ಮಂತ್ರಾಕ್ಷತೆ

ಅಕ್ಷತೆಯು ಧಾರ್ಮಿಕ ಆಚರಣೆಗೆ ಸಂಬಂಧ ಪಟ್ಟ ಎಲ್ಲ ಸಂದರ್ಭಗಳಲ್ಲಿಯೂ ತಪ್ಪದೇ ಬಳಕೆ ಆಗುವ ದ್ರವ್ಯವಾಗಿದೆ. ಕಾರ್ಯಕ್ರಮದ ಸಂಕಲ್ಪ ಸಮಯದಿಂದ ಆರಂಭಿಸಿ ಕೊನೆಗೆ ದೇವತಾನುಗ್ರಹರೂಪವಾಗಿ ಸ್ವೀಕರಿಸುವ ಪ್ರಸಾದದವರೆಗೂ ಎಲ್ಲದಕ್ಕೂ ಅಕ್ಷತೆಯು ಬೇಕೇ ಬೇಕು.
ಸಂಸ್ಕೃತದ ಅಕ್ಷತ ಎನ್ನುವ ಶಬ್ದವೇ ಕನ್ನಡದಲ್ಲಿ ಅಕ್ಷತೆಯಾಗಿದೆ. ನಷ್ಟವಾಗದಿರುವುದು, ತುಂಡಾಗದಿರುವುದು ಎನ್ನುವುದು ಈ ಅಕ್ಷತ ಶಬ್ದದ ಅರ್ಥ. ದೇವರ ಪೂಜೆಯಾದ ನಂತರ ಪ್ರಸಾದರೂಪವಾಗಿ ಇಟ್ಟುಕೊಳ್ಳಲು ಹಾಳಾಗದಿರುವ ಯಾವುದಾದರೂ ಒಂದು ಪದಾರ್ಥವನ್ನು ಸ್ವೀಕರಿಸಬೇಕಲ್ಲ, ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಕ್ಷತಿಗೊಳ್ಳದಿರುವ ಧಾನ್ಯವನ್ನು ಅಕ್ಷತೆಯನ್ನಾಗಿ ಬಳಸುವ ಅಭ್ಯಾಸವನ್ನು ಶಾಸ್ತ್ರಕಾರರು ಪ್ರಾರಂಭಿಸಿದ್ದಾರೆ ಎನ್ನಿಸುತ್ತದೆ. ಪ್ರಸಾದದಲ್ಲಿ ಇರುವ ಹಣ್ಣು ಅಥವಾ ಹೂವನ್ನು ತಕ್ಷಣವೇ ಉಪಯೋಗಿಸಬೇಕು. ಇಲ್ಲವಾದಲ್ಲಿ ಅವುಗಳು ಇಟ್ಟಲ್ಲಿಯೇ ಹಾಳಾಗಿ ಹೋಗುತ್ತವೆ. ಆದರೆ ಬಹುಕಾಲದವರೆಗೂ ಹಾಳಾಗದಿರುವ ಪದಾರ್ಥವೆಂದರೆ ಅಕ್ಷತೆ ಮಾತ್ರ. ಕಾರ್ಯಕ್ರಮದ ಪ್ರಭಾವವು ಬಹುದಿನಗಳ ಕಾಲ ಇರಲಿ ಎನ್ನುವ ಉದ್ದೇಶದಿಂದ ಮನೆಯಲ್ಲಿಯೇ ಇಟ್ಟುಕೊಳ್ಳುವ ಅಭ್ಯಾಸವನ್ನು ಬಹುತೇಕರು ಇಟ್ಟುಕೊಂಡಿದ್ದೇವೆ. ಈ ದೃಷ್ಟಿಯಿಂದ ನೋಡಿದಾಗ ಅಕ್ಷತೆಯು ದೇವರ ಹಾಗು ನಮ್ಮ ಮಧ್ಯ ನಡೆಯುವ ಭಕ್ತಿಯ ಸಂವಹನಕ್ಕೆ ಒಂದು ದ್ಯೋತಕ (ಟೋಕನ್) ಎನ್ನಬಹುದು.
