ಶಿಕಾರಿಪುರದ ಸಂತೆಯಲ್ಲೊಂದು (ವಿ)ಚಿತ್ರ ಶಿಕಾರಿ

ಹಳಬರು ನೆನೆನೆನೆದು ಹಳಹಳಿಪ
ನನ್ನವರು ನೆನೆದು ಮುದಗೊಳ್ಪ
ಈಗಣವರರಿಯದೆ ಕಣ್ಕಕಣ್ಬಿಡುವ
ಒಂದು ದಿನದ ವಿಸ್ಮಯನಗರಿಯಿದು ಕಾಣಾ!
ಸಂತೆ!

ಇತ್ತೀಚೆಗೆ ಶಿಕಾರಿಪುರದ ಸಂತೆಯಲ್ಲಿ ಓಡಾಡುವ ಅವಕಾಶ ಸಿಕ್ಕಿತ್ತು. ಎಳೆಯ ಸೌತೆಕಾಯಿಯು ಬೇಕಿತ್ತು ನನಗೆ. ಸೌತೆಕಾಯಿ ಎಂದರೆ ಮಹಾನಗರಗಳಲ್ಲಿ ಸಿಗುತ್ತದಲ್ಲ ಕುಂಬಳಕಾಯಿಯ ಚಿಕ್ಕಪ್ಪನ ಮಗನಂತಹದ್ದು! ಅದಲ್ಲ. ನನಗೆ ಬೇಕಾಗಿದ್ದು. ಎಳೆಯದು, ಜವಾರಿ ಸೌತೆಕಾಯಿ. ಹರಿಹರ, ರಾಣಿಬೆನ್ನೂರು ಈ ಶಿಕಾರಿಪುರದಂತಹ ನದಿಯ ಆಸುಪಾಸಿನ ಊರಿನಲ್ಲಿ ಮಾತ್ರವೇ ಉಳಿದುಕೊಂಡಿರುವಂತಹದು. ಅದು ಬೇಕಿತ್ತು. ಬೆಳಿಗ್ಗೆ ಬೇಗ ಹೋದೆ. ಸೊಗಸಾದ ಎಳೆಯ ಸೌತೆಕಾಯಿ ದೊರೆತವು. ಒಂದು ಕಿಲೋ ಸೌತೆಕಾಯಿಗೆ ಬರೀ 20 ರೂಪಾಯಿ ಮಾತ್ರ. ಸರಿ, ಸೌತೆಕಾಯಿಯೊಂದಿಗೆ ಇನ್ನಿತರ ಖರೀದಿಯೂ ಬೇಗ ಮುಗಿದು, ಸ್ವಲ್ಪ ಹೊತ್ತು ಚಿತ್ರಗಳ ಶಿಕಾರಿ ಮಾಡೋಣವೆನ್ನಿಸಿ ಒಂದು ಚಿಕ್ಕ ಪ್ರಯತ್ನವನ್ನು ಮಾಡಿದೆ.

ನೋಡುತ್ತಾ ಒಳ ಹೋದಂತೆಲ್ಲ ಕಂಡದ್ದು ಸಂತೆಯಲ್ಲ. ಒಂದು ಸುಂದರವಾದ ವಾಣಿಜ್ಯ ನಗರಿಯೇ ತೆರೆದುಕೊಳ್ಳತೊಡಗಿತು. ನಿಮಗೇನೇನು ಬೇಕೋ ಅದೆಲ್ಲವೂ ಇಲ್ಲಿ ಲಭ್ಯ! ತರಕಾರಿ, ದವಸ ಧಾನ್ಯಗಳು, ಹಣ್ಣುಗಳು, ಬಟ್ಟೆಗಳು, ಪೂಜಾ ಸಾಮಾಗ್ರಿಗಳು, ಬೀಜಗಳು, ಕೃಷಿಯ ಉಪಕರಣಗಳು, ಅಡುಗೆ ಮನೆಯ ಆಯುಧಗಳು, ಪೌಡರು, ಟೇಪು, ಕನ್ನಡಿ, ಕಾಡಿಗೆ, ಬಾಚಣಿಕೆ, ಒಂದೇ? ಎರಡೇ ?ಎಲ್ಲವೂ ಲಭ್ಯ. ಮಕ್ಕಳಿಗೆ ಆಟದ ಸೌಕರ್ಯವೂ ಇಲ್ಲಿತ್ತು. ತಿರುಗಾಡಿ ಸುಸ್ತಾಯಿತೋ ಜೂಸಂಗಡಿಗಳೂ ಇವೆ! ತಿನ್ನಲು ಏನಾದರೂ ಬೇಕೋ? ಹೋಟೆಲುಗಳೂ ರೆಡಿ!

