ಶ್ರೀರಾಘವೇಂದ್ರತೀರ್ಥಗುರ್ವಂತರ್ಯಾಮಿ ಮಧ್ವವಲ್ಲಭ ಶ್ರೀವೇದವ್ಯಾಸಾಯ ನಮಃ
ಇತ್ತೀಚಿನ ದಿನಗಳವರೆಗೆ ಕೃತಿಚೌರ್ಯ ಎಂಬುದರ ವ್ಯಾಖ್ಯಾನ ಸರಳವಾಗಿತ್ತು. ಬೇರೊಬ್ಬ ಕೃತಿಕಾರನೊಬ್ಬನ ಕೃತಿಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ವಸ್ತುವನ್ನು ತನ್ನದೇ ಲೇಖನ/ಕವಿತೆ ಎಂಬುದಾಗಿ ಹೊರಜಗತ್ತಿಗೆ ತೋರಿಸುವುದು. ವಿದೇಶದಲ್ಲಿ ಅದರ ಚಟುವಟಿಕೆ ಹೆಚ್ಚಿತ್ತು. ನಮ್ಮಲ್ಲಿ, ಅದರಲ್ಲೂ ಕನ್ನಡದಲ್ಲಿ ಅಷ್ಟಿರಲಿಲ್ಲ. ಆದರೆ ನಮ್ಮಲ್ಲೂ ಕೂಡ, ಅದೂ ಇತ್ತೀಚೆಗೆ ಹೊಸದೊಂದು ರೀತಿಯಲ್ಲಿ ಕೃತಿಗಳ್ಳತನ ಶುರುವಾಗಿದೆ. ವಿಪರ್ಯಾಸವೆಂದರೆ ಆ ಕಳ್ಳತವನವನ್ನು ಮಾಡುತ್ತಿರುವವರು ಬೇರಾರೋ ಅಲ್ಲ. ನಾವುಗಳೇ! ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ನೀವೆಲ್ಲ ಈ ನೀಚವಾದ ಕಳ್ಳಕಾರ್ಯದಲ್ಲಿ ತೊಡಗಿಕೊಂಡುಬಿಟ್ಟಿರುವುದು ಇದರ ಆಳವನ್ನು ತೋರುತ್ತದೆ.
ಅದಾವುದಪ್ಪ ಎಂದರೆ ಪಿಡಿಎಫ್ ಗಳನ್ನು ಅನಧಿಕೃತವಾಗಿ ಪರಸ್ಪರರಲ್ಲಿ ಶೇರ್ ಮಾಡಿಕೊಳ್ಳುವುದು.
ಹೌದು. ಪಿಡಿಎಫ್ ಗಳನ್ನು ಲೇಖಕನ ಅಥವಾ ಪ್ರಕಾಶಕರ ಅನುಮತಿಯಿಲ್ಲದೆ ಪರಸ್ಪರರಲ್ಲಿ ಹಂಚಿಕೊಳ್ಳುವುದು ಕಳ್ಳತನವೇ ಹೌದು. ಗ್ರಂಥವೊಂದನ್ನು ಮುದ್ರಿಸಿ, ಪ್ರಚುರಪಡಿಸುವಲ್ಲಿ ಪ್ರಕಾಶಕನು ಬೆವರನ್ನಲ್ಲ, ರಕ್ತವನ್ನೇ ಬಸಿದಿರುತ್ತಾನೆ ಎಂಬುದು ಕ್ರೂರವಾದ ಸತ್ಯ. ಈ ಮಾತು ಕನ್ನಡಗ್ರಂಥಗಳ ಮಟ್ಟಿಗೆ ಹೆಚ್ಚು ಅನ್ವಯಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾಶನದ ಮಟ್ಟಿಗಂತೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅನ್ವಯಿಸುವುದು. ಧರ್ಮಶಾಸ್ತ್ರಗ್ರಂಥಗಳನ್ನು ಮುದ್ರಿಸಿ ಲಾಭಗಳಿಸುವುದು ಎಂದರೆ ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಬಯಕೆಯಂತೆಯೇ ಆಗಿದೆ. ಇದು ಕಹಿಯಾದ ವಾಸ್ತವವು.
ಮುದ್ರಿತವಾದ ಪುಸ್ತಕವೊಂದನ್ನು ನಮ್ಮದನ್ನಾಗಿಸಿಕೊಳ್ಳಲು ಇರುವ ಮೂರು ನೈತಿಕ ಮಾರ್ಗಗಳು ಇವು.
