ತುಂಗನಾಥನತ್ತ ಪಯಣ 4/4

ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ತುಂಗನಾಥನ ಆಸುಪಾಸಿನಲ್ಲಿ ಇದ್ದೆ.  ಅತಿ ಅನ್ನುವಷ್ಟು ಉದ್ದವಾದ ಅನುಭವವನ್ನು ಬರೆದದ್ದೂ ಆಯ್ತು.  ಆದರೆ ಕೊನೆಯ ಕಂತನ್ನು ಬರೆದಿಟ್ಟೇ 6 ತಿಂಗಳುಗಳು ಕಳೆದಿವೆ. ಪೋಸ್ಟ್ ಮಾಡಲು ವಿಪರೀತ ಸೋಮಾರಿತನವನ್ನು ಮಾಡಿದೆ. ಈ ಮಧ್ಯದಲ್ಲಿ ಅದೆಷ್ಟು ಕೋಟಿ ಗ್ಯಾಲನ್ನುಗಟ್ಟಲೆ ನೀರು ಮಂದಾಕಿನಿ ಅಲಕನಂದೆಯರಲ್ಲಿ ಹರಿದು ಹೋಗಿದೆಯೋ ಎಂದು ಆ ನೀರನ್ನು ಸಂಗ್ರಹಿಸಿಟ್ಟುಕೊಂಡಿರುವ ಅಲಕನಂದೆಯ ಗಂಡನಾದ ವರುಣನೇ ಬಲ್ಲ . ಅಂತೂ ಇವತ್ತಿಗೆ ಸಮಯ ಬಂದಿತು.

ಹಿಂದಿನ ಕಂತುಗಳು ಭಾಗ 1 | ಭಾಗ 2 | ಭಾಗ 3

ಆನಂದದತ್ತ ಮುನ್ನಡೆ

ತುಂಗನಾಥದ ದಾರಿ

ಜಗದೀಸನು ನನ್ನ ಮುಖದಲ್ಲಿ ಮಿನುಗಿ ಕ್ಷಣಾರ್ಧದಲ್ಲಿ ಮಾಯವಾದ ಆನಂದವನ್ನು ನೋಡಿ ಹೇಳಿದ. “ಸಿತಂಬರ್ ಮೆ ಅಯ್ಯೇಗಾ ತೋ ಖೂಬ್ ಬರಫ್ ಔರ್ ಚೌಖಂಬಾ ದೋನೋ ಮಿಲೇಗಾ”. ಹೂಂಗುಟ್ಟುತ್ತಾ ಮುನ್ನಡೆದೆ. ದೇವಸ್ಥಾನದ ಶಿಖರ ಕಾಣಿಸಿತು. ಮುನ್ನಡೆಯುತ್ತಿದ್ದಂತೆ ಅಲ್ಲಿಯೇ ಒಂದು ತಿರುವಿನಲ್ಲಿ ಒಬ್ಬ ಪಾಂಡಾ ಮಹಾಶಯನು ನನ್ನನ್ನು ನೋಡಿದ. ಅವನಿಗೆ ಕುರಿಯೇ ಸಿಕ್ಕಿತೆಂದು ಭಾವನೆ ಮೂಡಿತೆನಿಸುತ್ತದೆ. ಕುರಿಯನ್ನು ಕೇಳದೆಯೇ ಮಸಾಲೆಯನ್ನು ಅರೆಯಲು ಅಲ್ಲಿಯೇ ಇದ್ದ ಒಬ್ಬ ಅಂಗಡಿಯವನಿಗೆ ಹೇಳಿದ.

ಮದರಾಸಿ ಎಂದು ಕರೆದುಬಿಟ್ಟರೆ ಕಷ್ಟ ಎಂದು ಕುರಿಯೇ “ನಾನು ಬೆಂಗಳೂರಿನವನು” ಎಂದು ಹೇಳಿತು. “ಅಚ್ಛಾ, ತೋ ಆಪ್ ಬೆಂಗಲೌರ್ ಸೆ ಹೈ” ಎನ್ನುತ್ತಾ ಪೂಜಾಸಾಮಾಗ್ರಿಗಳನ್ನು ಹಿಡಿದುಕೊಂಡು ಹಿಂಬಾಲಿಸಲು ಅಪ್ಪಣೆ ಮಾಡಿ ಹೊರಟ. ಬ್ಯಾ ಬ್ಯಾ ಎನ್ನಲೂ ಆಗದೆ ಕುರಿಯು ಹಿಂಬಾಲಿಸಿತು. ಒಂದು ರೀತಿ ಲಾಭವೇ ಆಯಿತು. ಆ ಪುರೋಹಿತನು “ಇದು ಬದರಿಗೆ ಹೋಗುವ ಒಳದಾರಿ” ಎಂದು ಒಂದು ಕಾಲ್ದಾರಿಯನ್ನು ತೋರಿಸಿದ.ಅಲ್ಲಿಂದ ಒಂದು ೧೦-೧೫ ಮೆಟ್ಟಿಲುಗಳನ್ನೇರಿದರೆ ತುಂಗನಾಥನ ಮಂದಿರವನ್ನು ತಲುಪುತ್ತೇವೆ.

ತುಂಗನಾಥ – ಗೋಪೇಶ್ವರದ ಒಳ ದಾರಿ

ಈ ಬೆಟ್ಟದ ಮೇಲೆ 12073 ಅಡಿಗಳ ಎತ್ತರದ ಭಾಗದಲ್ಲಿ ಇದ್ದುದರಲ್ಲಿಯೇ ಒಂದು ಸಮತಟ್ಟಾದ ನೆಲದ ಮೇಲೆ ತುಂಗನಾಥನ ಮಂದಿರವನ್ನು ನಿರ್ಮಿಸಲಾಗಿದೆ. ಮಂದಿರವೆಂದರೆ ಬದರಿನಾಥದಷ್ಟು ದೊಡ್ಡದೇನಲ್ಲ. ಪುಟ್ಟ ದೇಗುಲ ಇದು. ಗಾಂಧಾರ ಶೈಲಿಯ ಸರಳಗೋಪುರ, ಅದರ ಕೆಳಗೆ ಅದಕ್ಕಿಂತಲೂ ಸರಳವಾಗಿ ಜೋಡಿಸಿದ ಹಾಸುಗಲ್ಲುಗಳ ಒಂದು ಕೋಣೆಯೇ ಮಂದಿರ. ಇಷ್ಟೆ ಈ ಮುದ್ದಾದ ಗುಡಿಯ ಕಟ್ಟಡ. ಗರ್ಭಗುಡಿಗೂ ಅದರ ಮುಂದಿರುವ ಮಂಟಪಕ್ಕೂ ಹೆಚ್ಚಿನ ಅಂತರವೇನಿಲ್ಲ. ಮಧ್ಯ, ಮೇಲ್ಭಾಗದಲ್ಲಿ ತೊಲೆಯಂತಹ ಒಂದು ಶಿಲೆ ಇದೆ. ಅದರ ಹಿಂಭಾಗ ಗರ್ಭಗುಡಿ, ಮುಂಭಾಗವೇ ಮಂಟಪ. ಇವಿಷ್ಟೇ ತುಂಗನಾಥನ ಸ್ಥಿರಾಸ್ತಿ. “ನಿಮ್ಮ ಆಸ್ತಿಯನ್ನು ತೆಗೆದುಕೊಂಡು ನಾನೇನು ಮಾಡಲಿ, ನನ್ನ ಹಿಂದೆ ಮುಂದೆಲ್ಲ ಜಗನ್ನಾಥನೇ ಕೊಟ್ಟಿರುವ ಅಮಲವಾದ ಹಿಮಾಲಯವೇ ಇರುವಾಗ” ಎನ್ನುತ್ತಿದ್ದಾನೆ ತುಂಗನಾಥ. ಅದ್ಭುತವಾದ ಪ್ರಕೃತಿಯದು. ಎತ್ತರದಿಂದ ನೋಡಿದಾಗ ಹಿಮಾಲಯವು ಚೆನ್ನಾಗಿ ಕಾಣುತ್ತದೆ ಎಂದು ಎಲ್ಲರಿಗಿಂತ ಎತ್ತರದಲ್ಲಿ ತಾನೇ ಕುಳಿತುಕೊಂಡಿದ್ದಾನೆ. ಹೌದು. ಇದು ಜಗತ್ತಿನ ಅತಿ ಎತ್ತರದಲ್ಲಿರುವ ಶಿವಾಲಯ.

ಮನೋನಿಯಾಮಕ ತುಂಗನಾಥನ ಮನೆಯಿದು.

ಸ್ಥಳೀಯ ಚರಿತ್ರೆ.

ಹೆಚ್ಚಿನೆಡೆಗಳಲ್ಲಿ ಹೇಳುವಂತೆ ಇಲ್ಲಿಯೂ ಮಹಾಭಾರತಕ್ಕೆ ತಾಗಿರುವಂತಹ ಒಂದು ಕಥೆಯನ್ನು ಹೇಳುವರು. ಆದರೆ ಪ್ರಾಜ್ಞರಿಗೆ ಈ ಕಥೆಯು ರುಚಿಸದು. ಇದು ಮಹಾಭಾರತದ ಪ್ರಕ್ಷಿಪ್ತವೇ ಆಗಿರಬೇಕೆಂದು ನನ್ನ ಭಾವನೆ.

ಪಾಂಡವರು ಸ್ವಬಾಂಧವರ ಹತ್ಯೆಯನ್ನು ಮಾಡಿ ರಾಜ್ಯವನ್ನೇನೋ ಪಡೆದುಕೊಂಡರು. ಆದರೆ ಅದರೊಂದಿಗೆ ಪಾಪವು ಕೂಡ ಸಂಚಯವಾಯಿತು. “ಆ ಪಾಪದ ನಿವಾರಣೆಗಾಗಿ ರುದ್ರನ ಮೊರೆ ಹೋಗಿರಿ” ಎಂದು ಕುಲದ ಹಿರಿಯರಾದ ಭಗವಾನ್ ವೇದವ್ಯಾಸರು ಹೇಳಿದರು. ಅದರಂತೆ ಅವರಲ್ಲೆರೂ ರುದ್ರನನ್ನು ಪ್ರಾರ್ಥಿಸಲು ಕೈಲಾಸಕ್ಕೆ ಬಂದರು. ಆದರೆ ರುದ್ರದೇವರಿಗೆ ಈ ಪಾಪಭರಿತರ ಸಹವಾಸ ಬೇಕಿದ್ದಿಲ್ಲ. ಹಾಗಾಗಿ ಎತ್ತಿನ ರೂಪವನ್ನು ಧರಿಸಿ ಗುಪ್ತವಾಗಿ ಬೇರೆ ಸ್ಥಳದಲ್ಲಿ ಅಡಗಿಕೊಂಡರು (ಗುಪ್ತಕಾಶಿ ಎಂದು ಈಗ ಅದನ್ನು ಕರೆಯುತ್ತಾರೆ). ಆದರೂ ಪಾಂಡವರು ರುದ್ರದೇವರನ್ನು ಬಿಡದೆ ಬೆಂಬತ್ತಿದರು. ಕೊನೆಗೆ ಎತ್ತಿನ ರೂಪದಲ್ಲಿಯೇ ಅವರನ್ನು ಹಿಡಿದುಕೊಂಡರೆ ಅವರು ತಮ್ಮ ಅಂಗಾಗಗಳನ್ನೇ ಕಳಚಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪ್ರಕಟಗೊಂಡರು. (ಕೆಲವರು ಎಮ್ಮೆಯ ರೂಪದಲ್ಲಿ ಎಂದೂ ಹೇಳುವುದುಂಟು) ಆ ಐದು ಸ್ಥಳಗಳೇ ಪಂಚ ಕೇದಾರಗಳು. ಈ ಐದೂ ಸ್ಥಳಗಳಲ್ಲಿ ಪಾಂಡವರು ರುದ್ರದೇವರಿಗಾಗಿ ಮಂದಿರವನ್ನು ನಿರ್ಮಿಸಿದರು ಎಂದು ಈ ಮಹಾತ್ಮ್ಯೆಯು ಹೇಳುತ್ತದೆ. ಹೀಗೆ ಬಾಹುಗಳು ಪ್ರಕಟವಾದ ಜಾಗವೇ ತುಂಗನಾಥ.

ಮಂದಿರಗಳನ್ನು ಪಾಂಡವರೇ ನಿರ್ಮಿಸಿರಬಹುದು, ಅವರು ರುದ್ರದೇವರನ್ನು ಕುರಿತು ತಪಸ್ಸನ್ನು ಮಾಡಿರಲೂ ಬಹುದು. ಹೋಗಿ ರುದ್ರದೇವರನ್ನು ಒಲಿಸಿ ಪಾಶುಪತವನ್ನು ಪಡೆ ಎಂದು ಅರ್ಜುನನಿಗೆ ಶ್ರೀಕೃಷ್ಣನೇ ಹೇಳಿರುವುದು ಇದೆ. ಆದರೆ ಭೀಮಸೇನದೇವರು ರುದ್ರದೇವರನ್ನು ಕುರಿತು ತಪಸ್ಸು ಮಾಡಿರುವುದರ ಬಗ್ಗೆ ಮಹಾಭಾರತದ ಶುದ್ಧಪಾಠ ಏನು ಹೇಳುತ್ತದೋ ನೋಡಬೇಕು. ಇತರ ಪಾಂಡವರೂ ತಪಸ್ಸು ಮಾಡಿದ್ದಾರೆ ಎಂದೇ ಭಾವಿಸೋಣ. ಆದರೆ ಪಾಪಲೇಪವಾಯಿತು ಎನ್ನುವ ಅಭಿಪ್ರಾಯ ವೇದವ್ಯಾಸರಿಗೆ ಅಸಮ್ಮತವೇ ಆಗುತ್ತದೆ. ಯಾಕೆಂದರೆ “ಯುದ್ಧವನ್ನು ರಾಜ್ಯದಾಹದಿಂದ ಮಾಡದೆ, ಕೇವಲ ಅಧರ್ಮವನ್ನು ಶಿಕ್ಷಿಸಬೇಕೆಂಬ ನಿನ್ನ ಕರ್ತವ್ಯರೂಪದಿಂದ ಮಾಡು, ಲಾಭಾಲಾಭ ಜಯಾಜಯಗಳ ಚಿಂತೆಯನ್ನು ನನಗೆ ಬಿಡು. ನೀನು ಯುದ್ಧ ಮಾಡುತ್ತಿರುವವನು ಎಂದರೆ ಅದು ನಿನ್ನ ಅಜ್ಞಾನ. ವಾಸ್ತವವಾಗಿ ನಾನು ನಿನ್ನೊಳಗೆ ಇದ್ದು ಯುದ್ಧ ಮಾಡಿಸುತ್ತಿದ್ದೇನೆ” ಎಂದು ಹೃದಯಕ್ಕೆ ಮುಟ್ಟುವಂತೆ ತಿಳಿಹೇಳಿ, ಕೃಷ್ಣನೇ ಅಲ್ಲವೇ ಯುದ್ಧ ಮಾಡಿಸಿದ್ದು? “ಕರ್ತ್ಯವ್ಯಪ್ರಜ್ಞೆಯಿಂದ ಮಾಡಿದಾಗ ಪಾಪದ ಲೇಪವೆಲ್ಲಿಯದು” ಎಂದು ಕೂಡ ಅವನೇ ಹೇಳಿರುವಾಗ ಪಾಂಡವರಿಗೆ ಪಾಪವು ಬರಲಿಲ್ಲ ಎಂದೇ ಆಗುತ್ತದೆ. ಇತರರು ತಪಸ್ಸು ಮಾಡಿದರೇನೋ ಆದರೆ ಭೀಮಸೇನರಾಯರು ಈ ಉದ್ದೇಶದಿಂದ ಖಂಡಿತಾ ತಪಸ್ಸು ಮಾಡಲಾರರು. ಅವರಿಗೆ ಪಾಪದ ಲೇಪವು ಸರ್ವಾಥಾ ಆಗದು. ಈ ಒಂದು ಅಂಶವು ಈ ಸ್ಥಳ ಮಹಾತ್ಮ್ಯೆಯಲ್ಲಿ ಬಲವಂತವಾಗಿ ಸೇರಿಸಲ್ಪಟ್ಟಿದೆ ಅಷ್ಟೆ. ಆದರೆ ಸ್ಥಳೀಯರಿಗೆ ಈ ವಾದವು ಹೇಗೆ ರುಚಿಸೀತು? ವಾದಿಸಿದರೆ ನಾವು ಏಟು ತಿನ್ನಬೇಕಾದೀತು. ನಾವು ಕುರಿಗಳಾಗುವುದಂತೂ ಸರಿಯೇ, ಆದರೆ ಏಟನ್ನೂ ತಿಂದು ಬಾಲವನ್ನೂ ತಿರುಚಿಸಿಕೊಳ್ಳುತ್ತಾಇಲ್ಲಿಯೇ ಜನರನ್ನು ಹತ್ತಿಸಿಕೊಂಡು ಓಡಾಡುವ ಕತ್ತೆಗಳೂ ಆಗಬಾರದು ಎನ್ನುವ ಕಳಕಳಿಯಿಂದಲೇ ಆಚಾರ್ಯರು ಕೇದಾರದ ದರ್ಶನವನ್ನು ನಿಷೇಧಿಸಿದರೆನಿಸುತ್ತದೆ. ಕಮ್ಯುನಿಸ್ಟರೂ, ರ‍್ಯಾಶನಲಿಸ್ಟುಗಳೂ ಹೆಚ್ಚಾಗಿರುವ ಕೇರಳ, ಆಂಧ್ರ ಹಾಗು ಬಂಗಾಲದ ಕೆಲಭಾಗದ ಭೇಟಿಯನ್ನು ನಿಷೇಧಿಸಿರುವುದೂ ಕೂಡ ಇದೇ ಅಭಿಪ್ರಾಯದಲ್ಲಿ ಇರಬೇಕು.

“ಹಾಗಿದ್ದರೆ ನೀನ್ಯಾಕೆ ಈ ಊರಿಗೆ ಹೋದೆ” ಎಂದು ನೀವು ಕೇಳಬಹುದು. ನನ್ನ ಸಮಾಧಾನವಿಷ್ಟು. ಆಚಾರ್ಯರು ಕೇದಾರದ ದರ್ಶನಕ್ಕೆ ಮಾತ್ರ ನಿಯಂತ್ರಣವನ್ನು ಹೇರಿದ್ದಾರೆ, ತುಂಗನಾಥಕ್ಕೆ ಅಲ್ಲವಲ್ಲ ಎನ್ನುವ ಅಭಿಪ್ರಾಯದಲ್ಲಿ ನಾನು ಹೋಗಿಬಂದೆ. ಒಂದು ವೇಳೆ ಇದೂ ಕೂಡ ತಪ್ಪಾದಲ್ಲಿ ಮಹಾದೇವರೇ ನನ್ನ ಮನಸ್ಸನ್ನು ಶುದ್ಧಿಮಾಡಲಿ ಎಂದು ನೈಜವಾದ ಪ್ರಾರ್ಥನೆಯನ್ನು ಮಾಡುತ್ತೇನೆ.

