ವೈದ್ಯನಿಗೇ ಅಂಗಳದೊಳು ಅನ್ನ

ಶ್ರೀಪುರುಷೋತ್ತಮನಿಗೊಂದು ಮಾಲೆ – ನಾಕನೆಯ ತುಳಸಿ.
4. ವೈದ್ಯನಿಗೆ ಅಂಗಳದಲ್ಲಿ ಅನ್ನ.
ಪ್ರಸಿದ್ಧ ಐತಿಹಾಸಿಕ ಸ್ಥಳ ಬದಾಮಿಯ ಹತ್ತಿರ ಆಲೂರು ಎಂಬ ಒಂದು ಪಟ್ಟಣವಿದೆ. ಈ ಪಟ್ಟಣದ ಹೊರಗೆ ಮಲಪ್ರಭಾ ಹೊಳೆಯು ಹರಿಯುತ್ತದೆ. ಹೊಳೆಯ ಸ್ನೇಹದಿಂದಾಗಿ ಈ ಆಲೂರಿಗೆ ಹೊಳೆ ಆಲೂರು ಎಂದೇ ಹೆಸರು. ಸಧ್ಯಕ್ಕೆ ಗದಗ ಜಿಲ್ಲೆಯ ರೋಣ ತಾಲ್ಲೂಕಿಗೆ ಸೇರಿದೆ. ಪಟ್ಟಣವು ಪುಟ್ಟದು. ಆದರೆ ಸಾರಸ್ವತ ಪ್ರಪಂಚಕ್ಕೆ ಕೊಟ್ಟಿರುವ ಕೊಡುಗೆ ಬಹಳ ದೊಡ್ಡದು. ಕನ್ನಡ ಕುಲಪುರೋಹಿತರಾದ ಆಲೂರು ವೇಂಕಟರಾಯರು ಇದೇ ಊರಿನವರು. ಪಂಚಮುಖೀ ಎಂಬ ದೊಡ್ಡ ವಿದ್ವಾಂಸರ ಮನೆತನದ ಮೂಲವೂ ಇದೇ ಪರಿಸರ. ಮೂರನೆಯದಾಗಿ ವೈದ್ಯ ಎಂಬ ಮತ್ತೊಂದು ಮನೆತನವು ಈ ಊರಿನ ಕೊಡುಗೆ. ಹತ್ತಿರದ ಆಚಾರ ಕೊಪ್ಪ ಎನ್ನುವ ಗ್ರಾಮ ಇವರ ಮೂಲ.
ಈ ವೈದ್ಯ ಮನೆತನದಲ್ಲಿ “ವಿಠೋಬಾಚಾರ್ಯ” ಎಂಬ ಆಧ್ಯಾತ್ಮಜೀವಿಯ ಹುಟ್ಟು ಆಯಿತು. ದೊಡ್ಡ ಪ್ರತಿಭಾಶಾಲಿಯಾದವರು ಇವರು. ಮನೆತನದ ವೃತ್ತಿಯಾದ ಆಯುರ್ವೇದದೊಂದಿಗೆ ಕನ್ನಡ, ಸಂಸ್ಕೃತ, ಆಂಗ್ಲಭಾಷೆ, ಆಗಿನ ಸರ್ಕಾರಿ ಭಾಷೆಯಾದ ಪರ್ಶಿಯನ್ ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪಾಂಡಿತ್ಯವಿತ್ತು. ಆಶುಕವಿಗಳಿವರು. ಜೊತೆಗೆ ಒಳ್ಳೆಯ ಗಣಿತಜ್ಞರು ಕೂಡಾ. ನಿತ್ಯ ಮನೆಯಲ್ಲಿ ಇವರಿಂದ ಔಷಧೋಪಚಾರ ಪಡೆಯಲು ಬಂದವರದು ದೊಡ್ಡ ಸಾಲು. ಅವರ ನಂತರ ಇವರ ಸಾಹಿತ್ಯಿಕ ಚಟುವಟಿಕೆಯ ಅಭಿಮಾನಿಗಳು. ಇವರಲ್ಲಿ ಬಹುತೇಕರು ಇವರ ಮನೆಯಲ್ಲಿಯೇ ಊಟ ಮಾಡುವವರು. ಅತ್ಯಂತ ಒಳ್ಳೆಯ ವ್ಯಕ್ತಿತ್ವ. ಉದಾರಿಗಳು. ದೊಡ್ಡ ಉಪಕಾರಿಗಳು ಆಗಿದ್ದರೂ. ಇಷ್ಟೆಲ್ಲ ಇದ್ದೂ ಕೂಡ ಇವರ ಒಳಗಿನ ಅಧ್ಯಾತ್ಮಕ್ಕೆ ಬಹುಕಾಲ ಬೆಳಕೇ ಬಿದ್ದಿರಲಿಲ್ಲ.