- ಹಣಕೊಟ್ಟು ಖರೀದಿಸುವುದು
- ಯಾರಾದರೂ ನಮಗೆ ಅದನ್ನು ಬಹುಮಾನವಾಗಿ ಕೊಡುವುದು
- ನಾವೇ ಆ ಪುಸ್ತಕದ ಪ್ರಕಾಶಕ/ಲೇಖಕರು ಆಗಿರುವುದು.
ಇವುಗಳ ಹೊರತಾಗಿ ನಾಲ್ಕನೆಯ ವಿಧಾನವೇ ಇಲ್ಲ. ದಾರಿಯಲ್ಲಿ ದೊರಕಿದ ಪುಸ್ತಕಕ್ಕೂ ನಾವು ನೈತಿಕವಾದ ಹಕ್ಕುದಾರರಾಗಲಾರೆವು. ಅದರ ನೈಜ ಮಾಲಿಕನು ಬಂದು ಕೇಳಿದರೆ ಅದನ್ನು ವಾಪಸ್ಸು ಮಾಡುವುದು ಧರ್ಮ. ಹೀಗೆ ಇರುವಾಗ ಒಂದು ಚೂರೂ ಶ್ರಮವಹಿಸದೆ, ಆ ಪುಸ್ತಕಕ್ಕೆ ಸಲ್ಲಬೇಕಾದ ಕನಿಷ್ಠ ಬೆಲೆಯನ್ನೂ ಸಂದಾಯ ಮಾಡದೆ ಪುಸ್ತಕವನ್ನು ನಮ್ಮದಾಗಿಸಿಕೊಳ್ಳುವ ಆಲೋಚನೆಯನ್ನು ಮಾಡುವುದು ಸರಿಯೇ? ಕೃತಿಚೌರ್ಯವೆನ್ನದೆ ಇದನ್ನು ಏನನ್ನಬೇಕು?
ನಮ್ಮ ಮನೆಯ ವೈ ಫೈ ಅನ್ನು ಯಾರೋ ಒಬ್ಬರು ಬಹಳ ದಿನಗಳಿಂದ ನಮಗೆ ತಿಳಿಯದಂತೆ ಬಳಸುತ್ತಿದ್ದಾರೆ ಎಂದುಕೊಳ್ಳೋಣ. ನಾವು ಅದಕ್ಕೆ ಪಾಸ್ವರ್ಡು ಎನ್ಕ್ರಿಪ್ಶನ್ನು ಎಂಬೆಲ್ಲ ವ್ಯವಸ್ಥೆಯನ್ನೂ ಮಾಡಿದ್ದೇವೆ. ಆದರೂ ನಮ್ಮ ಲೆವೆಲ್ಲನ್ನೂ ಮೀರಿ ಅದು ಬೇರೆಯವರ ಆನಂದಕ್ಕೆ ಕಾರಣವಾಗುತ್ತಿದೆ! ಆಗ ಹೇಗೆ ಅನ್ನಿಸಲಿಕ್ಕಿಲ್ಲ ನಮಗೆ? ಹೋಗಿ ಅವನೊಂದಿಗೆ ಜಗಳವಾಡಿ ಬಂದರೂ ಕೂಡ ಇಷ್ಟು ದಿನಗಳ ಕಾಲ ಆತ ಎಂಜಾಯ್ ಮಾಡಿರುವ ವಿಷಯ ನಮ್ಮ ಮನಸ್ಸಿನಿಂದ ಮಾಯವಾಗಲಾರದು. ಕೊರೆಯುತ್ತಲೇ ಇರುತ್ತದೆ. ಆದರೆ ಕೈಕೈ ಹಿಸುಕಿಕೊಳ್ಳುವುದರ ಹೊರತಾಗಿ ನಾವೇನೂ ಮಾಡಲಾರೆವು. ಅಲ್ಲವೇ? ನಮ್ಮ ಮಾಸಿಕ ಡೇಟಾ ಮಿತಿಯು 1000 ಜಿಬಿಗಳಿಗಿಂತ ಹೆಚ್ಚಿದೆ. ಆತ ಕಳ್ಳತನ ಮಾಡಿದ ಡೇಟಾವನ್ನೂ ಸೇರಿಸಿ ನಮ್ಮಲ್ಲಿ ಪ್ರತಿ ತಿಂಗಳೂ 250-300 ಜಿಬಿಯಷ್ಟು ಡೇಟಾ ಅನುಪಯುಕ್ತವಾಗಿ ಉಳಿಯುತ್ತಿದೆ. ಆದರೂ ಕೂಡ ಇತರರು ನಮ್ಮ ಅನುಮತಿ ಇಲ್ಲದೆ ನಮ್ಮ ಡಾಟಾವನ್ನು ಬಳಸಲು ಮನಸ್ಸು ಒಪ್ಪದು. ಅಲ್ಲವೇ? ಗ್ರಂಥಪ್ರಕಾಶಕನ ಮನಸ್ಸನ್ನೂ ನಾವು ಹೀಗೆಯೇ ಅರ್ಥಮಾಡಿಕೊಳ್ಳಬೇಕು. ಡೇಟಾವಾದರೂ ಒಂದು ರೀತಿ ಕ್ಷುಲ್ಲಕ ಎನ್ನುವಷ್ಟು ಬೆಲೆಗೆ ದೊರೆತೀತು. ಆದರೆ ಕಾಗದ, ಇಂಕು ಮತ್ತು ಕರೆಂಟುಗಳ ಬೆಲೆಯು ದಿನದಿನಕ್ಕೆ ಏರುತ್ತಲೇ ಹೋಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುದ್ರಕನ ಗಮನಕ್ಕೆ ಬಾರದಂತೆ ಅವನ ಕಷ್ಟಾರ್ಜಿತವನ್ನು ನಾವು ಪುಗಸಟ್ಟೆ ಬಳಸುತ್ತಿದ್ದೇವೆ ಎಂದರೆ ನಾವು ಕೂಡಾ ಕೆಳಮನೆಯ ಡೇಟಾಕಳ್ಳರಿಗೇ ಸಮನಾದೆವು.
ಅಷ್ಟಕ್ಕೂ ಈ ಮುದ್ರಿತ ಪುಸ್ತಕಗಳ ಮೌಲ್ಯವಾದರೂ ಎಷ್ಟು? ನೂರರಿಂದ ಐದುನೂರರವರೆಗೆ ಮಾತ್ರ! ಈ ಇನ್ನೂರು ಮುನ್ನೂರು ರೂಪಾಯಿಗಳಲ್ಲಿ ಪ್ರಕಾಶಕನು ಲೇಖಕರ ಸಂಭಾವನೆ, ಕಾಗದ, ಮುದ್ರಣದ ಇಂಕುಗಳು, ಮುದ್ರಣಾಲಯದ ಸಿಬ್ಬಂದಿಯ ಸಂಬಳ ಮತ್ತು ವಿದ್ಯುತ್ತಿನ ಖರ್ಚನ್ನು ಕೂಡ ಗಳಿಸಿಕೊಳ್ಳಬೇಕು. ಗಮನಿಸಿ ಈಗಿನ ಕಾಲದಲ್ಲಿ 5000 ರೂಪಾಯಿಗೆ ನಮಗೆಲ್ಲ ಒಬ್ಬ ಕಸಗುಡಿಸುವ ಕೆಲಸದಾಕೆಯು ಸಿಗುವುದೇ ದುಸ್ತರ. ಅಂತಹುದರಲ್ಲಿ ಅನುಭವಿಕ ಮುದ್ರಕನೊಬ್ಬನನ್ನು ಕೆಲಸಕ್ಕೆ ಇಟ್ಟುಕೊಳ್ಳುವುದೆಂದರೆ ಆನೆಯನ್ನು ಸಾಕಿದಂತೆಯೇ ಸರಿ. ಪ್ರತಿ ತಿಂಗಳ 5ನೇ ತಾರೀಕು ಬಂತೆಂದರೆ ಪ್ರಕಾಶಕನ ಎದೆ ಢವ ಢವ ಎನ್ನಲಾರಂಭಿಸುತ್ತದೆ. ಸಂಬಳಕ್ಕಾಗಿ ಹಣವನ್ನು ಒಟ್ಟುಗೂಡಿಸುವುದು ಒಂದು ಹರಸಾಹಸ. ಇಂತಹುದರಲ್ಲಿ ಅವನು ಪ್ರಕಟಪಡಿಸಿದ ಪುಸ್ತಕವನ್ನು ನಾವೆಲ್ಲ ಪುಗಸಟ್ಟೆಯಾಗಿ ಎಂಜಾಯ್ ಮಾಡುತ್ತಿದ್ದೇವಲ್ಲ!!!
ಅತ್ಯಂತ ಪ್ರಾಚೀನ ಪುಸ್ತಕವೊಂದು ದೊರಕಿದೆ, ಅದರ ಪ್ರತಿಗಳು ಬೇರೆಲ್ಲೂ ಇಲ್ಲ. ಅದನ್ನು ಧರ್ಮಶಾಸ್ತ್ರದಲ್ಲಿ ಆಸಕ್ತಿಯಿರುವ ಸಜ್ಜನರಿಗಾಗಿ ಡಿಜಿಟೈಸ್ ಮಾಡಿಯೋ ಅಥವಾ ಸ್ಕ್ಯಾನ್ ಮಾಡಿಯೋ ಅವರೊಂದಿಗೆ ಹಂಚಿಕೊಳ್ಳುತ್ತೇನೆ ಎಂದರೆ ಒಂದು ರೀತಿಯ ಒಳ್ಳೆಯ ಕೆಲಸವೆಂದು ಹೇಳಬಹುದೇನೋ. ಆದರೆ ಮಾರುಕಟ್ಟೆಯಲ್ಲಿ ಇನ್ನೂ ಮೌಲ್ಯವನ್ನು ಪಡೆದಿರುವ ಗ್ರಂಥಗಳನ್ನು ಅವುಗಳ ಮುದ್ರಿತ ಪ್ರತಿಗಳು ಇನ್ನೂ ಸಾಕಷ್ಟು ಲಭ್ಯವಿರುವಾಗಲೇ ಅವುಗಳನ್ನು ಅಂತರ್ಜಾಲದಲ್ಲಿ ಉಚಿತವಾಗಿ ಹರಿಬಿಡುವುದು ಸಭ್ಯಲಕ್ಷಣವಲ್ಲ. ಇಂತಹ ಕುಕೃತ್ಯಗಳಿಂದ ಮುಂದೆ ಉತ್ತಮ ಪುಸ್ತಕಗಳನ್ನು ಪ್ರಕಾಶನಪಡಿಸಲು ಯಾರೂ ಮುಂದೆ ಬರದಿರುವ ಸಾಧ್ಯತೆಗಳು ದಟ್ಟವಾಗುತ್ತವೆ. ಇದರ ಪರಿಣಾಮವಾಗಿ ಅಚ್ಚಿನಲ್ಲಿ ರೆಡಿಯಾಗಿ ಕುಳಿತಿರುವ ಪುಸ್ತಕಗಳು ಹೊರಗೆ ಬರಲಿಕ್ಕೇ ಧೈರ್ಯಮಾಡಲಾರವು.
ರಾಯರ ಮಠ, ಉತ್ತರಾದಿ ಮಠ, ಪಲಿಮಾರು ಮಠ ಅಥವಾ ರಾಮಕೃಷ್ಣಾಶ್ರಮದಂತಹ ದೊಡ್ಡ ಸಂಸ್ಥೆಗಳು ಕೂಡಾ ಪುಸ್ತಕವನ್ನು ಪ್ರಕಟಿಸುತ್ತವೆ. “ಹೇಗಿದ್ದರೂ ಈ ಸಂಸ್ಥೆಗಳು ದೊಡ್ಡವು ಇವುಗಳಿಗೆ ಹಣಕಾಸಿನ ಬೆಂಬಲ ಚೆನ್ನಾಗಿದೆ” ಎಂಬ ವಿಚಿತ್ರವಾದ ತರ್ಕದೊಂದಿಗೆ ಇವುಗಳ ಪ್ರಕಟಣೆಗಳನ್ನು ಉಚಿತವಾಗಿ ಹಂಚುವ ಕೆಟ್ಟ ಕೆಲಸವನ್ನು ಮಾಡಿರುವ ಜನರೂ ಇದ್ದಾರೆ. ಸಂಸ್ಥೆಗಳು ದೊಡ್ಡವೆಂದ ಮಾತ್ರಕ್ಕೆ ಹಣವು ಮೇಲಿನಿಂದ ಉದುರುತ್ತವೆಯೇನು? ಇಲ್ಲವಲ್ಲ. ವಾಸ್ತವವೆಂದರೆ ಈ ಸಂಸ್ಥೆಗಳು ಲಾಭಕ್ಕಾಗಿ ಪುಸ್ತಕಗಳನ್ನು ಮುದ್ರಿಸದೆ ಜನರಿಗೆ ಜ್ಞಾನವು ಸುಲಭವಾಗಿ ಲಭಿಸಲಿ ಎನ್ನುವ ಉದ್ದೇಶದಿಂದ ಪ್ರಕಾಶನ ಕಾರ್ಯವನ್ನು ಕೈಗೊಳ್ಳುತ್ತವೆ. ಈ ಪುಸ್ತಕಗಳ ಬೆಲೆಯೂ ಬಹಳ ಕಡಿಮೆ ಇರುತ್ತದೆ. ಆದರೆ ಸಂಸ್ಥೆಯು ಸಂಪಾದಕರು, ಡಿಟಿಪಿ ಆಪರೇಟರುಗಳು, ಮುದ್ರಕರು ಇವರಿಗೆಲ್ಲ ಹಣವನ್ನೇ ಕೊಡಬೇಕಲ್ಲ! ಅದನ್ನೆಲ್ಲಿಂದ ಹುಟ್ಟಿಸುವುದು? ಯೋಚನೆ ಮಾಡಿರಿ.
ಈ ಕೆಳಗಿನ ಪುಸ್ತಕಗಳ ಶೇರಿಂಗ್ ನಡೆದಿರುವುದನ್ನು ನಾನು ಗಮನಿಸಿದ್ದೇನೆ. ನಿಮಗೂ ಗೊತ್ತಿದ್ದಲ್ಲಿ ಅವುಗಳ ಹೆಸರುಗಳನ್ನು ಇಲ್ಲಿ ತಿಳಿಸಬಹುದು.
ಗ್ರಂಥ | ಮುದ್ರಕರು | ಕೃತಿಗಳ್ಳತನದ ಪ್ರಮಾಣ |
---|---|---|
ವ್ರತಮುಕ್ತಾವಳೀ | ಶ್ರೀರಾಯರ ಮಠ | ಪ್ರತೀ ಸಲವೂ ಒಂದು ವ್ರತದಂತೆ ಇಡೀ ಗ್ರಂಥವನ್ನು ಶೇರ್ ಮಾಡಿದ್ದಾರೆ |
ತಂತ್ರಸಾರ ಕನ್ನಡ ವ್ಯಾಖ್ಯಾನ | ಈಶಾವಾಸ್ಯಂ, ಅಂಬಲಪಾಡಿ | ಭಾಗಶಃ |
ಸಸ್ವರ ವೇದಮಂತ್ರಾಃ | ಶ್ರೀರಾಮಕೃಷ್ಣಾಶ್ರಮ, ಮೈಸೂರು | ಸಂಪೂರ್ಣ |
ಅಣುಭಾಷ್ಯಂ | ಶ್ರೀರಾಘವೇಂದ್ರಾಶ್ರಮ, ಮಲ್ಲೇಶ್ವರಂ | ಸಂಪೂರ್ಣ |
ತಂತ್ರಸಾರೋಕ್ತ ಪೂಜಾಪದ್ಧತಿಃ | ಹೊಂಬಾಳಿ ಬಂಧುಗಳು(?) | ಸಂಪೂರ್ಣ |
ಮಂಡಲದರ್ಪಣ | ಶಿಬಿರಂಗ ಪ್ರಕಾಶನ | ಸಂಪೂರ್ಣ |
ಸಾರ್ಥ ಷೋಡಶ ಸಂಸ್ಕಾರ ರತ್ನಮಾಲಾ | ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮಂಗಳೂರು | ಸಂಪೂರ್ಣ |
ವೈಷ್ಣವೀಯ ಅಶ್ವಲಾಯನ ಶ್ರಾದ್ಧಪದ್ಧತಿ | ವೈದಿಕಪ್ರಕಾಶನ ನಿಲಯ, ಗದಗ | ಸಂಪೂರ್ಣ |
ಮಧ್ವಾಚಾರ್ಯ ಕಾಮಿಕ್ಸ್ | ಅಮರಚಿತ್ರಕಥಾ | ಸಂಪೂರ್ಣ |
ತೀರ್ಥಪ್ರಬಂಧ | ಆಚಾರ್ಯ ಪ್ರಕಾಶನ(?) | ಸಂಪೂರ್ಣ |
ಪುರಾಣಗಳು | ಕರ್ನಾಟಕ ಸರ್ಕಾರ(?) | ಸಂಪೂರ್ಣ |
ಸಟೀಕಾವ್ರತರತ್ನಮಾಲಾ | ತಿಳಿಯದು | 8ಕ್ಕೂ ಹೆಚ್ಚಿನ ಹಲವಾರು ವ್ರತಗಳ ವಿವರಣೆ |
ಮೇಲೆ ತಿಳಿಸಿರುವ ಕೆಲವು ಪ್ರಕಾಶಕರನ್ನು ನಾನು ಸ್ವತಃ ಮಾತನಾಡಿಸಿ ಪುಸ್ತಕಗಳನ್ನು ಶೇರ್ ಮಾಡಲು ಅನುಮತಿ ನೀಡದಿರುವ ವಿಷಯವನ್ನು ಖಚಿತಪಡಿಸಿಕೊಂಡಿದ್ದೇನೆ.
ವೇದಾದಿಗಳು ಯಾರೊಬ್ಬರ ಸ್ವತ್ತಲ್ಲ, ಹೀಗಿರುವಾಗ ಮುಕ್ತವಾಗಿ ಹಂಚಿದರೆ ಏನು ತಪ್ಪು?
