ಬದರೀಯಾತ್ರೆ ಮಾಡುವವರಿಗೆ ಒಂದಿಷ್ಟು ಉಪಯುಕ್ತಮಾಹಿತಿ – ಆಪತ್ಕಾಲಕ್ಕಾಗಿ

ಇಂದು ಮಧ್ಯಾಹ್ನ ಎ.ಎನ್.ಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಒಂದು ಸುದ್ದಿಯನ್ನು ಉಲಿದಿದೆ. ​ಅಧಿಕೃತ ವರದಿಗಳ ಪ್ರಕಾರ ಡೆಹ್ರಾಡೂನ್, ಟೆಹ್ರಿ, ಪೌಡಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಸುರಿಯುವ ನಿರೀಕ್ಷೆ ಇದೆ. ಎಂದು.

ಈ ಸುದ್ದಿಯಲ್ಲಿ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳ ಬಗ್ಗೆ ಇದರಲ್ಲಿ ಉಲ್ಲೇಖವಿಲ್ಲದೇ ಹೋದರೂ ಆ ಪ್ರಾಂತ್ಯಗಳಲ್ಲಿ ಕೂಡ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇಲ್ಲದಿಲ್ಲ. ಕೇದಾರನಾಥ ಮತ್ತು ಬದರೀನಾಥಗಳು ಈ ಜಿಲ್ಲೆಗಳಲ್ಲಿಯೇ ಇವೆ. ಇವೆರಡೂ ಕ್ಷೇತ್ರಗಳು ಪೌಡಿ ಮತ್ತು ಟೆಹ್ರಿಗಳಿಗೆ ಮೇಲಿನ ಭಾಗದಲ್ಲಿ ಇರುವುದರಿಂದ ಯಾತ್ರಿಕರಿಗೆ ಅಡಚಣೆಯಾಗಬಹುದು. ಹೀಗಾಗಿ ​ಬದರಿ, ಕೇದಾರ ಗಂಗೋತ್ರಿ ಅಥವಾ ಯಮುನೋತ್ರಿಗೆ ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ಯಾತ್ರೆ ಮಾಡುತ್ತಿರುವ ಜನರು ಸಧ್ಯಕ್ಕೆ ಹೆಚ್ಚಿನ ಜಾಗ್ರತೆಯನ್ನು ವಹಿಸುವುದು ಉತ್ತಮ. ಸ್ಥಳೀಯರೊಂದಿಗೆ ಚರ್ಚಿಸದೆ, ಹವಾಮಾನದ ಬಗ್ಗೆ ತಿಳಿಯದೆ ಹರಿದ್ವಾರದಿಂದ ಮುಂದುವರೆಯದಿರಿ.

ಈಗ ಅಲ್ಲಿ ಮಳೆ ಬಂದರೂ ಕೂಡ, ಯಾತ್ರಿಕರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸೋಣ. ಇಂತಹ ನೈಸರ್ಗಿಕ ಆಕಸ್ಮಿಕಗಳ ಸಂದರ್ಭಗಳಲ್ಲಿ ಯಾತ್ರಿಕರು ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ಕೊಟ್ಟಿದೆ. ಯಾತ್ರೆಯ ಇಚ್ಛೆಯುಳ್ಳವರು ಇದನ್ನು ಓದಿಕೊಳ್ಳುವುದು ಉತ್ತಮ.

ಮೇಘಸ್ಫೋಟ. ಏನಿದು?

ಮೇಘ ಸ್ಫೋಟ (cloud burst) ಎಂದಮಾತ್ರಕ್ಕೆ ಅದು ಢಮಾರ್ ಎಂದು ಬಾಂಬಿನಂತೆ ಸಿಡಿಯುವುದು ಎಂದರ್ಥವಲ್ಲ. ಇಲ್ಲಿ ನಡೆವುದೇನಿದ್ದರೂ ಅಪಾರ ಪ್ರಮಾಣದ ನೀರು, ಅಗಾಧವಾದ ವಿದ್ಯುತ್ತು ಮತ್ತು ಗಾಳಿಯ ಅಲೆಗಳ ವ್ಯಾಪಾರ.

