ಗಂಗೆಯ ಮಡಿಲಲ್ಲಿದ್ದೂ ಬಾವಿಯ ತೋಡುವರೇ?

ಈ ಲೇಖನ ಕೆಲಮಂದಿಗೆ ಹಿಡಿಸದೇ ಹೋಗಬಹುದು. ಅದು ಯಾರಿಗೆ ಮತ್ತು ಯಾಕೆ ಅಂತ ನಾನು ಹೇಳುವುದಿಲ್ಲ. ಆದರೆ ಇದು ನಿಜ.

ನಾವು ಹರಿಸರ್ವೋತ್ತಮನೆನ್ನುವವರು. ಅಂದ ಮಾತ್ರಕ್ಕೆ ಇನ್ನಿತರ ದೇವತೆಗಳನ್ನು ನಮಿಸದವರು ಎಂದಲ್ಲ. ಅವರೆಲ್ಲ ನಮಗಿಂತ ಉತ್ತಮರು, ಶ್ರೀಹರಿಯು ಈ ಎಲ್ಲರಿಗಿಂತಲೂ ಉತ್ತಮನು ಎಂದು ಅರ್ಥ. ಅಷ್ಟೇ. ಎಲ್ಲ ದೇವತೆಗಳನ್ನೂ ಅವರವರ ಸ್ಥಾನಕ್ಕೆ ತಕ್ಕಂತೆ ನಾವು ಗೌರವಿಸುತ್ತೇವೆ. ಗೌರವಿಸಲೇಬೇಕು ಎನ್ನುವುದು ಕಡ್ಡಾಯ. ಆದರೆ ನಮಸ್ಕಾರವೇನಿದ್ದರೂ ಆ ದೇವತೆಯ ಒಳಗಿರುವ ಪ್ರಾಣನ ಒಡೆಯನಾದ ಮಹಾವಿಷ್ಣುವಿಗೇ ಸಲ್ಲುವುದು. ವಿಭಿನ್ನ ಸಂದರ್ಭದಲ್ಲಿ ವಿಭಿನ್ನ ದೇವತೆಗಳ ಅಂತರ್ಯಾಮಿಯಾಗಿ ದೇವದೇವನನ್ನು ಚಿಂತಿಸುವುದೇ ಆಯಾ ದೇವತೆಗಳಿಗೆ ಸಲ್ಲಿಸುವ ಗೌರವವಾಗಿದೆ. ಈ ಸರಿದಾರಿಯನ್ನು ನಮಗೆ ತೋರಿಕೊಟ್ಟವರು ಮಧ್ವಮುನಿಗಳು. ಈ ವಿಭಿನ್ನ ದೇವತೆಗಳ ಸ್ಥಾನ ಯಾವುದು, ಅವರ ಮಂತ್ರ ಯಾವುದು? ವಿಷ್ಣುವು ಯಾವ ರೂಪದಿಂದ ಈ ದೇವತೆಗಳ ಅಂತರ್ಯಾಮಿಯಾಗಿರುತ್ತಾನೆ ಎನ್ನುವುದನ್ನು ಸಹ ಜೀವೋತ್ತಮರಾದ ಶ್ರೀಮಧ್ವಾಚಾರ್ಯರೇ ನಮಗೆ ತಿಳಿಸಿಕೊಟ್ಟಿದ್ದಾರೆ. ನಮ್ಮೀ ಗುರುಗಳು ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯವೇನೆಂದರೆ ಹರಿಯೇ ಸರ್ವೋತ್ತಮ, ಇವನೇ ನಮಗೆಲ್ಲ ಆನಂದದ ಮೂಲ. ಇವನೇ ಮೋಕ್ಷದಾತೃ ಎಂಬುದು. ಅವರ ಎಲ್ಲ ಗ್ರಂಥಗಳೂ ಈ ತತ್ತ್ವವನ್ನೇ ಸಾಧಿಸುತ್ತವೆ. ಮೋಕ್ಷಕ್ಕಾಗಿ ಇವನನ್ನು ಬಿಟ್ಟು ಬೇರೆಯ ದೇವತೆಗಳ ದುಂಬಾಲು ಬೀಳುವಂತಿಲ್ಲ. ಬಿದ್ದರೂ ಅವರು ಅದನ್ನು ಕೊಡಲಾರರು. (ಹರಿಯ ಆಜ್ಞೆಯ ಮೇರೆಗೆ ವಾಯುದೇವನು ಮೋಕ್ಷವನ್ನು ಕೊಡಬಲ್ಲ, ಆದರೆ ಇಲ್ಲಿಯವರೆಗೂ ಅವನು ಆ ಕೆಲಸವನ್ನು ಮಾಡಿಲ್ಲ. ಅದು ಬೇರೆಯದೇ ಚರ್ಚೆ)

ಒಮ್ಮೆ ಭಕ್ತರ ಅಪೇಕ್ಷೆಯ ಮೇರೆಗೆ ಶ್ರೀಭಗವತ್ಪಾದಾಚಾರ್ಯರು ಶ್ರೀಕೃಷ್ಣಾಮೃತಮಹಾರ್ಣವ ಎನ್ನುವ ಗ್ರಂಥವನ್ನು ರಚಿಸಿದರು. ಕೃಷ್ಣನ ಕಥೆಯ ಸಮುದ್ರ ಅದು. ಇಷ್ಟಾರ್ಥ ಪೂರೈಕೆಗಾಗಿ ಅನ್ಯದೈವಗಳನ್ನು ಪೂಜಿಸುವವರ ಪರಿಪಾಟಲನ್ನು ಈ ಗ್ರಂಥದಲ್ಲಿ ಆಚಾರ್ಯರು ಹೃದಯಕ್ಕೆ ತಾಕುವಂತೆ ವಿವರಿಸಿದ್ದಾರೆ.

ವಾಸುದೇವಂ ಪರಿತ್ಯಜ್ಯ ಯೋಽನ್ಯಂ ದೇವಮುಪಾಸತೇ |
ತ್ಯಕ್ತ್ವಾಽಮೃತಂ ಸ ಮೂಢಾತ್ಮಾ ಭುಂಕ್ತೇ ಹಾಲಾಹಲಂ ವಿಷಮ್ || ೧೪೪ ||

ವಾಸುದೇವನನ್ನು ಬಿಟ್ಟು ಇತರ ದೇವತೆಗಳ ಉಪಾಸನೆ ಮಾಡುವವರು ಮೂಢರು. ಹೀಗೆ ಮಾಡುವವರು ಅಮೃತವನ್ನು ತ್ಯಜಿಸಿ ಹಾಲಾಹಲ ಎನ್ನುವ ವಿಷವನ್ನು ಉಂಡಂತೆಯೇ ಸರಿ.

ತ್ಯಕ್ತ್ವಾಽಮೃತಂ ಯಥಾ ಕಶ್ಚಿದನ್ಯಪಾನಂ ಪಿಬೇನ್ನರಃ |
ತಥಾ ಹರಿಂ ಪರಿತ್ಯಜ್ಯ ಚಾಽನ್ಯಂ ದೇವಮುಪಾಸತೇ || ೧೪೫ ||

ಅಮೃತವನ್ನು ಬಿಟ್ಟು ಇನ್ನಿತರ ಕ್ಷುದ್ರಜಲ (ಅಮೃತಕ್ಕೆ ಹೋಲಿಸಿದಾಗ ಬಾವಿ, ಕೊಳಗಳ ನೀರು ಕ್ಷುದ್ರವೆನಿಸುತ್ತವೆ. ಇವುಗಳಿಂದ ಉಂಟಾಗುವ ದಾಹಶಮನವು ತಾತ್ಕಾಲಿಕ.)ವನ್ನು ಕುಡಿಯುವುವವನು ಮೂರ್ಖನು. ಇವನಂತೆಯೇ ಅನ್ಯದೈವೋಪಾಸಕನೂ ಸಹ!

ಗಾಂ ಚ ತ್ಯಕ್ತ್ವಾ ವಿಮೂಢಾತ್ಮಾ ಗರ್ದಭೀಂ ವಂದತೇ ಯಥಾ |
ತಥಾ ಹರಿಂ ಪರಿತ್ಯಜ್ಯ ಯೋಽನ್ಯದೈವಮುಪಾಸತೇ || ೧೪೭ ||

ಇತರ ದೇವರನ್ನು ಆರಾಧಿಸುವವವರ ಪರಿಯು ವಂದನೀಯವಾದ ಹಸುವನ್ನು ಬಿಟ್ಟು ಕತ್ತೆಯನ್ನು ನಮಿಸಿದಂತೆ ಇರುವುದು.

ವಾಸುದೇವಂ ಪರಿತ್ಯಜ್ಯ ಯೋಽನ್ಯಂ ದೇವಮುಪಾಸತೇ |
ತೃಷಿತೋ ಜಾಹ್ನವೀತೀರೇ ಕೂಪಂ ಖನತಿ ದುರ್ಮತಿಃ || ೧೪೮ ||

ಅವಿವೇಕಿಗಳು ಬಾಯಾರಿದಾಗ ತಾವು ಗಂಗೆಯ ಮಡಿಲಲ್ಲೇ ಇದ್ದರೂ ನೀರಿಗಾಗಿ ಬಾವಿಯನ್ನು ತೋಡುತ್ತಾರೆ. ಹೀಗೆ ತನ್ನಲ್ಲಿಯೇ ಇರುವ ವಾಸುದೇವನನ್ನು ಬಿಟ್ಟು ಇತರ ದೇವತೆಗಳನ್ನು ಪೂಜಿಸುವವನು ಮೂರ್ಖನು.

ಇನ್ನೂ ಮುಂದುವರೆದು ಆಚಾರ್ಯರು ಹೇಳುವ ಮಾರ್ಮಿಕವಾದ ಮಾತು ಇದು.

ಸ್ವಮಾತರಂ ಪರಿತ್ಯಜ್ಯ ಶ್ವಪಾಕೀಂ ವಂದತೇ ಯಥಾ |
ತಥಾ ಹರಿಂ ಪರಿತ್ಯಜ್ಯ ಯೋಽನ್ಯಂ ದೇವಮುಪಾಸತೇ ||

ಇತರ ದೇವತೆಗಳ ಆರಾಧನೆ ಎಂದರೆ, ತನ್ನ ತಾಯಿಯನ್ನು ಬಿಟ್ಟು ಪತಿತಳನ್ನು ನಮಸ್ಕರಿಸಿದಂತೆ!

ಇಷ್ಟರ ಮಟ್ಟಿಗೆ ಒತ್ತುಕೊಟ್ಟು (emphasize) ಆಡುವ ಹರಿಯಪೂಜೆಯ ಪ್ರಾಶಸ್ತ್ಯ ಮತ್ತು ಅನ್ಯದೈವಾರಾಧನೆಯ ನಿರಾಕರಣೆಯ ಮಾತುಗಳನ್ನು ನೋಡಿ ದ್ವೈತೇತರರು (Non-Dwaitis) ನಮ್ಮನ್ನು “ಬೇರೆ ದೇವರುಗಳನ್ನು ದ್ವೇಷಿಸುವ ಜನಾಂಗ” ಎಂದು ತಪ್ಪು ತಿಳಿಯುತ್ತಾರೆ. ಆದರೆ ವಾಸ್ತವವೆಂದರೆ ಯಾವ ತರಹದ ದುರಾಗ್ರಹಗಳನ್ನೂ ಇಟ್ಟುಕೊಳ್ಳದೆ ಎಲ್ಲ ದೇವರುಗಳನ್ನು ಗೌರವಿಸುವ ಜನಾಂಗ ನಮ್ಮದು.

ಈ ಮಾತುಗಳನ್ನು ಪೂರ್ವಗ್ರಹಿಕೆ ಇಲ್ಲದೆ ಹೃದಯಪೂರ್ವಕವಾಗಿ ಕೇಳಿಸಿಕೊಂಡಾಗ ಮಾತ್ರವೇ ಆಚಾರ್ಯರ ಆಂತರ್ಯವು ತಿಳಿಯುವುದು. ಇಲ್ಲಿ ಹರಿಯ ಆರಾಧನೆ ಎಂದರೆ ಯಾವುದಾದರೂ ಒಂದು ಮಾಧ್ಯಮದಲ್ಲಿ ಅಡಗಿರುವ ಅವನ ರೂಪಕ್ಕೆ ಪೂಜೆ ಎಂದು ಅರ್ಥ, ಅಷ್ಟೆ. ಮಾಧ್ಯಮವೇ ಸರ್ವೋತ್ತಮ ಎಂಬ ಅಭಿಪ್ರಾಯದ ಪೂಜೆ ಸರ್ವಥಾ ಕೂಡದು. ಉದಾಹರಣೆ : ಗಣಪತಿಯ ಪೂಜೆಯಲ್ಲಿ ವಾಸ್ತವವಾಗಿ ಗಣಪತಿಯು ಮಾಧ್ಯಮ ಮಾತ್ರ. ಅಲ್ಲಿ ನಿಜವಾದ ನಮನ ಸಲ್ಲುವುದು ಅವನ ಅಂತರ್ಯಾಮಿಯಾದ ಮುಖ್ಯಪ್ರಾಣಸ್ಥ ಶ್ರೀವಿಶ್ವಂಭರರೂಪಿಯಾದ ಶ್ರೀಹರಿಗೆ. ಹಾಗೆ ಚಿಂತಿಸದೆ, ವಿಶ್ವಂಭರನನ್ನು ಬಿಟ್ಟು ಗಣಪತಿಯೇ ಸರ್ವೋತ್ತಮನೆಂದು ಪೂಜಿಸಿದಲ್ಲಿ ಮೇಲೆ ಹೇಳಿದ ಅನರ್ಥಗಳು ಆಗುತ್ತವೆ. ಇದು ಇನ್ನಿತರ ದೇವತೆಗಳ ವಿಷಯದಲ್ಲಿಯೂ ಸಲ್ಲುವ ವಿಚಾರವಾಗಿದೆ.

ಇನ್ನಿತರರು ಏನೇ ಗೊಣಗಾಡಲಿ, ಬಾಯಿಗೆ ಬಂದ ಏನನ್ನಾದರೂ ಮಾತನಾಡಲಿ ನಾವಂತೂ ಹೀಗೆಯೇ ಪೂಜೆಯನ್ನು ಸಲ್ಲಿಸುವವರು.

“ನಾವು ಮಾಧ್ವಾಸ್!” “ನಾನೂ ಮಧ್ವಮತದ ಪದ್ಧತಿಯನ್ನು ನಾನು ಫಾಲೋ ಮಾಡ್ತೀನಿ” I wanna learn Madhwa tradition pooja ಎನ್ನುತ್ತ ಏನೇನೋ ಮಾಡುವವವರ ಬಗ್ಗೆ ನನ್ನದು no comments.

(ಶ್ರೀಹರಿಯ ಅವತಾರಗಳಲ್ಲಿ ವ್ಯತ್ಯಾಸವನ್ನು ಎಣಿಸುವುದು, ತಪ್ಪು ತಿಳಿಯುವುದು ಸಹ ದೋಷದಾಯಕವಾದ ಯೋಚನೆಗಳೇ. ಉದಾ:- ವಿಷ್ಣುವಿನ ಬೌದ್ಧಾವತಾರವನ್ನು ಆಧುನಿಕ ಕಾಲದ ಗೌತಮಬುದ್ಧನೊಂದಿಗೆ ಸಮೀಕರಿಸುವುದು, ರಾಮ ಹಾಗು ಕೃಷ್ಣನ ಸಾಮರ್ಥ್ಯಗಳಲ್ಲಿ ವ್ಯತ್ಯಾಸವಿದೆ ಎಂದು ಭಾವಿಸುವುದು, ಬಲರಾಮನನ್ನು ವಿಷ್ಣುವಿನ ಅವತಾರವೆಂದು ಭಾವಿಸುವುದು ಇತ್ಯಾದಿ.

ಸಮಯ ಸಿಕ್ಕಾಗ/ದೇವರ ದಯೆ ಮೂಡಿದಾಗ ಇದರ ಬಗ್ಗೆ ಒಂದು ಲೇಖನವನ್ನು ಬರೆಯಬೇಕು. ನೋಡೋಣ.)

ಶ್ರೀಮನ್ನಾರಾಯಣನ ಚಿತ್ರವನ್ನು ನಾನು ತೆಗೆದುಕೊಂಡದ್ದು : http://www.hdwallpapersact.com/wp-content/gallery/vishnu/vishnu-ji-mata-laxmi-narad-and-hanuman.jpg ಇಲ್ಲಿಂದ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

3 Comments

  1. SowmyaRajagopal
    November 22, 2016
    Reply

    It’s true Raghunandana yes we r all Madhavs we must follow our philosophy.

  2. Prasanna Kumar M
    November 22, 2016
    Reply

    Nice. Very succinctly explains Acharya madhwas, philosophy.

  3. Umesh
    November 23, 2016
    Reply

    Article is very much informative with factual and examples. Hari Sarvottam

Leave a Reply

This site uses Akismet to reduce spam. Learn how your comment data is processed.