ವಿರಾಟಪರ್ವ ಪ್ರವಚನದ ವಿಶೇಷ ಚಿಂತನೆ

ಈ ನಾಲ್ಕಾರು ದಿನಗಳಿಂದ ನಮ್ಮಲ್ಲಿ ವಿಪರೀತವಾದ ಮಳೆ ಶುರುವಾಗಿದೆ. ಬಹಳ ಜೋರಾಗಿದೆ ಆರ್ಭಟ. ಈ ಆರ್ಭಟವನ್ನು ನೋಡಿ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಂದಿತು. ಏನಿದು? ಈ ಉಡುಪಿಯ ಜನ ಹೇಳುವಂತೆ ಆಟಿಯ ಮಳೆ ಶುರುವಾಗಬೇಕಿತ್ತು. ಆದರೆ ಅತ್ಯಂತ ರಭಸವಾಗಿದೆಯಲ್ಲ ಮಳೆ! ಏನಿದರ ಕಾರಣ ಎಂಬುದು ಆ ಪ್ರಶ್ನೆ. ಉತ್ತರವಿಲ್ಲದೆ ನಿನ್ನೆಯ ದಿನವು ಕೊನೆಗೊಂಡಿತು.

ಬೆಳಿಗ್ಗೆ ಕೆಲಸಕ್ಕೆ ಬರುವಾಗ ಕೂಡ ಮಳೆಯು ಚೆನ್ನಾಗಿ ರಾಚುತ್ತಿತ್ತು ಮುಖಕ್ಕೆ. ಮತ್ತೆ ಅದೇ ಪ್ರಶ್ನೆ ಕಾಡಿತು. ಆದರೆ ಉತ್ತರ ಬರಲಿಲ್ಲ. ಸಂಜೆಯ ತನಕ ಮಳೆಯ ನೇರ ಪರಿಣಾಮಕ್ಕೆ ಒಳಗಾಗಿದ್ದಿಲ್ಲವಾದ್ದರಿಂದ ಪ್ರಶ್ನೆ ಮರೆತೇ ಹೋಗಿತ್ತು. ಆದರೆ ಸಂಜೆ, ಕಿರಿಯ ಸ್ನೇಹಿತನೊಬ್ಬ ಒಳಗೆ ಬಂದ. ಒಂದೆರಡು ನಿಮಿಷ ಮಾತನಾಡುತ್ತಾ ಇದ್ದಾಗ ಅವನು ಹೇಳಿದ ಒಂದು ಮಾತು ಚಿಂತನೆಯ ಜ್ಯೋತಿಯನ್ನು ಹೊತ್ತಿಸಿತು. “ಎಂಥಾ ಮಹಿಮೆ ಮಾರ್ರೇ ಅದ್ಮಾರು ಸ್ವಾಮೇರ್ದು! ಸುಮ್ನೆ ಅನ್ನಲ್ಲ ಇವರಿಗೆ ದೊಡ್ಡವರೆಂದು! ಸಿದ್ಧಪುರುಷರು ಇವರು. ವಿರಾಟಪರ್ವ ಹೇಳಿಸಿದರೆ ಮಳೆ ಬರ್ತದೆ ಎಂದು ದೊಡ್ಡವರು ಸುಮ್ಮನೆ ಹೇಳಲಿಲ್ಲ! ಅದರಲ್ಲೂ ಅದ್ಮಾರು ಸ್ವಾಮೇರು ಹೇಳಿದರೆ ಮಳೆ ಗ್ಯಾರಂಟಿ! ಮತ್ತೊಮ್ಮೆ ಪ್ರೂವ್ ಆಯ್ತು ನೋಡಿ” ಎಂದು ಆತ ಅದಮಾರು ಗುರುಗಳ ಗುಣಗಾನ ಮಾಡಿ ಎದ್ದು ಹೋದ. ಹೋಗುತ್ತಾ ಹೋಗುತ್ತಾ ನನ್ನಲ್ಲಿ ವಿಚಾರದ ಬೀಜವನ್ನು ಬಿತ್ತಿ ಹೋದ.

ಈಗಾಗಲೇ ಉಡುಪಿಯವರು ಕೂಡ “ಸಾಕು” ಎನ್ನುವಷ್ಟು ಮಳೆ ಬಂದಿದೆ. ಅಂಥಾದ್ರಲ್ಲಿ ಪಲಿಮಾರು ಸ್ವಾಮಿಗಳು ಈ ವಿರಾಟಪರ್ವದ ಪ್ರವಚನವನ್ನು ಈ ಹೊತ್ತಿನಲ್ಲಿ ಏರ್ಪಾಡು ಯಾಕೆ ಮಾಡಬೇಕಿತ್ತು? ವಿಪರೀತವಾಗಿ ಮಳೆ ಸುರಿದು ಪ್ರವಾಹ ಉಂಟಾಗಿ ರಗಳೆ ಆಗ್ತಿದೆಯಲ್ಲ ಎಂಬ ಒಂದು ಶಂಕೆ ಉಂಟಾಯಿತು.

ಈ ವಿಚಾರವನ್ನೇ ನಿಧಾನಕ್ಕೆ ಕುಲುಕಾಡಿಸಿದಾಗ ಹೃದಯದಲ್ಲಿ ತೇಲಿದ ಉತ್ತರವಿದು.

ಈ ವರ್ಷ ಯುಗಾದಿಯಂದು ಪಂಚಾಂಗ ಶ್ರವಣವನ್ನು ಮಾಡುವಾಗ ಮಳೆ ಹೆಚ್ಚು ಎಂಬ ವಿಷಯವು ತಿಳಿದಿತ್ತು. ಭೂಮಿಯು ಹೊತ್ತಿ ಉರಿಯುತ್ತಿರುವಾಗ ಇಂತಹ ಒಂದು ವಿಷಯ ಕಿವಿಗೆ ತಂಪು ಮಾಡದೆ ಇರುತ್ತದಯೇ? ಸಂತಸವಾಯಿತು. ಪಂಚಾಂಗದಲ್ಲಿ ತಿಳಿಸಿದ ಹಾಗೆ ಒಳ್ಳೆಯ ಮಳೆ ಸುರಿಯಿತು. ಪಂಚಾಂಗದ ನಿಖರತೆಗೆ ಬಹಳ ಬೆರಗಾಯಿತು ನನಗೆ. ಮಳೆಯು ಬರೀ ಚೆನ್ನಾಗಿ ಸುರಿಯಲಿಲ್ಲ, ಬಹಳ ಚೆನ್ನಾಗಿ, ವಿಪರೀತ ಚೆನ್ನಾಗಿ ಸುರಿಯಿತು. ಆದಾಗ್ಯೂ ಮಳೆಗಾಲವಿಡೀ ಸುರಿಯುವುದು ಎನ್ನುವ ನಿರೀಕ್ಷೆಯಲ್ಲಿದ್ದ ನನಗೆ ಸ್ವಲ್ಪ ನಿರಾಸೆಯಾಯಿತು. ಏಕೆಂದರೆ ಈಗ ಸುಮಾರು ೮-೧೦ ದಿನಗಳ ಕೆಳಗೆ ಮಳೆಯು ನಿಂತು ಯಥಾ ಪ್ರಕಾರ ಚುರು ಚುರು ಎನ್ನುವ ಬಿಸಿಲು ಕಿರಿ ಕಿರಿ ಮಾಡುವ ಸೆಕೆಯು ಪ್ರಾರಂಭವಾಗಿತ್ತು. ಉತ್ತರ ಕರ್ನಾಟಕದ ಬಹಳಷ್ಟು ಕಡೆ ಇನ್ನೂ ಮಳೆ ಬಂದಿಲ್ಲ ಮತ್ತು ನದಿಗಳು ಸಂಪೂರ್ಣವಾಗಿ ಹರಿಯುತ್ತಿಲ್ಲ ಎಂಬ ವಿಷಯ ಕೇಳಿದಾಗ ಚೂರು ಬೇಸರವೇ ಆಯಿತು. ಈಗಲೂ ಕೊಪ್ಪಳ ಮತ್ತು ಕುಷ್ಟಗಿ ಪ್ರಾಂತ್ಯಗಳಲ್ಲಿ ಹೇಳಿಕೊಳ್ಳುವಂತಹ ಮಳೆ ಏನೂ ಇಲ್ಲ. ಆದರೆ ಈ ನಿರಾಸೆಯನ್ನು ಮಾಯಮಾಡುವ ಒಂದು ಹೊಸ ಭರವಸೆಯನ್ನು ಈ ವಿರಾಟಪರ್ವದ ಪ್ರವಚನವು ನನ್ನಲ್ಲಿ ಮೂಡಿಸಿದೆ.