ಧಾನ್ಯವೆಂದರೆ ತೊಗರಿ, ಉದ್ದಿನಂತಹ ಬೇಳೆಧಾನ್ಯಗಳನ್ನು ಬಳಸದೆ ಅತಿ ಪುಷ್ಟಿದಾಯಕವಾದ ಧಾನ್ಯವನ್ನೇ ಅಕ್ಷತೆಗಾಗಿ ಪರಿಗಣಿಸಿರುವುದು ಗಮನಾರ್ಹವಾದ ವಿಷಯ. ಪ್ರಾಚೀನರು ಧಾನ್ಯಗಳ ರಾಜನೆನಿಸಿದ ಯವ(ಬಾರ್ಲಿ)ವನ್ನು ಮಂತ್ರಾಕ್ಷತೆಗಾಗಿ ಆಯ್ಕೆ ಮಾಡಿದ್ದನ್ನು ನಾವು ಶಾಸ್ತ್ರಗ್ರಂಥಗಳಲ್ಲಿ ನೋಡುತ್ತೇವೆ (ಯವೋಸಿ ಧಾನ್ಯರಾಜೋ ವಾ ವಾರುಣೋ ಮಧುಸಂಯುತಃ….). ಕಾಲಕ್ರಮದಲ್ಲಿ ಮತ್ತು ದಕ್ಷಿಣದೇಶಗಳಲ್ಲಿ ಬಾರ್ಲಿಯ ಕೃಷಿಯು ಇಲ್ಲದ ಪ್ರದೇಶಗಳಲ್ಲಿ ಗೋಧಿ, ಭತ್ತ ಅಥವಾ ಅಕ್ಕಿಗಳು ಅಕ್ಷತೆಯಾಗಿ ಬಳಕೆಗೆ ಬಂದಿವೆ. ಪ್ರಸಕ್ತ ಕಾಲದಲ್ಲಿ ನಾವೆಲ್ಲರೂ ಅಕ್ಕಿಯಿಂದ ತಯಾರಿಸಿದ ಅಕ್ಷತೆಯನ್ನೇ ಬಳಸುತ್ತಿದ್ದೇವೆ. ಅಕ್ಕಿಯದೇ ಮತ್ತೊಂದು ರೂಪವಾದ ಲಾಜಾ (ಭತ್ತದ ಅರಳು) ಕೂಡ ಬಳಕೆಯಲ್ಲಿದೆ. ಆದರೆ ಅದು ಕಡಿಮೆ. (ಉಡುಪಿಯಲ್ಲಿ ಭತ್ತದ ಅರಳನ್ನು ಎರಚುತ್ತಾ ಇತರ ಮಠಗಳ ಶ್ರೀಗಳವರನ್ನು ಸ್ವಾಗತಿಸುವುದಿಲ್ಲವೇ, ಅದೇ ಇದು)
ಧಾನ್ಯವು ಯಾವುದೇ ಇರಲಿ ಅವುಗಳು ತುಂಡಾಗದೆ ಇರುವುದೇ ಅಕ್ಷತೆಗಾಗಿ ಅವುಗಳಿಗೆ ಇರಬೇಕಾದ ಮೊದಲ ಅರ್ಹತೆ. ತುಂಡಾಗದಿರುವುದೇ ಅಕ್ಷತೆಯ ಮೊದಲ ಲಕ್ಷಣ. ಇತರ ಲಕ್ಷಣಗಳನ್ನು ಈ ಕೆಳಗಿನ ಶ್ಲೋಕವು ವಿವರಿಸುತ್ತದೆ.
ಅಕ್ಷತಾನ್ ಧವಲಾನ್ ದಿವ್ಯಾನ್ ಶಾಲೇಯಾನ್ ತಂಡುಲಾನ್ ಶುಭಾನ್ |
ಹರಿದ್ರಾಚೂರ್ಣ ಸಂಯುಕ್ತಾನ್ ಸಂಗೃಹ್ಣ ಗಣಾಧಿಪ ||
(ಈ ರೀತಿಯಾದ ಅನೇಕ ನಿರ್ದೇಶನಗಳು ನಮಗೆ ವಿವಿಧ ಪೂಜಾಕ್ರಮಗಳಲ್ಲಿ ಕಂಡು ಬರುತ್ತವೆ. )
ತುಂಡಾಗದಿರುವ, ಬಿಳಿಯವರ್ಣದ, ತುದಿಯಲ್ಲಿ ಕವಚವನ್ನೂ ಹೊಂದಿರುವ, ಉಜ್ವಲವಾಗಿರುವ ಶುಭಕರವಾದ ಅಕ್ಕಿಯನ್ನು ಅಕ್ಷತೆಯರೂಪದಲ್ಲಿ ಪೂಜೆಗೆ ಬಳಸಬೇಕೆಂಬುದು ಶ್ಲೋಕದ ಮೊದಲಾರ್ಧದಲ್ಲಿ ನಮಗೆ ತಿಳಿಯುತ್ತದೆ.
ಶ್ಲೋಕದ ಎರಡನೆಯ ಪಾದದಲ್ಲಿ ಬಹುಸ್ವಾರಸ್ಯವೊಂದು ಸೇರಿಕೊಂಡು ಮೂರು ವಿಭಿನ್ನವಾದ ಸಂಪ್ರದಾಯಗಳಿಗೆ ಕಾರಣವಾಗಿ ಬಿಟ್ಟಿದೆ.
’ಹರಿದ್ರಾಚೂರ್ಣ’ ಮತ್ತು”ಸಂಯುಕ್ತಾನ್’ ಎನ್ನುವ ಎರಡು ಶಬ್ದಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಬಹುದು.
ಸಂಸ್ಕೃತದ ಹರಿದ್ರಾ ಎಂಬ ಶಬ್ದಕ್ಕೆ ಕನ್ನಡದಲ್ಲಿ ಅರಿಷಿಣ ಎಂಬ ಒಂದೇ ಅರ್ಥವಿದೆ. ಚೂರ್ಣ ಎನ್ನುವ ಶಬ್ದಕ್ಕೆ ಪುಡಿ ಮತ್ತು ಸುಣ್ಣ ಎನ್ನುವ ಎರಡು ಅರ್ಥಗಳಿವೆ. ಈ ಮೂರೂ ಶಬ್ದಗಳನ್ನು ಸಂಯುಕ್ತಾನ್ ಎನ್ನುವ ಶಬ್ದದೊಂದಿಗೆ ಸೇರಿಸಿ ಈ ಮೂರು ವಿಧದಲ್ಲಿ ಅರ್ಥವನ್ನು ಮಾಡಿಕೊಳ್ಳಬಹುದು.
1) ಹರಿದ್ರಾ = ಅರಿಷಿನ, ಚೂರ್ಣ = ಸುಣ್ಣ, ಸಂಯುಕ್ತಾನ್ = ಸೇರಿಸಲ್ಪಟ್ಟ; ಅಂದರೆ ಅರಿಶಿನ ಮತ್ತು ಸುಣ್ಣದೊಂದಿಗೆ ಮಿಶ್ರಮಾಡಲ್ಪಟ್ಟ ಅಕ್ಕಿಯ ಕಾಳುಗಳು.
2) ಹರಿದ್ರಾಚೂರ್ಣ = ಅರಿಷಿನಪುಡಿ, ಸಂಯುಕ್ತಾನ್ = ಸೇರಿಸಲ್ಪಟ್ಟ; ಅಂದರೆ ಅರಿಷಿನದಪುಡಿಯೊಂದಿಗೆ ಸೇರಿಸಲ್ಪಟ್ಟ ಅಕ್ಕಿಯ ಕಾಳುಗಳು.
3) ಹರಿದ್ರಾ + ಚೂರ್ಣಸಂಯುಕ್ತಂ = ಅರಿಷಿನ ಮತ್ತು ಸುಣ್ಣದ ಮಿಶ್ರಣವೆಂದರೆ ಕುಂಕುಮ. ಕುಂಕುಮದೊಂದಿಗೆ ಮಿಶ್ರ ಮಾಡಲ್ಪಟ್ಟ ಅಕ್ಕಿಯ ಕಾಳುಗಳು.
ಈಗ ಅಕ್ಷತೆಯ ಮೂಲದ್ರವ್ಯಗಳ ಬಗೆಗೆ ನಮಗೆ ಸ್ವಲ್ಪಮಟ್ಟಿಗೆ ಅರ್ಥವಾದಂತೆ ಆಯಿತು. ನುಚ್ಚಾಗಿರದ ಮತ್ತು ಶುಭ್ರಬಿಳಿವರ್ಣದ ಅಕ್ಕಿಯನ್ನು …
ಅ) … ನೀರಿನಲ್ಲಿ ಅರಿಷಿಣಪುಡಿ ಹಾಕಿ ಆ ಮಂದವಾದ ದ್ರವಕ್ಕೆ ಚೂರು ಸುಣ್ಣವನ್ನು ಸೇರಿಸಿದರೆ ಅದು ರಕ್ತವರ್ಣಕ್ಕೆ ತಿರುಗುತ್ತದೆ. ಈ ರಕ್ತವರ್ಣದ ದ್ರವವನ್ನು ಮೇಲೆ ಹೇಳಿದಂತಹ ಉತ್ತಮ ಅಕ್ಕಿಯೊಂದಿಗೆ ಮಿಶ್ರಣ ಮಾಡುವುದು. ನಂತರ ಅದನ್ನು ನೆರಳಿನಲ್ಲಿ ಒಣಗಿಸಿಕೊಳ್ಳಬೇಕು. ಇದು ಅಕ್ಷತೆ ತಯಾರಿಕೆಯ ಒಂದು ವಿಧಾನ. ಈ ಸಂಪ್ರದಾಯವನ್ನು ರಾಯರಮಠದಲ್ಲಿ ಮಾತ್ರವೇ ಬಳಸುತ್ತಾರೆ.
ಆ) … ಉಜ್ವಲವಾದ ಹಳದಿವರ್ಣದ ಅಕ್ಷತೆಯನ್ನು ತಯಾರಿಸುವುದು ಒಂದು ವಿಧಾನ. ಸಾಮಾನ್ಯವಾಗಿ ಅರಿಷಿನದ ಪುಡಿಯು ಅಕ್ಕಿಯೊಂದಿಗೆ ಚೆನ್ನಾಗಿ ಮಿಶ್ರಣವಾಗಲು ತುಪ್ಪವನ್ನು ಬೆರೆಸುತ್ತಾರೆ. ತುಪ್ಪ, ಅರಿಷಿಣ ಹಾಗು ಅಕ್ಕಿ ಇವುಗಳನ್ನು ಬೆರೆಸಿ ತಂಪುಗಾಳಿಯಲ್ಲಿ ಆರಿಸಿದರೆ ಈ ಅಕ್ಷತೆಯು ಸಿದ್ಧವಾಗುತ್ತದೆ. ತಿರುಮಲೆಯ ಶ್ರೀನಿವಾಸನ ಕಲ್ಯಾಣೋತ್ಸವದಲ್ಲಿ, ಮದುವೆ ಮನೆಗಳಲ್ಲಿ, ವ್ಯಾಸರಾಜಮಠದಲ್ಲಿ, ಬಾಳಗಾರು ಮಠದಲ್ಲಿ, ಅದಮಾರು ಮಠದಲ್ಲಿ (ಬಹುತೇಕ ಮಠಗಳಲ್ಲಿ) ಈ ವಿಧಾನದಲ್ಲಿ ಅಕ್ಷತೆಯನ್ನು ಸಿದ್ಧಪಡಿಸುತ್ತಾರೆ.
ಇ) … ಪರಿಶುದ್ಧವಾದ ಕುಂಕುಮವು ಅರಿಷಿನ ಹಾಗು ಸುಣ್ಣವನ್ನು ಬೆರೆಸಿ ಸಿದ್ದಪಡಿಸಿದ ಒಂದು ಉತ್ಪನ್ನವಷ್ಟೇ. ಕುಂಕುಮವನ್ನು ಶುಭವಾದ ಅಕ್ಕಿಯೊಡನೆ ಮಿಶ್ರಮಾಡಿಯೂ ಅಕ್ಷತೆಯನ್ನು ತಯಾರಿಸಿಕೊಳ್ಳಬಹುದು. ಕುಂಕುಮವು ಅಕ್ಕಿಯೊಂದಿಗೆ ಸರಿಯಾಗಿ ಮಿಶ್ರವಾಗಲು ಕೆಲವರು ತುಪ್ಪವನ್ನು ಇನ್ನೂ ಕೆಲವರು ಎಳ್ಳೆಣ್ಣೆಯನ್ನು ಉಪಯೋಗಿಸುತ್ತಾರೆ. ಈ ರೀತಿಯಾದ ಸ್ವಚ್ಛಕುಂಕುಮ ಮಿಶ್ರಿತ ಅಕ್ಷತೆಯ ತಯಾರಿಕೆಯ ವಿಧಾನವು ಪಲಿಮಾರು ಮಠ, ಉತ್ತರಾದಿ ಮಠ ಹಾಗು ಬಹುತೇಕ ಎಲ್ಲರ ಮನೆಗಳಲ್ಲಿ ಸಂಪ್ರದಾಯವಾಗಿದೆ.
ಇದೆಲ್ಲ ಅಕ್ಷತೆಯ ಮಾತಾಯಿತು. ಇನ್ನು ಈ ಅಕ್ಷತೆಯು ಮಂತ್ರಾಕ್ಷತೆಯಾಗುವುದು ಹೇಗೆ ಎನ್ನುವುದನ್ನು ನೋಡೋಣ.
ಮೇಲೆ ಹೇಳಿದ ರೀತಿ ತಯಾರಾದ ಅಕ್ಷತೆಗಳನ್ನು ವೇದವಿದರಾದವರು ತಮ್ಮ ಕೈಮುಷ್ಟಿಯಲ್ಲಿ ಹಿಡಿದುಕೊಂಡು, ವೇದಮಂತ್ರಗಳನ್ನು ಅನುಸಂಧಾನಪೂರ್ವಕವಾಗಿ ಹೇಳುತ್ತಾ ಅಭಿಮಂತ್ರಿಸಬೇಕು. ಆಗ ಅದು ಮಂತ್ರಾಕ್ಷತೆಯಾಗುತ್ತದೆ. ಮಠಗಳಲ್ಲಿ ಹೀಗೆ ಹಲವಾರು ಬ್ರಾಹ್ಮಣರಿಂದ ಅಭಿಮಂತ್ರಣಗೊಂಡ ಅಕ್ಷತೆಗಳನ್ನು ಆಯಾ ಪೀಠಾಧಿಪತಿಗಳ ಮುಂದಿರುವ ಅಕ್ಷತೆಯ ಪಾತ್ರೆಯಲ್ಲಿ ಹಾಕಲಾಗುತ್ತದೆ, ಅದನ್ನು ಶ್ರೀಗಳವರು ಮತ್ತೊಮ್ಮೆ ತಾವೂ ಬೀಜಾಕ್ಷರಗಳಿಂದ ಅಭಿಮಂತ್ರಣ ಮಾಡುತ್ತಾರೆ.ಐಲ್ಲಿಗೆ ಇದು ಮಂತ್ರಾಕ್ಷತೆಯಾಗುತ್ತದೆ. ಇವೇ ಮಂತ್ರಾಕ್ಷತೆಗಳನ್ನೇ ನಾವೆಲ್ಲಾ ಸ್ವೀಕಾರ ಮಾಡುವುದು.
ಕೆಲವು ವಿಧಿ-ನಿಷೇಧಗಳು :-
ರಕ್ತವರ್ಣ, ಕುಂಕುಮವರ್ಣ, ಹಳದಿ ಬಣ್ಣ ಮತ್ತು ಬಿಳಿಯ ಬಣ್ಣದ ಅಕ್ಷತೆಗಳು ಮಾತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಕೆಯಾಗಬೇಕು. ಇತರ ವರ್ಣದ ಅಕ್ಷತೆಗಳು (ಉದಾ : ಕಪ್ಪು, ನೀಲಿ) ಕೆಟ್ಟ ಕೆಲಸಗಳಿಗಾಗಿ ಬಳಕೆಯಾಗುತ್ತವೆ.
ಒಮ್ಮೆ ಹಿರಿಯರಿಂದ ಸ್ವೀಕರಿಸಲ್ಪಟ್ಟ ಮಂತ್ರಾಕ್ಷತೆಯನ್ನು ಪುನಃ ದೇವತಾಕಾರ್ಯಗಳಿಗೆ ಬಳಸಬಾರದು. ಪೂಜೆಗೆಂದೇ ಪ್ರತ್ಯೇಕವಾಗಿಟ್ಟ ಅಕ್ಷತೆಗಳನ್ನೇ ಬಳಸಬೇಕು. ಇದನ್ನು ಮೀಸಲು ಮಂತ್ರಾಕ್ಷತೆ ಎನ್ನುತ್ತಾರೆ.
ಶ್ರಾದ್ಧದಲ್ಲಿ ಬಿಳಿಯ ಮಂತ್ರಾಕ್ಷತೆಯನ್ನು ಮಾತ್ರವೇ ಬಳಸಬೇಕು. ಇತರ ಬಣ್ಣದಅಕ್ಷತೆಗೆ ಅವಕಾಶವಿಲ್ಲ. ಬಿಳಿ ಅಕ್ಕಿಯನ್ನು ಚೂರು ನೀರಿನಲ್ಲಿ ಮಿಶ್ರಿಸಿ ಬಳಸಿಕೊಳ್ಳಬೇಕು.
ಮದುವೆ, ಮುಂಜಿಗಳಲ್ಲಿ ಬಳಸಬೇಕಾದ ಅಕ್ಷತೆಯನ್ನೂ ದ್ವಿಜರಿಂದ ಅಭಿಮಂತ್ರಿಸಿಯೇ ಬಳಸಬೇಕು.
ಶುಭಕಾರ್ಯಗಳಲ್ಲಿ ರಕ್ತವರ್ಣ / ಹಳದಿ / ಕುಂಕುಮವರ್ಣದ ಮಂತ್ರಾಕ್ಷತೆಯನ್ನು ಮಾತ್ರವೇ ವಧೂವರರ ಅಥವಾ ವಟುವಿನ ಮೇಲೆ ಹಾಕಬೇಕೇ ಹೊರತು ನೀಲಿ, ಹಸಿರು, ಬಿಳಿ ಹೀಗೆ ಬಗೆ ಬಗೆಯ ವರ್ಣದ ಅಕ್ಷತೆಗಳನ್ನು ಸುರಿಯಬಾರದು. ಇತ್ತೀಚಿನ ಹುಚ್ಚು ಆಗಿರುವ ಥರ್ಮಾಕೋಲಿನ ಗುಂಡುಗಳು, ಢಬ್ ಎಂದು ಸಿಡಿಯುವ ಬಣ್ಣ ಬಣ್ಣದ ಕಾಗದಗಳನ್ನೂ ಬಳಸಲೇ ಬಾರದು. ಬಣ್ಣ ಬಣ್ಣದ ಅಕ್ಷತೆಗಳು ಪಿಶಾಚಕೃತ್ಯಗಳನ್ನು ಮಾಡುವಲ್ಲಿ ಬಳಕೆಯಾಗುತ್ತದೆ. ಇನ್ನು ಬೆಂಡಿನ ಗುಂಡು ಮತ್ತು ಬಣ್ಣ ಬಣ್ಣದ ಕಾಗದಗಳಂತೂ ಕಸವೇ ಹೌದು. ವಧೂವರರ / ವಟುವಿನ ಜೀವನವು ಮಂಗಲಮಯವಾಗಿರಲಿ ಎಂದು ಮಂತ್ರಾಕ್ಷತೆಗಳಿಂದ ಹಾರೈಸಬೇಕೇ ಹೊರತು ಅವರ ಮೈಮೇಲೆ ಕಸವನ್ನು ಎರಚುವುದು ಎಷ್ಟು ಸರಿ? ಕಸವನ್ನು / ಮಣ್ಣನ್ನು ಎರಚುವುದು ಬೀದಿ ಜಗಳಗಳಲ್ಲಿ ಮಾಡುವ ಕ್ಷುಲ್ಲಕ ಕೆಲಸ. ಇದು ಕೂಡ ಅದಕ್ಕೇ ಸಮ.
ತಿಳಿದುಕೊಳ್ಳಲೇಬೇಕಾದದ್ದು :
ಮಂತ್ರಾಕ್ಷತೆಗೆ ಶ್ರೀಲಕ್ಷ್ಮೀದೇವಿಯೇ ಅಭಿಮಾನಿನಿಯು. ಲಕ್ಷ್ಮೀದೇವಿಯು ಕೇವಲ ಸಂಪತ್ತಿಗೆ ಮಾತ್ರವೇ ದೇವತೆಯಲ್ಲ. ಜ್ಞಾನವೂ ಆಕೆಯ ಮೂಲಕವಾಗಿ ನಮಗೆ ಹರಿದುಬರಬೇಕು. ಜ್ಞಾನವೇ ದೊಡ್ಡ ಸಂಪತ್ತು. ನಾವು ಮಂತ್ರಾಕ್ಷತೆಯನ್ನು ಧಾರಣೆಮಾಡುವಾಗ ಈ ರೀತಿಯಾಗಿಯೇ ಅನುಸಂಧಾನ ಮಾಡೋಣ. ತನ್ಮೂಲಕ ಲಕ್ಷ್ಮೀವರನ ಕೃಪೆಯಲ್ಲಿಯೇ ಉಳಿಯೋಣ.
ಕೊನೆಯದಾಗಿ : ಮುದ್ರೆ, ಅಕ್ಷತೆ-ಅಂಗಾರ, ಗೋಪೀಧಾರಣೆಯ ಕ್ರಮಗಳಂತೆ ಮಂತ್ರಾಕ್ಷತೆಯ ತಯಾರಿಕಾ ವಿಧಾನವು ಕೂಡ ಒಂದು ಶಾಸ್ತ್ರೋಕ್ತ ಸಂಪ್ರದಾಯವು. ಪ್ರತೀ ಮಠವೂ ತನ್ನದೇ ಆದ ಕ್ರಮವನ್ನು ಅನುಸರಿಸುವುದು. ಶಿಷ್ಯವರ್ಗದವರು ಎಲ್ಲವನ್ನೂ ಗೌರವಿಸಬೇಕೇ ಹೊರತು ನಮ್ಮದೇ ಉತ್ತಮ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಹಿರಿಯರು ಮಾಡಿಕೊಟ್ಟದ್ದನ್ನು ಅನುಸರಿಸೋಣ. ಅವರ ಕೃಪೆಗೆ ಪಾತ್ರರಾಗೋಣ.
ಶ್ರೀಶೋಭನ ವರ್ಷದ ಪುರುಷೋತ್ತಮನ ತಿಂಗಳಿನ ಈ ಐದನೆಯ ತುಳಸಿಯು ಶ್ರೀಹರಿಗರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.