ಹಿನ್ನೆಲೆ
ಮಹಾ ಧರ್ಮಾತ್ಮನಾದ ಪರೀಕ್ಷಿತರಾಜನು ಒಮ್ಮೆ ಬೇಟೆಗೆಂದು ಹೋಗಿದ್ದ. ಆ ಸಂದರ್ಭದಲ್ಲಿ ಅವನು ಬಾಯಾರಿಕೆಯ ನಿವಾರಣೆಗಾಗಿ ಶಮೀಕ ಎನ್ನುವ ಋಷಿಗಳ ಆಶ್ರಮಕ್ಕೆ ಬಂದ. ಆ ಸಮಯದಲ್ಲಿ ಶಮೀಕ ಋಷಿಗಳು ಧ್ಯಾನಮಗ್ನರಾಗಿದ್ದರು ಹಾಗಾಗಿ ಅವರು ರಾಜನು ಬಂದದ್ದನ್ನು ಗಮನಿಸಲಿಲ್ಲ. ರಾಜನು ಅವರಿಗಾಗಿ ಕಾಯ್ದ, ಆದರೆ ಋಷಿಗಳು ಬಹಳ ಹೊತ್ತಾದರೂ ಎದ್ದೇಳಲೇ ಇಲ್ಲ. ಹತಾಶನಾದ ರಾಜ ಅಲ್ಲಿಯೇ ಸತ್ತು ಬಿದ್ದಿದ್ದ ಹಾವೊಂದನ್ನು ಅವರ ಕೊರಳಲ್ಲಿ ಹಾಕಿ ಅಲ್ಲಿಂದ ಹೊರಟು ಹೋದ.
ಆ ಸಮಯದಲ್ಲಿ ಋಷಿಗಳ ಪುಟಾಣಿ ಮಗನು ಆಟವಾಡಲೆಂದು ಹೊರಗೆ ಹೋಗಿದ್ದ. ಅವನ ಹೆಸರು ಶೃಂಗಿ. ಆಟದಿಂದ ಬಂದು ನೋಡಿದಾಗ ತಂದೆಯು ಇನ್ನೂ ಧ್ಯಾನದಲ್ಲಿಯೇ ಇದ್ದರು. ಆದರೆ ಅವರ ಕೊರಳಲ್ಲಿ ಸತ್ತು ಹೋದ ಹಾವೊಂದು ನೇತಾಡುತ್ತಿತ್ತು. ಇದನ್ನು ನೋಡಿ ಅವನಿಗೆ ಭರಿಸಲಾರದ ಕೋಪ ಬಂತು. ತಂದೆಗೆ ಅವಮಾನ ಮಾಡಿದವನು ಯಾರೋ ಅವನು ಇಂದಿನಿಂದ ಏಳು ದಿನಗಳಲ್ಲಿ ತಕ್ಷಕನಿಂದ ಕಚ್ಚಿಸಿಕೊಂಡು ಸತ್ತು ಹೋಗಲಿ ಎಂದು ಶಪಿಸಿಬಿಟ್ಟ. ತಕ್ಷಕನೆಂಬುವನು ಒಬ್ಬ ನಾಗ. ಮುಂದೆ ಸ್ವಲ್ಪ ಹೊತ್ತಿನ ನಂತರ ಶಮೀಕರಿಗೆ ಧ್ಯಾನದ ಸ್ಥಿತಿಯಿಂದ ಎಚ್ಚರವಾಯಿತು. ಅವರು ನಡೆದ ಘಟನೆಯನ್ನೆಲ್ಲ ಅರಿತುಕೊಂಡರು, ಅದಕ್ಕಾಗಿ ಮರುಗಿದರು ಕೂಡ. ಧರ್ಮಾತ್ಮನಾದ ರಾಜನು ಬಂದಾಗ ಅವನನ್ನು ಸತ್ಕರಿಸದೆ ಇದ್ದುದು ತಮ್ಮ ತಪ್ಪು, ಬಂದ ಅತಿಥಿಗೆ ಶಪಿಸಿದ್ದು ಅನಗತ್ಯವಾಗಿತ್ತು ಎಂದು ಮಗನಿಗೆ ವಿವರಿಸಿದರು. ಆದರೆ ಶಾಪವು ತನ್ನ ಕಾರ್ಯಸಾಧನೆಗೆ ಅದಾಗಾಲೇ ತೊಡಗಿತ್ತು.