ಇಷ್ಟೆಲ್ಲಾ ವ್ಯವಹಾರ ನಡೆಯುವ ಈ ನಗರದ ಹಿಂದೆ ಯಾವ ಮನೆಮುರುಕರ ತಂತ್ರಗಾರಿಕೆಯೂ ಇಲ್ಲ. ಇಲ್ಲಿ ಉಸಿರಾಡುವ ಯಾವ ಜೀವಿಯೂ ಆಧುನಿಕ ಎಂಬಿಯೇ ಮತ್ತಿತರ ಹಣಮಾಡುವ ಡಿಗ್ರಿಯನ್ನು ಪಡೆದಿಲ್ಲ. ಯಾವ ಗಂಡಸೂ ಟೈ ಹಾಕಿಕೊಂಡಿಲ್ಲ, ಯಾವ ಹುಡುಗಿಯೂ ಲೋಗೋ ಇರುವ, ಮೈ ಬಿಗಿವ ಬಟ್ಟೆಯನ್ನು ಧರಿಸಿಲ್ಲ! ಯಾರ ಮುಖವೂ ಅಸಹಜವಾದ ಪೌಡರು, ತುಟಿರಂಗುಗಳನ್ನು ಬಳಿದುಕೊಂಡಿಲ್ಲ! ಯಾರ ಮುಖವನ್ನು ನೋಡಿದರೂ ಅದು ಕಷ್ಟವನ್ನು ಎತ್ತಿ ತೋರಿಸುವ ಬೆವರಿನಿಂದಲೇ ಕೂಡಿದೆ! ವಿನಯಭರಿತವಾಗಿಯೇ ಗಂಟಲಿಗೆ ಗಾಳ ಹಾಕುವ ಸೃಗಾಲ ನೀತಿಗೆ ಇಲ್ಲಿ ತಾವಿಲ್ಲ! ಇಲ್ಲಿರುವುದು ಏನಿದ್ದರೂ ಏರುಧ್ವನಿಯ, ಜೋರು ಮಾತಿನ ಪ್ರಾಮಾಣಿಕತೆ ಮಾತ್ರ. ಬೇಕಿದ್ದರೆ ತೊಗೋ ಇಲ್ಲದಿದ್ದರೆ ಇಲ್ಲ ಎನ್ನುವ ನೇರವಂತಿಕೆ ಮಾತ್ರ. ಒಂದಕ್ಕೆ ಒಂದು ಫ್ರೀ ಎಂಬ ನೆಪದಲ್ಲಿ ಮೂಲಬೆಲೆಗಿಂತ ಅಧಿಕ ಬೆಲೆಯ ಸುಲಿಗೆಯೂ ಇಲ್ಲಿಲ್ಲ! ಆದರೆ ಇವರೆಲ್ಲ ಇಲ್ಲಿ ಸೇರಿ ದಿನವೊಂದರಲ್ಲಿ ನಡೆಸುವ ಹಣಕಾಸಿನ ವಹಿವಾಟು ೫೦ ಲಕ್ಷ ರೂಪಾಯಿಗೂ ಹೆಚ್ಚು! ಅಜ್ಜಮ್ಮನೊಬ್ಬಳು ಮನೆಯಲ್ಲಿ ವಿವಿಧ ಧಾನ್ಯಗಳನ್ನೇ ಮೊಳಕೆ ಬರಿಸಿಕೊಂಡು ತಂದು ಅವುಗಳನ್ನು ಸೇರಿಗೆ ೧೦೦ ರೂಪಾಯಿಯಂತೆ ಮಾರಿ ಹಣ ಮಾಡಿಕೊಂಡು ಅರ್ಧಗಂಟೆಯಲ್ಲೇ ಹೊರಟು ಹೋದಳೆಂದರೆ ಯೋಚಿಸಿ ಹೇಗಿರಬಹುದು ಯಾಪಾರ ಎಂದು. ಈ ಅಜ್ಜಿಯೇನಾದರೂ ಮಹಾನಗರದ ಜಿಮ್ಮುಗಳ ಮುಂದೆಯೋ ಅಥವಾ ತೂಕ ಇಳಿಸುವ ಕೇಂದ್ರಗಳ ಮುಂದೆಯೋ ಅಂಗಡಿ ಇಟ್ಟರೆ ವರ್ಷವೊಂದರಲ್ಲಿ ಮಹಡಿ ಮನೆ ಕಟ್ಟಬಲ್ಲಳು ಎನ್ನಿಸಿತು!

