ಪ್ರೊ. ಶ್ರೀನಿವಾಸ ರಿತ್ತಿ – ಮರೆಯಾದ ಮತ್ತೊಂದು ಜ್ಞಾನದೀಪ

ಇತಿಹಾಸದ ಅಧ್ಯಯನ ಮಾಡುವವರಿಗೆ ಮಾಧ್ವಸಮೂಹವು ಎರಡು ಅವಳಿಜವಳಿ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿತ್ತು. ಈ ದೀಪಗಳ ಬೆಳಕಿನಲ್ಲಿ ಅನೇಕ ಮಂದಿ ಆಸಕ್ತರು ಇತಿಹಾಸವನ್ನು ಅಧ್ಯಯನ ಮಾಡಿ ಯಶಸ್ಸನ್ನು ಪಡೆದಿದ್ದಾರೆ. ಈ ಎರಡು ದೀಪಗಳ ಹೆಸರೂ ಶ್ರೀನಿವಾಸ ಎಂದೇ. ಮೊದಲನೆಯ ದೀಪವು ಹಾವನೂರಿನಿಂದ ಎಣ್ಣೆಯನ್ನು ಪಡೆಯುತ್ತಿತ್ತು. ಎರಡನೆಯದ್ದು ಹೊಸರಿತ್ತಿಯಿಂದ. ಮೊದಲನೆಯ ದೀಪವು ಶಾಂತವಾಗಿ ಹಲವು ವರ್ಷಗಳೇ ಕಳೆದಿವೆ. ಈ ದಿನದಂದು ಎರಡನೆಯ ದೀಪವು ಕೂಡ ನಂದಿಹೋಗಿದೆ!

ಜಾಗತಿಕ ಮಟ್ಟದ ಕನಿಷ್ಠ ೨೦ ಜನ ಇತಿಹಾಸಕಾರರಿಗೆ ಜ್ಞಾನವನ್ನು ಹಂಚಿದ್ದು ಪ್ರೊ. ರಿತ್ತಿಯವರ ಒಂದು ಸಾಧನೆ.

ಬಹಳಷ್ಟು ಜನರಿಗೆ ಇವರು ಯಾರೆಂದೂ ತಿಳಿದಿಲ್ಲ. ಆದರೆ ಆನೇಕ ಮಾಧ್ವಮಠಗಳು ತಮ್ಮ ಪ್ರಾಚೀನ ಆಸ್ತಿಪಾಸ್ತಿಗಳ ದಾಖಲಾತಿಗಳನ್ನು ಮರುಸಂಪಾದನೆ ಮಾಡಿದ್ದೇ ಇವರ ಸಹಾಯದಿಂದ ಎನ್ನುವ ಸತ್ಯವನ್ನು ಇಂದಾದರೂ ತಿಳಿಯಲಿ. ಅನೇಕ ಕಡೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ದಾಖಲಾತಿಗಳನ್ನು ದುರುಳರು ಮಾಯ ಮಾಡಿ, ತಿರುಚಿ ತಮ್ಮ ಹೆಸರಿಗೆ ಮಾಡಿಕೊಂಡು, ನಮ್ಮ ಮಠಗಳಿಗೆ ತಿಂಗಳಿಗೆ 4 ರೂಪಾಯಿ, 5 ರೂಪಾಯಿ ಬಾಡಿಗೆ ಸಲ್ಲಿಸುತ್ತ ನಮ್ಮ ಆಸ್ತಿಯನ್ನು ಉಪಭೋಗಿಸುತ್ತಿದ್ದಾಗ ಕೋರ್ಟುಗಳಿಗೆ ನಾವು ಅಧಿಕೃತವೆನ್ನುವ ದಾಖಲಾತಿಯನ್ನು ಸಲ್ಲಿಸುವ ಹಾಗೆ ಆಗಿದ್ದೇ ಹಾವನೂರು ಮತ್ತು ರಿತ್ತಿ ಅವರ ಸಂಶೋಧನೆಗಳ ಪ್ರಭಾವದಿಂದ. ಮಾಧ್ವ ಮಠಗಳಿಗೆ ಸಂಬಂಧ ಪಟ್ಟ ಅನೇಕ ಊರುಗಳ ಆಸ್ತಿಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಕೊಡಮಾಡಿದವರೇ ಇವರು.