ಓಪನ್ ಸೋರ್ಸ್ ಮತ್ತು ಉಚಿತ ಸೋರ್ಸ್ ಗಳ ನಡುವೆ ವ್ಯತ್ಯಾಸವುಂಟು. ಜ್ಞಾನವು ಯಾರೊಬ್ಬರ ಸ್ವತ್ತಲ್ಲ. ಅದನ್ನು ಯಾರು ಬೇಕಾದರೂ ತಮ್ಮದೇ ಆದ ರೀತಿಯಲ್ಲಿ ಬಳಸಲು ಅಥವಾ ಮತ್ತೊಬ್ಬರಿಗೆ ಹಂಚಲು ಮುಕ್ತರು. ಒಪ್ಪೋಣ. ಪುಸ್ತಕವೊಂದರಲ್ಲಿ ಪ್ರಸ್ತುತಪಡಿಸಿರಬಹುದಾದ ಜ್ಞಾನಕ್ಕೆ ಲೇಖಕನಾಗಲಿ ಅಥವಾ ಪ್ರಕಾಶಕನಾಗಲಿ ಮಾಲಿಕತ್ವವನ್ನು ಹೇಳಿಕೊಳ್ಳಲು ಆಗದು ಇದನ್ನೂ ಒಪ್ಪೋಣ. ಆದರೆ ಆ ಗ್ರಂಥವನ್ನು ಸಂಪಾದಿಸಲು ಮತ್ತು ಪ್ರಕಟಪಡಿಸಲು ಲೇಖಕ ಮತ್ತು ಪ್ರಕಾಶಕರು ಶ್ರಮವಹಿಸಿ, ಬಂಡವಾಳವನ್ನು ಹೂಡಿರುತ್ತಾರೆ ಆದ ಕಾರಣ ಆ ಶ್ರಮಕ್ಕೆ ನಾವು ಬೆಲೆಯನ್ನು ತೆರಲೇಬೇಕು. ಗ್ರಂಥದಲ್ಲಿರುವ ಜ್ಞಾನವನ್ನೇ ನಾವು ಮತ್ತೊಂದು ರೀತಿ, ನಮ್ಮದೇ ಶ್ರಮವನ್ನು ಹಾಕಿದ್ದಲ್ಲಿ ಅದನ್ನು ಮುಕ್ತವಾಗಿ ಎಲ್ಲೆಡೆ ಪಸರಿಸೋಣ. ಆದರೆ ಬೇರೊಬ್ಬರ ಪರಿಶ್ರಮದಸ್ವತ್ತಿಗೆ ಹೀಗೆ ಹೇಳಲಿಕ್ಕೆ ಆಗದು. ಅನುವಾದ, ವ್ಯಾಖ್ಯಾನ ಮತ್ತು ಪ್ರಸ್ತುತಿಗಳು ಲೇಖಕನ ಬೌದ್ಧಿಕಸ್ವತ್ತುಗಳು. ಅವುಗಳನ್ನು ನಾವು ಮನಸೋಇಚ್ಛೆ ಹಂಚುವ ಹಾಗಿಲ್ಲ.
ಆನ್ ಲೈನ್ ಗ್ರಂಥಗಳಳು ಅಥವಾ ಈ ಪಬ್ಲಿಕೇಶನ್ ಉತ್ತಮ ಉಪಾಯವಲ್ಲವೇ?
ಹೌದು. ಪುಸ್ತಕಗಳನ್ನು ಈ ಪಬ್ಲಿಕೇಶನ್ ಮಾದರಿಯನ್ನು ಪ್ರಕಾಶನಗೊಳಿಸುವುದು ಉತ್ತಮ ಮಾರ್ಗ. ಆದರೆ ನಾನು ಇಲ್ಲಿ ಚರ್ಚಿಸಿರುವುದು ಈಗಾಗಲೇ ಮುದ್ರಿತವಾದ ಪುಸ್ತಕಗಳ ಕೃತಿಗಳ್ಳತನದ ಬಗ್ಗೆ. ಪ್ರಕಾಶಕರು ಇ-ಪಬ್ಲಿಕೇಶನ್ ಮಾದರಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿದರೂ ಕೂಡ ಹಳೆಯ ಗ್ರಂಥಗಳ ಅನಧಿಕೃತ ಸಾಗಾಣಿಕೆಯು ತಪ್ಪು ಕೆಲಸವೇ ಆಗಿದೆ. (ಇ ಪಬ್ಲಿಕೇಶನ್ ಮತ್ತು ಪಿಡಿಎಫ್ ಎರಡೂ ಬೇರೆ ಬೇರೆ ವಿಧಾನಗಳು ಎನ್ನುವುದು ಗಮನಿಸಬೇಕಾದ ವಿಷಯ.)