ಶುದ್ಧಿ ಎನ್ನುವ ಮಾತು ಬಂದಾಗ ಈ ಸ್ವಾರಸ್ಯವು ನೆನಪಾಯಿತು. ತುಂಗನಾಥದ ಸುತ್ತಮುತ್ತಲಿರುವ ಪರಿಸರವು ಸ್ಪಟಿಕಸದೃಶವಾದ ಶುದ್ಧತೆಯನ್ನು ಹೊಂದಿದೆ. ಮಾನವಸ್ಪರ್ಷಕ್ಕೆ ಹೊರತಾದ ಪರಿಶುದ್ಧತೆಯು ಸದಾ ಇಲ್ಲಿ ನೆಲೆಮಾಡಿರುತ್ತದೆ. ಸನ್ನಿಧಿಯ ಸುತ್ತಮುತ್ತ ಸದಾಕಾಲ ಮೋಡಗಳ ಆಟ ನಡೆದೇ ಇರುತ್ತದೆ. ನಾನು ಹೋದಾಗ ಗುಡಿಯ ಹೊರಗೆ ಸುಮಾರು ೨೫-೩೦ ತಾಮ್ರದ ತಂಬಿಗೆಗಳನ್ನು ಇಟ್ಟಿದ್ದರು. ಆ ಎಲ್ಲ ತಂಬಿಗೆಗಳೂ ನೀರಿನಿಂದ ತುಂಬಿದ್ದವು. ಯಾರೋ ಹಿಡಿದಿಟ್ಟ ನೀರಲ್ಲ ಅದು. ಮೋಡಗಳ ಕಣಗಳಿಂದ ತಾವಾಗಿಯೇ ಬಸಿದು ತುಂಬಿರುವಂತಹವು!. ನೋಡಲು ಮಜವಾಗಿ ಕಂಡಿತು. ಅದರ ಹಿಂದೆಯೇ ನಮ್ಮ ಅಕ್ಕ ಮತ್ತು ಭಾವ ಬಂದಿದ್ದರೆ! ಎಂದೆನಿಸಿತು. ಇದಕ್ಕಿಂತಲೂ ಮಡಿಯ ನೀರು ಎಲ್ಲಿ ಸಿಕ್ಕೀತು ಅವರಿಗೆ? ನೀರಿಗೆ ಇರಲಿ, ಅವರಿಗೂ ಮೈಲಿಗೆ ಆಗುವ ಭಯವೇ ಇಲ್ಲ ಇಲ್ಲಿ. ಯಾರಾದರೂ ಎಷ್ಟು ಬಾರಿ ಮುಟ್ಟಿದರೂ ಮರುಕ್ಷಣದಲ್ಲಿಯೇ ಮೋಡಗಳ ಮಧುಪರ್ಕ ರೆಡಿಯೇ ಇರುತ್ತವೆ ಅವರನ್ನು ಮೀಯಿಸಲು! ಭಾವನ ಜಪಯಜ್ಞಕ್ಕೂ ಇದು ಅತ್ಯಂತ ಶ್ರೇಯಸ್ಕರವಾದ ಸ್ಥಳ. ಅಕ್ಕನಿಗಂತೂ ಪಾತ್ರೆ ತೊಳೆಯಲು ಯಥೇಚ್ಛವಾಗಿ ನೀರು, ಗ್ವಾಮಾ ಹಚ್ಚಲಿಕ್ಕೆ “ಯಥಾ+ಉಚಿತ” ಷಗಣಿಯೂ ಸಿಗುವುದು. ಯಾರೋ ಮುಟ್ಟಿದರು ಎನ್ನುವ ಸಂಶಯಕ್ಕೆ ಆಸ್ಪದವೇ ಇಲ್ಲ. “ಅಯ್ಯೋ ಇಲ್ಲಿ ಮನೆ ಮಾಡುವುದನ್ನು ಬಿಟ್ಟು ಚಾಮರಾಜಪೇಟೆಯಲ್ಲಿ ಮಾಡಿದ್ದಾರಲ್ಲ” ಎಂದು ಕ್ಷಣಕಾಲ ಮರುಗಿದೆ.

ತುಂಗನಾಥನ ತಂಬಿಗೆಗಳು

ಸನ್ನಿಧಾನ ವಿಶೇಷ

ದೇವರ ಸನ್ನಿಧಿಯಲ್ಲಿ ಒಳಗೆ ಹೆಜ್ಜೆ ಇಡುತ್ತಿದ್ದ ಹಾಗೆಯೇ ಹೇಳಲಾಗದ ಒಂದು ದೈವಿಕ ಅನುಭವವಾಯಿತು. ಕೇವಲ ವೈಬ್ರೇಶನ್ ಎಂದು ಹೇಳಿ ಅದಕ್ಕೆ ಅಪಚಾರ ಮಾಡಲಾರೆ. ಸಹಸ್ರಾರು ವರ್ಷಗಳ ದೈವೀ ಮಹತ್ವ ಅಲ್ಲಿ ಕೆನೆಗಟ್ಟಿದೆ ಎಂದು ಹೇಳಿದರೂ ಕಡಿಮೆಯೇ ಆದೀತು. ಸನ್ನಿಧಾನದ ಪ್ರಾಚೀನ ಶಕ್ತಿ ನನಗಂತೂ ಅನುಭವಕ್ಕೆ ಬಂತು. ಬಹಳ ಮಂಜುಲವಾದ ಪ್ರಕೃತಿಯಿಂದ ಕೂಡಿರುವ ಸನ್ನಿಧಾನವದು. ದೇಗುಲದ ಒಳಗೆ ನೀರು ಒಸರಿ ಒಸರಿ ನೆಲವೆಲ್ಲ ಒದ್ದೆಯಾಗಿತ್ತು. ಶಿವಲಿಂಗವು ವೈಪರೀತ್ಯದಿಂದ ಕೂಡಿರುವ ಹವಾಮಾನದ ಮಧ್ಯ ಇರುವುದರಿಂದಲೋ ಏನೋ ಒರಟಾಗಿ ಇರುವುದು. ಆದರೆ ಶಿಥಿಲವೇನಲ್ಲ. ಇಲ್ಲಿಆಗಮ ರೀತಿಯ ಪೂಜೆ ನಡೆಯುವುದು. ಸನ್ನಿಧಿಯ ಮಹಿಮೆಯು ಸ್ಪಷ್ಟವಾಗಿ ಗೋಚರವಾಗುವಂತೆ ಇದೆ. ನನಗಂತೂ ಹೇಳಲಾಗದಂತಹ ಸಂತೋಷವಾಯಿತು. ಅಷ್ಟೆತ್ತರಕ್ಕೆ ನಡೆದುಕೊಂಡು ಬಂದ ಶ್ರಮವೆಲ್ಲ ಪರಿಹಾರವಾಗುವಂತೆ ಇದೆ ಈ ಸನ್ನಿಧಿ. ಪಾಂಡಾ ಮಹಾರಾಜರನ್ನು ನೋಡಿ ಲಘುವಾಗಿ ಹೋಗಿದ್ದ ದೇಹವು ಮತ್ತೆ ರಘುವಾಗಿದ್ದು ಈ ಅಘೋರನ ದರ್ಶನವಾದಾಗಲೇ. ಅಪ್ಪ ಅಮ್ಮನ ಸಂಸ್ಕಾರಬಲದಿಂದಲೋ ಏನೋ ಆಚಾರ್ಯರು ಹೇಳಿಕೊಟ್ಟಿರುವ “ಧ್ಯೇಯಃ ಪಂಚಮುಖೋರುದ್ರೋ ಶುದ್ಧಸ್ಪಟಿಕಾಮಲಕಾಂತಿಮಾನ್….” ಶ್ಲೋಕವು ತಾನೇ ತಾನಾಗಿ ಹೃದಯದಲ್ಲಿ ಮೂಡಿತು. ಪುಣ್ಯಕ್ಕೆ ಆ ಸ್ಥಳೀಯ ಪಾಂಡಾ ಹಾಗು ದೇವಸ್ಥಾನದ ಅರ್ಚಕರು ಏನೂ ಕಿರಿಕಿರಿ ಮಾಡದೆ ಸಂತಸದಿಂದಲೇ ಮನಸ್ಸಿಗೆ ಬಂದಷ್ಟು ಹೊತ್ತು ಧ್ಯಾನಮಾಡಲು ಅನುವು ಮಾಡಿಕೊಟ್ಟರು. ನಂತರ ಅವರ ಸಮಾಧಾನಕ್ಕೊಂದಿಷ್ಟು ಪೂಜೆಯನ್ನೂ ಕೂಡ ಸಲ್ಲಿಸಿದ್ದಾಯಿತು.

ಶಿವಲಿಂಗದ ಹಿಂದೆ ಆದಿಶಂಕರರ ಚಪ್ಪಟೆಗಲ್ಲಿನ ಮೂರ್ತಿ, ಶಿವಪಂಚಾಯತನದ ಒಂದು ಪ್ರತಿಮೆಯು ಇರುವುವು. ಚಿಕ್ಕಪುಟ್ಟ ದೇವರುಗಳದ್ದೂ ಕೆಲವು ಮೂರ್ತಿಗಳನ್ನು ತೋರಿಸಿದರು ಪೂಜಾರರು. ಆದರೆ ನನ್ನ ಮನಸ್ಸು ಅಲ್ಲಿಯೇ ಇದ್ದ ಫಳಫಳ ಹೊಳೆಯುತ್ತಿದ್ದ ತಾಮ್ರದ ಪ್ರತಿಮೆಯೊಂದರ ಮೇಲೆ ನೆಟ್ಟಿತ್ತು. “ಯೇ ಭಗ್ವಾನ್ ಬೇದ್ಬ್ಯಾಸ್ ಜೀ ಹೈ” ಎಂದು ಪರಿಚಯಿಸಿದರು. ಚಿತ್ತಾಕರ್ಷಕವಾದ ಇದನ್ನು ಇವರು ವೇದವ್ಯಾಸದೇವರದ್ದೆಂದು ಹೇಳುತ್ತಾರೆ. ಅನುಸಂಧಾನ ಹಾಗೆ ಇದ್ದಲ್ಲಿ ಖಂಡಿತವಾಗಿಯೂ ಅದು ವೇದವ್ಯಾಸರೇ ಆಗಬಹುದು. ತೊಂದರೆಯೇನಿಲ್ಲ. ಆದರೆ ಪ್ರತಿಮೆಯ ರಚನೆಯನ್ನು ನೋಡಿದಾಗ ಮತ್ತೊಂದು ಜಿಜ್ಞಾಸೆ ಉಂಟಾಯಿತು. ಶುದ್ಧ ಗಾಂಧಾರಶೈಲಿಯ, ಧ್ಯಾನಮುದ್ರೆಯಲ್ಲಿ ಕುಳಿತಿರುವ, ಗುಂಗುರುಗೂದಲಿನ, ಯುವಾವಸ್ಥೆಯಲ್ಲಿರುವ ಯೋಗಿಯೊಬ್ಬನ ಪ್ರತಿಮೆಯದು. ಪ್ರತಿಮೆಯ ಹಿಂದೆ ಸುಂದರವಾದ ಪ್ರಭಾವಳಿಯೂ ಇದ್ದ ನೆನಪು ಇದೆ. ನೂರಾರು ವರ್ಷಗಳ ಹಿಂದೆ ಇಲ್ಲೆಲ್ಲ ಬೌದ್ಧರ ಪ್ರಭಾವ ಇತ್ತು ಎನ್ನುವ ಹಿನ್ನೆಲೆಯಲ್ಲಿ ಬೌದ್ಧಯೋಗಿ ಎಂತ ಊಹಿಸಿದೆ. ಆದರೆ ಪ್ರಾಮಾಣಿಕವಾಗಿಯೇ ಹೇಳಬೇಕೆಂದರೆ ಇದು ಜೈನರ ಮಹಾವೀರನ ಪ್ರತಿಮೆಯಂತೆ ಕಾಣುತ್ತದೆ.

ನಮಗೆ ಮಧ್ವವಿಜಯವು ವಿವರಿಸುವ ಪ್ರಕಾರ ವೇದವ್ಯಾಸರು ಅಪ್ರತಿಮ ಸೌಂದರ್ಯವುಳ್ಳವರೇ. ಆದರೆ ಜಟಾಧಾರಿಯಾಗಿಯೂ, ಗಡ್ಡವನ್ನು ಬಿಟ್ಟವರೂ, ಯೋಗಪಟ್ಟಿಕೆಯನ್ನು ಕಟ್ಟಿಕೊಂಡವರೂ ಆದ ಸ್ವರೂಪದಲ್ಲಿ ಕಾಣಿಸುವವರು. ಮಹಾಭಾರತದ ಪ್ರಕಾರ ಧೃತರಾಷ್ಟ್ರ ಹುಟ್ಟಿದಾಗ ವ್ಯಾಸರ ವಯಸ್ಸು ೬೬೦ವರ್ಷಗಳು!. (ವ್ಯಾಸಃ ಷಟ್ಶತವರ್ಶೀಯಃ ಧೃತರಾಷ್ಟ್ರಮಜೀಜನತ್) ಇಷ್ಟಾದರೂ ಇವರು ಮುದುಕರಲ್ಲ, ನಿಜ. ಆದರೆ ಯುವಕನಂತೆ ಅಂತೂ ಇವರ ಚಿತ್ರಣವಿಲ್ಲ. ಹಾಗೆಂದು ಹೇಳಿ ಈ ಚಿತ್ರಣಕ್ಕಿಂತಲೂ ವಿಭಿನ್ನವಾದ ಸ್ವರೂಪದಲ್ಲಿ ಅವರನ್ನು ನಾವು ಕಾಣುವುದು ಅಸಾಧ್ಯ ಎಂದು ಹೇಳಲಾಗದು. ಚಿಕ್ಕ ಮಗುವಿನಂತೆಯೂ ವ್ಯಾಸದೇವನನ್ನು ಪೂಜಿಸಬಹುದು. ಆದರೆ ಶಾಸ್ತ್ರಗಳು ಹೇಳಿರುವುದಕ್ಕಿಂತ ಬೇರೆ ರೀತಿಯಲ್ಲಿ ಚಿಂತನೆ ಮಾಡುವಷ್ಟು ಭಕ್ತಿ ಹಾಗು ಜ್ಞಾನವಿದ್ದರೆ ಮಾತ್ರ ಅದು ಸಾಧ್ಯವೇನೋ. ಒಂದು ವೇಳೆ ಶಿಲ್ಪಕಾರನು ಈ ಒಂದು ಅನುಸಂಧಾನದಲ್ಲಿಯೇ ಹೀಗೆ ವಿಭಿನ್ನವಾದರೀತಿಯಲ್ಲಿ ವೇದವ್ಯಾಸದೇವರ ಪ್ರತಿಮೆಯನ್ನು ನಿರ್ಮಿಸಿರುವುದೇ ಆದಲ್ಲಿ ತುಂಗನಾಥದಲ್ಲಿ ಇರುವ ವ್ಯಾಸರ ಪ್ರತಿಮೆಯು ಅಪೂರ್ವವಾದುದು ಎನ್ನುವುದರಲ್ಲಿ ಸಂದೇಹವಿಲ್ಲ. ಆಕರ್ಷಕವಾದ ಆ ಪ್ರತಿಮೆಯ ಫೋಟೋ ತೆಗೆದುಕೊಳ್ಳಲು ಪರವಾನಗಿ ದೊರೆಯಲಿಲ್ಲ. ಈ ಒಂದು ದರ್ಶನದ ಕಾರಣರಾದ ಶ್ರೀಗುರುರಾಜರ ಅಂತರ್ಯಾಮಿಯಾದ ಶಿವಾಂತರ್ಯಾಮಿ ಮಧ್ವರ ಹೃದಯವಾಸಿಯಾದ ಶ್ರೀವೇದವ್ಯಾಸದೇವರನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಅಲ್ಲಿಂದ ಹೊರಬಂದೆ.

ಸೇವೆ ಇತ್ಯಾದಿ

ದೇವಾಲಯದಲ್ಲಿ ರುದ್ರಾಭಿಷೇಕ, ಪಂಚಾಮೃತ, ನೈವೇದ್ಯ ಇತ್ಯಾದಿ ಸೇವೆಗಳನ್ನು ನಡೆಸುತ್ತಾರೆ. ಪಕ್ಕದಲ್ಲಿಯೇ ಪಾಕಶಾಲೆಯಿದೆ. ಅದಕ್ಕೆ ಹೊಂದಿಕೊಂಡೇ ಊಟದ ಹಜಾರವೂ ಇದೆ. ಇಷ್ಟವಿದ್ದವರು ಪ್ರಸಾದವನ್ನು ಸ್ವೀಕಾರ ಮಾಡಿಬರಬಹುದು.

ಹಿಮಾಲಯದ ಎಲ್ಲ ದೇವಸ್ಥಾನಗಳು ಚಳಿಗಾಲದವರೆಗೆ ಮಾತ್ರ ತೆರೆದಿರುತ್ತವೆ. ಚಳಿಗಾಲದ ಪ್ರಾರಂಭದಲ್ಲಿ ಮೂಲವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಿ, ಅಖಂಡ ದೀಪದಸ್ಥಾಪನೆ ಮಾಡಿ ತೆರೆಯನ್ನುಎಳೆಯುತ್ತಾರೆ. ಇದಕ್ಕೆ ಪಟಬಂಧ್ ಎನ್ನುತ್ತಾರೆ. ಅಲ್ಲಿಂದ ಮುಂದೆ ಆರು ತಿಂಗಳುಗಳ ಕಾಲ ಹಿಮಬೀಳದ ಜಾಗದಲ್ಲಿ ದೇವರ ಉತ್ಸವವಿಗ್ರಹಕ್ಕೆ ಪೂಜೆ ನಡೆಯುತ್ತದೆ. ಚೋಪಟಾದ ಸಮೀಪ ಇರುವ ಮಕ್ಕುಮಠ್ ಎನ್ನುವ ಊರಿನಲ್ಲಿ ನಮ್ಮ ಈ ತುಂಗರಾಯನ ಉತ್ಸವವಿಗ್ರಹವು ಚಳಿಗಾಲದ ಪೂಜೆಯನ್ನು ಸ್ವೀಕರಿಸುತ್ತವೆ.

ತುಂಗನಾಥ ಮಾತ್ರವಲ್ಲ, ಈ ಪ್ರಾಂತ್ಯದಲ್ಲಿರುವ ಎಲ್ಲ ಪ್ರಸಿದ್ಧ ದೇಗುಲಗಳ ಆಡಳಿತವು ಕೇದಾರನಾಥ-ಬದರೀನಾಥ ಸೇವಾ ಸಮಿತಿಗೆ ಒಳಪಟ್ಟಿದೆ. ಈ ದೇವಸ್ಥಾನದ ಬಳಿಯೇ ಒಂದು ಕಲ್ಲಿನ ಮಂಟಪದಲ್ಲಿ ಈ ಸಮಿತಿಯ ಪ್ರತಿನಿಧಿಯೊಬ್ಬರು ಕುಳಿತು ಅಧಿಕೃತವಾಗಿ ದಾನಗಳನ್ನು ಸ್ವೀಕರಿಸಿ ರಸೀದಿಯನ್ನು ಕೊಡುತ್ತಾರೆ. ಮನಸ್ಸಿಗೆ ತೋಚಿದಷ್ಟು ದೇಣಿಗೆಯನ್ನು ಕೊಡಬಹುದು. ಅನ್ನದಾನಕ್ಕಾಗಿ ದಾನ ಸಲ್ಲಿಸುವುದು ಹೆಚ್ಚಿನ ಜನರಿಗೆ ವಾಡಿಕೆ.