ಶ್ರೀನಿವಾಸ ಹಾವನೂರು ಮತ್ತು ಶ್ರೀನಿವಾಸ ರಿತ್ತಿ ಈ ಎರಡೂ ಹೆಸರುಗಳನ್ನು ನಾವು ಹೆಮ್ಮೆ ಇಂದ ಹೇಳಿಕೊಳ್ಳಬಹುದು. ಇವರು ನಮ್ಮವರೆಂದು. ಹಾವನೂರರು ಪ್ರಾಚೀನ ದಸ್ತಾವೇಜುಗಳಲ್ಲಿ ವಿಶೇಷ ಕೃಷಿಯನ್ನು ನಡೆಸಿದ್ದರೆ, ಶಿಲಾಶಾಸನಗಳ ಬಗ್ಗೆ ರಿತ್ತಿಯವರದ್ದೇ ಮಾತೇ ಅಂತಿಮ ಎನ್ನುವಂತಹ ಪಾಂಡಿತ್ಯ ಪ್ರೊ. ಶ್ರೀನಿವಾಸ ರಿತ್ತಿಯವರದು.

ಶಿವಾಜಿ ಮಹಾರಾಜರ ತಾಯಿಯ ಮನೆತನದ ಮಾತು ಕನ್ನಡ ಎನ್ನುವ ಅಪೂರ್ವವಾದ ವಿಷಯದ ಬಗ್ಗೆ ಅವರು ಬೆಳಕು ಚೆಲ್ಲಿದ್ದರು. ನಾಂದೇಡ್, ಸೋಲಾಪುರ, ಕೊಲ್ಹಾಪುರ ಪ್ರಾಂತ್ಯಗಳಲ್ಲಿ ಕನ್ನಡ ಭಾಷೆಯ ಶಾಸನಗಳನ್ನು ಅಧ್ಯಯನ ಮಾಡಿ ತಮ್ಮ ಸಹೋದ್ಯೋಗಿಗಳೊಡನೆ ಗ್ರಂಥಸಂಪಾದನೆಯನ್ನು ಮಾಡಿದ್ದಾರೆ. ಜಾಗತಿಕ ಮಟ್ಟದ ಈ ವಿದ್ವಾಂಸರ ಮೊದಲ ಗುರು ಸುಪ್ರಸಿದ್ಧ ವಿದ್ವಾಂಸರಾದ ಆರ್. ಎಸ್. ಪಂಚಮುಖಿ ಅವರು ಎನ್ನುವುದು ಮತ್ತೊಂದು ಗಮನಿಸಬೇಕಾದ ವಿಷಯ.

ದೀಪಗಳು ಆರಿ ಹೋದರೂ ಕೂಡ ಅವುಗಳಿಂದ ಹೊತ್ತಿಸಿದ ಬೆಳಕು ಎಂದೂ ಆರದು. ಅವುಗಳನ್ನು ನಾವು ಸದಾಕಾಲ ಬಳಸುತ್ತ, ಆರದಂತೆ ನೋಡಿಕೊಳ್ಳುವುದೇ ಅತ್ಯುತ್ತಮ ಶ್ರದ್ಧಾಂಜಲಿಯು. ಅವರು ರಚಿಸಿರುವ ಅನೇಕ ಗ್ರಂಥಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿವೆ. ಓದುತ್ತಾ ಇದ್ದರೆ ಪ್ರಕಾಶವು ನಮ್ಮ ಮುಂದಿನ ಪೀಳಿಗೆಗೆ ತಾನೇ ತಾನಾಗಿ ಹರಡುತ್ತದೆ.

ನಮ್ಮ ಪ್ರೀತಿಯ ರಾಜಗೋಪಾಲಾಚಾರ್ಯರ ಸಾಂಗತ್ಯದಿಂದಾಗಿ ನನಗೆ ಇವರೊಂದಿಗೆ ಎರಡು ಸಲ ಮಾತನಾಡುವ ಅವಕಾಶ ದೊರಕಿತ್ತು. ಎರಡೂ ಸಲ ಸುಮಾರು 2 ಗಂಟೆಗಳಷ್ಟು ಹೊತ್ತು ಮಾತನಾಡಲು ಅವಕಾಶ ದೊರಕಿದ್ದು. ಆದರೆ ಅವರ ನೆನಪಿನ ನಿಧಿಯಿಂದ ನಾನು ಬಸಿದುಕೊಳ್ಳಲು ಸಾಧ್ಯವಾಗಿದ್ದು ಅತ್ಯಲ್ಪ. ಅವರ ಮಾಹಿತಿಯ ಕೋಶದ ವಿಸ್ತಾರ ಅಷ್ಟೊಂದು ಅಗಾಧ. ಅಪಾರ. ಆದರೆ ನನ್ನ ತಲೆಯಲ್ಲಿ ಚಿಪ್ಪು ಬಿಟ್ಟರೆ ಬೇರೇನೂ ಇಲ್ಲ.

ಬೇರೆ ಯಾರಿಗೆ ಏನೆನ್ನಿಸಿದೆಯೋ ಕಾಣೆ. ಆದರೆ ಇವರ ಕಣ್ಮರೆ ನಮ್ಮ ಮಠಕ್ಕೆ ಆದ ಒಂದು ನಷ್ಟ ಎಂದು ಮಾತ್ರ ಹೇಳಬಲ್ಲೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.