ಚಿಂತ್ರವೇಲಿಯ ಚಿತ್ರಣ

ಶ್ರೀಹರಿವಾಯುಗುರುಭ್ಯೋ ನಮಃ

ಆಗಸ್ಟ್ ೮ರಿಂದ ನಮ್ಮ ಗುರುಗಳು ಚಾತುರ್ಮಾಸ್ಯ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಈ ಬಾರಿಯ ಅವರ ವ್ರತವು ಚಿಂತ್ರವೇಲಿ ಎನ್ನುವ ಸುಗ್ರಾಮದಲ್ಲಿ ನಡೆಯಲಿದೆ.

ಕನ್ನಡ ಮಾತನಾಡುವ ಜನರಿಂದ ಒಡಗೂಡಿದ ತೆಲಂಗಾಣದ ಪಲ್ಲೆ ಇದು. ಕನ್ನಡದವರು ಚಿಂತ್ರವೇಲಿಯೆಂದರೆ, ತೆಲುಗಿನವರು ಚಿಂತರೇವುಲ ಎಂಬರು. ಚಿಂತ ಎಂದರೆ ತೆಲುಗಿನಲ್ಲಿ ಹುಣಸೆಮರ. ರೇವು ಎಂದರೆ ಕನ್ನಡ ಮತ್ತು ತೆಲುಗೆರಡರಲ್ಲೂ ನದಿಯದಂಡೆ, ದೋಣಿಗಳು ನಿಲ್ಲುವ ಜಾಗ ಎಂದೇ ಅರ್ಥ. ಹುಣಸೆಮರಗಳಿಂದ ಕೂಡಿದ ರೇವು ಇದು. ರೇವು ಯಾವ ನದಿಯದ್ದು ಎಂದರೆ, ಕೃಷ್ಣಾನದಿಯದ್ದು ಎಂಬ ಉತ್ತರ.

ಇಲ್ಲಿ ಎರಡು ಮೂರು ಕಡೆ ದೋಣಿಗಳಿಗೆ ಲಂಗರು ಹಾಕುತ್ತಿದ್ದ ವ್ಯವಸ್ಥೆ ಇತ್ತೇನೋ ಹಿಂದೆ. ಹೀಗಾಗಿ ಮೂರು ಕಡೆ ರೇವು ಎನ್ನುವ ಹಳ್ಳಿಗಳಿವೆ. ಚಿನ್ನ ಚಿಂತರೇವುಲ, ರೇವುಲಪಲ್ಲಿ ಮತ್ತು ಪೆದ್ದಚಿಂತರೇವುಲ. ಈ ಕೊನೆಯ ಪೆದ್ದಚಿಂತರೇವುಲವೇ ಚಿಂತ್ರವೇಲಿ ಎಂದು ಪ್ರಸಿದ್ಧವಾದ ಸ್ಥಳವು. ಇಲ್ಲಿಯೇ ಮಂದಹಾಸೋಪೇತರಾದ ನಮ್ಮ ಗುರುಗಳು, ಶ್ರೀವಿದ್ಯಾಧೀಶತೀರ್ಥಶ್ರೀಪಾದರೂ ಈ ಬಾರಿಯ ನಾಲ್ಕುತಿಂಗಳ ವೇದವ್ಯಾಸಸಮಾರಾಧನೆಯನ್ನು ನಡೆಸಲಿದ್ದಾರೆ.

ಮಹಿಮೆಯಿಂದ ಇದು ಸುಗ್ರಾಮ. ಇತರ ಮೂಲಭೂತ ಸೌಲಭ್ಯಗಳ ದೃಷ್ಟಿಯಿಂದ ಬರೀ ಗ್ರಾಮವು. ಈ ಸ್ಥಳವನ್ನು ತಲುಪಲು ಡಾಮರು ರಸ್ತೆ ಉಂಟಷ್ಟೇ. ಆದರೆ ಅದು ಸುಸಜ್ಜಿತವಾದುದು ಅಲ್ಲ. ಇಲ್ಲಿಗೆ ನಿರಂತರವಾದ ಬಸ್ಸುಗಳ ಸಂಪರ್ಕವೂ ಇಲ್ಲ. ಹೊರಗಿನಿಂದ ಬಂದವರಿಗೆ ಗ್ರಾಮದಲ್ಲಿ ಉತ್ತಮವಾದ ವಸತಿ ಸೌಕರ್ಯಗಳೂ ಇಲ್ಲ.
ಸ್ವಾರಸ್ಯವೇನೆಂದರೆ ಇದಾವುದೂ ಇಲ್ಲವಾದ್ದರಿಂದಲೇ ಇದು ಸುಗ್ರಾಮವಾಗಿ ಇನ್ನೂ ಉಳಿದಿದೆ. ಜೊತೆಗೆ ಹೇರಳವಾಗಿ ಪ್ರಕೃತಿ ಸೌಂದರ್ಯವೂ ಇದೆ. ಕೃಷ್ಣಾನದಿಯ ನೀರಿನಿಂದ ಇಲ್ಲಿನ ಭೂಮಿಯು ನೀರಾವರಿ ಸೌಲಭ್ಯವನ್ನು ಪಡೆದು ಎಲ್ಲೆಡೆ ಹಸಿರನ್ನು ಹೊದ್ದುಕೊಂಡಿದೆ. ಮಳೆಗಾಲದಲ್ಲಿಯಂತೂ ನೆಲ್ಗದ್ದೆಗಳ ಮಧ್ಯ ನಡೆಯುವುದು ಒಂದು ನಲಿವಿನ ಚರ್ಯೆಯೇ ಸರಿ.

ಈಗ ಊರಿಗೆ ನಾಗರೀಕತನದ ಸೋಂಕುಗಳಾದ ಮೊಬೈಲ್ ಸಿಗ್ನಲ್, ರಾಜಕೀಯ, ಸ್ವಂತ ಮೋಟಾರು ವಾಹನಗಳು ಬಂದಿಳಿದಿವೆ. ಆದಾಗ್ಯೂ ಕಲಿಮಲವು ಇನ್ನೂ ಈ ಊರನ್ನು ಬಾಧಿಸಿಲ್ಲ. ಈ ಬಾಧೆಯಿಂದ ದೂರವಿರಲು ಬಲುಮುಖ್ಯ ಕಾರಣವಿದೆ. ಅದುವೆ ಇಲ್ಲಿರುವ ಶ್ರೀಶ್ರೀಪ್ರಾಣದೇವರ ಸನ್ನಿಧಿ. ಈ ಸನ್ನಿಧಿಯನ್ನು ಕರೆತಂದು ಇಲ್ಲಿರಿಸಿದವರು ಸಾಮಾನ್ಯರೇನಲ್ಲ. ಗಾಳಿದೇವನೇ ಇವರಲ್ಲಿ ನಿತ್ಯ ನೆಲೆನಿಂತವನು. ಶ್ರೀವ್ಯಾಸಪ್ರಭುಗಳೇ ಆ ಮಹಾನುಭಾವರು.

ಶ್ರೀವ್ಯಾಸರಾಯರು ಪ್ರಾಣಪ್ರತಿಷ್ಠೆಮಾಡಿದ ೭೩೨ ಹನುಮಂತನ ಸನ್ನಿಧಿಗಳಲ್ಲಿ ಚಿಂತ್ರವೇಲಿಯೂ ಒಂದು. ಸಾಸಿರ ಸಾಸಿರ ಜನರ ಕಡುನಂಬಿಕೆಯ ಗುಡಿಯಿದು. ಹಸಿರು ಗದ್ದೆಗಳು, ಹುಣಸೆ, ಅರಳೀ ಮರಗಳ ಮಧ್ಯದಲ್ಲಿ ಶ್ರೀಆಂಜನೇಯನ ಗುಡಿಯಿದೆ. ಯಾವಾಗಲೂ ತಂಪಿನಿಂದ ಕೂಡಿದ ತಾಣವಿದು. ಕೇವಲ ಮರಗಿಡಗಳಿಂದ ಆದ ತಂಪು ಮಾತ್ರವಲ್ಲ ಇದು. ಸಾಧಕರು ನೆಲೆನಿಂತ ಪ್ರಭಾವದಿಂದ ಉಂಟಾದ ತಂಪು ಎನ್ನುವುದೇ ಸೂಕ್ತ.

ರೇವುಪಟ್ಟವಿದು ಅಲ್ಲವೇ. ನದಿಯ ಮೂಲಕ ಹಿಂದೆ ಲೌಕಿಕರೂ ಅಲೌಕಿಕರೂ ಬಂದು ಹೋಗುವುದು ನಡೆದೇ ಇತ್ತು. ಲೌಕಿಕರು ಉಟ್ಟುಕೊಳ್ಳುವ ಬಟ್ಟೆಯನ್ನು ಹಿಡಿದು ಮಾರ ಬಂದರೆ, ಅಲೌಕಿಕರು ಆಧ್ಯಾತ್ಮದ ಬಟ್ಟೆಯನ್ನು ಹಿಡಿದು ಇಲ್ಲಿ ತಲುಪಿದವರು. (ಹಳೆಗನ್ನಡ, ಹಳೆಯ ಮರಾಠಿ ಮತ್ತು ತೆಲುಗಿನಲ್ಲಿ ಬಟ್ಟೆ ಎಂಬ ಪದಕ್ಕೆ ದಾರಿ ಎಂಬರ್ಥವಿದೆ). ಹೀಗೆ ಸಾಧನೆಯ ಬಟ್ಟೆಯನ್ನು ಹಾಕಿಕೊಂಡು ಮತ್ತು ಹಿಡಿದುಕೊಂಡು ಬಂದವರಲ್ಲಿ ಶ್ರೀಗೋಪಾಲದಾಸರೂ, ಶ್ರೀವ್ಯಾಸತತ್ವಜ್ಞರೂ, ಶ್ರೀಶೇಷದಾಸರೂ ಸಹ ಇದ್ದಾರೆ. ಶ್ರೀಶೇಷದಾಸರು ತಮ್ಮ ಹೆಚ್ಚಿನ ಸಾಧನೆಯನ್ನು ನಡೆಸಿದ ತಾಣವಿದು. ಈ ಸಾಧಕರ ಪಟ್ಟಿಗೆ ನಮ್ಮ ಗುರುಗಳೂ ಸೇರಿದ್ದಾರೆ ಎನ್ನುವುದು ನಮಗೆ ಸಂತಸವನ್ನು ತರುವ ವಿಷಯ. ಅಂದ ಹಾಗೆ ಈ ಕ್ಷೇತ್ರದಲ್ಲಿ ಇದು ಅವರ ಎರಡನೆ ಚಾತುರ್ಮಾಸ್ಯ. ಎಣೆಯಿಲ್ಲದ ಪುಣ್ಯಜೀವರು ನಮ್ಮ ಗುರುಗಳು.

🚌 ಹೇಗೆ ತಲುಪುವುದು?
ಈ ಗ್ರಾಮವು ಕರ್ಣಾಟಕ ಮತ್ತು ತೆಲಂಗಾಣರಾಜ್ಯಗಳ ಗಡಿಭಾಗದಲ್ಲಿರುವ ದೂರದ ಪ್ರದೇಶ. ತಲುಪುವುದು ಅಸಾಧ್ಯವೇನಲ್ಲ. ಸುಲಭವೇ ಆದರೂ ಒಂದು ಒಂದೇ ಏಟಿಗೆ ತಲುಪಲು ಸಾಧ್ಯವಿಲ್ಲ.

ಚಿಂತ್ರವೇಲಿಗೆ 14 ಕಿಮೀ ದೂರದಲ್ಲಿ ಗದ್ವಾಲ್ ಪಟ್ಟಣವಿದೆ. ಈ ಗದ್ವಾಲಿಗೆ ಬೆಂಗಳೂರು, ಮೈಸೂರು, ಚೆನ್ನೈ ಕಡೆಯಿಂದ ಅನೇಕ ರೈಲುಗಳ ಸಂಪರ್ಕವಿದೆ. ಗದ್ವಾಲ್ ತಲುಪಿ ಅಲ್ಲಿಂದ ಒಂದು ದೊಡ್ಡ ಆಟೋರಿಕ್ಷಾದ ಮೂಲಕ “ಪೆದ್ದಚಿಂತರೇವುಲ” ಗ್ರಾಮವನ್ನು ಸೇರಿಕೊಳ್ಳಬಹುದು.

ರಾಯಚೂರು ಮೂಲಕವೂ ಗದ್ವಾಲ್ ತಲುಪುವುದು ಇನ್ನೊಂದು ಮಾರ್ಗ. ರಾಯಚೂರಿನಿಂದ ಗದ್ವಾಲಿಗೆ ಅನೇಕ ಬಸ್ಸುಗಳಿವೆ.

ಮಂತ್ರಾಲಯಕ್ಕೆ ಬಂದು, ಅಲ್ಲಿಂದ ಬಸ್ಸಿನ ಮೂಲಕ ಗದ್ವಾಲ್ ತಲುಪಬಹುದು. ಆದರೆ ನೇರಬಸ್ಸುಗಳು ಕಡಿಮೆ. ಹೀಗಾಗಿ ಮಂತ್ರಾಲಯದಿಂದ ಒಂದು ಕ್ಯಾಬ್ ಮಾಡಿಕೊಂಡು ಚಿಂತ್ರವೇಲಿಗೆ ನೇರವಾಗಿ ಹೋಗಿ ಮರಳಿ ಮಂತ್ರಾಲಯಕ್ಕೆ ಬಂದು ಸೇರಬಹುದು.

🕍 ಚಿಂತ್ರವೇಲಿಗೆ ಸಮೀಪದಲ್ಲಿ ಏನೇನು ನೋಡಬಹುದು?
ಚಿಂತ್ರವೇಲಿಗೆ ಸಮೀಪದಲ್ಲಿ ಅನೇಕ, ಅನೇಕ, ಅನೇಕ ಕ್ಷೇತ್ರಗಳಿವೆ. ಧರೂರು ಪಾರ್ಥಸಾರಥಿಯ ನಿಲಯ, ಬೀಚುಪಲ್ಲಿ ಪ್ರಾಣದೇವರು, ಗದ್ವಾಲ್ ಚೆನ್ನಕೇಶವದೇವರು, ಆಲಂಪುರದ ಐತಿಹಾಸಿಕ ನವಬ್ರಹ್ಮದೇವಾಲಯ, ವೇಣಿಸೋಮಪುರದ ಶ್ರೀವ್ಯಾಸತತ್ವಜ್ಞರ ಸನ್ನಿಧಿ, ಮೊದಲಕಲ್ಲು ಬೇಟೆ ಶ್ರೀನಿವಾಸದೇವರು, ಉತ್ತನೂರು ಶ್ರೀಗೋಪಾಲದಾಸರ ಮನೆ, ಸಂಕಾಪುರ ಶ್ರೀಗೋಪಾಲದಾಸರ ಸಾಧನಾ ಕ್ಷೇತ್ರ, ಮಂತ್ರಾಲಯ ಎನ್ನುವ ಮಹಾಚುಂಬಕ ಕ್ಷೇತ್ರ, ಇನ್ನೂ ಸಮಯವಿದೆ ಎಂದಾದಲ್ಲಿ ನಿವೃತ್ತಿಸಂಗಮ ಎನ್ನುವ ಅಪರೂಪದ ಕ್ಷೇತ್ರ … ಹೀಗೆ ಏನೆಲ್ಲಾ ಇದೆ. ಹೋಗಿ ಬರುವ ಯೋಗ ಇರಬೇಕಷ್ಟೇ. .

ಗಮನಿಸಿ : ಗದ್ವಾಲಿನಲ್ಲಿ ಆಟೋದವರಿಗೆ ಚಿಂತ್ರವೇಲಿ ಎನ್ನದೆ ಚಿಂತರೇವುಲ ಎಂದು ಹೇಳುವುದು ಸರಿಯಾದ ಕ್ರಮ. ಕೆಲವು ಆಟೋಗಳ ಬೆನ್ನಿಗೆ ಚಾತುರ್ಮಾಸ್ಯದ ಬ್ಯಾನರ್ ಇರುತ್ತವೆ. ಅವರನ್ನು ಸಂಪರ್ಕಿಸಿದರೆ ಏನೂ ಗೊಂದಲ ಇಲ್ಲದೆ ಊರು ಸೇರಬಹುದು.

ನದೀ ಸ್ನಾನಕ್ಕೆ ಹೋಗುವವರಾದರೆ ಅತ್ಯಂತ ಜಾಗ್ರತೆಯಿಂದ ಇರಿ. ಪ್ರತಿಕ್ಷಣಕ್ಕೂ ಎಚ್ಚರಿಗೆ ವಹಿಸಿ.

ತಾಯಂದಿರಿಗೊಂದು ಬೋನಸ್ : ಗದ್ವಾಲಿನ ವಿಷಯ ಬಂದಾಗ ಸೀರೆಯನ್ನು ಮರೆಯಲಾದೀತೇ? ಗದ್ವಾಲಿನ ಸೀರೆಯನ್ನು ಉಟ್ಟುಕೊಂಡು ಕಳೆಕಳೆಯಾಗಿ ಕಾಣುತ್ತಾ “ನಾವು ಚಿಂತ್ರವೇಲಿಗೆ ಹೋಗಿ ಬಂದೆವು” ಎಂದು ಊರಲ್ಲಿ ಹೇಳಬಹುದು.

ನೋಡಿ ಗುರುಗಳ ದರ್ಶನವು ಇಹಕ್ಕೂ ಪರಕ್ಕೂ “ಬಟ್ಟೆ”ಯಾಗುವುದು 😍

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.