ಮುಖ್ಯ ಮಂದಿರದ ಹೊರಗೆ ಪಾರ್ವತೀದೇವಿಗೆ ಒಂದು ಆಲಯವುಂಟು. ಇದರ ಮುಂದೆ ಚಿಕ್ಕಚಿಕ್ಕ ಕಪಾಟುಗಳಂತಹ ಗುಡಿಗಳನ್ನು ನಿರ್ಮಿಸಿ ಕ್ಷೇತ್ರಪಾಲಕರು ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ತುಂಗನಾಥನ ಬಂಟನಾದ ಭೂತನಾಥನಿಗೊಂದು ಸ್ವಲ್ಪ ದೊಡ್ಡ ಗುಡಿಯುಂಟು. ಈ ಎಲ್ಲ ದೇವತೆಗಳಿಗೆ ಪೂಜೆಯಾದ ನಂತರ ಒಂದಿಷ್ಟು ಪ್ರಸಾದವನ್ನು ಅಲ್ಲಿಯೇ ಇರುವ ಹಿಮಾಲಯದ ಕಾಗೆಗಳಿಗೆ ಉಣಬಡಿಸುತ್ತಾರೆ. ಈ ಕಾಗೆಗಳ ಗಾತ್ರಮಾತ್ರ ಸ್ವಲ್ಪ ದಂಗುಬಡಿಸುವಷ್ಟು ದೊಡ್ಡದು. ಕೆಲವು ಕಾಗೆಗಳಂತೂ ಹಾರಾಡುತ್ತಿರುವ ಕಪ್ಪು ರಗ್ಬೀ ಚೆಂಡಿನಂತೆ ಕಂಡವು. ಪ್ರಸಾದವನ್ನು ತಿಂದು ತಿಂದು ಹಾಗಾಗಿದ್ದವೋ ಏನೋ ಗೊತ್ತಿಲ್ಲ. ಪ್ರಾಯಶಃ ಚಳಿಗಾಲದ ೬ ತಿಂಗಳು ಏನೂ ಸಿಗದೇ ಇದ್ದರೂ ಈಗ ತಿಂದ ಆಹಾರವನ್ನೇ ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ಕಡಿಮೆ ಆಹಾರದಲ್ಲಿ ಜೀವಿಸಲೆಂದು ಈ ವ್ಯವಸ್ಥೆ ಇದ್ದರೂ ಇರಬಹುದು. ಅಂತೂ ತುಂಗನಾಥನು ಇವುಗಳ ಯೋಗಕ್ಷೇಮವನ್ನೂ ವಹಿಸಿಕೊಂಡಿದ್ದಾನೆ. ಒಂದು ಚಿಕ್ಕ ಮಂಡಕ್ಕಿಚೀಲದ ಗಾತ್ರದ ಒಂದು ಕಾಗೆಯನ್ನು ಸಹ ನೋಡಿದೆ. ದಿಗಿಲುಗೊಂಡ ನನ್ನ ಮುಖವನ್ನು ನೋಡಿ ಪುರೋಹಿತರು “ಯೆ ಹೀ ಹೈ ಕಾಕ್ ಭುಸುಂಡೀ, ಕುಛ್ ಖಿಲಾಯಿಯೇ ಇಸೆ” ಎಂದರು. ಕಾಗೆಗೆ ತಿಂಡಿ ಹಾಕಲು ನಂದೇನೂ ಅಭ್ಯಂತರವಿರಲಿಲ್ಲ. ಆದರೆ ನೈಸರ್ಗಿಕವಾಗಿ ಜೀವಿಸುವ ಇವುಗಳಿಗೆ ಅನೈಸರ್ಗಿಕವಾದ ಬಿಸ್ಕೀಟು ಪಸ್ಕೀಟು ಹಾಕಲು ಮನಸ್ಸೊಪ್ಪಲಿಲ್ಲ. ಆದರೆ ಸುಮ್ಮನೆ ನಿಂತಿದ್ದರೆ ನನ್ನ ಟೋಪಿಯನ್ನೇ ಎಳೆದುಕೊಂಡು ಹೋದರೆ ಕಷ್ಟ ಎಂದು ಮುನ್ನಡೆದೆ.

ಪಾಂಡಾ ಕೇಳಿದ “ಎಲ್ಲಿ ಹೊರಟಿರಿ”?, “ಚಂದ್ರಶಿಲಾ ಪರ್ವತಕ್ಕೆ” ಎಂದೆ. ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ  ಈ ಶ್ಲೋಕವು ಸ-ಮಂಜ-ಸವೇ  ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.

ಚಂದ್ರಶಿಲಾ

ಚಂದ್ರಶಿಲಾ ಎನ್ನುವುದು ಈ ಪರ್ವತದ ತುತ್ತ ತುದಿ. ತುಂಗನಾಥನ ಮಂದಿರದಿಂದ ಅಂದಾಜು ಮತ್ತೊಂದು ಸಾವಿರ ಅಡಿ ಮೇಲೆ ಹತ್ತಿದರೆ ಈ ಸ್ಥಳವು ಸಿಗುತ್ತದೆ. ಅತ್ಯಂತ ದುರ್ಗಮವೇನಲ್ಲ. ರುದ್ರಮನೋಹರವಾಗಿದೆ.. ಕಡಿದಾದ ರಸ್ತೆ, ಚಿಕ್ಕ ಚಿಕ್ಕ ಝರಿಗಳು, ಸಹಸ್ರಾರು ಪುಟ್ಟಪುಟ್ಟ ಹೂವುಗಳ ಮಧ್ಯದಲ್ಲಿ ನಡೆದು ಕೊಂಡು ಹೋಗಬೇಕು. ಹತ್ತಿ ಇಳಿದು ಬರಲು ವಯಸ್ಕರಿಗೆ ಸುಮಾರು ೩+ ಗಂಟೆಗಳ ಅವಕಾಶ ಬೇಕು. ಮುದುಕರು ಕೇವಲ ಹೋಗಬಹುದು ಅಷ್ಟೇ

ಚಂದ್ರಶಿಲಾ ಪರ್ವತದ ತುದಿಗೆ ಹೋಗುವ ದಾರಿ
ಚಂದ್ರಶಿಲಾ ಪರ್ವತದ ತುದಿಗೆ ಹೋಗುವ ದಾರಿ
ಚಂದ್ರಶಿಲಾ ಪರ್ವತದ ತುದಿಗೆ ಹೋಗುವ ದಾರಿ
ಚಂದ್ರಶಿಲಾ ಪರ್ವತದ ತುದಿಯಲ್ಲಿ ಇರುವ ಗಂಗಾ ಮಂದಿರ

ಸಂಪೂರ್ಣ ತುದಿ ಮುಟ್ಟುವ ಮೊದಲು ಎತ್ತರವಾದ ಒಂದು ಸ್ಥಳದಲ್ಲಿ ಗಂಗಾದೇವಿಗೆ ಒಂದು ಪುಟ್ಟ ಮಂದಿರವನ್ನು ನಿರ್ಮಿಸಿದ್ದಾರೆ. ವಾಸ್ತವದಲ್ಲಿ ಇದೇ ಈ ಪರ್ವತದ ಅತಿ ಎತ್ತರದ ಕೇಂದ್ರ. ಇಲ್ಲಿಂದ ಒಂದು ಚೂರು, ಅಂದರೆ ಒಂದು ೨೫ ಹೆಜ್ಜೆ ಇಳುಕಲಿನಲ್ಲಿ ನಡೆದರೆ ಒಂದು ಅತ್ಯಂತ ಅಪಾಯಕಾರಿಯಾದ ಪರ್ವತದ ಕೋಡು ಇದೆ. ಇದುವೆ ಚಂದ್ರಶಿಲಾ. ಇಲ್ಲಿ ಕೂಡ ಒಂದು ಪುಟ್ಟ ಅಮೃತಶಿಲೆಯ ಮಂಟಪದಲ್ಲಿ ಪಂಚಮುಖರುದ್ರನ ಲಿಂಗವಿದೆ. ತುಂಗನಾಥದಲ್ಲಿ ಕಾಣಿಸಿಕೊಂಡ ಪ್ರಶ್ನೆಗೆ ಉತ್ತರವು ಇಲ್ಲಿ ದೊರಕಿತು. ಇದಕ್ಕೇನೇ ತುಂಗನಾಥ ಎಂದಿದ್ದರೂ ಸರಿ ಆಗುತ್ತಿತ್ತೇನೋ. ಅಷ್ಟು ತುದಿಯಲ್ಲಿ ಇದೆ ಇದು. ಆದರೆ ಗಾಳಿಯ ಪ್ರಚಂಡ ವೇಗಕ್ಕೆ ಮಂಟಪವು ಧ್ವಸ್ತವಾಗಿ ಹೋಗಿ ಕೇವಲ ಲಿಂಗ ಮಾತ್ರವೇ ಉಳಿದುಕೊಂಡಿದೆ.

ಈ ಜಾಗಕ್ಕೂ ಎರಡು ಕಥೆಗಳಿವೆ. ರಾವಣನನ್ನು ಕೊಂದ ನಂತರ ಈ ಜಾಗದಲ್ಲಿ ರಾಮನು ತಪಸ್ಸನ್ನು ಮಾಡಿದ ಎನ್ನುವುದೊಂದು ಕಥೆ. ಚಂದ್ರನು ತಪಸ್ಸು ಮಾಡಿದ್ದ ಎನ್ನುವುದು ಇನ್ನೊಂದು ಕಥೆ. ಕಥೆಯ ಪ್ರಾಮಾಣ್ಯವೇನೇ ಇರಲಿ, ಜಾಗವು ಮಾತ್ರ ಅದ್ಭುತವಾದದ್ದು. ಈ ತುದಿಯಲ್ಲಿ ಒಂದು 25-30 ಜನರಷ್ಟೇ ಕೂಡಬಹುದಾದ ಸ್ಥಳಾವಕಾಶವಿದೆ. ಅಲ್ಲಿ ನಿಂತರೆ ಭಗವಂತನ ಸೃಷ್ಟಿಯ ಪರಿಚಯವು ಅಮೋಘವಾದ ರೀತಿಯಲ್ಲಿ ಆಗುವುದು. ಮಾನವರಿರಲಿ, ದೇವತೆಗಳೂ ಮೈಮರೆವ ಸೌಂದರ್ಯವು ಇಲ್ಲಿ ನಿಂತರೆ ಕಾಣುವುದು. ಚೌಖಂಬಾ, ತ್ರಿಶೂಲ್, ಬಂದರ್ ಪೂಂಛ್, ನಂದಾದೇವೀ, ಕೇದಾರಪರ್ವತ, ಶಿವಲಿಂಗ ಪರ್ವತ ಹೀಗೆ ಎಲ್ಲವುಗಳ ದರ್ಶನವೂ ಒಂದೆಡೆ ಆಗುತ್ತದೆ. ಚಳಿಗಾಲದಲ್ಲಿ ಈ ಪರ್ವತದ ಮೇಲೆ ಕುಳಿತು ಸೂರ್ಯೋದಯವನ್ನು ನೋಡಲು ಅತ್ಯಂತ ಪೈಪೋಟಿ ಇರುತ್ತದೆ. ಇದಕ್ಕೆಂದೆ ಮಧ್ಯರಾತ್ರಿ 2ಕ್ಕೆ ಟ್ರೆಕ್ಕಿಂಗ್ ಶುರುವಾಗುತ್ತದಂತೆ. ಮಳೆಗಾಲ ಮುಗಿದ ನಂತರ ಈ ಅದ್ಭುತವನ್ನು ನೋಡಲೆಂದೇ ವಿದೇಶೀ ಸಾಹಸಿಗಳು ಬಂದು ನೆರೆಯುತ್ತಾರೆ. ಇತ್ತೀಚೆಗೆ ನಮ್ಮ ದೇಶದ ಯುವಜನಾಂಗವೂ ಇತ್ತ ಆಕರ್ಷಿತವಾಗುತ್ತಿದೆ.

ನನ್ನದು ದುರ್ದೈವ ಎಂದು ಹೇಳಲು ಮನಸ್ಸಾಗದು. ಆದರೆ ನಾನು ಬಂದ ವೇಳೆಯೇ ಮಳೆಗಾಲವಾದ್ದರಿಂದ ನನಗೆ ಈ ತುದಿಯಲ್ಲಿಯೂ ಮೋಡಗಳ ಹೊರತು ಏನೂ ಕಾಣಿಸಲಿಲ್ಲ. ಅಲ್ಲಿಯೇ ಒಂದು ಹತ್ತು ನಿಮಿಷಗಳನ್ನು ಕಳೆದು ಹತ್ತಿದ್ದಕ್ಕಿಂತ ವೇಗವಾಗಿ ಇಳಿದು ಬಂದು ತುಂಗನಾಥನ ಮಂದಿರವನ್ನು ಸೇರಿಕೊಂಡೆ. ಧೋ ಎಂದು ಮಳೆ ಶುರು ಆಯಿತು.

ಉಳಿದುಕೊಳ್ಳುವ ವ್ಯವಸ್ಥೆ

ಒಂದೆರಡು ದಿನ ದೇವಸ್ಥಾನದ ಪರಿಸರದಲ್ಲಿಯೇ ಇರುವ ಇಚ್ಛೆಯಿದ್ದಲ್ಲಿ ಸಮಿತಿಯವರೇ ನಿರ್ಮಿಸಿದ ಕೋಣೆಗಳಲ್ಲಿ ಇರಬಹುದು. ಮೊದಲೇ ಕಾಯ್ದಿರಿಸಿಕೊಳ್ಳಬೇಕು. ಕೋಣೆಗಳು ಸ್ವಚ್ಛವಾಗಿಯೇ ಇದ್ದರೂ ಲಕ್ಸುರಿಯನ್ನು ನಿರೀಕ್ಷಿಸುವ ಜನರಿಗೆ ಅಲ್ಲ. ಓ.ಕೆ. ಎನ್ನುವ ಮಟ್ಟದವು. ಇನ್ನು ಎಲ್ಲಿಯೂ ಇದ್ದು ಬರುವ ಮನಸ್ತತ್ವ ಇರುವ ಜನರಿಗೆ ದೇವಸ್ಥಾನದ ಬಳಿಯೇ ಕಾಲೀಕಮಲೀ ಬಾಬಾ ಪಂಥದವರ ಧರ್ಮಶಾಲೆಯಿದೆ.

ಸಂದರ್ಶನಕ್ಕೆ ಸೂಕ್ತ ಸಮಯ

ದೇವರದರ್ಶನಕ್ಕೆ ಬರುವುದಾದರೆ ನಮ್ಮ ಬೇಸಿಗೆಯ ಸಮಯದಲ್ಲಿ ಬರಬೇಕು, ಪ್ರಕೃತಿಯ ದರ್ಶನಕ್ಕೆ ಬರುವುದಾರೆ ಇಲ್ಲಿನ ಚಳಿಗಾಲದಲ್ಲಿ ಬರಬೇಕು. ಡಿಸೆಂಬರ್ ಇಂದ ಫೆಬ್ರುವರಿಯ ತನಕ ಇಲ್ಲಿ ಚಳಿ ಮತ್ತು ಹಿಮದ ಆಟ ನಡೆದಿರುತ್ತದೆ. ಆ ಸಮಯದಲ್ಲಿ ಪ್ರಕೃತಿಪ್ರೇಮಿಗಳಿಗೆ ಹೇಳಿಮಾಡಿಸಿದಂತೆ ಇರುತ್ತದೆ ಇಲ್ಲಿಯ ಪ್ರಕೃತಿ. ಹಿಮದ ಮೇಲೆ ನಡೆಯುತ್ತಾ, ಹಿಮಾವೃತ ಪರ್ವತಗಳನ್ನು ನೋಡುವ ವೈಭವ ಆಗ. ಆದರೆ ಸಾಹಸಿಗಳ ದಂಡೇ ಇಲ್ಲಿ ನೆರೆದಿರುವ ಕಾರಣ ಮೊದಲೇ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಗಳೊಂದಿಗೆ ಬರುವುದು ಒಳ್ಳೆಯದು.

ವಾಪಸ್ಸು (ಬದುಕಿ) ಬಂದಿದ್ದು

ನಾನು ಚೋಪಟಾದಿಂದ ಹೊರಡುವ ದಿನ ಮಳೆ ನಿಂತಿತ್ತು. ಸರಸರನೆ ಅಲ್ಲಿಂದ ಹೊರಟೆ. ಊಖೀಮಠ, ರುದ್ರಪ್ರಯಾಗ ಇಲ್ಲೆಲ್ಲ ಕಡೆಗಳಿಂದ ಇಳಿದು ಹತ್ತಿ ಬೇರೆ ಬೇರೆ ಗಾಡಿಗಳ ಮೂಲಕ ಪ್ರಯಾಣ ಮಾಡುವ ದೆಸೆ ಬಂದೊದಗುವ ಭಯವಿತ್ತು. ಈ ಭಯವನ್ನು ಹೆಚ್ಚಿಸುವ ಘಟನೆಯೊಂದು ನನ್ನ ಕಣ್ಣೆದುರೇ ನಡೆಯಿತು. ಚೋಪಟಾದಿಂದ ಸ್ವಲ್ಪವೇ ಮುಂದೆ ಬಂದಿದ್ದೆ.  ನಾನು ಕುಳಿತ ಗಾಡಿಯ ಮುಂದೆ ಬಸ್ಸೊಂದು ಹೋಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಬಲಭಾಗದಲ್ಲಿ ಪರ್ವತವು ಜರಿದು ಟನ್ನುಗಟ್ಟಲೆ ಕೆಸರು ನಿಮಿಷಮಾತ್ರದಲ್ಲಿ ಸುರಿದು ಬಿಟ್ಟಿತು.  ಬಸ್ಸಿನ ಮೇಲೆ ಬೀಳದೆ ಆ ಕೆಸರೆಲ್ಲ ಬಸ್ಸಿನ ಪಕ್ಕದಲ್ಲಿ ಸುರಿದು ಬಸ್ಸನ್ನೇ ಪರ್ವತದ ಎಡಭಾಗದ ಅಂಚಿಗೆ ನೂಕಿಬಿಟ್ಟಿತು.  ಆದರೆ ದೈವಕೃಪೆ ಆ ಬಸ್ಸಿನ ಮೇಲೆ ಇತ್ತು. ತುದಿಗೆ ಜರಿದ ಬಸ್ಸು ಕೆಳಗೆ ಬೀಳದ ಹಾಗೆಯೇ ನಿಂತಿತು.  ರಾಯರು ನನ್ನನ್ನು ಆ ಸ್ಥಳದಿಂದ ಸಾಕಷ್ಟು ದೂರದಲ್ಲಿ ನಿಲ್ಲಿಸಿದ್ದರು. ಏನೂ ತೊಂದರೆಯಾಗದೆ ಜೀವದಿಂದುಳಿದೆ.  ಸ್ಥಳೀಯರು ಸಾಹಸ ಮಾಡಿ ಆ ಬಸ್ಸನ್ನು ಉಕ್ಕಿನ ಹಗ್ಗಗಳಿಂದ ಎಳೆದು ನಮಗೆಲ್ಲ ದಾರಿಮಾಡಿ ಕೊಟ್ಟರು. ಪುಣ್ಯಕ್ಕೆ ಎಲ್ಲೂ ಇಳಿಯದೆ ನಿರಂತರವಾಗಿ ಪಯಣಿಸಿ ಹರಿದ್ವಾರಕ್ಕೆ ಬಂದು ಮುಟ್ಟಿದೆ. ಮುಂದೆ ದೆಹಲಿ ಮಾರ್ಗವಾಗಿ ಊರಿಗೂ ಬಂದು ತಲುಪಿದೆ.

