ನವರಾತ್ರಿಯಲ್ಲಿ ವೆಂಕಪ್ಪನಿಗೆ ದಿನಕ್ಕೊಂದು ನೈವೇದ್ಯ

Copy of kal23ತಿರುಮಲೆಯಲ್ಲಿ ಶ್ರೀಶ್ರೀನಿವಾಸನಿಗೆ ಬಕುಲಾದೇವಿಯು ತಾಯಿಯಾಗಿದ್ದು ಅವನ ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತು. ಸ್ವಾಮಿಗೆ ಪ್ರತಿದಿನವೂ ಅವಳು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ನಿವೇದಿಸಿ ಆನಂದಿಸುತ್ತಿದ್ದಳು. ದೇವಸ್ಥಾನದಲ್ಲಿ ತಯಾರಿಸುವ ಪ್ರತಿಯೊಂದು ನೈವೇದ್ಯ ಪದಾರ್ಥವನ್ನೂ ಬಕುಲಾದೇವಿಯ ಮುಂದೆ ತೋರಿಸಿ ಅವಳ ಒಪ್ಪಿಗೆಯನ್ನು ಸಾಂಕೇತಿಕವಾಗಿ ಪಡೆಯುವ ಸಂಪ್ರದಾಯವಿದೆ.

ನಮ್ಮ ಲೌಕಿಕ ಚಿಂತನೆಗೆ ಅತೀತನಾದ ಅವನ ಊಟದ ಬಗೆಯನ್ನು ನಾವೇನು ತಿಳಿಯಬಲ್ಲೆವು? ಅಲ್ಲಿ ಏನೇನು ಅಡುಗೆ ಮಾಡುತ್ತಾರೆಯೋ ಅದೆಲ್ಲಕ್ಕೂ ಮೀರಿದ್ದು ಅವನ ಆನಂದದ ಬಗೆ. ಇದೆಲ್ಲವನ್ನೂ ನಾನಿಲ್ಲಿ ವಿವರಿಸ ಹೊರಟಿಲ್ಲ. ಶ್ರೀಶ್ರೀನಿವಾಸ ಕಲ್ಯಾಣ ಪುರಾಣದಲ್ಲಿ ಬಕುಲವತಿಯು ಶ್ರೀನಿವಾಸನಿಗೆ ಆರು ವಿಧವಾದ ಅನ್ನವನ್ನು ಮಾಡಿ ಬಡಿಸಿದಳು ಎಂದು ತಿಳಿಸಿದ್ದಾರೆ. ಅವು ಯಾವುವು ಎನ್ನುವುದನ್ನು ಸ್ಕಂದ ಪುರಾಣವು ವಿವರಿಸಿದೆ. ಅವುಗಳನ್ನೇ ನೀವು ಒಂಬತ್ತು ದಿನಗಳಲ್ಲಿ ಪ್ರತಿದಿನವೂ ಒಂದೊಂದು ರೀತಿಯ ಅನ್ನವನ್ನು ಪ್ರೀತಿಯಿಂದ ಮಾಡಿ ಶ್ರೀನಿವಾಸನಿಗೆ ನಿವೇದಿಸಬಹುದು.

1. ಪರಮಾನ್ನ

ಪರಮಾನ್ನವೆಂದ ತಕ್ಷಣವೇ ಬಹುತೇಕರು ಏನೋ ಒಂದು ಪಾಯಸ ಎಂದಿಷ್ಟೇ ಭಾವಿಸಿಬಿಡುತ್ತಾರೆ. ಆದರೆ ಸರಿಯಾದ ಪ್ರಮಾಣವಿಲ್ಲಿದೆ ನೋಡಿ.

ಅನ್ನದ ಮೂರರಷ್ಟು ಹಾಲು, ಆ ಹಾಲಿನ ಅರ್ಧದಷ್ಟು ನೀರು, ನೀರಿನ ಅರ್ಧದಷ್ಟು ಬೆಲ್ಲ ಹಾಗು ಅದರಲ್ಲಿ ಪರಿಮಳದ ದ್ರವ್ಯಗಳನ್ನು ಸೇರಿಸಿ ನಿಧಾನವಾಗಿ ಬೇಯಿಸಬೇಕು. ಇದು ಪರಮಾನ್ನ.

ಉದಾಹರಣೆ :  100ಗ್ರಾಂ ಅನ್ನಕ್ಕೆ 300 ಎಂ.ಎಲ್ ಹಾಲು, 150 ಎಂ. ಎಲ್.  ನೀರು, 75 ಗ್ರಾಂ ಬೆಲ್ಲ ಇವುಗಳೊಂದಿಗೆ ಒಂದು  ಚಮಚೆಯಷ್ಟು ಏಲಕ್ಕಿ, ಪಚ್ಚಕರ್ಪೂರ, ಲವಂಗ ಹಾಗು ಕೇಸರಿಯ ಪುಡಿಯನ್ನು ಮಿಶ್ರ ಮಾಡಿ ಸಣ್ಣ ಉರಿಯ ಮೇಲೆ ಬೇಯಿಸಬೇಕು. ಗಮನಿಸಿ. ಅಕ್ಕಿಯೊಂದಿಗೆ ಇವನ್ನೆಲ್ಲ ಮಿಶ್ರಣ ಮಾಡಿ ಒಟ್ಟಾರೆಯಾಗಿ ಬೇಯಿಸಬಾರದು.ಮೊದಲು ಮೃದುವಾದ ಅನ್ನವನ್ನು ಮಾಡಿ ನಂತರ ಪುನಃ ಈ ಮಿಶ್ರಣವನ್ನು ಸಣ್ಣ ಉರಿಯ ಮೇಲೆ ಬೇಯಿಸಿರಿ.

2. ಹರಿದ್ರಾನ್ನ

ಅನ್ನಕ್ಕೆ ಅದರ ನಾಲ್ಕುಪಟ್ಟು ಶುದ್ಧವಾದ ತುಪ್ಪವನ್ನು ಹಾಕಿ, ಅರಿಷಿಣ, ಜೀರಿಗೆ, ಮೆಣಸು ಹಾಗು ಉಪ್ಪನ್ನು ಬೆರೆಸಿ ತಯಾರಿಸುವುದು.

ಉದಾಹರಣೆ:  100   ಗ್ರಾಂ ಅನ್ನಕ್ಕೆ 400 ಗ್ರಾಂ ತುಪ್ಪ (ಈಗ ಪತಂಜಲಿ ಅವರದು ಶುದ್ಧ ಹಸುವಿನ ತುಪ್ಪ ಲಭ್ಯವಿದೆ) 2-3 ಚಿಟಿಕೆ ಅರಿಷಿಣ, 1/2 ಚಮಚೆ ಉಪ್ಪು, 1 ದೊಡ್ಡ ಚಮಚೆಯಷ್ಟು ಜೀರಿಗೆ, 1/2 ದೊಡ್ಡ ಚಮಚೆಯಷ್ಟು ಮೆಣಸಿನ ಕಾಳು ಮಿಶ್ರಮಾಡಿ ಹದವಾದ ಉರಿಯ ಮೇಲೆ ಬೇಯಿಸಬೇಕು.

3. ದಧ್ಯೋದನ

ಅನ್ನದ ಎರಡು ಪಟ್ಟು ಹಿತವಾದ ಮೊಸರು (ಹುಳಿ ಹಾಗು ಸಿಹಿಗಳಿಂದ ಮಿಶ್ರವಾದದ್ದು), ಮೆಣಸಿನಕಾಳು, ಹಸಿಶುಂಠಿ ಹಾಗು ಉಪ್ಪು ಇವುಗಳನ್ನು ಮಿಶ್ರಣ ಮಾಡಿ ತಯಾರಿಸುವುದು.

ಉದಾಹರಣೆ : 100 ಗ್ರಾಂ ಅನ್ನಕ್ಕೆ 200 ಗ್ರಾಂ ಮೊಸರು (ಹಾಲನ್ನು ಕಾಯಿಸಿ ಹಿಂದಿನ ರಾತ್ರಿ 10:00ಕ್ಕೆ ಹೆಪ್ಪು ಹಾಕಿದರೆ ಬೆಳಿಗ್ಗೆ 8:00ರ ಸುಮಾರು ಮೇಲೆ ಹೇಳಿರುವಂತಹ ಮೊಸರು ಸಿದ್ಧವಾಗುತ್ತದೆ. ಚಳಿ ಜಾಸ್ತಿ ಇರುವ ಪ್ರದೇಶವಾದಲ್ಲಿ ಹೆಪ್ಪು ಹಾಕಿರುವ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿರುವ ಒಂದು ಪ್ಲಾಸ್ಟಿಕ್ ಬಕೆಟ್ಟಿನಲ್ಲಿ ಇಡುವುದು ಉತ್ತಮ. ನಂದಿನಿ ಹಾಲು ಬಳಸುವುದು ನನ್ನ ಅಭ್ಯಾಸ. “ಅನಾರೋಕ್ಯ”ಕರ ಹಾಲು ಬೇಡ. ಮೊಸರು ನೋಡಲಿಕ್ಕೂ ಚೆನ್ನಾಗಿರದು), 1 ಚಮಚೆಯಷ್ಟು ಮೆಣಸಿನಕಾಳು, 10 ಗ್ರಾಂ ಚಿಕ್ಕದಾಗಿ ಕತ್ತರಿಸಿರುವ ಹಸಿಶುಂಠಿ ಹಾಗು 1/2 ಚಮಚೆ ಉಪ್ಪು ಸೇರಿಸಿ ನಿಧಾನವಾಗಿ ಸಂಪೂರ್ಣ ಮಿಶ್ರಣ ಆಗುವ ಹಾಗೆ ಕಲಿಸಿರಿ.

4. ಕೃಸರಾನ್ನ

ಅಕ್ಕಿ ಹಾಗು ಅದರ ಅರ್ಧ ತೂಕದಷ್ಟು ಹೆಸರುಬೇಳೆಯನ್ನು ಒಟ್ಟಿಗೆ ಬೇಯಿಸಿಕೊಂಡು ಕಾಳುಮೆಣಸು ಹಾಗ ಎಳ್ಳಿನ ಪುಡಿಯನ್ನು ಮಿಶ್ರಣ ಮಾಡಿ ತಯಾರಿಸುವುದು.

ಉದಾಹರಣೆ: 100 ಗ್ರಾಂ ಅಕ್ಕಿ 50 ಗ್ರಾಂ ಹೆಸರುಬೇಳೆ ಇವುಗಳನ್ನು ಚೆನ್ನಾಗಿ ತೊಳೆದು ಒಟ್ಟಿಗೆ ಬೇಯಿಸಿ ಅನ್ನ ಮಾಡಿಕೊಳ್ಳುವುದು. ನಂತರ 1 ಚಮಚೆ ಕಾಳು ಮೆಣಸು ಹಾಗು 2-3 ಚಮಚೆಯಷ್ಟು ಪುಡಿಮಾಡಿದ ಬಿಳಿ ಎಳ್ಳನ್ನು ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಿಸಬೇಕು.

5.ಗುಡಾನ್ನ

ಅನ್ನದ ಮೂರರಷ್ಟು ಹಾಲು, ಹಾಲಿನ ಅರ್ಧದಷ್ಟು ಬೆಲ್ಲ, ಬೆಲ್ಲದ ಅರ್ಧದಷ್ಟು ತುಪ್ಪವನ್ನು ಹಾಕಿ ಬೇಯಿಸಬೇಕು. ಅದರಲ್ಲಿ. ಗೋಡಂಬಿ ಮತ್ತು ಬಾದಾಮಿಯನ್ನು ಬಳಸಬಹುದು. ಇದನ್ನೇ ಪೊಂಗಲು ಎಂದು ಕರೆಯುವುದು.

ಉದಾಹರಣೆ: 100ಗ್ರಾಂ ಅನ್ನ, 300ಎಂ.ಎಲ್ ಹಾಲು, ಹಾಗು 75 ಗ್ರಾಂ ತುಪ್ಪವನ್ನು ಹಾಕಿ ಮಿಶ್ರಣವನ್ನು ನಿಧಾನವಾಗಿ ಬೇಯಿಸಿಕೊಳ್ಳಬೇಕು. ಅನ್ನವು ಹಾಲನ್ನು ಚೆನ್ನಾಗಿ ಹೀರಿಕೊಂಡಿರುವುದು ಗೊತ್ತಾದಮೇಲೆ, ಇನ್ನೂ ಅದು ನೀರಾಗಿ ಇರುವಂತೆ ಇರುವಾಗ 150 ಗ್ರಾಂ ಬೆಲ್ಲವನ್ನು ಜಜ್ಜಿ ಹಾಕಿ ಮತ್ತೆ ಚೆನ್ನಾಗಿ ಸೌಟಿನಿಂದ ತಿರುವಬೇಕು. ಹಾಲು ಮತ್ತು ಅನ್ನ ಬಿಸಿಯಾಗಿರುವಾಗಲೇ ಬೆಲ್ಲವನ್ನು ಹಾಕದಿರಿ. ಹಾಲು ಒಡೆದು ಹೋಗುವ ಸಾಧ್ಯತೆ ಇದೆ.

6.ಮುದ್ಗಾನ್ನ

ಹುಗ್ಗಿ ಎಂದು ಇದಕ್ಕೆ ಪ್ರಸಿದ್ಧ ಹೆಸರು. ಅಕ್ಕಿ ಹಾಗು ಅದರ ಮೂರುಪಟ್ಟು ಹೆಸರುಬೇಳೆ ಎರಡನ್ನೂ ಒಟ್ಟಿಗೆ ಬೇಯಿಸಿ ಉಪ್ಪು, ತುಪ್ಪ, ಜೀರಿಗೆ ಹಾಗು ಮೆಣಸುಗಳ ಸಂಸ್ಕಾರವನ್ನು ಮಾಡಬೇಕು.

ಉದಾಹರಣೆ: 100 ಗ್ರಾಂ ಅಕ್ಕಿ ಹಾಗು 300ಗ್ರಾಂ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಅನ್ನದಲ್ಲಿ ಇನ್ನೂ ನೀರು ಇರುವಾಗಲೇ ಒಂದು ಚಮಚೆ ಉಪ್ಪು, ಐದಾರು ಚಮಚೆ ತುಪ್ಪ, ಅರ್ಧರ್ಧ ಚಮಚೆ ಜೀರಿಗೆ ಹಾಗು ಮೆಣಸಿನಕಾಳನ್ನು ಹುರಿದು ಅನ್ನಕ್ಕೆ ಸೇರಿಸಿ ನಿಧಾನವಾಗಿ ಕಲಸಿ ಚೆನ್ನಾಗಿ ಬೆಂದಿದೆ ಎಂದು ಖಾತ್ರಿಯಾದ ಮೇಲೆ ಒಲೆಯಿಂದ ಇಳಿಸಿ

7. ಕೇವಲಾನ್ನ

ಕೇವಲಾನ್ನವೆಂದರೆ ನಮಗೆಲ್ಲರಿಗೂ ಗೊತ್ತಿರುವ ಗಂಜಿಯು. ಆದರೆ ಬಹಳಷ್ಟು ಜನರು ಕ್ರಮಬದ್ಧವಾದ, ಸುಮಧುರವಾದ ಗಂಜಿಯನ್ನು ಮಾಡಲು ಅರಿಯರು. ಶಾಸ್ತ್ರವು ಹೇಳುವುದು ಬಹಳ ಸರಳವಾಗಿದೆ. ಅಕ್ಕಿಯನ್ನು ಉಜ್ಜಿ ಉಜ್ಜಿ ೧೬ ಬಾರಿ ಶುದ್ಧನೀರಿನಲ್ಲಿ ತೊಳೆದು ಅಕ್ಕಿಯ ಒಂದೂವರೆ ಪಟ್ಟು ನೀರಿನಲ್ಲಿ ಅದನ್ನು ಬೇಯಿಸಬೇಕು. ಗಂಜಿಯನ್ನು ಬಸಿಯಬಾರದು.

Update 18/09/2018: ಉದಾಹರಣೆ: ಒಂದು ಲೋಟದಷ್ಟು  ಅಕ್ಕಿಯನ್ನು 16 ಬಾರಿ ನೀರಿನಲ್ಲಿ ಕಸವೆಲ್ಲ ಹೋಗುವಂತೆ ಚೆನ್ನಾಗಿ ತೊಳೆಯಬೇಕು. ನಂತರ ಅದೇ ಲೋಟದಿಂದ ಒಂದೂವರೆ ಸಲ ನೀರನ್ನು ಹಾಕಿ ಅದನ್ನು ಸಣ್ಣ ಒರಿಯ ಮೇಲೆ ಬೇಯಿಸಬೇಕು. ನೀರು ಹಾಗು ಅನ್ನವು ಚೆನ್ನಾಗಿ ಬೆರೆಯುವಂತೆ ಕಲಸಿರಿ. ನೀರಿನ ತಿಳಿವರ್ಣವು ಹೋಗಿ ಸ್ನಿಗ್ಧವಾದ ಬಿಳಿಯ ವರ್ಣಬಂದಾಗ ಪಾತ್ರೆಯನ್ನು ಒಲೆಯ ಮೇಲಿನಿಂದ ಇಳಿಸಿರಿ. ಯಾವ ಕಾರಣಕ್ಕೂ ಈ ದ್ರವವನ್ನು ಬಸಿಯಬಾರದು.

ವಾಸ್ತವದಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಹೇಳಿರುವುದು ಷಡ್ವಿಧಾನ್ನಗಳನ್ನು. ಅಂದರೆ ಆರು ವಿಧದ ಅನ್ನವನ್ನು. ಮುದ್ಗಾನ್ನ(ಹುಗ್ಗಿ)ಯನ್ನು ಇವುಗಳಲ್ಲಿ ಕೆಲವರು ಪರಿಗಣಿಸಿಲ್ಲ. ಆದರೆ ತಿರುಪತಿಯಲ್ಲಿ ಹುಗ್ಗಿಯನ್ನೂ ಪ್ರಸಾದರೂಪವಾಗಿ ಕೊಡುವುದುಂಟು. ಹುಗ್ಗಿಯನ್ನು ಮಾಡುವ ಪದ್ಧತಿಯನ್ನು ಇನ್ನಿತರ ಪುರಾಣಗಳಲ್ಲಿ ವಿವರಿಸಿದ್ದಾರೆ. ಅದರಂತೆ ಹುಗ್ಗಿಯನ್ನು ಮಾಡುವ ಪದ್ಧತಿಯನ್ನು ನಾನಿಲ್ಲಿ ವಿವರಿಸಿದ್ದೇನೆ. ಹೀಗಾಗಿ ಒಟ್ಟು ಏಳು ವಿಧವಾದ ಅನ್ನಗಳು ಎಂದು ಪರಿಗಣಿಸಲು ಅಡ್ಡಿಯಿಲ್ಲ.

ಇವುಗಳನ್ನು ಹೇಗೆಂದರೆ ಹಾಗೆ ತಯಾರಿಸದೆ ಶುದ್ಧವಾಗಿರುವ ಕಟ್ಟಿಗೆಯನ್ನು ಬಳಸಿಯೆ ತಯಾರಿಸಬೇಕು ಎನ್ನುವ ವಿಷಯವನ್ನು ಕೂಡ ಪುರಾಣವು ತಿಳಿಸುತ್ತದೆ. ಒಟ್ಟಿನಲ್ಲಿ ಭಗವಂತನಿಗೆ ಎರಡು ವಿಷಯಗಳು ಮುಖ್ಯ. ಒಂದು ಶುದ್ಧತೆ ಎರಡನೆಯದು ಪ್ರೀತಿ.

ಪ್ರೀತಿಯಿಂದ ಅಡುಗೆ ಮಾತ್ರವಲ್ಲ ಏನು ಮಾಡಿದರೂ ಕೂಡ ಅದರಲ್ಲಿ ಒಂದು ಆನಂದವುಂಟು. ಯಾವ ಕೆಲಸವೂ ಕಷ್ಟವಾಗದು. ಸಾಧ್ಯವಾದಷ್ಟೂ ಗ್ಯಾಸನ್ನು ಬಳಸದೆ ಅಡುಗೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಕಟ್ಟಿಗೆ ದೊರೆಯದೆ ಹೋದಲ್ಲಿ ಇದ್ದಿಲನ್ನು ಬಳಸಿ. ಮನೆಯ ಒಳಗೆ ಇದ್ದಿಲು ಬಳಸಲಿಕ್ಕಿಲ್ಲ ಎಂದರೆ ಬಾಲ್ಕನಿಯಲ್ಲಿ ಇಟ್ಟು ಅಡುಗೆ ಮಾಡಿ. ಸರಾಯ್ ಒಲೆ ಎನ್ನುವುದನ್ನು ಬಳಸಿದರೆ ಮನೆಯಲ್ಲಿ ಹೊಗೆಯಾಗದು, ಗೋಡೆಯೂ ಅಂದಗೆಡಲಾರದು, ಕಡಿಮೆ ಇಂಧನದಲ್ಲಿ ಚುರುಕಾಗಿ ಹದವಾಗಿ ಅಡುಗೆಯೂ ಆಗುವುದು. ಅದೂ ಸಿಗದೆ ಹೋದಲ್ಲಿ, ಅಥವಾ ಗ್ಯಾಸ್ ಒಲೆಯ ಮೇಲೆ ಮಾಡುವ ಹೊರತು ಬೇರೇನೂ ಮಾರ್ಗವಿಲ್ಲ ಎಂದಾದಾಗ ಅದರ ಮೇಲೆಯೇ ಮಾಡಿ. ಆದರೆ ಅದನ್ನು ಚೆನ್ನಾಗಿ ತೊಳೆದು ಬಳಸಿ. ಎಂಜಲು ಕೈಯಿಂದ ಮುಟ್ಟದಿರಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪ್ರೀತಿಯನ್ನು ಅದರಲ್ಲಿ ವ್ಯಕ್ತಪಡಿಸಿ. ದೇವರು ಖಂಡಿತವಾಗಿಯೂ ಸ್ವೀಕರಿಸುವನು.

ಗಮನಿಸಬೇಕಾದ ವಿಷಯ :  ಕಷ್ಟವಾದರೂ ಚಿಂತೆಯಿಲ್ಲ ಎಂದು ಶಾಸ್ತ್ರವನ್ನು ಅನುಸರಿಸಿ ಪೂಜೆ ಮಾಡಿದವರಿಗೆ ಹೆಚ್ಚಿನ ಪುಣ್ಯ ಸಿಗುವುದು ಹಾಗು ಅವರಿಗೆ ಭಗವಂತನು ಆದ್ಯತೆಯನ್ನು ಕೊಡುವುದು ಸಹಜ.

ಇನ್ನೊಂದು ಮಾತು. ಇಲ್ಲಿರುವುದು ಆರು (ಏಳು) ಪದಾರ್ಥಗಳ ವಿವರಣೆ ಮಾತ್ರ. ಇನ್ನು ಮೂರು ದಿನಗಳಿಗೆ ನಿಮಗೆ ಯಾವುದು ಇಷ್ಟವಾಗುವುದೋ ಅದನ್ನೇ ಶುದ್ಧವಾಗಿ ಮಾಡಿ ನಿವೇದಿಸಿ. ಉದಾಹರಣೆ ಪುಳಿಯೋಗರೆ, ಬಿಸಿಬೇಳೆ ಭಾತು, ಚಿತ್ರಾನ್ನ ಇತ್ಯಾದಿ.

ಮತ್ತೊಂದು ವಿಷಯ. ನವರಾತ್ರಿಯು ಬರುವುದು ಕ್ಷೀರವ್ರತದ ಸಮಯದಲ್ಲಿ. ಹಾಲು ನಿಷಿದ್ಧ. ಹಾಗಾಗಿ ಪರಮಾನ್ನದಲ್ಲಿ ಹಾಲನ್ನು ಸೇರಿಸದೆ ಕೂಡ ಮಾಡಬಹುದು. ಕೊಬ್ಬರಿಯ ಹಾಲನ್ನು ಕೂಡ ಕೆಲವರು ಬಳಸುತ್ತಾರೆ. ಆದರೆ ಬೇರೆ ಸಮಯದಲ್ಲಿ ಮಾಡುವುದಾದರೆ ಹಾಲನ್ನು ಸೇರಿಸಿ ಮಾಡಬೇಕು.

ನಾನು ಮರೆಯಬಾರದ ಇನ್ನೊಂದು ವಿಷಯ : ಈ ವಿಷಯವನ್ನು ಸಂಗ್ರಹಿಸಿ ಸಂಕ್ಷಿಪ್ತವಾಗಿ ಹೇಳಿದ್ದು ಬಹುದೊಡ್ಡ ಸಜ್ಜನ ವಿದ್ವಾಂಸರಾದ ಡಾ. ಚತುರ್ವೇದೀ ವೇದವ್ಯಾಸಾಚಾರ್ಯರು. ಅವರು ಸಂಕ್ಷಿಪ್ತವಾಗಿ ಹೇಳಿದ್ದನ್ನೇ ನಾನು ಪ್ರಾಯೋಗಿಕವಾಗಿ ವಿವರಿಸಿದ್ದೇನೆ. ಅಷ್ಟೆ. ಗುರುಗಳಿಗೆ ಪ್ರಣಾಮಗಳು.

ಚಿತ್ರಗಳ ಕೃಪೆ:

ಶ್ರೀನಿವಾಸಕಲ್ಯಾಣದ ಚಿತ್ರ : https://srimadhvyasa.wordpress.com/

ಬಕುಲಮಾಲಿಕೆ ಹಾಗು ಶ್ರೀನಿವಾಸರ ಚಿತ್ರ : http://bhargavasarma.blogspot.in

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Kannada Raghavendra Vijaya

ಶ್ರೀಗುರುಜಗನ್ನಾಥದಾಸರು

(Skip reading and go to the download link)

ರಾಯರನ್ನು ಯೋಗನಿದ್ರೆಗೆ ಕಳುಹಿಸಲು ನಮ್ಮ ತೃಪ್ತಿಗಾಗಿ ನಾವು ಹಾಡುವ ಜೋಗುಳವೊಂದಿದೆ. ಅದು ಅತ್ಯಂತ ಸುಪ್ರಸಿದ್ಧ. ಕನ್ನಡವನ್ನು ಓದಲು ಬರೆಯಲು ಇರಲಿ ಮಾತನಾಡಲು ಬಾರದ ಭಕ್ತರೂ ಸಹ ಹಾಡುವ ಪದವಿದು. ಅದು ಮತ್ತ್ಯಾವುದೋ ಅಲ್ಲ, “ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲತಿಲಕರ” ಎನ್ನುವ ಪ್ರಸಿದ್ಧ ಲಾಲಿಪದ.  ಪ್ರೀತಿಯ ಗುರುಗಳನ್ನು ನಮ್ಮ ಕೂಸಿನೋಪಾದಿಯಲ್ಲಿ ಪ್ರೀತಿಸುತ್ತಾ ಅವರಿಗೆ ವಿಶ್ರಾಂತಿ ಸಿಗಲಿ ಎನ್ನುವ ಮೇಲ್ನೋಟದ ಅರ್ಥದೊಂದಿಗೆ, ಗಹನವಾದ ಆಧ್ಯಾತ್ಮದ ಚಿಂತನೆಯೊಂದಿಗೆ ಗುರುಗಳಲ್ಲಿ ಭಕ್ತಿಯನ್ನು ಮಾಡಿಸುವ ಈ ಲಾಲಿಪದವನ್ನು ರಚಿಸಿದ್ದು ರಾಯರ ಅಪಾರ ಕರುಣೆಗೆ ಪಾತ್ರರಾಗಿದ್ದ ಶ್ರೀಗುರುಜಗನ್ನಾಥದಾಸರು.

ಬಳ್ಳಾರಿ ಹಾಗು ರಾಯಚೂರು ಪ್ರಾಂತ್ಯದ ಸುತ್ತಮುತ್ತಲಿನ ರಣಬಿಸಿಲಿನ ಪ್ರಾಂತ್ಯ, ಎತ್ತ ನೋಡಿದರೂ ಬೃಹದಾಕಾರದ ಬಂಡೆಗಳ ಬೆಟ್ಟಗಳು, ಅವುಗಳ ಮಧ್ಯ ಅಲ್ಲೊಂದು ಇಲ್ಲೊಂದು ಚೂರು ಹಸಿರಿನ ಸೆಲೆ. ಅಂತಹ ಒಂದು ಬೆಟ್ಟದ ಬುಡದಲ್ಲಿ ಇರುವ ಒಂದು ಊರು ಕೌತಾಳಂ. ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿತ್ತು, ಈಗ ಆಂಧ್ರದ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿಗೆ ಸಂಬಂಧಿಸಿದ  ಊರು. ಉರಿವ ಸೂರ್ಯನಿಗೆ ಪರಮಪ್ರೀತಿ ಈ ಊರ ಮೇಲೆ. ಆದರೂ ಭಕ್ತರ ಮನಕ್ಕೆ ಈ ಊರು ತಂಪು ಎನಿಸುವ ಜೀವ ಸೆಲೆಯನ್ನು ಹೊಂದಿದೆ. ಅದೇ ಶ್ರೀಗುರುಜಗನ್ನಾಥದಾಸರ ಸನ್ನಿಧಾನ. ಇದು ಅವರ ತಪೋಭೂಮಿ. ಶ್ರೀರಾಯರ ಕೃಪೆಗಾಗಿ ನಿರಂತರವಾಗಿ ತಪಸ್ಸನ್ನು ಆಚರಿಸಿರುವದರ ಗುರುತ್ವ ಈ ಭೂಮಿಯ ಮೇಲೆ ಇಂದಿಗೂ ಅನುಭವವೇದ್ಯವಾಗುತ್ತದೆ.

ಹದಿನೆಂಟನೆಯ ಶತಮಾನದ ಕೊನೆಯ ಭಾಗ; ಶ್ರೀವೇಂಕಟಗಿರಿಯಾಚಾರ್ಯ ಮತ್ತು ಶ್ರೀಮತಿ ಸೀತಮ್ಮ ಎನ್ನುವ ಸಾತ್ವಿಕ ದಂಪತಿಗಳಿಗೆ ಜನಿಸಿದ ಶಿಶು ಸ್ವಾಮಿರಾಯಾಚಾರ್ಯ. ಅಪಾರ ಪ್ರತಿಭಾಶಾಲಿಯಾಗಿ ಬೆಳೆದು, ಮುಂದೆ ಶ್ರೀರಾಘವೇಂದ್ರತೀರ್ಥರ ಸಂಪೂರ್ಣ ಕೃಪೆಗೆ ಪಾತ್ರವಾಯಿತು ಈ ಶಿಶು.

ಸ್ವಾರಸ್ಯವೆಂದರೆ ಲೌಕಿಕ ವಿದ್ಯೆಯು ಅನವಶ್ಯಕವಾಗಿ ತೋರಿತೋ ಏನೊ ಬಾಲಕ ಸ್ವಾಮಿರಾಯನು ಶಾಲೆಯನ್ನು ಅರ್ಧಕ್ಕೆ ಬಿಟ್ಟು ಬಿಟ್ಟ! ಆದರೆ ಅಲೌಕಿಕವಾದ ವಿದ್ಯೆಯು ಆತನ ಕೈಹಿಡಿಯಿತು, ದೇವಭಾಷೆಯ ಪ್ರಕಾಂಡ ಪಂಡಿತನಾಗಿ ಸ್ವಾಮಿರಾಯ ಹೊರಹೊಮ್ಮಿದ. ಮುಂದೊಂದು ದಿನ ಶ್ರೀಗೋಪಾಲದಾಸರು ಸ್ವಪ್ನದಲ್ಲಿ ದರ್ಶನವಿತ್ತು ಸ್ವಾಮಿರಾಯನಿಗೆ “ಗುರುಜಗನ್ನಾಥವಿಠಲ” ಎನ್ನುವ ಅಂಕಿತವನ್ನು ಪ್ರದಾನ ಮಾಡಿದರು. ಇದೇ ಅಂಕಿತನಾಮದಲ್ಲಿ ಶ್ರೀಗುರುಜಗನ್ನಾಥದಾಸರು ಸಂಸ್ಕೃತ ಹಾಗು ಕನ್ನಡ ಭಾಷೆಗಳಲ್ಲಿ ಅನೇಕಗ್ರಂಥಗಳನ್ನೂ, ಸ್ತೋತ್ರಗಳನ್ನೂ ಹಾಗು ಕನ್ನಡದಲ್ಲಿ ಕೀರ್ತನೆಗಳನ್ನೂ ರಚನೆ ಮಾಡಿದರು. ಶ್ರೀರಾಯರ ಮೇಲೆ ಅತಿ ಹೆಚ್ಚಿನ ಕೃತಿಗಳನ್ನು ರಚನೆ ಮಾಡಿದ್ದು ಇವರೇ.

ಕೌತಾಳ ಗ್ರಾಮದಲ್ಲಿ ಶ್ರೀಗುರುರಾಜರ ಮೃತ್ತಿಕಾ ವೃಂದಾವನವನ್ನು ಇವರು ಪ್ರತಿಷ್ಠಾಪನೆ ಮಾಡಿದ್ದಾರೆ. ಇದೊಂದು ಪ್ರಶಾಂತವಾದ ಸ್ಥಾನ. ಮಂತ್ರಾಲಯಕ್ಕೆ ಹೋದಾಗ ಅನುಕೂಲ ಮಾಡಿಕೊಂಡು ಈ ಕ್ಷೇತ್ರಕ್ಕೂ ಭೇಟಿ ನೀಡಿ ಬನ್ನಿ. ರಾಯರು, ಶ್ರೀದಾಸರು, ದಾಸರು ಪೂಜಿಸಿದ ಪ್ರತಿಮೆಗಳು, ಅಮೂಲ್ಯವಾದ ಹಸ್ತ್ರಪ್ರತಿಗಳ ದರ್ಶನವನ್ನು ನೀವು ಮಾಡಿಕೊಳ್ಳಬಹುದು.

ದಾಸರು ಹರಿಪದವನ್ನು ಸೇರಿದ್ದು ೧೯೧೮ರಲ್ಲಿ.

ಎಲ್ಲಿದೆ ಈ ಕೌತಾಳಂ?

ದಾಸಸಾಹಿತ್ಯಕ್ಕೆ ಸಂಬಂಧಿಸಿದಂತೆ ಕವಿತಾಳ ಎನ್ನುವ ಎರಡು ಊರುಗಳು ಇವೆ. ಒಂದು ಕರ್ನಾಟಕದ ಮಾನವಿ ತಾಲ್ಲೂಕಿನಲ್ಲಿದೆ ಇನ್ನೊಂದು ಹಳೆಯ ಕರ್ನಾಟಕದಲ್ಲಿತ್ತು ನಮ್ಮ ಕೈತಪ್ಪಿ ಈಗಿನ ಆಂಧ್ರಪ್ರದೇಶದಲ್ಲಿ ಸೇರಿಬಿಟ್ಟಿದೆ. ಹೀಗೆ ತಪ್ಪಿಸಿಕೊಂಡು ಹೋಗಿರುವ ಕೌತಾಳವೇ ಗುರುಜಗನ್ನಾಥದಾಸರ ಸನ್ನಿಧಾನವಿರುವ ಕ್ಷೇತ್ರ.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ರೈಲಿನಲ್ಲಿ ಪ್ರಯಾಣಮಾಡುವಾಗ ಆದವಾನಿ ದಾಟಿದ ಮೇಲೆ ಕುಪ್ಪಗಲ್ಲು ಮತ್ತು ಕೋಸಿಗಿ ಎನ್ನುವ ಎರಡು ಚಿಕ್ಕ ನಿಲ್ದಾಣಗಳಲ್ಲಿ ಕೆಲವು ರೈಲುಗಳು ನಿಲ್ಲುತ್ತವೆ. ಈ ಎರಡೂ ಊರುಗಳಿಂದಲು ಕೌತಾಳವು ಹತ್ತಿರ.

ಮಂತ್ರಾಲಯಕ್ಕೆ ಬಂದು, ದರ್ಶನ ಮತ್ತು ಊಟ ಎರಡೂ ಮುಗಿದ ನಂತರ ನೀವು ನಿದ್ದೆ ಹೊಡೆದು ಮಂಕುಗೊಳ್ಳುವುದರ ಬದಲು ಕೌತಾಳ, ಕಾಮವರ, ಬಸಲದೊಡ್ಡಿ, ಬುಡುಮುಲದೊಡ್ಡಿ, ಪೆದ್ದತುಂಬಳ, ಚಿನ್ನ ತುಂಬಳದಂತ ಸಮೀಪದ ಕ್ಷೇತ್ರಗಳಿಗೆ ಒಂದು ಗಾಡಿಯನ್ನು ಮಾಡಿಕೊಂಡು ಹೋಗಿಬರುವುದು ಉತ್ತಮ.

ಸ್ವಂತ ಗಾಡಿಯಿದ್ದಲ್ಲಿ ಹೀಗೆ ಮಾಡಿ.

 • ಮಂತ್ರಾಲಯದಿಂದ ಮಾಧವರದವರೆಗೆ ಹೋಗಿ.
 • ರಾಯಚೂರು, ತುಂಗಭದ್ರ ರೈಲ್ವೇ ನಿಲ್ದಾಣ ಮತ್ತು ಆದವಾನಿಗೆ ಹೋಗುವ ಜಂಕ್ಷನ್ನಿನ್ನಲ್ಲಿ ಆದವಾನಿಯ ದಿಕ್ಕಿಗೆ ಮುಂದುವರೆಯಿರಿ
 • ೮ ಕಿ.ಮೀ ಕ್ರಮಿಸಿದ ನಂತರ ಏತನೀರಾವರಿಯ ಒಂದು ಕೆರೆ ಕಾಣಿಸುತ್ತದೆ. ಅದರ ಪಕ್ಕದಲ್ಲಿರುವ ಕಚ್ಚಾದಾರಿಯಗುಂಟ ಮುಂದುವರೆಯಿರಿ. ಸುಮಾರು ೧೨ ಕಿ.ಮೀ ಆದನಂತರ ಕೋಸಿಗಿ ಎನ್ನುವ ಗ್ರಾಮಸಿಗುತ್ತದೆ.
 • ಕನ್ನಡದಲ್ಲಿಯೇ ಕೇಳಿ ಕೌತಾಳಕ್ಕೆ ಹೇಗೆ ಹೋಗುವುದು? ಅಂತ. ಈ ಪ್ರಾಂತ್ಯದಲ್ಲಿ ಇರುವ ಎಲ್ಲ ಗ್ರಾಮಗಳ ಜನರಿಗೆ ಕನ್ನಡ ಚೆನ್ನಾಗಿ ಬರುತ್ತದೆ.
 • ಅಲ್ಲಿಂದ ಮುಂದೆ ಕೌತಾಳಕ್ಕೆ ಹೋಗಿರಿ. ಅಲ್ಲಿ ನಿಮ್ಮ ಮುಖ ನೋಡಿದ ಜನರು ತಾವಾಗಿಯೇ ದಾಸರಾಯರ ಸನ್ನಿಧಾನ ಇರುವ ಸ್ಥಳವನ್ನು ತೋರಿಸುತ್ತಾರೆ.

ಏನು ಮಾಡಬೇಕು ಕೌತಾಳದಲ್ಲಿ?

 • ಈಗಾಗಲೇ ಹೇಳಿರುವಂತೆ ಕೌತಾಳವು ಒಂದು ಸಾಧನಾಕ್ಷೇತ್ರ. ಶ್ರೀಗುರುಜಗನ್ನಾಥದಾಸರು ಪ್ರತಿನಿತ್ಯ ಶ್ರೀರಾಯರ ಸೇವೆಯಲ್ಲಿ ನಿರತರಾಗಿರುವ ಒಂದು ದಿವ್ಯ ತಪೋಭೂಮಿ. ಇಲ್ಲಿಗೆ ಬಂದು ದಾಸರ ದರ್ಶನ, ಶ್ರೀಗುರುಗಳ ದರ್ಶನ, ಅವರ ಗ್ರಂಥಗಳ ದರ್ಶನವನ್ನು ಮಾಡಿರಿ, ಆ ದಿವ್ಯ ಅನುಭವವನ್ನು ಅನುಭವಿಸಿ.
 • ಗುರುಗಳ ದರ್ಶನವನ್ನು ಬರಿಗೈಯಲ್ಲಿ ಮಾಡಬಾರದು ಎನ್ನುತ್ತಾರೆ. ಬರುವಾಗ ಫಲ, ತೆಂಗಿನಕಾಯಿ ಅಥವಾ ಒಂದು ಹಿಡಿಯ? ಕಲ್ಲುಸಕ್ಕರೆಯನ್ನು ತನ್ನಿರಿ.
 • ಕೈಕಾಲು ತೊಳೆದುಕೊಂಡು ಚೆನ್ನಾಗಿ ಕಾಲು ಒರೆಸಿಕೊಂಡು (ಹೌದು, ಒರೆಸಿಕೊಳ್ಳದೆ ಹಾಗೆಯೇ ಒದ್ದೆ ಕಾಲಿನಲ್ಲಿ ಒಳಗೆ ಹೋಗಿ ಗುಡಿಯನ್ನು ರಾಡಿ ಮಾಡದಿರಿ. ಮಠವನ್ನು ಪದೇ ಪದೇ ಶುಚಿ ಮಾಡುವುದು ತುಂಬ ಕ?ದ ಕೆಲಸ) ಒಳ ಪ್ರವೇಶಿಸಿ.
 • ಮನದಲ್ಲೇ ಶ್ರೀರಾಯರ ಸ್ತೋತ್ರ ಅಥವಾ ಕೀರ್ತನೆಗಳನ್ನು ಹೇಳಿಕೊಳ್ಳುತ್ತಾ ಪ್ರದಕ್ಷಿಣೆ ಹಾಕಿ.
 • ನಿಮ್ಮ ಯೋಗ್ಯತೆಗೆ ತಕ್ಕಂತೆ ಒಂದಿ? ಧ್ಯಾನವನ್ನು ಮಾಡಿರಿ.
 • ಇದು ಹರಿಕಥಾಮೃತಸಾರಮಂದಿರ. ಗದ್ದಲ ಮಾಡದೆ ದರ್ಶನ ಮಾಡಿ. ನೀವು ಇದುವರೆಗೂ ಕೇಳಿರದ ಅನೇಕ ಆಧ್ಯಾತ್ಮಿಕ ವಿ?ಯಗಳು ನಿಮಗೆ ಗೊತ್ತಾಗುತ್ತವೆ. ಏನೂ ಅರ್ಥವಾಗದಿದ್ದರೆ, ಹಿರಿಯರಾದ ಶ್ರೀ ಅಪ್ಪಣಾಚಾರ್ಯರು ಮಾರ್ಗದರ್ಶನ ಮಾಡುತ್ತಾರೆ. ಒಂದು ಚಿಕ್ಕ ಪುಸ್ತಕದಲ್ಲಿ ಅವುಗಳನ್ನು ನೋಟ್ ಮಾಡಿಕೊಂಡು ಬನ್ನಿ.
 • ಅತಿ ಮುಖ್ಯವಾಗಿ : ಸನ್ನಿಧಾನವನ್ನು ನಿಮ್ಮ ಕಣ್ಣುಗಳಿಂದಲೇ ನೋಡಿರಿ. ನಿಮ್ಮ ಮೊಬೈಲ್ ಫೋನಿನಿಂದ ಅಲ್ಲ.  ಅಲ್ಲಿ ಸಮಯ ಕಳೆದ ನಂತರವೇ ಫೋಟೋವನ್ನು ತೆಗೆದುಕೊಳ್ಳಿರಿ. ಅಲ್ಲಿಂದ ಬಂದ ನಂತರ ನಿಮ್ಮ ಫೇಸ್‌ಬುಕ್ಕಿನಲ್ಲಿ, ವಾಟ್ಸ್ಯಾಪಿನಲ್ಲಿ ಫೋಟೋ ಮಾತ್ರವಲ್ಲ ಏನೇನು ಕಲಿತಿರಿ ಅನ್ನುವುದನ್ನು ಕೂಡ ಶೇರ್ ಮಾಡಿಕೊಳ್ಳಿ.

ಏನು ಮಾಡಬಾರದು?

 • ಕೈಕಾಲು ತೊಳೆಯದೆ ಒಳಗೆ ಪ್ರವೇಶಮಾಡದಿರಿ.
 • ಬಾಯಲ್ಲಿ, ಹಲ್ಲಿನ ಸಂದಿಯಲ್ಲಿ ಬೆರಳು ತೂರಿಸಿಕೊಂಡಲ್ಲಿ ಕೈತೊಳೆಯದೆ ಏನನ್ನೂ ಮುಟ್ಟದಿರಿ.
 • ಚಿಕ್ಕ ಮಕ್ಕಳಿದ್ದಲ್ಲಿ ಅವುಗಳನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಿ. ಅವುಗಳ ಆಟವು ನೋಡಲು ಚಂದ ನಿಜ. ಆದರೆ ಅಶಿಸ್ತಿನ ಗದ್ದಲ ಸನ್ನಿಧಾನ ಪಾವಿತ್ರ್ಯತೆಯನ್ನು ಹಾಳು ಮಾಡುತ್ತದೆ.
 • ಸನ್ನಿಧಾನದಲ್ಲಿ ಹರಟೆಯನ್ನು ಸರ್ವಥಾ ಹೊಡೆಯದಿರಿ.
 • ತಂದಿರುವ ತೆಂಗಿನ ಕಾಯಿಯನ್ನು ಸಮರ್ಪಣೆ ಮಾಡಿಸಿದ್ದಲ್ಲಿ, ಅದನ್ನು ಅಲ್ಲಿಯೇ ತಿಂದು ಚಿಪ್ಪು, ಬಾಳೆಯಣ್ಣಿನ ಸಿಪ್ಪೆಯನ್ನು ಅಲ್ಲಿಯೇ ಬಿಟ್ಟು ಬರದಿರಿ. ಕಸದ ಬುಟ್ಟಿಯಲ್ಲಿಯೇ ಹಾಕಿರಿ.
 • ಪರವಾನಗಿ ಇಲ್ಲದಿರುವ ಸ್ಥಳದಲ್ಲಿ ಫೋಟೋ ತೆಗೆಯದಿರಿ.

ಕನ್ನಡ ರಾಘವೇಂದ್ರ ವಿಜಯ

ಬ್ರಹ್ಮಸೂತ್ರಭಾಷ್ಯದ ಹಾಗು ಭಾಗವತದ ಮೇಲೆ ಟೀಕೆಯೂ ಸೇರಿದಂತೆ ಅನೇಕ ಟೀಕಾಗ್ರಂಥಗಳು ಹಾಗು ಸ್ವತಂತ್ರವಾಗಿ ೪೦ಕ್ಕೂ ಹೆಚ್ಚಿನ ಸಂಸ್ಕೃತ ಗ್ರಂಥಗಳು ಸಾರಸ್ವತ ಲೋಕಕ್ಕೆ ಇವರಿತ್ತ ಕೊಡುಗೆಯಾಗಿವೆ. ಕನ್ನಡದಲ್ಲಿ ಅಸಂಖ್ಯವಾದ ದೇವರನಾಮಗಳು ಇವರಿಂದ ರಚಿತವಾಗಿವೆ. ಶ್ರೀರಾಘವೇಂದ್ರ ಗುರುಸಾರ್ವಭೌಮರನ್ನು ಅವರ ಅವತಾರದ ಹಿನ್ನೆಲೆಯ ವರ್ಣನೆಯೊಂದಿಗೆ ಸ್ತುತಿಸುವ ಒಂದು ಕೃತಿ ಕನ್ನಡ ರಾಘವೇಂದ್ರವಿಜಯ. ಭಾಮಿನಿಷಟ್ಪದಿಯಲ್ಲಿ ಈ ಕೃತಿಯು ರಚನೆಗೊಂಡಿದೆ.

ವಿಜಯಕಾವ್ಯಗಳು ಸಾಹಿತ್ಯಲೋಕದ ವಿಶಿಷ್ಟಪ್ರಕಾರದ ಕೃತಿಗಳಾಗಿವೆ. ಇವುಗಳಲ್ಲಿ ಕವಿಯು ಕಥಾನಾಯಕನ ಚರಿತೆಯನ್ನು ತನ್ನೆಲ್ಲ ಭಕ್ತಿಯನ್ನು ಧಾರೆಯೆರೆದು ಸ್ತುತಿಸುತ್ತಾನೆ. ಕಥಾನಾಯಕನ ಪ್ರತಿಯೊಂದು ಚರ್ಯೆಯೂ ಕವಿಗೆ ಇಲ್ಲಿ ಕೌತುಕದ ಸಂಗತಿಯಾಗುತ್ತದೆ. ಆದರೆ ವಾಸ್ತವವನ್ನು ಅರುಹಲು ಯತ್ನಿಸುವ ಕವಿಯು ತನ್ನ ಕವಿತೆಯನ್ನು ಶಬ್ದಗಳ ಜಾಲವಾಗಿಸಲು ಬಿಡುವುದಿಲ್ಲ. ಆತನ ಉದ್ದೇಶವೇನಿದ್ದರೂ ಚರಿತೆಯನ್ನು ಬರೆಯುವಾಗ, ಓದುವಾಗ ಮತ್ತು ಕೇಳುವಾಗ ಭಕ್ತಿಯನ್ನು ಉದ್ದೀಪನಗೊಳಿಸುವುದು ಮಾತ್ರವೇ ಆಗಿರುತ್ತದೆ. ಇನ್ನೂ ಕೆಲವರು ಈ ಭಕ್ತಿಯ ಜೊತೆಗೆ ಓದುಗರಿಗೆ ಜ್ಞಾನದ ಸಂಪನ್ಮೂಲಗಳೇ ಆಗಿಬಿಡುತ್ತಾರೆ. ಆಚಾರ್ಯ ಮಧ್ವರ ಚರಿತ್ರೆಯನ್ನು ಬರೆದ ಶ್ರೀನಾರಾಯಣಪಂಡಿತಾಚಾರ್ಯರು, ಸಂಸ್ಕೃತದಲ್ಲಿ ಶ್ರೀರಾಘವೇಂದ್ರವಿಜಯ ಕಾವ್ಯವನ್ನು ಬರೆದ ಮಹಾಕವಿ ನಾರಾಯಣಾಚಾರ್ಯರು ಇಂತಹ ವರ್ಗಕ್ಕೆ ಸೇರಿದ ಮಹಾತ್ಮರು.

ಈ ಎರಡೂ ಕಾವ್ಯಗಳು ಸಂಸ್ಕೃತಬಲ್ಲವರಿಗೆ ಅತಿ ಮಧುರವೆನಿಸಬಲ್ಲವು. ಸಂಸ್ಕೃತ ಬಾರದಿರುವ ಸಜ್ಜನರು ಈ ಮಾಧುರ್ಯದಿಂದ ವಂಚಿತರಾಗುವುದು ಸಹಜ. ಆದರೆ ಈ ಕೊರತೆಯನ್ನು ನಿವಾರಿಸಲಿಕ್ಕಾಗಿಯೇ ಎನ್ನುವಂತೆ ಶ್ರೀಗುರುಜಗನ್ನಾಥದಾಸರು ಕನ್ನಡದಲ್ಲಿ ಶ್ರೀರಾಘವೇಂದ್ರತೀರ್ಥರ ಚರಿತ್ರೆಯನ್ನು ವಿವರಿಸುವ ಸಂಕ್ಷಿಪ್ತವಾದ ಕಾವ್ಯವನ್ನು ರಚಿಸಿದ್ದಾರೆ. ಇದಕ್ಕೂ ಶ್ರೀರಾಘವೇಂದ್ರವಿಜಯ ಎನ್ನುವ ಹೆಸರನ್ನೇ ಅವರು ಇಟ್ಟಿದ್ದಾರೆ.

ಮೇಲ್ನೋಟಕ್ಕೆ ಕೇವಲ ಶ್ರೀರಾಘವೇಂದ್ರರ ಚರಿತೆ ಮಾತ್ರ ಎನಿಸಬಹುದು. ಆದರೆ ನಿಧಾನವಾಗಿ, ಸಮಾಧಾನ ಚಿತ್ತದಿಂದ ಓದಿದರೆ ವೇದ ಹಾಗು ಪುರಾಣಗಳ ಸಾರವನ್ನು, ಅನೇಕ ಪ್ರಮೇಯವಿಷಯಗಳನ್ನು ದಾಸರು ಶ್ರೀ ಕೃತಿಯಲ್ಲಿ ವಿವರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಹರಿಸರ್ವೋತ್ತಮ ತತ್ವದ ಹಿರಿಮೆಯನ್ನು ದಾಸರು ಎತ್ತಿ ಹಿಡಿಯುವುದು ಇಲ್ಲಿನ ಅನೇಕ ಪದ್ಯಗಳಲ್ಲಿ ವೇದ್ಯವಾಗುತ್ತದೆ. ಹಾಗಾಗಿ ಇದು ಶ್ರೀರಾಯರನ್ನು ತಿಳಿದುಕೊಳ್ಳುವ ತವಕದಲ್ಲಿ  ಇರುವವರಿಗೆ ರಾಯರಿಗೂ ಪ್ರಿಯವಾದ ಮಧ್ವಶಾಸ್ತ್ರವನ್ನು ತಿಳಿಸುವ ಕಾವ್ಯವಾಗಿದೆ. ಮಗುವಿಗೆ ಬಾಯಿಗೆ ತಾಯಿಯು ಮೊದಲು ಕಲ್ಲುಸಕ್ಕರೆಯ ತುಣುಕನ್ನು ಹಾಕಿ ಅದರ ಹಿಂದೆ ಔಷಧವನ್ನು ಕುಡಿಸುವ ರೀತಿ ಇದು ಎಂದರೆ ತಪ್ಪಾಗಲಿಕ್ಕಿಲ್ಲ.

ಅಂದ ಹಾಗೆ, ಇದು ಮಹಾಕವಿ ಶ್ರೀನಾರಾಯಣಾಚಾರ್ಯರು ಬರೆದಿರುವ ಸಂಸ್ಕೃತ ರಾಘವೇಂದ್ರವಿಜಯ ಕಾವ್ಯದ ಸಂಸ್ಕೃತ ಅನುವಾದವಲ್ಲ. ಇದು ದಾಸರು ಶ್ರೀರಾಯರನ್ನು ಕಂಡ ನೂರಾರು ಬಗೆಗಳಲ್ಲಿ ಒಂದಿಷ್ಟೇ ಇಷ್ಟು ವಿವರಣೆ ಮಾತ್ರ.

ಶ್ರೀರಾಯರ ಚರಿತ್ರೆಯನ್ನು ಹೇಳುವುದು ಸಾಮಾನ್ಯರ ಕೈಲಾಗುವ ಮಾತಲ್ಲ.  ಅವರ ಕೃಪೆಗೆ ಸಂಪೂರ್ಣವಾಗಿ ಪಾತ್ರರಾದವರಿಗೆ ಮಾತ್ರವೇ ಇದು ಸಾಧ್ಯ. ಹಿಂದೆ ಹೇಳಿದಂತೆ ಶ್ರೀಗುರುಜಗನ್ನಾಥದಾಸರು ಶ್ರೀರಾಯರ ಅಂತರಂಗದ ಭಕ್ತರು. ಆದರೂ ಅವರು ತಮ್ಮ ಬಗ್ಗೆ ಸ್ವಾಹಂಕಾರ ಖಂಡನೆ ಮಾಡಿಕೊಂಡ ನಂತರ “ರಾಯರ ಕರುಣೆಯ ಬಲದಿಂದಲೇ ಅವರ ಚರಿತೆಯನ್ನು ಹೇಳುತ್ತೇನೆ” ಎಂದು ಈ ಕಾವ್ಯವನ್ನು ಪ್ರಾರಂಭಿಸುತ್ತಾರೆ.

ಶ್ರೀನೃಸಿಂಹಾವತರದ ಹಿನ್ನೆಲೆಯನ್ನು ವರ್ಣಿಸಿ, ಶ್ರೀಪ್ರಹ್ಲಾದನ ಭಕ್ತಿಯನ್ನು ಮೊದಲಿನೆರಡು ಸಂಧಿಗಳು ವಿವರಿಸಿದರೆ, ನಂತರದ ನಾಲ್ಕು ಸಂಧಿಗಳು ಶ್ರೀವ್ಯಾಸರಾಜರ ಅವತಾರ, ಅವರ ಕಾಲದ ಐತಿಹಾಸಿಕ ಘಟನೆಗಳನ್ನು ವಿವರಿಸುತ್ತವೆ. ಕೊನೆಯ ಮೂರು ಸಂಧಿಗಳಲ್ಲಿ ಶ್ರೀರಾಘವೇಂದ್ರಪ್ರಭುಗಳ ಮಹಿಮೆಯನ್ನು ಕೊಂಡಾಡುತ್ತವೆ.

ಈ ಕಾವ್ಯರಚನೆ ಅಭಿಪ್ರಾಯವು ಸುಸ್ಪಷ್ಟ. ಮಹಾತ್ಮರಾದವರ ಬಗ್ಗೆ ತಿಳಿದಷ್ಟು ಮಾತುಗಳನ್ನು ಒಳ್ಳೆಯ ಭಾವನೆಯಿಂದ ಆಡುತ್ತಿದ್ದರೆ ಅದು ನಮ್ಮ ಶ್ರೇಯಸ್ಸಿನ ಮಾರ್ಗವಾಗುವುದು ಎಂಬುದು. ಈ ಅಂಶವನ್ನು ಮನಸ್ಸಿನಲ್ಲಿಟ್ಟು ಕೊಂಡು ದಿನಕ್ಕೆ ಒಂದಾದರೂ ಸಂಧಿಯನ್ನು ಓದಿದರೆ ಶ್ರೀಗುರುರಾಜರಿಗೆ ಅದು ಸಂತೋಷವನ್ನು ಕೊಡುತ್ತದೆ.

Download : Download Kannada Raghavendra Vijaya E-Book  File Size : 9.6 MB

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ನದಿಯ ಸೆರಗ ಹಿಡಿದು ಒಂದು ಪಾವನ ಯಾತ್ರೆ

ಪೂಜ್ಯ ಗುರುಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ೬೦ನೆ ವರ್ಷದ ಜನ್ಮನಕ್ಷತ್ರದ ಅಂಗವಾಗಿ ಹೊರತಂದ “ರೌಪ್ಯದೀಪ” ಎನ್ನುವ ಸ್ಮರಣಸಂಚಿಕೆಗೆ ಬರೆದ ಲೇಖನ ಇದು. ಬರೆದ ಎನ್ನುವುದಕ್ಕಿಂತ ಅವರೇ ನನ್ನಲ್ಲಿ ಚೈತನ್ಯತುಂಬಿ ಬರೆಸಿದ ಲೇಖನ ಎನ್ನುವುದು ಸರಿ. ಯಾಕೆಂದರೆ ರೌಪ್ಯದೀಪದಲ್ಲಿ ಲೇಖನಗಳನ್ನು ಬರೆದ ಇತರರು ಸಾಮಾನ್ಯರಲ್ಲ. ಎಲ್ಲರೂ ಅತಿರಥ ಮಹಾರಥರೇ. ಎಲ್ಲರೂ ವೇದಾಂತ ಹಾಗು ಇತಿಹಾಸದ ವಿಷಯಗಳಲ್ಲಿ ಅಗಾಧವಾದ ತಿಳುವಳಿಕೆಯನ್ನು ಸಂಪಾದಿಸಿದ ವಿದ್ವಾಂಸರು. ಇಂತಹವರ ಮಧ್ಯ ನನ್ನದೂ ಒಂದು ಲೇಖನ ಮೂಡಿಬಂದಿರುವುದು ನನ್ನ ಸಾಮರ್ಥ್ಯದಿಂದಲ್ಲ. ಅದು ಗುರುಗಳ ಕೃಪೆ. ಅಷ್ಟೇ.

ಹಂಸ ಮಧ್ಯೇ ಬಕೋ ಯಥಾ ಎನ್ನುವ ಹಾಗೆ ನನ್ನ ಯೋಗ್ಯತೆ. ಬಣ್ಣ ಮಾತ್ರ ಹಂಸದಂತೆ ಬಿಳಿ, ಗುಣ ಮಾತ್ರ ಕೊಕ್ಕರೆಯದ್ದೇ. ಕೆಸರವಾಸಕ್ಕೇ ಸರಿಯೆನಿಸಿದ ಕೊಕ್ಕರೆಗೂ ಸರೋವರವಿಹಾರದ ಅವಕಾಶ ಕಲ್ಪಿಸಿದ ಗುರುಗಳ ಕರುಣೆಗೆ ನಾನು ಚಿರಋಣಿಯಾಗಿದ್ದೇನೆ.

************************

ಲೇಖನವನ್ನು ಸಂಪೂರ್ಣವಾಗಿ ಓದುವ ಮೊದಲು ಇರಾನಿನಿಂದ ಪ್ರಾರಂಭಿಸಿ ಮಯನ್ಮಾರ್ ದೇಶದವರೆಗೆ, ರಷ್ಯದ ದಕ್ಷಿಣತುದಿಯಿಂದ ಆರಂಭಿಸಿ ಶ್ರೀಲಂಕೆಯವರೆಗೆ ವ್ಯಾಪಿಸಿದ್ದ ಪ್ರಾಚೀನ ಭಾರತದೇಶವನ್ನು ಮನದಲ್ಲಿ ಕಲ್ಪಿಸಿಕೊಳ್ಳಿರಿ.