ಈ ಶಾಪದ ಬಗ್ಗೆ ಪರೀಕ್ಷಿತನಿಗೆ ಸುದ್ದಿ ಮುಟ್ಟಲು ತಡವಾಗಲೇ ಇಲ್ಲ. ಅಂದಿನ ದಿನವೇ ಅವನಿಗೆ ಇದರ ಬಗ್ಗೆ ತಿಳಿಯಿತು. ಅವನು ಕೂಡ ತಾನು ಮಾಡಿಬಂದ ಕೆಟ್ಟಕೆಲಸಕ್ಕೆ ಕೊರಗಿದ. ಆದರೆ ಅಂದಿನಿಂದ ಏಳನೇ ದಿನವೇ ಬಂದೆರಗಲಿದ್ದ ಸಾವಿಗೆ ಆತನು ಭಯಪಡಲಿಲ್ಲ. ಸಾಯುವ ಮೊದಲು ಶ್ರೀಹರಿಯ ನಾಮಾಮೃತವನ್ನು ಸವಿಯಲು ಬಯಸಿದ. ಭಾಗವತಮಹಾಪುರಾಣವನ್ನು ಕೇಳುತ್ತಲೇ ದೇಹತ್ಯಾಗವನ್ನು ಮಾಡುವ ನಿಶ್ಚಯವನ್ನು ಮಾಡಿದ. ಆದರೆ ಅವನ ಮೇಲೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದ ಅವನ ಪರಿವಾರದವರು ರಾಜನನ್ನು ಸಾವಿನಿಂದ (ಕೊನೆಯ ಪಕ್ಷ ಹಾವಿನ ಕಡಿತದಿಂದ) ಕಾಪಾಡಲು ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾರಂಭಿಸಿದರು. ಗಂಗಾನದಿಯ ಪ್ರವಾಹದ ಮಧ್ಯ ಯಾರಿಂದಲೂ ಪ್ರವೇಶಿಸಲು ಅಸಾಧ್ಯವಾದ ಒಂದು ಭವನವನ್ನು ರಾಜನಿಗಾಗಿ ನಿರ್ಮಿಸಿದರು. ಅದಕ್ಕೆ ಅತ್ಯಂತ ಬಿಗಿಯಾದ ಒಂದು ಪಹರೆಯನ್ನು ಕೂಡ ಏರ್ಪಾಡು ಮಾಡಲಾಯಿತು. ಆ ಪಹರೆಯನ್ನು ಅಪ್ಪಣೆ ಇಲ್ಲದೆ ದಾಟಲು ಯಾರಿಗೂ ಸಾಧ್ಯವಿದ್ದಿಲ್ಲ. ಹಾವು ಇರಲಿ ಒಂದು ಚಿಕ್ಕ ಹುಳವೂ ಕೂಡ ಅಲ್ಲಿಗೆ ಪ್ರವೇಶಲು ಆಗದಂತಹ ವ್ಯವಸ್ಥೆ ಅದಕ್ಕೆ ಇತ್ತು. ರಾಜನು ಇದಾವುದಕ್ಕೂ ಮನಸ್ಸುಕೊಡದೆ ಭಾಗವತ ಜ್ಞಾನಯಜ್ಞದಲ್ಲಿಯೇ ಅವನ ಮನಸ್ಸು ನೆಟ್ಟು ಹೋಗಿತ್ತು.
ಅವನಿಗೆ ಇದ್ದಿದ್ದೇ 7 ದಿನಗಳ ಸಮಯ. ಅಷ್ಟರಲ್ಲಿಯೇ ಭಾಗವತವದ ರಸದೌತಣವನ್ನು ಸಂಪೂರ್ಣ ಸವಿಯಬೇಕಿತ್ತು ಅವನು. ತಕ್ಷಣವೇ ಅದರ ಸಕಲ ವ್ಯವಸ್ಥೆಗಳೂ ಆದವು. ಶ್ರೀವೇದವ್ಯಾಸ ಪ್ರೇಮದ ಪುತ್ರರಾದ ಶುಕಾಚಾರ್ಯರು ತಾವಾಗಿಯೇ ಮುಂದೆ ಬಂದು ಭಾಗವತದ ಪ್ರವಚನವನ್ನು ಮಾಡಲು ತೊಡಗಿದರು. ಮೇಲ್ನೋಟಕ್ಕೆ ಈ ಶಾಪದಿಂದ ರಾಜನಿಗೆ ವಿರಕ್ತಿ ಬಂದು ಭಾಗವತ ಕೇಳಲು ಉದ್ಯುಕ್ತನಾದ ಎಂದೆಣಿಸಬಹುದು. ಆದರ ಸೂಕ್ಷ್ಮವಾಗಿ ನೋಡಿದರೆ ಇದೆಲ್ಲವೂ ಶ್ರೀಹರಿಯ ಪೂರ್ವನಿಯೋಜಿತ ಕೃತ್ಯವೇ ಹೌದು. ಶಾಪ ಕೊಟ್ಟ ಸ್ವಲ್ಪ ಹೊತ್ತಿನಲ್ಲಿಯೇ ಅದರ ಸುದ್ದಿಯು ರಾಜನ ಶಿಬಿರಕ್ಕೆ ಮುಟ್ಟಿದ್ದು ಒಂದು ಕೌತುಕವಾದರೆ, ಶುಕಾಚಾರ್ಯರು ತಾವಾಗಿಯೇ ಬಂದು ಭಾಗವತವನ್ನು ಹೇಳಿದ್ದು ಮತ್ತೊಂದು ವಿಶೇಷ. ಇದೆಲ್ಲಕ್ಕೆ ಮೀರಿದ ಘಟನೆಯೊಂದು ಇನ್ನೂ ಇದೆ. ಈ ಭಾಗವತ ಪ್ರವಚನವನ್ನು ಕೇಳಲೆಂದೇ ಸಾವಿರಾರು ಜನ ಋಷಿಮುನಿಗಳು ಗಂಗಾ ನದಿಯ ದಂಡೆಯಲ್ಲಿ ಸಮಾವೇಶಗೊಂಡಿದ್ದರು. ರಾಜರ್ಷಿಯನ್ನು ಮುಂದಿಟ್ಟುಕೊಂಡು ಶುಕಾಚಾರ್ಯರಿಂದ ಈ ದಿವ್ಯವಾದ ಮಂಗಲಮಹೋತ್ಸವವು ನಡೆಯಲಿದೆ ಎಂಬುದು ದೈವದ ಲೆಕ್ಕದಲ್ಲಿ ಎಂದೋ ನಿಶ್ಚಿತವಾಗಿ ಹೋಗಿತ್ತು.
ಗಂಗಾನದಿಯ ಆ ಮಹಾ ಸೌಧದಲ್ಲಿ ಭಾಗವತದ ಪ್ರವಚನವು ಮೊದಲಾಯಿತು. ನೆರೆದ ಎಲ್ಲರೂ ಸಜ್ಜನರೂ ಅದರ ಪ್ರವಾಹದಲ್ಲಿ ಮುಳುಗಿಹೋಗಿದ್ದರು. ಕೊನೆಯ ದಿನದಂದು ತಕ್ಷಕನು ಏನೋ ಉಪಾಯ ಮಾಡಿ ಅತ್ಯಂತ ಸೂಕ್ಷ್ಮವಾದ ಕ್ರಿಮಿಯ ರೂಪದಲ್ಲಿ, ಹಣ್ಣಿನೊಳಗೆ ಸೇರಿಕೊಂಡು ಬಂದು ರಾಜನಿಗೆ ಕಚ್ಚಿದ. ಅದೇ ಸಮಯಕ್ಕೆ ಸರಿಯಾಗಿ ರಾಜನು ಯೋಗಮಾರ್ಗದಲ್ಲಿ ತನ್ನ ಪ್ರಾಣವನ್ನು ತ್ಯಜಿಸಿದ. ಈ ಕಚ್ಚುವಿಕೆಯ ಮೂಲಕ ತಕ್ಷಕನು ಕಚ್ಚಲಿ ಎಂಬ ಶೃಂಗಿಯ ಶಾಪವೂ ಫಲಿಸಿತು. ಅದೇ ಸಮಯದಲ್ಲಿ ಯೋಗ ಮಾರ್ಗದಿಂದ ಪ್ರಾಣತ್ಯಾಗ ಮಾಡುವುದರ ಮೂಲಕ ರಾಜರ್ಷಿಗೆ ತಕ್ಕದಾದ ಮರಣವೂ ಅವನಿಗೆ ಒದಗಿತು.