ನನ್ನ ಈ ಯಾತ್ರೆಗೆ ಧನಸಹಾಯ ಮಾಡಿದ ಆ ದಂಪತಿಗಳಿಗೆ ಚಿರಋಣಿ ನಾನು. ರಾಯರು, ತುಂಗನಾಥನು, ಮುಖ್ಯಪ್ರಾಣನು ಮತ್ತು ಅವನ ಅಪ್ಪನಾದ ಪರಮಮುಖ್ಯಪ್ರಾಣನು ಸಂತಸವನ್ನು ಕೊಡಲಿ.

ನನ್ನ ಈ ಯಾತ್ರೆಯ ಅನುಭವವು ನಿಮಗೆ ಸಂತಸವನ್ನು ಕೊಟ್ಟಿದೆ ಎಂದು ಭಾವಿಸುವೆ. ಬರಿ ಸಂತಸವನ್ನು ಮಾತ್ರವಲ್ಲ, ಒಂದು ಬಾರಿ ಆದರೂ ತುಂಗನಾಥನೆಡೆಗೆ ನಡೆಯುವಂತಹ ಪ್ರೇರಣೆ ನಿಮಗೆ ಮೂಡಿದಲ್ಲಿ ನನ್ನ ಹೃದಯವು ಆ ಮಂಜುಲವಾದ ಕುದುರೆಯ ಗಂಟೆಯಂತೆಯೇ ಕಿಣಿಕಿಣಿಸುವುದು.

ಚಿತ್ರ ಮಾಲೆ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಅಶ್ವಿನೀದೇವತೆಗಳು ಹುಟ್ಟಿದ್ದು ಹೇಗೆ?

ಸೂರ್ಯನು ನಾವು ಮಾಡುತ್ತಿರುವ ಎಲ್ಲ ಪಾಪ ಹಾಗು ಪುಣ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ವಿಷ್ಣುವಿಗೆ ವರದಿಯನ್ನೊಪ್ಪಿಸುತ್ತಾ ಕರ್ಮಸಾಕ್ಷಿ ಎನಿಸಿಕೊಂಡಿರುವವನು. ಅಂಧಕಾರದಲ್ಲಿ ನಾವು ಬೀಳಬಾರದೆಂದು ನಮಗೆ ಅಗತ್ಯವಾಗಿರುವ ಬೆಳಕನ್ನು ಕೊಡುತ್ತಲೇ ನಮಗೆ ಕ್ಷೇಮ ಎನಿಸುವ ದೂರದಲ್ಲಿ ಇದ್ದಾನೆ. ಯಾಕೆಂದರೆ ನಾವು ಬೆಂದೂ ಹೋಗಬಾರದಲ್ಲ! ಎಷ್ಟು ದೂರವಪ್ಪಾ ಎಂದರೆ ಸುಮಾರು 150 ಮಿಲಿಯನ್ ಕಿಲೋ ಮೀಟರುಗಳಷ್ಟು.

ಇಷ್ಟು ದೂರ ಇದ್ದರೂ ನಾವು ಉಷ್ಣವನ್ನು ತಾಳಲಾರೆವು. ಚಳಿಗಾಲದಲ್ಲೂ ಸೆಕೆ ಸೆಕೆ ಎಂದು ಗೋಳಾಡುವ ಮಂದಿ ನಾವು. ಬೇಸಿಗೆಯ ಮಾತನ್ನು ಕೇಳುವುದೇ ಬೇಡ. ನಮ್ಮ ಯೋಗ್ಯತೆಯು ಅತ್ಯಂತ ಕಡಿಮೆ ಇರುವುದರಿಂದ ಈ ಒಂದು ಒದ್ದಾಟ ಎಂದುಕೊಳ್ಳೋಣ. ಆದರೆ ದೇವತೆಗಳಿಗೂ ಕೂಡ ಇವನ ತಾಪ ತಡೆಯದಾಗಿತ್ತು! ಬೇರೆ ಯಾರೋ ಅಲ್ಲ, ಸೂರ್ಯನ ಹೆಂಡತಿಗೆ ಕೂಡ ಸೂರ್ಯನ ಬಿಸಿಲನ್ನು ಸಹಿಸಲು ಆಗದ ಪರಿಸ್ಥಿತಿ ಬಂದೊದಗಿ ಒಂದು ಸ್ವಾರಸ್ಯಕರವಾದ ಘಟನೆಯು ನಡೆಯಿತು.

ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನಿಗೆ ಚೆಲುವೆಯಾದ ಒಬ್ಬ ಮಗಳಿದ್ದಳು. ಸಂಜ್ಞಾ ಎಂದು ಅವಳ ಹೆಸರು. ಮಹಾತೇಜೋವಂತನಾದ ಸೂರ್ಯನೊಂದಿಗೆ ಆಕೆಯ ಮದುವೆಯಾಗಿತ್ತು. ಮದುವೆಯಾದ ಎಷ್ಟೋ ದಿನಗಳವರೆಗೂ ಸೂರ್ಯನಿಗೆ ಈಗ ಏನಿದೆಯೋ  ಅನೇಕಪಟ್ಟು ಹೆಚ್ಚಿನ ತೇಜಸ್ಸು ಇತ್ತು. ಸಹಜವಾಗಿಯೇ ಶಾಖವೂ ಅಪಾರವಾಗಿತ್ತು. ಈ ಶಾಖದೊಂದಿಗೆ ಹೆಣಗಾಡುತ್ತಲೇ ವರ್ಷಗಳಗಟ್ಟಲೆ ಸಂಜ್ಞಾದೇವಿಯು ಸಂಸಾರ ನಡೆಸಿದಳು. ಈ ದಂಪತಿಗಳಿಗೆ ವೈವಸ್ವತ ಮನು, ಯಮ ಹಾಗು ಯಮಿ ಎನ್ನುವ ಮೂವರು ಮಕ್ಕಳೂ ಆದರು. ವೈವಸ್ವತ ಮನುವು ಸಧ್ಯದಲ್ಲಿ ನಡೆಯುತ್ತಿರವ ಮನ್ವಂತರದ ಅಧಿಪತಿಯಾದ. ಯಮನಿಗೆ ಪಿತೃಲೋಕದ ಅಧಿಪತ್ಯ ಹಾಗು ಯಮಿಗೆ ಜನರ ಪಾಪಗಳನ್ನು ತೊಳೆಯುತ್ತಾ ನದಿಯಾಗಿ ಹರಿಯುವ ಕಾರ್ಯಗಳು ನಿಯುಕ್ತಿಯಾಗಿದ್ದವು. ಈ ಯಮಿಯೆ ಯಮುನಾ ನದಿ.

ಸೂರ್ಯನ ಸಹಜಶಕ್ತಿಯ ಜೊತೆಗೆ ಅವನ ತಪೋಬಲವೂ ಸೇರಿ ಅವನ ತೇಜಸ್ಸು ಹೆಚ್ಚಾಗುತ್ತಲೇ ನಡೆದು ಸಂಜ್ಞೆಗೆ ಇದನ್ನು ತಡೆಯಲಾಗದ ಸ್ಥಿತಿ ಬಂದೊದಗಿತು. ಪತಿಯೊಡನೆ ನೇರವಾಗಿ ಇದನ್ನು ಹೇಳಲಾಗದೆ ಆಕೆಯು ಒಂದು ಉಪಾಯ ಹೂಡಿದಳು. ತನ್ನದೇ ಮತ್ತೊಂದು ಆಕೃತಿಯನ್ನು ನಿರ್ಮಿಸಿ ಅದಕ್ಕೆ ಛಾಯಾದೇವಿ ಎಂದು ಕರೆದಳು. ತನ್ನ ಸ್ವಭಾವಗಳನ್ನೂ ಅವಳಲ್ಲಿ ತುಂಬಿಸಿದಳು. ಗಂಡನನ್ನು ನೋಡಿಕೊಂಡಿರಲು ಅವಳನ್ನು ತನ್ನ ಜಾಗದಲ್ಲಿ ಇರಿಸಿ ತಾನು ತವರು ಮನೆಗೆ ಹೊರಟಳು.

ಹೊರಡುವಾಗ ಯಾವ ಕಾರಣಕ್ಕೂ  ವಾಸ್ತವವು  ರವಿಗೆ ತಿಳಿಯದಂತೆ ನೋಡಿಕೊಳ್ಳಬೇಕೆಂದು ಅಪ್ಪಣೆಯನ್ನೂ ಮಾಡಿದಳು. ಛಾಯೆಯು ಕೂಡ ಒಂದು ನಿಬಂಧನೆಯನ್ನು ಹಾಕಿ ಸಂಜ್ಞೆಯ ಮಾತಿಗೆ ಒಪ್ಪಿಕೊಂಡಳು. “ಎಷ್ಟೇ ಕಾಲವಾದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಇರುತ್ತೇನೆ. ಆದರೆ ಹೊಡೆತ ತಿನ್ನುವ ಹಂತ ಬಂದಾಗ ನಾನು ನಿಜವನ್ನು ಹೇಳಿಬಿಡುತ್ತೇನೆ” ಎಂಬುದೇ ಆ ನಿಬಂಧನೆ. ಅಂತೂ ಚಿಕ್ಕವಳನ್ನು ಒಪ್ಪಿಸಿ ದೊಡ್ಡವಳು ತನ್ನ ತವರು ಮನೆಗೆ ಹೊರಟಳು. ಏಕಾಕಿಯಾಗಿ ಮನೆಗೆ ಬಂದ ಮಗಳನ್ನು ನೋಡಿ ವಿಶ್ವಕರ್ಮನ ಮನಸ್ಸು ಕೆಡುಕನ್ನು ಶಂಕಿಸಿತು. ಮಗಳು ಗಂಡನ ಶಾಖದ ಕಾರಣವನ್ನು ಹೇಳಿದಳು. ಆದರೆ ತಂದೆ ಒಪ್ಪಲಿಲ್ಲ. ಹೀಗೆ ನೀನು ಒಬ್ಬಳೇ ಬಂದಿದ್ದು ತಪ್ಪು.  ವಾಪಸ್ಸು ಹೋಗು, ಇಲ್ಲಿ ನಿನಗೆ ಸ್ಥಳವಿಲ್ಲ ಎಂದ.

ತಂದೆಯ ಮನೆಗೆ ಪ್ರವೇಶವಿಲ್ಲ ತನ್ನ ಮನೆಗೆ ಹೋಗಲಿಚ್ಛೆಯಿಲ್ಲ. ಏನು ಮಾಡುವುದು? ಸೀದಾ ಅದ್ಭುತವಾದ ಮೇರು ಪರ್ವತದ ಕಡೆಗೆ ಹೋಗಿ ಪ್ರಕೃತಿಯ ಮಡಿಲಲ್ಲಿ ಇರುವ ನಿಶ್ಚಯ ಮಾಡಿದಳು.  ಒಬ್ಬಳೇ ಹೆಂಗಸಾಗಿ ಹೇಗೆ ಇರುವುದು ಎಂದು ತಿಳಿದು ಒಂದು ಸುಂದರ ಕುದುರೆಯ ರೂಪಧಾರಣೆ ಮಾಡಿ ವಿಹರಿಸತೊಡಗಿದಳು. ಅಗಾಧವಾದ ಅಗ್ನಿಯುಳ್ಳ ಯಾಗಶಾಲೆಯಿಂದ ಆಹ್ಲಾದಕರವಾದ ತಂಗಾಳಿಯ ಕಡೆಗೆ ಬಂದ ಅನುಭವವಾಗಿ ಆನಂದವಾಯಿತು. ಹೀಗೆ ಅನೇಕ ವರ್ಷಗಳೇ ಕಳೆದವು.

ಇತ್ತ ಸೂರ್ಯನಿಗೆ ಈ ವ್ಯವಸ್ಥೆಯ ಬಗ್ಗೆ ಅರಿವಾಗದೆ ಛಾಯೆಯ ಜೊತೆ ಸಂಸಾರ ನಡೆಸಿದ್ದ. ಈ ಸಂಸಾರದಲ್ಲಿ ಇವರಿಗೆ ಜನಿಸಿದವರು ಸಾವರ್ಣಿ ಎನ್ನುವ ಮನು, ಶನಿದೇವ ಹಾಗು ತಪತೀ ದೇವಿ. ಸಾವರ್ಣಿಯು ಮುಂದಿನ ಸಂವತ್ಸರದ ಅಧಿಪತಿಯಾಗುವನು. ಶನಿದೇವನ ಬಗ್ಗೆ ಎಲ್ಲರಿಗೂ ಗೊತ್ತು. ತಪತೀದೇವಿಯು ನದಿಯಾಗಿ ಪ್ರವಹಿಸಿದಳು.

ತನಗೂ ಸಂತತಿಯಾಗುವವರೆಗೆ ಛಾಯೆಯು ಯಮ, ಯಮಿ ಹಾಗು ವೈವಸ್ವತರಲ್ಲಿ ಪ್ರೇಮದಿಂದ ಇದ್ದಳು. ತನಗೆ ಮಕ್ಕಳಾದ ನಂತರ ಪಕ್ಷಪಾತದ ಧೋರಣೆಯನ್ನು ತಳೆದಳು. ಇದು ಯಮನನ್ನು ಕೆರಳಿಸಿ ಇಬ್ಬರಲ್ಲಿಯೂ ಜಗಳವಾಯಿತು. ಯಮನು ತಾಯಿಯ ಮೇಲೆ ಕೈ ಎತ್ತಿದ. ಆ ಕಲಹವನ್ನು ಬಿಡಿಸಲು ಬಂದಾಗ ಛಾಯೆ ನಿಜವನ್ನು ತಿಳಿಸಿದಳು. ಸೂರ್ಯನಿಗೆ ಕಿಂಚಿತ್ ಅನುಮಾನವಾಗಿ ನಡೆದ ವಿಪರೀತವನ್ನೆಲ್ಲ ಯೋಗಮಾರ್ಗದಿಂದ ಅರ್ಥೈಸಿಕೊಂಡ.  ಹಾಗಾಗಿ ಸಂಜ್ಞಾದೇವಿಯು ಇರುವ ಜಾಗಕ್ಕೆ ತಾನೇ ಗಂಡು ಕುದುರೆಯ ರೂಪವನ್ನು ತಾಳಿ ಹೋದ.  ಪತ್ನಿಯನ್ನು ಕಂಡವನೇ ಹಿಂಭಾಗದಿಂದ ಅವಳನ್ನು ಸಮೀಪಿಸಿದ. ಹೋಗಿದ್ದ ರಭಸ ವಿಪರೀತವಾಗಿತ್ತು. ಆಕೆಯಾದರೋ ಕುದುರೆಯ ರೂಪದಲ್ಲಿಯೇ ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಳ್ಳುತ್ತ ತಪಸ್ಸಿನಲ್ಲಿಯೇ ಮಗ್ನಳಾಗಿದ್ದಳು. ಹಿಂದಿನಿಂದ ರಭಸವಾಗಿ ಬಂದ ಪತಿಯನ್ನು ಗಮನಿಸದೇ ಇತರರನ್ನು ಗದರಿಸಿದಂತೆ ಜೋರಾಗಿ ಕೋಪವನ್ನು ಪ್ರಕಟಿಸಿದಳು. ಆ ಕೋಪದ ಅಲೆಗಳು ಅವಳ ಮೂಗಿನ ಎರಡೂ ಹೊರಳೆಗಳ ಮೂಲಕ ಭರ್ ಭರ್ ಎಂದು ಬಂದವು. ಆ ಅಲೆಗಳ ಮೂಲಕ ಪ್ರಕಟವಾದವರೇ ಇಬ್ಬರು ಅವಳೀಪುತ್ರರು. ನಾಸತ್ಯ ಮತ್ತು ದಸೃ ಎಂದು ಅವರ ಹೆಸರು. ಅಶ್ವರೂಪದಲ್ಲಿದ್ದಾಗ ಪ್ರಕಟವಾದರು ಆದ್ದರಿಂದ ಅಶ್ವಿನೀ ದೇವತೆಗಳು ಎಂದು ಖ್ಯಾತರಾದರು.

ತನ್ನ ಹಿಂದೆ ಬಂದವರು ಬೇರಾರೋ ಅಲ್ಲ ತನ್ನ ಯಜಮಾನನೇ ಆದ ಸೂರ್ಯ ಎಂದು ಸಂಜ್ಞೆಗೆ ಅರ್ಥವಾಗಲು ತಡವಾಗಲಿಲ್ಲ. ಮಹಾಜ್ವಾಲಾಮಯವಾದ ಶರೀರವನ್ನು ತನಗಾಗಿಯೇ ತಂಪುಗೊಳಿಸಿಕೊಂಡು ಬಂದ ಇನಿಯನ ಮೇಲೆ ಸಂಜ್ಞೆಗೆ ಪ್ರೇಮ ತುಂಬಿ ಹರಿಯಿತು. ಅನೇಕ ವರ್ಷಗಳ ಕಾಲ ಅಶ್ವರೂಪದಲ್ಲಿಯೇ ಸಂಸಾರವನ್ನು ನಡೆಸಿದರು. ಅಶ್ವದ ರೂಪದಲ್ಲಿದ್ದಾಗಲೇ ಜನಿಸಿದ ಅಶ್ವಿನೀ ಕುಮಾರರಿಗೆ ದೇವವೈದ್ಯರಾಗಿ ಇರುವ ಕರ್ತ್ಯವವನ್ನು ವಹಿಸಲಾಯಿತು.

ದೇವತೆಗಳಿಗೆ ವೈದ್ಯರೇಕೆ ಎಂದು ಪ್ರಶ್ನೆ ಬರಬಹುದು. ನಿಜ, ಅವರಿಗೆ ಮನುಷ್ಯರಂತೆ ಕಾಯಿಲೆಗಳು ಬರಲಾರವು. ಆದರೆ ದೇವ ಮತ್ತು ಅಸುರರಿಗೆ ಯುದ್ಧಗಳಾದಾಗ ದೇವತೆಗಳನ್ನು ಪುನಶ್ಚೇತನಗೊಳಿಸುವ ಕೆಜ಼್ಜ಼್ಲಸವನ್ನು ಅವರು ಮಾಡುತ್ತಾರೆ. ಮಾತ್ರವಲ್ಲ ಮಂತ್ರಗಳಿಂದ ಆವಾಹಿಸಿ ಪೂಜಿಸಿದಾಗ ಭೂಲೋಕದವರಿಗೂ ಅವರು ಕೃಪೆಯನ್ನು ಮಾಡಬಲ್ಲರು. ಪಾಂಡುರಾಜನ ಎರಡನೆಯ ಹೆಂಡತಿಯು ಇವರನ್ನು ಪ್ರಾರ್ಥಿಸಿಯೇ ಇವರ ಅಂಶವುಳ್ಳ ನಕುಲ ಸಹದೇವರನ್ನು ಪಡೆದಳು. ಉಪನ್ಯುವೆಂಬ ಬಾಲಕನ ತನ್ನ ಗುರುವಿನ ಸಲಹೆಯಂತೆ ಇವರನ್ನು ಪ್ರಾರ್ಥಿಸಿ ಅನುಗ್ರಹವನ್ನು ಪಡೆದ. ಚ್ಯವನ ಎನ್ನುವ ಅತಿವೃದ್ಧ ಮಹರ್ಷಿಗಳಿಗೆ ಪುನಃ ಯೌವನವು ಬಂದು ಒದಗುವಂತೆ ವಿಶೇಷವಾದ ಔಷಧವೊಂದನ್ನು ಅಶ್ವಿನೀದೇವತೆಗಳು ಸಿದ್ಧಪಡಿಸಿಕೊಟ್ಟರು. ಅದುವೇ ಇಂದಿನ ಸುಪ್ರಸಿದ್ಧ ಚ್ಯವನಪ್ರಾಶ.