ಮೋಡವು ನೀರಿನ ಕಣಗಳಿಂದ ಕೂಡಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಕಣಗಳ ಸಾಂದ್ರತೆ ಹೆಚ್ಚು ಆದಾಗ ಮೋಡದ ತೂಕ ಹೆಚ್ಚುತ್ತದೆ. ಆ ತೂಕವು ಮೋಡದ ಸಾಮರ್ಥ್ಯವನ್ನು ಮೀರಿದಾಗ ನೀರಿನ ಕಣಗಳು ಕೆಳಗೆ ಬೀಳುತ್ತವೆ. ಇದುವೆ ಮಳೆ. ಅಲ್ಲವೆ. ಇದು ನಿಧಾನವಾಗಿ ನಡೆವ ಒಂದು ಪ್ರಕ್ರಿಯೆ.

ಆದರೆ, ಕೆಲವು ಸಲ ಮೋಡದಲ್ಲಿರುವ ಧಾರಣಾ ಶಕ್ತಿಯು ಒಮ್ಮೆಲೆಗೆ ನಶಿಸಿದಾಗ ಅದರಲ್ಲಿರುವ ಲಕ್ಷಾಂತರ ಗ್ಯಾಲನ್ ನೀರು ಒಂದೇ ಸ್ಥಳದಲ್ಲಿ ಬೀಳುತ್ತದೆ. ಈ ನೀರು ನಾವು ಸಾಮಾನ್ಯವಾಗಿ ನೋಡುವ ಹನಿಗಳಂತೆ ಇರದೆ, ಅತಿ ಹೆಚ್ಚಿನ ಪ್ರಮಾಣದ ನೀರು ಚಲ್ಲಿದಂತೆ ಇರುತ್ತದೆ. ಇದುವೆ ಮೇಘಸ್ಫೋಟ. (ನೀರನ್ನು ಲೋಟದಿಂದ ತುಂತುರಾಗಿ ಎರಚಿದರೆ ಮಳೆ, ಗಡಿಗೆಯು ಬಿದ್ದು ಒಡೆದಾಗ ಹೊರಬರುವ ನೀರು ಮೇಘಸ್ಫೋಟ ಎಂದು ಕಲ್ಪಿಸಿಕೊಳ್ಳಿ. ಸುಲಭವಾಗಿ ಅರ್ಥವಾಗುತ್ತದೆ.) ಎಲ್ಲರಿಗೂ ತಿಳಿದಂತೆ ಮೋಡಗಳ ಮೇಲ್ಭಾಗ ಮತ್ತು ಕೆಳಭಾಗಗಳು ವಿದ್ಯುತ್ತಿನಿಂದ ಕೂಡಿರುತ್ತವೆ. ಈ ವಿದ್ಯುತ್ತು ಕೂಡ ಮೇಘಸ್ಪೋಟದ ಸಂದರ್ಭದಲ್ಲಿ ಬಿಡುಗಡೆಯಾಗುವುದರಿಂದ ಸಿಡಿಲು ಗುಡುಗುಗಳ ಆರ್ಭಟದೊಂದಿಗೆ ಮಳೆಯು ಬರುತ್ತದೆ. ಇದೇ ಸಮಯದಲ್ಲಿ ಮೇಲ್ಮುಖವಾಗಿ ಏರುವ ಗಾಳಿಯ ಅಲೆಗಳು ನೀರನ್ನು ಎತ್ತಿಕೊಂಡೇ ಏರುತ್ತವೆ. ಹೀಗಾಗಿ ಅಲ್ಲಿ ಬಾಂಬ್ ಸ್ಫೋಟದಂತಹ ಒಂದು ಸನ್ನಿವೇಶ ಕಾಣಿಸುತ್ತದೆ. ಮೋಡದಲ್ಲಿ ಸಂಚವಾದ ನೀರಿನ ಪ್ರಮಾಣದ ಮೇಲೆ ಈ ಸ್ಫೋಟದ ಅವಧಿಯು ನಿಗದಿಯಾಗುತ್ತದೆ. ಕೆಲವು ಸಲ ಈ ಮೇಘಸ್ಪೋಟದ ಸಂದರ್ಭದಲ್ಲಿ ಹೊರಬೀಳುವ ನೀರಿನ ಪ್ರಮಾಣ ಎಕರೆಗೆ 72000 ಟನ್ನಿನಷ್ಟು ಎಂದರೆ ಸ್ಫೋಟದ ತೀವ್ರತೆಯು ಎಷ್ಟಿರಬಹುದೆಂದು ಊಹಿಸಿ.

ಪ್ರವಾಹ ಅಥವಾ ಮೇಘಸ್ಪೋಟದ ಸಂದರ್ಭದಲ್ಲಿ

  • ಧೈರ್ಯಗೆಡಬಾರದು. ಸಮಚಿತ್ತದಿಂದ ಇದ್ದಲ್ಲಿ ಉಪಾಯಗಳು ತೋಚುತ್ತವೆ
  • ಮೊಬೈಲ್ ಫೋನಿನ “ಬ್ಯಾಟರಿ ಸೇವಿಂಗ್” ಸೌಲಭ್ಯವನ್ನು ಆನ್ ಮಾಡಿ, ಡಾಟಾ, ಲೊಕೇಶನ್ ಮತ್ತಿತರ ಬ್ಯಾಟರಿಯ ಜೀವ ತಿನ್ನುವ ಆಪ್ ಗಳನ್ನು ಬಂದು ಮಾಡಿಕೊಳ್ಳಬೇಕು. ಇದು ನಿಮ್ಮ ಫೋನ್ ನಿಷ್ಕ್ರಿಯಗೊಳ್ಳುವುದನ್ನು ಕನಿಷ್ಠ ೨-೩ ಗಂಟೆಗಳಿಗೆ ಮುಂದೂಡುತ್ತದೆ.
  • ನಿಮ್ಮ ಸಂಬಂಧಿಗಳಿಗೆ ಅವರು ಕಂಗೆಡದಂತೆ ನೀವು ಇರುವ ಸ್ಥಳವನ್ನು ಚುಟುಕಾಗಿ ಆದರೆ ಸ್ಪಷ್ಟವಾಗಿ ತಿಳಿಸಿರಿ. ಸಹಾಯ ಮಾಡಲು ಬರುವವರಿದ್ದಲ್ಲಿ ಅವರಿಗೆ ಇದು ಅನುಕೂಲವಾಗಬಲ್ಲದು.
  • ಅನಗತ್ಯ ಕಾಲ್ ಗಳು ಬರುತ್ತಿದ್ದಾಗ ಅವುಗಳಿಗೆ ನೀವು ಮಾತಿನ ಮೂಲಕ ರಿಪ್ಲೈ ಮಾಡದೆ, ಅವುಗಳಿಗೆ ಈ ರೀತಿಯಾದ ಒಂದು ಆಟೋ ರೆಸ್ಪಾನ್ಸ್ ಬರೆದು ಇಟ್ಟುಕೊಂಡಿರಿ. “ನಾನು …….. ಇಂತಹ ಸ್ಥಳದಲ್ಲಿ ಇಕ್ಕಟ್ಟಿನಲ್ಲಿದ್ದೇನೆ. ನೀವು ಧೃತಿಗೆಡದೆ, ನಮ್ಮ ……. ಇಂತಹ ಸಂಖ್ಯೆಗೆ ಕಾಲ್ ಮಾಡಿ”. ಬಂದ ಕರೆಗಳನ್ನು ಆ ಮೆಸೇಜ್ ಮೂಲಕ ರಿಜೆಕ್ಟ್ ಮಾಡಿ. ಅತ್ಯಗತ್ಯ ಎನಿಸಿದವುಗಳಿಗೆ ಮಾತ್ರ ಉತ್ತರಿಸಿರಿ.
  • ಇರುವ ತಿಂಡಿಯನ್ನು ಬಾಯಿ ಚಪಲಕ್ಕಾಗಿ ತಿನ್ನದೆ ಹಸಿವೆಯಾದಾಗ ಮಾತ್ರ ತಿನ್ನಿರಿ.
  • ಅಕಸ್ಮಾತ್ತಾಗಿ ನಿಮ್ಮ ಗುಂಪಿನವರೇನಾದರೂ ನೀರಲ್ಲಿ ಬಿದ್ದಾಗ ಅವರನ್ನು ಎತ್ತಲೆಂದು ನೀವು ಅವರ ಹಸ್ತವನ್ನು ಹಿಡಿಯದೆ, ಸಾಧ್ಯವಾದಷ್ಟೂ ಅವರ ಮುಂಗೈಯನ್ನೇ ನಿಮ್ಮ ಕೈಯಿಂದ ಹಿಡಿದು ಎಳೆಯಿರಿ. ಇದಕ್ಕೆ ಬಹಳ ತ್ವರಿತವಾದ ಪ್ರೆಸೆನ್ಸ್ ಆಫ್ ಮೈಂಡ್ ಬೇಕಾಗುತ್ತದೆ. ಧೃತಿಗೆಡದೆ ಇದ್ದಲ್ಲಿ ಇಂತಹ ಯೋಚನೆಗಳು ಬರುತ್ತವೆ.