ಇದು ಭೂಮಿಯ ಮೇಲೆ ಭಾಗವತ ಪ್ರವಚನವು ಸಪ್ತಾಹ ಕ್ರಮದಲ್ಲಿ ಪ್ರಾರಂಭವಾದ ಸಂಪ್ರದಾಯದ ಹಿನ್ನೆಲೆ.
ಇಂದಿನ ಶುಕಸ್ಥಲ
ಶುಕಾಚಾರ್ಯರಿಂದಲೇ ಮೊಟ್ಟಮೊದಲ ಭಾಗವತ ಸಪ್ತಾಹವು ನಡೆದ ಕ್ಷೇತ್ರಕ್ಕೆ ಈಗ ಶುಕಸ್ಥಲ ಎಂದೇ ಹೆಸರು. ಇದು ಇಂದಿನ ಉತ್ತರಪ್ರದೇಶದಲ್ಲಿದೆ. ದೆಹಲಿಯಿಂದ ಹರಿದ್ವಾರಕ್ಕೆ ಹೋಗುವಾಗ ಮುಜಫ್ಫರಪುರ ಎಂಬ ಜಿಲ್ಲಾ ಕೆಂದ್ರವು ಸಿಗುತ್ತದೆ. ಶುಕಸ್ಥಲವು ಈ ಜಿಲ್ಲೆಗೆ ಸೇರಿರುವ ಒಂದು ಪಟ್ಟಣ. ಹರಿದ್ವಾರದಿಂದ ದಕ್ಷಿಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿ ಈ ಊರು ಇದೆ. ಉತ್ತರದವರು ಇದಕ್ಕೆ ಶುಕ್ರತಾಲ್ ಎಂದು ಕರೆಯುತ್ತಾರೆ. ಕ್ಷೇತ್ರದಲ್ಲಿ ಇದಕ್ಕೆ ಶುಕತೀರ್ಥ ಎಂಬ ಸುಂದರ ಹೆಸರಿದೆ. ಶುಕಾಚಾರ್ಯರು ಪ್ರವಚನ ಮಾಡಿದ ವೃಕ್ಷ ಎಂದು ಪ್ರತೀತಿ ಇರುವ ಆಲದ ಮರವೊಂದು ಈಗಲೂ ಅಲ್ಲಿದೆ. ಶುಕಾಚಾರ್ಯರ ಹಾಗೂ ಶ್ರೀವೇದವ್ಯಾಸದೇವರ ಪುಟ್ಟ ಗುಡಿಯೊಂದು ಈ ಮರದ ಕೆಳಗೆ ಇದೆ. ಇದರ ಸಂರಕ್ಷಣೆಯನ್ನು ಅಲ್ಲಿ ಸ್ಥಳೀಯ ಮಠವೊಂದು ನೋಡಿಕೊಳ್ಳುತ್ತದೆ. ಈ ಮಠಕ್ಕೆ ಶುಕದೇವ್ ಜೀ ಎಂದೇ ಕರೆಯುತ್ತಾರೆ. ನಿತ್ಯವೂ ಸಾವಿರಾರು ಜನರು ಇಲ್ಲಿ ಭೇಟಿ ಕೊಡುತ್ತಾರೆ.
ಶುಕಾಚಾರ್ಯರು ನಡೆಸಿಕೊಟ್ಟ ಅಂದಿನ ಸಪ್ತಾಹದ ನಂತರ ಇಂದಿನ ವರೆಗೆ ಕೋಟ್ಯಂತರ ಭಾಗವತ ಸಪ್ತಾಹಗಳು ದೇಶದೆಲ್ಲೆಡೆ (ಈಗ ಪ್ರಪಂಚದೆಲ್ಲೆಡೆ) ನಡೆದಿವೆ, ನಡೆಯುತ್ತಲೇ ಇವೆ. ಆದರೂ ಈ ಶುಕಸ್ಥಲದಲ್ಲಿ ನಡೆವ ಭಾಗವತ ಸಪ್ತಾಹಕ್ಕೆ ಒಂದು ಬೇರೆಯದೇ ಆಗಿರುವ ವೈಶಿಷ್ಟ್ಯವಿದೆ. ಒಮ್ಮೆಯಾದರೂ ಇಲ್ಲಿ ಭಾಗವತಸಪ್ತಾಹವನ್ನು ಮಾಡಬೇಕೆಂಬುದು ನೂರಾರು ವಿದ್ವಾಂಸರ ಮನದ ಬಯಕೆ. ಇಂತಹ ಎಷ್ಟೇ ವಿದ್ವಾಂಸರು ಬಂದರೂ ಅವರೆಲ್ಲರೂ ಭಾಗವತ ಸಪ್ತಾಹವನ್ನು ನಡೆಸಿಕೊಡಲು ಈ ಕ್ಷೇತ್ರವು ಅನುಕೂಲವನ್ನು ಕಲ್ಪಿಸಿಕೊಡುತ್ತದೆ. ಪ್ರತಿ ನಿತ್ಯವೂ ಕನಿಷ್ಟ ಒಂದು ಕಡೆಯಾದರೂ ಇಲ್ಲಿ ಭಾಗವತದ ಪ್ರವಚನವು ನಡೆದೇ ಇರುತ್ತದೆ. ಶುಕದೇವ್ ಜೀ ಸಂಸ್ಥಾನದಲ್ಲಿ ಒಂದು ವಿಶಾಲವಾದ ಹಜಾರದಲ್ಲಿ ಪ್ರತಿ ನಿತ್ಯವೂ ಕನಿಷ್ಠ 50 ಜನ ವಿದ್ವಾಂಸರಿಂದ ಭಾಗವತದ ಪಾರಾಯಣವು ನಡೆಯುತ್ತದೆ. 10 ಜನರಿಂದ ಪ್ರಾರಂಭಿಸಿ ಸಾವಿರ ಜನರು ಬಂದರೂ ಅವರೆಲ್ಲರಿಗೂ ಇಲ್ಲಿ ತಂಗಲು ವ್ಯವಸ್ಥೆಯಾಗುತ್ತದೆ. ಜನರ ಸಮೂಹದ ಗಾತ್ರಕ್ಕನುಗುಣವಾಗಿ ಪ್ರವಚನದ ವೇದಿಕೆ, ಮೈಕ್ ಸೆಟ್, ಜೆನರೇಟರ್, ಅಡುಗೆ ಮಾಡಲು ಪಾತ್ರೆ ಮತ್ತು ಉಳಿದುಕೊಳ್ಳಲು ವಸತಿಯ ಕೋಣೆಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಶುಕತೀರ್ಥದಲ್ಲಿ ಬಂದು ಭಾಗವತ ಸಪ್ತಾಹವನ್ನು ನೆರವೇರಿಸಿಕೊಟ್ಟ ಎಲ್ಲ ವಿದ್ವಾಂಸರ ಹೆಸರುಗಳನ್ನು ಶುಕದೇವ್ ಜೀ ಸಂಸ್ಥಾನದ ರೆಜಿಸ್ಟರಿನಲ್ಲಿ ನಮೂದಿಸಿ ಇಟ್ಟುಕೊಂಡಿದ್ದಾರೆ. ನಮ್ಮ ಕರ್ನಾಟಕದಿಂದಲೂ ಕೆಲವು ವಿದ್ವಾಂಸರುಗಳ ಹೆಸರು ಈ ರಿಜಿಸ್ಟರಿನಲ್ಲಿ ಕಾಣಸಿಗುವುದು ಸಂತಸದ ವಿಷಯ.
ಪೂಜ್ಯ ಶ್ರೀಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಸಪ್ತಾಹ
ಈ ಕ್ಷೇತ್ರದಲ್ಲಿ ಭಾಗವತ ಜ್ಞಾನಯಜ್ಞಕ್ಕೆ ಸಲ್ಲುವ ಗೌರವದ ಬಗ್ಗೆ ಒಂದು ಉದಾಹರಣೆಯನ್ನು ನಾವು ಇಲ್ಲಿ ಗಮನಿಸಬಹುದು. ಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀವಿಶ್ವಪ್ರಿಯತೀರ್ಥರಿಂದ 2005(06) ರಲ್ಲಿ ಒಮ್ಮೆ ಇಲ್ಲಿ ಭಾಗವತ ಸಪ್ತಾಹವು ನಡೆಯಿತು. ಅದಮಾರು ಶ್ರೀಗಳ ಪ್ರವಚನವೆಂದರೆ ಕೇಳಬೇಕೇ? ಶ್ರದ್ಧೆಯಿಂದ ಅವರನ್ನು ಹಿಂಬಾಲಿಸುವ ಸಾವಿರಾರು ಭಕ್ತರಿದ್ದಾರೆ ಅವರಿಗೆ. ಈ ಶುಕಸ್ಥಲದ ಸಪ್ತಾಹವನ್ನು ರಾಯಚೂರಿನ ಭಕ್ತವೃಂದವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರ ಏರ್ಪಾಡುಗಳಲ್ಲಿ ಸ್ವಲ್ಪಮಟ್ಟಿಗೆ ಭಾಗವಹಿಸುವ ಒಂದು ಸುಯೋಗ ನನಗೂ ದೊರೆತಿತ್ತು.
ಸುಮಾರು 150-200 ಜನ ಶ್ರದ್ಧಾಳುಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಒಂದು ವಿಶಾಲವಾದ ಹಜಾರದಲ್ಲಿ, ದೊಡ್ಡ ವೇದಿಕೆಯನ್ನು ಇದಕ್ಕಾಗಿ ಹಾಕಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕದೇವ್ ಸಂಸ್ಥಾನದ ಹಿರಿಯ ಸ್ವಾಮಿಗಳನ್ನು ಕೂಡ ಆಹ್ವಾನಿಸಲಾಗಿತ್ತು. ಅವರಿಗಾಗಿ ವೇದಿಕೆಯ ಮೇಲೆ ವ್ಯಾಸಪೀಠದ ಪಕ್ಕದಲ್ಲಿಯೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅದಮಾರು ಶ್ರೀಗಳು ಹಾಗು ಅಲ್ಲಿನ ಶ್ರೀಗಳವರು ವೇದಿಕೆಯ ಮೇಲೆ ಕುಳಿತಿದ್ದರು. ಇಬ್ಬರೂ ಶ್ರೀಗಳವರ ಮೊದಲ ಮಾತುಕತೆ ಎಲ್ಲವೂ ಹಿಂದಿಯಲ್ಲಿಯೇ ನಡೆಯಿತು. ಪ್ರವಚನವು ಸುಮಾರು ಅರ್ಧದಷ್ಟು ಮುಗಿದಿತ್ತು. ಆಗ ಇದ್ದಕ್ಕಿದ್ದಂತೆ ಶುಕದೇವ್ ಸಂಸ್ಥಾನದ ಶ್ರೀಗಳವರು ವೇದಿಕೆಯ ಮೇಲಿಂದ ಇಳಿದರು. ಎಲ್ಲರೂ ಅವರಿಗೆ ಕೆಲಸವಿರಬೇಕು ಹಾಗಾಗಿ ಹೊರಟರೆಂದು ಭಾವಿಸಿದರು. ಆದರೆ ಅವರು ಅಯೋಜಕರನ್ನು ಕೇಳಿಗೆ ಕೆಳಗೆ ಮತ್ತೊಂದು ಕುರ್ಚಿಯನ್ನು ಹಾಕಿಸಿಕೊಂಡು ಅದರ ಮೇಲೆ ಕುಳಿತರು. ಪೂರ್ತಿಯಾಗಿ ಅಂದಿನ ಬೆಳಗಿನ ಪ್ರವಚನವನ್ನು ಗಮನವಿಟ್ಟು ಕೇಳಿದರು. ಮುಗಿದ ನಂತರ ತಾವಾಗಿಯೇ ಮೇಲೆ ಬಂದು ಮೈಕ್ “ಭಾಗವತವು ನಡೆವ ಸ್ಥಳಕ್ಕೆ ಆಹ್ವಾನವಿಲ್ಲದಿದ್ದರೂ ಹೋಗಬೇಕೆಂದು ವಿಧಿ ಇದೆ. ಆದರೆ ನಾವು ಇಲ್ಲಿ ನಡೆವ ಎಲ್ಲ ಸಪ್ತಾಹದಲ್ಲಿಯೂ ಭಾಗವಹಿಸಲು ಆಗುವುದಿಲ್ಲ ಅದಕ್ಕೆ ಹಲವಾರು ಕಾರಣಗಳಿವೆ. ಆದರೆ ಇಂದಿನಿಂದ ನಡೆಯುತ್ತಿರುವ ಈ ಭಾಗವತ ಸಪ್ತಾಹಕ್ಕೆ ನನಗೆ ಆಹ್ವಾನ ಬಂದಿರುವುದು ಶ್ರೀಶುಕಾಚಾರ್ಯರು ನನ್ನ ಮೇಲೆ ಮಾಡಿರುವ ಅನುಗ್ರಹ ಎಂದು ನಾನು ಭಾವಿಸುತ್ತೇನೆ. (ಶ್ರೀಗಳತ್ತ ನೋಡುತ್ತಾ) ಪೂಜ್ಯರು ಶ್ರೀವೇದವ್ಯಾಸರದೇವರ ಪ್ರತಿಮೆ ಎಂದು ನಾನು ಧೈರ್ಯವಾಗಿ ಹೇಳುತ್ತೇನೆ. ಕನ್ನಡ ಭಾಷೆಯಲ್ಲಿ ನಡೆವ ಪ್ರವಚನ ಎಂದು ತಿಳಿದಾಗ ನಮಗೆ ಏನೂ ಅರ್ಥವಾಗದಿರುವ ಕಾರ್ಯಕ್ರಮದಲ್ಲಿ ಎಷ್ಟು ಹೊತ್ತು ಕೂಡುವುದು ಎಂದು ಭಾವಿಸಿದ್ದೆವು. ಆದರೆ ಪೂಜ್ಯರ ಪ್ರವಚನ ಕೇಳಲು ಪ್ರಾರಂಭಿಸಿದ್ದೇ ತಡ, ಇವರು ಹೇಳುತ್ತಿರುವುದು ದೇವಭಾಷೆಯಲ್ಲಿ ಎನ್ನುವ ಸ್ಪಷ್ಟತೆ ನನ್ನಲ್ಲಿ ಉಂಟಾಯಿತು. ಇಷ್ಟು ಹೊತ್ತು ಪ್ರವಚನದಲ್ಲಿ ಹೇಳಿದ ಪ್ರತಿಯೊಂದು ವಿಷಯವೂ ನನ್ನ ಹೃದಯದಲ್ಲಿ ಸೇರಿಕೊಂಡಿದೆ. ಇಂದಿನಿಂದ ಕೊನೆಯ ದಿನದವರೆಗೂ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ ಆದರೆ ದಯಮಾಡಿ ನನಗೆ ಮೇಲೆ ಕುರ್ಚಿ ಹಾಕಬೇಡಿ. ಇಷ್ಟು ಹೊತ್ತು ನಾನು ಕುಳಿತಿದ್ದ ಸ್ಥಳವು ನನಗೆ ಸೂಕ್ತವಾಗಿದೆ. ಅದೊಂದರ ವ್ಯವಸ್ಥೆಯನ್ನು ನನಗೆ ಮಾಡಿ ಸಾಕು” ಎಂದು ಹೇಳಿದರು. ಅಷ್ಟು ಮಾತ್ರವಲ್ಲ. ಏಳೂ ದಿನಗಳ ಕಾಲ ಸಪ್ತಾಹದಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮದಿಂದ ಪೂಜ್ಯ ಶ್ರೀಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಲ್ಲಿ ಶ್ರೀವೇದವ್ಯಾಸದೇವರೇ ಸನ್ನಿಹಿತರಾಗಿ ನಿಲ್ಲುವ ವಿಷಯ ಮತ್ತು ಭಾಗವತ ಪ್ರವಚನಕ್ಕೆ ತಲೆಬಾಗುವ ಅಲ್ಲಿನ ಶ್ರೀಗಳವರ ಸಜ್ಜನಿಕೆ ಎರಡರ ಪರಿಚಯವೂ ಆಯಿತು.
ಹೋಗುವುದು ಹೇಗೆ?
ಶುಕಸ್ಥಲವು ದೆಹಲಿಯಿಂದ ಕೇವಲ 150 ಕಿ.ಮೀ ದೂರ ಆಗುತ್ತದೆ. ಆದರೆ ಅಲ್ಲಿಗೆ ಹೋಗುವುದು ಸ್ವಂತ ವಾಹನದ ವ್ಯವಸ್ಥೆ ಇದ್ದರೆ ಮಾತ್ರ ಸುಲಭ. ಸರ್ಕಾರಿ ವಾಹನಗಳಾದರೆ ಅಲ್ಲಿಗೆ ಹೋಗಲು ಬಹಳ ಒದ್ದಾಟವಾಗುವುದು. ದೆಹಲಿ ಇಂದ ಮುಜಫ್ಫರ್ ನಗರಕ್ಕೆ ಹೋಗಿ ಅಲ್ಲಿಂದ ಬಿಜನೋರ್ ಎಂಬ ಊರಿಗೆ ಹೋಗುವ ಬಸ್ ಹಿಡಿಯಬೇಕು. ಮಧ್ಯದಲ್ಲಿ ಭೋಪಾ ಎನ್ನುವ ಒಂದು ಊರಿನಲ್ಲಿ ಇಳಿದು ಒಂದು ಆಟೋ ರಿಕ್ಷಾದಂತಹ ಗಾಡಿಯಲ್ಲಿ ಶುಕಸ್ಥಲವನ್ನು ಮುಟ್ಟಬಹುದು. ಭೋಪಾ ಇಂದ ಶುಕಸ್ಥಲಕ್ಕೆ ಸುಮಾರು 12 ಕಿ.ಮೀ ದೂರವಾಗುತ್ತದೆ. ಇಷ್ಟಕ್ಕೆ ಸುಮಾರು 7 ಗಂಟೆಗಳು ವ್ಯಯ ಆಗುತ್ತದೆ. ನಿಮ್ಮದೇ ಗಾಡಿ ಇದ್ದರೆ ಸುಮಾರು 4-5 ಗಂಟೆಗಳು ಬೇಕು.
ನಿಮ್ಮ ಗಾಡಿಯಲ್ಲಿಯೇ ಹೋಗಬೇಕೆಂದರೆ ಈ ಲೋಕೇಶನ್ ಮಾರ್ಕ್ ಅನ್ನು ಹಿಂಬಾಲಿಸಿ https://goo.gl/maps/7iS2Qm1eM9uFRpb9A
Very nicely explained
Thank you
ಶುಕಸ್ಥಳದ ಬಗ್ಗೆ ಕೇಳಿದ್ದೆ.ನಿಮ್ಮಿಂದ ಇನ್ನೂ ಹೆಚ್ಚಿನ ಮಾಹಿತಿ ದೊರಕಿತು.ಶ್ರೀ ಅದಮಾರು ಶ್ರೀಗಳ ಪ್ರವಚನ ಕೇಳಿದವರಿಗೆ ಮಾತ್ರ ಅದರ ರುಚಿ ಗೊತ್ತು. ಅಂಥಹ ಕಾರ್ಯಕ್ರಮದಲ್ಲಿ ನೀವು ಭಾಗಿ ಆಗಿದ್ದು ಸಂತೋಷ ಹಾಗೂ ಹೆಮ್ಮೆಯ ವಿಚಾರ.
ಶುಕಸ್ಥಳದ ಬಗ್ಗೆ ಕೇಳಿದ್ದೆ.ನಿಮ್ಮಿಂದ ಇನ್ನೂ ಹೆಚ್ಚಿನ ಮಾಹಿತಿ ದೊರಕಿತು.ಶ್ರೀ ಅದಮಾರು ಶ್ರೀಗಳ ಪ್ರವಚನ ಕೇಳಿದವರಿಗೆ ಮಾತ್ರ ಅದರ ರುಚಿ ಗೊತ್ತು. ಅಂಥಹ ಕಾರ್ಯಕ್ರಮದಲ್ಲಿ ನೀವು ಭಾಗಿ ಆಗಿದ್ದು ಸಂತೋಷ ಹಾಗೂ ಹೆಮ್ಮೆಯ ವಿಚಾರ.