ಅಶ್ವಿನೀಕುಮಾರರ ಚಿತ್ರ  : http://totreat.blogspot.com/2012/10/ashvins-ayurveda-flying-doctor-family.html

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ನದಿಯ ಸೆರಗ ಹಿಡಿದು ಒಂದು ಪಾವನ ಯಾತ್ರೆ

ಪೂಜ್ಯ ಗುರುಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ೬೦ನೆ ವರ್ಷದ ಜನ್ಮನಕ್ಷತ್ರದ ಅಂಗವಾಗಿ ಹೊರತಂದ “ರೌಪ್ಯದೀಪ” ಎನ್ನುವ ಸ್ಮರಣಸಂಚಿಕೆಗೆ ಬರೆದ ಲೇಖನ ಇದು. ಬರೆದ ಎನ್ನುವುದಕ್ಕಿಂತ ಅವರೇ ನನ್ನಲ್ಲಿ ಚೈತನ್ಯತುಂಬಿ ಬರೆಸಿದ ಲೇಖನ ಎನ್ನುವುದು ಸರಿ. ಯಾಕೆಂದರೆ ರೌಪ್ಯದೀಪದಲ್ಲಿ ಲೇಖನಗಳನ್ನು ಬರೆದ ಇತರರು ಸಾಮಾನ್ಯರಲ್ಲ. ಎಲ್ಲರೂ ಅತಿರಥ ಮಹಾರಥರೇ. ಎಲ್ಲರೂ ವೇದಾಂತ ಹಾಗು ಇತಿಹಾಸದ ವಿಷಯಗಳಲ್ಲಿ ಅಗಾಧವಾದ ತಿಳುವಳಿಕೆಯನ್ನು ಸಂಪಾದಿಸಿದ ವಿದ್ವಾಂಸರು. ಇಂತಹವರ ಮಧ್ಯ ನನ್ನದೂ ಒಂದು ಲೇಖನ ಮೂಡಿಬಂದಿರುವುದು ನನ್ನ ಸಾಮರ್ಥ್ಯದಿಂದಲ್ಲ. ಅದು ಗುರುಗಳ ಕೃಪೆ. ಅಷ್ಟೇ.

ಹಂಸ ಮಧ್ಯೇ ಬಕೋ ಯಥಾ ಎನ್ನುವ ಹಾಗೆ ನನ್ನ ಯೋಗ್ಯತೆ. ಬಣ್ಣ ಮಾತ್ರ ಹಂಸದಂತೆ ಬಿಳಿ, ಗುಣ ಮಾತ್ರ ಕೊಕ್ಕರೆಯದ್ದೇ. ಕೆಸರವಾಸಕ್ಕೇ ಸರಿಯೆನಿಸಿದ ಕೊಕ್ಕರೆಗೂ ಸರೋವರವಿಹಾರದ ಅವಕಾಶ ಕಲ್ಪಿಸಿದ ಗುರುಗಳ ಕರುಣೆಗೆ ನಾನು ಚಿರಋಣಿಯಾಗಿದ್ದೇನೆ.

************************

ಲೇಖನವನ್ನು ಸಂಪೂರ್ಣವಾಗಿ ಓದುವ ಮೊದಲು ಇರಾನಿನಿಂದ ಪ್ರಾರಂಭಿಸಿ ಮಯನ್ಮಾರ್ ದೇಶದವರೆಗೆ, ರಷ್ಯದ ದಕ್ಷಿಣತುದಿಯಿಂದ ಆರಂಭಿಸಿ ಶ್ರೀಲಂಕೆಯವರೆಗೆ ವ್ಯಾಪಿಸಿದ್ದ ಪ್ರಾಚೀನ ಭಾರತದೇಶವನ್ನು ಮನದಲ್ಲಿ ಕಲ್ಪಿಸಿಕೊಳ್ಳಿರಿ.

ಲಹರಿ – 1

ನದಿಗಳೆಂದರೆ ಕೇವಲ ನೀರಿನ ಹರಿವು ಮಾತ್ರ ಎಂದೆಣಿಸಲಾಗದು. ನದಿಯು ಅಸಂಖ್ಯವಾದ ಜೀವಿಗಳಿಗೆ ಚೇತನದಾಯಿ. ಅಲ್ಲಿಗೂ ಅದರ ವ್ಯವಹಾರವನ್ನು ಸೀಮಿತಗೊಳಿಸಲಾಗದು. ನದಿಗಳು ಸಂಸ್ಕೃತಿಯೊಂದನ್ನು ಹುಟ್ಟುಹಾಕಿ ಸಾವಿರಾರು ವರ್ಷಗಳ ಕಾಲ ಅದನ್ನು ಜೀವಂತವಾಗಿರುವಂತೆ ನೋಡಿಕೊಳ್ಳುವ ಶಕ್ತಿಯ ಸ್ರೋತಗಳು ಎನ್ನುವುದು ಸರಿಯಾದ ಅಭಿಪ್ರಾಯ. ಜಗತ್ತಿನ ಅನೇಕ ಬೃಹತ್ ನದಿಗಳು ಹಾಗು ಅವುಗಳ ಜೊತೆಗೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ ಜನಸಂಸ್ಕೃತಿಗಳ ಹಿನ್ನೆಲೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಭಿಪ್ರಾಯಕ್ಕೆ ಪುಷ್ಟಿ ದೊರೆಯುವುದು. ಭರತವರ್ಷದ ಗಂಗಾದಿ ಪುಣ್ಯನದಿಗಳು, ಕಗ್ಗತ್ತಲೆಯ ಖಂಡದಿಂದ ಹೊರಹೊಮ್ಮಿ ಮರಳುಗಾಡಿನಲ್ಲಿಯೂ ಜಿಜೀವಿಷೆಯನ್ನು ಉಂಟುಮಾಡಿರುವ ಈಜಿಪ್ಟಿನ ನೀಲನದಿ, ಇರಾಕಿನ ಯೂಫ್ರೆಟಿಸ್ ಹಾಗು ಟೈಗ್ರಿಸ್ ನದಿಗಳು, ಚೀನದ ಯಾಂಗ್ಟ್ಸೆ, ದಕ್ಷಿಣ ಅಮೆರಿಕದ ಅಮೆಝಾನ್ ಹೀಗೆ ಅನೇಕ ನದಿಗಳು ವಿವಿಧ ಸಂಸ್ಕೃತಿಗಳಿಗೆ ಜನ್ಮ ನೀಡಿರುವ ತೊಟ್ಟಿಲುಗಳಾಗಿವೆ.

ಜಗತ್ತಿನ ಇತರೆಡೆ ಇತರೆಡೆ ನದಿಗಳನ್ನು ಕೇವಲ ಜೀವನಾಡಿ ಎನ್ನುವ ಭೌತಿಕರೂಪದಲ್ಲಿ ಮಾತ್ರ ನೋಡಿದರೆ ಭರತವರ್ಷದಲ್ಲಿ ನದಿಗಳ ದೈವಿಕರೂಪವನ್ನು ಕಣ್ಣಾರೆ ಕಂಡು ಅದನ್ನು ಆತ್ಮಾನುಸಂಧಾನ ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ವೇದಗಳು ನೂರಾರು ನದಿಗಳನ್ನು ಹಾಡಿಹೊಗಳಿರುವುದು. ಈ ಸ್ತೋತ್ರಗಳಲ್ಲಿ ನದಿಗಳನ್ನು ಕೇವಲ ಬಾಯಾರಿಕೆಯನ್ನು ತಣಿಸುವ ನೀರಿನ ತಾಣಗಳಾಗಿ ನೋಡದೆ ಆತ್ಮೋನ್ನತಿಯ ಹೆದ್ದಾರಿಯನ್ನಾಗಿ ಪರಿಗಣಿಸಲಾಗಿದೆ. ನದಿಯ ಅಭಿಮಾನಿದೇವತೆಯ ಕೃಪೆಯನ್ನು ಪಡೆಯದೆ ಮುಂದಿನ ಯಾವ ಶುಭ ಕಾರ್ಯವೂ ಸಾಗದು ಎನ್ನುವಷ್ಟರ ಮಟ್ಟಿಗೆ ಜನಜೀವನದೊಂದಿಗೆ ನದಿಗಳ ಸಂಬಂಧ ಹೆಣೆದುಕೊಂಡಿದೆ. ಆದರೆ ಪ್ರಸ್ತುತಕಾಲದ ದೌರ್ಭಾಗ್ಯವೆಂದರೆ ಕಲಿಪುರುಷನ ಪ್ರಭಾವದಿಂದ ಭರತವರ್ಷದ ಅನೇಕ ನದಿಗಳು ಒಂದೋ ತಮ್ಮ ಪ್ರಾಚೀನ ಹೆಸರನ್ನು ಕಳೆದುಕೊಂಡುಬಿಟ್ಟಿವೆ ಅಥವಾ ಈಗಿನ ಪೀಳಿಗೆಗೆ ಅವುಗಳ ಪರಿಚಯವೇ ಇಲ್ಲ. ಇನ್ನೂ ಅನೇಕ ನದಿಗಳು ಪರದೇಶಗಳ ಪಾಲಾಗಿಬಿಟ್ಟಿವೆ.

ಪ್ರಸಕ್ತ ಲೇಖನವು ಈ ವೈದಿಕಮಂತ್ರಗಳ ಅಂತರಾಳವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಇದು ಅನ್ಯರ ದಾಳಿಗೊಳಗಾಗಿ ಮೂಲಹೆಸರನ್ನು ಕಳೆದುಕೊಂಡ ನದಿಗಳ ಈಗಿನಕಾಲದ ವಿವರಗಳನ್ನು ಇತಿಹಾಸಜ್ಞರು ಗುರುತಿಸಿರುವಂತೆ ಸಂಗ್ರಹಿಸಿ ಒಂದೆಡೆ ಕೊಡುವ ಪ್ರಯತ್ನ ಮಾತ್ರ. ಆಕಸ್ಮಿಕವಾಗಿಯಾಗಲಿ ಉದ್ದೇಶಪೂರ್ವಕವಾಗಿಯೇ ಆಗಲಿ ಈ ಸ್ಥಳಗಳಲ್ಲಿ ಓಡಾಡುವ ಅನುಕೂಲ ನಿಮಗೆ ದೊರೆತಲ್ಲಿ ನೀವೇ ಪುಣ್ಯವಂತರು. ಸ್ನಾನ ಮಾಡಲು/ಪ್ರೋಕ್ಷಣೆ ಮಾಡಿಕೊಳ್ಳಲು ಅವಕಾಶ ದೊರೆತಲ್ಲಿ ನೀವೇ ಮಹಾಭಾಗ್ಯಶಾಲಿಗಳು.

ಎಲ್ಲರೂ ತಿಳಿದಿರುವಂತೆ ಭಗೀರಥನ ಪ್ರಯತ್ನದಿಂದ ದೇವಲೋಕದ ಗಂಗೆಯು ಭೂಲೋಕಕ್ಕೆ ಬಂದಳಷ್ಟೇ. ಅಪರಿಮಿತವಾದ ಜಲರಾಶಿ ಹಾಗು ವೇಗವನ್ನು ಹೊಂದಿದ್ದ ಗಂಗೆ ಮೇರು ಪರ್ವತದ ತುದಿಯಲ್ಲಿ ಮೇಲಿಂದ ಅಪ್ಪಳಿಸಿದಾಗ ಹೊರಚಿಮ್ಮಿದ ಶಾಖೆಗಳು ಅಸಂಖ್ಯ. ಅವುಗಳಲ್ಲಿ ಭಾಗವತ ಮಹಾಪುರಾಣವು ನಾಲ್ಕು ಶಾಖೆಗಳನ್ನು ಪ್ರಧಾನ ಎಂಬುದಾಗಿ ಪರಿಗಣಿಸಿದೆ. ಸೀತಾ, ಭದ್ರಾ, ಚಕ್ಷು ಹಾಗು ಅಲಕನಂದಾ ಎಂಬುವುವೇ ಆ ಪ್ರಧಾನ ಶಾಖೆಗಳು.

ಸೀತಾನದಿಯು ಕೇಸರಾಚಲ ಹಾಗು ಗಂಧಮಾದನ ಪರ್ವತಗಳನ್ನು ಬಳಸಿಕೊಂಡು ಮುಂದೆ ಭದ್ರಾಶ್ವ ವರ್ಷದಲ್ಲಿ ಹಾಯ್ದು ಪಶ್ಚಿಮಕ್ಕೆ ತಿರುಗಿ ಕೊನೆಗೆ ಸಮುದ್ರವನ್ನು ಸೇರುತ್ತದೆ ಎಂದು ಭಾಗವತವು ವರ್ಣಿಸುತ್ತದೆ. (ಭಾಗವತ ೫:೧೭:೬). ಪ್ರಸಕ್ತ ಕಾಲಮಾನದಲ್ಲಿ ಚೀನಕ್ಕೆ ತಾನು ಬಿಟ್ಟುಕೊಟ್ಟಿದ್ದೇನೆ ಎಂದು ಪಾಕಿಸ್ತಾನ ಹೇಳುತ್ತಿರುವ ಆದರೆ ಭಾರತಕ್ಕೆ ಸೇರಬೇಕಾದ ಸಿಂಜಿಯಾಂಗ್ ಪ್ರಾಂತ್ಯವನ್ನು ಇತಿಹಾಸತಜ್ಞರು ಭದ್ರಾಶ್ವಖಂಡವೆಂದು ಗುರುತಿಸಿದ್ದಾರೆ. ಈ ಭಾಗದಲ್ಲಿ ಹರಿಯುತ್ತಿರುವ ಯಾರ್ಕಂದ್ ನದಿಯೇ ಪ್ರಾಚೀನಕಾಲದ ಸೀತಾನದಿಯೆಂದು ತಜ್ಞರ ಅಭಿಮತ. ಪ್ರಾಚೀನ ಚೀನಿ ಯಾತ್ರಿಕನಾದ ಹು-ಯೆನ್-ತ್ಸಾಂಗ್ (ಯುವಾನ್ಜಾಂಗ್/ಜುವಾನ್ಜಾಂಗ್) ಇದನ್ನು ’ಸಿಟೋ ’[1] ಎಂದು ಕರೆದದ್ದು ತಜ್ಞರ ಈ ಅಭಿಪ್ರಾಯಕ್ಕೆ ಪುಷ್ಟಿಯನ್ನು ಕೊಡುತ್ತದೆ.

ಭದ್ರಾ ಎನ್ನುವ ಶಾಖೆಯು ಮೇರುಪರ್ವತದ ಮೇಲಿನಿಂದ ಚಿಮ್ಮಿ ಕುಮುದಪರ್ವತ, ನೀಲಪರ್ವತ, ಶ್ವೇತಪರ್ವತಗಳ ಮೇಲಿನಿಂದ ಧುಮುಕಿ ಉತ್ತರಕುರು ದೇಶದೊಳಗೆ ಪ್ರವೇಶಿಸುತ್ತದೆ. ಕೊನೆಗೆ ಉತ್ತರಭಾಗದಲ್ಲಿರುವ ಸಮುದ್ರದೊಳಗೆ ಸೇರುತ್ತದೆ ಎಂದು ಭಾಗವತವು ಹೇಳಿದೆ (ಭಾಗವತ ೫:೧೭:೮). ಉತ್ತರಕುರುದೇಶವಿರುವುದು ಪ್ರಾಚೀನ ಭಾರತದ ಉತ್ತರಭಾಗದಲ್ಲಿ. ಈ ಭಾಗದಲ್ಲಿ ಹರಿದ ಭದ್ರಾ ನದಿಗೆ ಕಾಲಕ್ರಮೇಣ ಹೆಸರು ಬದಲಾಯಿಸಿ ಹೋಯಿತು. ಈ ಭಾಗದ ದೇಶಗಳು ಇಸ್ಲಾಂ ಹಾಗು ಕ್ರೈಸ್ತಮತಾವಲಂಬಿಗಳಾಗಿದ್ದರ ಪರಿಣಾಮವಾಗಿ ಭದ್ರಾ ನದಿಗೆ ತಮ್ಮದೇ ಆದ ಹೆಸರನ್ನು ಸಹ ಇಟ್ಟವು. ಸಿರ್ ದರಿಯಾ[2] ಎಂಬುದೇ ಅವರು ಹೇಳುತ್ತಿರುವ ಹೆಸರು. ಪ್ರಸಕ್ತ ಕಾಲದಲ್ಲಿ ಈ ನದಿಯ ಉಗಮಸ್ಥಾನವಾದ ಹಿಮದರಾಶಿಯು ಕಿರ್ಗಿಸ್ತಾನ್ ಹಾಗು ಉಝ್ಬೆಕಿಸ್ತಾನ ದೇಶಗಳ ಸರಹದ್ದಿನಲ್ಲಿದೆ. ಮುಂದೆ ನದಿಯು ತಝಿಕಿಸ್ತಾನ ಹಾಗು ಕಝಕಿಸ್ತಾನದಲ್ಲಿ ಹರಿಯುತ್ತದೆ. ೨೨೧೨ಕಿ.ಮೀ ಪಯಣಿಸಿ ಈ ನದಿಯು ಕೊನೆಯಲ್ಲಿ ಅರಾಲ್ ಸಮುದ್ರವನ್ನು ಉತ್ತರಭಾಗದಿಂದ ಪ್ರವೇಶಿಸುತ್ತದೆ.

ಮೂಲಗಂಗೆಯದ್ದೇ ಇನ್ನೊಂದು ಶಾಖೆಯಾದ ಚಕ್ಷುವು ಕೇತುಮಾಲಾ ವರ್ಷದ ಕಡೆಗೆ ತನ್ನ ಪಯಣ ಬೆಳೆಸಿತೆಂದು ಭಾಗವತ ಹೇಳಿದೆ (ಭಾಗವತ ೫:೧೭:೭). ಈ ನದಿಗೆ ಈಗ ಅಫಘಾನಿಸ್ಥಾನದ ಒಣಭೂಮಿಯನ್ನು ತಣಿಸುವ ಕಾಯಕ. ಪಂಜ್ ಶಿರ್ ಎನ್ನುವ ಇನ್ನೊಂದು ದೊಡ್ಡ ನದಿಯನ್ನು ತನ್ನೊಳಗೆ ಸೇರಿಸಿಕೊಂಡು ಮುಂದುವರೆಯುವ ಚಕ್ಷುವು ಈಗ ಆಫಘಾನಿಸ್ಥಾನದ ಮಹಾನದಿ. ಇದರ ಒಟ್ಟು ಉದ್ದ ೨೪೦೦ ಕಿ.ಮೀ. ಪಂಜ್ ನದಿಯು ಇದರೊಟ್ಟಿಗೆ ಸಂಗಮವಾಗುವವರೆಗೂ ಇದಕ್ಕೆ ವಕ್ಷ್ ಎನ್ನುವ ಹೆಸರೇ ಇದೆ. ಇದಾದರೂ ಚಕ್ಷು ಎನ್ನುವ ಹೆಸರಿನ ರೂಪಾಂತರವೇ ಆಗಿದೆ. ಇದನ್ನೇ ರೋಮನ್ನರು ಹಾಗು ಗ್ರೀಕರು ಆಕ್ಸಸ್ ಎಂದು ಕರೆದರು. ಪಂಜ್ ಮತ್ತು ವಕ್ಷ್ ನದಿಗಳ ಸಂಗಮವಾದ ನಂತರ ಇದಕ್ಕೆ ಅಮು ದರಿಯಾ ಎನ್ನುವ ಹೆಸರು ಬಂದಿದೆ. ಈ ಹೊಸ ನಾಮಕರಣಕ್ಕೆ ಪರ್ಷಿಯನ್ನರು ಕಾರಣೀಭೂತರು. ಈ ಬದಲಾವಣೆಗಳು ನಡೆದದ್ದು ಸಾವಿರಕ್ಕೂ ವರ್ಷಗಳ ಹಿಂದೆ. ಪರ್ಷಿಯನ್ ಭಾಷೆಯಲ್ಲಿ ದರ್ಯಾ ಎಂದರೆ ನದಿ. ಭಾಗವತದಲ್ಲಿ ಚಕ್ಷುನದಿಯು ಪಶ್ಚಿಮದಿಕ್ಕಿನಲ್ಲಿರುವ ಸಮುದ್ರದೊಳಗೆ ಒಂದಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಈ ಅಮುದರಿಯಾ ನದಿಯು ಅಫಘಾನಿಸ್ಥಾನದಲ್ಲಿ ಹರಿದು ಮುಂದೆ ಪಶ್ಚಿಮ ದಿಕ್ಕಿನಲ್ಲಿರುವ ಅರಾಲ್ ಸಮುದ್ರ[3]ದಲ್ಲಿ ಸೇರುತ್ತದೆ.

ಆಕಾಶಗಂಗೆಯ ನಾಲ್ಕನೆಯ ಪ್ರಧಾನ ಶಾಖೆಯಾದ ಅಲಕನಂದೆಯು ಬ್ರಹ್ಮಲೋಕದಿಂದ ಕೆಳಗಿಳಿದು, ಹೇಮಕೂಟ, ಹಿಮಕೂಟ ಪರ್ವತಗಳ ಮೇಲೆ ರಭಸದಿಂದ ಧುಮುಕಿದಳು. ಆ ಪರ್ವತಶಿಖರಗಳನ್ನು ತನ್ನ ಜಲರಾಶಿಯಲ್ಲಿ ಮುಳುಗಿಸಿ ಮುಂದೆ ದಕ್ಷಿಣದಿಕ್ಕಿನಲ್ಲಿರುವ ಭರತವರ್ಷಕ್ಕೆ ಹರಿದುಬಂದಳು. ಪ್ರಸಕ್ತ ಭಾರತಕ್ಕೆ ದೊರಕಿರುವ ಗಂಗೆಯ ಪ್ರಧಾನಶಾಖೆ ಇದೊಂದೆ. ಅಲಕನಂದೆಯು ಅಲಕಾಪುರಿಯ ಮೂಲಕ ಭರತವರ್ಷವನ್ನು ಪ್ರವೇಶಿಸಿ ರಭಸದಿಂದ ಮುನ್ನುಗ್ಗುತ್ತಾಳೆ. ಸುಮಾರು ೧೯೫ಕಿ.ಮೀ ಪಯಣಿಸಿದ ನಂತರ ಹಿಮಾಲಯದ ಇನ್ನೊಂದು ಪಾರ್ಶ್ವದಲ್ಲಿ ಚಿಮ್ಮಿದ ಗಂಗೆಯ ಇನ್ನೊಂದು ಶಾಖೆಯಾದ ಭಾಗೀರಥಿಯು ಬಂದು ಅಲಕನಂದೆಯೊಂದಿಗೆ ಸಂಗಮಿಸುತ್ತಾಳೆ. ಈ ಸ್ಥಳಕ್ಕೆ ದೇವಪ್ರಯಾಗವೆಂದು ಹೆಸರು. ಈ ಸಂಗಮದ ನಂತರ ಅಲಕನಂದಾ ಹಾಗು ಭಾಗೀರಥಿ ಎನ್ನುವ ಎರಡೂ ಹೆಸರುಗಳು ಮರೆಯಾಗಿ[4] “ಗಂಗಾ” ಎನ್ನುವ ಜಗತ್ಪ್ರಸಿದ್ಧ ಹೆಸರು ಈ ನದಿಗೆ ದೊರೆಯುತ್ತದೆ.

ಲಹರಿ – 2

ಭಾಗವತವು ವಿವರಿಸಿರುವ ಗಂಗೆ ಹಾಗು ಅವಳ ಪ್ರಧಾನ ಶಾಖೆಗಳನ್ನು ನೋಡಿಯಾದ ಮೇಲೆ, ಋಗ್ವೇದವು ಸ್ತುತಿಸಿರುವ ಕೆಲವು ನದಿಗಳತ್ತ ಗಮನ ಹರಿಸೋಣ.

ಪ್ರತಿನಿತ್ಯ ಕಲಶಪೂಜೆಯನ್ನು ಮಾಡುವಾಗ ಹೇಳುವ ಶ್ರುತಿಯೊಂದು ಹೀಗಿದೆ.

ಇಮಂ ಮೇ ಗಂಗೇ ಯಮುನೆ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣಿಯಾ |
ಅಸಿಕ್ನಿಯಾ ಮರುದ್ವೃಧೆ ವಿತಸ್ತಯಾರ್ಜಿಕಿಯೇ ಶೃಣುಹ್ಯಾ ಸುಷೋಮಯಾ || (ಋಗ್ವೇದ ೧೦:೭೫:೫)

ಇದು ಋಗ್ವೇದದ ೧೦ನೆಯ ಮಂಡಲದಲ್ಲಿರುವ ೭೫ನೆಯ ಸೂಕ್ತ, ನದೀ ಸ್ತುತಿ[5] ಸೂಕ್ತವೆಂದೇ ಪ್ರಸಿದ್ದಿಯಾಗಿದೆ. ಈ ಸೂಕ್ತದ ದ್ರಷ್ಟಾರರು ಸಿಂಧುಕ್ಷಿತ ಪ್ರೈಯಮೇಧರು. ಇಲ್ಲಿ ಕೆಲವು ನದಿಗಳ ಅಭಿಮಾನಿ ದೇವತೆಗಳನ್ನು ಕುರಿತು ಪ್ರಾರ್ಥಿಸಿಲಾಗಿದೆ. ಅವುಗಳು ಯಾವುವೆಂದರೆ ಗಂಗೆ, ಯಮುನೆ, ಸರಸ್ವತಿ, ಶುತುದ್ರಿ, ಪರುಷ್ಣಿ, ಅಸಿಕ್ನೀ, ಮರುದ್ವೃಧಾ, ವಿತಸ್ತಾ, ಅರ್ಜಿಕೀ ಹಾಗು ಸುಷೋಮಾ.

ಪ್ರಾರ್ಥನೆಯು ಮುಂದಿನ ಮಂತ್ರಗಳಲ್ಲಿ ಮುಂದುವರೆಯುತ್ತದೆ.

ತೃಷ್ಟಾಮಯಾ ಪ್ರಥಮಂ ಯಾತವೇ ಸಜೂಃ ಸುಸರ್ತ್ವಾ ರಸಯಾ ಶ್ವೇತ್ಯಾ ತ್ಯಾ |
ತ್ವಂ ಸಿಂಧೋ ಕುಭಯಾ ಗೋಮತೀಂ ಕ್ರುಮುಂ ಮೆಹನ್ತ್ವಾ ಸರಥಂ ಯಾಭಿರೀಯಸೇ ||

ಈ ಶ್ರುತಿಯಲ್ಲಿ ಹೆಸರಿಸಿರುವ ನದಿಗಳು ಇವುಗಳು : ತೃಷ್ಟಮಾ, ಸುಸರ್ತು, ರಸಾ, ಶ್ವೇತೀ, ಸಿಂಧು, ಕುಭಾ, ಗೋಮತೀ, ಕೃಮು, ಮತ್ತು ಮೆಹನ್ತು.

ಇದೇ ಸೂಕ್ತದ ಎಂಟನೆಯ ಮಂತ್ರದಲ್ಲಿ

ಸ್ವಶ್ವಾ ಸಿಂಧುಃ ಸುರಥಾ ಸುವಾಸಾ ಹಿರಣ್ಯಯೀ ಸುಕೃತಾ ವಾಜಿನೀವತೀ |
ಊರ್ಣಾವತೀ ಯುವತಿಃ ಸೀಲಮಾವತ್ಯುತಾಧಿ ವಸ್ತೆ ಸುಭಗಾ ಮಧುವೃಧಮ್ ||

ಎಂದು ಹೇಳಲಾಗಿದೆ. ಇಲ್ಲಿ ಪ್ರಸ್ತಾಪಿಸಿರುವ ನದಿಗಳು ಯಾವುವೆಂದರೆ ಊರ್ಣಾವತೀ ಹಾಗು ಸೀಲಮಾವತೀ.

ಲಹರಿ – ೩

ಈಗ ಈ ಮೇಲೆ ತಿಳಿಸಿದ ನದಿಗಳ ಸುಂದರವಾದ ವೈದಿಕ ಹೆಸರುಗಳು ಏನಾಗಿವೆ? ಯಾವ ನದಿಯು ಎಲ್ಲಿ ಹರಿಯುತ್ತಿದೆ ಎಂಬುದನ್ನು ಸಂಕ್ಷಿಪ್ತದಲ್ಲಿ ನೋಡೋಣ.

ಗಂಗೆ : ಈಗಾಗಲೇ ಮೇಲೆ ತಿಳಿಸಿರುವಂತೆ ಅಲಕನಂದೆ ಹಾಗು ಭಾಗೀರಥಿನದಿಗಳ ಸಂಗಮದಿಂದ ಉಂಟಾಗಿದ್ದು ಗಂಗಾನದಿ. ತನ್ನ ಒಟ್ಟು ಹರಿವಿನಲ್ಲಿ ೯೦ಕ್ಕೂ ಹೆಚ್ಚು ಪ್ರತಿಶತ ಭರತವರ್ಷದಲ್ಲೇ ಕ್ರಮಿಸಿರುವ ಪ್ರಯುಕ್ತ (ಒಟ್ಟು ಉದ್ದ ೨೫೨೫ಕಿ.ಮೀ)ಭಾರತೀಯರಿಂದ ಗಂಗೆಯ ಹೆಸರಿಗೆ ಯಾವುದೇ ಅಪಚಾರವಾಗಿಲ್ಲ. (ನದಿಯನ್ನೇ ಮಲಿನಗೊಳಿಸಿ ಗಂಗೆಗೇ ಅಪಚಾರ ಮಾಡಿದ್ದು ಬೇರೆಯ ವಿಷಯ). ಆಂಗ್ಲರನ್ನೇ ಹಿಂಬಾಲಿಸುವ ಮಂದಿಗೆ ಮಾತ್ರ ಈಗಲೂ ಇವಳು ಗ್ಯಾಂಜಿಸ್!

ಸಮುದ್ರಕ್ಕೆ ಸೇರುವ ಮೊದಲು ಗಂಗೆ ಅನೇಕ ಕವಲುಗಳಾಗಿ ಮುಂದೆ ಸಾಗುತ್ತಾಳೆ. ಇವುಗಳಲ್ಲಿ ಒಂದು ಪ್ರಧಾನ ಕವಲು ಬಾಂಗ್ಲಾದೇಶದಲ್ಲಿಯೂ ಮುಂದುವರೆದಿದೆ. ಆ ದೇಶದಲ್ಲಿ ಗಂಗೆಗೆ ಪದ್ಮಾನದಿ ಎನ್ನುವ ಹೆಸರಿನಿಂದ ಕರೆಯುತ್ತಾರೆ.

ಯಮುನಾ: ಸಾವಿರಾರು ವರ್ಷಗಳ ಹಿಂದೆ ಸರಸ್ವತಿಯ ಉಪನದಿಯಾಗಿತ್ತು. ಸಧ್ಯದಲ್ಲಿ ಗಂಗೆಯ ಉಪನದಿಯಾಗಿದೆ. ಸಂಪೂರ್ಣವಾಗಿ ಭಾರತದೇಶದಲ್ಲಿಯೇ ಹರಿದಿದೆ. ಹೆಸರೇನೂ ಹಾಳಾಗಿಲ್ಲ. ಆದರೆ ಉತ್ತರಭಾರತದ ಕೆಲವೆಡೆ ಜಮುನಾ ಎಂದು ಕರೆಯುವ ರೂಢಿಯಿದೆ. ಯಕಾರವನ್ನು ಜಕಾರವನ್ನಾಗಿ ಉಚ್ಚರಿಸುವುದರ ಪರಿಣಾಮವಿದು.

ಸರಸ್ವತೀ : ಈ ನದಿಯ ಬಗ್ಗೆ ಬರೆಯಲು ಹೊರಟರೆ ಒಂದು ಪುಸ್ತಕವೇ ಬೇಕಾದೀತು. ಋಗ್ವೇದದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿಸಲ್ಪಟ್ಟ ನದಿ ಇದು. ಅಂಬಿತಮೆ, ನದೀ ತಮೆ, ದೇವೀತಮೆ[6] ಎಂಬ ಹೊಗಳಿಕೆಗೆ ಪಾತ್ರವಾದ ನದಿ, ಸರಸ್ವತೀ. ಅತಿ ರಭಸವಾಗಿ, ಅತಿ ವಿಸ್ತಾರವಾಗಿ, ಅತಿ ಹೆಚ್ಚಿನ ಜಲರಾಶಿಯೊಂದಿಗೆ ಹರಿದು ಮುಂದೆ ಸಮುದ್ರದಲ್ಲಿ ಸೇರುತ್ತಾಳೆ ಎಂದು ಋಗ್ವೇದವು ವರ್ಣಿಸಿದೆ. ಆದರೆ ಮಹಾಭಾರತದಲ್ಲಿ ಇದು ಅದೃಶ್ಯವಾದ ಸ್ಥಳದಿಂದ ಬಲರಾಮ ತೀರ್ಥಯಾತ್ರೆಯನ್ನು ಕೈಗೊಂಡ ಎಂಬುದಾಗಿ ಹೇಳಿದ್ದಾರೆ. ಇದರ ಅರ್ಥ ಸಮುದ್ರವನ್ನು ಸೇರುತ್ತಿದ್ದ ಮಹೋನ್ನತವಾದ ನದಿಯೊಂದು ಕಾಲಾಂತರದಲ್ಲಿ ನಿಧಾನವಾಗಿ ಅದೃಶ್ಯವಾಗಿ ಹೋಗಿದೆ ಎಂಬುದಾಗಿಯೇ. ಈ ಕಣ್ಮರೆಯಾದ ಸ್ಥಳದ ಹೆಸರು ಮಹಾಭಾರತದಲ್ಲಿ ವಿನಶನ ಎಂಬುದಾಗಿ ಇದೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಕಾಲಿಬಂಗ್/ಕಾಲಿಬಂಗನ್ ಎನ್ನುವ ಈಗಿನ ಸ್ಥಳವೇ ಆಗಿನ ವಿನಶನ.

ಪ್ರಾಯಶಃ ಈ ಕಣ್ಮರೆಯ ಕಾರಣಗಳನ್ನು ತಿಳಿಯಲು ಮಾಡಿರುವಷ್ಟು ಸಂಶೋಧನೆಗಳನ್ನು ಇತಿಹಾಸಜ್ಞರು ಹಾಗೂ ಭೂಗರ್ಭಶಾಸ್ತ್ರವೇತ್ತರು ಬೇರಾವ ನದಿಗೂ ಮಾಡಿಲ್ಲ. ಅರಾವಳಿ ಪರ್ವತವು ನಿಧಾನವಾಗಿ ಭೂಮಿಯಿಂದ ಮೇಲೇರುವ ಪ್ರವೃತ್ತಿಯುಳ್ಳದ್ದು. ಇದರ ಪರಿಣಾಮವಾಗಿ ಇದಕ್ಕೆ ಉಪನದಿಗಳಾಗಿದ್ದ ಶುತುದ್ರಿ, ಯಮುನಾ, ದೃಷದ್ವತೀ ಹಾಗು ಈ ಕಣಿವೆಯ ಹಲವಾರು ಚಿಕ್ಕ ನದಿಗಳು ತಮ್ಮ ಪ್ರವಾಹದ ದಿಕ್ಕನ್ನು ಬದಲಾಯಿಸಿಕೊಂಡಿವೆ ಎಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ತನ್ನ ಒಡಲನ್ನು ಸೇರುತ್ತಿದ್ದ ಮೂರು ಬೃಹತ್ ನದಿಗಳು ತನ್ನ ಸಹವಾಸವನ್ನೇ ತೊರೆದಿದ್ದರಿಂದ ಸರಸ್ವತಿಯ ವೇಗ ಹಾಗು ನೀರಿನ ಪ್ರಮಾಣದಲ್ಲಿ ಅಪಾರವಾದ ಕಡಿತವುಂಟಾಯಿತು. ಕೊನೆಗೆ ಸಮುದ್ರವನ್ನು ಸೇರುವಷ್ಟು ವೇಗವು ಸಹ ಅದರಲ್ಲಿ ಉಳಿಯದೆ ವಿನಶನ ಎಂಬ ಪ್ರದೇಶದಲ್ಲಿ ಭೂಮಿಯಲ್ಲಿ ಅಂತರ್ಗತವಾಯಿತು ಎಂಬುದಾಗಿ ಇತಿಹಾಸಕಾರರು ನಿರ್ಣಯಿಸಿದ್ದಾರೆ.

ಅಲಹಾಬಾದ್ ಎಂದು ವಿರೂಪಗೊಂಡಿರುವ ಪ್ರಯಾಗಕ್ಷೇತ್ರದಲ್ಲಿ ಸರಸ್ವತೀ, ಯಮುನೆ ಹಾಗು ಗಂಗೆಯರ ಸಂಗಮವಾಗುತ್ತದೆ ಎಂಬ ನಂಬಿಕೆಯಿದೆಯಷ್ಟೇ. ಅಲ್ಲಿ ಸರಸ್ವತಿಯು ಗುಪ್ತಗಾಮಿನಿ ಎಂದೇನೋ ಹೇಳುತ್ತಾರೆ. ಆದರೆ ಅದಕ್ಕೆ ಭೂಗರ್ಭರಚನಾ ಶಾಸ್ತ್ರದಲ್ಲಿ ಯಾವುದೇ ಆಧಾರಗಳು ದೊರಕಿಲ್ಲ. ಹಾಗಿದ್ದಲ್ಲಿ ಹಿರಿಯರು ನಂಬಿದ್ದು ಸುಳ್ಳೇ ಎಂಬ ಪ್ರಶ್ನೆ ಹುಟ್ಟಿದರೆ ಅದಕ್ಕೆ ಇತಿಹಾಸಕಾರರು ಒಂದು ಸಮಾಧಾನವನ್ನು ಕೊಟ್ಟಿದ್ದಾರೆ. ಈಗಿರುವ ಪಾತ್ರಕ್ಕೂ ಮೊದಲು ಯಮುನೆಯು ಎರಡು ಬಾರಿ ದಿಕ್ಕನ್ನು ಬದಲಾಯಿಸಿದ್ದಾಳೆ. ಎರಡನೆ ಬಾರಿ ಆಕೆಯು ಹರಿದಿದ್ದು ಸರಸ್ವತೀ ನದಿಯು ಮೊದಲು ಹರಿದು ಒಣಗಿಹೋಗಿದ್ದ ಪಾತ್ರದಲ್ಲಿ! ಹೀಗೆ ಸರಸ್ವತಿಯ ಪಾತ್ರದಲ್ಲಿ ಹರಿದ ಯಮುನೆಯೊಂದಿಗೆ ಗುಪ್ತವಾಗಿ ಸರಸ್ವತಿಯೂ ಇದ್ದಾಳೆ ಎನ್ನುವ ಅಭಿಪ್ರಾಯವನ್ನು ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ.

ಒಂದು ಕಾಲದಲ್ಲಿ ಹಸಿರು ಉಕ್ಕುತ್ತಿದ್ದ ಈ ಪ್ರದೇಶವು ಈಗ ಮರಳುಗಾಡಿನ ಭಾಗ! ಸ್ವಾರಸ್ಯವೆಂದರೆ ಈ ನದಿಯು ಭೂಮಿಯೊಳಗೆ ಸೇರಿ ಅಂತರ್ವಾಹಿನಿಯಾಗಿ ಹರಿದ ಸ್ಥಳದಲ್ಲಿ ಅಪಾರವಾದ ಸಿಹಿನೀರಿನ ಸಂಗ್ರಹವಿರುವುದನ್ನು ಆಧುನಿಕ ಉಪಗ್ರಹಗಳು ಪತ್ತೆಮಾಡಿವೆ. ಮಾತ್ರವಲ್ಲ, ಹಿಮಾಲಯ ಮೂಲದ ಆ ನೀರು ೧೪ಸಾವಿರ ವರ್ಷ ಹಳೆಯದು ಎಂಬುದಾಗಿ ಸಹ ತಿಳಿದು ಬಂದಿದೆ. ಈ ನೀರು ಮತ್ತ್ಯಾವುದೋ ಅಲ್ಲ. ಸರಸ್ವತೀ ನದಿಯು ತನ್ನ ವೇಗವನ್ನು ಕಳೆದುಕೊಂಡ ನಂತರ ಭೂಮಿಯ ಒಡಲಾಳಕ್ಕೆ ಇಳಿದದ್ದು. ಈ ಆಯಾಮದಲ್ಲಿ ಸರಸ್ವತಿಯು ನಿಜಕ್ಕೂ ಗುಪ್ತಗಾಮಿನಿಯೇ ಹೌದು.

ಹಿಮಾಲಯದ ಬದರೀನಾಥದ ಬಳಿಯಲ್ಲಿಯೂ ಒಂದು ನದಿಯ ಹೆಸರು ಸರಸ್ವತಿ ಎಂಬುದಾಗಿದೆ. ಪಶ್ಚಿಮ ಬಂಗಾಳ ಹೂಗ್ಲಿನದಿಯ ಕವಲೊಂದಕ್ಕೆ ಸರಸ್ವತಿ ಎಂಬ ಹೆಸರಿದೆ. ಆದರೆ ಆದರೆ ಋಗ್ವೇದದಲ್ಲಿ ಉಲ್ಲೇಖಿಸಿರುವ ಸರಸ್ವತಿ ಇವೆರಡೂ ಅಲ್ಲ. ಈ ಸರಸ್ವತಿಯ ಉದ್ದವಾಗಲಿ, ನೀರಿನ ಪ್ರಮಾಣವಾಗಲಿ ಇವುಗಳಿಗೆ ಇಲ್ಲ. ಬದರಿಯ ಸರಸ್ವತೀ ನದಿಯು ಅಲಕನಂದೆಯ ಉಪನದಿ.[7] ಬಂಗಾಲದ ಸರಸ್ವತಿಯು ಹೂಗ್ಲಿಯ ಕವಲು ನದಿ. (Distributary) ಋಗ್ವೇದದ ಸರಸ್ವತಿಯಾದರೋ ಬೃಹದಾಕಾರದ್ದು ಮತ್ತು ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ.

ಶುತುದ್ರಿ : ಪಂಜಾಬ್ ಪ್ರಾಂತ್ಯದಲ್ಲಿರುವ ಚಂಚಲವಾದ ಗತಿಯುಳ್ಳ ನದಿಯಿದು. ಈಗಿನ ಕಾಲದಲ್ಲಿ ಇದರ ಹೆಸರು ಸತಲಜ. ಹಿಮಾಲಯದಲ್ಲಿ ಜನಿಸಿ, ಭಾರತದಲ್ಲಿ ಪ್ರವಹಿಸಿ ಮುಂದೆ ಪಾಕಿಸ್ತಾನದಲ್ಲಿ ಪ್ರವೇಶಿಸಿ, ಚಿನಾಬ್ ನದಿಯೊಂದಿಗೆ ಸೇರಿ ಸಿಂಧುವಿನಲ್ಲಿ ಸಂಗಮಿಸುತ್ತದೆ.[8] ಭಾರತದಲ್ಲಿ ಹಿಮಾಚಲಪ್ರದೇಶ ಹಾಗು ಪಂಜಾಬಿನ ಅನೇಕ ಪ್ರಮುಖನಗರಗಳು ಈ ಸತಲಜ/ಸಟ್ಲೆಜ್ ನದಿಯ ದಂಡೆಯ ಮೇಲೆ ನೆಲೆಸಿವೆ.[9] ಶಿಮ್ಲಾ ಅಥವಾ ಕಿನ್ನೋರ್ ಪ್ರದೇಶಗಳಿಗೆ ನೀವು ಭೇಟಿ ನೀಡಿದ್ದಾದಲ್ಲಿ ಈ ನದಿಯ ನೀರನ್ನು ಪ್ರೋಕ್ಷಿಸಿಕೊಳ್ಳಬಹುದು.

ಪರುಷ್ಣೀ : ಇತಿಹಾಸದಲ್ಲಿ ಬಹು ಹೆಸರುವಾಸಿಯಾದ ನದಿಯಿದು. ಪ್ರಸಿದ್ಧವಾದ ದಾಶರಾಜ್ಞಯುದ್ಧ ನಡೆದದ್ದು ಈ ನದಿಯ ದಂಡೆಯಲ್ಲಿಯೇ. ಆಗ ಇದರ ಹೆಸರು ಇರಾವತೀ ಎಂಬುದಾಗಿ ಸಹ ಇತ್ತು. ವರ್ತಮಾನಕಾಲದ ಹೆಸರು ರಾವೀ. ಹಿಮಾಚಲಪ್ರದೇಶದ ಉನ್ನತಶಿಖರಗಳಿಂದ ಧುಮುಕುತ್ತಲೇ ಬರುವ ನದಿಯಿದು. ಹೀಗಾಗಿ ಉಗ್ರವಾದ ರಭಸ ಇಲ್ಲಿ ನಿತ್ಯದ ನೋಟ. ನದಿಯು ಮುಂದೆ ಪಾಕಿಸ್ತಾನದಲ್ಲಿ ಪ್ರವೇಶಿಸಿ ಚಿನಾಬ್ ನದಿಯೊಳಗೆ ಒಂದಾಗುತ್ತದೆ. ಪಾಕಿಸ್ತಾನದ ಪ್ರಸಿದ್ಧ ನಗರವಾದ ಲಾಹೋರ್ ಇರುವುದು ರಾವಿ ನದಿಯ ದಂಡೆಯ ಮೇಲೆ. ಭಾರತ ಹಾಗು ಪಾಕಿಸ್ತಾನದ ಸರಹದ್ದಿಗೆ ಭೇಟಿ ನೀಡುವ ಜನರು ಈ ನದಿಯ ದರ್ಶನ ಮಾಡಬಹುದು.

ಅಸಿಕ್ನೀ : ವೇಗ ಹಾಗು ಜಲಸಂಪನ್ಮೂಲದಲ್ಲಿ ಶುತುದ್ರಿಗೆ ಸಮಾನವಾಗಿ ಹರಿಯುವ ನದಿಯಿದು. ಚಿನಾಬ್ ಎಂಬುದಾಗಿ ಆಧುನಿಕ ಹೆಸರು. ಚನಾಬ್ ಎಂದೂ ಸಹ ಕರೆಯುತ್ತಾರೆ. ಹಿಮಾಚಲಪ್ರದೇಶದಲ್ಲಿ ಇದರ ಜನನ. ಚಂದ್ರಾ ಹಾಗು ಭಾಗಾ ಎರಡು ನದಿಗಳ ಸಂಗಮದಿಂದ ಉಂಟಾದ ನದಿಯಿದು. ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹರಿದು ಮುಂದೆ ಪಾಕಿಸ್ತಾನವನ್ನು ಪ್ರವೇಶಿಸುತ್ತದೆ. ಈ ಪಯಣದಲ್ಲಿ ಪರುಷ್ಣೀ ಹಾಗು ವಿತಸ್ತಾ ನದಿಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತದೆ. ಶುತುದ್ರಿಯೊಂದಿಗೆ ಒಂದಾಗಿ ಪಂಚನದೀ(ಪಂಜನದಿ) ಎನ್ನುವ ಹೊಸಹೆಸರನ್ನು ಪಡೆಯುತ್ತದೆ. ತನ್ನ ಯಾತ್ರೆಯ ಕೊನೆಯ ಹಂತವಾಗಿ ಸಿಂಧುನದಿಯಲ್ಲಿ ಈ ಪಂಜನದಿಯು ಸೇರಿಕೊಳ್ಳುತ್ತದೆ. ಕಾಶ್ಮೀರದ ಕಿಶ್ತ್ವಾರ್, ಅಖ್ನೂರ್ ಪಟ್ಟಣದ ಬಳಿ ಈ ನದಿಯ ಸ್ನಾನ/ಪ್ರೋಕ್ಷಣೆ ಮಾಡಿಕೊಳ್ಳಬಹುದು. ಪಾಕಿಸ್ತಾನದ ಗುಜ್ರನ್ವಾಲ, ಸಿಯಾಲ್ ಕೋಟ್ ಪಟ್ಟಣಗಳು ಈ ನದಿಯ ಮೇಲೆ ನಿರ್ಮಿತವಾಗಿವೆ.

ಮರುದ್ವೃಧಾ : ಇದಮಿತ್ಥಂ ಎಂದು ಯಾವ ಇತಿಹಾಸಕಾರರೂ ಗುರುತಿಸಲು ಆಗದೆ ಇರುವ ನದಿಯಿದು. ಕೆಲವರು ಇದನ್ನು ಅಸಿಕ್ನಿ ಮತ್ತು ವಿತಸ್ತಾ ನದಿಗಳ ಸಂಗಮದಿಂದ ಉಂಟಾದ ಹೊಸನದಿ ಎಂಬುದಾಗಿ ಹೇಳುತ್ತಾರೆ. ಇನ್ನೂ ಕೆಲವರು ಸಿಂಧೂ ನದಿಯ ಕೊಳ್ಳದ ಒಂದು ನದಿ ಎಂಬುದಾಗಿ ಅಷ್ಟೇ ಪರಿಗಣಿಸಿದ್ದಾರೆ. ಆದರೆ ವಿದ್ವಾನ್ ಶ್ರೀಸಾಣೂರು ಭೀಮಭಟ್ಟರು ನಮ್ಮ ಕಾವೇರಿ ನದಿಯೇ ಮರುದ್ವೃಧಾ ಎಂಬುದಾಗಿ ಪ್ರತಿಪಾದಿಸುತ್ತಾರೆ.[10]

ವಿತಸ್ತಾ: ಕಾಶ್ಮೀರದ ಚೆಲುವನ್ನು ದ್ವಿಗುಣಗೊಳಿಸಿದ ಸುಂದರ ನದಿಯಿದು. ಝೀಲಮ್ ಎಂಬುದು ವರ್ತಮಾನಕಾಲದ ಹೆಸರು. ಶ್ರೀನಗರದ ಬಳಿಯ ವೇರಿನಾಗ್ ಎನ್ನುವಲ್ಲಿ ಸರೋವರವೊಂದರಲ್ಲಿ ಇದರ ಜನನ. ಅಲ್ಲಿಂದ ಮುಂದೆ ಶ್ರೀನಗರವೂ ಸೇರಿದಂತೆ ಕಾಶ್ಮೀರದ ಹಲವು ಪಟ್ಟಣಗಳಲ್ಲಿ ಹರಿದು, ಮುಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳುತ್ತದೆ. ಅತ್ತ ಪಾಕಿಸ್ತಾನವೂ ಅಲ್ಲದ ಇತ್ತ ಭಾರತಕ್ಕೂ ಸೇರಬಯಸದ ಆಜಾದ್ ಕಾಶ್ಮೀರದಲ್ಲಿಯೂ ವಿತಸ್ತಾ ನದಿಯು ಹರಿಯುತ್ತದೆ.

ಅರ್ಜಿಕೀಯಾ: ನಿರುಕ್ತಕಾರರಾದ ಯಾಸ್ಕರು ವಿಪಾಶ ನದಿಯನ್ನು ಅರ್ಜಿಕೀ ಎಂದು ಹೇಳಿದ್ದಾರೆ. [11] ಆದರೆ ಪ್ರಸಕ್ತ ಕಾಲಮಾನದಲ್ಲಿ ಪಾಕಿಸ್ತಾನದ ಹಾರೋ ಎನ್ನುವ ನದಿಯನ್ನು ಇತಿಹಾಸಕಾರರು ಋಗ್ವೇದದ ಅರ್ಜಿಕೀ ನದಿ ಎಂಬುದಾಗಿ ಗುರುತಿಸಲು ಪ್ರಯತ್ನಿಸಿದ್ದಾರೆ. ಇಲ್ಲಿ ನಿರುಕ್ತಕಾರರ ವಚನವೇ ನಮಗೆ ಹೆಚ್ಚು ಆಪ್ತವಾಗುತ್ತದೆ. ವಿಪಾಶ ಹಾಗು ಶುತುದ್ರಿ ನದಿಗಳು ಉನ್ನತ ಪರ್ವತಗಳಿಂದ ಇಳಿದು ಬಂದು ಪರಸ್ಪರ ಸಂಗಮಿಸುತ್ತವೆ. ಇದೊಂದು ಮನೋಹರ ದೃಶ್ಯ.[12] ಸುಪ್ರಸಿದ್ಧ ವಿಹಾರ ತಾಣವಾದ ಮನಾಲಿಗೆ ನೀವು ಭೇಟಿ ನೀಡಿದ್ದಾಗ ಕಾಣುವ ಬಿಯಾಸ್ ನದಿಯೇ ಋಗ್ವೇದವು ವರ್ಣಿಸುವ ಅರ್ಜಿಕಿಯಾ ನದಿ. ವೇದವ್ಯಾಸದೇವರ ನಿತ್ಯಸನ್ನಿಧಾನವುಳ್ಳ ನದಿಯಿದು, ಹಾಗಾಗಿ ವ್ಯಾಸೀ(ಬ್ಯಾಸೀ) ಎನ್ನುವ ಹೆಸರು ಇದಕ್ಕೆ ಎಂದು ಸ್ಥಳೀಯರ ಅಭಿಮತ. ವ್ಯಾಸಿಯೇ ಬಿಯಾಸಿ/ಬಿಯಾಸ್ ಎಂಬುದಾಗಿ ತಿರುಚಿಕೊಂಡಿದೆ. ವಕಾರವನ್ನು ಬಕಾರವಾಗಿ ಉಚ್ಚರಿಸುವುದರ ಪರಿಣಾಮವಿದು.

ಸುಷೋಮಾ : ಪ್ರಸಕ್ತಕಾಲದಲ್ಲಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿಯೇ ಸೇರಿಹೋಗಿರುವ ನದಿಯಿದು. ಸೋಹನ್/ಸೋನ್ ಎನ್ನುವ ಹೆಸರಿನೊಂದಿಗೆ ಕರೆಯಲ್ಪಡುತ್ತಿದೆ. ಸಿಂಧು ಬಯಲಿನ ನದಿಗಳಲ್ಲಿ ಪ್ರಾಯಶಃ ಅತಿ ಚಿಕ್ಕದು. (ಗಾತ್ರದಲ್ಲಿ). ಆದರೆ ಜನಸಂಸ್ಕೃತಿಗೆ ಹಾಗು ಹೇರಳವಾದ ಪಶುಮಂದೆಗಳಿಗೆ ಜೀವನಾಧಾರವಾಗಿದ್ದ ನದಿಯಿದು ಎನ್ನಲು ಐತಿಹಾಸಿಕ ಕುರುಹುಗಳು ಇವೆ.

ಸಿಂಧು: ಗಂಗೆಯಷ್ಟೇ ಜಗತ್ಪ್ರಸಿದ್ಧವಾದ ನದಿಯಿದು. ಪ್ರಾಚೀನಭಾರತದ ವಾಯವ್ಯ ಭಾಗದ ಬಹುತೇಕ ಎಲ್ಲ ನದಿಗಳ ಅಂತಿಮ ಗುರಿ ಸಿಂಧುವಿನೊಂದಿಗೆ ಕೂಡಿಕೊಳ್ಳುವುದೇ ಆಗಿದೆ. ಕುಭಾ, ಗೋಮತೀ, ಕೃಮು, ಇತ್ಯಾದಿ ಹಾಗು ಅಸಿಕ್ನಿ ಮತ್ತು ಶುತುದ್ರಿಯ ಬಳಗ ಹೀಗೆ ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಸಿಂಧುವು ಪಾಕಿಸ್ತಾನ ಸಿಂಧ್ ಪ್ರಾಂತ್ಯದಲ್ಲಿ ಸಮುದ್ರದೊಳಗೆ ಪ್ರವೇಶಿಸುತ್ತದೆ. ಹರಿವಿನಲ್ಲಿ ಸಿಂಧುವು ಗಂಗೆಗಿಂತ ದೊಡ್ಡದಾಗಿದೆ. ಒಟ್ಟು ಉದ್ದ ೩೧೦೦ ಕಿಲೋಮೀಟರುಗಳು. ಇದರಲ್ಲಿ ಸುಮಾರು ೯೩ಪ್ರತಿಶತದಷ್ಟು ಪಾಕಿಸ್ತಾನದಲ್ಲಿಯೇ ಇದೆ. ಪರ್ಷಿಯನ್ನರು ಇದನ್ನು ಹಿಂದುವೆಂದು ಕರೆದರೆ ಗ್ರೀಕರಿಗೆ ಇದು ಇಂಡಸ್ ಆಗಿಬಿಟ್ಟಿತು. ಇಂಗ್ಲೀಷಿನ ವ್ಯಾಮೋಹಿಗಳಿಗೆ ಈಗಲೂ ಇದು ಇಂಡಸ್! ಅದೃಷ್ಟಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜನರಿಗೆ ಇನ್ನೂ ಸಿಂಧ್ ಆಗಿಯೇ ಉಳಿದಿದೆ. ಭಾರತದ ಲದ್ದಾಖ್ ಪ್ರಾಂತ್ಯದಲ್ಲಿಯೂ ಸಿಂಧುವಿನ ದರ್ಶನ/ಸ್ನಾನ/ಪ್ರೋಕ್ಷಣೆಗೆ ಅವಕಾಶವಿದೆ. ಭಾರತ ಸರ್ಕಾರವೇ ಪ್ರತಿವರ್ಷದ ಅಕ್ಟೋಬರ್ ತಿಂಗಳಿನ ಪೂರ್ಣಿಮೆಯಂದು ಸಿಂಧುದರ್ಶನವನ್ನು ಏರ್ಪಡಿಸುತ್ತದೆ.

ಕುಭಾ: ಅಫಘಾನಿಸ್ತಾನದ ಮತ್ತೊಂದು ಪ್ರಮುಖನದಿಯಿದು. ಗ್ರೀಕರ ನಾಲಗೆಯ ಮೇಲೆ ಇದು ಕೋಫೆನ್ ಎಂದಾಗಿದ್ದರೆ ಇನ್ನುಳಿದವರು ಕಾಬೂಲ್ ಎಂದು ಕರೆದರು. ಅಫಘಾನಿಸ್ಥಾನದ ರಾಜಧಾನಿಯಾದ ಕಾಬೂಲ್ ನಗರವು ಈ ನದಿಯ ದಂಡೆಯ ಮೇಲೆಯೇ ನಿರ್ಮಾಣಗೊಂಡಿದೆ. ಈ ನದಿಯು ಮುಂದೆ ಪಾಕಿಸ್ತಾನದ ಅತ್ತೋಕ್ ಎಂಬಲ್ಲಿ ಸಿಂಧುವಿನೊಂದಿಗೆ ಸಂಗಮಿಸುತ್ತದೆ.

ಗೋಮತೀ: ಭರತವರ್ಷದಲ್ಲಿ ಗೋಮತೀ ಎನ್ನುವ ಹೆಸರಿನ ಹಲವು ನದಿಗಳಿವೆ. ಆದರೆ ಋಗ್ವೇದದ ಈ ಸೂಕ್ತದಲ್ಲಿ ವಿವರಿಸಿರುವ ಗೋಮತಿಯನ್ನು ಈಗ ಗೊಮಾಲ್ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇದು ಸಹ ಅಫಘಾನಿಸ್ಥಾನದಲ್ಲಿದೆ.

ಕ್ರುಮು: ಕುರ್ರಂ ಎನ್ನುವ ಒರಟು ಹೆಸರಿಗೆ ಬದಲಾಗಿ ಹೋಗಿರುವ ವೈದಿಕ ನದಿಯಿದು. ಪಾಕಿಸ್ತಾನ ಹಾಗು ಅಫಘಾನಿಸ್ತಾನದ ಸರಹದ್ದಿನಲ್ಲಿ ಹರಿದು ಮುಂದೆ ಸಿಂಧೂನದಿಯೊಂದಿಗೆ ಸಂಗಮಿಸುತ್ತದೆ.

ಲಹರಿ – ೪

ಸರಿಯಾಗಿ ಗುರುತಿಸಲಾಗದೇ ಇರುವ ನದಿಗಳು

ತೃಷ್ಟಮಾ: ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ಹುಟ್ಟಿ ಸಿಂಧುನದಿಯೊಂದಿಗೆ ಸಂಗಮವಾಗುವ ಮತ್ತೊಂದು ನದಿಯಿದು. ಆಧುನಿಕ ಕಾಲದ ಗಿಲ್ಗಿತ್ ನದಿ ಎನ್ನುವ ಅಭಿಪ್ರಾಯವಿದೆ.

ರಸಾ: ಋಗ್ವೇದದ ಅನೇಕ ಕಡೆಗಳಲ್ಲಿ[13] ಉಲ್ಲೇಖಗೊಂಡಿರುವ ನದಿಯಿದು. ನದಿಯ ಪ್ರಾರ್ಥನೆಯ ಆಳವನ್ನು ಗಮನಿಸಿದಾಗ ಸಿಂಧುನದಿಯಷ್ಟೇ ಹಿರಿದಾದ ಸ್ಥಾನವನ್ನು ಅಂದಿನ ಋಷಿಗಳು ಇದಕ್ಕೆ ಕೊಟ್ಟಿದ್ದರೆಂದು ತಿಳಿಯುತ್ತದೆ.

ಸುಸರ್ತು, ಮೆಹನ್ತು, ಶ್ವೇತೀ, ಊರ್ಣಾವತೀ ಹಾಗು ಸೀಲಮಾವತಿಗಳ ಗುರುತಿಸುವಿಕೆಯು ಸಹ ಸಂಪೂರ್ಣವಾಗಿ ಆಗಿಲ್ಲ.

ಲಹರಿ – 5

ಈ ಮೇಲಿನ ನದೀಸ್ತುತಿ ಸೂಕ್ತದಲ್ಲಿ ಮಾತ್ರವಲ್ಲದೆ ವೇದ ಹಾಗು ಪುರಾಣಗಳ ಇನ್ನಿತರೆಡೆ ಕೂಡ ನದಿಗಳ ವರ್ಣನೆ ಕಾಣಸಿಗುತ್ತವೆ. ಹೆಚ್ಚಿನ ವಿವರಗಳು ಈ ನದಿಗಳ ಬಗ್ಗೆ ಲಭ್ಯವಿದ್ದರೂ ಸಹ ಲೇಖನವನ್ನು ಇನ್ನಷ್ಟು ದೀರ್ಘಕ್ಕೆ ತೆಗೆದುಕೊಂಡು ಹೋಗದೆ ಈ ಸಂಕ್ಷಿಪ್ತ ವಿವರಗಳನ್ನು ನೋಡೋಣ.

ಹಳೆಯ ಹೆಸರುಹೊಸ ಹೆಸರುಎಲ್ಲಿದೆದೇಶಊರುಗಳು
ಸುವಸ್ತುಸ್ವಾತ್ಸ್ವಾತ್ಪಾಕಿಸ್ತಾನ
ಗೌರಿಪಂಜ್ಕೋರಪಂಜ್ಕೋರ ಕಣಿವೆಪಾಕಿಸ್ತಾನ
ದೃಷದ್ವತೀಚೌತಾಂಗ್ / ಚಿತ್ರಾಂಗ್ರಾಜಸ್ಥಾನಭಾರತ
ಸರಯೂ[14]ಹರಿರುದ್ಹರಿರುದ್ ಪರ್ವತಆಫಘಾನಿಸ್ಥಾನ
ವೇತ್ರಾವತೀಬೇತ್ವಾಮಧ್ಯಪ್ರದೇಶಭಾರತಓರ್ಛಾ, ಹೊಶಂಗಾಬಾದ್, ವಿದಿಶಾ, ಹಮೀರ್ಪುರ
ಚರ್ಮಣ್ವತೀಚಂಬಲ್ಮಧ್ಯಪ್ರದೇಶಭಾರತ
ಲವಣಾವತೀಲೂಣೀರಾಜಸ್ಥಾನಭಾರತಪುಷ್ಕರ
ತಮಸಾಟೋನ್ಸ್ / ತೋನ್ಸ್ಬಿಹಾರ / ಉ.ಪ್ರ
ತಪತೀತಾಪೀಮ.ರಾ/ಗುಜರಾತ್ಭಾರತಭುಸಾವಳ್, ಸೂರತ್
ಕ್ಷಿಪ್ರಾಶಿಪ್ರಾಮಧ್ಯಪ್ರದೇಶಭಾರತಉಜ್ಜಯಿನೀ
ಅಜಿರಾವತೀರಪ್ತಿನೇಪಾಳ / ಭಾರತನೇಪಾಳ / ಭಾರತಗೋರಖಪುರ
ಹಳೆಯ ಹೆಸರುಹೊಸ ಹೆಸರುಎಲ್ಲಿದೆದೇಶಊರುಗಳು

ಈ ಲೇಖನವನ್ನು ಸಿದ್ಧಪಡಿಸಿದ್ದು ವಿವಿಧ ಕಾರಣಗಳಿಂದ ಈ ಮೇಲೆ ತಿಳಿಸಿರುವ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ. ಇಲ್ಲಿ ತಿಳಿಸಿರುವುದಕ್ಕಿಂತಲೂ ನಿಖರವಾದ ಮಾಹಿತಿಯು ಇನ್ನೂ ಹೆಚ್ಚಿನ ಸಂಶೋಧನೆಯಿಂದ ದೊರಕಿದ್ದಲ್ಲಿ/ದೊರಕಿದಲ್ಲಿ ಅದು ಯಾವಾಗಲೂ ಸ್ವಾಗತಾರ್ಹ.

ಅಡಿಟಿಪ್ಪಣಿಗಳು :-

[1] Si–yu-ki : Budhist Records of Western World

[2] ಅಲೆಕ್ಸಾಂಡರ್ ಹಾಗು ಅವನ ಹಿಂಬಾಲಕರು ಹೇಳಿದ ಜಝಾರ್ತೆಸ್ ನದಿಯು ಇದೇ ಎಂಬ ಅಭಿಪ್ರಾಯವು ಸಹ ಇದೆ. ಆದರೆ ಆ ಹೆಸರು ಭದ್ರಾ ಎನ್ನುವ ಈ ನದಿಗಿಂತ ರಸಾ (ಇದೇ ಲೇಖನದ ೯ನೇ ಪುಟ ನೋಡಿ) ಎಂಬ ಇನ್ನೊಂದು ನದಿಯ ವಿಕೃತಗೊಂಡ ಹೆಸರು ಎನ್ನುವುದು ಹೆಚ್ಚು ಸರಿ ಎನಿಸುತ್ತದೆ.

[3] ಈ ಅರಾಲ್ ಎನ್ನುವುದರ ಜೊತೆಗೆ ಸಮುದ್ರ ಎನ್ನುವ ಹೆಸರಿದ್ದರೂ ಈಗ ಅದು ಸಮುದ್ರವಲ್ಲ; ಕಝಕಿಸ್ತಾನ ಹಾಗು ಉಝ್ಬೆಕಿಸ್ತಾನ ದೇಶಗಳಿಂದ ಸುತ್ತುವರೆಯಲ್ಪಟ್ಟಿರುವ ಒಂದು ಬೃಹದಾಕಾರದ ಸರೋವರವಷ್ಟೇ. ಮಿಲಿಯಾಂತರ ವರ್ಷಗಳ ಹಿಂದೆ ಸಮುದ್ರದ ಒಂದು ಭಾಗವಾಗಿತ್ತು. ಭೂಮಿಯಿಂದ ಮೇಲೆ ಏರುವ ಪರ್ವತಗಳ ಚಟುವಟಿಕೆಯಿಂದ ಕಾಲಕ್ರಮೇಣ ಸಮುದ್ರದಿಂದ ಶಾಶ್ವತವಾಗಿ ಬೇರ್ಪಟ್ಟು ಈಗಿನ ಸರೋವರದ ರೂಪವನ್ನು ತಾಳಿದೆ. ಭಾಗವತವು ಉಲ್ಲೇಖಿಸಿರುವ ಸಮುದ್ರವು ಪ್ರಾಯಶಃ ಈ ಅರಾಲ್ ಸಮುದ್ರವೇ ಆಗಿರಲಿಕ್ಕೆ ಸಾಕು.

[4] ನದಿಗಳೆರಡು ಸಂಗಮಿಸಿದಾಗ ಆ ಎರಡು ನದಿಗಳಲ್ಲಿ ಒಂದರ ಹೆಸರು ಮರೆಯಾಗಿ ಹೋಗುತ್ತದೆ. ಇನ್ನೊಂದರ ಹೆಸರೇ ಕೊನೆಯವರೆಗೆ ಅಥವಾ ಅದಕ್ಕಿಂತಲೂ ದೊಡ್ಡ ನದಿಯೊಳಗೆ ಸಂಗಮಿಸುವ ಸ್ಥಳದವರೆಗೂ ಮುಂದುವರೆಯುತ್ತದೆ. ಈ ಸಂದರ್ಭಗಳಲ್ಲಿ ಹೆಚ್ಚಿನ ಜಲರಾಶಿಯನ್ನು ಹೊಂದಿದ, ಹಿಂದೆ ಹೆಚ್ಚಿನ ದೂರವನ್ನು ಕ್ರಮಿಸಿರುವ ಮತ್ತು ತಾರತಮ್ಯದಲ್ಲಿ ಉನ್ನತಸ್ಥಾನದಲ್ಲಿ ಇರುವ ನದಿಯ ಹೆಸರೇ ಮುಂದುವರೆಯುವುದು ಸಹಜ. ಉದಾಹರಣೆ : ವರದಾ ನದಿಯು ತುಂಗಭದ್ರೆಯೊಂದಿಗೆ ಸಂಗಮಿಸಿದ ನಂತರ ವರದೆಯ ಹೆಸರು ಕಣ್ಮರೆಯಾಗಿ ತುಂಗಭದ್ರೆಯ ಹೆಸರು ಮುಂದುವರೆಯುತ್ತದೆ. ಗಾತ್ರ, ದ್ರವ್ಯರಾಶಿ ಹಾಗು ತಾರತಮ್ಯಗಳಲ್ಲಿ ತುಂಗಭದ್ರೆಯೇ ವರದೆಗಿಂತ ಉತ್ತಮಳಾಗಿರುವುದು ಇದಕ್ಕೆ ಕಾರಣ. ಮುಂದುವರೆದಾಗ ತುಂಗಭದ್ರೆಯು ಕೃಷ್ಣೆಯೊಂದಿಗೆ ಸಂಗಮಿಸುತ್ತಾಳೆ. ಆಗ ತುಂಗಭದ್ರೆಯ ಹೆಸರು ಮರೆಯಾಗಿ ಕೃಷ್ಣೆಯ ಹೆಸರು ಮುಂದುವರೆಯುತ್ತದೆ. ಕೃಷ್ಣೆಯ ಹರಿವು, ವಿಸ್ತಾರ, ಕ್ರಮಿಸಿದ ದೂರ, ತಾರತಮ್ಯದಲ್ಲಿ ಅವಳಿಗಿರುವ ಸ್ಥಾನವು ತುಂಗಭದ್ರೆಗಿಂತಲೂ ಹೆಚ್ಚಿನದಾದ ಕಾರಣ ಈ ಹಿರಿಮೆ ಅವಳಿಗೇ ಸಲ್ಲುತ್ತದೆ.

ಇದೇ ರೀತಿಯಾಗಿ ಋಷಿಗಂಗಾ+ಅಲಕನಂದಾ, ಪಿಂಡಾರಿಗಂಗಾ+ಅಲಕನಂದಾ, ಮಂದಾಕಿನೀ+ಅಲಕನಂದಾ, ಧವಳಗಂಗಾ+ಅಲಕನಂದಾ ಸಂಗಮಗಳಲ್ಲಿ ಅಲಕನಂದೆಗೆ ಹಿರಿಯಕ್ಕನ ಸ್ಥಾನ. ಭಾಗೀರಥಿನದಿಯ ೨೦೫ ಕಿ.ಮೀ ಉದ್ದದ ಪಯಣದಲ್ಲಿ ಕೇದಾರಗಂಗಾ, ಜಡಗಂಗಾ (ಇದನ್ನೇ ಜಾಹ್ನವೀ ನದೀ ಎಂದು ಸ್ಥಳೀಯರು ಹೇಳುವುದುಂಟು), ಅಸಿಗಂಗಾ, ಭಿಲಾಂಗನಾ ಹಾಗು ಇನ್ನೂ ಅನೇಕ ನದಿಗಳನ್ನು ತನ್ನೊಳಗೆ ಸೇರಿಸಿಕೊಂಡರೂ ಸಹ ತನ್ನ ಹಿರಿಮೆಯನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಈ ಎಲ್ಲರೀತಿಯಿಂದಲೂ ಸಮಾನತೆಯನ್ನೇ ಹೊಂದಿರುವ ಈ ಎರಡು ನದಿಗಳು ಸಂಗಮಿಸಿದಾಗ ಎರಡರಲ್ಲಿ ಒಂದರ ಹೆಸರನ್ನು ಉಳಿಸಿಕೊಳ್ಳುವ ಸಂಪ್ರದಾಯವನ್ನು ಬಿಟ್ಟು ಎರಡೂ ನದಿಗಳ ಮೂಲಹೆಸರಾದ “ಗಂಗಾ” ಎನ್ನುವ ಹೆಸರನ್ನು ಹಿರಿಯರು ಬಳಕೆಗೆ ತಂದರು.

[5] ನದಿಯ ಅಭಿಮಾನಿದೇವತೆಗಳನ್ನು ಕುರಿತು ಓ ಗಂಗೆಯೆ, ಯಮುನೆಯೆ, ಶುತುದ್ರಿಯೇ….. ನನ್ನ ಪ್ರಾರ್ಥನೆಯನ್ನು ಕೇಳಿರಿ ಎಂಬುದು ಈ ಮಂತ್ರಗಳ ಸರಳಾನುವಾದ.

[6] ಅಂಬಿತಮೆ ನದೀತಮೆ ದೇವಿತಮೆ ಸರಸ್ವತಿ | ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ನಸ್ಕೃಧಿ || ಋಗ್ವೇದ ೨:೪೨:೧೬

[7] ಬದರಿಯಲ್ಲಿ ಅಲಕನಂದೆಯೊಂದಿಗೆ ಸರಸ್ವತೀ ನದಿಯು ಸಂಗಮಿಸುವ ಸ್ಥಳಕ್ಕೆ ಕೇಶವಪ್ರಯಾಗ ಎಂಬ ಹೆಸರಿದೆ

[8] ಸಾವಿರಾರು ವರ್ಷಗಳ ಹಿಂದೆ ಇದು ಸ್ವತಂತ್ರವಾದ ನದಿಯಾಗಿತ್ತು. ಮುಂದೆ ಸರಸ್ವತಿಯ ಉಪನದಿಯಾಗಿ ಬದಲಾಯಿತು. ಈಗ ಸಧ್ಯದ ಚಿನಾಬ್ ನದಿಯೊಂದಿಗೆ ಪಾಕಿಸ್ತಾನದಲ್ಲಿ ಸಂಗಮಿಸಿ ಪಂಜನದಿ ಎಂಬುವ ಹೊಸನದಿಗೆ ರೂಪವನ್ನು ಕೊಟ್ಟು ಮುಂದೆ ಸಿಂಧೂನದಿಗೆ ಉಪನದಿಯಾಗಿ ಪರಿಣಮಿಸುತ್ತದೆ!

[9] ಭಾಕ್ರಾ ನಂಗಾಲ್ ಅಣೆಕಟ್ಟೆ ಕಟ್ಟಿರುವುದು ಈ ನದಿಗೆ ಅಡ್ಡಲಾಗಿಯೇ

[10] ತೀರ್ಥಪ್ರಬಂಧ. ಪುಟ ೨೪೮. ಪ್ರ: ಪ್ರಸಂಗಾಭರಣತೀರ್ಥ ಪ್ರಕಾಶನ ಅನು: ಆಚಾರ್ಯ ಸಾಣೂರು ಭೀಮಭಟ್ಟರು.

[11] ನಿರುಕ್ತ ೯:೨೦

[12] ಪ್ರ ಪರ್ವತಾನಾಮುಶತೀ ಉಪಸ್ಥಾದಶ್ವೇ ಇವ ವಿಷಿತೇ ಹಾಸಮಾನೇ | ಗಾವೇವ ಶುಭ್ರೇ ಮಾತರಾ ರಿಹಾಣೇ ವಿಪಾಚ್ಛುತುದ್ರೀ ಪಯಸಾ ಜವೇತೇ || (ಋಗ್ವೇದ :೩:೩೩:೧)

[13] ಋ:೪:೪೩:೫, ೫:೪೧:೧೫, ೯:೪೧:೬, ೯:೪೩:೫ ಇತ್ಯಾದಿ

[14] ಅಯೋಧ್ಯೆಯಲ್ಲಿ ಹರಿಯುವ ಸರಯೂ ಇಲ್ಲಿ ಹೇಳಿರುವುದಕ್ಕಿಂತ ಭಿನ್ನವಾದುದು.

ಆಕರಗ್ರಂಥಗಳು :

The Vedas: An Introduction to Hinduism’s Sacred Texts

Gods, Sages and Kings: Vedic Secrets of Ancient Civilization

http://voiceofdharma.org/books/rig/ch4.htm

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts