ಇದು ಶಾಲ್ಮಲೀ ಮರ. ಹೆಸರು ಮತ್ತು ಹೂವು ಬಹಳಾ..ಳಾ.. ಚೆನ್ನಾಗಿವೆ. ಇದರ ಕಾಂಡ ಇನ್ನೂ ಚೆನ್ನಾಗಿ, ಮೈತುಂಬಾ ಮೋದಕದ ಗಾತ್ರದ ಮುಳ್ಳುಗಳಿಂದ ಕಂಗೊಳಿಸುತ್ತದೆ . ಮರದ ರಕ್ಷಣೆಗೆ ಶ್ರೀಹರಿಯು ಒಳಗೆ ನಿಂತು ಇದಕ್ಕೆ ಒದಗಿಸುತ್ತಿರುವ ರಕ್ಷಣೆ ಈ ಮುಳ್ಳುಗಳು.
ಬೂರುಗ ಎನ್ನುವುದು ಇದರ ಕನ್ನಡದ ಹೆಸರು.
ಎಷ್ಟು ಕಠೋರ ಗೊತ್ತೇ ಈ ಕಾಂಡ? ಆಕ್ಸಿಡೆಂಟ್ ಆದ ಕಾರು ಏನಾದರೂ ಈ ಕಾಂಡಕ್ಕೆ ಉಜ್ಜಿಕೊಂಡಿತೆನ್ನಿ ಅದರ ಮೈ, ಲಟ್ಟಿಸುವಾಗಲೇ ಮಡಚಿಹೋದ ಚಪಾತಿಯಂತೆ ಸುಕ್ಕುಸುಕ್ಕಾಗಿ ಹೋಗಿಬಿಡುವುದು.
ನಾವು ಕೂಡಾ ಬದುಕಿದ್ದಾಗ, ಸಾಧನೆಯ ಮಾರ್ಗದಲ್ಲಿ ಅನೇಕ ಆಕ್ಸಿಡೆಂಟು ಮಾಡಿಕೊಳ್ಳುತ್ತೇವಲ್ಲ. ಅನ್ನ, ನೀರು, ವಿದ್ಯೆಯನ್ನು ದಾನ ಮಾಡದೆ, ದಾನ ಕೊಡುವಾಗ ನಮ್ಮ ಯೋಗ್ಯತಾನುಸಾರ ಕೊಡದೆ ಜಿಪುಣತನ ಮಾಡುತ್ತಾ, ಉತ್ತಮ ವಸ್ತುಗಳನ್ನು ಮನೆಯಲ್ಲಿನ ಬಂಧುಗಳಿಗೂ, ಕಡಿಮೆ ಬೆಲೆಯ ವಸ್ತುಗಳನ್ನು ಬಡವರಿಗೂ ದಾನ ಕೊಡುತ್ತಾ! ನಾಯಿ, ಕಾಗೆಗಳಿಗೆ ಅರ್ಧ ತುತ್ತಾದರೂ ಅನ್ನವನ್ನು ಹಾಕದೆ, ಅತಿಥಿಗಳಿಗೆ ಕಾಲ್ಮುಟ್ಟಿ ನಮಸ್ಕಾರ ಮಾಡದೆ, ಪಿತೃತರ್ಪಣವನ್ನು ಮಾಡದೇ…. ಇತ್ಯಾದಿ ಇತ್ಯಾದಿ.
ಈ ಆಕ್ಸಿಡೆಂಟುಗಳನ್ನು ನಾವು ಮಾಡಿಕೊಂಡ ಮೇಲೆ, ನರಕದಲ್ಲಿ ಯಮದೂತರು ನಮ್ಮ ಒಳಗಿನ ಜೀವನನ್ನು ೫ ಯೋಜನ ವಿಸ್ತಾರ ಇರುವ ಈ ಶಾಲ್ಮಲೀ ಮರಕ್ಕೆ ಸರಪಳಿಯಿಂದ ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಒನಕೆ, ಗದೆ, ಈಟಿಗಳಿಂದ ಚೆನ್ನಾಗಿ ಬಾರಿಸುತ್ತಾರೆ.
ಹಿಂಸೆ ತಾಳದೆ ಜೀವನು ಒರಲುವನಲ್ಲ. ತಪ್ಪಾಯ್ತು ಬಿಟ್ಟು ಬಿಡು ಎಂದು. ಆಗ ಯಮದೂತರು “ಇಂತಹ ತಪ್ಪಿಗೆ ಈ ಏಟು, ಅಂತಹ ತಪ್ಪಿಗೆ ಈ ಏಟು” ಎಂದು ಜೀವನು ಮಾಡಿದ ಕೆಟ್ಟ ಕೆಲಸವನ್ನೆಲ್ಲ ಒಂದೊಂದಾಗಿ ಹೇಳುತ್ತಾ, ನೆನಪಿಸುತ್ತಾ ಶಿಕ್ಷೆ ಕೊಡುತ್ತಾರೆ. ತಾವು ಹೀಗೆ ಶಿಕ್ಷೆ ಕೊಡುತ್ತಿರುವುದು ಹರಿಯ ಆಜ್ಞೆಯಿಂದಲೇ ಎಂದು ಹೇಳುತ್ತಾರೆ. ಹೀಗೆ ನೆನಪಿಸುವುದು ಮುಂದಿನ ಜನ್ಮದಲ್ಲಿ ಜೀವನು ಮತ್ತೆ ಮತ್ತೆ ಆ ತಪ್ಪು ಮಾಡದಿರಲಿ ಎಂದು. ಆದರೆ ನಮಗೆ ಹಿರಿಯರು ಶಾಸ್ತ್ರಗಳ ಮೂಲಕ ಸಾರಿ ಸಾರಿ ಹೇಳಿದರೂ ಸತ್ಕಾರ್ಯಗಳ ಮೇಲೆ ಒಲವು ಮೂಡದು, ತಾಮಸ ಕಾರ್ಯಗಳ ಮೇಲಿನ ಆಸಕ್ತಿ ತೊಲಗದು.
ಕೆಟ್ಟ ಕೆಲಸ ಮಾಡಿದರೆ ಏನಾಗುತ್ತದೆ ಎಂದು ಗರುಡಪುರಾಣವು ಹೇಳಿದರೆ ನಾವು ಗರುಡ ಪುರಾಣವನ್ನೇ ದೂರ ಇಡುತ್ತೇವೆಯೇ ಹೊರತು ಅದು ಹೇಳಿದ ತಿದ್ದುಪಡಿಗಳನ್ನು ತಂದುಕೊಳ್ಳುವುದಿಲ್ಲ, ಅಶುದ್ಧ ಜಾಗಗಳಿಗೆ ಹೋಗ್ತಾ ಇರ್ತೀವಿ ಅಪವಿತ್ರವಾಗುವುದು ಎಂದು ಜನಿವಾರವನ್ನೇ ತೆಗೆದು ಇಡುತ್ತೇವೆಯೇ ಹೊರತು ಹೊಲಸು ಜಾಗಗಳಿಗೆ ಹೋಗುವುದನ್ನು ಬಿಡೆವು, ನಿತ್ಯ ಮಡಿಯಿಂದ ಅನ್ನ ನಿವೇದನೆ ಮಾಡಬೇಕಾಗುವುದು ಎಂಬ ಚಿಂತೆಯಿಂದ ಸಾಲಗ್ರಾಮವನ್ನೇ ಗುಡಿಗಳಿಗೆ ಕೊಟ್ಟುಬಿಡುತ್ತೇವೆಯೇ ಹೊರತು ದಿನಕ್ಕರ್ಧ ಗಂಟೆಯ ಮಡಿಯನ್ನೂ ರೂಢಿ ಮಾಡಿಕೊಳ್ಳುವುದಿಲ್ಲ! ಪಿತೃಗಳಿಗೆ ಪಿಂಡವಿಡಲು ಸಮಯವಿಲ್ಲ. ಇಡೀ ದಿನ ಮನೆ ಸಿಂಗರಿಸಿ, ಕೇಕು ತಂದು ಕೊಯ್ದು ತಿನ್ನಲು ದೊಡ್ಡ ಪ್ಲಾನು ಮಾಡುತ್ತೇವೆ.! ಇತ್ಯಾದಿ ಇತ್ಯಾದಿ
ಶಾಲ್ಮಲೀ ಮರವು ನಮಗಾಗಿ ಕಾಯುತ್ತಿದೆ!
Be First to Comment