ ಅದಕ್ಕೆ ಪರಿಹಾರ ತಿಳಿಯದ ಆಕೆ ತನ್ನ  ಯಜಮಾನರನ್ನು ಕರೆದು ವಿಷಯವನ್ನು ತಿಳಿದುಕೊಳ್ಳಲು ಹೇಳಿದರು. ಮೂರೂ ಜನರ ಮಾತು ಕತೆಯಾದಾಗ ಈ ಚಾಲೇಂಜಿನ ವಿಷಯ ಹೊರಗೆ ಬಂತು. “ಸಾಕಾಗೇದವ ಈಗಿನ ಹುಡುಗೂರs ಕಾಲಾಗs. ನಾವರs ಎಷ್ಟು ಸಲ ಹೇಳೋಣು? ಬ್ಯಾಡ್ರ್ಯಪಾ ಇಷ್ಟೊಂದು ಮೊಬೈಲುದ್ದು ಹುಚ್ಚು, ಒಂಚೂರು ಆರಾಮs ಇರ್ರಿ ಅಂದ್ರs ಕೇಳವಲ್ವು. ಇಕಾ, ಇಲ್ನೋಡು, ಅಳಬ್ಯಾಡ, ರಮೇಶನ ನಂಬರ ಕೊಡು” ಎಂದರು ದೇಶಪಾಂಡೆ ಅವರು. “ಅದು ಸ್ವಿಚ್ ಆನ್ ಇತ್ತು ಅಂದ್ರ ನಾನ್ಯಾಕ ಅತಗೋತ ಕೂಡ್ತಿದ್ದೆ” ಎಂದು ಮಗಳು ಮತ್ತೆ ಸುರ್ ಸುರ್ ಮಾಡಿದಳು. “ರಾಮರಾಮಾ! ನಿಮ್ಮ ಸಹವಾಸ ಭಾಳ ಲಟಿಪಿಟಿ ಅದನವಾ!” ಎನ್ನುತ್ತ ಮಗಳತ್ತ ನಸುನಗುತ್ತಲೇ ನೋಡಿ ರಮೇಶನ ಮನೆಗೆ ಫೋನಾಯಿಸಿದರೆ ಅದು ರಿಂಗಾಗುತ್ತಿತ್ತು ಅಷ್ಟೆ. ಯಾರೂ ಮಾತನಾಡಲಿಲ್ಲ. “ಯಾರೂ ಯತ್ತವಲ್ರು, ಪಾಣ್ಯಾನ ಫೋನ್ ಸೈತ ಔಟ್ ಆಫ್ ಕವರೇಜ್ ಅನ್ಲಿಕತ್ತದ, ಏನಾಗ್ಯದೋ ಏನೋ? ನಡೀ ಏಳು ಮಾರೀ ತೊಳಕೋ, ಹೋಗೇ ಬರೋಣಂತ ಅಲ್ಲಿಗೆ” ಎಂದು ಮಗಳಿಗೆ ಹೇಳಿ ತಾವು ಸ್ಕೂಟರನ್ನು ಹೊರತೆಗೆದರು.

ರಾಜನಗರದಲ್ಲಿದ್ದ “ಕೋರವಾರೇಶ ಕೃಪಾ” ಮುಂದೆ ನಿಂತಾಗ ಮನೆ ಬೀಗ ಹಾಕಿತ್ತು, ಪುನಃ ಎರಡೂ ಫೋನುಗಳಿಗೆ ಕರೆ ಮಾಡಿದರೆ ವ್ಯಾಪ್ತಿಪ್ರದೇಶದ ಹೊರಗಿದ್ದಾರೆ ಎನ್ನುವ ಉತ್ತರ ಬರತೊಡಗಿತು. ಇವರಿಗೆ ಪರಿಚಯದವರೇ ಆದ ಹಂಚಿನಾಳ ಮಾಸ್ತರು ಪಕ್ಕದ ಸೈಟಿನಲ್ಲಿ ಅರ್ಧಮರ್ಧಕಟ್ಟಿಸಿದ್ದ ತಮ್ಮ ಮನೆಯ ಕ್ಯೂರಿಂಗ್ ಮಾಡಲು ಬಂದಿದ್ದರು. ಮಾತನಾಡುವ ಸದ್ದು ಕೇಳಿ ಅವರು ಹೊರಗೆ ಬಂದು “ಏನ್ರೀ ದೇಶಪಾಂಡೆ! ಯಾಕ ಬೆಳಿಗ್ಗೆ ಬೆಳಿಗ್ಗೆನ ಕುಲಕರ್ಣಿಯವರು ಮೂರೂ ಮಂದಿ ಅಂಬುಲೆನ್ಸಿನಾಗ ಆಸ್ಪತ್ರಿಗೆ ಹೋಗ್ಯಾರ? ರಮೇಶ ವಾಂತಿ ಮಾಡಿಕೊಳ್ಳೀಕತ್ತಿದ್ದ ಅಂತ ಅಷ್ಟ ಗೊತ್ತಾತು” ಎಂದು ಒಂದು ಬಾಂಬು ಹಾಕಿದರು. ಹೌಹಾರಿದ ತಂದೆ ಮಗಳು ಆಂಬುಲೆನ್ಸಿನ ಮೇಲೆ ಬರೆದಿದ್ದ ಆಸ್ಪತ್ರೆಯ ಹೆಸರನ್ನು ತಿಳಿದುಕೊಂಡು ಇಬ್ಬರೂ ಅಲ್ಲಿಗೆ ದೌಡಾಯಿಸಿದರು.

