ತಿರುಮಲೆಯಲ್ಲಿ ಶ್ರೀಶ್ರೀನಿವಾಸನಿಗೆ ಬಕುಲಾದೇವಿಯು ತಾಯಿಯಾಗಿದ್ದು ಅವನ ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತು. ಸ್ವಾಮಿಗೆ ಪ್ರತಿದಿನವೂ ಅವಳು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ನಿವೇದಿಸಿ ಆನಂದಿಸುತ್ತಿದ್ದಳು. ದೇವಸ್ಥಾನದಲ್ಲಿ ತಯಾರಿಸುವ ಪ್ರತಿಯೊಂದು ನೈವೇದ್ಯ ಪದಾರ್ಥವನ್ನೂ ಬಕುಲಾದೇವಿಯ ಮುಂದೆ ತೋರಿಸಿ ಅವಳ ಒಪ್ಪಿಗೆಯನ್ನು ಸಾಂಕೇತಿಕವಾಗಿ ಪಡೆಯುವ ಸಂಪ್ರದಾಯವಿದೆ.
ನಮ್ಮ ಲೌಕಿಕ ಚಿಂತನೆಗೆ ಅತೀತನಾದ ಅವನ ಊಟದ ಬಗೆಯನ್ನು ನಾವೇನು ತಿಳಿಯಬಲ್ಲೆವು? ಅಲ್ಲಿ ಏನೇನು ಅಡುಗೆ ಮಾಡುತ್ತಾರೆಯೋ ಅದೆಲ್ಲಕ್ಕೂ ಮೀರಿದ್ದು ಅವನ ಆನಂದದ ಬಗೆ. ಇದೆಲ್ಲವನ್ನೂ ನಾನಿಲ್ಲಿ ವಿವರಿಸ ಹೊರಟಿಲ್ಲ. ಶ್ರೀಶ್ರೀನಿವಾಸ ಕಲ್ಯಾಣ ಪುರಾಣದಲ್ಲಿ ಬಕುಲವತಿಯು ಶ್ರೀನಿವಾಸನಿಗೆ ಆರು ವಿಧವಾದ ಅನ್ನವನ್ನು ಮಾಡಿ ಬಡಿಸಿದಳು ಎಂದು ತಿಳಿಸಿದ್ದಾರೆ. ಅವು ಯಾವುವು ಎನ್ನುವುದನ್ನು ಸ್ಕಂದ ಪುರಾಣವು ವಿವರಿಸಿದೆ. ಅವುಗಳನ್ನೇ ನೀವು ಒಂಬತ್ತು ದಿನಗಳಲ್ಲಿ ಪ್ರತಿದಿನವೂ ಒಂದೊಂದು ರೀತಿಯ ಅನ್ನವನ್ನು ಪ್ರೀತಿಯಿಂದ ಮಾಡಿ ಶ್ರೀನಿವಾಸನಿಗೆ ನಿವೇದಿಸಬಹುದು.
1. ಪರಮಾನ್ನ
ಪರಮಾನ್ನವೆಂದ ತಕ್ಷಣವೇ ಬಹುತೇಕರು ಏನೋ ಒಂದು ಪಾಯಸ ಎಂದಿಷ್ಟೇ ಭಾವಿಸಿಬಿಡುತ್ತಾರೆ. ಆದರೆ ಸರಿಯಾದ ಪ್ರಮಾಣವಿಲ್ಲಿದೆ ನೋಡಿ.
ಅನ್ನದ ಮೂರರಷ್ಟು ಹಾಲು, ಆ ಹಾಲಿನ ಅರ್ಧದಷ್ಟು ನೀರು, ನೀರಿನ ಅರ್ಧದಷ್ಟು ಬೆಲ್ಲ ಹಾಗು ಅದರಲ್ಲಿ ಪರಿಮಳದ ದ್ರವ್ಯಗಳನ್ನು ಸೇರಿಸಿ ನಿಧಾನವಾಗಿ ಬೇಯಿಸಬೇಕು. ಇದು ಪರಮಾನ್ನ.
ಉದಾಹರಣೆ : 100ಗ್ರಾಂ ಅನ್ನಕ್ಕೆ 300 ಎಂ.ಎಲ್ ಹಾಲು, 150 ಎಂ. ಎಲ್. ನೀರು, 75 ಗ್ರಾಂ ಬೆಲ್ಲ ಇವುಗಳೊಂದಿಗೆ ಒಂದು ಚಮಚೆಯಷ್ಟು ಏಲಕ್ಕಿ, ಪಚ್ಚಕರ್ಪೂರ, ಲವಂಗ ಹಾಗು ಕೇಸರಿಯ ಪುಡಿಯನ್ನು ಮಿಶ್ರ ಮಾಡಿ ಸಣ್ಣ ಉರಿಯ ಮೇಲೆ ಬೇಯಿಸಬೇಕು. ಗಮನಿಸಿ. ಅಕ್ಕಿಯೊಂದಿಗೆ ಇವನ್ನೆಲ್ಲ ಮಿಶ್ರಣ ಮಾಡಿ ಒಟ್ಟಾರೆಯಾಗಿ ಬೇಯಿಸಬಾರದು.ಮೊದಲು ಮೃದುವಾದ ಅನ್ನವನ್ನು ಮಾಡಿ ನಂತರ ಪುನಃ ಈ ಮಿಶ್ರಣವನ್ನು ಸಣ್ಣ ಉರಿಯ ಮೇಲೆ ಬೇಯಿಸಿರಿ.
2. ಹರಿದ್ರಾನ್ನ
ಅನ್ನಕ್ಕೆ ಅದರ ನಾಲ್ಕುಪಟ್ಟು ಶುದ್ಧವಾದ ತುಪ್ಪವನ್ನು ಹಾಕಿ, ಅರಿಷಿಣ, ಜೀರಿಗೆ, ಮೆಣಸು ಹಾಗು ಉಪ್ಪನ್ನು ಬೆರೆಸಿ ತಯಾರಿಸುವುದು.
ಉದಾಹರಣೆ: 100 ಗ್ರಾಂ ಅನ್ನಕ್ಕೆ 400 ಗ್ರಾಂ ತುಪ್ಪ (ಈಗ ಪತಂಜಲಿ ಅವರದು ಶುದ್ಧ ಹಸುವಿನ ತುಪ್ಪ ಲಭ್ಯವಿದೆ) 2-3 ಚಿಟಿಕೆ ಅರಿಷಿಣ, 1/2 ಚಮಚೆ ಉಪ್ಪು, 1 ದೊಡ್ಡ ಚಮಚೆಯಷ್ಟು ಜೀರಿಗೆ, 1/2 ದೊಡ್ಡ ಚಮಚೆಯಷ್ಟು ಮೆಣಸಿನ ಕಾಳು ಮಿಶ್ರಮಾಡಿ ಹದವಾದ ಉರಿಯ ಮೇಲೆ ಬೇಯಿಸಬೇಕು.
3. ದಧ್ಯೋದನ
ಅನ್ನದ ಎರಡು ಪಟ್ಟು ಹಿತವಾದ ಮೊಸರು (ಹುಳಿ ಹಾಗು ಸಿಹಿಗಳಿಂದ ಮಿಶ್ರವಾದದ್ದು), ಮೆಣಸಿನಕಾಳು, ಹಸಿಶುಂಠಿ ಹಾಗು ಉಪ್ಪು ಇವುಗಳನ್ನು ಮಿಶ್ರಣ ಮಾಡಿ ತಯಾರಿಸುವುದು.
ಉದಾಹರಣೆ : 100 ಗ್ರಾಂ ಅನ್ನಕ್ಕೆ 200 ಗ್ರಾಂ ಮೊಸರು (ಹಾಲನ್ನು ಕಾಯಿಸಿ ಹಿಂದಿನ ರಾತ್ರಿ 10:00ಕ್ಕೆ ಹೆಪ್ಪು ಹಾಕಿದರೆ ಬೆಳಿಗ್ಗೆ 8:00ರ ಸುಮಾರು ಮೇಲೆ ಹೇಳಿರುವಂತಹ ಮೊಸರು ಸಿದ್ಧವಾಗುತ್ತದೆ. ಚಳಿ ಜಾಸ್ತಿ ಇರುವ ಪ್ರದೇಶವಾದಲ್ಲಿ ಹೆಪ್ಪು ಹಾಕಿರುವ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿರುವ ಒಂದು ಪ್ಲಾಸ್ಟಿಕ್ ಬಕೆಟ್ಟಿನಲ್ಲಿ ಇಡುವುದು ಉತ್ತಮ. ನಂದಿನಿ ಹಾಲು ಬಳಸುವುದು ನನ್ನ ಅಭ್ಯಾಸ. “ಅನಾರೋಕ್ಯ”ಕರ ಹಾಲು ಬೇಡ. ಮೊಸರು ನೋಡಲಿಕ್ಕೂ ಚೆನ್ನಾಗಿರದು), 1 ಚಮಚೆಯಷ್ಟು ಮೆಣಸಿನಕಾಳು, 10 ಗ್ರಾಂ ಚಿಕ್ಕದಾಗಿ ಕತ್ತರಿಸಿರುವ ಹಸಿಶುಂಠಿ ಹಾಗು 1/2 ಚಮಚೆ ಉಪ್ಪು ಸೇರಿಸಿ ನಿಧಾನವಾಗಿ ಸಂಪೂರ್ಣ ಮಿಶ್ರಣ ಆಗುವ ಹಾಗೆ ಕಲಿಸಿರಿ.
4. ಕೃಸರಾನ್ನ
ಅಕ್ಕಿ ಹಾಗು ಅದರ ಅರ್ಧ ತೂಕದಷ್ಟು ಹೆಸರುಬೇಳೆಯನ್ನು ಒಟ್ಟಿಗೆ ಬೇಯಿಸಿಕೊಂಡು ಕಾಳುಮೆಣಸು ಹಾಗ ಎಳ್ಳಿನ ಪುಡಿಯನ್ನು ಮಿಶ್ರಣ ಮಾಡಿ ತಯಾರಿಸುವುದು.
ಉದಾಹರಣೆ: 100 ಗ್ರಾಂ ಅಕ್ಕಿ 50 ಗ್ರಾಂ ಹೆಸರುಬೇಳೆ ಇವುಗಳನ್ನು ಚೆನ್ನಾಗಿ ತೊಳೆದು ಒಟ್ಟಿಗೆ ಬೇಯಿಸಿ ಅನ್ನ ಮಾಡಿಕೊಳ್ಳುವುದು. ನಂತರ 1 ಚಮಚೆ ಕಾಳು ಮೆಣಸು ಹಾಗು 2-3 ಚಮಚೆಯಷ್ಟು ಪುಡಿಮಾಡಿದ ಬಿಳಿ ಎಳ್ಳನ್ನು ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಿಸಬೇಕು.
5.ಗುಡಾನ್ನ
ಅನ್ನದ ಮೂರರಷ್ಟು ಹಾಲು, ಹಾಲಿನ ಅರ್ಧದಷ್ಟು ಬೆಲ್ಲ, ಬೆಲ್ಲದ ಅರ್ಧದಷ್ಟು ತುಪ್ಪವನ್ನು ಹಾಕಿ ಬೇಯಿಸಬೇಕು. ಅದರಲ್ಲಿ. ಗೋಡಂಬಿ ಮತ್ತು ಬಾದಾಮಿಯನ್ನು ಬಳಸಬಹುದು. ಇದನ್ನೇ ಪೊಂಗಲು ಎಂದು ಕರೆಯುವುದು.
ಉದಾಹರಣೆ: 100ಗ್ರಾಂ ಅನ್ನ, 300ಎಂ.ಎಲ್ ಹಾಲು, ಹಾಗು 75 ಗ್ರಾಂ ತುಪ್ಪವನ್ನು ಹಾಕಿ ಮಿಶ್ರಣವನ್ನು ನಿಧಾನವಾಗಿ ಬೇಯಿಸಿಕೊಳ್ಳಬೇಕು. ಅನ್ನವು ಹಾಲನ್ನು ಚೆನ್ನಾಗಿ ಹೀರಿಕೊಂಡಿರುವುದು ಗೊತ್ತಾದಮೇಲೆ, ಇನ್ನೂ ಅದು ನೀರಾಗಿ ಇರುವಂತೆ ಇರುವಾಗ 150 ಗ್ರಾಂ ಬೆಲ್ಲವನ್ನು ಜಜ್ಜಿ ಹಾಕಿ ಮತ್ತೆ ಚೆನ್ನಾಗಿ ಸೌಟಿನಿಂದ ತಿರುವಬೇಕು. ಹಾಲು ಮತ್ತು ಅನ್ನ ಬಿಸಿಯಾಗಿರುವಾಗಲೇ ಬೆಲ್ಲವನ್ನು ಹಾಕದಿರಿ. ಹಾಲು ಒಡೆದು ಹೋಗುವ ಸಾಧ್ಯತೆ ಇದೆ.
6.ಮುದ್ಗಾನ್ನ
ಹುಗ್ಗಿ ಎಂದು ಇದಕ್ಕೆ ಪ್ರಸಿದ್ಧ ಹೆಸರು. ಅಕ್ಕಿ ಹಾಗು ಅದರ ಮೂರುಪಟ್ಟು ಹೆಸರುಬೇಳೆ ಎರಡನ್ನೂ ಒಟ್ಟಿಗೆ ಬೇಯಿಸಿ ಉಪ್ಪು, ತುಪ್ಪ, ಜೀರಿಗೆ ಹಾಗು ಮೆಣಸುಗಳ ಸಂಸ್ಕಾರವನ್ನು ಮಾಡಬೇಕು.
ಉದಾಹರಣೆ: 100 ಗ್ರಾಂ ಅಕ್ಕಿ ಹಾಗು 300ಗ್ರಾಂ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಅನ್ನದಲ್ಲಿ ಇನ್ನೂ ನೀರು ಇರುವಾಗಲೇ ಒಂದು ಚಮಚೆ ಉಪ್ಪು, ಐದಾರು ಚಮಚೆ ತುಪ್ಪ, ಅರ್ಧರ್ಧ ಚಮಚೆ ಜೀರಿಗೆ ಹಾಗು ಮೆಣಸಿನಕಾಳನ್ನು ಹುರಿದು ಅನ್ನಕ್ಕೆ ಸೇರಿಸಿ ನಿಧಾನವಾಗಿ ಕಲಸಿ ಚೆನ್ನಾಗಿ ಬೆಂದಿದೆ ಎಂದು ಖಾತ್ರಿಯಾದ ಮೇಲೆ ಒಲೆಯಿಂದ ಇಳಿಸಿ
7. ಕೇವಲಾನ್ನ
ಕೇವಲಾನ್ನವೆಂದರೆ ನಮಗೆಲ್ಲರಿಗೂ ಗೊತ್ತಿರುವ ಗಂಜಿಯು. ಆದರೆ ಬಹಳಷ್ಟು ಜನರು ಕ್ರಮಬದ್ಧವಾದ, ಸುಮಧುರವಾದ ಗಂಜಿಯನ್ನು ಮಾಡಲು ಅರಿಯರು. ಶಾಸ್ತ್ರವು ಹೇಳುವುದು ಬಹಳ ಸರಳವಾಗಿದೆ. ಅಕ್ಕಿಯನ್ನು ಉಜ್ಜಿ ಉಜ್ಜಿ ೧೬ ಬಾರಿ ಶುದ್ಧನೀರಿನಲ್ಲಿ ತೊಳೆದು ಅಕ್ಕಿಯ ಒಂದೂವರೆ ಪಟ್ಟು ನೀರಿನಲ್ಲಿ ಅದನ್ನು ಬೇಯಿಸಬೇಕು. ಗಂಜಿಯನ್ನು ಬಸಿಯಬಾರದು.
Update 18/09/2018: ಉದಾಹರಣೆ: ಒಂದು ಲೋಟದಷ್ಟು ಅಕ್ಕಿಯನ್ನು 16 ಬಾರಿ ನೀರಿನಲ್ಲಿ ಕಸವೆಲ್ಲ ಹೋಗುವಂತೆ ಚೆನ್ನಾಗಿ ತೊಳೆಯಬೇಕು. ನಂತರ ಅದೇ ಲೋಟದಿಂದ ಒಂದೂವರೆ ಸಲ ನೀರನ್ನು ಹಾಕಿ ಅದನ್ನು ಸಣ್ಣ ಒರಿಯ ಮೇಲೆ ಬೇಯಿಸಬೇಕು. ನೀರು ಹಾಗು ಅನ್ನವು ಚೆನ್ನಾಗಿ ಬೆರೆಯುವಂತೆ ಕಲಸಿರಿ. ನೀರಿನ ತಿಳಿವರ್ಣವು ಹೋಗಿ ಸ್ನಿಗ್ಧವಾದ ಬಿಳಿಯ ವರ್ಣಬಂದಾಗ ಪಾತ್ರೆಯನ್ನು ಒಲೆಯ ಮೇಲಿನಿಂದ ಇಳಿಸಿರಿ. ಯಾವ ಕಾರಣಕ್ಕೂ ಈ ದ್ರವವನ್ನು ಬಸಿಯಬಾರದು.
ವಾಸ್ತವದಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಹೇಳಿರುವುದು ಷಡ್ವಿಧಾನ್ನಗಳನ್ನು. ಅಂದರೆ ಆರು ವಿಧದ ಅನ್ನವನ್ನು. ಮುದ್ಗಾನ್ನ(ಹುಗ್ಗಿ)ಯನ್ನು ಇವುಗಳಲ್ಲಿ ಕೆಲವರು ಪರಿಗಣಿಸಿಲ್ಲ. ಆದರೆ ತಿರುಪತಿಯಲ್ಲಿ ಹುಗ್ಗಿಯನ್ನೂ ಪ್ರಸಾದರೂಪವಾಗಿ ಕೊಡುವುದುಂಟು. ಹುಗ್ಗಿಯನ್ನು ಮಾಡುವ ಪದ್ಧತಿಯನ್ನು ಇನ್ನಿತರ ಪುರಾಣಗಳಲ್ಲಿ ವಿವರಿಸಿದ್ದಾರೆ. ಅದರಂತೆ ಹುಗ್ಗಿಯನ್ನು ಮಾಡುವ ಪದ್ಧತಿಯನ್ನು ನಾನಿಲ್ಲಿ ವಿವರಿಸಿದ್ದೇನೆ. ಹೀಗಾಗಿ ಒಟ್ಟು ಏಳು ವಿಧವಾದ ಅನ್ನಗಳು ಎಂದು ಪರಿಗಣಿಸಲು ಅಡ್ಡಿಯಿಲ್ಲ.
ಇವುಗಳನ್ನು ಹೇಗೆಂದರೆ ಹಾಗೆ ತಯಾರಿಸದೆ ಶುದ್ಧವಾಗಿರುವ ಕಟ್ಟಿಗೆಯನ್ನು ಬಳಸಿಯೆ ತಯಾರಿಸಬೇಕು ಎನ್ನುವ ವಿಷಯವನ್ನು ಕೂಡ ಪುರಾಣವು ತಿಳಿಸುತ್ತದೆ. ಒಟ್ಟಿನಲ್ಲಿ ಭಗವಂತನಿಗೆ ಎರಡು ವಿಷಯಗಳು ಮುಖ್ಯ. ಒಂದು ಶುದ್ಧತೆ ಎರಡನೆಯದು ಪ್ರೀತಿ.
ಪ್ರೀತಿಯಿಂದ ಅಡುಗೆ ಮಾತ್ರವಲ್ಲ ಏನು ಮಾಡಿದರೂ ಕೂಡ ಅದರಲ್ಲಿ ಒಂದು ಆನಂದವುಂಟು. ಯಾವ ಕೆಲಸವೂ ಕಷ್ಟವಾಗದು. ಸಾಧ್ಯವಾದಷ್ಟೂ ಗ್ಯಾಸನ್ನು ಬಳಸದೆ ಅಡುಗೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಕಟ್ಟಿಗೆ ದೊರೆಯದೆ ಹೋದಲ್ಲಿ ಇದ್ದಿಲನ್ನು ಬಳಸಿ. ಮನೆಯ ಒಳಗೆ ಇದ್ದಿಲು ಬಳಸಲಿಕ್ಕಿಲ್ಲ ಎಂದರೆ ಬಾಲ್ಕನಿಯಲ್ಲಿ ಇಟ್ಟು ಅಡುಗೆ ಮಾಡಿ. ಸರಾಯ್ ಒಲೆ ಎನ್ನುವುದನ್ನು ಬಳಸಿದರೆ ಮನೆಯಲ್ಲಿ ಹೊಗೆಯಾಗದು, ಗೋಡೆಯೂ ಅಂದಗೆಡಲಾರದು, ಕಡಿಮೆ ಇಂಧನದಲ್ಲಿ ಚುರುಕಾಗಿ ಹದವಾಗಿ ಅಡುಗೆಯೂ ಆಗುವುದು. ಅದೂ ಸಿಗದೆ ಹೋದಲ್ಲಿ, ಅಥವಾ ಗ್ಯಾಸ್ ಒಲೆಯ ಮೇಲೆ ಮಾಡುವ ಹೊರತು ಬೇರೇನೂ ಮಾರ್ಗವಿಲ್ಲ ಎಂದಾದಾಗ ಅದರ ಮೇಲೆಯೇ ಮಾಡಿ. ಆದರೆ ಅದನ್ನು ಚೆನ್ನಾಗಿ ತೊಳೆದು ಬಳಸಿ. ಎಂಜಲು ಕೈಯಿಂದ ಮುಟ್ಟದಿರಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪ್ರೀತಿಯನ್ನು ಅದರಲ್ಲಿ ವ್ಯಕ್ತಪಡಿಸಿ. ದೇವರು ಖಂಡಿತವಾಗಿಯೂ ಸ್ವೀಕರಿಸುವನು.
ಗಮನಿಸಬೇಕಾದ ವಿಷಯ : ಕಷ್ಟವಾದರೂ ಚಿಂತೆಯಿಲ್ಲ ಎಂದು ಶಾಸ್ತ್ರವನ್ನು ಅನುಸರಿಸಿ ಪೂಜೆ ಮಾಡಿದವರಿಗೆ ಹೆಚ್ಚಿನ ಪುಣ್ಯ ಸಿಗುವುದು ಹಾಗು ಅವರಿಗೆ ಭಗವಂತನು ಆದ್ಯತೆಯನ್ನು ಕೊಡುವುದು ಸಹಜ.
ಇನ್ನೊಂದು ಮಾತು. ಇಲ್ಲಿರುವುದು ಆರು (ಏಳು) ಪದಾರ್ಥಗಳ ವಿವರಣೆ ಮಾತ್ರ. ಇನ್ನು ಮೂರು ದಿನಗಳಿಗೆ ನಿಮಗೆ ಯಾವುದು ಇಷ್ಟವಾಗುವುದೋ ಅದನ್ನೇ ಶುದ್ಧವಾಗಿ ಮಾಡಿ ನಿವೇದಿಸಿ. ಉದಾಹರಣೆ ಪುಳಿಯೋಗರೆ, ಬಿಸಿಬೇಳೆ ಭಾತು, ಚಿತ್ರಾನ್ನ ಇತ್ಯಾದಿ.
ಮತ್ತೊಂದು ವಿಷಯ. ನವರಾತ್ರಿಯು ಬರುವುದು ಕ್ಷೀರವ್ರತದ ಸಮಯದಲ್ಲಿ. ಹಾಲು ನಿಷಿದ್ಧ. ಹಾಗಾಗಿ ಪರಮಾನ್ನದಲ್ಲಿ ಹಾಲನ್ನು ಸೇರಿಸದೆ ಕೂಡ ಮಾಡಬಹುದು. ಕೊಬ್ಬರಿಯ ಹಾಲನ್ನು ಕೂಡ ಕೆಲವರು ಬಳಸುತ್ತಾರೆ. ಆದರೆ ಬೇರೆ ಸಮಯದಲ್ಲಿ ಮಾಡುವುದಾದರೆ ಹಾಲನ್ನು ಸೇರಿಸಿ ಮಾಡಬೇಕು.
ನಾನು ಮರೆಯಬಾರದ ಇನ್ನೊಂದು ವಿಷಯ : ಈ ವಿಷಯವನ್ನು ಸಂಗ್ರಹಿಸಿ ಸಂಕ್ಷಿಪ್ತವಾಗಿ ಹೇಳಿದ್ದು ಬಹುದೊಡ್ಡ ಸಜ್ಜನ ವಿದ್ವಾಂಸರಾದ ಡಾ. ಚತುರ್ವೇದೀ ವೇದವ್ಯಾಸಾಚಾರ್ಯರು. ಅವರು ಸಂಕ್ಷಿಪ್ತವಾಗಿ ಹೇಳಿದ್ದನ್ನೇ ನಾನು ಪ್ರಾಯೋಗಿಕವಾಗಿ ವಿವರಿಸಿದ್ದೇನೆ. ಅಷ್ಟೆ. ಗುರುಗಳಿಗೆ ಪ್ರಣಾಮಗಳು.
ಚಿತ್ರಗಳ ಕೃಪೆ:
ಶ್ರೀನಿವಾಸಕಲ್ಯಾಣದ ಚಿತ್ರ : https://srimadhvyasa.wordpress.com/
ಬಕುಲಮಾಲಿಕೆ ಹಾಗು ಶ್ರೀನಿವಾಸರ ಚಿತ್ರ : http://bhargavasarma.blogspot.in
7th ಕೇವಲ ಅನ್ನದ ಉದಾಹರಣೆ ಕೊಟ್ಟಿಲ್ಲ. ದಯವಿಟ್ಟು ವಿವರಿಸಿ.
ಕೃಷ್ಣರೇ,
ಲೇಖನವನ್ನು ಅಪ್ ಡೇಟ್ ಮಾಡಿದ್ದೇನೆ.
ಲೇಖನವು ನಿಮಗೆ ಆಸಕ್ತಿಯನ್ನುಂಟು ಮಾಡಿದ್ದು ನನಗೆ ಸಂತಸವನ್ನುಂಟು ಮಾಡಿದೆ. ಹಬ್ಬದಲ್ಲಿ ಇವುಗಳನ್ನು ನೀವು ನಿವೇದಿಸಿದ ನಂತರ ಒಂದು ಫೋಟೋವನ್ನು ತೆಗೆದು ಶೇರ್ ಮಾಡಿರಿ. (ಅನುಕೂಲವಾದರೆ ಮಾತ್ರ)
🙏