ದಾರಿಯಲ್ಲಿ ನಮ್ಮ ಅಮ್ಮ ಬಯ್ತಾ ಇದ್ದಿದ್ದು ನೆನಪು ಆಯ್ತು. “ಇದೇನs ಮನೀ ಪೂರಾ ರಂದಿ ಮಾಡಿ ಕೂತೀ, ಸಂತೀಗತೆ ಆಗೇದಲ್ಲs?” ಎಂದು. ಒಪ್ಪ ಓರಣವಿಲ್ಲದ ಮನೆಯನ್ನು, ಕಸದ ರಾಶಿಯನ್ನು ಸಂತೆಗೇಕೆ ಹೋಲಿಸುತ್ತಿದ್ದರೋ ಹಿರಿಯರು? ನನಗೆ ಈಗ ಅದು ಅರ್ಥವಾಗದ ತರ್ಕ. ಯಾಕೆಂದರೆ ವಾಸ್ತವವಾಗಿ ಸಂತೆಯು ಒಂದು ಅತ್ಯಂತ ಸುವ್ಯವಸ್ಥಿತವಾದ ಆರ್ಥಿಕ ಸಂಘಟನೆ. ಮೇಲ್ನೋಟಕ್ಕೆ ಅದು ಗಲಿಬಿಲಿಯಂತೆ ಕಾಣುತ್ತದೆ ಅಷ್ಟೇ. ಸಂತೆಯನ್ನು ನೋಡಿದ ಯಾವುದೇ ಅರ್ಥ ತಜ್ಞನು ಅಥವಾ ಮಾರುಕಟ್ಟ ತಜ್ಞನು ಸಂತೆಯ ಶಿಸ್ತನ್ನು, ಅದು ತಾನೇ ತಾನಾಗಿ ಒಪ್ಪಗೊಳ್ಳುವ, ಯಾರೂ ಹೇಳದೆ ಬರ್ಖಾಸ್ತಾಗುವ ಪರಿಯನ್ನು ಮತ್ತು ಸಂತೆಯ ಮಾರನೆಯ ದಿನ ಆ ಜಾಗೆ ಸ್ವಚ್ಛಗೊಳ್ಳುವ ವ್ಯವಸ್ಥೆಯನ್ನು ನೋಡಿದರೆ ಆಶ್ಚರ್ಯ ಪಡದೆ ಇರಲಾರ!

ಮುಂದೆ ಹೋಗುತ್ತಾ ಇರುವಾಗ ಈಗಿನ ತಲೆಮಾರು ಕಳೆದು ಕೊಂಡ ಒಂದು ವ್ಯವಸ್ಥಿತವಾದ ಸಾಮಾಜಿಕ ಆನಂದವು ಎಂತಹುದು!? ನಗರಗಳಲ್ಲಿ ಇರುವ ದೊಡ್ಡ ಮಾಲುಗಳಲ್ಲಿ ಕೂಡ ಒಂದೇ ಜಾಗೆಯಲ್ಲಿ ಎಲ್ಲವೂ ಸಿಗುವುದು ಎನ್ನುವಾಗ ಅದರ ವ್ಯವಹಾರ ಇದಕ್ಕಿಂತ ಹೇಗೆ ಭಿನ್ನ? ಎನ್ನುವ ಒಂದು ಜಿಜ್ಞಾಸೆ ತಲೆಯಲ್ಲಿ ಮೂಡಿತು. ಅದಕ್ಕೆ ಉತ್ತರ ಸಂಜೆ ಸಿಕ್ಕಿತು.

ಮಠಕ್ಕೆ ಬಂದು ಊಟ ಮುಗಿಸಿ, ಹೋಮಕ್ಕೆ ಬೇಕಾದ ಕೆಲವಸ್ತುಗಳಿಗಾಗಿ ಮತ್ತೊಮ್ಮೆ ಸಂತೆಗೆ ಹೋದೆ. ಸಂಜೆ ಸುಮಾರು ೪ ಗಂಟೆ ಆಗ. ಸಂತೆಯ ಕಾವು ಇಳಿದು, ಕಡಿಮೆ ದರದ ಮಾಲುಗಳ ವ್ಯಾಪಾರ ನಡೆದಿತ್ತು. ತರಹೇವಾರಿ ಅಡಿಕೆಗಳನ್ನು ಇಟ್ಟುಕೊಂಡಿದ್ದ ವ್ಯಾಪಾರಿ ಬಳಿ ಹೋಗಿ ಬೆಲೆ ಕೇಳಿದೆ. ಯಾವುದನ್ನು ಕೇಳಿದರೂ ಅವನು ನೂರು ಗ್ರಾಮಿಗೆ ಎಷ್ಟಾಗುತ್ತದೆ ಎಂದೇ ಹೇಳಿದ. ಇದೊಂದು ಸಂತೆಯ ತಂತ್ರಗಾರಿಗೆ. ಪದಾರ್ಥದ ಆವಕದರ ಹೆಚ್ಚಿದ್ದಾಗ ಜನ ದಿಗಿಲುಗೊಳ್ಳದಂತೆ ಬೆಲೆಯನ್ನು ವಿಭಾಗಿಸಿ ಅದರ ನಿರಪಾಯಕಾರಿಯಾದ ಬೆಲೆಯನ್ನು ಹೇಳುತ್ತಾರೆ. ಉದಾ: ಬೀನ್ಸಿನ ದರ ಒಂದು ಕೆ.ಜಿಗೆ ೮೦ ರೂಪಾಯಿ ಎಂದುಕೊಳ್ಳುವಾ. ಆಗ ಗ್ರಾಹಕನಿಗೆ ಇದು ಹೆಚ್ಚಿನ ಬೆಲೆಯಾಗಿ ತೋರುತ್ತದೆ. ಆದರೆ ವ್ಯಾಪಾರಿಯು ಬೆಲೆಯನ್ನು ವಿಚಾರಿಸಿದಾಗ ೮೦ರುಪಾಯಿ ಎಂದು ಹೇಳದೆ “ಕಾಲು ಕಿಲೋ ೨೦ರೂಪಾಯಿ” ಎಂದು ಹೇಳುತ್ತಾನೆ. ಆಗ ಗ್ರಾಹಕನ ಮನಸ್ಸು ಒದ್ದಾಡದು! ಖರೀದಿ ಮಾಡುವುದು ಅಥವಾ ಬಿಡುವುದು ಬೇರೆ ವಿಚಾರ. ಆದರೆ ಚೌಕಾಸಿ ಮಾಡುತ್ತಾ ಗ್ರಾಹಕ ನಿಂತು, ಮಾರಾಟಗಾರನ ಸಮಯ ವ್ಯರ್ಥವಾಗದು! ಈ ವಿಚಿತ್ರವಾದ ಕಾಲುಕೇಜಿ ಸೈಕಾಲಜಿಯೇ ಅಡಿಕೆ ಏಲಕ್ಕಿಯಂತಹ ವಸ್ತುಗಳ ವಿಷಯದಲ್ಲಿ ನೂರುಗ್ರಾಂ ವ್ಯವಹಾರವಾಗಿ ಬದಲಾಗುತ್ತದೆ. ಬಂಗಾರದ ವಿಷಯದಲ್ಲಿ ತೊಲ ಲೆಕ್ಕವಿರುವಂತೆ.

ಅಡಿಕೆ ವ್ಯಾಪಾರಿ “ನೂರು ಗ್ರಾಮಿಗೆ 48 ರೂಪಾಯಿ” ಎಂದು ಚೂರು ಅಡಿಕೆಯನ್ನು ತೋರಿಸಿದ. “ಅದನ್ನೇ ಕೊಡು” ಎಂದೆ. 250 ಗ್ರಾಮಿನಷ್ಟು ಅಡಿಕೆಯನ್ನು ಖರೀದಿಸಿದೆ. ಆತ ಆಡುತ್ತಿದ್ದುದು ಚನ್ನಗಿರಿಯ ಕಡೆಯ ಕನ್ನಡ. ಸೊಗಸಾಗಿತ್ತು. “ಯಾವ ಉದ್ದೇಶಕ್ಕೆ ಇದು” ಎಂದು ಕೇಳಿದ. ಇದು ಹೋಮವಾದ ನಂತರ ವೈದಿಕರಿಗೆ ಕೊಡುವುದಕ್ಕೆ ಎಂದು ನಾನು ಖರೀದಿಸಿದ್ದು. ಆದರೆ “ಹೋಮಕ್ಕೆ” ಎಂದಷ್ಟೇ ಉತ್ತರಿಸಿದೆ. “ಹೌದಾ? ಹೋಮಕ್ಕಾದರೆ ನೀವು ಇದನ್ನು ತೊಗೊಳ್ಳಿ” ಎಂದು ಬಟ್ಟಲಡಿಕೆಯನ್ನು ಆತ ತೋರಿಸಿದ. ಬೇಡಪ್ಪ ಇದೇ ಇರಲಿ ಎಂದು, ಹಣ ಕೊಟ್ಟು ನಾನು ಮುಂದೆ ಹೊರಟೆ. 20 ರೂಪಾಯಿ ಕೊಟ್ಟು 100 ವೀಳ್ಯದೆಲೆಯನ್ನು ಖರೀದಿಸಿ ಸಂತೆಯನ್ನು ಇನ್ನೇನು ದಾಟುವುದರಲ್ಲಿದ್ದೆ. ಆ ಅಡಿಕೆ ವ್ಯಾಪಾರಿ ಓಡಿ ಬಂದು ನನ್ನನ್ನು ನಿಲ್ಲಿಸಿದ. “ಅಯ್ಯಾ, ನೀವು ಪೂಜೆಗೆಂದು ಒಯ್ಯುತ್ತಿರುವ ಅಡಿಕೆಯಲ್ಲಿ ಬಣ್ಣ ಹಾಕಿರ್ತಾರೆ, ಅದು ಬೇಡ. ದಯಮಾಡಿ ಇದನ್ನು ತೆಗೆದುಕೊಳ್ಳಿ. ಬೆಲೆ ಚೂರು ಜಾಸ್ತಿ, ಆದರೆ ನೀವು ಅದನ್ನು ಕೊಡುವುದು ಬೇಕಿಲ್ಲ, ನನ್ ಮನ್ಸು ತಡೀಲಿಲ್ಲ, ಅದಕ್ಕೆ ನಾನೇ ಓಡಿ ಬಂದೆ. ಹನುಮಂತನ ಹೋಮ ಅಂತೀರಿ, ಒಳ್ಳೆಯದನ್ನೇ ಸಮರ್ಪಿಸಿರಿ” ಎಂದು ಹೇಳಿ ಬೇರೆ ಅಡಿಕೆಯ ಪೊಟ್ಟಣ ಕೊಟ್ಟ. “ನಮಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿ” ಎಂದು ಹೋದ. ಮತ್ತೊಮ್ಮೆ ವಾಪಸ್ಸು ಬಂದು “ಬಸವಣ್ಯೆಪ್ಪ ಮತ್ತು ಕರಿಬಸಮ್ಮ ಎನ್ನುವ ಹೆಸರಲ್ಲಿ ಪ್ರಾರ್ಥಿಸಿ” ಎಂದು ನೆನಪಿಸಿದ.

ಆಹಾ! ಇಲ್ಲಿದೆ ಉತ್ತರ! ಈ ನೈತಿಕತೆ ಎನ್ನುವ ಒಂದು ಅಗೋಚರವಾದ ಆದರೆ ಬಲಿಷ್ಠವಾಗಿರುವ ಪರದೆಯೇ ಆಧುನಿಕ ದೈತ್ಯ ಕಂಪನಿಗಳಿಗೂ ಮತ್ತು ಸಂತೆಗೂ ಮಧ್ಯ ಇರುವ ವ್ಯತ್ಯಾಸ.

ವಡಿ ಮಗ ವಡಿ ಮಗ ಬಿಡಬ್ಯಾಡ ಅವ್ನಾ!

ಸಂತೆಯಲ್ಲಿ ಯಾರೋ ಒಬ್ಬ ಬಂದು ನನಗೆ ನಮಸ್ಕರಿಸಿ ಪದಾರ್ಥವನ್ನು ಬದಲಾಯಿಸಿಕೊಟ್ಟ ಎನ್ನುವುದಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ. ಸಂತೆಯಲ್ಲಿ ನನಗೆ ಈ ವಿಷಯದಲ್ಲಿ ಹಲವಾರು ಅನುಭವಗಳೇ ಆದವು. ಯಾರೋ ಒಬ್ಬ ದೇವರ ಸಾಮಾನು ಎಂದು ನನ್ನ ಗೋಣೀಚೀಲದಷ್ಟು ಪದಾರ್ಥವನ್ನು ತನ್ನ ಅಂಗಡಿಯಲ್ಲಿ ಇರಿಸಲು ಜಾಗ ಕೊಟ್ಟ, ಇನ್ನೊಬ್ಬ ಅಜ್ಜಿ ಎರಡು ಹಿಡಿ ಮೆಣಸಿನಕಾಯನ್ನು ಹೆಚ್ಚುವರಿಯಾಗಿ ಕೊಟ್ಟರೆ, ನಿಂಬೆಹಣ್ಣು ಮಾರುವ ಸಾಬರೋನು ಎದ್ದು ಹೋಗಿ ಇನ್ನೊಂದು ಅಂಗಡಿಯಿಂದ ನಾಲ್ಕು ಊದಿನಕಡ್ಡಿ ತಂದು ಸಮರ್ಪಿಸಿದ. ಅಡಿಕೆಯವನ ಬಳಿ ಬಿಟ್ಟರೆ “ಇದೆಲ್ಲ ದೇವಸ್ಥಾನಕ್ಕೆ ಎಂದು” ನಾನು ಎಲ್ಲಿಯೂ ಹೇಳಲಿಲ್ಲ. ಎಲ್ಲಿ ಹೋದರೂ ದೈವ ಭಕ್ತಿ ಎನ್ನುವುದು ಗೆಲ್ಲುತ್ತದೆ ಎಂಬ ವಿಷಯ ಅನುಭವಕ್ಕೆ ಬಂದೇ ಬಂದಿತು. ಈ ವಿಷಯದಲ್ಲಿ ನನ್ನ ಹಣೆಯ ಅಕ್ಷತೆ ಅಂಗಾರವೇ ಟೋಕನ್ನಿನಂತೆ ಕೆಲಸ ಮಾಡಿತೆನ್ನಿಸುತ್ತದೆ.

ಆಧುನಿಕ ವ್ಯಾಪಾರೀ ತಂತ್ರಗಾರಿಕೆಯಲ್ಲಿ ಜನರನ್ನು ಪದೇ ಪದೇ ತಮ್ಮ ಅಂಗಡಿಗೆ ಬಂದು ಸಾಮಾನು ಖರೀದಿಸುತ್ತಲೇ ಇರುವಂತಹ ಅನೇಕ ಪ್ರಲೋಭನೆಗಳನ್ನು, ಆಮಿಶಗಳನ್ನು ಒಡ್ಡುತ್ತಾರಲ್ಲ, ಈ ಆಮಿಷಗಳಲ್ಲಿ ಬಹುತೇಕವು ನಮಗೆ ಅನಗತ್ಯವಾದವುಗಳೇ ಆಗಿರುತ್ತವೆ. ಇತ್ತೀಚೆಗೆ ಬಹಳಜನರು ಖರೀದಿಸುವುದು ಕೇವಲ ಪ್ರತಿಷ್ಠೆಗಾಗಿಯೇ! ಈ ರೀತಿಯಾದ ತಾಮಸಿಕ ಪ್ರತಿಷ್ಠೆಗೆ ಆಧುನಿಕ ವ್ಯವಸ್ಥೆಯು ಇಂಧನವನ್ನು ಪೂರೈಸುತ್ತಲೇ ಹೋಗುತ್ತದೆ. ಮನೀ ಬ್ಯಾಕ್, ಕ್ಯಾಶ್ ಬಾಕ್, ಫ್ಯುಚರ್ ಕ್ಯಾಶ್ ಇವೆಲ್ಲವುಗಳೂ ನಮ್ಮನ್ನು ಸೆಳೆವ ಮಳೆಹುಳಗಳೇ! ಬೇರೇನೂ ಅಲ್ಲ. ಹೆಚ್ಚು ಖರೀದಿಸಿದಷ್ಟೂ ಹೆಚ್ಚು ಮನಿ ಬ್ಯಾಕ್ ಎನ್ನುವ ಈ ವರ್ತುಲದಲ್ಲಿ ನಮ್ಮನ್ನು ಸಿಲುಕಿಸುವುದು ಅನೈತಿಕವಲ್ಲವೇ? ಸಿಲುಕಿಕೊಳ್ಳುವ ನಾವು ಮೂರ್ಖರಲ್ಲವೇ? ವಾರದ ಸಾಂಪ್ರದಾಯಿಯ ಸಂತೆಯಲ್ಲಿ ನೈತಿಕತೆಯು ಇನ್ನೂ ಉಳಿದುಕೊಂಡಿದೆ ಎನ್ನಲು ನನಗೆ ಮೇಲೆ ಆದ ಅನುಭವಗಳೇ ಸಾಕ್ಷಿ.

“ಇದೆಲ್ಲ ಗೊಡ್ಡು ಆದರ್ಶ ಬೇಡ, ಸಂತೆಯಾದರೇನು? ಬಿಗ್ ಬಾಜಾರಾದರೇನು? ಸ್ಪಾರಾದರೇನು? ಮೋರಿಗೆ ಹೋಗಿ ಸಾಮಾನು ತಂದರೇನು? ನಮಗೆ ಹಣ ಉಳಿತಾಯವಾದರೆ ಸಾಕು” ಎಂಬುದು ನಿಮ್ಮ ವಾದವಾದರೆ ಮತ್ತೊಮ್ಮೆ ಯೋಚಿಸಿ ನೋಡಿ. ಮಾಡಿದ್ದು ಉಳಿತಾಯವೋ ಉಳಿತಾಯದ ಹೆಸರಿನಲ್ಲಿ ನಾಮವನ್ನು ಹಾಕಿಸಿಕೊಂಡಿದ್ದೀವೋ ಎಂದು. ಹೀಗೆ ಕೆಲವೇ ಕೆಲವು ಸಂಸ್ಥೆಗಳಲ್ಲಿ ಸಮಾಜದ ಅರ್ಥವು ಕೇಂದ್ರೀಕೃತವಾದರೆ ಸಾಮಾಜಿಕವಾಗಿ ಅದೊಂದು ನಷ್ಟವಲ್ಲವೇ? ಅರ್ಥ( ಹಣ) ಎನ್ನುವುದಕ್ಕೆ ನಿರಂತರವಾದ ಚಲನಶೀಲತೆಯಿರಬೇಕು. ಆಗಲೇ ಅದಕ್ಕೆ ಕರೆನ್ಸಿ (ಕರೆನ್ಸಿ ಎನ್ನುವ ಶಬ್ದದಲ್ಲೇ ಇದೆಯಲ್ಲ ಕರೆಂಟ್ = ಪ್ರವಾಹ, ಚಲನೆ ಎನ್ನುವ ಅರ್ಥ) ಎನ್ನಬಹುದು. ಹೀಗಾಗದೆ ಒಂದೇ ಕಡೆ ಅರ್ಥ ಸಂಗ್ರಹವಾಗುತ್ತಾ ಹೋದಾಗ ಅನರ್ಥ (ಅನರ್ಥ = ಸಂಪತ್ತು ಇಲ್ಲದಿರುವಿಕೆ) ಉಂಟಾಗುತ್ತದೆ. ಅಲ್ಲವೇ.

ಬರೀ ಮನೀಬ್ಯಾಕ್ ಕ್ಯಾಶ್ ಬ್ಯಾಕ್ ಎನ್ನುವ ಅಸಾಧುವಾದ ಅನೈತಿಕವಾದ ವ್ಯಾಪಾರವೇ ಮೇಲುಗೈ ಸಾಧಿಸಲು ನಾವು ಅವಕಾಶ ಮಾಡಿಕೊಟ್ಟರೆ ನಿಧಾನವಾಗಿ ಸಮಾಜದ ಖರೀದಿಮಾಡುವ ಸಾಮರ್ಥ್ಯವೇ ಕುಸಿಯತೊಡಗುತ್ತದೆ. ಹೀಗಾದಾಗಲೆಲ್ಲ ಪರಿತಪಿಸುವರು ನಾವು ಜನಸಾಮಾನ್ಯರೇ ಹೊರತು ನಮ್ಮಿಂದ ಅರ್ಥವನ್ನು ಪಡೆದ ಕಂಪನೆಯ ತಿಮಿಂಗಿಲಗಳಲ್ಲ. ಅವರು ಓಡಿಹೋದಾಗ ಅವರಿಗೆ ಲಂಡನ್ನು ದುಬೈಗಳಿವೆ, ನೆರಳಿಗೆ. ಆದರೆ ನಾವೆಲ್ಲಿ ಹೋಗುವುದು? ಆಫ್ರಿಕೆ, ಸಿರಿಯಾ ದೇಶದ ಜನರಂತೆ ಕಳ್ಳಹಡಗೇರಿ ಯುರೋಪಿಗೆ ಹೋಗಲಾಗದು ನಮಗೆ. ಯಾಕೆಂದರೆ ನಮ್ಮ ಅಕ್ಕಪಕ್ಕವಿರುವ ದೇಶಗಳಲ್ಲಿ ಒಂದೋ ನಮ್ಮದೇಶಕ್ಕೇ ಕಳ್ಳಮಾರ್ಗದಲ್ಲಿ ನುಸುಳುವ ಜನರಿದ್ದಾರೆ, ಅಥವಾ ನಮ್ಮ ಪಕ್ಕದಲ್ಲಿರುವುದು ನಮ್ಮ ಶತ್ರುರಾಷ್ಟ್ರಗಳು! ಎಲ್ಲೆಂದು ಹೋಗುವುದು? ಇದೆಲ್ಲ ಒದ್ದಾಟಕಿಂತ ಧರ್ಮಮಾರ್ಗದಲ್ಲಿ ಇರುವುದೇ ಒಳ್ಳೆಯ ಉಪಾಯವೆನಿಸುತ್ತದೆ. ಆಚಾರ್ಯ ಕೌಟಿಲ್ಯರ ಅರ್ಥಶಾಸ್ತ್ರ ನಮಗೆ ದಾರಿದೀಪವಾಗಬಲ್ಲದು. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?

ಸುಧಾರಾಣಿ ಮತ್ತು ಸೋಮಶೇಖರ ಅವರ ಅಭಿನಯದ ಒಂದು ಸಿನೆಮಾ ಟಿ.ವಿಯಲ್ಲಿ ಬಂದಿತ್ತು, ಅರ್ಧಮರ್ಧ ನೋಡಿದ್ದೆ. ಆಧುನಿಕ ವಾಣಿಜ್ಯ ದೈತ್ಯರು ಪ್ರಪಂಚವನ್ನೆಲ್ಲ ಆವರಿಸಿಕೊಂಡು, ಚಿಕ್ಕ ಪುಟ್ಟ ಶೆಟ್ಟರ ಅಂಗಡಿಗಳೆಲ್ಲ ಹೇಗೆ ಮುಚ್ಚಿ ಹೋಗಿವೆ ಅನ್ನುವುದು ಆ ಸಿನೆಮಾದ ವಸ್ತು. ಆದರೆ ಕನ್ನಡದಲ್ಲಿ ಆ ರೀತಿಯ ಚಿತ್ರಗಳಿಗೆಲ್ಲ ಸೋಲೆನ್ನುವುದು ಕಟ್ಟಿಟ್ಟ ಬುತ್ತಿ. ಇದು ಒಂದು ವಿಪರ್ಯಾಸ.

ಕಡೆಯದಾಗಿ ಹೇಳಲೇಬೇಕಾದ ಮಾತು. ಹೊಸದೆಲ್ಲವೂ ತಪ್ಪು ಹಳೆಯದೆಲ್ಲವೂ ಸರಿ ಎನ್ನುವ ಹುಂಬವಾದ ನನ್ನದಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನೈತಿಕತೆ ದೂರವಾಗಬಾರದು ಎಂಬುವುದು ನನ್ನ ಹಂಬಲವಷ್ಟೇ. ಎಲ್ಲ ಕಡೆಗಳಲ್ಲಿರುವಂತೆ ಸಂತೆಯಲ್ಲಿಯೂ ಇತ್ತೀಚೆಗೆ ಮೋಸ ಮಾಡುವವರ ಸಂಖ್ಯೆ ಮೂಡುತ್ತಿದೆ. ಸರಿಯಾದ ಕ್ರಮಗಳನ್ನು ಕೈಗೊಂಡು ಇದನ್ನು ನಿಯಂತ್ರಿಸಿದರೆ ಸಂತೆಯಂತಹ ಒಂದು ಅದ್ಭುತ ವ್ಯವಸ್ಥೆಯು ನಮ್ಮ ಆರ್ಥಿಕತೆಗೆ ಬೆಂಬಲವಾಗಬಲ್ಲದು.

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.