ಆಸ್ಪತ್ರೆಯ ಹೊರಗೆ ಸ್ಕೂಟರು ನಿಲ್ಲಿಸುತ್ತಿದ್ದಾಗಲೇ ಲಕ್ಷ್ಮೀಬಾಯಿಯ ಎದೆ ಒಡೆಯುವ ರೋದನದ ಸದ್ದು ಕೇಳಿಬಂತು! ಸುಜಾತೆ ಡವಡವ ಎನ್ನುವ ಹೃದಯದೊಂದಿಗೇನೆ ಒಳಗೆ ಓಡಿದಳು. ಅಲ್ಲಿಯವರೆಗೂ ತುಟಿ ಕಚ್ಚಿ ಹಿಡಿದು, ದಿಕ್ಕು ತಪ್ಪಿದವರಂತೆ ಕುಳಿತಿದ್ದ ಪ್ರಾಣೇಶರಾಯರು ತಮ್ಮ ಅತ್ಯಂತ ಆತ್ಮೀಯ ಸ್ನೇಹಿತ ರಾಘುವನ್ನು ನೋಡುತ್ತಿದ್ದ ಹಾಗೆಯೇ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ಗಾಬರಿಯಾಗುವಂತೆ “ಯಂಥಾ ಕೆಲಸ ಮಾಡ್ಯಾನ ನೋಡೋ ನಿನ್ ಅಳಿಯಾ!, ಒದ್ದ್ಯಾಡಕೋತ ಇರೋ ನೀನs ಒಬ್ಬಾತನs ಅಂತಂದು ಈ ಮುದುಕ ಸೊಳೇಮಗನ್ನ ಬಿಟ್ಟು ಹೋಗಿಬಿಟ್ನಲ್ಲೋ” ಎಂದು ಅಳುತ್ತ ಅಳುತ್ತ ನೆಲಕ್ಕೆ ಕುಸಿದರು.

ಸುಜಾತೆಗೆ ತನ್ನ ಕಾಲಕೆಳಗಿನ ನೆಲ ಕುಸಿದಂತೆ ಆಗಿ, ತೂರಾಡತೊಡಗಿದಳು. ದೇಶಪಾಂಡೆಯವರೇ ಮೂರೂ ಜನರನ್ನು ಸಂಭಾಳಿಸಿ ತಮ್ಮ ಫೋನಿನಿಂದ ನಾಲ್ಕಾರು ಜನರಿಗೆ  ಕಾಲ್ ಮಾಡಿ ಆಸ್ಪತ್ರೆಗೆ ಬರ ಹೇಳಿದರು. ದಿಗ್ಭ್ರಮೆಗೊಂಡ ತಮ್ಮ ಮಗಳು, ಮಗನನ್ನು ಕಳೆದುಕೊಂಡು ಎದೆಯೊಡೆದುಕೊಂಡಿದ್ದ ತಮ್ಮ ತಂಗಿ ಲಕ್ಷ್ಮಿ, ಮಾತು ನಿಲ್ಲಿಸಿ ಭಯಪಡಿಸುತ್ತಿರುವ ತಮ್ಮ ಸ್ನೇಹಿತನೇ ಆದ ತಂಗಿಯ ಗಂಡ ಪ್ರಾಣೇಶ ಈ ಮೂವರಲ್ಲಿ ಯಾರನ್ನು ಸಮಾಧಾನ ಪಡಿಸುವುದು? ತಾವೂ ಸಮಾನದುಃಖಿಗಳೇ ಆ ವಿಷಯದಲ್ಲಿ. ಆದರೂ ಧೈರ್ಯತಂದುಕೊಂಡು ನಿಧಾನಕ್ಕೆ “ಅಲ್ಲೋ ಪಾಣ್ಯಾ, ಏನಾತು? ಇಷ್ಟು ದಿನ ಯಾಕ ಸುಮ್ಮನಿದ್ರಿ? ಹೇಳಬೇಕ ಬ್ಯಾಡೋ ರಮೇಶ ಮನಸಿನ್ಯಾಗ ಕೊರಗ್ಲಿಕ್ಕೆ ಹತ್ಯಾನ ಅಂತಂದು?” ಅಂದಾಗ ಕುಲಕರ್ಣಿಯವರು ತಮ್ಮ ಜೇಬಿಗೆ ಕೈ ಹಾಕಿ ಕಣ್ಣೀರಿನ ಕಲೆಯಿಂದ ಕೂಡಿದ ಒಂದು ಕಾಗದವನ್ನು ತೆಗೆದು ದೇಶಪಾಂಡೆಯವರ ಕೈಗಿತ್ತು ತಾವು ಶೂನ್ಯದತ್ತ ತಿರುಗಿದರು.

” ” ಶ್ರೀರಾಘವೇಂದ್ರ ಪ್ರಸನ್ನ ”
ತೀರ್ಥರೂಪರಿಗೆ ಮತ್ತು ಅಮ್ಮ ಇವರಿಗೆ ನಮಸ್ಕಾರಗಳು. ನಿಮ್ಮನ್ನು ಇಂಥಾ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಹತ್ತಿರುವುದಕ್ಕೆ ದಯೆತೋರಿ ಕ್ಷಮಾ ಮಾಡಿರಿ. ನನ್ ಕಡೆ ಬ್ಯಾರೆ ಯಾವ ಉಪಾಯನೂ ಇದ್ದಿಲ್ಲ ಆದಕಾರಣ ಈ ದಾರಿ ಹಿಡದೇನಿ ನಾನು. ಹೋದ ತಿಂಗಳು ಬ್ಯಾಂಕಿನ ಎಕ್ಸಾಮು ಬರ್ದಿದ್ದು ನಿಮಗ ಗೊತ್ತs ಅದs. ಮೊನ್ನೆ ನಾಕನೇ ತಾರೀಕs ಅದರ ರಿಸಲ್ಟ ಬಂದಾವ. ಹೋದ ಸಲೆಕಿಂತ ನಾನು ಈ ಸಲ ಭಾಳ ಛೊಲೋ ಬರೆದಿದ್ದೆ.  ಈ ಸಲೆ ಮಾರ್ಕ್ಸ್ರು ಜಾಸ್ತಿನ ಬಂದಾವ ಖರೆ. ಆದರ ಶನಿಮಹರಾಯ ನನ್ನ ಬೆನ್ನು ಏರಿ ಕೂತಾಂವ ಇಳಿಯಂಗಿಲ್ಲ ಅಂತಂದ್ರ ನಾ ಅರ ಏನ ಮಾಡಲಿ? ಈ ಸಲೆ ಕಟಾಫ್ 97.2ಕ್ಕೆ ನಿಂತದ. ನಂದು 95.86 ಬಂದದ. ಹಂಗಾಗಿ ಆಶಾ ತೀರಿ ಹೋತು. ಮೊನ್ನೆ ಬಮ್ಮಾಪೂರ ಓಣಿ ಪ್ರದೀಪ ತಾಂಬ್ರೆ ಭೆಟ್ಯಾಗಿದ್ದ. ನನ್ನ ಸಂಗ್ತೀನ ಅತ ಎಕ್ಸಾಮು ಬರ್ದಿದ್ದ್ದ. 67% ಬಂದಾವ ಅತಗ. ಆದ್ರ  ಸೆಲೆಕ್ಟ್ ಆಗೇ ಬಿಟ್ಟಾನ. ನಾನs ನಾಚಿಗೀ ಬಿಟ್ಟು  ಕೇಳಿದೆ ಅತಗ. ಹೆಂಗೋ ಇದು ಅಂತಂದು. ಅಂವಾ ಹೇಳಿದ. ನಂದು ಎಸ್ಸಿಎಸ್ಟಿ ಕೆಟಗರಿ ಒಳಾಗ ಸೆಲೆಕ್ಟ್ ಆಗೆದ ಅಂತಂದು. ಏನು ಅನ್ಲಿ ಇದಕ್ಕ? ನೀವs ಹೇಳರಿ. ನಿನ್ನೆ ಸೈತ ಬ್ಯಾಂಕಿನ್ಯಾಗ ಆ ಮ್ಯಾನೇಜರ ಹೇಳಿದ್ರು. ಎಸ್ಸಿಎಸ್ಟಿ ಕೋಟಾ ಆದ್ರ ಕೆಲವೊಂದು ಲೋನ್ ಬೇಗ ಆಗತಾವ ಮತ್ತು ಅದರಾಗ ಇಂಟರೆಸ್ಟ್ ರೇಟ ಸೈತ ಕಮ್ಮಿ ಇರ್ತದ ಅಂತಂದು. ಚಿಂತಿ ಮಾಡಬ್ಯಾಡ್ರಿ ನಿಮ್ಮದೂ ಆಗತದ ಅಂತಂದು ಸೈತ ಹೇಳ್ಯಾರ ಖರೆ ಅವರು. ಆದರ ಗ್ಯಾರಂಟೀ ಆಗೇದ ನಂಗ. ನನ ಹಣೀ ಒಳಗ  ಬರೇ ಫೇಲಾಗೋದ ಬರ್ದದ ಅಂತಂದು. ನನ್ ಕಡೆ ಈ ವ್ಯವಸ್ಥಾದ ವಿರುದ್ಧ ಹೋರೋಡೋ  ತ್ರಾಣ ಇಲ್ಲ ಅಂತ ಅನಸ್ತದ ನಂಗ.

ಸುಜ್ಜಿ ಭಾಳ ಧೈರ್ಯಸ್ಥ ಇದ್ದಾಳ. ಅಕಿ ನನ್ ಜೊತೀಗೆ ಮಾತಾಡಕೋತ ಇದ್ರ ನಂಗ ಈ ಕೆಲಸ ಮಾಡಲಿಕ್ಕೆ ಬಿಡತಿದ್ದಿಲ್ಲ. ಹಂಗಂತಂದs ಅಕಿಗೆ ನಾನು ಒಂದು ಚಾಲೇಂಜ ಹಾಕಿ ಅಕಿನ್ನ ಇವತ್ತಿನ ಮಟ್ಟಿಗೆ ದೂರ ಇರಲಿಕ್ಕೆ ಹೇಳೇನಿ. ನಾನು ಅಕಿ ಜೊಡಿ ಇದ್ದೀನಂದ್ರ ಅಕೀ ಧೈರ್ಯ ಸೈತ ಹಾಳು ಮಾಡಿ ಹಾಕೋ ಪೈಕಿ ಇದ್ದೇನಿ ನಾನು. ನಿಮ್ಮಿಬ್ರೀಗೆ ನಾ ಛೊಲೋ ಮಗಾ ಅಂತಂದು ಯಾವತ್ತೂ ಆಗೇ ಇಲ್ಲ. ಹಿಂಗs ನಾ ಒಬ್ಬಾಂವ ಯಲ್ಲಾರಿಗೂ ತ್ರಾಸ ಕೊಟಗೋತ ಕೂಡೋ ಬದಲಿ ನಾನs ದೂರ ಹೋದ್ರs ಸರಿ  ಇರ್ತದ ಅಂತಂದು ನಂಗ ಅನಸೇದ. ಈ ತೀರ್ಮಾನ ನಿಮಗ ತ್ರಾಸನಾಗ ಇಡತದ ಸ್ವಲ್ಪ ದಿನ. ಆದ್ರ ಮುಂದ ಛೊಲೋನ ಆಗ್ತದ. ಕುಲಸ್ವಾಮಿ ನರಸಿಂಹದೇವರ ಕ್ಛಮಾ ಅರ ಸಿಗತದ ನಂಗ ಅಂತಂದು ಆಶಾ ಇಟಗೊಂಡ ಈ ತೀರ್ಮಾನ ಮಾಡೇನಿ.

ನಿಮಗೂ, ಅಮ್ಮನಿಗೂ, ರಾಘೂ ಮಾಮಾ, ಮಾಮಿಗೆ ನಮಸ್ಕಾರಗಳು. ಸುಜ್ಜಿಗೆ ನನ್ನ ಅಭಿನಂದನಪೂರ್ವಕ ಆಶೀರ್ವಾದಗಳು.

ಇತಿ
ರಮೇಶ ಪ್ರಾಣೇಶರಾವ್ ಕುಲಕರ್ಣಿ”

ಪತ್ರ ಓದಿದ ದೇಶಪಾಂಡೆಯವರಿಗೆ ಮಗಳ ಕಡೆ ನೋಡುವ ಧೈರ್ಯವಾಗಲಿಲ್ಲ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.