ಇತ್ತೀಚೆಗೆ ಬಾಳಗಾರು ಶ್ರೀಗಳು ಒಂದು ಮಾತು ನನ್ನ ನೆನಪಿಗೆ ಬಂದಿತು “ನಮ್ಮಲ್ಲಿ ಮಳೆ ಬಹಳ ಚೆನ್ನಾಗಿದೆ. ಉತ್ತರ ಕರ್ನಾಟಕಕ್ಕೂ ಈ ಮಳೆಯು ಲಭ್ಯವಾಗಿದ್ದರೆ ಒಳ್ಳೆಯದಿತ್ತು. ಈಗಲೂ ಚಿಂತೆ ಇಲ್ಲ. ಇಲ್ಲಿ ಮಳೆ ಹೀಗೆಯೇ ಮುಂದುವರೆದರೆ ಅಲ್ಲಿನ ನದಿಗಳು ತುಂಬಿ ಹರಿಯುತ್ತವೆ. ಹಾಗಾದಲ್ಲಿ ಒಂದು ಲಾಭ ಈ ವರ್ಷ!” ಎಂದು ಅವರು ಹೇಳಿದ್ದರು. ಅವರ ಈ ಮಾತನ್ನು ಪಲಿಮಾರು ಶ್ರೀಗಳು ಏರ್ಪಾಡು ಮಾಡಿದ ಈ ವಿರಾಟ ಪರ್ವದ ಪ್ರವಚನವು ಸಿದ್ಧಮಾಡಿ ತೋರಿಸಿತು. ಶ್ರದ್ಧೆಯುಳ್ಳ ಯಾರು ವಿರಾಟಪರ್ವವನ್ನು ಹೇಳಿದರೂ ಮಳೆಯು ಬರುತ್ತದೆ ಎನ್ನುವದು ಹಿರಿಯರು ಹೇಳಿದ ಮಾತು. ಹೀಗಿರುವಾಗ ಶ್ರೀವೇದವ್ಯಾಸದೇವರಲ್ಲಿ ಅತೀವವಾದ ವಿಶ್ವಾಸವನ್ನು ಇರಿಸಿಕೊಂಡಿರುವ ಶ್ರೀಅದಮಾರು-ಶ್ರೀಪಲಿಮಾರು ಶ್ರೀಗಳು ಹೇಳಿದರೆ ಬಾರದಿರುತ್ತದೆಯೇ? ಬಂದೇ ಬರುತ್ತದೆ.

ಪಲಿಮಾರು ಶ್ರೀಗಳವರು ಈ ಪ್ರವಚನವನ್ನು ಉದ್ದೇಶಪೂರ್ವಕವಾಗಿ ಹೇಳಿಸಿದರೋ, ಅಥವಾ ನಿವೃತ್ತಕರ್ಮವಾಗಿ ಅವರಿಂದ ಈ ಕೆಲಸವು ನಡೆಯಿತೋ ನನಗೆ ತಿಳಿಯದು. ಆದರೆ ಭಗವಂತ ಬಾಳಗಾರು ಶ್ರೀಗಳವರ ಆಶಯವನ್ನು ಪಲಿಮಾರು ಶ್ರೀಗಳವರಿಗೆ ಪ್ರೇರಣ ಮಾಡುವ ಮೂಲಕ ಕಾರ್ಯರೂಪಕ್ಕೆ ತಂದ. ಅದಕ್ಕೆ ಸಾಧನವಾಗಿ ಆತ ಅದಮಾರು ಶ್ರೀಗಳವರನ್ನು ಬಳಸಿಕೊಂಡ ಎಂಬುದು ಮಾತ್ರ ಇಂದು ತಿಳಿಯಿತು.

ನಿಂತೇ ಹೋಗಿತ್ತು ಎಂದು ಭಾವಿಸುತ್ತಿದ್ದ ಮಳೆಯನ್ನು ಶ್ರೀಅದಮಾರು ಶ್ರೀಗಳವರ ಪ್ರವಚನವು ಮತ್ತೆ ಎಳೆತಂದಿದೆ. ಈ ವಿಷಯದಲ್ಲಿ ಬೇರೆಯವರ ಅಭಿಪ್ರಾಯ ಏನೇ ಇರಲಿ. ಈ ಮಳೆಗೆ ಅವರೆಲ್ಲ ಎಷ್ಟೇ ತಾರ್ಕಿಕ ಕಾರಣಗಳನ್ನು ಕೊಡಲಿ. ಆದರೆ ಭಗವಂತನು ತನ್ನ ಭಕ್ತರ ಮಾತನ್ನು ಕೇಳಿಯೇ ಕೇಳುತ್ತಾನೆ. ಅದರಲ್ಲೂ ಪಲಿಮಾರು, ಅದಮಾರು, ಬಾಳಗಾರು ಶ್ರೀಗಳಂತಹ ತಪಸ್ವಿಗಳ ಮಾತು ಅವನಿಗೆ ಬಹುಮಾನ್ಯ! ಹೀಗಾಗಿ ಈ ಮಳೆಯು ಅಕಾಲವರ್ಷಣವಾಗದೆ ನಮ್ಮೆಲ್ಲರ ಜೀವವನ್ನು ಉದ್ದೀಪನಗೊಳಿಸುವ ಜೀವದ ಸೆಲೆಯಾಗುತ್ತದೆ ಎಂಬುದು ನನ್ನ ನಂಬಿಕೆ.

ಕರಾವಳಿಯ ಕಡೆ ಎಷ್ಟು ಮಳೆಯು ಸುರಿದರೂ ಕೃಷಿ ಭೂಮಿಗೆ ಅದರ ಉಪಯೋಗ ಬಹಳ ಕಡಿಮೆ. ಮಲೆನಾಡಿನಲ್ಲಿ ಕೂಡ ಬರಗಾಲದ ತೀಕ್ಷ್ಣತೆ ಉತ್ತರಕ್ಕೆ ಹೋಲಿಸಿದರೆ ಕಡಿಮೆ. ಮಳೆಹನಿಯೊಂದರೆ ಅತ್ಯಂತ ಹೆಚ್ಚಿನ ಮಹತ್ವ ತಿಳಿದಿರುವುದು ಉತ್ತರದ ರೈತನಿಗೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಆದರೆ ಬಾಳಗಾರು ಶ್ರೀಗಳು ಹೇಳಿದಂತೆ ಉತ್ತರ ಕರ್ನಾಟಕದ ಜನತೆಗಾಗಿಯೇ ಈ ಮಳೆಯು ಬಂದಿದೆ ಎನ್ನುವುದರಲ್ಲಿ ನನಗೇನೂ ಸಂದೇಹ ಉಳಿದಿಲ್ಲ. ಹೌದು. ಅಲ್ಲಿನ ಜನತೆಗೆ ಈ ಮಳೆನೀರು ಕೇವಲ ನೀರಲ್ಲ. ಜೀವಂತವಿರಬೇಕು ಎನ್ನುವ ಆಸೆಗೇನೇ ಜೀವ ನೀಡುವ ಅಮೃತಬಿಂದುವದು. ಈ ಭಾಗದ ಜನತೆ ಕ್ಷೇಮವಾಗಿರಬೇಕೆಂದರೆ ದಕ್ಷಿಣ ಪ್ರಾಂತ್ಯದಲ್ಲಿ ಮಳೆ ಚೆನ್ನಾಗಿ ಆಗಬೇಕು. ಹೀಗೆಂದ ಮಾತ್ರಕ್ಕೆ ದಕ್ಷಿಣಕ್ಕೆ ಮಹಾಪೂರ ಬಂದರೂ ಪರ್ವಾಗಿಲ್ಲ, ಉತ್ತರಕ್ಕೆ ನೀರು ಬರಲ್ಲಿ ಎನ್ನುವ ಅವಿವೇಕದ ಆಶಯ ನನ್ನದಲ್ಲ. ಸಮಪ್ರಮಾಣದ, ಯಥೋಚಿತವಾದ ಮಳೆಯು ಕಾಲಕ್ಕೆ ಸರಿಯಾಗಿ ಸುರಿದಲ್ಲಿ ದಕ್ಷಿಣದವರಿಗೆ ಆ ಮಳೆಗೆ ಹೊಂದಿಕೊಳ್ಳುವುದು ಅಸಾಧ್ಯವೇನಲ್ಲ. ಮಳೆಯೊಂದಿಗೆ ಮಾತನಾಡುವ ಈ ಜನತೆಗೆ ಹೊಂದಿಕೊಂಡು ಬದುಕುವ ಪಾಠವನ್ನೇನೂ ಹೇಳಿಕೊಡುವ ಅಗತ್ಯವಿಲ್ಲ. ಆದರೆ ಉತ್ತರದಿಂದ ಬರಗಾಲವು ಕಾಲು ತೆಗೆಯಬೇಕಾದರೆ ದಕ್ಷಿಣಕ್ಕೂ ಚೆನ್ನಾಗಿ ಮಳೆ ಆಗುವುದು ಎಷ್ಟು ಮುಖ್ಯವೋ ಅಲ್ಲಿನ ಜನತೆಯ ಸಹಕಾರವು ಕೂಡ ಅಷ್ಟೇ ಮುಖ್ಯ ಎನ್ನುವದು ನನ್ನ ಅಭಿಪ್ರಾಯ.

ದಕ್ಷಿಣ ಮತ್ತು ಉತ್ತರದವರ ಬವಣೆಗಳು ನೀಗಿ “ಕಾಲೇ ವರ್ಷತು ಪರ್ಜನ್ಯಃ” ಎಂಬ ಪ್ರಾರ್ಥನೆಯು ದೇವರಿಗೆ ನಿರಂತರವಾಗಿ ಕೇಳುವಂತೆ ಆಗಲಿ. ಅದಮಾರು, ಪಲಿಮಾರು, ಬಾಳಗಾರು ಶ್ರೀಗಳಂತಹ ಸಿದ್ಧಪುರುಷರ ಸಂಖ್ಯೆ ಹೆಚ್ಚಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.