ಅದ್ಭುತ ಕೈಗುಣವುಳ್ಳ ಇವರಿಗೇನೆ ಒಮ್ಮೆ ಹೊಟ್ಟೆ ನೋವು ಪ್ರಾರಂಭವಾಯಿತು. ಇದಕ್ಕೆ ತಾವೆ ಔಷಧೋಪಚಾರ ಮಾಡಿಕೊಂಡರು. ಸರಿಹೋಗಲಿಲ್ಲ. ಏನು ತಿಂದರೂ ವಾಂತಿಯಾಗುವ ಹಂತಕ್ಕೆ ಬಂದು ಮುಟ್ಟಿತು. ಹೀಗಿದ್ದೂ ಇವರಿಗೆ ತಮ್ಮ ವೈದ್ಯದ ಮೇಲೆ ಅಸೀಮವಾದ ಭರವಸೆ.. ಗುಣವಾಗುವುದೆಂದು ನಂಬಿಯೇ ಇದ್ದರವರು. ಆದರೆ ಕ್ರಮೇಣ ನಂಬಿಕೆಯ ಬುನಾದಿ ಅಲುಗಾಡತೊಡಗಿತು. ಹೊಟ್ಟೆ ನೋವಿಗೆ ಬೇರೆಲ್ಲ ಔಷಧವನ್ನು ಕೂಡಾ ಪ್ರಯತ್ನಿಸಿದರು. ಅದೂ ನಡೆಯಲಿಲ್ಲ.
ಒಮ್ಮೆ ಇವರ ಮಗಳು ಕೇಳಿದಳು. ನೂರಾರು ಜನಕ್ಕೆ ವೈದ್ಯ ಮಾಡುವ ನಿಮಗೇನೆ ಯಾಕೆ ಹೀಗೆ? ನಿಮ್ಮ ಗುಣವೂ ಸಾತ್ವಿಕವಾದದ್ದೇ. ಆದರೂ ಯಾಕೆ ಈ ಪರೀಕ್ಷೆ ಮಾಡ್ತಾ ಇದ್ದಾರೆ ರಾಯರು ಅಂತ. ಈ ಪ್ರಶ್ನೆಯೇ ವಿಠೋಬಾಚಾರ್ಯರ ಆಧ್ಯಾತ್ಮದ ದೀಪವನ್ನು ಬೆಳಗಿಸುವ ಬತ್ತಿಯಾಗಿಬಿಟ್ಟಿತು. ಈ ರೋಗಕ್ಕೆ ಔಷಧವನ್ನು ಕೊಡುವುದು ದೊಡ್ಡ ವೈದ್ಯರೇ! ಮಂತ್ರಾಲಯದಲ್ಲಿರುವವರು ಎಂದು ಈ ವೈದ್ಯರಿಗೆ ಆಗ ಅರಿವಾಯಿತು. ಮಹಾಪ್ರಭುಗಳ ಸೇವೆ ಮಾಡಿ ರೋಗದಿಂದ ಪಾರಾಗೋಣ ಎಂದು ಮಂತ್ರಾಲಯಕ್ಕೆ ಬಂದರು.
ಹೀಗೆ ಬಂದಾಗ ಅಲ್ಲಿ ಆರಾಧನೆಗೆ ನಾಲ್ಕಾರು ದಿನಗಳಿದ್ದವು.. ಸೇವೆಯನ್ನು ಪ್ರಾರಂಭ ಮಾಡಿದರು. ಸೇವೆ ಏನೋ ನಡೆಯಿತು. ಆದರ ಪ್ರಸಾದವನ್ನು ಕೂಡ ಹೊಟ್ಟೆಯು ಒಲ್ಲೆ ಎಂದು ಬಿಟ್ಟಿತು. ತಿಂದದ್ದೆಲ್ಲವೂ ವಾಂತಿಯಾಗಿ ಹೋಯಿತು. ಹೀಗೆ ಎರಡು ಮೂರು ದಿನಗಳಾದವು. ಆರಾಧನೆಯ ದಿನವಂತೂ ವೈದ್ಯರ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆದರೂ ಎಲ್ಲರೊಂದಿಗೆ ಊಟಕ್ಕೆ ಇವರೂ ಕುಳಿತರು. ಆದರೆ ಕರ್ಮವೋ ಏನೋ. ಬಡಿಸುವವನು ಎಲ್ಲರಿಗೂ ಬಡಿಸುತ್ತಾ ಇವರ ಎಲೆಯನ್ನು ಮಾತ್ರ ನಿರ್ಲಕ್ಷಿಸಿ ಹೋಗತೊಡಗಿದ. ಏನು ತಿಂದರೂ ವಾಂತಿಯಾಗುವುದು ಇವರಿಗೆ ಎಂಬ ವಿಚಾರವಿತ್ತೋ, ಅಥವಾ ಬೇಕು ಎಂತಲೇ ಹಾಗೆ ಮಾಡಿದನೋ ತಿಳಿಯದು. ಆದರೆ ಇದು ವೈದ್ಯರ ಮನೋಬಲದ ಮೇಲೆಯೇ ಪ್ರಹಾರವಾಗಿ ಹೋಯಿತು. ಆದರೂ ಕೇಳಿಯೇ ಹಸ್ತೋದಕವನ್ನು ಹಾಕಿಸಿಕೊಂಡರು. ಆದರೆ ಅದು ಕೂಡ ವಾಂತಿಯಾಗಿ ಹೋಯಿತು. ಅಲ್ಲಿಗೆ ವೈದ್ಯರ ಹೃದಯಕ್ಕೆ ಅರಿವಾಯಿತು. ಇದು ಈಗಿನ ರೋಗವಲ್ಲ. ಹಳೆಯ ಕರ್ಮ ಎಂಬುದು. ಆಗ ಆ ಹೃದಯವು ಗಟ್ಟಿಯಾಗಿ ಅಳುತ್ತಾ ರಾಯರಲ್ಲಿ ಕೇಳಿಕೊಂಡಿತು. ಇಷ್ಟೆಲ್ಲಾ ಜನರು ನಿನ್ನಲ್ಲಿ ಊಟ ಮಾಡುತ್ತಿದ್ದಾರೆ, ನಾನು ಮಾತ್ರ ಯಾಕೆ ಬೇಡವಾದೆ ನಿನಗೆ? ಕರುಣೆ ತೋರು. ನಿನ್ನ ಪ್ರಸಾದವನ್ನಾದರೂ ದಕ್ಕಿಸಿಕೊಳ್ಳುವ ಶಕ್ತಿಯನ್ನು ಕೊಡು ಎಂದು ಸಂಪೂರ್ಣವಾಗಿ ಶರಣಾಗತರಾಗಿಬಿಟ್ಟರು. ಈ ಶರಣಾಗತಿ ಹೊಂದಿದ್ದೇ ತಡ. ಅವರೊಳಗಿರುವ ಅಧ್ಯಾತ್ಮಶಕ್ತಿಯು ಜಾಗೃತವಾಯಿತು. ಇಲ್ಲಿನವರೆಗೆ ಸಾಧಾರಣ ಕವಿತಗಳನ್ನು ರಚಿಸಿದ್ದ ಅವರ ಮನಸ್ಸು ಈಗ ಆರ್ದ್ರವಾಗಿತು. ಆರ್ತವಾಗಿ ಕೈಯಲ್ಲಿ ಹರಿಗರ್ಪಿತವಾದ ಪ್ರಸಾದವನ್ನು ಹಿಡಿದುಕೊಂಡು “ ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ ಘನ್ನ ಶ್ರೀರಾಘವೇಂದ್ರ ಸಂಪನ್ನ” ಎಂಬ ಕೀರ್ತನೆಯು ಹೊರಹೊಮ್ಮಿತು.. ಈ ಕೀರ್ತನೆಯಲ್ಲಿ “ಲೌಕಿಕವೆಲ್ಲ ಸಾಕು, ನಿನ್ನ ಭಕ್ತರ ಪಾದದ ಧೂಳಿಯಲ್ಲಿ ನನಗೆ ಸ್ಥಾನವನ್ನು ಕೊಡು. ಶ್ರೀರಾಮದೇವರ ದರ್ಶನವನ್ನು ಮಾಡಿಸು” ಎಂಬ ಪ್ರಾಮಾಣಿಕತೆಯಿತ್ತು. ಗುರುಗಳು ಕರಗಲು ಈ ಪ್ರಾಮಾಣಿಕತೆಯು ಸಾಕಲ್ಲ!.
ವೈದ್ಯರು ಕೈಯಲ್ಲಿ ಹಿಡಿದ ಅನ್ನದಲ್ಲಿ ತತ್ವಾಭಿಮಾನಿ ದೇವತೆಗಳು ನೆಲೆಗೊಂಡರು. ಆ ಪ್ರಸಾದವನ್ನು ಶ್ರೀವೈಶ್ವಾನರನು ಒಪ್ಪಿಕೊಳ್ಳುವಂತೆ ಮಾಡಿಯೇ ಬಿಟ್ಟರು. ಅಂದಿನಿಂದ ವೈದ್ಯರು ಮಾಡಿದ ಊಟವು ವಾಂತಿಯಾಗದೆ ದೇಹಕ್ಕೆ ಸೇರತೊಡಗಿತು. ದೇಹಕ್ಕೆ ಸೇರಿದ್ದು ಪ್ರಸಾದವಾದ್ದರಿಂದ ವೈದ್ಯರ ಒಳಗಿದ್ದ ಅಧ್ಯಾತ್ಮದ ಜ್ಯೋತಿಯು ಪ್ರಖರವಾಗತೊಡಗಿತು. ಶ್ರೀರಾಯರ ಏಕಾಂತ ಭಕ್ತರ ವರ್ಗದಲ್ಲಿ ಇವರೂ ಸೇರಿಕೊಂಡರು.
ಹೀಗಿದ್ದೂ ಇವರ ಉದರ ಬೇನೆ ಸಂಪೂರ್ಣ ನಾಶವಾಗಲಿಲ್ಲ. ಇದಕ್ಕೆ ಮುಂದೆ ಅವರೇ ಒಮ್ಮೆ ಶ್ರೀರಾಯರಲ್ಲಿ ಪ್ರಾರ್ಥಿಸಿದಾಗ ಶ್ರೀರಾಯರು ಕನಸಿನ ಮೂಲಕ ಇದರ ಹಿಂದಿದ್ದ ಒಂದು ರಹಸ್ಯವನ್ನು ತಿಳಿಸಿ ನಿನ್ನ ಕುಕರ್ಮದ ಫಲ ಇದು. ಅನುಭವಿಸಲೇಬೇಕು ಎಂದು ಮನವರಿಕೆ ಮಾಡಿಕೊಟ್ಟರು. ವೈದ್ಯರು ಈ ಪ್ರಾರಬ್ಧವನ್ನು ಪ್ರಾಂಜಲವಾಗಿ ಒಪ್ಪಿಕೊಂಡೇ ತಮ್ಮ ಅಧ್ಯಾತ್ಮ ಸಾಧನೆಯನ್ನು ಮುಂದುವರೆಸಿದರು.
ವಿಠಲೇಶ ಎಂಬ ಅಂಕಿತವನ್ನು ಹೊಂದಿ ವೈದ್ಯರು ಅನೇಕ ಕೃತಿಗಳನ್ನು ರಚಿಸಿ ನಮಗೆಲ್ಲ ಕೊಡಮಾಡಿದ್ದಾರೆ. ಹೆಚ್ಚಿನವು ಶ್ರೀರಾಯರ ಕರುಣೆಯನ್ನು ಪ್ರಾರ್ಥಿಸುವ ಕೃತಿಗಳೇ ಅಗಿವೆ. ಅತ್ಯಂತ ಸುಪ್ರಸಿದ್ಧವಾದುದು ಧರೆಯೊದ್ಧಾರಕೆ ಮೆರೆವರು ಗುರುಗಳು ಎಂಬ ದೀರ್ಘವಾದ ಕೃತಿಯು. ಉತ್ತರ ಕರ್ನಾಟಕದಲ್ಲಂತೂ ಇದು ನಿತ್ಯದ ಪ್ರಾರ್ಥನೆಯಾಗಿದೆ. ಗುರುಪದಹಾರ ಎಂದು ಇದಕ್ಕೆ ಹೆಸರು. ಈ “ನಿನ್ನ ಅಂಗಳದೊಳಗೆ ಹಿಡಿಯನ್ನ ಹಾಕೋ” ಎಂಬ ಕೃತಿಯನ್ನು ಮಂತ್ರಾಲಯದ ಪ್ರಾಕಾರದಲ್ಲಿ ಆರಾಧನೆಯ ಅನ್ನದಾನವು ನಡೆಯುತ್ತಿರುವ ಸಂದರ್ಭದಲ್ಲಿ ಇಂದಿಗೂ ಧ್ವನಿವರ್ಧಕದ ಮೂಲಕ ಹಾಕುತ್ತಾರೆ.
ಪ್ರಾರಬ್ಧಗಳ ಪೊರೆಯು ಹರಿಯುವ ಸಮಯದಲ್ಲಿ ಅತೀವವಾದ ಕಷ್ಟಗಳಿಗೆ ಜೀವಿಯು ಗುರಿಯಾಗುತ್ತಾನೆ. ಸಾಧಕನಿದ್ದವನು ಈ ಕಷ್ಟಗಳನ್ನು ಗುರುಗಳ ಸಹಾಯದಿಂದ ದಾಟುತ್ತಾನೆ. ಶ್ರೀವಿಜಯದಾಸರು, ಶ್ರೀಜಗನ್ನಾಥದಾಸರೇ ಮೊದಲಾದವರು ಇಂತಹ ಸಾಧಕರು. ಈ ಸಾಧಕರ ದಾರಿಯನ್ನೇ ಹಿಡಿದವರು ಶ್ರೀವಿಠಲೇಶರು. ಇಂತಹವರ ಜೀವನ ನಮಗೆ ಆದರ್ಶವಾಗಬೇಕು. ಪ್ರಾರಬ್ಧಗಳಿಗೆ ಅಂಜದೆ ಸಾಧನೆಯನ್ನು ನಡೆಸಬೇಕು. ಶ್ರೀರಾಯರು ನಮ್ಮ ಮೊರೆಯನ್ನು ಖಂಡಿತವಾಗಿ ಪ್ರಾಣ-ರಾಮರಿಗೆ ತಲುಪಿಸುತ್ತಾರೆ.
ಶ್ರೀಮಂತ್ರಾಲಯ ಪ್ರಭುಗಳ ಅಂಗಳವೆಂದರೆ ಸುಮ್ಮನೆ ಒಂದು ಖಾಲಿ ಜಾಗವಲ್ಲ. ಅದು ಎಲ್ಲ ಹರಿದಾಸರ, ತತ್ವಾಭಿಮಾನಿ ದೇವತೆಗಳ ನಿತ್ಯ ಸಂಚಾರವಿರುವ ಕ್ಷೇತ್ರ. ಇಲ್ಲಿ ಹಿಡಿ ಅನ್ನ ಹಾಕೋ ಎಂದರೆ ಕೇವಲ ಊಟಕ್ಕೆ ಸೀಮಿತಗೊಳಿಸಿಕೊಳ್ಳಬಾರದು. ದಾಸರ ಆಶಯವು ಅಲ್ಲಿಗೆ ನಿಲ್ಲುವುದಿಲ್ಲ. ಅನ್ನವೆಂದರೆ ಜ್ಞಾನ ಎಂದೇ ಅನುಸಂಧಾನ ಮಾಡಬೇಕು. ಇದು ಆ ಕೀರ್ತನೆಯಲ್ಲಿ ಸುಪ್ತವಾಗಿದೆ. ನಾವು ಸಹ ಈ ಕೀರ್ತನೆಯನ್ನು ಅನುಸಂಧಾನದೊಂದಿಗೆ ಹಾಡುತ್ತ ರಾಯರಂಗಳದ ಅನ್ನವನ್ನು ಪಡೆಯೋಣ. ಮೂರೂ ವಿಧವಾದ ರೋಗಗಳಿಂದ ಪಾರಾಗೋಣ.
ವಿಠಲೇಶದಾಸರ ಮನೆತನದ ಹಿನ್ನೆಲೆ ವಿವರವನ್ನು ಕೊಟ್ಟಿದ್ದು ಈಗಿಲ್ಲದ ನನ್ನ ದೊಡ್ಡಪ್ಪ. ದಾಸರು ನನ್ನ ಅಜ್ಜನೊಂದಿಗೆ ಸಾಹಿತ್ಯಿಕ ಒಡನಾಟವನ್ನು ಇಟುಕೊಂಡಿದ್ದರು ಎನ್ನುವ ವಿಷಯ ನನಗೆ ಗೊತ್ತಾಗಿದ್ದು ಆಗಲೇ. ಈ ನಿನ್ನ ಅಂಗಳದೊಳಗೆ ಕೀರ್ತನೆಯ ಅರಿವನ್ನು ನನಗೆ ಮೂಡಿಸಿದ್ದು ಇತ್ತೀಚೆಗೆ ಹರಿಪದವನ್ನು ಸೇರಿದ ನಮ್ಮ ಪ್ರಯಾಗದ ಸ್ವಾಮಿಗಳು.
ನನ್ನ ಮಾಹಿತಿಯನ್ನು ಬಲಪಡಿಸಿದ್ದು ರಮಾಕಾಂತ ಮತ್ತು ವಿಜಯವಿಠಲರು. ಇವರಿಬ್ಬರಿಗೂ ಹರಿವಾಯುಗುರುಗಳ ಕೃಪೆಯು ಬಲಗೊಳ್ಳಲಿ. Daddal Ramakant Manvi Vijayavittala Vittala
ರಾಯರ ಅಂಗಳದಲ್ಲಿ ಅನ್ನವನ್ನು ಹಾಕಿಸಿಕೊಂಡವರ ಚಿತ್ರವನ್ನು ಕೊಟ್ಟಿದ್ದು ಮಿತ್ರನಾದ ಇನಾಂದಾರ್ ಸೀನ. Srinivas Inamdar
ಶ್ರೀಶೋಭನ ವರ್ಷದ ಪುರುಷೋತ್ತಮನ ತಿಂಗಳಿನ ಈ ನಾಲ್ಕನೆಯ ತುಳಸಿಯು ಶ್ರೀಹರಿಗರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.