ಸುವಿದ್ಯೇಂದ್ರರೆನ್ನುವ ಈ ಹುಲಿಗೆ ಈಗ 16 ವರ್ಷ

ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಮೊದಲನೆಯ ಪರ್ಯಾಯವು ವೈಷ್ಣವ ಜಗತ್ತಿನ ಇತಿಹಾಸದಲ್ಲಿ ಹಲವಾರು ಸಾಧನೆಗಳನ್ನು ಮಾಡಿ ದಾಖಲೆಗಳನ್ನು ಸೃಷ್ಟಿಸಿದೆ. ಈ ಸಾಧನೆಯ ಪಥದಲ್ಲಿ ಕೆಳಗಿನ ನಾಲ್ಕನ್ನು ಮೈಲಿಗಲ್ಲುಗಳು ಎಂದು ಗುರುತಿಸಬಹುದು. ಈ ನಾಲ್ಕು ಮೈಲಿಗಲ್ಲುಗಳಿಗೂ ಈಗ ಹದಿನಾರು ವರ್ಷದ ಪ್ರಾಯ!

  1. ಶ್ರೀಕೃಷ್ಣದೇವರಿಗೆ ವಜ್ರದ ಕವಚವನ್ನು ಸಮರ್ಪಿಸಿ ಗುರುಗಳ ಸೇವೆಯನ್ನು ಮಾಡಿದ್ದು
  2. ಸರ್ವಮೂಲ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದು
  3. ಚಿಣ್ಣರ ಸಂತರ್ಪಣೆಯನ್ನು ಪ್ರಾರಂಭಿಸಿದ್ದು.
  4. ವೇದಾಂತಾರಣ್ಯದ ವ್ಯಾಘ್ರ ಶ್ರೀಸುವಿದ್ಯೇಂದ್ರತೀರ್ಥರ ಸಂನ್ಯಾಸಾಶ್ರಮದ ಕಾರ್ಯಕ್ರಮವನ್ನು ಆಯೋಜಿಸಿದ್ದು

ಮೊದಲ ಮೂರನ್ನು ಕುರಿತು ಮತ್ತೊಮ್ಮೆ ಬರೆಯುವೆ.

ನಾಕನೆಯದಾದ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರ ಆಶ್ರಮ ಸ್ವೀಕಾರದ ಕಾರ್ಯವು ನಡೆದು ಇಂದಿಗೆ ಸರಿಯಾಗಿ 15ವರ್ಷಗಳು ಆದವು. ಫಾಲ್ಗುಣ ಕೃಷ್ಣ ಸಪ್ತಮಿಯ ಈ ದಿನ ಗುರುಗಳು ಶ್ರೀಕೃಷ್ಣನ ಸನ್ನಿಧಿಯಲ್ಲಿಯೇ ಇರುವುದು ಇನ್ನೊಂದು ವಿಶೇಷ. ಅವರನ್ನು ಕುರಿತು ಬರೆದು ಕೈ ಹಾಗು ಮಾತು ಎರಡನ್ನು ಶುದ್ಧಿ ಮಾಡಿಕೊಳ್ಳುವೆ.

ಶ್ರೀರಾಘವೇಂದ್ರಮಠದ ಪೀಠದಲ್ಲಿ ವಿದ್ವಾಂಸರಾದ ಶ್ರೀಗುರುವೆಂಕಟಾಚಾರ್ಯರನ್ನು ಕುಳ್ಳಿರಿಸಿ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ಎಂದು ನಾಮಕರಣ ಮಾಡಿದ್ದು ಇದೇ ದಿನದಂದು. ಬೇರೆಲ್ಲ ಚರ್ಚೆ ಇಲ್ಲಿ ಬೇಡ. ನನ್ನ ವ್ಯಕ್ತಿಗತ ಅನುಭವದ ಒಂದೆರಡು ಸಂಗತಿಗಳನ್ನು ನಾನು ಇಲ್ಲಿ ಹೇಳಬಯಸುವೆ.

ಹಿಂದೊಮ್ಮೆ (ಅಂದರೆ 15 ವರ್ಷಗಳ ಕೆಳಗೆ) ನಾನಿನ್ನೂ ಗ್ರಾಫಿಕ್ ಕಲೆಯ ಶಿಶು. ಆಗ ಗುರುಗಳ ಒಂದು ಭಾವಚಿತ್ರದ ಪುಟಾಣಿ ವಾಲ್ಪೇಪರನ್ನು ಚಿತ್ರಿಸಿದ್ದೆ. ಅದರ ಮೇಲೆ ಶೀರ್ಷಿಕೆಯೊಂದನ್ನು ಬರೆಯಲು ಯೋಚಿಸುತ್ತಾ ಕೂತಿದ್ದೆ. ನನ್ನ ಹಿಂದಿನಿಂದ “ಕತ್ತಲೆಯಲ್ಲಿ ಸೂರ್ಯನ ಹಾಗೆ ಕಾಣಿಸ್ತಾ ಇದ್ದಾರೆ” ಎಂದು ಒಂದು ಮಾತು ಕೇಳಿಸಿತು! ಅದನ್ನು ಕೇಳಿ ಮೈ ರೋಮಾಂಚನಗೊಂಡು ಎದ್ದು ನಿಂತೆ! ಕಾರಣವಿಷ್ಟೇ! ಅದನ್ನು ಹೇಳಿದ್ದು ಮತ್ತಾರೂ ಅಲ್ಲ ಮಹಾಮಹಿಮರಾದ ಶ್ರೀಸುಶಮೀಂದ್ರತೀರ್ಥ ಶ್ರೀಪಾದರು. ನಾನು ಮಾಡುತ್ತಿದ್ದ ಕೆಲಸವನ್ನು ಅವರು ಹಿಂದಿನಿಂದ ನೋಡುತ್ತಾ ನಿಂತಿದ್ದು ನನ್ನ ಗಮನಕ್ಕೆ ಬಂದೇ ಇದ್ದಿಲ್ಲ. ತಮ್ಮ ಶಿಷ್ಯರ ಚಿತ್ರದಲ್ಲಿ ಅವರೂ ಆಸಕ್ತಿಯನ್ನು ವಹಿಸಿ ನೋಡುತ್ತಾ ನಿಂತಿದ್ದು ನನಗೆ ಬಹಳ ಸಂತಸವನ್ನು ತಂದಿತ್ತು. ಸರಿ! ದೊಡ್ಡ ಗುರುಗಳೇ ಸೂಚಿಸಿದಂತೆ ಅಜ್ಞಾನತಿಮಿರ ಮಾರ್ತಾಂಡ ಎನ್ನುವ ಒಂದು ಶೀರ್ಷಿಕೆಯನ್ನು ಹಾಕಿದೆ. ಒಯ್ದು ಚಿಕ್ಕ ಗುರುಗಳಿಗೇ ಅದನ್ನು ತೋರಿಸಿದರೆ “ಇದೆಲ್ಲ ನನ್ನ ಯೋಗ್ಯತೆಯೇನಲ್ಲ, ಹೀಗ್ಯಾಕೆ ಹಾಕಿದ್ದೀ?” ಎಂದು ಪ್ರಶ್ನೆ ಮಾಡಿದರು. “ಗುರುಗಳೇ ಇದನ್ನು ಸೂಚಿಸಿದ್ದು” ಎಂದೆ. “ಹೌದಾ! ಹಾಗಿದ್ದಮೇಲೇ ಏನೂ ಬದಲಾವಣೆ ಮಾಡಬಾರದು. ಆದರೆ ಇದನ್ನು ಎಲ್ಲ ಕಡೆ ಪ್ರಚಾರ ಮಾಡಬೇಡ. ಭಿಕ್ಷುವಿಗೆ ಇದೆಲ್ಲ ಅನಗತ್ಯ” ಎಂದರು. ಅರೆ! ಇನ್ನೊಂದು ಸೂಚನೆ ಸಿಕ್ಕಿತಲ್ಲ ಎಂದು ಕೊಂಡು ಅಜ್ಞಾನತಿಮಿರಮಾರ್ತಾಂಡ ಶ್ರೀಸುವಿದ್ಯೇಂದ್ರಭಿಕ್ಷುಃ ಎಂದು ಶೀರ್ಷಿಕೆಯನ್ನು ಸಂಪೂರ್ಣಗೊಳಿಸಿದೆ.

ಗುರುಗಳು ಬೇಡ ಎಂದು ಹೇಳಿದ್ದರೂ ಕೂಡ ನಾನು ನನ್ನ ಹಲವಾರು ಜನ ಸ್ನೇಹಿತರೊಡನೆ ಹಂಚಿಕೊಂಡಿದ್ದೆ. ಅದು ಮುಂದೆ ಬಹಳ ಜನಪ್ರಿಯವಾಗಲು ತಡವಾಗಲಿಲ್ಲ. ಅವರೇನೋ ಬೇಡ ಎಂದು ಹೇಳಿದ್ದು ಅವರ ದೃಷ್ಟಿಯಲ್ಲಿ ಸರಿಯಾಗಿಯೇ ಇತ್ತು. ಆದರೆ ನಮ್ಮ ಗುರುಗಳು ಎನ್ನುವ ಅಭಿಮಾನದಿಂದಲೇ ನಾನು ಅದನ್ನು ಎಲ್ಲರಿಗೂ ಕೊಟ್ಟಿದ್ದು.

2009ರ ಮಂತ್ರಾಲಯ ಪ್ರವಾಹದಲ್ಲಿ ಆ ಕಂಪ್ಯೂಟರು ಜಲಾಧಿವಾಸವನ್ನು ಮಾಡಿತು! ಈಗಲೂ ಯಾರ ಬಳಿಯಲ್ಲಿಯಾದರೂ ಅದು ಇದ್ದರೆ ದಯವಿಟ್ಟು ಒಂದು ಕಾಪಿಯನ್ನು ಶೇರ್ ಮಾಡಿರಿ.

ಈಗ ಇಲ್ಲಿ ಹುಲಿ ಎನ್ನುವ ವಿಶೇಷಣವನ್ನು ಅವರಿಗೆ ನಾನು ಬಳಸಿದ್ದೇನೆ. ಇದಕ್ಕೂ ಕಾರಣವಿದೆ. ಸಿಂಹಕ್ಕೆ ಹೋಲಿಸಬಹುದಿತ್ತೇನೋ. ಆದರೆ ಸಿಂಹಿಣಿಗಳು ಬೇಟೆಯಾಡಿದ ಮೇಲೆ ಅದರ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುವುದು ಸಿಂಹದ ಸ್ವಭಾವ. ಒಂಟಿ ಸಲಗಕ್ಕೆ ಹೋಲಿಸೋಣವೇ? ಅದನ್ನು ಎದುರಿಸುವ ತಾಕತ್ತು ಯಾರಿಗೂ ಇಲ್ಲ ನಿಜ. ಆದರೆ ಅದು ಒಂಟಿತನವನ್ನು ಪಡೆಯುವುದಕ್ಕೆ ಕಾರಣವಿದೆ. ತನ್ನ ಗುಂಪಿನ ನಾಯಕನಿಂದ ಸೋತು, ಅದನ್ನು ಇದಕ್ಕೆ ಒಪ್ಪಿಕೊಳ್ಳಲು ಆಗದೆ, ಉಳಿದ ಆನೆಗಳು ಇದನ್ನು ನಾಯಕನೆಂದು ಒಪ್ಪಿಕೊಳ್ಳದೆ ಗುಂಪಿನಿಂದ ಬಂಡೆದ್ದು ಬಂದಿರುವ ಆನೆಯದು. ಬಂಡೇಳುವ ಸ್ವಭಾವವೇ ಅದನ್ನು ಒಂಟಿ ಸಲಗನನ್ನಾಗಿ ಮಾಡಿದೆ.

ಆದರೆ ಹುಲಿಯ ವಿಷಯ ಹಾಗಲ್ಲ! ಅದರ ಶಕ್ತಿಯು ಅಪಾರ. ಆದರೂ ಅದು ಸಂಕೋಚದ ಜೀವಿ. ದಟ್ಟ ಕಾಡಿನ ಮಧ್ಯವೇ ಅದರ ವಾಸ. ಅತ್ಯಗತ್ಯವಿಲ್ಲದೆ ಅದು ಇತರರೆಡೆ ಬಾರದು. ಸಿಂಹದಂತೆ ತನ್ನ ಗುಂಪಿನ ಇನ್ನಿತರ ಮೇಲೆ ಆಹಾರಕ್ಕಾಗಿ ಅವಲಂಬನೆಯನ್ನೂ ಅದು ಮಾಡದು. ಕೋಪ ಬಂತೆಂದು ಸಲಗನಂತೆ ಬಂಡಾಯದ ವಿಧ್ವಂಸಕಾರ್ಯವನ್ನೂ ಮಾಡದು. ಕೆಲಸ ಮುಗಿದ ನಂತರ ಮತ್ತೆ ತನ್ನ ವಾಸಸ್ಥಾನವನ್ನು ಸದ್ದಿಲ್ಲದಂತೆ ಸೇರಿಕೊಂಡು ಬಿಡುವುದು. ವಿನಾಕಾರಣ ಬೇರಯವರ ಮೇಲೆ ಎಂದೂ ಎರಗದು! ಆದರೆ ಅದರ ಎಲ್ಲೆಯನ್ನು ಪ್ರಶ್ನಿಸಿದಿರೋ! ಮುಂದಿನದನ್ನು ಓದಲು ನೀವು ಇರುವುದೇ ಇಲ್ಲ!

ಗುರುಗಳ ಕ್ಷಮತೆಯೂ ಕೂಡ ಹುಲಿಯಂತೆಯೇ ಇದೆ! ಇವರು ವಿಶಾಲವಾದ ವೇದಾಂತ ಸಾಮ್ರಾಜ್ಯದೆಲ್ಲೆಡೆ ಯಾವುದೇ ಅಡೆತಡೆಗಳಿಲ್ಲದೆ ಹಾಯಾಗಿ ವಿಹರಿಸುವ ಶಕ್ತಿಯುಳ್ಳವರು. ಹುಲಿಗೆ ಕಾಡಿನ ಅಂತರಾಳವು ಚೆನ್ನಾಗಿ ಗೊತ್ತಿರುವಂತೆ ಇವರಿಗೆ ವೇದಾಂತದ ಮೂಲೆ ಮೂಲೆಯೂ ಗೊತ್ತು! ಸ್ವಂತ ಬಲದ ಮೇಲೆ ಆರಾಮವಾಗಿ ಇರುವ ಹುಲಿಯಂತೆಯೇ ಇವರೂ ಗುರುಕೃಪೆ ಎನ್ನುವ ಒಂದು ಆಶ್ರಯವನ್ನು ಬಿಟ್ಟು ಯಾವುದೇ ಕಾರಣಕ್ಕೂ ಯಾರ ಮೇಲೂ ಅವಲಂಬಿತರಾಗಿಲ್ಲ. ಇವರಿಗೆ ಅನನುಕೂಲವನ್ನುಂಟು ಮಾಡಿದವರು ಬಹಳ ಮಂದಿ ಆದರೂ ಯಾರನ್ನೂ ಕೋಪದಿಂದ ಶಪಿಸದೆ, ಯಾವ ವಿಪರೀತದ ಕಾರ್ಯಕ್ಕೂ ಕೈ ಹಾಕದೆ, ತನ್ನ ಗುಹೆಯನ್ನು ಸೇರುವ ಹುಲಿಯಂತೆ ಗಂಭೀರವಾಗಿಯೇ ಇದ್ದಾರೆ. ಉಪನ್ಯಾಸದಲ್ಲಿಯೂ ಅಷ್ಟೇ ಶಾಸ್ತ್ರೀಯವಾದ ಮಾರ್ಗದಲ್ಲಿ ಅಲ್ಲದೆ ಬೇರೆ ಯಾವ ವಿಧವಾದ ಜನರಂಜಕವಾದ ಮಾತುಗಳನ್ನೂ ಆಡುವುದಿಲ್ಲ. ಬೇರೆಯವರನ್ನು ದೂಷಿಸುವುದಿಲ್ಲ. ಆದರೆ ಸಿದ್ಧಾಂತದ ವಿಷಯ ಬಂದಾಗ ಮಾತ್ರ ಇವರ ಮಾತನ್ನು ಎದುರಿಸಿ ನಿಂತವರಿಲ್ಲ. ಅಷ್ಟೊಂದು ಸ್ಪುಟವಾದ, ಪ್ರಮಾಣಬದ್ಧವಾದ ಮಾತುಗಳಿಂದ ಅಶಾಸ್ತ್ರೀಯವಾದವನ್ನು ಖಂಡಿಸುತ್ತಾರೆ. 2003ನೇ ಇಸ್ವಿಯಲ್ಲಿ ಪುಣೆಯಲ್ಲಿ ನಡೆದ ಶ್ರೀಸಮೀರಸಮಯಸಂವರ್ಧಿನೀ ಸಭೆಯ ಅಧಿವೇಶನವೇ ಇದಕ್ಕೆ ಸಾಕ್ಷಿ. ದೈತವನ್ನು ಖಂಡಿಸಲು ಬಂದ 25ಕ್ಕೂ ಹೆಚ್ಚಿನ ಪ್ರಸಿದ್ಧವಿದ್ವಾಂಸರನ್ನು ಶಾಸ್ತ್ರೋಕ್ತಕ್ರಮದಿಂದ ಖಂಡಿಸಿದ್ದನ್ನು ನೋಡಿ ನೆರೆದವರೆಲ್ಲರೂ ಬೆರಗಾದರು. ಸುಮಾರು 3ಗಂಟೆಗಳಿಗೂ ಹೆಚ್ಚಿನ ಕಾಲ ನಡೆದ ಈ ವಾಕ್ಯಾರ್ಥದಲ್ಲಿ ಶ್ರೀಗಳವರು ಪುಸ್ತಕವನ್ನು ನೋಡದೆಯೇ ಅಷ್ಟೂ ಶಾಸ್ತ್ರವಾಕ್ಯಗಳನ್ನು ಉಲ್ಲೇಖಿಸಿದ್ದೇ ಆ ಬೆರಗಿಗೆ ಕಾರಣವಾಗಿತ್ತು. ಆ ವಾಕ್ಯಾರ್ಥವು ನಡೆದ ಸಂದರ್ಭದಲ್ಲಿ ಅಹೋಬಿಲ ಮಠದ ಆಗಿನ ಶ್ರೀಗಳವರು ಕೂಡ ಉಪಸ್ಥಿತರಿದ್ದರು. ಶ್ರೀಗಳವರ ಸ್ಮರಣ ಶಕ್ತಿಯನ್ನು ಅವರು ಸುಶಮೀಂದ್ರತೀರ್ಥರೆದುರು ಶ್ಲಾಘಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಇನ್ನೂ ಒಂದು ತಮಾಶೆಯ ಪ್ರಸಂಗದ ಮೂಲಕವೂ ಗುರುಗಳ ಸಾಮರ್ಥ್ಯದ ಒಂದು ಚಿಕ್ಕ ಅಂದಾಜನ್ನು ಮಾಡಬಹುದು. 2008ರಲ್ಲಿ ನನ್ನ ಸೋದರಳಿಯನ ಉಪನಯನವು ಶ್ರೀಮಾದನೂರು ವಿಷ್ಣುತೀರ್ಥರ ಸನ್ನಿಧಿಯಲ್ಲಿ ನಡೆಯಿತು. ಎಲ್ಲವೂ ಸರಿಯಾಗಿಯೇ ನಡೆದಿತ್ತು. ಮಧ್ಯಾಹ್ನದ ವಿಶ್ರಾಂತಿಯ ಸಮಯದಲ್ಲಿ ನನ್ನ ಅವಿವೇಕಿ ತಂಗಿಯೊಬ್ಬಳು ಇದ್ದಕ್ಕಿದ್ದಂತೆ “ರಾಜಣ್ಣಾ! ನೀನು ಏನಽರ ಅನ್ನು, ನಿಮ್ಮ ಮಠದಾಗಽ ನಮ್ಮ ಮಠದಾಗಿನಽ ಗತೆ ಪಂಡಿತರು ಇಲ್ಲ ಬಿಡು.” ಎಂದಳು. “ಬೇಕಿತ್ತೇನವ ನಿಂಗಽ ಈಗ ಈ ಮಾತು?” ಎಂದು ನಾನು ಮರುನುಡಿದೆ. “ಅದರಾಗೇನದಽ ಬೇಕು ಬ್ಯಾಡ ಅನ್ನೋದು, ನಾ ಹೇಳಿದ್ದು ಖರೇನಽ ಅದ ಅಲ್ಲೇನು” ಎಂದು ಆಕೆ ಪ್ರತಿನುಡಿದಳು, ಇಷ್ಟು ಹೇಳುವಷ್ಟರಲ್ಲಿ ಇನ್ನೂ ಕೆಲವರು ಆಕೆಯ ಪರ ವಹಿಸಿ ನನ್ನೊಡನೆ ವಾಗ್ವಾದಕ್ಕೇ ನಿಂತವರಂತೆ ತಯಾರಾದರು. ಇದು ಸಮಯವಲ್ಲ ಎಂದು ಭಾವಿಸಿ ನಾನು ಸುಮ್ಮನಾದೆ. ಆದರೆ ನನ್ನ ಮೌನವನ್ನು ಅವರು ಪರಾಭವವೆಂದು ಭಾವಿಸಿ ಸಂತಸಪಟ್ಟು, ತಮ್ಮ ವಿದ್ವಾಂಸರ ಒಂದು ಪಟ್ಟಿಯನ್ನೇ ಮಾಡಲು ತೊಡಗಿದರು. ಆಗ ಅಲ್ಲಿಯವರೆಗೂ ಸುಮ್ಮನೆ ಕುಳಿತಿದ್ದ ಒಂದು ಮುಪ್ಪಿನ ಅಜ್ಜಿಯು ಒಂದು ಬಾಣವನ್ನು ಎಸೆಯಿತು. “ಇಕಾ ಇಲ್ನೋಡ್ರಿ, ನೀವು ಎರಡು ಹರದಾರಿ ಉದ್ದದ ಪಟ್ಟೀನಽ ಮಾಡ್ರಿ, ಬ್ಯಾಡನ್ನಂಗಿಲ್ಲ, ಆದರಽ…. ನಮ್ಮ ಸುವಿದ್ಯೇಂದ್ರತೀರ್ಥರು ಬಂದ್ರು ಅಂದಽ ಮ್ಯಾಲೆ ನಿಮ್ಮ ಈ ಪಟ್ಟಿಗೆ ಷಗಣೀಬುಟ್ಟಿನ ಗತಿಽ. ಗರುಡ ಬಂದು ಕೂತ್ರಽ ಸಣ್ಣ ಸಣ್ಣವು ಪಕ್ಷಿ ಹೆಂಗ ಹಾರಿ ಹೋಗ್ತಾವೋ ಹಂಗಽ ಈ ಮಂದಿ ಎಲ್ಲಾ ಫುರ್ರ್ರ್ ಅಂತಂದು ಹಾರೇ ಹೋಗ್ತಾರ ನೋಡಕೋತ ಇರ್ರಿ ನೀವು” ಎಂದು. ಈ ಬಾಣದ ಏಟಿಗೆ ತತ್ತರಿಸಿದ ಆ ಪೂರ್ವಪಕ್ಷಿಗಳು ತಮ್ಮ ಕಲರವವನ್ನು ನಿಲ್ಲಿಸಿ “ಏ! ತಂಗಿ, ಇದೆಲ್ಲ ಬ್ಯಾಡಾಗಿತ್ತವಽ ಈಗ. ಹಂಗೆಲ್ಲ ಮಹಾನುಭಾವರ ಸನ್ನಿಧಾನದೊಳಗ ಕ್ಷುಲ್ಲಕ ಬುದ್ಧಿ ತೋರಿಸಬಾರದು. ಸುಮ್ಮನೆ ಇರು” ಎಂದು ನನ್ನ ತಂಗಿಗೆ ಕ್ಲಾಸು ತೆಗೆದುಕೊಂಡರು!

ನನ್ನ ತಂಗಿಗೆ ಬುದ್ಧಿವಾದ ಹೇಳಿದರು ಎನ್ನುವ ಮಾತಿಗೆ ಇಲ್ಲಿ ಹೆಚ್ಚಿನ ಮನ್ನಣೆ ಬೇಡ. ಆದರೆ ಸುವಿದ್ಯೇಂದ್ರತೀರ್ಥರು ಎನ್ನುವ ಗರುಡನ ಮುಂದೆ ಬೇರೆಯವರೆಲ್ಲ ತರಗೆಲೆಗಳಂತೆ ಎನ್ನುವ ಅಜ್ಜಿಯ ದೃಢವಿಶ್ವಾಸಕ್ಕೆ ಮನ್ನಣೆ ಕೊಡೋಣ.

ಮಧ್ವರಾಯರು ಕರುಣೆಯು ಜ್ಞಾನರೂಪದಲ್ಲಿ ಇವರಿಗೆ ರಕ್ತಗತವಾಗಿ ಬಂದಿದೆ. ಶ್ರೀವ್ಯಾಸತತ್ತ್ವಜ್ಞರು, ಶ್ರೀವಿಷ್ಣುತೀರ್ಥರು, ಶ್ರೀಮುನೀಂದ್ರತೀರ್ಥರಂತಹ ವಿರಕ್ತಸಾಧಕರ ಸಾಲಿನಲ್ಲಿ ಇವರೂ ಸೇರಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಇನ್ನಿತರ ಎಲ್ಲ ವಿಷಯಗಳ ಬಗ್ಗೆ ಎಲ್ಲರಿಗೂ ನನಗಿಂತ ಹೆಚ್ಚು ಗೊತ್ತಿದೆ ಆದ ಕಾರಣ ಲೇಖನವನ್ನು ಬೆಳೆಸುವುದು ಬೇಡ.

ನನ್ನ ಸ್ವಾಮಿಯಾಗಿದ್ದ ರಾಜಾ ರಾಜಗೋಪಾಲಾಚಾರ್ಯರು ಶ್ರೀಸುವಿದ್ಯೇಂದ್ರತೀರ್ಥರ ಮೇಲೆ ಅಪಾರ ಗೌರವ ಭಕ್ತಿಯನ್ನು ಇಟ್ಟುಕೊಂಡಿದ್ದರು. ಶ್ರೀಸುಶಮೀಂದ್ರತೀರ್ಥಪ್ರತಿಷ್ಠಾನದಿಂದ ಅವರು ಪ್ರಕಟಿಸಿದ ಶ್ರೀಸುವಿದ್ಯೇಂದ್ರತೀರ್ಥರ “ಸಂಕಲನ” ಗ್ರಂಥಕ್ಕೆ ಬರೆದ ಮುನ್ನುಡಿಯನ್ನು ಈ ದಿನ ಹಂಚಿಕೊಳ್ಳುತ್ತಿದ್ದೇನೆ.

ಸರಿಸಾಟಿಯಿಲ್ಲದ ಪಾಂಡಿತ್ಯ
ಅಹಂಕಾರವಿಲ್ಲ
ಪ್ರವಚನಕ್ಕೆ ಬರುವ ಜನಸಾಗರ
ತಲೆತಿರುಗಲಿಲ್ಲ

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಪೀಠದ ಅಧಿಪತಿಯ ತ್ಯಾಗಕ್ಕೆ ಸರಿ ಸಾಟಿಯಿಲ್ಲ.

ಶ್ರೀರಾಯರ ಪರಿಮಳ ಗ್ರಂಥವನ್ನು ಮೊಟ್ಟ ಮೊದಲು ಅನುವಾದ ಮಾಡಿದರು

’ಪರಿಮಳ’ದ ಸುವಾಸನೆಯನ್ನು ಬೀರುತ್ತಾ ಪವಮಾನಮತದ ಕೀರ್ತಿಯನ್ನು ದಿಗ್-ದಿಗಂತಕ್ಕೆ ವಿಸ್ತರಿಸಿದರು.

ಪೂರ್ವಾಶ್ರಮದಲ್ಲೂ ಅಷ್ಟೇ. ಆಶ್ರಮವಾದಾಗಲೂ ಅಷ್ಟೇ.

ನಿರಂತರ ಪಾಠ ಪ್ರವಚನ ಸದಾಚಾರದ ಅವಿರತ ಅನುಷ್ಠಾನ, ಸುಮಾರು ೧೨೦೦ಕ್ಕೂ ಹೆಚ್ಚು ಭಾಗವತ ಸಪ್ತಾಹ ವನ್ನು ನೆರವೇರಿಸಿದ ಅಪೂರ್ವ ಮತ್ತು ಅಪರೂಪದ ಯತಿಶ್ರೇಷ್ಠದಲ್ಲಿ ಅಗ್ರಗಣ್ಯರು. ಇದರಿಂದಾಗಿ ನಾಡಿನಾದ್ಯಂತ ಜನ ಜನಿತ. ಅವರ ಸಪ್ತಾಹದ ಸಮಯ ಬೇಕೆಂದರೆ ಹೆಚ್ಚಿಗೆ ಇಲ್ಲ, ೨ ವರ್ಷವಾದರೂ ಕಾಯಬೇಕು. ಇರುವ ಅಪಾರ ಜನಸ್ತೋಮವನ್ನು ಎಂದಿಗೂ ಬೇರೆ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಒಬ್ಬ ವಿದ್ವಾಂಸ, ಒಬ್ಬ ಯತಿಗಳು ಹೀಗೆ ನಿರಂತರವಾಗಿ ದೀರ್ಘಕಾಲ ಜನಪ್ರಿಯತೆಯ ಉತ್ತುಂಗದಲ್ಲಿರುವುದು ಸುಲಭಸಾಧ್ಯವಿಲ್ಲ. ಶ್ರೀರಾಯರು ಹೇಗೆ ಸಾರ್ವಕಾಲಿಕ ಜಗದ್ಗುರುಗಳೋ ಹಾಗೆ ಶ್ರೀಸುವಿದ್ಯೇಂದ್ರತೀರ್ಥರು ಅವರ ಅನುಗ್ರಹದಿಂದ ನಾಡಿನ ಎಲ್ಲರ ಹೃದಯದಲ್ಲಿ ಅನಭಿಷಿಕ್ತ ಯತಿಶ್ರೇಷ್ಠರಾಗಿ ರಾರಾಜಿಸುತ್ತಿದ್ದಾರೆ.

ಬರೆದ ಕೃತಿಗಳು ಬದುಕನ್ನು ಚೆನ್ನಾಗಿ ರೂಪಿಸಿಕೊಡಬಲ್ಲ ಆಕೃತಿಗಳು. ಅವರ ಸ್ಪಷ್ಟ ಹಾಗು ಖಚಿತವಾದ ಆಧಾರಯುಕ್ತ ವಾಕ್ಯಾರ್ಥಗಳು ಬೇರೆಯವರಿಗೆ ಮಾದರಿ. ಅನೇಕ ಐತಿಹಾಸಿಕ ಗೋಷ್ಠಿಗಳು, ವಿಚಾರ ಸಂಕಿರಣಗಳು ಇವರ ಪಾಲ್ಗೊಳ್ಳುವಿಕೆಯಿಂದ ಗರಿಮೆ ಪಡೆದುಕೊಂಡಿವೆ.

ವ್ಯಾಪಾರೀಕರಣದ ಸ್ವಾಮಿಗಳಲ್ಲ. ಅಭಿನವದ ಅಭಿನಯ ಇವರ ಬಳಿಯೂ ಸುಳಿಯುವುದಿಲ್ಲ. ನಮ್ಮ ಕಾಲದ ಸುಮತೀಂದ್ರರೋ ನಮ್ಮ ಕಾಲದ ವ್ಯಾಸತತ್ತ್ವಜ್ಞರೋ ಗೊತ್ತಿಲ್ಲ. ಶ್ರೀರಾಯರೇ ಕಳುಹಿಸಿಕೊಟ್ಟ ಈ ಸಂತರು ಶ್ರೀಸುಶಮೀಂದ್ರರ ಪ್ರತಿರೂಪ, ಅವರ ಪ್ರತಿಬಿಂಬ. ಶ್ರೀಸುವಿದ್ಯೇಂದ್ರರಲ್ಲಿ ಶ್ರೀಸುಶಮೀಂದ್ರರನ್ನು ಶ್ರೀಸುವಿದ್ಯೆಂದ್ರರನ್ನು ಎರಡು ರೂಪದಿಂದ ಕಾಣುವ ಭಾಗ್ಯ ನಮ್ಮದಾಗಿದೆ ನಿಜಕ್ಕೂ ನಾವೇ ಭಾಗ್ಯವಂತರು.

ಅವರು ರಚಿಸಿರುವ ಹಲವಾರು ಕೃತಿಗಳು ಅಲ್ಲಲ್ಲಿ ಪ್ರಕಟವಾಗಿವೆ, ಒಟ್ಟಿಗೆ ಸಿಗುತ್ತಿಲ್ಲ. ಕೆಲವು ಕೃತಿಗಳು ಪ್ರಕಾಶನವಾಗಿದ್ದರೂ ಪ್ರಸ್ತುತ ದೊರೆಯುತ್ತಿಲ್ಲ. ಅವರು ಅನುವಾದಿಸಿರುವ ಕೃತಿ “ಪರಿಮಳ”ದಂತಹ ಶಾಸ್ತ್ರಗ್ರಂಥವು ಮೂರು ಮುದ್ರಣಗೊಂಡಿದ್ದರೂ ಬೇಡಿಕೆ ನಿಂತಿಲ್ಲ. ಶ್ರೀರಾಯರ ಸ್ತೋತ್ರ ಪುರಶ್ಚರಣ ಪದ್ಧತಿಯು ನಾಲ್ಕನೆಯ ಮುದ್ರಣವಾಗಿದ್ದರೂ ಐದನೆಯದ್ದಕ್ಕೆ ಅಪಾರ ಕೋರಿಕೆಯಿದೆ.

ಶ್ರೀರಾಯರು ಬರೆದ ’ಹಿರಣ್ಯಗರ್ಭಸೂಕ್ತ ವ್ಯಾಖ್ಯಾನ’ವನ್ನು ಮೊಟ್ಟಮೊದಲ ಬಾರಿಗೆ ವಿದ್ವತ್ ಪ್ರಪಂಚಕ್ಕೆ ಸಮರ್ಪಿಸಿದರು. ಅದರ ಸಂಸ್ಕೃತ ಆವೃತ್ತಿಗೆ ಈಗ 2ನೆಯ ಮುದ್ರಣ, ಕನ್ನಡ ಆವೃತ್ತಿಗೆ 3ನೆಯ ಮುದ್ರಣ. ಅವರ ಲೇಖನಗಳ ಸಂಗ್ರಹ “ಸಂಕಲನ”ಕ್ಕೆ ಇದು ಮೂರನೆಯ ಮುದ್ರಣ. ಶ್ರೀವೇದವ್ಯಾಸರು 2 ನೆಯ ಮುದ್ರಣ, ಶ್ರೀಮಹಾಭಾರತ ಸಾರಸಂಗ್ರಹ 2ನೆಯ ಮುದ್ರಣ, ಚಾತುರ್ಮಾಸ್ಯ ಪ್ರವಚನ ಸಂಗ್ರಹವಾದ “ಅಮೃತ ಸಿಂಚನ”ಕ್ಕೆ 2ನೆಯ ಮುದ್ರಣ, ಶ್ರೀಗುರುಗುಣಸ್ತವನಕ್ಕೆ 2 ನೆಯ ಮುದ್ರಣ, ಶ್ರೀಭೋಗಾಪುರೇಶಾಷ್ಟಕಕ್ಕೆ 3ನೆ ಮುದ್ರಣ, ತುಂಗಾ-ಗಂಗಾ 2ನೆಯ ಮುದ್ರಣ, ಶ್ರೀಸುಶಮೀಂದ್ರತೀರ್ಥಾಭಿವಂದನಮ್ – 5ನೆಯ ಮುದ್ರಣ, ಆದಿಶಿಲಾಮಹಾತ್ಮ್ಯೆ 4 ನೆಯ ಮುದ್ರಣ! ಹೀಗೆ ಅವರ ಎಲ್ಲ ಕೃತಿಗಳು ಜನ ಸಾಮಾನ್ಯರ ಅಚ್ಚುಮೆಚ್ಚಿನ ಕೃತಿಗಳಾಗಿವೆ. ಅಚ್ಚಿಗೆ ಪದೇ ಪದೇ ಹೋಗಬೇಕೆನ್ನುವುದು ಹೆಚ್ಚಿನ ಜನರ ಬಯಕೆ.

ಮೇಲ್ಕಂಡ ಪುಸ್ತಕಗಳಾಲ್ಲಿ ಕೆಲವನ್ನು ಮಂತ್ರಾಲಯ ಶ್ರೀಮಠ, ಶ್ರೀರಾಘವೇಂದ್ರಸಾಹಿತ್ಯ ಪರಿಷತ್, ಶ್ರೀಸುಯಮಿರಾಘವೇಂದ್ರಪ್ರಕಾಶನ, ಶ್ರೀಪರಿಮಳ ಗ್ರಂಥ ಪ್ರಕಾಶನ, ಶ್ರೀವೇದವ್ಯಾಸಾಶ್ರಮ ಟ್ರಸ್ಟ್, ಶ್ರೀಭೋಗಾಪುರೇಶ ದೇವಸ್ಥಾನ ಹೀಗೆ ಹಲವು ಸಂಸ್ಥೆಗಳ ಮೂಲಕ ಪ್ರಕಟಿಸಲಾಗಿತ್ತು ಅವರೆಲ್ಲರ ಪರಿಶ್ರಮವನ್ನು ನೆನಪಿಸಿಕೊಳ್ಳುತ್ತಾ ಅವರ ಸಹಕಾರದಿಂದ ಆ ಕೃತಿಗಳನ್ನೆಲ್ಲಾ ಪುನಃ ನಾವು ಮುದ್ರಿಸುತ್ತಿದ್ದೇವೆ. ಅವರೆಲ್ಲರಿಗೂ ಪ್ರತಿಷ್ಠಾನ ಆಭಾರಿ.

– ರಾಜಾ ಎಸ್. ರಾಜಗೋಪಾಲಾಚಾರ್ಯ
ಅಧ್ಯಕ್ಷರು
ಶ್ರೀಸುಶಮೀಂದ್ರ ಸೇವಾ ಪ್ರತಿಷ್ಠಾನ

ವಿಶೇಶ ಸೂಚನೆ : ಶ್ರೀಸುಶಮೀಂದ್ರತೀರ್ಥ ಪ್ರತಿಷ್ಠಾನದಿಂದ ಪ್ರಕಟಗೊಂಡ ಪುಸ್ತಕಗಳು ಆಕಾರದಲ್ಲಿ ಹಾಗು ಬೆಲೆಯಲ್ಲಿ ಚಿಕ್ಕವು. ಪ್ರತಿಗಳನ್ನು ಕೊಂಡು ಓದಿರಿ. ಇದು ಕೂಡ ಜ್ಞಾನಕ್ಕೆ ಕೊಡುವ ಒಂದು ಗೌರವವೇ ಆಗಿದೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಶ್ರೀ ವಾಮನ ಪುರಾಣ ಪ್ರವಚನ

ವಿಷ್ಣುಪ್ರೀತ್ಯರ್ಥವಾಗಿ ಮಾಡುವ ಹಲವು ವ್ರತಗಳಲ್ಲಿ ಪಯೋವ್ರತವೂ ಒಂದು. ಫಾಲ್ಗುಣಮಾಸದ ಶುಕ್ಲ ಪ್ರತಿಪದೆಯಿಂದ ಪ್ರಾರಂಭಿಸಿ ದ್ವಾದಶಿಯವರೆಗೆ ಇದನ್ನು ಆಚರಿಸಬೇಕು. ಈ ಅವಧಿಯಲ್ಲಿ ವಿಷ್ಣುವಿಗೆ ಅರ್ಪಿತವಾದ ಹಾಲನ್ನು ಒಂದು ಲೋಟದಷ್ಟು ಮಾತ್ರವೇ ಸೇವಿಸಿ ಶ್ರೀವಿಷ್ಣುಚಿಂತನೆ, ಶ್ರೀವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಸದ್ಗ್ರಂಥಗಳ ಪಠಣದ / ಶ್ರವಣದಲ್ಲಿಯೇ ಮಗ್ನರಾಗಿರಬೇಕು. ಆ ಒಂದು ಲೋಟ ಹಾಲು ಮಾತ್ರವೇ ಆಹಾರ. ಮಿಕ್ಕಿದ್ದು ಉಪವಾಸದ ಸಮಯ.

ನಿಷ್ಕಾಮಕರ್ಮವಾಗಿ ಪಯೋವ್ರತವನ್ನು ಆಚರಿಸುವುದು ಉತ್ತಮ ಪಕ್ಷ. ಸಕಾಮವಾಗಿ ಆಚರಿಸುವುದು ಮಧ್ಯಮ ಪಕ್ಷ. ಏನೂ ಆಚರಿಸದೆ ನನ್ನ ಹಾಗೆ ಸುಮ್ಮನೆ ಕೂಡುವುದು ಅಧಮಾತಿ ಅಧಮ ಪಕ್ಷ.

ವಿವಿಧ ಸಲ್ಲಾಭಗಳು ಈ ವ್ರತದಿಂದ ದೊರೆಯುವುದಾದರೂ ಅನೇಕರು ಸತ್ಸಂತಾನದ ಬಯಕೆಯಿಂದ ಈ ವ್ರತವನ್ನು ಆಚರಿಸುತ್ತಾರೆ.

ನನ್ನ ತಾಯಿ ವಿಷ್ಣುಪಾರಮ್ಯದ ಕೆಲವು ಕ್ಲಿಷ್ಟವ್ರತಗಳನ್ನು ಆಚರಿಸಿದ್ದಾರೆ. ಒಂದು ಬಾರಿ ವಿಷ್ಣುಪಂಚಕ ವ್ರತ, ಎರಡು ಬಾರಿ ಭೀಷ್ಮಪಂಚಕ ವ್ರತಗಳನ್ನು ಈಗಾಗಲೇ ವಿಧ್ಯುಕ್ತವಾಗಿ ಆಚರಿಸಿ ಮಂಗಳವನ್ನು ಮಾಡಿದ್ದಾರೆ. ಹಾಗೆಯೇ ಎರಡು ಬಾರಿ ಪಯೋವ್ರತವನ್ನೂ ಮಾಡಿದ್ದಾರೆ. ಅವರ ಮಗನಾಗಿ ಇದು ನನಗೆ ಹೆಮ್ಮೆಯನ್ನು ತರುವಂತಹ ವಿಷಯ. (ನಾನೂ ಇವುಗಳನ್ನು ಆಚರಿಸಬೇಕು ಎಂಬ ಯೋಗ್ಯತೆ ಮೀರಿದ ಬಯಕೆಯೇನೋ ನನ್ನಲ್ಲಿ ಮೂಡುತ್ತದೆ. ಆದರೆ ನನ್ನಲ್ಲಿ ತಮೋಗುಣದ ಮೆರೆದಾಟವೇ ಹೆಚ್ಚಾಗಿ ನಡೆಯುತ್ತಿದೆ, ಹಾಗಾಗಿ ಸಧ್ಯಕ್ಕೆ ಅಮ್ಮನ ನೆರಳಿನಲ್ಲಿಯೇ ಒಂದಿಷ್ತು ಜಂಬ ಪಡುವ ಸನ್ನಾಹ ನನ್ನದು!)

ಹಿಂದಿನ ಬಾರಿ ವ್ರತವನ್ನು ಆಚರಿಸಿದ್ದಕ್ಕಿಂತಲೂ ಈ ಬಾರಿ ಅವರ ವ್ರತ ಹೆಚ್ಚು ಅರ್ಥಪೂರ್ಣವಾಗಿತ್ತು. ಶ್ರೀಶುಕಾಚಾರ್ಯರ ಸಂಪೂರ್ಣ ಕೃಪೆಗೆ ಪಾತ್ರರಾಗಿರುವ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ವ್ರತದ ಅವಧಿಯಲ್ಲಿ ಶ್ರೀವಾಮನ ಪುರಾಣದ ಪ್ರವಚನವು ನಡೆಯಿತು. ಒಂಭತ್ತು ದಿನಗಳ ಕಾಲ ನಡೆದ ಈ ಪವಿತ್ರ ಕಾರ್ಯದಲ್ಲಿ ಅನೇಕ ಮಂದಿ ಸಜ್ಜನರು ವಾಮನಪುರಾಣದ ಕಥಾಮೃತದಲ್ಲಿ ಹರ್ಷದಿಂದ ಮಿಂದೆದ್ದರು. ಶ್ರೀಶ್ರೀಪಾದರಾಜರ ಮಠದ ಆವರಣದಲ್ಲಿ ಈ ಪ್ರವಚನ ನಡೆಯಿತು. ಶ್ರೀಕೇಶವನಿಧಿತೀರ್ಥ ಶ್ರೀಪಾದಂಗಳವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದುದು ಈ ವ್ರತದ ಆಚರಣೆಗೆ ಇನ್ನಷ್ತು ಅರ್ಥವನ್ನು ತಂದು ಕೊಟ್ಟಿತು.

ಅಮ್ಮನ ಈ ವ್ರತವು ಶಾಸ್ತ್ರವತ್ತಾಗಿ ನಡೆಯಲು ಬೆನ್ನೆಲುಬಾಗಿ ನಿಂತವರು ಸಾತ್ವಿಕರಾದ ನನ್ನ ಭಾವನವರಾದ ಮುದುಗಲ್ ವೆಂಕಟನರಸಿಂಹ ಆಚಾರ್ಯರು. ಸಂಪ್ರದಾಯ ಪಾಲನೆ, ಪಾಠ ಪ್ರವಚನ ಹಾಗು ಕಟ್ಟುನಿಟ್ಟಿನ ಪೌರೋಹಿತ್ಯಕ್ಕಾಗಿ ಹೆಸರಾಗಿದ್ದಾರೆ. ಅವರು ಒಂದು ಚೂರೂ ಕ್ರಮತಪ್ಪದಂತೆ ಈ ವ್ರತವನ್ನು ಮಾಡಿಸಿದರು. ಇನ್ನುಳಿದಂತೆ ಅಮ್ಮನಿಗೆ ತೊಂದರೆಯಾಗದ ಹಾಗೆ ಅವಳನ್ನು ಮುಚ್ಚಟೆಯಿಂದ ನೋಡಿಕೊಂಡಿದ್ದು ನನ್ನ ಅಕ್ಕ ಸುಧಮ್ಮ! ಹದಿನೈದು ದಿನ ತನ್ನ ನೌಕರಿಗೆ ರಜೆ ಹಾಕಿ ಅಮ್ಮನ ಜೊತೆಗೆ ಇದ್ದು ತನ್ನ ಕರ್ತವ್ಯವನ್ನು ಮಾಡಿದ್ದಾಳೆ. ಇಬ್ಬರಿಗೂ ನಾವು ಋಣಿಗಳು. ಇವರೀರ್ವರ ಚಿರಂಜೀವ ಐತರೇಯ. ಪ್ರವಚನವನ್ನು ತನ್ನ ಫೋನಿನಲ್ಲೂ ಹಾಗು ತನ್ನ ಇನ್ನೊಬ್ಬ ಸೋದರ ಮಾವನಾದ ವಿಜಯನ ವಿಡಿಯೋ ಕ್ಯಾಮೆರಾದಲ್ಲೂ ರೆಕಾರ್ಡು ಮಾಡಿದ್ದಾನೆ. ಚಿಕ್ಕವನಾದರೂ ಹೆಚ್ಚು ಕಿರಿಕಿರಿಯಾಗದಂತೆ ಪ್ರವಚನವನ್ನು ಮುದ್ರಿಸಿಕೊಂಡಿದ್ದಾನೆ. ಅವನಿಗೆ ಶ್ರೀಹರಿವಾಯುಗುರುಗಳು ಜ್ಞಾನ ಹಾಗು ಭಕ್ತಿಯನ್ನು ಕೊಟ್ಟು ಸಲಹಲಿ.

ವಿಜಯನು ತನ್ನ ಹೆಂಡತಿ ರಚನೆಯೊಂದಿಗೆ ಈ ದಿನಗಳಲ್ಲಿ ಬೆಂಗಳೂರಿನಲ್ಲಿ ಇದ್ದು ತನ್ನ ಕೈಲಾದ ಸೇವೆ ಮಾಡಿದ್ದಾನೆ. ಅವರಿಬ್ಬರಿಗೂ ಈ ಪುಣ್ಯದಲ್ಲಿ ಪಾಲು ಉಂಟು. ಅನಿವಾರ್ಯ(?) ಕಾರಣಗಳಿಂದ ನಾನು ಹಾಗು ನನ್ನ ಯಜಮಾನಿತಿಯಾದ ಶಿರೀಷೆಯು ಈ ಕಾರ್ಯಕ್ರಮದಲ್ಲಿ ಯಾವ ರೀತಿಯಿಂದಲೂ ಪಾಲ್ಗೊಳ್ಳಲು ಆಗಿಲ್ಲ. ಐತರೇಯನು ಮುದ್ರಿಸಿಕೊಂಡಿರುವ ಪ್ರವಚನಗಳನ್ನು ನನ್ನ ಯಜಮಾನಿತಿಯು ತಾಂತ್ರಿಕವಾಗಿ ಸ್ವಲ್ಪ ಸಂಸ್ಕರಿಸಿ ಕೊಟ್ಟಿದ್ದಾಳೆ. ಅವುಗಳನ್ನೇ ಇಲ್ಲಿ ಡೌನ್ ಲೋಡ್ ಮಾಡಲಿಕ್ಕೆ ಕೊಟ್ಟಿರುವುದು. ಹೀಗಾಗಿ ಅವಳೂ ಸಹ ಒಂದಿಷ್ಟು ಪುಣ್ಯಭಾಗಿ.

ಮಂಗಳವು ಮುಗಿದ ನಂತರ ಹೋಗಿ ಅಮ್ಮನನ್ನು ಮಾತನಾಡಿಸಿ ಅವಳು ಮಾಡಿದ ಹದವಾದ ಅಡುಗೆಯನ್ನು ಹೊಟ್ಟೆ ತುಂಬಾ ತಿಂದು ರೈಲಿನಲ್ಲಿ ನಿದ್ದೆ ಮಾಡುತ್ತಾ ವಾಪಸ್ಸು ಬಂದಿದ್ದೇ ನನ್ನ ಸಾಧನೆ.

ನಮ್ಮ ಮನೆಯ ಬಗ್ಗೆ ಅನ್ಯಥಾ ಕೊಚ್ಚಿಕೊಳ್ಳುತ್ತಿದ್ದೇನೆ ಎಂದು ದಯವಿಟ್ಟು ಭಾವಿಸದಿರಿ. ಕಾರ್ಯಕ್ರಮ ಸುಗಮವಾಗಿ ನಡೆಸಲು ಕಾರಣರಾದ ವ್ಯಕ್ತಿಗಳಿಗೆ ಅಭಾರಮನ್ನಣೆ ಮಾಡುವುದು ಶ್ರೇಯಸ್ಕರವಲ್ಲವೇ? ಹಾಗಾಗಿ ಇದನ್ನೆಲ್ಲ ಹೇಳಿದ್ದೇನೆ.

ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ ನಿರರ್ಗಳ ವಾಗ್ಝರಿಯ ಬಗ್ಗೆ ನಾನೇನು ವರ್ಣಿಸಬಲ್ಲೆ? ಅಷ್ಟು ಶಬ್ದಗಳಾದರೂ ನನ್ನಲ್ಲಿ ಎಲ್ಲಿವೆ?. ಅವರು ಮೇರುಸದೃಶರು. ನಾನು ಅದರ ಪದತಲದಲ್ಲಿರುವ ಚಿಕ್ಕ ಮಣ್ಣಕಣ. ಅಷ್ಟು ದೊಡ್ಡವರು ನಮ್ಮಮನೆಯಲ್ಲಿ ಪ್ರವಚನ ಮಾಡಿದರು ಎನ್ನುವುದೇ ನನಗೆ ರೋಮಾಂಚನವಾಗುವ ಸಂಗತಿ. ಅವರ ಬಗ್ಗೆ ನಾನು ವಿವರಣೆ ಕೊಡುತ್ತೇನೆ ಎಂದರೆ ಅದು ಅವಿವೇಕವಾದೀತು. ನಾನು ಏನೇನೋ ಮಾತನಾಡುವುದೂ ಬೇಡ, ನೀವು ಅವುಗಳನ್ನು ಕೇಳಿ ಬೇಸರಿಸಿಕೊಳ್ಳುವುದೂ ಬೇಡ. ಪ್ರವಚನಗಳನ್ನು ಡೌನ್ ಲೋಡ್ ಮಾಡಿಕೊಳ್ಳಿರಿ, ಅಪರೂಪದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಿರಿ.

Sri Vamana Purana Pravachana
Sri Vamana Purana Pravachana

Part 1/9 19.0 MB

Part 2/9 36.7 MB

Part 3/9 46.4 MB

Part 4/9 51.4 MB

Part 5/9 44.2 MB

Part 6/9 40.7 MB

Part 7/9 37.6 MB

Part 8/9 51.2 MB

Part 9/9 43.7 MB

ಬಿ.ಟಿ.ಡಬ್ಲು: ಜ್ಞಾನವನ್ನು ಶೇರ್ ಮಾಡಿರಿ. ಇಲ್ಲದಿದ್ದರೆ ಬ್ರಹ್ಮಪಿಶಾಚದ ಜನ್ಮ ಕಟ್ಟಿಟ್ಟದ್ದು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts