ಸಜ್ಜನ ಗುರಣ್ಣನವರ ಧ್ವನಿಯಲ್ಲಿ (ಭಾವನೆಯಲ್ಲಿ ಎಂದರೆ ಹೆಚ್ಚು ಸೂಕ್ತವಾದೀತು) ಮತ್ತೊಮ್ಮೆ ಒಂದು ಹಾಡನ್ನು ಕೇಳುವ ಅವಕಾಶ ಒದಗಿತು ಇತ್ತೀಚೆಗೆ.
ಶ್ರೀಅನಂತೇಶ್ವರನ ಸನ್ನಿಧಿಯಲ್ಲಿ ಅವರು ಶ್ರೀಕರ್ಜಗೀ ದಾಸರು ರಚಿಸಿದ ಒಂದು ದಿವ್ಯವಾದ ಕೃತಿಯನ್ನು ಹಾಡುತ್ತಿದ್ದರು. ನಾನು ಅಲ್ಲಿಗೆ ಹೋದಾಗ ಮೊದಲ ನುಡಿಯ ಅರ್ಧ ಭಾಗ ಮುಗಿದಿತ್ತು. ಉಳಿದ ಭಾಗವನ್ನು ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ. ಕೇವಲ ಕಂಠದಿಂದ ಹೇಳದೆ, ಈ ಕೀರ್ತನೆಯನ್ನು ಅವರು ಹೃದಯದಿಂದ ಹೇಳಿದ್ದಾರೆ ಎನ್ನುವುದನ್ನು ಈ ವಿಡಿಯೋ ನೋಡಿದ ಯಾರು ಬೇಕಾದರೂ ಹೇಳಬಹುದು. ಅವರು ಹಾಡನ್ನು ಹೇಳುವಾಗ ನಾನು ವಿಡಿಯೋ ಮಾಡುತ್ತಿದ್ದುದು ಅವರಿಗೆ ಗೊತ್ತಾಗಿಲ್ಲ ಕೂಡ. ಹಾಡು ಮುಗಿದ ನಂತರ ಅವರಿಗೆ ನಾನೇ ಅವರಿಗೆ ತಿಳಿಸಿದೆ.
ಕರ್ಜಗೀ ದಾಸರ ಜೀವನವೇ ನಮ್ಮೆಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕರ್ಜಗಿ ಎನ್ನುವ ಒಂದು ಚಿಕ್ಕ ಊರಿನವರು ಇವರು. ಬಹುದೊಡ್ಡ ಶ್ರೀಮಂತರು. ಇವರ ಹೆಂಡತಿಯು ಪರಮಸಾಧ್ವಿಯು. ಗಂಡ ಒಳ್ಳೆಯವನು, ಹೃದಯವಂತ ನಿಜ. ಆದರೆ ದೇವತಾರಾಧನೆ ಪೂಜೆ ವ್ರತಾದಿಗಳಿಗೆ ಎಂದೂ ತೊಂದರೆಮಾಡಿದವನಲ್ಲ. ನಿನಗೆ ನಾನು ಅಡ್ದಿ ಮಾಡುವುದಿಲ್ಲ ನೀನು ನನಗೆ ಕಿರಿಕಿರಿ ಮಾಡಬೇಡ ಎಂಬ ಪಾಲಿಸಿಯನ್ನು ಪಾಲಿಸುತ್ತಿದ್ದವನು. ತಾನಾಯಿತು ತನ್ನ ಜೂಜಾಟದಂತಹ ಪರಮಲೌಕಿಕ ವ್ಯವಹಾರವಾಯಿತು ಎನ್ನುವ ಮನಸ್ಸಿನವನು ಈತ.
ಒಮ್ಮೆ ಪ್ರಾಣೇಶದಾಸರು ಈ ಕರ್ಜಗಿ ಗ್ರಾಮಕ್ಕೆ ಬಂದಿರುವಾಗ ಅವರನ್ನು ಈ ಸಾಧ್ವೀಮಣಿಯು ಸತ್ಕಾರಕ್ಕೆಂದು ಆಹ್ವಾನಿಸುತ್ತಾಳೆ. ಅಂದು ಈ ಸಾಹುಕಾರನ ಮನಸ್ಸು ಕೂಡ ಸ್ವಲ್ಪ ಬದಲಾಗಿ, ಆತನೂ ಸಹ ಪೂಜಾಕಾರ್ಯಗಳನ್ನು ನೋಡುತ್ತಾ ಅಲ್ಲೇ ಕುಳಿತಿದ್ದ. ಸಂಜೆಯ ಪೂಜೆ ಮುಗಿದ ನಂತರ ಶ್ರೀಪ್ರಾಣೇಶದಾಸರು ಅವನನ್ನು ಉದ್ದೇಶಿಸಿ ” ಆದದ್ದಾಯ್ತಿನ್ನಾದರು ಒಳ್ಳೆ ಹಾದಿ ಹಿಡಿಯೋ ಪ್ರಾಣಿ” ಎಂಬ ಒಂದು ರಚನೆಯನ್ನು ಹಾಡುತ್ತಾರೆ. ಸಮಯ, ಗುರುಮುಖ, ದೇವತಾ ಸನ್ನಿಧಾನ ಎಲ್ಲವೂ ಸರಿಯಾಗಿ ಕೂಡಿಬಂದ ಕಾರಣ ಸಾಹುಕಾರನ ಮನಸು ಆ ಕ್ಷಣದಲ್ಲಿಯೇ ಪರಿವರ್ತನೆಗೊಂಡಿತು. ದಾಸರ ಪಾದಕ್ಕೆ ಬಿದ್ದು ಶರಣಾಗತನಾದ ಆತ ತನ್ನ ಲೌಕಿಕ ಹವ್ಯಾಸಗಳನ್ನೆಲ್ಲ ತ್ಯಜಿಸಿ ಅಂದೇ ಶಿಷ್ಯತ್ವವನ್ನು ಸ್ವೀಕಾರ ಮಾಡಿದ. ದಾಸರು ಅವನ ಅಂತಃಕರಣದ ಶುದ್ಧತೆಯನ್ನು ಗಮನಿಸಿ ಅವನಿಗೆ ಶ್ರೀದವಿಠಲ ಎಂಬ ಅಂಕಿತವನ್ನು ಪ್ರದಾನ ಮಾಡಿದರು.
ಸಾಹುಕಾರನು ಶ್ರೀದವಿಠಲನ ದಾಸನಾಗಿ ಬದಲಾಗಿ ಹೋದ. ಅಲ್ಲಿಯವರೆಗೆ ಎಲ್ಲೋ ಹುದುಗಿ ಹೋಗಿದ್ದ ಆತನ ಭಕ್ತಿ ಮತ್ತು ಜ್ಞಾನಗಳು ಅವ್ಯಾಹತವಾಗಿ ಹೊರಬಂದು ಶ್ರೇಷ್ಠ ಕೃತಿಗಳಾಗಿ ಹೊರಹೊಮ್ಮಿದವು. ರಾಘವೇಂದ್ರ ಗುರುರಾಯರ ಸೇವಿಸಿರೋ ಎನ್ನುವುದು ಇವರದೇ ಕೃತಿ. ಮುಂದೆ ಹರಿಕಥಾಮೃತಸಾರಕ್ಕೆ ಫಲಶ್ರುತಿಸಂಧಿಯನ್ನು ಸಹ ಇವರು ರಚನೆ ಮಾಡಿದರು. ದಾಸರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಲ್ಲವರಿಂದ ತಿಳಿಯಬಹುದು.
ಶ್ರೀದಾಸರು ತಮ್ಮೊಳಗಿರುವ ಎಲ್ಲ ದುಗುಡಗಳನ್ನು ಹೊರಹೊಮ್ಮಿಸಿ, ಶ್ರೀಶ್ರೀನಿವಾಸನನ್ನು ಬಗೆಬಗೆಯಾಗಿ ಕೇಳುವ ಒಂದು ಕೃತಿಯುಂಟು. ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸ ಎಂಬುದು. ಅದನ್ನೇ ನಮ್ಮ ಗುರಣ್ಣನವರು ಇಲ್ಲಿ ಹಾಡಿರುವುದು. ಬಹಳ ಚೆನ್ನಾಗಿ ಅದನ್ನು ಅನುಭವಿಸುತ್ತಾ ಹಾಡಿದ್ದಾರೆ. ಹಾಡು ಕೇಳಿ ಸಂತೋಷವಾದಲ್ಲಿ ಮುಂದೆ ಸಂಪೂರ್ಣವಾಗಿ ಅದನ್ನು ಕಲಿಯಲು ಇಲ್ಲಿ ಕೆಳಗೆ ಸಾಹಿತ್ಯವನ್ನು ನೀಡಿದ್ದೇನೆ. ಕಲಿಯಬಹುದು.
ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ
ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ |
ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ
ಮುಂದೆ ಗತಿ ಏನಯ್ಯ ಮುಕುತರ
ಹಿಂದುಳಿದವನಲ್ಲದಲೆ ತನು ಸಂ |
ಬಂಧಿಗಳ ವಶನಾಗಿ ದುರ್ವಿಷ
ಯಾಂಧಕಾರದಿ ಮುಳುಗಿದೆನೊ ನಾ || ಅ.ಪ.||
ಹಲವು ಜನ್ಮದ ನೋವಾ ನಾ
ಹೇಳಿಕೊಳಲೇನೆಲವೊ ದೇವರ ದೇವಾ ನೀ |
ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ
ಸುಲಭರೊಳಗತಿ ಸುಲಭನೆಂಬುವ
ಅಲವಬೋಧಮತಾನುಗರು ಎನ |
ಗೊಲಿದು ಪೇಳಲು ಕೇಳಿ ನಿಶ್ಚಂ |
ಚಲದಿ ನಿನ್ನನೆ ಧೇನಿಸುವೆ ನಾ
ಕಲುಷ ಸಂಸ್ಕಾರಗಳ ವಶದಿಂ
ಹೊಲಬುಗಾಣದೆ ಹರುಷಗುಂದುವೆ
ಹೊಲೆ ಮನದ ಹರಿದಾಟ ತಪ್ಪಿಸಿ
ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು || 1 ||
ಭಾರತೀಪತಿಪ್ರೀಯಾ ಎಂದೆಂದು ಭಕುತರ
ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ |
ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ
ತಾರಕನು ನೀನೆಂದು ತಿಳಿಯದ
ಕಾರಣದಿ ಸುಖ ದುಃಖಮಯ ಸಂ |
ಸಾರ ದುಸ್ತರ ಶರಧಿಯೊಳು ನಾ
ಪಾರಗಾಣದೆ ಪರಿದು ಪೋಪೆನೊ
ದೂರನೋಳ್ಪದು ಧರ್ಮವಲ್ಲವೊ
ದ್ವಾರಕಾಪುರನಿಲಯ ಪರಮೋ |
ದಾರ ತನುವೆಂದೆನ್ನ ಪಾಲಿಗೆ
ಬಾರದಲ್ಲದೆ ಭವವಿಮೋಚನ || 2 ||
ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ
ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ
ಸುಖಗುಣಾರ್ಣವ ಶ್ರೀದವಿಠಲಪ್ರಸೀದ
ಸಕಲ ಕ್ರಿಯ ಯೋಗಗಳು ತನು ಬಂ |
ಧಕವು ನಿನಗೊಪ್ಪಿಸದಿರಲು ಎನೆ
ನಿಖಿಳ ಜೀವರ ಭಿನ್ನ ನಿನ್ನಯ
ಯುಕುತಿಗೆ ನಮೊ ಎಂಬೆನಲ್ಲದೆ |
ಯುಕುತ ಯುಕ್ತಿಗಳೊಂದರಿಯದ
ರ್ಭಕನ ಬಿನ್ನಪ ಸಲಿಸಿ ನವವಿಧ
ಭಕುತಿ ಭಾಗ್ಯವ ಕೊಟ್ಟು ತವ ಸೇ
ವಕರ ಸೇವಕನೆನಿಸದಿರ್ದೊಡೆ || 3 ||
ಗುರಣ್ಣ ಅವರು ಹಾಡಿದ ಮತ್ತೊಂದು ಹಾಡು ಲಾಲಿ ಪಾವನ ಚರಣ ಇಲ್ಲಿದೆ ನೋಡಿ.
ಅದ್ಭುತ…!! ”
ಎಂದು ಕಾಂಬೆನೋ ನಿನ್ನಾ ಶ್ರೀನಿವಾಸಾ “..ಎನ್ನುವುದು ಎಲ್ಲ ಸಜ್ಜನರ ಮನದ ಅಳಲಾಗಿರಲಾಗಿ, ಭಕ್ತಿ ವೈರಾಗ್ಯವನ್ನು ಕರುಣಿಸುವ ದಾಸರ ರಚನೆ, ಅವರ ಉದಾತ್ತ ಜೀವನದ ಕಥನ ಹಾಗೂ ಮನಸ್ಸು ಹೃದಯವನ್ನು ಭಕ್ತಿಯ ಆರ್ತತೆಯಲ್ಲಿ ಕರಗಿಸುವ ಗಾಯನ… ಎಲ್ಲವೂ ಉತ್ಕೃಷ್ಟವಾಗಿದ್ದು ಧನ್ಯತೆಯ ಭಾವ ತರುತ್ತಿದೆ…
ಧನ್ಯವಾದಗಳು ಇದನ್ನುಣಿಸಿದ್ದಕ್ಕೆ ಆಚಾರ್ಯರೇ…
ಭಕ್ತರ ಸಂಘ ಕರೀಣಿಸೋ ರಂಗ ಸದಾ ಭಕ್ತರ ಸಂಘ ದಲ್ಲಿ ಇರಿಸು……🙇♀️🙏