ಮಳೆಯು ಹೆಚ್ಚಿನ ಪ್ರಮಾಣದಲ್ಲಿ ಸುರಿದಾಗ

  • ಬದರೀನಾಥ ಮಾರ್ಗದಲ್ಲಿ ನಗ್ರಾಸು, ಗೌಚಾರ್, ನಂದಪ್ರಯಾಗ್ ಮತ್ತು ಪೀಪಲ್ ಕೋಟಿ ಸ್ಥಳಗಳಲ್ಲಿ ತಾತ್ಕಾಲಿಕ ವಸತಿಯು ಸಿಗುತ್ತದೆ. ಈ ಊರುಗಳು ಶಿವಾಲಿಕ್ ಪರ್ವತ ಶ್ರೇಣಿಯಲ್ಲಿ ಇದ್ದುದರಲ್ಲೇ ಸುರಕ್ಷಿತ ತಾಣಗಳು. ನದೀ ಪಾತ್ರದಿಂದ ಬಹಳ ಎತ್ತರದಲ್ಲಿ ಇವೆ. ನಗ್ರಾಸು ಬಳಿ ಇರುವ ಗುರುದ್ವಾರ ಒಂದರ ವ್ಯವಸ್ಥೆಯು ಚೆನ್ನಾಗಿದೆ. ಅಲ್ಲಿನ ವ್ಯವಸ್ಥಾಪಕರ ಬಳಿ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳಬಹುದು.
  • ಕೇದಾರನಾಥ ಮಾರ್ಗದಲ್ಲಿ ಗೌರೀಕುಂಡ, ಸೀತಪುರ, ಫಾಟಾ, ಊಖಿಮಠ ಅಥವಾ ಅಗಸ್ತ್ಯಮುನಿ ಪಟ್ಟಣಗಳು ನೀರಿನ ಹರಿವಿನಿಂದ ಸ್ವಲ್ಪ ದೂರ ಇರುವ ಊರುಗಳು. ಇಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು.
  • ಯಮುನೋತ್ರಿಯ ದಾರಿಯಲ್ಲಿ ಪಾಲಿ, ಸಿಯ್ಯಾನಾ ಚಟ್ಟಿ, ಬಾರ್ಕೋಟ್ ಊರುಗಳು ಚೂರು ಕ್ಷೇಮದಾಯಕ
  • ಗಂಗೋತ್ರಿಯ ಮಾರ್ಗದಲ್ಲಿ ಜಸ್ಪುರ್, ಮಾಲ್ಲಾ, ಸುಖ್ಖೀ, ದಿಲ್ಸೌರ್ ಎನ್ನುವ ಕೆಲ ಊರುಗಳು ನೀರಿನ ಪ್ರವಾಹದಿಂದ ಸ್ವಲ್ಪ ಎತ್ತರದ ಸ್ಥಳಗಳಾಗಿವೆ.

ಈ ಕೆಲವು ಸ್ಥಳಗಳು ಅಲ್ಲದೆ, ನಿಮ್ಮ ಪರಿಚಯಸ್ಥರಿಗೆ ತಿಳಿದಿರುವ ಜಾಗಗಳು ಇದ್ದರೆ ಅಥವಾ ಸ್ಥಳೀಯರು ಹೇಳುವ ಜಾಗೆಗಳಲ್ಲಿ ಆಶ್ರಯ ಪಡೆದು ರಕ್ಷಣೆ ಹೊಂದಬಹುದು.

ನೆನಪಿಡಿ. ಯಾವುದೇ ಕ್ಷಣದಲ್ಲೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರುವುದೇ ಆಪತ್ಕಾಲದ ಮೂಲಮಂತ್ರ.

ಚಿತ್ರಕೃಪೆ : ವಿಕಿಮೀಡಿಯ

ಅಡ್ವಾನ್ಸ್ ಧನ್ಯವಾದಗಳು : ಕಾಪಿಕ್ಯಾಟುಗಳಿಗೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.