ಪುಸ್ತಕವೊಂದರ ಭಾಗವನ್ನು ನಾವು ಸಾರ್ವಜನಿಕವಾಗಿ ಪ್ರಕಟಿಸುವಾಗ ಕೃಪೆ : ಎಬಿಸಿಡಿ ಎಂದು ಅವರ ಹೆಸರನ್ನು ಹಾಕುತ್ತೇವಲ್ಲ?
ಕೃಪೆ ಎಂದು ಅವರ ಹೆಸರು ಹಾಕಿದ ಮಾತ್ರಕ್ಕೆ ಇಡೀ ಪುಸ್ತಕವನ್ನು ಇಷ್ಟಿಷ್ಟೇ ಆಗಿ ಸಂಪೂರ್ಣವಾಗಿ ಪ್ರಕಟಮಾಡಿಬಿಡುವುದಲ್ಲ. ರೆಫರೆನ್ಸ್ ಎನ್ನುವ ಕ್ರಮದಲ್ಲಿ ಮಾತ್ರವೇ ಪುಸ್ತಕವೊಂದರ ಕೆಲ ಭಾಗಗಳನ್ನು ಉಲ್ಲೇಖಿಸಬಹುದೇ ವಿನಾ ಇಡೀ ಗ್ರಂಥವನ್ನು ಶೇರ್ ಮಾಡುವುದಲ್ಲ. ಇದು ತಪ್ಪು. ಲಿಖಿತ ಅಪ್ಪಣೆಯಿಲ್ಲದೆ ಹೀಗೆ ಮಾಡಿದರೆ ವಿದೇಶದಲ್ಲಿ ಜೈಲಿಗಟ್ಟುತ್ತಾರೆ.
ನಾವು ಈ ರೀತಿಯಾದ ಕಳ್ಳತನಕ್ಕೆ ಒಪ್ಪಲಾರೆವು. ಆದರೆ ಈ ರೀತಿಯಾದ ಗ್ರಂಥಗಳು ನಮಗೂ ಬಂದಿವೆ. ಏನು ಮಾಡುವುದು?
ಕೃತಿಗಳ್ಳತನಕ್ಕೆ ನಿಮ್ಮ ಮನಸ್ಸು ಒಪ್ಪದಿಲ್ಲವೆಂದರೆ ಅದು ಒಂದು ಒಳ್ಳೆಯ ಲಕ್ಷಣ. ಆದರೆ ಯಾರೋ ಒಬ್ಬರು ನಿಮಗೆ ಈ ರೀತಿಯಾಗಿ ಒಂದು ಪುಸ್ತಕವನ್ನು ಶೇರ್ ಮಾಡಿದ್ದಾರೆ ಎಂದು ಕೊಳ್ಳೋಣ. ಆಗ ನೀವು ಮಾಡಬಹುದಾದ ಕೆಲಸ ಇಷ್ಟು.
- ಆ ಪುಸ್ತಕವು ಸಂಪೂರ್ಣವಾಗಿ ಉಚಿತವಾಗಿಯೇ ಲಭ್ಯವಿದೆಯೇ ಎಂದು ಕಂಡುಕೊಳ್ಳಿರಿ. ಸಂಪೂರ್ಣ ಉಚಿತವಾಗಿ ಲಭ್ಯವಿದ್ದಲ್ಲಿ ಆಸ್ವಾದಿಸಿ. ಏನೂ ಚಿಂತೆಯಿಲ್ಲ.
- ಇದೊಂದು ಕೃತಿಗಳ್ಳತನ ಎಂದು ನಿಮಗೆ ಗೊತ್ತಾದಲ್ಲಿ ಆ ವಿಷಯವನ್ನು ನಿಮಗೆ ಕಳುಹಿಸಿದವರಿಗೆ ತಿಳಿ ಹೇಳಿ. ಅವರು ಕೂಡ ಜಾಗೃತರಾಗಬಹುದು. ನೀವು ಕೂಡ ಮತ್ತೊಬ್ಬರಿಗೆ ಶೇರ್ ಮಾಡದಿರಿ. ಅಷ್ಟರ ಮಟ್ಟಿಗೆ ಆದರೂ ಅದರ ಶೇರಿಂಗ್ ನಿಲ್ಲಲಿ.
- ನಿಮಗೆ ಆ ಪುಸ್ತಕವು ಅಗತ್ಯವಿದೆ ಎಂದಾದಲ್ಲಿ, ಅದರ ಪ್ರಕಾಶಕರಿಗೆ ನೀವು ಅದರ ಹಣವನ್ನು ಯಾವುದೋ ಒಂದು ರೀತಿಯಿಂದ ಸಂದಾಯ ಮಾಡಿರಿ. ಯಾರೆಂದು ಗೊತ್ತಾಗದಿದ್ದರೆ ಸಮೀಪದ ಶಾಲೆಗೋ ಅಥವಾ ದೇಗುಲದ ಹುಂಡಿಗೋ ಸಂದಾಯ ಮಾಡಿ. ಈ ಎರಡನೆಯ ಕ್ರಮದಿಂದ ಆ ಪ್ರಕಾಶಕರಿಗೆ ನಯಾ ಪೈಸೆಯಷ್ಟೂ ಉಪಯೋಗವಾಗದೇ ಇದ್ದರೂ ಕೂಡ ನೀವು ಪಾಪಪ್ರಜ್ಞೆಯಿಂದ ಪಾರಾಗಬಹುದು.
- ಒಂದು ವೇಳೆ ನಿಮಗೆ ಅನುಕೂಲವಿದ್ದಲ್ಲಿ ಆ ಪುಸ್ತಕದ ಮುದ್ರಿತ ಪ್ರತಿ / ಇ ಪಬ್ಲಿಕೇಶನ್ ಅನ್ನು ಖರೀದಿಸಿ. ಇದು ಅತ್ಯುತ್ತಮವಾದ ಕೆಲಸ.
- ಆ ಪುಸ್ತಕವು ನಿಮಗೆ ಅಗತ್ಯವಿಲ್ಲವೆಂದಾದಲ್ಲಿ ತಕ್ಷಣವೇ ಡಿಲೀಟ್ ಮಾಡಿಬಿಡಿ.
ಇದರ ಜೊತೆಗೆ ಇಷ್ಟವಿದ್ದಲ್ಲಿ ನೀವು ಈ ಕೆಳಗಿನ ಪ್ರತಿಜ್ಞೆಗಳನ್ನು ಮಾಡಬಹುದು.
- ಬೇರೆಯವರು ಏನು ಮಾಡುವರೋ ಗೊತ್ತಿಲ್ಲ. ಆದರೆ ನಾನು ಮಾತ್ರ ಈ ಕಳ್ಳ ಪಿಡಿಎಫ್ ಸಾಗಾಣಿಕೆ ಮಾಡಲಾರೆ
- ಇತರರ ಲೇಖನಗಳನ್ನು ಫಾರ್ವರ್ಡ್ ಮಾಡುವಾಗ ಅಥವಾ ಶೇರ್ ಮಾಡುವಾಗ ಮೂಲ ಲೇಖಕರ ಹೆಸರನ್ನು ತಪ್ಪದೇ ಬರೆಯುತ್ತೇನೆ
- ಮೂಲ ಲೇಖಕರ ಹೆಸರು ಗೊತ್ತಿರದಿದ್ದಲ್ಲಿ ಲೇಖಕರ ಹೆಸರು ಗೊತ್ತಿಲ್ಲವೆಂದಾದರೂ ಬರೆಯುತ್ತೇನೆ.
- ಯಾವ ಕಾರಣಕ್ಕೂ ಬೇರೆಯವರ ಫೇಸ್ ಬುಕ್ ಪ್ರೊಫೈಲ್ ಇಂದ ಲೇಖನವನ್ನು ತೆಗೆದು ನನ್ನದೆನ್ನುವ ಹಾಗೆ ಪ್ರಕಟಿಸಿಕೊಳ್ಳಲಾರೆ.
ನೈತಿಕಪ್ರಜ್ಞೆಯಿಂದಿಗೆ ಸುಖನಿದ್ರೆ ಮಾಡಬೇಕೆನ್ನುವವರಿಗೆ ಇದು ದೊಡ್ಡ ಕೆಲಸವೇನಲ್ಲ. ಎಲ್ಲರೂ ಪರಸ್ಪರ ವಿಶ್ವಾಸದೊಂದಿಗೆ ಈ ರೀತಿಯಾದ ಕೃತಿಚೌರ್ಯದ ಕಾರ್ಯಕ್ಕೆ ತಡೆ ಹಾಕೋಣ. ತನ್ಮೂಲಕ ಕನ್ನಡದ ಅದರಲ್ಲೂ ಧಾರ್ಮಿಕ ಪುಸ್ತಕಗಳ ಪ್ರಕಾಶನಕಾರ್ಯವು ಉಸಿರಾಡಲು ಅನುವು ಮಾಡಿಕೊಡೋಣ.
#noplagiarism #nostolenpdf #nocutandpaste
Source of the image of thief used in header : www.freepik.com
Be First to Comment