ಲಹರಿ – 1

ನದಿಗಳೆಂದರೆ ಕೇವಲ ನೀರಿನ ಹರಿವು ಮಾತ್ರ ಎಂದೆಣಿಸಲಾಗದು. ನದಿಯು ಅಸಂಖ್ಯವಾದ ಜೀವಿಗಳಿಗೆ ಚೇತನದಾಯಿ. ಅಲ್ಲಿಗೂ ಅದರ ವ್ಯವಹಾರವನ್ನು ಸೀಮಿತಗೊಳಿಸಲಾಗದು. ನದಿಗಳು ಸಂಸ್ಕೃತಿಯೊಂದನ್ನು ಹುಟ್ಟುಹಾಕಿ ಸಾವಿರಾರು ವರ್ಷಗಳ ಕಾಲ ಅದನ್ನು ಜೀವಂತವಾಗಿರುವಂತೆ ನೋಡಿಕೊಳ್ಳುವ ಶಕ್ತಿಯ ಸ್ರೋತಗಳು ಎನ್ನುವುದು ಸರಿಯಾದ ಅಭಿಪ್ರಾಯ. ಜಗತ್ತಿನ ಅನೇಕ ಬೃಹತ್ ನದಿಗಳು ಹಾಗು ಅವುಗಳ ಜೊತೆಗೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ ಜನಸಂಸ್ಕೃತಿಗಳ ಹಿನ್ನೆಲೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಭಿಪ್ರಾಯಕ್ಕೆ ಪುಷ್ಟಿ ದೊರೆಯುವುದು. ಭರತವರ್ಷದ ಗಂಗಾದಿ ಪುಣ್ಯನದಿಗಳು, ಕಗ್ಗತ್ತಲೆಯ ಖಂಡದಿಂದ ಹೊರಹೊಮ್ಮಿ ಮರಳುಗಾಡಿನಲ್ಲಿಯೂ ಜಿಜೀವಿಷೆಯನ್ನು ಉಂಟುಮಾಡಿರುವ ಈಜಿಪ್ಟಿನ ನೀಲನದಿ, ಇರಾಕಿನ ಯೂಫ್ರೆಟಿಸ್ ಹಾಗು ಟೈಗ್ರಿಸ್ ನದಿಗಳು, ಚೀನದ ಯಾಂಗ್ಟ್ಸೆ, ದಕ್ಷಿಣ ಅಮೆರಿಕದ ಅಮೆಝಾನ್ ಹೀಗೆ ಅನೇಕ ನದಿಗಳು ವಿವಿಧ ಸಂಸ್ಕೃತಿಗಳಿಗೆ ಜನ್ಮ ನೀಡಿರುವ ತೊಟ್ಟಿಲುಗಳಾಗಿವೆ.

ಜಗತ್ತಿನ ಇತರೆಡೆ ಇತರೆಡೆ ನದಿಗಳನ್ನು ಕೇವಲ ಜೀವನಾಡಿ ಎನ್ನುವ ಭೌತಿಕರೂಪದಲ್ಲಿ ಮಾತ್ರ ನೋಡಿದರೆ ಭರತವರ್ಷದಲ್ಲಿ ನದಿಗಳ ದೈವಿಕರೂಪವನ್ನು ಕಣ್ಣಾರೆ ಕಂಡು ಅದನ್ನು ಆತ್ಮಾನುಸಂಧಾನ ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ವೇದಗಳು ನೂರಾರು ನದಿಗಳನ್ನು ಹಾಡಿಹೊಗಳಿರುವುದು. ಈ ಸ್ತೋತ್ರಗಳಲ್ಲಿ ನದಿಗಳನ್ನು ಕೇವಲ ಬಾಯಾರಿಕೆಯನ್ನು ತಣಿಸುವ ನೀರಿನ ತಾಣಗಳಾಗಿ ನೋಡದೆ ಆತ್ಮೋನ್ನತಿಯ ಹೆದ್ದಾರಿಯನ್ನಾಗಿ ಪರಿಗಣಿಸಲಾಗಿದೆ. ನದಿಯ ಅಭಿಮಾನಿದೇವತೆಯ ಕೃಪೆಯನ್ನು ಪಡೆಯದೆ ಮುಂದಿನ ಯಾವ ಶುಭ ಕಾರ್ಯವೂ ಸಾಗದು ಎನ್ನುವಷ್ಟರ ಮಟ್ಟಿಗೆ ಜನಜೀವನದೊಂದಿಗೆ ನದಿಗಳ ಸಂಬಂಧ ಹೆಣೆದುಕೊಂಡಿದೆ. ಆದರೆ ಪ್ರಸ್ತುತಕಾಲದ ದೌರ್ಭಾಗ್ಯವೆಂದರೆ ಕಲಿಪುರುಷನ ಪ್ರಭಾವದಿಂದ ಭರತವರ್ಷದ ಅನೇಕ ನದಿಗಳು ಒಂದೋ ತಮ್ಮ ಪ್ರಾಚೀನ ಹೆಸರನ್ನು ಕಳೆದುಕೊಂಡುಬಿಟ್ಟಿವೆ ಅಥವಾ ಈಗಿನ ಪೀಳಿಗೆಗೆ ಅವುಗಳ ಪರಿಚಯವೇ ಇಲ್ಲ. ಇನ್ನೂ ಅನೇಕ ನದಿಗಳು ಪರದೇಶಗಳ ಪಾಲಾಗಿಬಿಟ್ಟಿವೆ.

ಪ್ರಸಕ್ತ ಲೇಖನವು ಈ ವೈದಿಕಮಂತ್ರಗಳ ಅಂತರಾಳವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಇದು ಅನ್ಯರ ದಾಳಿಗೊಳಗಾಗಿ ಮೂಲಹೆಸರನ್ನು ಕಳೆದುಕೊಂಡ ನದಿಗಳ ಈಗಿನಕಾಲದ ವಿವರಗಳನ್ನು ಇತಿಹಾಸಜ್ಞರು ಗುರುತಿಸಿರುವಂತೆ ಸಂಗ್ರಹಿಸಿ ಒಂದೆಡೆ ಕೊಡುವ ಪ್ರಯತ್ನ ಮಾತ್ರ. ಆಕಸ್ಮಿಕವಾಗಿಯಾಗಲಿ ಉದ್ದೇಶಪೂರ್ವಕವಾಗಿಯೇ ಆಗಲಿ ಈ ಸ್ಥಳಗಳಲ್ಲಿ ಓಡಾಡುವ ಅನುಕೂಲ ನಿಮಗೆ ದೊರೆತಲ್ಲಿ ನೀವೇ ಪುಣ್ಯವಂತರು. ಸ್ನಾನ ಮಾಡಲು/ಪ್ರೋಕ್ಷಣೆ ಮಾಡಿಕೊಳ್ಳಲು ಅವಕಾಶ ದೊರೆತಲ್ಲಿ ನೀವೇ ಮಹಾಭಾಗ್ಯಶಾಲಿಗಳು.

ಎಲ್ಲರೂ ತಿಳಿದಿರುವಂತೆ ಭಗೀರಥನ ಪ್ರಯತ್ನದಿಂದ ದೇವಲೋಕದ ಗಂಗೆಯು ಭೂಲೋಕಕ್ಕೆ ಬಂದಳಷ್ಟೇ. ಅಪರಿಮಿತವಾದ ಜಲರಾಶಿ ಹಾಗು ವೇಗವನ್ನು ಹೊಂದಿದ್ದ ಗಂಗೆ ಮೇರು ಪರ್ವತದ ತುದಿಯಲ್ಲಿ ಮೇಲಿಂದ ಅಪ್ಪಳಿಸಿದಾಗ ಹೊರಚಿಮ್ಮಿದ ಶಾಖೆಗಳು ಅಸಂಖ್ಯ. ಅವುಗಳಲ್ಲಿ ಭಾಗವತ ಮಹಾಪುರಾಣವು ನಾಲ್ಕು ಶಾಖೆಗಳನ್ನು ಪ್ರಧಾನ ಎಂಬುದಾಗಿ ಪರಿಗಣಿಸಿದೆ. ಸೀತಾ, ಭದ್ರಾ, ಚಕ್ಷು ಹಾಗು ಅಲಕನಂದಾ ಎಂಬುವುವೇ ಆ ಪ್ರಧಾನ ಶಾಖೆಗಳು.

ಸೀತಾನದಿಯು ಕೇಸರಾಚಲ ಹಾಗು ಗಂಧಮಾದನ ಪರ್ವತಗಳನ್ನು ಬಳಸಿಕೊಂಡು ಮುಂದೆ ಭದ್ರಾಶ್ವ ವರ್ಷದಲ್ಲಿ ಹಾಯ್ದು ಪಶ್ಚಿಮಕ್ಕೆ ತಿರುಗಿ ಕೊನೆಗೆ ಸಮುದ್ರವನ್ನು ಸೇರುತ್ತದೆ ಎಂದು ಭಾಗವತವು ವರ್ಣಿಸುತ್ತದೆ. (ಭಾಗವತ ೫:೧೭:೬). ಪ್ರಸಕ್ತ ಕಾಲಮಾನದಲ್ಲಿ ಚೀನಕ್ಕೆ ತಾನು ಬಿಟ್ಟುಕೊಟ್ಟಿದ್ದೇನೆ ಎಂದು ಪಾಕಿಸ್ತಾನ ಹೇಳುತ್ತಿರುವ ಆದರೆ ಭಾರತಕ್ಕೆ ಸೇರಬೇಕಾದ ಸಿಂಜಿಯಾಂಗ್ ಪ್ರಾಂತ್ಯವನ್ನು ಇತಿಹಾಸತಜ್ಞರು ಭದ್ರಾಶ್ವಖಂಡವೆಂದು ಗುರುತಿಸಿದ್ದಾರೆ. ಈ ಭಾಗದಲ್ಲಿ ಹರಿಯುತ್ತಿರುವ ಯಾರ್ಕಂದ್ ನದಿಯೇ ಪ್ರಾಚೀನಕಾಲದ ಸೀತಾನದಿಯೆಂದು ತಜ್ಞರ ಅಭಿಮತ. ಪ್ರಾಚೀನ ಚೀನಿ ಯಾತ್ರಿಕನಾದ ಹು-ಯೆನ್-ತ್ಸಾಂಗ್ (ಯುವಾನ್ಜಾಂಗ್/ಜುವಾನ್ಜಾಂಗ್) ಇದನ್ನು ’ಸಿಟೋ ’[1] ಎಂದು ಕರೆದದ್ದು ತಜ್ಞರ ಈ ಅಭಿಪ್ರಾಯಕ್ಕೆ ಪುಷ್ಟಿಯನ್ನು ಕೊಡುತ್ತದೆ.

ಭದ್ರಾ ಎನ್ನುವ ಶಾಖೆಯು ಮೇರುಪರ್ವತದ ಮೇಲಿನಿಂದ ಚಿಮ್ಮಿ ಕುಮುದಪರ್ವತ, ನೀಲಪರ್ವತ, ಶ್ವೇತಪರ್ವತಗಳ ಮೇಲಿನಿಂದ ಧುಮುಕಿ ಉತ್ತರಕುರು ದೇಶದೊಳಗೆ ಪ್ರವೇಶಿಸುತ್ತದೆ. ಕೊನೆಗೆ ಉತ್ತರಭಾಗದಲ್ಲಿರುವ ಸಮುದ್ರದೊಳಗೆ ಸೇರುತ್ತದೆ ಎಂದು ಭಾಗವತವು ಹೇಳಿದೆ (ಭಾಗವತ ೫:೧೭:೮). ಉತ್ತರಕುರುದೇಶವಿರುವುದು ಪ್ರಾಚೀನ ಭಾರತದ ಉತ್ತರಭಾಗದಲ್ಲಿ. ಈ ಭಾಗದಲ್ಲಿ ಹರಿದ ಭದ್ರಾ ನದಿಗೆ ಕಾಲಕ್ರಮೇಣ ಹೆಸರು ಬದಲಾಯಿಸಿ ಹೋಯಿತು. ಈ ಭಾಗದ ದೇಶಗಳು ಇಸ್ಲಾಂ ಹಾಗು ಕ್ರೈಸ್ತಮತಾವಲಂಬಿಗಳಾಗಿದ್ದರ ಪರಿಣಾಮವಾಗಿ ಭದ್ರಾ ನದಿಗೆ ತಮ್ಮದೇ ಆದ ಹೆಸರನ್ನು ಸಹ ಇಟ್ಟವು. ಸಿರ್ ದರಿಯಾ[2] ಎಂಬುದೇ ಅವರು ಹೇಳುತ್ತಿರುವ ಹೆಸರು. ಪ್ರಸಕ್ತ ಕಾಲದಲ್ಲಿ ಈ ನದಿಯ ಉಗಮಸ್ಥಾನವಾದ ಹಿಮದರಾಶಿಯು ಕಿರ್ಗಿಸ್ತಾನ್ ಹಾಗು ಉಝ್ಬೆಕಿಸ್ತಾನ ದೇಶಗಳ ಸರಹದ್ದಿನಲ್ಲಿದೆ. ಮುಂದೆ ನದಿಯು ತಝಿಕಿಸ್ತಾನ ಹಾಗು ಕಝಕಿಸ್ತಾನದಲ್ಲಿ ಹರಿಯುತ್ತದೆ. ೨೨೧೨ಕಿ.ಮೀ ಪಯಣಿಸಿ ಈ ನದಿಯು ಕೊನೆಯಲ್ಲಿ ಅರಾಲ್ ಸಮುದ್ರವನ್ನು ಉತ್ತರಭಾಗದಿಂದ ಪ್ರವೇಶಿಸುತ್ತದೆ.

ಮೂಲಗಂಗೆಯದ್ದೇ ಇನ್ನೊಂದು ಶಾಖೆಯಾದ ಚಕ್ಷುವು ಕೇತುಮಾಲಾ ವರ್ಷದ ಕಡೆಗೆ ತನ್ನ ಪಯಣ ಬೆಳೆಸಿತೆಂದು ಭಾಗವತ ಹೇಳಿದೆ (ಭಾಗವತ ೫:೧೭:೭). ಈ ನದಿಗೆ ಈಗ ಅಫಘಾನಿಸ್ಥಾನದ ಒಣಭೂಮಿಯನ್ನು ತಣಿಸುವ ಕಾಯಕ. ಪಂಜ್ ಶಿರ್ ಎನ್ನುವ ಇನ್ನೊಂದು ದೊಡ್ಡ ನದಿಯನ್ನು ತನ್ನೊಳಗೆ ಸೇರಿಸಿಕೊಂಡು ಮುಂದುವರೆಯುವ ಚಕ್ಷುವು ಈಗ ಆಫಘಾನಿಸ್ಥಾನದ ಮಹಾನದಿ. ಇದರ ಒಟ್ಟು ಉದ್ದ ೨೪೦೦ ಕಿ.ಮೀ. ಪಂಜ್ ನದಿಯು ಇದರೊಟ್ಟಿಗೆ ಸಂಗಮವಾಗುವವರೆಗೂ ಇದಕ್ಕೆ ವಕ್ಷ್ ಎನ್ನುವ ಹೆಸರೇ ಇದೆ. ಇದಾದರೂ ಚಕ್ಷು ಎನ್ನುವ ಹೆಸರಿನ ರೂಪಾಂತರವೇ ಆಗಿದೆ. ಇದನ್ನೇ ರೋಮನ್ನರು ಹಾಗು ಗ್ರೀಕರು ಆಕ್ಸಸ್ ಎಂದು ಕರೆದರು. ಪಂಜ್ ಮತ್ತು ವಕ್ಷ್ ನದಿಗಳ ಸಂಗಮವಾದ ನಂತರ ಇದಕ್ಕೆ ಅಮು ದರಿಯಾ ಎನ್ನುವ ಹೆಸರು ಬಂದಿದೆ. ಈ ಹೊಸ ನಾಮಕರಣಕ್ಕೆ ಪರ್ಷಿಯನ್ನರು ಕಾರಣೀಭೂತರು. ಈ ಬದಲಾವಣೆಗಳು ನಡೆದದ್ದು ಸಾವಿರಕ್ಕೂ ವರ್ಷಗಳ ಹಿಂದೆ. ಪರ್ಷಿಯನ್ ಭಾಷೆಯಲ್ಲಿ ದರ್ಯಾ ಎಂದರೆ ನದಿ. ಭಾಗವತದಲ್ಲಿ ಚಕ್ಷುನದಿಯು ಪಶ್ಚಿಮದಿಕ್ಕಿನಲ್ಲಿರುವ ಸಮುದ್ರದೊಳಗೆ ಒಂದಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಈ ಅಮುದರಿಯಾ ನದಿಯು ಅಫಘಾನಿಸ್ಥಾನದಲ್ಲಿ ಹರಿದು ಮುಂದೆ ಪಶ್ಚಿಮ ದಿಕ್ಕಿನಲ್ಲಿರುವ ಅರಾಲ್ ಸಮುದ್ರ[3]ದಲ್ಲಿ ಸೇರುತ್ತದೆ.

ಆಕಾಶಗಂಗೆಯ ನಾಲ್ಕನೆಯ ಪ್ರಧಾನ ಶಾಖೆಯಾದ ಅಲಕನಂದೆಯು ಬ್ರಹ್ಮಲೋಕದಿಂದ ಕೆಳಗಿಳಿದು, ಹೇಮಕೂಟ, ಹಿಮಕೂಟ ಪರ್ವತಗಳ ಮೇಲೆ ರಭಸದಿಂದ ಧುಮುಕಿದಳು. ಆ ಪರ್ವತಶಿಖರಗಳನ್ನು ತನ್ನ ಜಲರಾಶಿಯಲ್ಲಿ ಮುಳುಗಿಸಿ ಮುಂದೆ ದಕ್ಷಿಣದಿಕ್ಕಿನಲ್ಲಿರುವ ಭರತವರ್ಷಕ್ಕೆ ಹರಿದುಬಂದಳು. ಪ್ರಸಕ್ತ ಭಾರತಕ್ಕೆ ದೊರಕಿರುವ ಗಂಗೆಯ ಪ್ರಧಾನಶಾಖೆ ಇದೊಂದೆ. ಅಲಕನಂದೆಯು ಅಲಕಾಪುರಿಯ ಮೂಲಕ ಭರತವರ್ಷವನ್ನು ಪ್ರವೇಶಿಸಿ ರಭಸದಿಂದ ಮುನ್ನುಗ್ಗುತ್ತಾಳೆ. ಸುಮಾರು ೧೯೫ಕಿ.ಮೀ ಪಯಣಿಸಿದ ನಂತರ ಹಿಮಾಲಯದ ಇನ್ನೊಂದು ಪಾರ್ಶ್ವದಲ್ಲಿ ಚಿಮ್ಮಿದ ಗಂಗೆಯ ಇನ್ನೊಂದು ಶಾಖೆಯಾದ ಭಾಗೀರಥಿಯು ಬಂದು ಅಲಕನಂದೆಯೊಂದಿಗೆ ಸಂಗಮಿಸುತ್ತಾಳೆ. ಈ ಸ್ಥಳಕ್ಕೆ ದೇವಪ್ರಯಾಗವೆಂದು ಹೆಸರು. ಈ ಸಂಗಮದ ನಂತರ ಅಲಕನಂದಾ ಹಾಗು ಭಾಗೀರಥಿ ಎನ್ನುವ ಎರಡೂ ಹೆಸರುಗಳು ಮರೆಯಾಗಿ[4] “ಗಂಗಾ” ಎನ್ನುವ ಜಗತ್ಪ್ರಸಿದ್ಧ ಹೆಸರು ಈ ನದಿಗೆ ದೊರೆಯುತ್ತದೆ.

ಲಹರಿ – 2

ಭಾಗವತವು ವಿವರಿಸಿರುವ ಗಂಗೆ ಹಾಗು ಅವಳ ಪ್ರಧಾನ ಶಾಖೆಗಳನ್ನು ನೋಡಿಯಾದ ಮೇಲೆ, ಋಗ್ವೇದವು ಸ್ತುತಿಸಿರುವ ಕೆಲವು ನದಿಗಳತ್ತ ಗಮನ ಹರಿಸೋಣ.

ಪ್ರತಿನಿತ್ಯ ಕಲಶಪೂಜೆಯನ್ನು ಮಾಡುವಾಗ ಹೇಳುವ ಶ್ರುತಿಯೊಂದು ಹೀಗಿದೆ.

ಇಮಂ ಮೇ ಗಂಗೇ ಯಮುನೆ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣಿಯಾ |
ಅಸಿಕ್ನಿಯಾ ಮರುದ್ವೃಧೆ ವಿತಸ್ತಯಾರ್ಜಿಕಿಯೇ ಶೃಣುಹ್ಯಾ ಸುಷೋಮಯಾ || (ಋಗ್ವೇದ ೧೦:೭೫:೫)

ಇದು ಋಗ್ವೇದದ ೧೦ನೆಯ ಮಂಡಲದಲ್ಲಿರುವ ೭೫ನೆಯ ಸೂಕ್ತ, ನದೀ ಸ್ತುತಿ[5] ಸೂಕ್ತವೆಂದೇ ಪ್ರಸಿದ್ದಿಯಾಗಿದೆ. ಈ ಸೂಕ್ತದ ದ್ರಷ್ಟಾರರು ಸಿಂಧುಕ್ಷಿತ ಪ್ರೈಯಮೇಧರು. ಇಲ್ಲಿ ಕೆಲವು ನದಿಗಳ ಅಭಿಮಾನಿ ದೇವತೆಗಳನ್ನು ಕುರಿತು ಪ್ರಾರ್ಥಿಸಿಲಾಗಿದೆ. ಅವುಗಳು ಯಾವುವೆಂದರೆ ಗಂಗೆ, ಯಮುನೆ, ಸರಸ್ವತಿ, ಶುತುದ್ರಿ, ಪರುಷ್ಣಿ, ಅಸಿಕ್ನೀ, ಮರುದ್ವೃಧಾ, ವಿತಸ್ತಾ, ಅರ್ಜಿಕೀ ಹಾಗು ಸುಷೋಮಾ.

ಪ್ರಾರ್ಥನೆಯು ಮುಂದಿನ ಮಂತ್ರಗಳಲ್ಲಿ ಮುಂದುವರೆಯುತ್ತದೆ.

ತೃಷ್ಟಾಮಯಾ ಪ್ರಥಮಂ ಯಾತವೇ ಸಜೂಃ ಸುಸರ್ತ್ವಾ ರಸಯಾ ಶ್ವೇತ್ಯಾ ತ್ಯಾ |
ತ್ವಂ ಸಿಂಧೋ ಕುಭಯಾ ಗೋಮತೀಂ ಕ್ರುಮುಂ ಮೆಹನ್ತ್ವಾ ಸರಥಂ ಯಾಭಿರೀಯಸೇ ||

ಈ ಶ್ರುತಿಯಲ್ಲಿ ಹೆಸರಿಸಿರುವ ನದಿಗಳು ಇವುಗಳು : ತೃಷ್ಟಮಾ, ಸುಸರ್ತು, ರಸಾ, ಶ್ವೇತೀ, ಸಿಂಧು, ಕುಭಾ, ಗೋಮತೀ, ಕೃಮು, ಮತ್ತು ಮೆಹನ್ತು.

ಇದೇ ಸೂಕ್ತದ ಎಂಟನೆಯ ಮಂತ್ರದಲ್ಲಿ

ಸ್ವಶ್ವಾ ಸಿಂಧುಃ ಸುರಥಾ ಸುವಾಸಾ ಹಿರಣ್ಯಯೀ ಸುಕೃತಾ ವಾಜಿನೀವತೀ |
ಊರ್ಣಾವತೀ ಯುವತಿಃ ಸೀಲಮಾವತ್ಯುತಾಧಿ ವಸ್ತೆ ಸುಭಗಾ ಮಧುವೃಧಮ್ ||

ಎಂದು ಹೇಳಲಾಗಿದೆ. ಇಲ್ಲಿ ಪ್ರಸ್ತಾಪಿಸಿರುವ ನದಿಗಳು ಯಾವುವೆಂದರೆ ಊರ್ಣಾವತೀ ಹಾಗು ಸೀಲಮಾವತೀ.

ಲಹರಿ – ೩

ಈಗ ಈ ಮೇಲೆ ತಿಳಿಸಿದ ನದಿಗಳ ಸುಂದರವಾದ ವೈದಿಕ ಹೆಸರುಗಳು ಏನಾಗಿವೆ? ಯಾವ ನದಿಯು ಎಲ್ಲಿ ಹರಿಯುತ್ತಿದೆ ಎಂಬುದನ್ನು ಸಂಕ್ಷಿಪ್ತದಲ್ಲಿ ನೋಡೋಣ.

ಗಂಗೆ : ಈಗಾಗಲೇ ಮೇಲೆ ತಿಳಿಸಿರುವಂತೆ ಅಲಕನಂದೆ ಹಾಗು ಭಾಗೀರಥಿನದಿಗಳ ಸಂಗಮದಿಂದ ಉಂಟಾಗಿದ್ದು ಗಂಗಾನದಿ. ತನ್ನ ಒಟ್ಟು ಹರಿವಿನಲ್ಲಿ ೯೦ಕ್ಕೂ ಹೆಚ್ಚು ಪ್ರತಿಶತ ಭರತವರ್ಷದಲ್ಲೇ ಕ್ರಮಿಸಿರುವ ಪ್ರಯುಕ್ತ (ಒಟ್ಟು ಉದ್ದ ೨೫೨೫ಕಿ.ಮೀ)ಭಾರತೀಯರಿಂದ ಗಂಗೆಯ ಹೆಸರಿಗೆ ಯಾವುದೇ ಅಪಚಾರವಾಗಿಲ್ಲ. (ನದಿಯನ್ನೇ ಮಲಿನಗೊಳಿಸಿ ಗಂಗೆಗೇ ಅಪಚಾರ ಮಾಡಿದ್ದು ಬೇರೆಯ ವಿಷಯ). ಆಂಗ್ಲರನ್ನೇ ಹಿಂಬಾಲಿಸುವ ಮಂದಿಗೆ ಮಾತ್ರ ಈಗಲೂ ಇವಳು ಗ್ಯಾಂಜಿಸ್!

ಸಮುದ್ರಕ್ಕೆ ಸೇರುವ ಮೊದಲು ಗಂಗೆ ಅನೇಕ ಕವಲುಗಳಾಗಿ ಮುಂದೆ ಸಾಗುತ್ತಾಳೆ. ಇವುಗಳಲ್ಲಿ ಒಂದು ಪ್ರಧಾನ ಕವಲು ಬಾಂಗ್ಲಾದೇಶದಲ್ಲಿಯೂ ಮುಂದುವರೆದಿದೆ. ಆ ದೇಶದಲ್ಲಿ ಗಂಗೆಗೆ ಪದ್ಮಾನದಿ ಎನ್ನುವ ಹೆಸರಿನಿಂದ ಕರೆಯುತ್ತಾರೆ.

ಯಮುನಾ: ಸಾವಿರಾರು ವರ್ಷಗಳ ಹಿಂದೆ ಸರಸ್ವತಿಯ ಉಪನದಿಯಾಗಿತ್ತು. ಸಧ್ಯದಲ್ಲಿ ಗಂಗೆಯ ಉಪನದಿಯಾಗಿದೆ. ಸಂಪೂರ್ಣವಾಗಿ ಭಾರತದೇಶದಲ್ಲಿಯೇ ಹರಿದಿದೆ. ಹೆಸರೇನೂ ಹಾಳಾಗಿಲ್ಲ. ಆದರೆ ಉತ್ತರಭಾರತದ ಕೆಲವೆಡೆ ಜಮುನಾ ಎಂದು ಕರೆಯುವ ರೂಢಿಯಿದೆ. ಯಕಾರವನ್ನು ಜಕಾರವನ್ನಾಗಿ ಉಚ್ಚರಿಸುವುದರ ಪರಿಣಾಮವಿದು.

ಸರಸ್ವತೀ : ಈ ನದಿಯ ಬಗ್ಗೆ ಬರೆಯಲು ಹೊರಟರೆ ಒಂದು ಪುಸ್ತಕವೇ ಬೇಕಾದೀತು. ಋಗ್ವೇದದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿಸಲ್ಪಟ್ಟ ನದಿ ಇದು. ಅಂಬಿತಮೆ, ನದೀ ತಮೆ, ದೇವೀತಮೆ[6] ಎಂಬ ಹೊಗಳಿಕೆಗೆ ಪಾತ್ರವಾದ ನದಿ, ಸರಸ್ವತೀ. ಅತಿ ರಭಸವಾಗಿ, ಅತಿ ವಿಸ್ತಾರವಾಗಿ, ಅತಿ ಹೆಚ್ಚಿನ ಜಲರಾಶಿಯೊಂದಿಗೆ ಹರಿದು ಮುಂದೆ ಸಮುದ್ರದಲ್ಲಿ ಸೇರುತ್ತಾಳೆ ಎಂದು ಋಗ್ವೇದವು ವರ್ಣಿಸಿದೆ. ಆದರೆ ಮಹಾಭಾರತದಲ್ಲಿ ಇದು ಅದೃಶ್ಯವಾದ ಸ್ಥಳದಿಂದ ಬಲರಾಮ ತೀರ್ಥಯಾತ್ರೆಯನ್ನು ಕೈಗೊಂಡ ಎಂಬುದಾಗಿ ಹೇಳಿದ್ದಾರೆ. ಇದರ ಅರ್ಥ ಸಮುದ್ರವನ್ನು ಸೇರುತ್ತಿದ್ದ ಮಹೋನ್ನತವಾದ ನದಿಯೊಂದು ಕಾಲಾಂತರದಲ್ಲಿ ನಿಧಾನವಾಗಿ ಅದೃಶ್ಯವಾಗಿ ಹೋಗಿದೆ ಎಂಬುದಾಗಿಯೇ. ಈ ಕಣ್ಮರೆಯಾದ ಸ್ಥಳದ ಹೆಸರು ಮಹಾಭಾರತದಲ್ಲಿ ವಿನಶನ ಎಂಬುದಾಗಿ ಇದೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಕಾಲಿಬಂಗ್/ಕಾಲಿಬಂಗನ್ ಎನ್ನುವ ಈಗಿನ ಸ್ಥಳವೇ ಆಗಿನ ವಿನಶನ.

ಪ್ರಾಯಶಃ ಈ ಕಣ್ಮರೆಯ ಕಾರಣಗಳನ್ನು ತಿಳಿಯಲು ಮಾಡಿರುವಷ್ಟು ಸಂಶೋಧನೆಗಳನ್ನು ಇತಿಹಾಸಜ್ಞರು ಹಾಗೂ ಭೂಗರ್ಭಶಾಸ್ತ್ರವೇತ್ತರು ಬೇರಾವ ನದಿಗೂ ಮಾಡಿಲ್ಲ. ಅರಾವಳಿ ಪರ್ವತವು ನಿಧಾನವಾಗಿ ಭೂಮಿಯಿಂದ ಮೇಲೇರುವ ಪ್ರವೃತ್ತಿಯುಳ್ಳದ್ದು. ಇದರ ಪರಿಣಾಮವಾಗಿ ಇದಕ್ಕೆ ಉಪನದಿಗಳಾಗಿದ್ದ ಶುತುದ್ರಿ, ಯಮುನಾ, ದೃಷದ್ವತೀ ಹಾಗು ಈ ಕಣಿವೆಯ ಹಲವಾರು ಚಿಕ್ಕ ನದಿಗಳು ತಮ್ಮ ಪ್ರವಾಹದ ದಿಕ್ಕನ್ನು ಬದಲಾಯಿಸಿಕೊಂಡಿವೆ ಎಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ತನ್ನ ಒಡಲನ್ನು ಸೇರುತ್ತಿದ್ದ ಮೂರು ಬೃಹತ್ ನದಿಗಳು ತನ್ನ ಸಹವಾಸವನ್ನೇ ತೊರೆದಿದ್ದರಿಂದ ಸರಸ್ವತಿಯ ವೇಗ ಹಾಗು ನೀರಿನ ಪ್ರಮಾಣದಲ್ಲಿ ಅಪಾರವಾದ ಕಡಿತವುಂಟಾಯಿತು. ಕೊನೆಗೆ ಸಮುದ್ರವನ್ನು ಸೇರುವಷ್ಟು ವೇಗವು ಸಹ ಅದರಲ್ಲಿ ಉಳಿಯದೆ ವಿನಶನ ಎಂಬ ಪ್ರದೇಶದಲ್ಲಿ ಭೂಮಿಯಲ್ಲಿ ಅಂತರ್ಗತವಾಯಿತು ಎಂಬುದಾಗಿ ಇತಿಹಾಸಕಾರರು ನಿರ್ಣಯಿಸಿದ್ದಾರೆ.

ಅಲಹಾಬಾದ್ ಎಂದು ವಿರೂಪಗೊಂಡಿರುವ ಪ್ರಯಾಗಕ್ಷೇತ್ರದಲ್ಲಿ ಸರಸ್ವತೀ, ಯಮುನೆ ಹಾಗು ಗಂಗೆಯರ ಸಂಗಮವಾಗುತ್ತದೆ ಎಂಬ ನಂಬಿಕೆಯಿದೆಯಷ್ಟೇ. ಅಲ್ಲಿ ಸರಸ್ವತಿಯು ಗುಪ್ತಗಾಮಿನಿ ಎಂದೇನೋ ಹೇಳುತ್ತಾರೆ. ಆದರೆ ಅದಕ್ಕೆ ಭೂಗರ್ಭರಚನಾ ಶಾಸ್ತ್ರದಲ್ಲಿ ಯಾವುದೇ ಆಧಾರಗಳು ದೊರಕಿಲ್ಲ. ಹಾಗಿದ್ದಲ್ಲಿ ಹಿರಿಯರು ನಂಬಿದ್ದು ಸುಳ್ಳೇ ಎಂಬ ಪ್ರಶ್ನೆ ಹುಟ್ಟಿದರೆ ಅದಕ್ಕೆ ಇತಿಹಾಸಕಾರರು ಒಂದು ಸಮಾಧಾನವನ್ನು ಕೊಟ್ಟಿದ್ದಾರೆ. ಈಗಿರುವ ಪಾತ್ರಕ್ಕೂ ಮೊದಲು ಯಮುನೆಯು ಎರಡು ಬಾರಿ ದಿಕ್ಕನ್ನು ಬದಲಾಯಿಸಿದ್ದಾಳೆ. ಎರಡನೆ ಬಾರಿ ಆಕೆಯು ಹರಿದಿದ್ದು ಸರಸ್ವತೀ ನದಿಯು ಮೊದಲು ಹರಿದು ಒಣಗಿಹೋಗಿದ್ದ ಪಾತ್ರದಲ್ಲಿ! ಹೀಗೆ ಸರಸ್ವತಿಯ ಪಾತ್ರದಲ್ಲಿ ಹರಿದ ಯಮುನೆಯೊಂದಿಗೆ ಗುಪ್ತವಾಗಿ ಸರಸ್ವತಿಯೂ ಇದ್ದಾಳೆ ಎನ್ನುವ ಅಭಿಪ್ರಾಯವನ್ನು ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ.

ಒಂದು ಕಾಲದಲ್ಲಿ ಹಸಿರು ಉಕ್ಕುತ್ತಿದ್ದ ಈ ಪ್ರದೇಶವು ಈಗ ಮರಳುಗಾಡಿನ ಭಾಗ! ಸ್ವಾರಸ್ಯವೆಂದರೆ ಈ ನದಿಯು ಭೂಮಿಯೊಳಗೆ ಸೇರಿ ಅಂತರ್ವಾಹಿನಿಯಾಗಿ ಹರಿದ ಸ್ಥಳದಲ್ಲಿ ಅಪಾರವಾದ ಸಿಹಿನೀರಿನ ಸಂಗ್ರಹವಿರುವುದನ್ನು ಆಧುನಿಕ ಉಪಗ್ರಹಗಳು ಪತ್ತೆಮಾಡಿವೆ. ಮಾತ್ರವಲ್ಲ, ಹಿಮಾಲಯ ಮೂಲದ ಆ ನೀರು ೧೪ಸಾವಿರ ವರ್ಷ ಹಳೆಯದು ಎಂಬುದಾಗಿ ಸಹ ತಿಳಿದು ಬಂದಿದೆ. ಈ ನೀರು ಮತ್ತ್ಯಾವುದೋ ಅಲ್ಲ. ಸರಸ್ವತೀ ನದಿಯು ತನ್ನ ವೇಗವನ್ನು ಕಳೆದುಕೊಂಡ ನಂತರ ಭೂಮಿಯ ಒಡಲಾಳಕ್ಕೆ ಇಳಿದದ್ದು. ಈ ಆಯಾಮದಲ್ಲಿ ಸರಸ್ವತಿಯು ನಿಜಕ್ಕೂ ಗುಪ್ತಗಾಮಿನಿಯೇ ಹೌದು.

ಹಿಮಾಲಯದ ಬದರೀನಾಥದ ಬಳಿಯಲ್ಲಿಯೂ ಒಂದು ನದಿಯ ಹೆಸರು ಸರಸ್ವತಿ ಎಂಬುದಾಗಿದೆ. ಪಶ್ಚಿಮ ಬಂಗಾಳ ಹೂಗ್ಲಿನದಿಯ ಕವಲೊಂದಕ್ಕೆ ಸರಸ್ವತಿ ಎಂಬ ಹೆಸರಿದೆ. ಆದರೆ ಆದರೆ ಋಗ್ವೇದದಲ್ಲಿ ಉಲ್ಲೇಖಿಸಿರುವ ಸರಸ್ವತಿ ಇವೆರಡೂ ಅಲ್ಲ. ಈ ಸರಸ್ವತಿಯ ಉದ್ದವಾಗಲಿ, ನೀರಿನ ಪ್ರಮಾಣವಾಗಲಿ ಇವುಗಳಿಗೆ ಇಲ್ಲ. ಬದರಿಯ ಸರಸ್ವತೀ ನದಿಯು ಅಲಕನಂದೆಯ ಉಪನದಿ.[7] ಬಂಗಾಲದ ಸರಸ್ವತಿಯು ಹೂಗ್ಲಿಯ ಕವಲು ನದಿ. (Distributary) ಋಗ್ವೇದದ ಸರಸ್ವತಿಯಾದರೋ ಬೃಹದಾಕಾರದ್ದು ಮತ್ತು ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ.

ಶುತುದ್ರಿ : ಪಂಜಾಬ್ ಪ್ರಾಂತ್ಯದಲ್ಲಿರುವ ಚಂಚಲವಾದ ಗತಿಯುಳ್ಳ ನದಿಯಿದು. ಈಗಿನ ಕಾಲದಲ್ಲಿ ಇದರ ಹೆಸರು ಸತಲಜ. ಹಿಮಾಲಯದಲ್ಲಿ ಜನಿಸಿ, ಭಾರತದಲ್ಲಿ ಪ್ರವಹಿಸಿ ಮುಂದೆ ಪಾಕಿಸ್ತಾನದಲ್ಲಿ ಪ್ರವೇಶಿಸಿ, ಚಿನಾಬ್ ನದಿಯೊಂದಿಗೆ ಸೇರಿ ಸಿಂಧುವಿನಲ್ಲಿ ಸಂಗಮಿಸುತ್ತದೆ.[8] ಭಾರತದಲ್ಲಿ ಹಿಮಾಚಲಪ್ರದೇಶ ಹಾಗು ಪಂಜಾಬಿನ ಅನೇಕ ಪ್ರಮುಖನಗರಗಳು ಈ ಸತಲಜ/ಸಟ್ಲೆಜ್ ನದಿಯ ದಂಡೆಯ ಮೇಲೆ ನೆಲೆಸಿವೆ.[9] ಶಿಮ್ಲಾ ಅಥವಾ ಕಿನ್ನೋರ್ ಪ್ರದೇಶಗಳಿಗೆ ನೀವು ಭೇಟಿ ನೀಡಿದ್ದಾದಲ್ಲಿ ಈ ನದಿಯ ನೀರನ್ನು ಪ್ರೋಕ್ಷಿಸಿಕೊಳ್ಳಬಹುದು.

ಪರುಷ್ಣೀ : ಇತಿಹಾಸದಲ್ಲಿ ಬಹು ಹೆಸರುವಾಸಿಯಾದ ನದಿಯಿದು. ಪ್ರಸಿದ್ಧವಾದ ದಾಶರಾಜ್ಞಯುದ್ಧ ನಡೆದದ್ದು ಈ ನದಿಯ ದಂಡೆಯಲ್ಲಿಯೇ. ಆಗ ಇದರ ಹೆಸರು ಇರಾವತೀ ಎಂಬುದಾಗಿ ಸಹ ಇತ್ತು. ವರ್ತಮಾನಕಾಲದ ಹೆಸರು ರಾವೀ. ಹಿಮಾಚಲಪ್ರದೇಶದ ಉನ್ನತಶಿಖರಗಳಿಂದ ಧುಮುಕುತ್ತಲೇ ಬರುವ ನದಿಯಿದು. ಹೀಗಾಗಿ ಉಗ್ರವಾದ ರಭಸ ಇಲ್ಲಿ ನಿತ್ಯದ ನೋಟ. ನದಿಯು ಮುಂದೆ ಪಾಕಿಸ್ತಾನದಲ್ಲಿ ಪ್ರವೇಶಿಸಿ ಚಿನಾಬ್ ನದಿಯೊಳಗೆ ಒಂದಾಗುತ್ತದೆ. ಪಾಕಿಸ್ತಾನದ ಪ್ರಸಿದ್ಧ ನಗರವಾದ ಲಾಹೋರ್ ಇರುವುದು ರಾವಿ ನದಿಯ ದಂಡೆಯ ಮೇಲೆ. ಭಾರತ ಹಾಗು ಪಾಕಿಸ್ತಾನದ ಸರಹದ್ದಿಗೆ ಭೇಟಿ ನೀಡುವ ಜನರು ಈ ನದಿಯ ದರ್ಶನ ಮಾಡಬಹುದು.

ಅಸಿಕ್ನೀ : ವೇಗ ಹಾಗು ಜಲಸಂಪನ್ಮೂಲದಲ್ಲಿ ಶುತುದ್ರಿಗೆ ಸಮಾನವಾಗಿ ಹರಿಯುವ ನದಿಯಿದು. ಚಿನಾಬ್ ಎಂಬುದಾಗಿ ಆಧುನಿಕ ಹೆಸರು. ಚನಾಬ್ ಎಂದೂ ಸಹ ಕರೆಯುತ್ತಾರೆ. ಹಿಮಾಚಲಪ್ರದೇಶದಲ್ಲಿ ಇದರ ಜನನ. ಚಂದ್ರಾ ಹಾಗು ಭಾಗಾ ಎರಡು ನದಿಗಳ ಸಂಗಮದಿಂದ ಉಂಟಾದ ನದಿಯಿದು. ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹರಿದು ಮುಂದೆ ಪಾಕಿಸ್ತಾನವನ್ನು ಪ್ರವೇಶಿಸುತ್ತದೆ. ಈ ಪಯಣದಲ್ಲಿ ಪರುಷ್ಣೀ ಹಾಗು ವಿತಸ್ತಾ ನದಿಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತದೆ. ಶುತುದ್ರಿಯೊಂದಿಗೆ ಒಂದಾಗಿ ಪಂಚನದೀ(ಪಂಜನದಿ) ಎನ್ನುವ ಹೊಸಹೆಸರನ್ನು ಪಡೆಯುತ್ತದೆ. ತನ್ನ ಯಾತ್ರೆಯ ಕೊನೆಯ ಹಂತವಾಗಿ ಸಿಂಧುನದಿಯಲ್ಲಿ ಈ ಪಂಜನದಿಯು ಸೇರಿಕೊಳ್ಳುತ್ತದೆ. ಕಾಶ್ಮೀರದ ಕಿಶ್ತ್ವಾರ್, ಅಖ್ನೂರ್ ಪಟ್ಟಣದ ಬಳಿ ಈ ನದಿಯ ಸ್ನಾನ/ಪ್ರೋಕ್ಷಣೆ ಮಾಡಿಕೊಳ್ಳಬಹುದು. ಪಾಕಿಸ್ತಾನದ ಗುಜ್ರನ್ವಾಲ, ಸಿಯಾಲ್ ಕೋಟ್ ಪಟ್ಟಣಗಳು ಈ ನದಿಯ ಮೇಲೆ ನಿರ್ಮಿತವಾಗಿವೆ.

ಮರುದ್ವೃಧಾ : ಇದಮಿತ್ಥಂ ಎಂದು ಯಾವ ಇತಿಹಾಸಕಾರರೂ ಗುರುತಿಸಲು ಆಗದೆ ಇರುವ ನದಿಯಿದು. ಕೆಲವರು ಇದನ್ನು ಅಸಿಕ್ನಿ ಮತ್ತು ವಿತಸ್ತಾ ನದಿಗಳ ಸಂಗಮದಿಂದ ಉಂಟಾದ ಹೊಸನದಿ ಎಂಬುದಾಗಿ ಹೇಳುತ್ತಾರೆ. ಇನ್ನೂ ಕೆಲವರು ಸಿಂಧೂ ನದಿಯ ಕೊಳ್ಳದ ಒಂದು ನದಿ ಎಂಬುದಾಗಿ ಅಷ್ಟೇ ಪರಿಗಣಿಸಿದ್ದಾರೆ. ಆದರೆ ವಿದ್ವಾನ್ ಶ್ರೀಸಾಣೂರು ಭೀಮಭಟ್ಟರು ನಮ್ಮ ಕಾವೇರಿ ನದಿಯೇ ಮರುದ್ವೃಧಾ ಎಂಬುದಾಗಿ ಪ್ರತಿಪಾದಿಸುತ್ತಾರೆ.[10]

ವಿತಸ್ತಾ: ಕಾಶ್ಮೀರದ ಚೆಲುವನ್ನು ದ್ವಿಗುಣಗೊಳಿಸಿದ ಸುಂದರ ನದಿಯಿದು. ಝೀಲಮ್ ಎಂಬುದು ವರ್ತಮಾನಕಾಲದ ಹೆಸರು. ಶ್ರೀನಗರದ ಬಳಿಯ ವೇರಿನಾಗ್ ಎನ್ನುವಲ್ಲಿ ಸರೋವರವೊಂದರಲ್ಲಿ ಇದರ ಜನನ. ಅಲ್ಲಿಂದ ಮುಂದೆ ಶ್ರೀನಗರವೂ ಸೇರಿದಂತೆ ಕಾಶ್ಮೀರದ ಹಲವು ಪಟ್ಟಣಗಳಲ್ಲಿ ಹರಿದು, ಮುಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳುತ್ತದೆ. ಅತ್ತ ಪಾಕಿಸ್ತಾನವೂ ಅಲ್ಲದ ಇತ್ತ ಭಾರತಕ್ಕೂ ಸೇರಬಯಸದ ಆಜಾದ್ ಕಾಶ್ಮೀರದಲ್ಲಿಯೂ ವಿತಸ್ತಾ ನದಿಯು ಹರಿಯುತ್ತದೆ.

ಅರ್ಜಿಕೀಯಾ: ನಿರುಕ್ತಕಾರರಾದ ಯಾಸ್ಕರು ವಿಪಾಶ ನದಿಯನ್ನು ಅರ್ಜಿಕೀ ಎಂದು ಹೇಳಿದ್ದಾರೆ. [11] ಆದರೆ ಪ್ರಸಕ್ತ ಕಾಲಮಾನದಲ್ಲಿ ಪಾಕಿಸ್ತಾನದ ಹಾರೋ ಎನ್ನುವ ನದಿಯನ್ನು ಇತಿಹಾಸಕಾರರು ಋಗ್ವೇದದ ಅರ್ಜಿಕೀ ನದಿ ಎಂಬುದಾಗಿ ಗುರುತಿಸಲು ಪ್ರಯತ್ನಿಸಿದ್ದಾರೆ. ಇಲ್ಲಿ ನಿರುಕ್ತಕಾರರ ವಚನವೇ ನಮಗೆ ಹೆಚ್ಚು ಆಪ್ತವಾಗುತ್ತದೆ. ವಿಪಾಶ ಹಾಗು ಶುತುದ್ರಿ ನದಿಗಳು ಉನ್ನತ ಪರ್ವತಗಳಿಂದ ಇಳಿದು ಬಂದು ಪರಸ್ಪರ ಸಂಗಮಿಸುತ್ತವೆ. ಇದೊಂದು ಮನೋಹರ ದೃಶ್ಯ.[12] ಸುಪ್ರಸಿದ್ಧ ವಿಹಾರ ತಾಣವಾದ ಮನಾಲಿಗೆ ನೀವು ಭೇಟಿ ನೀಡಿದ್ದಾಗ ಕಾಣುವ ಬಿಯಾಸ್ ನದಿಯೇ ಋಗ್ವೇದವು ವರ್ಣಿಸುವ ಅರ್ಜಿಕಿಯಾ ನದಿ. ವೇದವ್ಯಾಸದೇವರ ನಿತ್ಯಸನ್ನಿಧಾನವುಳ್ಳ ನದಿಯಿದು, ಹಾಗಾಗಿ ವ್ಯಾಸೀ(ಬ್ಯಾಸೀ) ಎನ್ನುವ ಹೆಸರು ಇದಕ್ಕೆ ಎಂದು ಸ್ಥಳೀಯರ ಅಭಿಮತ. ವ್ಯಾಸಿಯೇ ಬಿಯಾಸಿ/ಬಿಯಾಸ್ ಎಂಬುದಾಗಿ ತಿರುಚಿಕೊಂಡಿದೆ. ವಕಾರವನ್ನು ಬಕಾರವಾಗಿ ಉಚ್ಚರಿಸುವುದರ ಪರಿಣಾಮವಿದು.

ಸುಷೋಮಾ : ಪ್ರಸಕ್ತಕಾಲದಲ್ಲಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿಯೇ ಸೇರಿಹೋಗಿರುವ ನದಿಯಿದು. ಸೋಹನ್/ಸೋನ್ ಎನ್ನುವ ಹೆಸರಿನೊಂದಿಗೆ ಕರೆಯಲ್ಪಡುತ್ತಿದೆ. ಸಿಂಧು ಬಯಲಿನ ನದಿಗಳಲ್ಲಿ ಪ್ರಾಯಶಃ ಅತಿ ಚಿಕ್ಕದು. (ಗಾತ್ರದಲ್ಲಿ). ಆದರೆ ಜನಸಂಸ್ಕೃತಿಗೆ ಹಾಗು ಹೇರಳವಾದ ಪಶುಮಂದೆಗಳಿಗೆ ಜೀವನಾಧಾರವಾಗಿದ್ದ ನದಿಯಿದು ಎನ್ನಲು ಐತಿಹಾಸಿಕ ಕುರುಹುಗಳು ಇವೆ.

ಸಿಂಧು: ಗಂಗೆಯಷ್ಟೇ ಜಗತ್ಪ್ರಸಿದ್ಧವಾದ ನದಿಯಿದು. ಪ್ರಾಚೀನಭಾರತದ ವಾಯವ್ಯ ಭಾಗದ ಬಹುತೇಕ ಎಲ್ಲ ನದಿಗಳ ಅಂತಿಮ ಗುರಿ ಸಿಂಧುವಿನೊಂದಿಗೆ ಕೂಡಿಕೊಳ್ಳುವುದೇ ಆಗಿದೆ. ಕುಭಾ, ಗೋಮತೀ, ಕೃಮು, ಇತ್ಯಾದಿ ಹಾಗು ಅಸಿಕ್ನಿ ಮತ್ತು ಶುತುದ್ರಿಯ ಬಳಗ ಹೀಗೆ ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಸಿಂಧುವು ಪಾಕಿಸ್ತಾನ ಸಿಂಧ್ ಪ್ರಾಂತ್ಯದಲ್ಲಿ ಸಮುದ್ರದೊಳಗೆ ಪ್ರವೇಶಿಸುತ್ತದೆ. ಹರಿವಿನಲ್ಲಿ ಸಿಂಧುವು ಗಂಗೆಗಿಂತ ದೊಡ್ಡದಾಗಿದೆ. ಒಟ್ಟು ಉದ್ದ ೩೧೦೦ ಕಿಲೋಮೀಟರುಗಳು. ಇದರಲ್ಲಿ ಸುಮಾರು ೯೩ಪ್ರತಿಶತದಷ್ಟು ಪಾಕಿಸ್ತಾನದಲ್ಲಿಯೇ ಇದೆ. ಪರ್ಷಿಯನ್ನರು ಇದನ್ನು ಹಿಂದುವೆಂದು ಕರೆದರೆ ಗ್ರೀಕರಿಗೆ ಇದು ಇಂಡಸ್ ಆಗಿಬಿಟ್ಟಿತು. ಇಂಗ್ಲೀಷಿನ ವ್ಯಾಮೋಹಿಗಳಿಗೆ ಈಗಲೂ ಇದು ಇಂಡಸ್! ಅದೃಷ್ಟಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜನರಿಗೆ ಇನ್ನೂ ಸಿಂಧ್ ಆಗಿಯೇ ಉಳಿದಿದೆ. ಭಾರತದ ಲದ್ದಾಖ್ ಪ್ರಾಂತ್ಯದಲ್ಲಿಯೂ ಸಿಂಧುವಿನ ದರ್ಶನ/ಸ್ನಾನ/ಪ್ರೋಕ್ಷಣೆಗೆ ಅವಕಾಶವಿದೆ. ಭಾರತ ಸರ್ಕಾರವೇ ಪ್ರತಿವರ್ಷದ ಅಕ್ಟೋಬರ್ ತಿಂಗಳಿನ ಪೂರ್ಣಿಮೆಯಂದು ಸಿಂಧುದರ್ಶನವನ್ನು ಏರ್ಪಡಿಸುತ್ತದೆ.

ಕುಭಾ: ಅಫಘಾನಿಸ್ತಾನದ ಮತ್ತೊಂದು ಪ್ರಮುಖನದಿಯಿದು. ಗ್ರೀಕರ ನಾಲಗೆಯ ಮೇಲೆ ಇದು ಕೋಫೆನ್ ಎಂದಾಗಿದ್ದರೆ ಇನ್ನುಳಿದವರು ಕಾಬೂಲ್ ಎಂದು ಕರೆದರು. ಅಫಘಾನಿಸ್ಥಾನದ ರಾಜಧಾನಿಯಾದ ಕಾಬೂಲ್ ನಗರವು ಈ ನದಿಯ ದಂಡೆಯ ಮೇಲೆಯೇ ನಿರ್ಮಾಣಗೊಂಡಿದೆ. ಈ ನದಿಯು ಮುಂದೆ ಪಾಕಿಸ್ತಾನದ ಅತ್ತೋಕ್ ಎಂಬಲ್ಲಿ ಸಿಂಧುವಿನೊಂದಿಗೆ ಸಂಗಮಿಸುತ್ತದೆ.

ಗೋಮತೀ: ಭರತವರ್ಷದಲ್ಲಿ ಗೋಮತೀ ಎನ್ನುವ ಹೆಸರಿನ ಹಲವು ನದಿಗಳಿವೆ. ಆದರೆ ಋಗ್ವೇದದ ಈ ಸೂಕ್ತದಲ್ಲಿ ವಿವರಿಸಿರುವ ಗೋಮತಿಯನ್ನು ಈಗ ಗೊಮಾಲ್ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇದು ಸಹ ಅಫಘಾನಿಸ್ಥಾನದಲ್ಲಿದೆ.

ಕ್ರುಮು: ಕುರ್ರಂ ಎನ್ನುವ ಒರಟು ಹೆಸರಿಗೆ ಬದಲಾಗಿ ಹೋಗಿರುವ ವೈದಿಕ ನದಿಯಿದು. ಪಾಕಿಸ್ತಾನ ಹಾಗು ಅಫಘಾನಿಸ್ತಾನದ ಸರಹದ್ದಿನಲ್ಲಿ ಹರಿದು ಮುಂದೆ ಸಿಂಧೂನದಿಯೊಂದಿಗೆ ಸಂಗಮಿಸುತ್ತದೆ.

ಲಹರಿ – ೪

ಸರಿಯಾಗಿ ಗುರುತಿಸಲಾಗದೇ ಇರುವ ನದಿಗಳು

ತೃಷ್ಟಮಾ: ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ಹುಟ್ಟಿ ಸಿಂಧುನದಿಯೊಂದಿಗೆ ಸಂಗಮವಾಗುವ ಮತ್ತೊಂದು ನದಿಯಿದು. ಆಧುನಿಕ ಕಾಲದ ಗಿಲ್ಗಿತ್ ನದಿ ಎನ್ನುವ ಅಭಿಪ್ರಾಯವಿದೆ.

ರಸಾ: ಋಗ್ವೇದದ ಅನೇಕ ಕಡೆಗಳಲ್ಲಿ[13] ಉಲ್ಲೇಖಗೊಂಡಿರುವ ನದಿಯಿದು. ನದಿಯ ಪ್ರಾರ್ಥನೆಯ ಆಳವನ್ನು ಗಮನಿಸಿದಾಗ ಸಿಂಧುನದಿಯಷ್ಟೇ ಹಿರಿದಾದ ಸ್ಥಾನವನ್ನು ಅಂದಿನ ಋಷಿಗಳು ಇದಕ್ಕೆ ಕೊಟ್ಟಿದ್ದರೆಂದು ತಿಳಿಯುತ್ತದೆ.

ಸುಸರ್ತು, ಮೆಹನ್ತು, ಶ್ವೇತೀ, ಊರ್ಣಾವತೀ ಹಾಗು ಸೀಲಮಾವತಿಗಳ ಗುರುತಿಸುವಿಕೆಯು ಸಹ ಸಂಪೂರ್ಣವಾಗಿ ಆಗಿಲ್ಲ.

ಲಹರಿ – 5

ಈ ಮೇಲಿನ ನದೀಸ್ತುತಿ ಸೂಕ್ತದಲ್ಲಿ ಮಾತ್ರವಲ್ಲದೆ ವೇದ ಹಾಗು ಪುರಾಣಗಳ ಇನ್ನಿತರೆಡೆ ಕೂಡ ನದಿಗಳ ವರ್ಣನೆ ಕಾಣಸಿಗುತ್ತವೆ. ಹೆಚ್ಚಿನ ವಿವರಗಳು ಈ ನದಿಗಳ ಬಗ್ಗೆ ಲಭ್ಯವಿದ್ದರೂ ಸಹ ಲೇಖನವನ್ನು ಇನ್ನಷ್ಟು ದೀರ್ಘಕ್ಕೆ ತೆಗೆದುಕೊಂಡು ಹೋಗದೆ ಈ ಸಂಕ್ಷಿಪ್ತ ವಿವರಗಳನ್ನು ನೋಡೋಣ.

ಹಳೆಯ ಹೆಸರುಹೊಸ ಹೆಸರುಎಲ್ಲಿದೆದೇಶಊರುಗಳು
ಸುವಸ್ತುಸ್ವಾತ್ಸ್ವಾತ್ಪಾಕಿಸ್ತಾನ
ಗೌರಿಪಂಜ್ಕೋರಪಂಜ್ಕೋರ ಕಣಿವೆಪಾಕಿಸ್ತಾನ
ದೃಷದ್ವತೀಚೌತಾಂಗ್ / ಚಿತ್ರಾಂಗ್ರಾಜಸ್ಥಾನಭಾರತ
ಸರಯೂ[14]ಹರಿರುದ್ಹರಿರುದ್ ಪರ್ವತಆಫಘಾನಿಸ್ಥಾನ
ವೇತ್ರಾವತೀಬೇತ್ವಾಮಧ್ಯಪ್ರದೇಶಭಾರತಓರ್ಛಾ, ಹೊಶಂಗಾಬಾದ್, ವಿದಿಶಾ, ಹಮೀರ್ಪುರ
ಚರ್ಮಣ್ವತೀಚಂಬಲ್ಮಧ್ಯಪ್ರದೇಶಭಾರತ
ಲವಣಾವತೀಲೂಣೀರಾಜಸ್ಥಾನಭಾರತಪುಷ್ಕರ
ತಮಸಾಟೋನ್ಸ್ / ತೋನ್ಸ್ಬಿಹಾರ / ಉ.ಪ್ರ
ತಪತೀತಾಪೀಮ.ರಾ/ಗುಜರಾತ್ಭಾರತಭುಸಾವಳ್, ಸೂರತ್
ಕ್ಷಿಪ್ರಾಶಿಪ್ರಾಮಧ್ಯಪ್ರದೇಶಭಾರತಉಜ್ಜಯಿನೀ
ಅಜಿರಾವತೀರಪ್ತಿನೇಪಾಳ / ಭಾರತನೇಪಾಳ / ಭಾರತಗೋರಖಪುರ
ಹಳೆಯ ಹೆಸರುಹೊಸ ಹೆಸರುಎಲ್ಲಿದೆದೇಶಊರುಗಳು

ಈ ಲೇಖನವನ್ನು ಸಿದ್ಧಪಡಿಸಿದ್ದು ವಿವಿಧ ಕಾರಣಗಳಿಂದ ಈ ಮೇಲೆ ತಿಳಿಸಿರುವ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ. ಇಲ್ಲಿ ತಿಳಿಸಿರುವುದಕ್ಕಿಂತಲೂ ನಿಖರವಾದ ಮಾಹಿತಿಯು ಇನ್ನೂ ಹೆಚ್ಚಿನ ಸಂಶೋಧನೆಯಿಂದ ದೊರಕಿದ್ದಲ್ಲಿ/ದೊರಕಿದಲ್ಲಿ ಅದು ಯಾವಾಗಲೂ ಸ್ವಾಗತಾರ್ಹ.

ಅಡಿಟಿಪ್ಪಣಿಗಳು :-

[1] Si–yu-ki : Budhist Records of Western World

[2] ಅಲೆಕ್ಸಾಂಡರ್ ಹಾಗು ಅವನ ಹಿಂಬಾಲಕರು ಹೇಳಿದ ಜಝಾರ್ತೆಸ್ ನದಿಯು ಇದೇ ಎಂಬ ಅಭಿಪ್ರಾಯವು ಸಹ ಇದೆ. ಆದರೆ ಆ ಹೆಸರು ಭದ್ರಾ ಎನ್ನುವ ಈ ನದಿಗಿಂತ ರಸಾ (ಇದೇ ಲೇಖನದ ೯ನೇ ಪುಟ ನೋಡಿ) ಎಂಬ ಇನ್ನೊಂದು ನದಿಯ ವಿಕೃತಗೊಂಡ ಹೆಸರು ಎನ್ನುವುದು ಹೆಚ್ಚು ಸರಿ ಎನಿಸುತ್ತದೆ.

[3] ಈ ಅರಾಲ್ ಎನ್ನುವುದರ ಜೊತೆಗೆ ಸಮುದ್ರ ಎನ್ನುವ ಹೆಸರಿದ್ದರೂ ಈಗ ಅದು ಸಮುದ್ರವಲ್ಲ; ಕಝಕಿಸ್ತಾನ ಹಾಗು ಉಝ್ಬೆಕಿಸ್ತಾನ ದೇಶಗಳಿಂದ ಸುತ್ತುವರೆಯಲ್ಪಟ್ಟಿರುವ ಒಂದು ಬೃಹದಾಕಾರದ ಸರೋವರವಷ್ಟೇ. ಮಿಲಿಯಾಂತರ ವರ್ಷಗಳ ಹಿಂದೆ ಸಮುದ್ರದ ಒಂದು ಭಾಗವಾಗಿತ್ತು. ಭೂಮಿಯಿಂದ ಮೇಲೆ ಏರುವ ಪರ್ವತಗಳ ಚಟುವಟಿಕೆಯಿಂದ ಕಾಲಕ್ರಮೇಣ ಸಮುದ್ರದಿಂದ ಶಾಶ್ವತವಾಗಿ ಬೇರ್ಪಟ್ಟು ಈಗಿನ ಸರೋವರದ ರೂಪವನ್ನು ತಾಳಿದೆ. ಭಾಗವತವು ಉಲ್ಲೇಖಿಸಿರುವ ಸಮುದ್ರವು ಪ್ರಾಯಶಃ ಈ ಅರಾಲ್ ಸಮುದ್ರವೇ ಆಗಿರಲಿಕ್ಕೆ ಸಾಕು.

[4] ನದಿಗಳೆರಡು ಸಂಗಮಿಸಿದಾಗ ಆ ಎರಡು ನದಿಗಳಲ್ಲಿ ಒಂದರ ಹೆಸರು ಮರೆಯಾಗಿ ಹೋಗುತ್ತದೆ. ಇನ್ನೊಂದರ ಹೆಸರೇ ಕೊನೆಯವರೆಗೆ ಅಥವಾ ಅದಕ್ಕಿಂತಲೂ ದೊಡ್ಡ ನದಿಯೊಳಗೆ ಸಂಗಮಿಸುವ ಸ್ಥಳದವರೆಗೂ ಮುಂದುವರೆಯುತ್ತದೆ. ಈ ಸಂದರ್ಭಗಳಲ್ಲಿ ಹೆಚ್ಚಿನ ಜಲರಾಶಿಯನ್ನು ಹೊಂದಿದ, ಹಿಂದೆ ಹೆಚ್ಚಿನ ದೂರವನ್ನು ಕ್ರಮಿಸಿರುವ ಮತ್ತು ತಾರತಮ್ಯದಲ್ಲಿ ಉನ್ನತಸ್ಥಾನದಲ್ಲಿ ಇರುವ ನದಿಯ ಹೆಸರೇ ಮುಂದುವರೆಯುವುದು ಸಹಜ. ಉದಾಹರಣೆ : ವರದಾ ನದಿಯು ತುಂಗಭದ್ರೆಯೊಂದಿಗೆ ಸಂಗಮಿಸಿದ ನಂತರ ವರದೆಯ ಹೆಸರು ಕಣ್ಮರೆಯಾಗಿ ತುಂಗಭದ್ರೆಯ ಹೆಸರು ಮುಂದುವರೆಯುತ್ತದೆ. ಗಾತ್ರ, ದ್ರವ್ಯರಾಶಿ ಹಾಗು ತಾರತಮ್ಯಗಳಲ್ಲಿ ತುಂಗಭದ್ರೆಯೇ ವರದೆಗಿಂತ ಉತ್ತಮಳಾಗಿರುವುದು ಇದಕ್ಕೆ ಕಾರಣ. ಮುಂದುವರೆದಾಗ ತುಂಗಭದ್ರೆಯು ಕೃಷ್ಣೆಯೊಂದಿಗೆ ಸಂಗಮಿಸುತ್ತಾಳೆ. ಆಗ ತುಂಗಭದ್ರೆಯ ಹೆಸರು ಮರೆಯಾಗಿ ಕೃಷ್ಣೆಯ ಹೆಸರು ಮುಂದುವರೆಯುತ್ತದೆ. ಕೃಷ್ಣೆಯ ಹರಿವು, ವಿಸ್ತಾರ, ಕ್ರಮಿಸಿದ ದೂರ, ತಾರತಮ್ಯದಲ್ಲಿ ಅವಳಿಗಿರುವ ಸ್ಥಾನವು ತುಂಗಭದ್ರೆಗಿಂತಲೂ ಹೆಚ್ಚಿನದಾದ ಕಾರಣ ಈ ಹಿರಿಮೆ ಅವಳಿಗೇ ಸಲ್ಲುತ್ತದೆ.

ಇದೇ ರೀತಿಯಾಗಿ ಋಷಿಗಂಗಾ+ಅಲಕನಂದಾ, ಪಿಂಡಾರಿಗಂಗಾ+ಅಲಕನಂದಾ, ಮಂದಾಕಿನೀ+ಅಲಕನಂದಾ, ಧವಳಗಂಗಾ+ಅಲಕನಂದಾ ಸಂಗಮಗಳಲ್ಲಿ ಅಲಕನಂದೆಗೆ ಹಿರಿಯಕ್ಕನ ಸ್ಥಾನ. ಭಾಗೀರಥಿನದಿಯ ೨೦೫ ಕಿ.ಮೀ ಉದ್ದದ ಪಯಣದಲ್ಲಿ ಕೇದಾರಗಂಗಾ, ಜಡಗಂಗಾ (ಇದನ್ನೇ ಜಾಹ್ನವೀ ನದೀ ಎಂದು ಸ್ಥಳೀಯರು ಹೇಳುವುದುಂಟು), ಅಸಿಗಂಗಾ, ಭಿಲಾಂಗನಾ ಹಾಗು ಇನ್ನೂ ಅನೇಕ ನದಿಗಳನ್ನು ತನ್ನೊಳಗೆ ಸೇರಿಸಿಕೊಂಡರೂ ಸಹ ತನ್ನ ಹಿರಿಮೆಯನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಈ ಎಲ್ಲರೀತಿಯಿಂದಲೂ ಸಮಾನತೆಯನ್ನೇ ಹೊಂದಿರುವ ಈ ಎರಡು ನದಿಗಳು ಸಂಗಮಿಸಿದಾಗ ಎರಡರಲ್ಲಿ ಒಂದರ ಹೆಸರನ್ನು ಉಳಿಸಿಕೊಳ್ಳುವ ಸಂಪ್ರದಾಯವನ್ನು ಬಿಟ್ಟು ಎರಡೂ ನದಿಗಳ ಮೂಲಹೆಸರಾದ “ಗಂಗಾ” ಎನ್ನುವ ಹೆಸರನ್ನು ಹಿರಿಯರು ಬಳಕೆಗೆ ತಂದರು.

[5] ನದಿಯ ಅಭಿಮಾನಿದೇವತೆಗಳನ್ನು ಕುರಿತು ಓ ಗಂಗೆಯೆ, ಯಮುನೆಯೆ, ಶುತುದ್ರಿಯೇ….. ನನ್ನ ಪ್ರಾರ್ಥನೆಯನ್ನು ಕೇಳಿರಿ ಎಂಬುದು ಈ ಮಂತ್ರಗಳ ಸರಳಾನುವಾದ.

[6] ಅಂಬಿತಮೆ ನದೀತಮೆ ದೇವಿತಮೆ ಸರಸ್ವತಿ | ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ನಸ್ಕೃಧಿ || ಋಗ್ವೇದ ೨:೪೨:೧೬

[7] ಬದರಿಯಲ್ಲಿ ಅಲಕನಂದೆಯೊಂದಿಗೆ ಸರಸ್ವತೀ ನದಿಯು ಸಂಗಮಿಸುವ ಸ್ಥಳಕ್ಕೆ ಕೇಶವಪ್ರಯಾಗ ಎಂಬ ಹೆಸರಿದೆ

[8] ಸಾವಿರಾರು ವರ್ಷಗಳ ಹಿಂದೆ ಇದು ಸ್ವತಂತ್ರವಾದ ನದಿಯಾಗಿತ್ತು. ಮುಂದೆ ಸರಸ್ವತಿಯ ಉಪನದಿಯಾಗಿ ಬದಲಾಯಿತು. ಈಗ ಸಧ್ಯದ ಚಿನಾಬ್ ನದಿಯೊಂದಿಗೆ ಪಾಕಿಸ್ತಾನದಲ್ಲಿ ಸಂಗಮಿಸಿ ಪಂಜನದಿ ಎಂಬುವ ಹೊಸನದಿಗೆ ರೂಪವನ್ನು ಕೊಟ್ಟು ಮುಂದೆ ಸಿಂಧೂನದಿಗೆ ಉಪನದಿಯಾಗಿ ಪರಿಣಮಿಸುತ್ತದೆ!

[9] ಭಾಕ್ರಾ ನಂಗಾಲ್ ಅಣೆಕಟ್ಟೆ ಕಟ್ಟಿರುವುದು ಈ ನದಿಗೆ ಅಡ್ಡಲಾಗಿಯೇ

[10] ತೀರ್ಥಪ್ರಬಂಧ. ಪುಟ ೨೪೮. ಪ್ರ: ಪ್ರಸಂಗಾಭರಣತೀರ್ಥ ಪ್ರಕಾಶನ ಅನು: ಆಚಾರ್ಯ ಸಾಣೂರು ಭೀಮಭಟ್ಟರು.

[11] ನಿರುಕ್ತ ೯:೨೦

[12] ಪ್ರ ಪರ್ವತಾನಾಮುಶತೀ ಉಪಸ್ಥಾದಶ್ವೇ ಇವ ವಿಷಿತೇ ಹಾಸಮಾನೇ | ಗಾವೇವ ಶುಭ್ರೇ ಮಾತರಾ ರಿಹಾಣೇ ವಿಪಾಚ್ಛುತುದ್ರೀ ಪಯಸಾ ಜವೇತೇ || (ಋಗ್ವೇದ :೩:೩೩:೧)

[13] ಋ:೪:೪೩:೫, ೫:೪೧:೧೫, ೯:೪೧:೬, ೯:೪೩:೫ ಇತ್ಯಾದಿ

[14] ಅಯೋಧ್ಯೆಯಲ್ಲಿ ಹರಿಯುವ ಸರಯೂ ಇಲ್ಲಿ ಹೇಳಿರುವುದಕ್ಕಿಂತ ಭಿನ್ನವಾದುದು.

ಆಕರಗ್ರಂಥಗಳು :

The Vedas: An Introduction to Hinduism’s Sacred Texts

Gods, Sages and Kings: Vedic Secrets of Ancient Civilization

http://voiceofdharma.org/books/rig/ch4.htm

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಶ್ರೀ ವಾಮನ ಪುರಾಣ ಪ್ರವಚನ

ವಿಷ್ಣುಪ್ರೀತ್ಯರ್ಥವಾಗಿ ಮಾಡುವ ಹಲವು ವ್ರತಗಳಲ್ಲಿ ಪಯೋವ್ರತವೂ ಒಂದು. ಫಾಲ್ಗುಣಮಾಸದ ಶುಕ್ಲ ಪ್ರತಿಪದೆಯಿಂದ ಪ್ರಾರಂಭಿಸಿ ದ್ವಾದಶಿಯವರೆಗೆ ಇದನ್ನು ಆಚರಿಸಬೇಕು. ಈ ಅವಧಿಯಲ್ಲಿ ವಿಷ್ಣುವಿಗೆ ಅರ್ಪಿತವಾದ ಹಾಲನ್ನು ಒಂದು ಲೋಟದಷ್ಟು ಮಾತ್ರವೇ ಸೇವಿಸಿ ಶ್ರೀವಿಷ್ಣುಚಿಂತನೆ, ಶ್ರೀವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಸದ್ಗ್ರಂಥಗಳ ಪಠಣದ / ಶ್ರವಣದಲ್ಲಿಯೇ ಮಗ್ನರಾಗಿರಬೇಕು. ಆ ಒಂದು ಲೋಟ ಹಾಲು ಮಾತ್ರವೇ ಆಹಾರ. ಮಿಕ್ಕಿದ್ದು ಉಪವಾಸದ ಸಮಯ.

ನಿಷ್ಕಾಮಕರ್ಮವಾಗಿ ಪಯೋವ್ರತವನ್ನು ಆಚರಿಸುವುದು ಉತ್ತಮ ಪಕ್ಷ. ಸಕಾಮವಾಗಿ ಆಚರಿಸುವುದು ಮಧ್ಯಮ ಪಕ್ಷ. ಏನೂ ಆಚರಿಸದೆ ನನ್ನ ಹಾಗೆ ಸುಮ್ಮನೆ ಕೂಡುವುದು ಅಧಮಾತಿ ಅಧಮ ಪಕ್ಷ.

ವಿವಿಧ ಸಲ್ಲಾಭಗಳು ಈ ವ್ರತದಿಂದ ದೊರೆಯುವುದಾದರೂ ಅನೇಕರು ಸತ್ಸಂತಾನದ ಬಯಕೆಯಿಂದ ಈ ವ್ರತವನ್ನು ಆಚರಿಸುತ್ತಾರೆ.

ನನ್ನ ತಾಯಿ ವಿಷ್ಣುಪಾರಮ್ಯದ ಕೆಲವು ಕ್ಲಿಷ್ಟವ್ರತಗಳನ್ನು ಆಚರಿಸಿದ್ದಾರೆ. ಒಂದು ಬಾರಿ ವಿಷ್ಣುಪಂಚಕ ವ್ರತ, ಎರಡು ಬಾರಿ ಭೀಷ್ಮಪಂಚಕ ವ್ರತಗಳನ್ನು ಈಗಾಗಲೇ ವಿಧ್ಯುಕ್ತವಾಗಿ ಆಚರಿಸಿ ಮಂಗಳವನ್ನು ಮಾಡಿದ್ದಾರೆ. ಹಾಗೆಯೇ ಎರಡು ಬಾರಿ ಪಯೋವ್ರತವನ್ನೂ ಮಾಡಿದ್ದಾರೆ. ಅವರ ಮಗನಾಗಿ ಇದು ನನಗೆ ಹೆಮ್ಮೆಯನ್ನು ತರುವಂತಹ ವಿಷಯ. (ನಾನೂ ಇವುಗಳನ್ನು ಆಚರಿಸಬೇಕು ಎಂಬ ಯೋಗ್ಯತೆ ಮೀರಿದ ಬಯಕೆಯೇನೋ ನನ್ನಲ್ಲಿ ಮೂಡುತ್ತದೆ. ಆದರೆ ನನ್ನಲ್ಲಿ ತಮೋಗುಣದ ಮೆರೆದಾಟವೇ ಹೆಚ್ಚಾಗಿ ನಡೆಯುತ್ತಿದೆ, ಹಾಗಾಗಿ ಸಧ್ಯಕ್ಕೆ ಅಮ್ಮನ ನೆರಳಿನಲ್ಲಿಯೇ ಒಂದಿಷ್ತು ಜಂಬ ಪಡುವ ಸನ್ನಾಹ ನನ್ನದು!)

ಹಿಂದಿನ ಬಾರಿ ವ್ರತವನ್ನು ಆಚರಿಸಿದ್ದಕ್ಕಿಂತಲೂ ಈ ಬಾರಿ ಅವರ ವ್ರತ ಹೆಚ್ಚು ಅರ್ಥಪೂರ್ಣವಾಗಿತ್ತು. ಶ್ರೀಶುಕಾಚಾರ್ಯರ ಸಂಪೂರ್ಣ ಕೃಪೆಗೆ ಪಾತ್ರರಾಗಿರುವ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ವ್ರತದ ಅವಧಿಯಲ್ಲಿ ಶ್ರೀವಾಮನ ಪುರಾಣದ ಪ್ರವಚನವು ನಡೆಯಿತು. ಒಂಭತ್ತು ದಿನಗಳ ಕಾಲ ನಡೆದ ಈ ಪವಿತ್ರ ಕಾರ್ಯದಲ್ಲಿ ಅನೇಕ ಮಂದಿ ಸಜ್ಜನರು ವಾಮನಪುರಾಣದ ಕಥಾಮೃತದಲ್ಲಿ ಹರ್ಷದಿಂದ ಮಿಂದೆದ್ದರು. ಶ್ರೀಶ್ರೀಪಾದರಾಜರ ಮಠದ ಆವರಣದಲ್ಲಿ ಈ ಪ್ರವಚನ ನಡೆಯಿತು. ಶ್ರೀಕೇಶವನಿಧಿತೀರ್ಥ ಶ್ರೀಪಾದಂಗಳವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದುದು ಈ ವ್ರತದ ಆಚರಣೆಗೆ ಇನ್ನಷ್ತು ಅರ್ಥವನ್ನು ತಂದು ಕೊಟ್ಟಿತು.

ಅಮ್ಮನ ಈ ವ್ರತವು ಶಾಸ್ತ್ರವತ್ತಾಗಿ ನಡೆಯಲು ಬೆನ್ನೆಲುಬಾಗಿ ನಿಂತವರು ಸಾತ್ವಿಕರಾದ ನನ್ನ ಭಾವನವರಾದ ಮುದುಗಲ್ ವೆಂಕಟನರಸಿಂಹ ಆಚಾರ್ಯರು. ಸಂಪ್ರದಾಯ ಪಾಲನೆ, ಪಾಠ ಪ್ರವಚನ ಹಾಗು ಕಟ್ಟುನಿಟ್ಟಿನ ಪೌರೋಹಿತ್ಯಕ್ಕಾಗಿ ಹೆಸರಾಗಿದ್ದಾರೆ. ಅವರು ಒಂದು ಚೂರೂ ಕ್ರಮತಪ್ಪದಂತೆ ಈ ವ್ರತವನ್ನು ಮಾಡಿಸಿದರು. ಇನ್ನುಳಿದಂತೆ ಅಮ್ಮನಿಗೆ ತೊಂದರೆಯಾಗದ ಹಾಗೆ ಅವಳನ್ನು ಮುಚ್ಚಟೆಯಿಂದ ನೋಡಿಕೊಂಡಿದ್ದು ನನ್ನ ಅಕ್ಕ ಸುಧಮ್ಮ! ಹದಿನೈದು ದಿನ ತನ್ನ ನೌಕರಿಗೆ ರಜೆ ಹಾಕಿ ಅಮ್ಮನ ಜೊತೆಗೆ ಇದ್ದು ತನ್ನ ಕರ್ತವ್ಯವನ್ನು ಮಾಡಿದ್ದಾಳೆ. ಇಬ್ಬರಿಗೂ ನಾವು ಋಣಿಗಳು. ಇವರೀರ್ವರ ಚಿರಂಜೀವ ಐತರೇಯ. ಪ್ರವಚನವನ್ನು ತನ್ನ ಫೋನಿನಲ್ಲೂ ಹಾಗು ತನ್ನ ಇನ್ನೊಬ್ಬ ಸೋದರ ಮಾವನಾದ ವಿಜಯನ ವಿಡಿಯೋ ಕ್ಯಾಮೆರಾದಲ್ಲೂ ರೆಕಾರ್ಡು ಮಾಡಿದ್ದಾನೆ. ಚಿಕ್ಕವನಾದರೂ ಹೆಚ್ಚು ಕಿರಿಕಿರಿಯಾಗದಂತೆ ಪ್ರವಚನವನ್ನು ಮುದ್ರಿಸಿಕೊಂಡಿದ್ದಾನೆ. ಅವನಿಗೆ ಶ್ರೀಹರಿವಾಯುಗುರುಗಳು ಜ್ಞಾನ ಹಾಗು ಭಕ್ತಿಯನ್ನು ಕೊಟ್ಟು ಸಲಹಲಿ.

ವಿಜಯನು ತನ್ನ ಹೆಂಡತಿ ರಚನೆಯೊಂದಿಗೆ ಈ ದಿನಗಳಲ್ಲಿ ಬೆಂಗಳೂರಿನಲ್ಲಿ ಇದ್ದು ತನ್ನ ಕೈಲಾದ ಸೇವೆ ಮಾಡಿದ್ದಾನೆ. ಅವರಿಬ್ಬರಿಗೂ ಈ ಪುಣ್ಯದಲ್ಲಿ ಪಾಲು ಉಂಟು. ಅನಿವಾರ್ಯ(?) ಕಾರಣಗಳಿಂದ ನಾನು ಹಾಗು ನನ್ನ ಯಜಮಾನಿತಿಯಾದ ಶಿರೀಷೆಯು ಈ ಕಾರ್ಯಕ್ರಮದಲ್ಲಿ ಯಾವ ರೀತಿಯಿಂದಲೂ ಪಾಲ್ಗೊಳ್ಳಲು ಆಗಿಲ್ಲ. ಐತರೇಯನು ಮುದ್ರಿಸಿಕೊಂಡಿರುವ ಪ್ರವಚನಗಳನ್ನು ನನ್ನ ಯಜಮಾನಿತಿಯು ತಾಂತ್ರಿಕವಾಗಿ ಸ್ವಲ್ಪ ಸಂಸ್ಕರಿಸಿ ಕೊಟ್ಟಿದ್ದಾಳೆ. ಅವುಗಳನ್ನೇ ಇಲ್ಲಿ ಡೌನ್ ಲೋಡ್ ಮಾಡಲಿಕ್ಕೆ ಕೊಟ್ಟಿರುವುದು. ಹೀಗಾಗಿ ಅವಳೂ ಸಹ ಒಂದಿಷ್ಟು ಪುಣ್ಯಭಾಗಿ.

ಮಂಗಳವು ಮುಗಿದ ನಂತರ ಹೋಗಿ ಅಮ್ಮನನ್ನು ಮಾತನಾಡಿಸಿ ಅವಳು ಮಾಡಿದ ಹದವಾದ ಅಡುಗೆಯನ್ನು ಹೊಟ್ಟೆ ತುಂಬಾ ತಿಂದು ರೈಲಿನಲ್ಲಿ ನಿದ್ದೆ ಮಾಡುತ್ತಾ ವಾಪಸ್ಸು ಬಂದಿದ್ದೇ ನನ್ನ ಸಾಧನೆ.

ನಮ್ಮ ಮನೆಯ ಬಗ್ಗೆ ಅನ್ಯಥಾ ಕೊಚ್ಚಿಕೊಳ್ಳುತ್ತಿದ್ದೇನೆ ಎಂದು ದಯವಿಟ್ಟು ಭಾವಿಸದಿರಿ. ಕಾರ್ಯಕ್ರಮ ಸುಗಮವಾಗಿ ನಡೆಸಲು ಕಾರಣರಾದ ವ್ಯಕ್ತಿಗಳಿಗೆ ಅಭಾರಮನ್ನಣೆ ಮಾಡುವುದು ಶ್ರೇಯಸ್ಕರವಲ್ಲವೇ? ಹಾಗಾಗಿ ಇದನ್ನೆಲ್ಲ ಹೇಳಿದ್ದೇನೆ.

ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ ನಿರರ್ಗಳ ವಾಗ್ಝರಿಯ ಬಗ್ಗೆ ನಾನೇನು ವರ್ಣಿಸಬಲ್ಲೆ? ಅಷ್ಟು ಶಬ್ದಗಳಾದರೂ ನನ್ನಲ್ಲಿ ಎಲ್ಲಿವೆ?. ಅವರು ಮೇರುಸದೃಶರು. ನಾನು ಅದರ ಪದತಲದಲ್ಲಿರುವ ಚಿಕ್ಕ ಮಣ್ಣಕಣ. ಅಷ್ಟು ದೊಡ್ಡವರು ನಮ್ಮಮನೆಯಲ್ಲಿ ಪ್ರವಚನ ಮಾಡಿದರು ಎನ್ನುವುದೇ ನನಗೆ ರೋಮಾಂಚನವಾಗುವ ಸಂಗತಿ. ಅವರ ಬಗ್ಗೆ ನಾನು ವಿವರಣೆ ಕೊಡುತ್ತೇನೆ ಎಂದರೆ ಅದು ಅವಿವೇಕವಾದೀತು. ನಾನು ಏನೇನೋ ಮಾತನಾಡುವುದೂ ಬೇಡ, ನೀವು ಅವುಗಳನ್ನು ಕೇಳಿ ಬೇಸರಿಸಿಕೊಳ್ಳುವುದೂ ಬೇಡ. ಪ್ರವಚನಗಳನ್ನು ಡೌನ್ ಲೋಡ್ ಮಾಡಿಕೊಳ್ಳಿರಿ, ಅಪರೂಪದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಿರಿ.

Sri Vamana Purana Pravachana
Sri Vamana Purana Pravachana

Part 1/9 19.0 MB

Part 2/9 36.7 MB

Part 3/9 46.4 MB

Part 4/9 51.4 MB

Part 5/9 44.2 MB

Part 6/9 40.7 MB

Part 7/9 37.6 MB

Part 8/9 51.2 MB

Part 9/9 43.7 MB

ಬಿ.ಟಿ.ಡಬ್ಲು: ಜ್ಞಾನವನ್ನು ಶೇರ್ ಮಾಡಿರಿ. ಇಲ್ಲದಿದ್ದರೆ ಬ್ರಹ್ಮಪಿಶಾಚದ ಜನ್ಮ ಕಟ್ಟಿಟ್ಟದ್ದು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಶ್ರೀವಿಜಯದಾಸರು – ಕಿರುಪರಿಚಯ – ವಿಡಿಯೋ

ಶ್ರೀವಿಜಯದಾಸರು – ಕಿರುಪರಿಚಯ – ವಿಡಿಯೋ

ಸರಳರೂ ಸಹೃದಯೀಗಳೂ ಆದ ಶ್ರೀರಾಜಗೋಪಾಲಾಚಾರ್ಯರು ಶ್ರೀವಿಜಯದಾಸರ ಬಗ್ಗೆ ಮಾತನಾಡಿದಾಗ ಚಿತ್ರೀಕರಿಸಿಕೊಂಡ ವಿಡಿಯೋ.

 

 

 

ಚಿತ್ರೀಕರಣ ಮಾಡಿಕೊಂಡು ಒಳ್ಳೇ ಕೆಲಸ ಮಾಡಿದ್ದು ಭಾನುಸಿಂಹ!

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

From Black Soil to the White Mountains

Nestled in the lap of the King of Mountains – Himalayas, between the peaks Nara and Narayana is a quaint township called Badarinatha Dhama. Cutting through these two peaks and flowing with rapidity is the icy Alakanada River. The world renowned Badarinarayana Temple is located at the Narayana peak. This peak that seems to touch the sky is of mythological significance.  Sitting at this peak and chanting magnifies its benefits by a thousand times. For instance : Chanting “Shri Krishnaya Namaha” a 1000 times here will fetch you the benefits of chanting it 10,00,000 times. Perhaps this distinction is due to the very presence of Shri Narayana at this peak. It is commonplace to find several tourists engrossed in the chanting of some mantra.

The Shri Badarinarayana Temple is the only official pilgrimage site here. Apart from this all one is likely to come across is cramped houses & glittering commercial establishments. When you stand facing the temple, you will come across a pathway to your right. (This was once the Royal path!) This pathway takes you to the famous Brahma Kapala and Mana – the last village before the Indian border. Along the same pathway, to your left side you will come across four pale colored Ashramas. A few steps beyond and you are bound to come to a standstill. Reason being the board hanging at the fifth tiny and old construction which reads “Shri Raghavendra Swami Matha”. (I presume all the readers of this article are devotees of Rayaru & hence say you are bound to come to a standstill.) What can one do besides being pleasantly surprised to see the name of Rayaru amidst all the chatter in Hindi, Garhwali & Nepali languages?

Parvatikar Maharaja was a seeker from Bagalakote – popularly known as the land of black soil. Shri Rayaru followed his great devotee to Badari and inhabited this place. That is an extremely exciting account.

I have written a detailed narrative of this story for a special edition by Prajavani on the occasion of the 341st Aradhana of Shri Rayaru. They have edited & published it to fit within their framework. This article contains about eight pages. Since it is not feasible to put it up here, I have made a downloadable version available. It is my belief that this will make an interesting read. Do share your thoughts without fail.

The complete article may be downloaded here:

From the land of black soil to the great white mountains : Around 1.6 MB

The picture of Badarinaryana’s temple : www.zipmytravel.com

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಶ್ರೀಗುರುರಾಜರ ೩೪೨ನೇ ಆರಾಧನೆ – ಆಹ್ವಾನಪತ್ರಿಕೆ

ಗುರುರಾಜರು ನನ್ನಿಂದ ಮಾಡಿಸಿಕೊಂಡಿರುವ ಕೆಲಸ (ನಾನು ಮಾಡಿದ್ದೇನು ಅಷ್ಟಕ್ಕೂ?? ಡೌಟು!) ಗಳಲ್ಲಿ ಅತಿ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಂಡದ್ದು ಇದು.  ಮುನ್ನೂರ ನಲವತ್ತೆರಡನೆಯ ಆರಾಧನೆಯ ಆಹ್ವಾನ ಪತ್ರಿಕೆಯು ನಾಲ್ಕು ತಿಂಗಳು ಮೊದಲೇ ಬರಬೇಕೆಂದು ಶ್ರೀಗಳವರ ಅಪ್ಪಣೆಯಾಗಿತ್ತು. ಅದರಂತೆ ಸಾಕಷ್ಟು ಮೊದಲೇ ಪ್ರಾರಂಭಿಸಿದರೂ ಕೈಗೆ ಬಂದಾಗ ಆರಾಧನೆಗೆ ಎರಡೇ ತಿಂಗಳುಗಳು ಉಳಿದಿದ್ದವು!

ಈ ಬಾರಿಯ ಆಹ್ವಾನಪತ್ರಿಕೆಯ ಕಲ್ಪನೆ ಗರಿಗೆದರಿದ್ದು ಸುಮಾರು ೧೦ ತಿಂಗಳ ಹಿಂದೆ. ಶ್ರೀಸುಯತೀಂದ್ರ ತೀರ್ಥ ಶ್ರೀಪಾದರ ೭ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಬೆಂಗಳೂರಿನ ಸಹೃದಯಿ ಸ್ನೇಹಿತರಾದ ಅನಿಲಕುಮಾರರು ತಮ್ಮ ಸಂಸ್ಥೆಯ ವತಿಯಿಂದ ಮಂತ್ರಾಲಯದಲ್ಲಿ ದೇಶದ ಅನೇಕ ಕಲಾವಿದರನ್ನು ಒಂದೆಡೆ ಕಲೆಹಾಕಿ “ಶ್ರೀರಾಯರ ಕಲಾ ಕೃಪೆ”  ಎನ್ನುವ ಚಿತ್ರಕಲಾ ಶಿಬಿರವೊಂದನ್ನು ಸಂಘಟಿಸಿದ್ದರು. ಈ ಶಿಬಿರದಲ್ಲಿ ಶ್ರವಣಬೆಳಗೊಳದ ಅನಿಲ್ ಜೈನ್ ಎನ್ನುವ ಕಲಾವಿದರು ರಾಯರು ಹಸುವಿನ ಕರುವೊಂದನ್ನು ಪ್ರೀತಿಯಿಂದ ಮೈದಡವುತ್ತಿರುವ ಚಿತ್ರವನ್ನು ಮೂಡಿಸುತ್ತಿದ್ದರು. ಅದನ್ನು ನೋಡಿದಾಗ ಈ ಬಾರಿಯ ಆಹ್ವಾನಪತ್ರಿಕೆಯ ಕಲ್ಪನೆ ನನ್ನ ತಲೆಯಲ್ಲಿ ಮೊಳೆಯಿತು.

ಆಹ್ವಾನ ಪತ್ರಿಕೆಯು ಕೇವಲ ಬನ್ನಿರಿ ಎನ್ನುವುದಕ್ಕೆ ಸೀಮಿತವಾಗದೆ ಜನಮಾನಸಕ್ಕೆ ಸಂದೇಶವೊಂದನ್ನು ನೀಡುವಂತಿರಬೇಕು ಎಂದು ಆಲೋಚಿಸಿ ಹಸು ಮತ್ತು ಹಸಿರು ಎನ್ನುವ ಕಲ್ಪನೆಯೊಂದಿಗೆ ಕೆಲಸಕ್ಕಿಳಿದು ಹಲವಾರು ಇನ್ನಿತರ ಕೆಲಸಗಳ ಮಧ್ಯ ಸಮಯ ಮಾಡಿಕೊಂಡೇ ಈ ವಿನ್ಯಾಸವನ್ನು ಮುಗಿಸಿದೆ. ಅಂದಾಗ್ಯೂ ಶ್ರೀಗಳವರ ನಿರೀಕ್ಷೆಯ ಮಟ್ಟಕ್ಕಿಂತ ನಾನು ಇನ್ನೂ ಎರಡು ತಿಂಗಳು ಹಿಂದುಳಿದಿದ್ದೇನೆ ಅಂತ ಆಯ್ತು. ರಾಯರ ದಯೆ ಹೀಗೆಯೇ ನನ್ನ ಮೇಲೆ ಇದ್ದಲ್ಲಿ ಶ್ರೀಗಳವರ ನಿರೀಕ್ಷೆಯನ್ನೂ ಆದಷ್ಟು ಬೇಗ ಮುಟ್ಟಿಯೇನು.

ಅಂದ ಹಾಗೆ ನಾನು ಒಬ್ಬ ಅಭಿಜಾತ ಕಲಾವಿದ (Classical Artiste) ಏನಲ್ಲ. ಅವರಿವರು ಮಾಡಿಕೊಟ್ಟದ್ದನ್ನು ಬೇಕಾದ ಚೌಕಟ್ಟಿನಲ್ಲಿ ಕೂರಿಸಿ “ಚೆನ್ನಾಗಿ ಮಾಡಿದ್ದಾನೆ” ಅನ್ನಿಸಿಕೊಳ್ಳುವವ. ಹೀಗಾಗಿ ಈ ಆಹ್ವಾನ ಪತ್ರಿಕೆಗೆ ಬಂದಿರುವ ಸೊಗಸಿನ ಹಿರಿಮೆಯೆಲ್ಲ ಸಲ್ಲಬೇಕಾದದ್ದು ಹಲವಾರು ಜ್ಞಾತ ಅಜ್ಞಾತ ವ್ಯಕ್ತಿಗಳಿಗೆ.

 • ಚಿತ್ರವನ್ನು ಮೂಡಿಸಿದವರು : ಅನಿಲ್ ಜೈನ್ ಶ್ರವಣಬೆಳಗೊಳ
 • ಅವರನ್ನು ಮಂತ್ರಾಲಯಕ್ಕೆ ಕರೆತಂದವರು : ಎಂ. ಕೆ. ಅನಿಲ್ ಕುಮಾರ್, ಬೆಂಗಳೂರು
 • ಎರಡನೆ ಪುಟದಲ್ಲಿರುವ ಮನ್ನಾರುಗುಡಿಯ ರಾಜಗೋಪಾಲಸ್ವಾಮಿಯನ್ನು ಮೋಹಕವಾಗಿ ಮೂಡಿಸಿದವರು : ರಾಘವೇಂದ್ರ ಪ್ರಸಾದ್, ಚೆನ್ನೈ.
 • ಹಿರಿಯ ಶ್ರೀಗಳವರ ಭಾವಚಿತ್ರವನ್ನು ಕ್ಲಿಕ್ಕಿಸಿದವನು : ಶ್ರೀನಿಧಿ, ಮಂತ್ರಾಲಯ
 • ಕಿರಿಯ ಶ್ರೀಗಳವರ ಭಾವಚಿತ್ರವನ್ನು ಕ್ಲಿಕ್ಕಿಸಿದವನು : ರಾಯಚೂರಿನ ಇನಾಂದಾರ್ ಸೀನ (ಒರಿಜಿನಲಿ ಶ್ರೀನಿವಾಸ)
 • ಪ್ರೂಫ್ ನೋಡಿ “ರಘುನಂದನ ಏನೂ ತಪ್ಪು ಮಾಡಿಲ್ಲ” ಅನ್ನುವಂತೆ ಮಾಡಿದವರು : ಜೋಷಿ ಸರ್, ಶಿರೀಷಾ ಶರ್ಮ, ಭಾರ್ಗವಿ ಕೃಷ್ಣಮೂರ್ತಿ, ಬಾಲಾಜಿ ಮಾಮ ಹಾಗು ಚೊಮಿನಿ ಪ್ರಕಾಶ್.
 • ಇಂಟರ್ ನೆಟ್ಟು ಸಹ ನನಗೆ ಹಲವಾರು (ಹಲವಾರು ಏನು? ಬಹುಮಟ್ಟಿಗೆ ಎನ್ನುವುದೇ ಸರಿ) ಸಹಾಯ ಮಾಡಿದೆ.

ಈ ಕೆಳಗೆ ಇನ್ವಿಟೇಶನ್ನಿನ ಪುಟಗಳನ್ನು ಕೊಟ್ಟಿದ್ದೇನೆ. ಡೌನ್ ಲೋಡ್ ಮಾಡಿಕೊಳ್ಳಿ. ಇತರೆಡೆಗೆ ಶೇರ್ ಮಾಡಿಕೊಳ್ಳುವ ಮುನ್ನ ಈ ಚಿತ್ರಗಳೆಲ್ಲ ಮಂತ್ರಾಲಯ ಮಠದ ಸ್ವಾಮ್ಯಕ್ಕೆ ಒಳಪಟ್ಟಿವೆ ಎನ್ನುವುದನ್ನು ಮರೆಯದಿರಿ.

ಕೊನೆಯದಾಗಿ : ಕೆಲವೊಂದು ಆನ್ ಲೈನ್ ಮಾಧ್ವ ಯುವ ವೇದಿಕೆಗಳು ಶ್ರೀಮಠದ ವೆಬ್ ಸೈಟಿನಿಂದ ಚಿತ್ರಗಳನ್ನು “ತಾವೇ ಸಂಪಾದಿಸಿದ್ದು” ಎನ್ನುವಂತೆ ಮಠದ ವಾಟರ್ ಮಾರ್ಕನ್ನು ಕ್ರಾಪ್ ಮಾಡಿ ಶೇರ್ ಮಾಡುವದನ್ನು ನಾನು ಗಮನಿಸಿದ್ದೇನೆ.  ಮಾಧ್ವರಿಗೆ ಮಾಹಿತಿ ಕೊಡುವ ಭರದಲ್ಲಿ ಅವರು ಚಿತ್ರದ ಮೂಲವನ್ನು ಆಳಿಸಿಹಾಕುತ್ತಿರುವುದು ಖೇದಕರ. ರಾಯರು ಅವರಿಗೆ ಬುದ್ದಿ ಕೊಡಲಿ.

ಸಂಪೂರ್ಣ ಆಹ್ವಾನ ಪತ್ರಿಕೆಯನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ

Download (ಈ ಫೈಲು 1.2 MB ಇದೆ.)

ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಮುಖಪುಟ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಮಂಗಳಾಶಂಸನ – ರಾಜಗೋಪಾಲಸ್ತುತಿ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಆಹ್ವಾನ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಆರಾಧನಾ ಜ್ಞಾನಯಜ್ಞ ಹಾಗು ಪ್ರೋಷ್ಠಪದೀ ವಿಶೇಷ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಚಾತುರ್ಮಾಸ್ಯ ದೀಕ್ಷಾ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಕಳೆದ ವರ್ಷದ ಅಭಿವೃದ್ಧಿಯ ವಿವರಣೆ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ದಾನಗಳ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಹಸಿರು ಮಂತ್ರಾಲಯದ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಹಸಿರುವ ಮಂತ್ರಾಲಯದ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಶ್ರೀಗುರುರಾಜರ ಕರುಣೆಯ ಕಂದ ಶ್ರೀಸುಶಮೀದ್ರರು

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ನೂರಾರು ಸು(ಕು)ಪ್ರಸಿದ್ಧ ವ್ಯಕ್ತಿಗಳು!

ಕಲಾವಿದನಿಗೊಂದಷ್ಟು ಸಮಯ ಸಿಕ್ಕರೆ ಸಾಕು ಏನೆಲ್ಲವನ್ನು ಆತ ಸೃಷ್ಟಿಸಬಲ್ಲ ಎನ್ನುವುದಕ್ಕೆ ಈ ಕೆಳಕಾಣಿಸಿದ ಚಿತ್ರವು ಮತ್ತೊಂದು ಸಾಕ್ಷಿ.  ಫೇಸ್ ಬುಕ್ಕಿನಲ್ಲಿ ದೊರೆತ ಚಿತ್ರವಿದು. ಇಂತಹ ಪ್ರೇರಣೆಗಳು ಕಲಾವಿದರಿಗೆ ಹೇಗೆ ದೊರಕುತ್ತವೆಯೋ ಎಂಬ ಆಲೋಚನೆ ಮಾಡುತ್ತಲೇ ಒಂದಿಷ್ಟು ವ್ಯಕ್ತಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದೆ. ಅವರ ಹೆಸರುಗಳನ್ನು ಸಹ ಕೆಳಗೆ ಬರೆದಿದ್ದೇನೆ. ಅದರಲ್ಲಿಲ್ಲದ ವ್ಯಕ್ತಿಗಳೇನಾದರೂ ನಿಮಗೆ ಕಂಡಲ್ಲಿ ಕಮೆಂಟಿನಲ್ಲಿ ಬರೆಯಿರಿ.

ಜಗತ್ಪಿನಲ್ಲಿ ಅತ್ಯಂತ ಸು(ಕು)ಪ್ರಸಿದ್ಧರಾದ ನೂರಾರು ವ್ಯಕ್ತ್ಗಿಗಳು

 

Mahatma Gandhi, Einstein, Napoleon Bonaparte, Che Guvera, Mao, Fidel Castro, Yaser Arafat, Bruce Lee, Lenin, Charlie Chaplin, Elis Presley, William Shakespeare, Michel Jordan, Abraham Lincoln, Md. Ali, Beethoven, Pele, Moses, Saint Mother Theresa, Pablo Picasso, Nelson Mandela, Bill Clinton, Saddam Husain (Infamous though), Robert Oppen, Adolf Hitler,Mussolini, Alfred Hitchcock, Merlin Monroe. Carl Marks, Isak newton, Bismarck, Confucius, RAbindranath Tagore Sigmund freud, Charles Darwin, Henry Ford, Marlon Brando, Toulouse Lautrec, Bill Gates, Osama Bin Laden, Audrey Hepburn, Margaret Thatcher, Winston Churchill, Luciano Pavarotti, George W. Bush, Liu Xiang, Kofi Annan, Mikhail Gorbachev, Franklin Roosevelt, Steven Spielberg, Salvador Dali, Run Run Shaw, Joseph Stalin, Leonardo Da Vinci, Michelangelo, Vladimir Putin, Shirley Temple, Vincent Van Gogh, Mike Tyson, Prince Charles, Julius Caesar, Homer, Steven Spielberg, Wolfgang Amadeus Mozart, Otto Von Bismarck, Karl Marx, Ludwig Van Beethoven

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts