ನದಿಯ ಸೆರಗ ಹಿಡಿದು ಒಂದು ಪಾವನ ಯಾತ್ರೆ

ಪೂಜ್ಯ ಗುರುಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ೬೦ನೆ ವರ್ಷದ ಜನ್ಮನಕ್ಷತ್ರದ ಅಂಗವಾಗಿ ಹೊರತಂದ “ರೌಪ್ಯದೀಪ” ಎನ್ನುವ ಸ್ಮರಣಸಂಚಿಕೆಗೆ ಬರೆದ ಲೇಖನ ಇದು. ಬರೆದ ಎನ್ನುವುದಕ್ಕಿಂತ ಅವರೇ ನನ್ನಲ್ಲಿ ಚೈತನ್ಯತುಂಬಿ ಬರೆಸಿದ ಲೇಖನ ಎನ್ನುವುದು ಸರಿ. ಯಾಕೆಂದರೆ ರೌಪ್ಯದೀಪದಲ್ಲಿ ಲೇಖನಗಳನ್ನು ಬರೆದ ಇತರರು ಸಾಮಾನ್ಯರಲ್ಲ. ಎಲ್ಲರೂ ಅತಿರಥ ಮಹಾರಥರೇ. ಎಲ್ಲರೂ ವೇದಾಂತ ಹಾಗು ಇತಿಹಾಸದ ವಿಷಯಗಳಲ್ಲಿ ಅಗಾಧವಾದ ತಿಳುವಳಿಕೆಯನ್ನು ಸಂಪಾದಿಸಿದ ವಿದ್ವಾಂಸರು. ಇಂತಹವರ ಮಧ್ಯ ನನ್ನದೂ ಒಂದು ಲೇಖನ ಮೂಡಿಬಂದಿರುವುದು ನನ್ನ ಸಾಮರ್ಥ್ಯದಿಂದಲ್ಲ. ಅದು ಗುರುಗಳ ಕೃಪೆ. ಅಷ್ಟೇ.

ಹಂಸ ಮಧ್ಯೇ ಬಕೋ ಯಥಾ ಎನ್ನುವ ಹಾಗೆ ನನ್ನ ಯೋಗ್ಯತೆ. ಬಣ್ಣ ಮಾತ್ರ ಹಂಸದಂತೆ ಬಿಳಿ, ಗುಣ ಮಾತ್ರ ಕೊಕ್ಕರೆಯದ್ದೇ. ಕೆಸರವಾಸಕ್ಕೇ ಸರಿಯೆನಿಸಿದ ಕೊಕ್ಕರೆಗೂ ಸರೋವರವಿಹಾರದ ಅವಕಾಶ ಕಲ್ಪಿಸಿದ ಗುರುಗಳ ಕರುಣೆಗೆ ನಾನು ಚಿರಋಣಿಯಾಗಿದ್ದೇನೆ.

************************

ಲೇಖನವನ್ನು ಸಂಪೂರ್ಣವಾಗಿ ಓದುವ ಮೊದಲು ಇರಾನಿನಿಂದ ಪ್ರಾರಂಭಿಸಿ ಮಯನ್ಮಾರ್ ದೇಶದವರೆಗೆ, ರಷ್ಯದ ದಕ್ಷಿಣತುದಿಯಿಂದ ಆರಂಭಿಸಿ ಶ್ರೀಲಂಕೆಯವರೆಗೆ ವ್ಯಾಪಿಸಿದ್ದ ಪ್ರಾಚೀನ ಭಾರತದೇಶವನ್ನು ಮನದಲ್ಲಿ ಕಲ್ಪಿಸಿಕೊಳ್ಳಿರಿ.

ಲಹರಿ – 1

ನದಿಗಳೆಂದರೆ ಕೇವಲ ನೀರಿನ ಹರಿವು ಮಾತ್ರ ಎಂದೆಣಿಸಲಾಗದು. ನದಿಯು ಅಸಂಖ್ಯವಾದ ಜೀವಿಗಳಿಗೆ ಚೇತನದಾಯಿ. ಅಲ್ಲಿಗೂ ಅದರ ವ್ಯವಹಾರವನ್ನು ಸೀಮಿತಗೊಳಿಸಲಾಗದು. ನದಿಗಳು ಸಂಸ್ಕೃತಿಯೊಂದನ್ನು ಹುಟ್ಟುಹಾಕಿ ಸಾವಿರಾರು ವರ್ಷಗಳ ಕಾಲ ಅದನ್ನು ಜೀವಂತವಾಗಿರುವಂತೆ ನೋಡಿಕೊಳ್ಳುವ ಶಕ್ತಿಯ ಸ್ರೋತಗಳು ಎನ್ನುವುದು ಸರಿಯಾದ ಅಭಿಪ್ರಾಯ. ಜಗತ್ತಿನ ಅನೇಕ ಬೃಹತ್ ನದಿಗಳು ಹಾಗು ಅವುಗಳ ಜೊತೆಗೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ ಜನಸಂಸ್ಕೃತಿಗಳ ಹಿನ್ನೆಲೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಭಿಪ್ರಾಯಕ್ಕೆ ಪುಷ್ಟಿ ದೊರೆಯುವುದು. ಭರತವರ್ಷದ ಗಂಗಾದಿ ಪುಣ್ಯನದಿಗಳು, ಕಗ್ಗತ್ತಲೆಯ ಖಂಡದಿಂದ ಹೊರಹೊಮ್ಮಿ ಮರಳುಗಾಡಿನಲ್ಲಿಯೂ ಜಿಜೀವಿಷೆಯನ್ನು ಉಂಟುಮಾಡಿರುವ ಈಜಿಪ್ಟಿನ ನೀಲನದಿ, ಇರಾಕಿನ ಯೂಫ್ರೆಟಿಸ್ ಹಾಗು ಟೈಗ್ರಿಸ್ ನದಿಗಳು, ಚೀನದ ಯಾಂಗ್ಟ್ಸೆ, ದಕ್ಷಿಣ ಅಮೆರಿಕದ ಅಮೆಝಾನ್ ಹೀಗೆ ಅನೇಕ ನದಿಗಳು ವಿವಿಧ ಸಂಸ್ಕೃತಿಗಳಿಗೆ ಜನ್ಮ ನೀಡಿರುವ ತೊಟ್ಟಿಲುಗಳಾಗಿವೆ.

ಜಗತ್ತಿನ ಇತರೆಡೆ ಇತರೆಡೆ ನದಿಗಳನ್ನು ಕೇವಲ ಜೀವನಾಡಿ ಎನ್ನುವ ಭೌತಿಕರೂಪದಲ್ಲಿ ಮಾತ್ರ ನೋಡಿದರೆ ಭರತವರ್ಷದಲ್ಲಿ ನದಿಗಳ ದೈವಿಕರೂಪವನ್ನು ಕಣ್ಣಾರೆ ಕಂಡು ಅದನ್ನು ಆತ್ಮಾನುಸಂಧಾನ ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ವೇದಗಳು ನೂರಾರು ನದಿಗಳನ್ನು ಹಾಡಿಹೊಗಳಿರುವುದು. ಈ ಸ್ತೋತ್ರಗಳಲ್ಲಿ ನದಿಗಳನ್ನು ಕೇವಲ ಬಾಯಾರಿಕೆಯನ್ನು ತಣಿಸುವ ನೀರಿನ ತಾಣಗಳಾಗಿ ನೋಡದೆ ಆತ್ಮೋನ್ನತಿಯ ಹೆದ್ದಾರಿಯನ್ನಾಗಿ ಪರಿಗಣಿಸಲಾಗಿದೆ. ನದಿಯ ಅಭಿಮಾನಿದೇವತೆಯ ಕೃಪೆಯನ್ನು ಪಡೆಯದೆ ಮುಂದಿನ ಯಾವ ಶುಭ ಕಾರ್ಯವೂ ಸಾಗದು ಎನ್ನುವಷ್ಟರ ಮಟ್ಟಿಗೆ ಜನಜೀವನದೊಂದಿಗೆ ನದಿಗಳ ಸಂಬಂಧ ಹೆಣೆದುಕೊಂಡಿದೆ. ಆದರೆ ಪ್ರಸ್ತುತಕಾಲದ ದೌರ್ಭಾಗ್ಯವೆಂದರೆ ಕಲಿಪುರುಷನ ಪ್ರಭಾವದಿಂದ ಭರತವರ್ಷದ ಅನೇಕ ನದಿಗಳು ಒಂದೋ ತಮ್ಮ ಪ್ರಾಚೀನ ಹೆಸರನ್ನು ಕಳೆದುಕೊಂಡುಬಿಟ್ಟಿವೆ ಅಥವಾ ಈಗಿನ ಪೀಳಿಗೆಗೆ ಅವುಗಳ ಪರಿಚಯವೇ ಇಲ್ಲ. ಇನ್ನೂ ಅನೇಕ ನದಿಗಳು ಪರದೇಶಗಳ ಪಾಲಾಗಿಬಿಟ್ಟಿವೆ.

ಪ್ರಸಕ್ತ ಲೇಖನವು ಈ ವೈದಿಕಮಂತ್ರಗಳ ಅಂತರಾಳವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಇದು ಅನ್ಯರ ದಾಳಿಗೊಳಗಾಗಿ ಮೂಲಹೆಸರನ್ನು ಕಳೆದುಕೊಂಡ ನದಿಗಳ ಈಗಿನಕಾಲದ ವಿವರಗಳನ್ನು ಇತಿಹಾಸಜ್ಞರು ಗುರುತಿಸಿರುವಂತೆ ಸಂಗ್ರಹಿಸಿ ಒಂದೆಡೆ ಕೊಡುವ ಪ್ರಯತ್ನ ಮಾತ್ರ. ಆಕಸ್ಮಿಕವಾಗಿಯಾಗಲಿ ಉದ್ದೇಶಪೂರ್ವಕವಾಗಿಯೇ ಆಗಲಿ ಈ ಸ್ಥಳಗಳಲ್ಲಿ ಓಡಾಡುವ ಅನುಕೂಲ ನಿಮಗೆ ದೊರೆತಲ್ಲಿ ನೀವೇ ಪುಣ್ಯವಂತರು. ಸ್ನಾನ ಮಾಡಲು/ಪ್ರೋಕ್ಷಣೆ ಮಾಡಿಕೊಳ್ಳಲು ಅವಕಾಶ ದೊರೆತಲ್ಲಿ ನೀವೇ ಮಹಾಭಾಗ್ಯಶಾಲಿಗಳು.

ಎಲ್ಲರೂ ತಿಳಿದಿರುವಂತೆ ಭಗೀರಥನ ಪ್ರಯತ್ನದಿಂದ ದೇವಲೋಕದ ಗಂಗೆಯು ಭೂಲೋಕಕ್ಕೆ ಬಂದಳಷ್ಟೇ. ಅಪರಿಮಿತವಾದ ಜಲರಾಶಿ ಹಾಗು ವೇಗವನ್ನು ಹೊಂದಿದ್ದ ಗಂಗೆ ಮೇರು ಪರ್ವತದ ತುದಿಯಲ್ಲಿ ಮೇಲಿಂದ ಅಪ್ಪಳಿಸಿದಾಗ ಹೊರಚಿಮ್ಮಿದ ಶಾಖೆಗಳು ಅಸಂಖ್ಯ. ಅವುಗಳಲ್ಲಿ ಭಾಗವತ ಮಹಾಪುರಾಣವು ನಾಲ್ಕು ಶಾಖೆಗಳನ್ನು ಪ್ರಧಾನ ಎಂಬುದಾಗಿ ಪರಿಗಣಿಸಿದೆ. ಸೀತಾ, ಭದ್ರಾ, ಚಕ್ಷು ಹಾಗು ಅಲಕನಂದಾ ಎಂಬುವುವೇ ಆ ಪ್ರಧಾನ ಶಾಖೆಗಳು.

ಸೀತಾನದಿಯು ಕೇಸರಾಚಲ ಹಾಗು ಗಂಧಮಾದನ ಪರ್ವತಗಳನ್ನು ಬಳಸಿಕೊಂಡು ಮುಂದೆ ಭದ್ರಾಶ್ವ ವರ್ಷದಲ್ಲಿ ಹಾಯ್ದು ಪಶ್ಚಿಮಕ್ಕೆ ತಿರುಗಿ ಕೊನೆಗೆ ಸಮುದ್ರವನ್ನು ಸೇರುತ್ತದೆ ಎಂದು ಭಾಗವತವು ವರ್ಣಿಸುತ್ತದೆ. (ಭಾಗವತ ೫:೧೭:೬). ಪ್ರಸಕ್ತ ಕಾಲಮಾನದಲ್ಲಿ ಚೀನಕ್ಕೆ ತಾನು ಬಿಟ್ಟುಕೊಟ್ಟಿದ್ದೇನೆ ಎಂದು ಪಾಕಿಸ್ತಾನ ಹೇಳುತ್ತಿರುವ ಆದರೆ ಭಾರತಕ್ಕೆ ಸೇರಬೇಕಾದ ಸಿಂಜಿಯಾಂಗ್ ಪ್ರಾಂತ್ಯವನ್ನು ಇತಿಹಾಸತಜ್ಞರು ಭದ್ರಾಶ್ವಖಂಡವೆಂದು ಗುರುತಿಸಿದ್ದಾರೆ. ಈ ಭಾಗದಲ್ಲಿ ಹರಿಯುತ್ತಿರುವ ಯಾರ್ಕಂದ್ ನದಿಯೇ ಪ್ರಾಚೀನಕಾಲದ ಸೀತಾನದಿಯೆಂದು ತಜ್ಞರ ಅಭಿಮತ. ಪ್ರಾಚೀನ ಚೀನಿ ಯಾತ್ರಿಕನಾದ ಹು-ಯೆನ್-ತ್ಸಾಂಗ್ (ಯುವಾನ್ಜಾಂಗ್/ಜುವಾನ್ಜಾಂಗ್) ಇದನ್ನು ’ಸಿಟೋ ’[1] ಎಂದು ಕರೆದದ್ದು ತಜ್ಞರ ಈ ಅಭಿಪ್ರಾಯಕ್ಕೆ ಪುಷ್ಟಿಯನ್ನು ಕೊಡುತ್ತದೆ.

ಭದ್ರಾ ಎನ್ನುವ ಶಾಖೆಯು ಮೇರುಪರ್ವತದ ಮೇಲಿನಿಂದ ಚಿಮ್ಮಿ ಕುಮುದಪರ್ವತ, ನೀಲಪರ್ವತ, ಶ್ವೇತಪರ್ವತಗಳ ಮೇಲಿನಿಂದ ಧುಮುಕಿ ಉತ್ತರಕುರು ದೇಶದೊಳಗೆ ಪ್ರವೇಶಿಸುತ್ತದೆ. ಕೊನೆಗೆ ಉತ್ತರಭಾಗದಲ್ಲಿರುವ ಸಮುದ್ರದೊಳಗೆ ಸೇರುತ್ತದೆ ಎಂದು ಭಾಗವತವು ಹೇಳಿದೆ (ಭಾಗವತ ೫:೧೭:೮). ಉತ್ತರಕುರುದೇಶವಿರುವುದು ಪ್ರಾಚೀನ ಭಾರತದ ಉತ್ತರಭಾಗದಲ್ಲಿ. ಈ ಭಾಗದಲ್ಲಿ ಹರಿದ ಭದ್ರಾ ನದಿಗೆ ಕಾಲಕ್ರಮೇಣ ಹೆಸರು ಬದಲಾಯಿಸಿ ಹೋಯಿತು. ಈ ಭಾಗದ ದೇಶಗಳು ಇಸ್ಲಾಂ ಹಾಗು ಕ್ರೈಸ್ತಮತಾವಲಂಬಿಗಳಾಗಿದ್ದರ ಪರಿಣಾಮವಾಗಿ ಭದ್ರಾ ನದಿಗೆ ತಮ್ಮದೇ ಆದ ಹೆಸರನ್ನು ಸಹ ಇಟ್ಟವು. ಸಿರ್ ದರಿಯಾ[2] ಎಂಬುದೇ ಅವರು ಹೇಳುತ್ತಿರುವ ಹೆಸರು. ಪ್ರಸಕ್ತ ಕಾಲದಲ್ಲಿ ಈ ನದಿಯ ಉಗಮಸ್ಥಾನವಾದ ಹಿಮದರಾಶಿಯು ಕಿರ್ಗಿಸ್ತಾನ್ ಹಾಗು ಉಝ್ಬೆಕಿಸ್ತಾನ ದೇಶಗಳ ಸರಹದ್ದಿನಲ್ಲಿದೆ. ಮುಂದೆ ನದಿಯು ತಝಿಕಿಸ್ತಾನ ಹಾಗು ಕಝಕಿಸ್ತಾನದಲ್ಲಿ ಹರಿಯುತ್ತದೆ. ೨೨೧೨ಕಿ.ಮೀ ಪಯಣಿಸಿ ಈ ನದಿಯು ಕೊನೆಯಲ್ಲಿ ಅರಾಲ್ ಸಮುದ್ರವನ್ನು ಉತ್ತರಭಾಗದಿಂದ ಪ್ರವೇಶಿಸುತ್ತದೆ.

ಮೂಲಗಂಗೆಯದ್ದೇ ಇನ್ನೊಂದು ಶಾಖೆಯಾದ ಚಕ್ಷುವು ಕೇತುಮಾಲಾ ವರ್ಷದ ಕಡೆಗೆ ತನ್ನ ಪಯಣ ಬೆಳೆಸಿತೆಂದು ಭಾಗವತ ಹೇಳಿದೆ (ಭಾಗವತ ೫:೧೭:೭). ಈ ನದಿಗೆ ಈಗ ಅಫಘಾನಿಸ್ಥಾನದ ಒಣಭೂಮಿಯನ್ನು ತಣಿಸುವ ಕಾಯಕ. ಪಂಜ್ ಶಿರ್ ಎನ್ನುವ ಇನ್ನೊಂದು ದೊಡ್ಡ ನದಿಯನ್ನು ತನ್ನೊಳಗೆ ಸೇರಿಸಿಕೊಂಡು ಮುಂದುವರೆಯುವ ಚಕ್ಷುವು ಈಗ ಆಫಘಾನಿಸ್ಥಾನದ ಮಹಾನದಿ. ಇದರ ಒಟ್ಟು ಉದ್ದ ೨೪೦೦ ಕಿ.ಮೀ. ಪಂಜ್ ನದಿಯು ಇದರೊಟ್ಟಿಗೆ ಸಂಗಮವಾಗುವವರೆಗೂ ಇದಕ್ಕೆ ವಕ್ಷ್ ಎನ್ನುವ ಹೆಸರೇ ಇದೆ. ಇದಾದರೂ ಚಕ್ಷು ಎನ್ನುವ ಹೆಸರಿನ ರೂಪಾಂತರವೇ ಆಗಿದೆ. ಇದನ್ನೇ ರೋಮನ್ನರು ಹಾಗು ಗ್ರೀಕರು ಆಕ್ಸಸ್ ಎಂದು ಕರೆದರು. ಪಂಜ್ ಮತ್ತು ವಕ್ಷ್ ನದಿಗಳ ಸಂಗಮವಾದ ನಂತರ ಇದಕ್ಕೆ ಅಮು ದರಿಯಾ ಎನ್ನುವ ಹೆಸರು ಬಂದಿದೆ. ಈ ಹೊಸ ನಾಮಕರಣಕ್ಕೆ ಪರ್ಷಿಯನ್ನರು ಕಾರಣೀಭೂತರು. ಈ ಬದಲಾವಣೆಗಳು ನಡೆದದ್ದು ಸಾವಿರಕ್ಕೂ ವರ್ಷಗಳ ಹಿಂದೆ. ಪರ್ಷಿಯನ್ ಭಾಷೆಯಲ್ಲಿ ದರ್ಯಾ ಎಂದರೆ ನದಿ. ಭಾಗವತದಲ್ಲಿ ಚಕ್ಷುನದಿಯು ಪಶ್ಚಿಮದಿಕ್ಕಿನಲ್ಲಿರುವ ಸಮುದ್ರದೊಳಗೆ ಒಂದಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಈ ಅಮುದರಿಯಾ ನದಿಯು ಅಫಘಾನಿಸ್ಥಾನದಲ್ಲಿ ಹರಿದು ಮುಂದೆ ಪಶ್ಚಿಮ ದಿಕ್ಕಿನಲ್ಲಿರುವ ಅರಾಲ್ ಸಮುದ್ರ[3]ದಲ್ಲಿ ಸೇರುತ್ತದೆ.

ಆಕಾಶಗಂಗೆಯ ನಾಲ್ಕನೆಯ ಪ್ರಧಾನ ಶಾಖೆಯಾದ ಅಲಕನಂದೆಯು ಬ್ರಹ್ಮಲೋಕದಿಂದ ಕೆಳಗಿಳಿದು, ಹೇಮಕೂಟ, ಹಿಮಕೂಟ ಪರ್ವತಗಳ ಮೇಲೆ ರಭಸದಿಂದ ಧುಮುಕಿದಳು. ಆ ಪರ್ವತಶಿಖರಗಳನ್ನು ತನ್ನ ಜಲರಾಶಿಯಲ್ಲಿ ಮುಳುಗಿಸಿ ಮುಂದೆ ದಕ್ಷಿಣದಿಕ್ಕಿನಲ್ಲಿರುವ ಭರತವರ್ಷಕ್ಕೆ ಹರಿದುಬಂದಳು. ಪ್ರಸಕ್ತ ಭಾರತಕ್ಕೆ ದೊರಕಿರುವ ಗಂಗೆಯ ಪ್ರಧಾನಶಾಖೆ ಇದೊಂದೆ. ಅಲಕನಂದೆಯು ಅಲಕಾಪುರಿಯ ಮೂಲಕ ಭರತವರ್ಷವನ್ನು ಪ್ರವೇಶಿಸಿ ರಭಸದಿಂದ ಮುನ್ನುಗ್ಗುತ್ತಾಳೆ. ಸುಮಾರು ೧೯೫ಕಿ.ಮೀ ಪಯಣಿಸಿದ ನಂತರ ಹಿಮಾಲಯದ ಇನ್ನೊಂದು ಪಾರ್ಶ್ವದಲ್ಲಿ ಚಿಮ್ಮಿದ ಗಂಗೆಯ ಇನ್ನೊಂದು ಶಾಖೆಯಾದ ಭಾಗೀರಥಿಯು ಬಂದು ಅಲಕನಂದೆಯೊಂದಿಗೆ ಸಂಗಮಿಸುತ್ತಾಳೆ. ಈ ಸ್ಥಳಕ್ಕೆ ದೇವಪ್ರಯಾಗವೆಂದು ಹೆಸರು. ಈ ಸಂಗಮದ ನಂತರ ಅಲಕನಂದಾ ಹಾಗು ಭಾಗೀರಥಿ ಎನ್ನುವ ಎರಡೂ ಹೆಸರುಗಳು ಮರೆಯಾಗಿ[4] “ಗಂಗಾ” ಎನ್ನುವ ಜಗತ್ಪ್ರಸಿದ್ಧ ಹೆಸರು ಈ ನದಿಗೆ ದೊರೆಯುತ್ತದೆ.

ಲಹರಿ – 2

ಭಾಗವತವು ವಿವರಿಸಿರುವ ಗಂಗೆ ಹಾಗು ಅವಳ ಪ್ರಧಾನ ಶಾಖೆಗಳನ್ನು ನೋಡಿಯಾದ ಮೇಲೆ, ಋಗ್ವೇದವು ಸ್ತುತಿಸಿರುವ ಕೆಲವು ನದಿಗಳತ್ತ ಗಮನ ಹರಿಸೋಣ.

ಪ್ರತಿನಿತ್ಯ ಕಲಶಪೂಜೆಯನ್ನು ಮಾಡುವಾಗ ಹೇಳುವ ಶ್ರುತಿಯೊಂದು ಹೀಗಿದೆ.

ಇಮಂ ಮೇ ಗಂಗೇ ಯಮುನೆ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣಿಯಾ |
ಅಸಿಕ್ನಿಯಾ ಮರುದ್ವೃಧೆ ವಿತಸ್ತಯಾರ್ಜಿಕಿಯೇ ಶೃಣುಹ್ಯಾ ಸುಷೋಮಯಾ || (ಋಗ್ವೇದ ೧೦:೭೫:೫)

ಇದು ಋಗ್ವೇದದ ೧೦ನೆಯ ಮಂಡಲದಲ್ಲಿರುವ ೭೫ನೆಯ ಸೂಕ್ತ, ನದೀ ಸ್ತುತಿ[5] ಸೂಕ್ತವೆಂದೇ ಪ್ರಸಿದ್ದಿಯಾಗಿದೆ. ಈ ಸೂಕ್ತದ ದ್ರಷ್ಟಾರರು ಸಿಂಧುಕ್ಷಿತ ಪ್ರೈಯಮೇಧರು. ಇಲ್ಲಿ ಕೆಲವು ನದಿಗಳ ಅಭಿಮಾನಿ ದೇವತೆಗಳನ್ನು ಕುರಿತು ಪ್ರಾರ್ಥಿಸಿಲಾಗಿದೆ. ಅವುಗಳು ಯಾವುವೆಂದರೆ ಗಂಗೆ, ಯಮುನೆ, ಸರಸ್ವತಿ, ಶುತುದ್ರಿ, ಪರುಷ್ಣಿ, ಅಸಿಕ್ನೀ, ಮರುದ್ವೃಧಾ, ವಿತಸ್ತಾ, ಅರ್ಜಿಕೀ ಹಾಗು ಸುಷೋಮಾ.

ಪ್ರಾರ್ಥನೆಯು ಮುಂದಿನ ಮಂತ್ರಗಳಲ್ಲಿ ಮುಂದುವರೆಯುತ್ತದೆ.

ತೃಷ್ಟಾಮಯಾ ಪ್ರಥಮಂ ಯಾತವೇ ಸಜೂಃ ಸುಸರ್ತ್ವಾ ರಸಯಾ ಶ್ವೇತ್ಯಾ ತ್ಯಾ |
ತ್ವಂ ಸಿಂಧೋ ಕುಭಯಾ ಗೋಮತೀಂ ಕ್ರುಮುಂ ಮೆಹನ್ತ್ವಾ ಸರಥಂ ಯಾಭಿರೀಯಸೇ ||

ಈ ಶ್ರುತಿಯಲ್ಲಿ ಹೆಸರಿಸಿರುವ ನದಿಗಳು ಇವುಗಳು : ತೃಷ್ಟಮಾ, ಸುಸರ್ತು, ರಸಾ, ಶ್ವೇತೀ, ಸಿಂಧು, ಕುಭಾ, ಗೋಮತೀ, ಕೃಮು, ಮತ್ತು ಮೆಹನ್ತು.

ಇದೇ ಸೂಕ್ತದ ಎಂಟನೆಯ ಮಂತ್ರದಲ್ಲಿ

ಸ್ವಶ್ವಾ ಸಿಂಧುಃ ಸುರಥಾ ಸುವಾಸಾ ಹಿರಣ್ಯಯೀ ಸುಕೃತಾ ವಾಜಿನೀವತೀ |
ಊರ್ಣಾವತೀ ಯುವತಿಃ ಸೀಲಮಾವತ್ಯುತಾಧಿ ವಸ್ತೆ ಸುಭಗಾ ಮಧುವೃಧಮ್ ||

ಎಂದು ಹೇಳಲಾಗಿದೆ. ಇಲ್ಲಿ ಪ್ರಸ್ತಾಪಿಸಿರುವ ನದಿಗಳು ಯಾವುವೆಂದರೆ ಊರ್ಣಾವತೀ ಹಾಗು ಸೀಲಮಾವತೀ.

ಲಹರಿ – ೩

ಈಗ ಈ ಮೇಲೆ ತಿಳಿಸಿದ ನದಿಗಳ ಸುಂದರವಾದ ವೈದಿಕ ಹೆಸರುಗಳು ಏನಾಗಿವೆ? ಯಾವ ನದಿಯು ಎಲ್ಲಿ ಹರಿಯುತ್ತಿದೆ ಎಂಬುದನ್ನು ಸಂಕ್ಷಿಪ್ತದಲ್ಲಿ ನೋಡೋಣ.

ಗಂಗೆ : ಈಗಾಗಲೇ ಮೇಲೆ ತಿಳಿಸಿರುವಂತೆ ಅಲಕನಂದೆ ಹಾಗು ಭಾಗೀರಥಿನದಿಗಳ ಸಂಗಮದಿಂದ ಉಂಟಾಗಿದ್ದು ಗಂಗಾನದಿ. ತನ್ನ ಒಟ್ಟು ಹರಿವಿನಲ್ಲಿ ೯೦ಕ್ಕೂ ಹೆಚ್ಚು ಪ್ರತಿಶತ ಭರತವರ್ಷದಲ್ಲೇ ಕ್ರಮಿಸಿರುವ ಪ್ರಯುಕ್ತ (ಒಟ್ಟು ಉದ್ದ ೨೫೨೫ಕಿ.ಮೀ)ಭಾರತೀಯರಿಂದ ಗಂಗೆಯ ಹೆಸರಿಗೆ ಯಾವುದೇ ಅಪಚಾರವಾಗಿಲ್ಲ. (ನದಿಯನ್ನೇ ಮಲಿನಗೊಳಿಸಿ ಗಂಗೆಗೇ ಅಪಚಾರ ಮಾಡಿದ್ದು ಬೇರೆಯ ವಿಷಯ). ಆಂಗ್ಲರನ್ನೇ ಹಿಂಬಾಲಿಸುವ ಮಂದಿಗೆ ಮಾತ್ರ ಈಗಲೂ ಇವಳು ಗ್ಯಾಂಜಿಸ್!

ಸಮುದ್ರಕ್ಕೆ ಸೇರುವ ಮೊದಲು ಗಂಗೆ ಅನೇಕ ಕವಲುಗಳಾಗಿ ಮುಂದೆ ಸಾಗುತ್ತಾಳೆ. ಇವುಗಳಲ್ಲಿ ಒಂದು ಪ್ರಧಾನ ಕವಲು ಬಾಂಗ್ಲಾದೇಶದಲ್ಲಿಯೂ ಮುಂದುವರೆದಿದೆ. ಆ ದೇಶದಲ್ಲಿ ಗಂಗೆಗೆ ಪದ್ಮಾನದಿ ಎನ್ನುವ ಹೆಸರಿನಿಂದ ಕರೆಯುತ್ತಾರೆ.

ಯಮುನಾ: ಸಾವಿರಾರು ವರ್ಷಗಳ ಹಿಂದೆ ಸರಸ್ವತಿಯ ಉಪನದಿಯಾಗಿತ್ತು. ಸಧ್ಯದಲ್ಲಿ ಗಂಗೆಯ ಉಪನದಿಯಾಗಿದೆ. ಸಂಪೂರ್ಣವಾಗಿ ಭಾರತದೇಶದಲ್ಲಿಯೇ ಹರಿದಿದೆ. ಹೆಸರೇನೂ ಹಾಳಾಗಿಲ್ಲ. ಆದರೆ ಉತ್ತರಭಾರತದ ಕೆಲವೆಡೆ ಜಮುನಾ ಎಂದು ಕರೆಯುವ ರೂಢಿಯಿದೆ. ಯಕಾರವನ್ನು ಜಕಾರವನ್ನಾಗಿ ಉಚ್ಚರಿಸುವುದರ ಪರಿಣಾಮವಿದು.

ಸರಸ್ವತೀ : ಈ ನದಿಯ ಬಗ್ಗೆ ಬರೆಯಲು ಹೊರಟರೆ ಒಂದು ಪುಸ್ತಕವೇ ಬೇಕಾದೀತು. ಋಗ್ವೇದದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿಸಲ್ಪಟ್ಟ ನದಿ ಇದು. ಅಂಬಿತಮೆ, ನದೀ ತಮೆ, ದೇವೀತಮೆ[6] ಎಂಬ ಹೊಗಳಿಕೆಗೆ ಪಾತ್ರವಾದ ನದಿ, ಸರಸ್ವತೀ. ಅತಿ ರಭಸವಾಗಿ, ಅತಿ ವಿಸ್ತಾರವಾಗಿ, ಅತಿ ಹೆಚ್ಚಿನ ಜಲರಾಶಿಯೊಂದಿಗೆ ಹರಿದು ಮುಂದೆ ಸಮುದ್ರದಲ್ಲಿ ಸೇರುತ್ತಾಳೆ ಎಂದು ಋಗ್ವೇದವು ವರ್ಣಿಸಿದೆ. ಆದರೆ ಮಹಾಭಾರತದಲ್ಲಿ ಇದು ಅದೃಶ್ಯವಾದ ಸ್ಥಳದಿಂದ ಬಲರಾಮ ತೀರ್ಥಯಾತ್ರೆಯನ್ನು ಕೈಗೊಂಡ ಎಂಬುದಾಗಿ ಹೇಳಿದ್ದಾರೆ. ಇದರ ಅರ್ಥ ಸಮುದ್ರವನ್ನು ಸೇರುತ್ತಿದ್ದ ಮಹೋನ್ನತವಾದ ನದಿಯೊಂದು ಕಾಲಾಂತರದಲ್ಲಿ ನಿಧಾನವಾಗಿ ಅದೃಶ್ಯವಾಗಿ ಹೋಗಿದೆ ಎಂಬುದಾಗಿಯೇ. ಈ ಕಣ್ಮರೆಯಾದ ಸ್ಥಳದ ಹೆಸರು ಮಹಾಭಾರತದಲ್ಲಿ ವಿನಶನ ಎಂಬುದಾಗಿ ಇದೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಕಾಲಿಬಂಗ್/ಕಾಲಿಬಂಗನ್ ಎನ್ನುವ ಈಗಿನ ಸ್ಥಳವೇ ಆಗಿನ ವಿನಶನ.

ಪ್ರಾಯಶಃ ಈ ಕಣ್ಮರೆಯ ಕಾರಣಗಳನ್ನು ತಿಳಿಯಲು ಮಾಡಿರುವಷ್ಟು ಸಂಶೋಧನೆಗಳನ್ನು ಇತಿಹಾಸಜ್ಞರು ಹಾಗೂ ಭೂಗರ್ಭಶಾಸ್ತ್ರವೇತ್ತರು ಬೇರಾವ ನದಿಗೂ ಮಾಡಿಲ್ಲ. ಅರಾವಳಿ ಪರ್ವತವು ನಿಧಾನವಾಗಿ ಭೂಮಿಯಿಂದ ಮೇಲೇರುವ ಪ್ರವೃತ್ತಿಯುಳ್ಳದ್ದು. ಇದರ ಪರಿಣಾಮವಾಗಿ ಇದಕ್ಕೆ ಉಪನದಿಗಳಾಗಿದ್ದ ಶುತುದ್ರಿ, ಯಮುನಾ, ದೃಷದ್ವತೀ ಹಾಗು ಈ ಕಣಿವೆಯ ಹಲವಾರು ಚಿಕ್ಕ ನದಿಗಳು ತಮ್ಮ ಪ್ರವಾಹದ ದಿಕ್ಕನ್ನು ಬದಲಾಯಿಸಿಕೊಂಡಿವೆ ಎಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ತನ್ನ ಒಡಲನ್ನು ಸೇರುತ್ತಿದ್ದ ಮೂರು ಬೃಹತ್ ನದಿಗಳು ತನ್ನ ಸಹವಾಸವನ್ನೇ ತೊರೆದಿದ್ದರಿಂದ ಸರಸ್ವತಿಯ ವೇಗ ಹಾಗು ನೀರಿನ ಪ್ರಮಾಣದಲ್ಲಿ ಅಪಾರವಾದ ಕಡಿತವುಂಟಾಯಿತು. ಕೊನೆಗೆ ಸಮುದ್ರವನ್ನು ಸೇರುವಷ್ಟು ವೇಗವು ಸಹ ಅದರಲ್ಲಿ ಉಳಿಯದೆ ವಿನಶನ ಎಂಬ ಪ್ರದೇಶದಲ್ಲಿ ಭೂಮಿಯಲ್ಲಿ ಅಂತರ್ಗತವಾಯಿತು ಎಂಬುದಾಗಿ ಇತಿಹಾಸಕಾರರು ನಿರ್ಣಯಿಸಿದ್ದಾರೆ.

ಅಲಹಾಬಾದ್ ಎಂದು ವಿರೂಪಗೊಂಡಿರುವ ಪ್ರಯಾಗಕ್ಷೇತ್ರದಲ್ಲಿ ಸರಸ್ವತೀ, ಯಮುನೆ ಹಾಗು ಗಂಗೆಯರ ಸಂಗಮವಾಗುತ್ತದೆ ಎಂಬ ನಂಬಿಕೆಯಿದೆಯಷ್ಟೇ. ಅಲ್ಲಿ ಸರಸ್ವತಿಯು ಗುಪ್ತಗಾಮಿನಿ ಎಂದೇನೋ ಹೇಳುತ್ತಾರೆ. ಆದರೆ ಅದಕ್ಕೆ ಭೂಗರ್ಭರಚನಾ ಶಾಸ್ತ್ರದಲ್ಲಿ ಯಾವುದೇ ಆಧಾರಗಳು ದೊರಕಿಲ್ಲ. ಹಾಗಿದ್ದಲ್ಲಿ ಹಿರಿಯರು ನಂಬಿದ್ದು ಸುಳ್ಳೇ ಎಂಬ ಪ್ರಶ್ನೆ ಹುಟ್ಟಿದರೆ ಅದಕ್ಕೆ ಇತಿಹಾಸಕಾರರು ಒಂದು ಸಮಾಧಾನವನ್ನು ಕೊಟ್ಟಿದ್ದಾರೆ. ಈಗಿರುವ ಪಾತ್ರಕ್ಕೂ ಮೊದಲು ಯಮುನೆಯು ಎರಡು ಬಾರಿ ದಿಕ್ಕನ್ನು ಬದಲಾಯಿಸಿದ್ದಾಳೆ. ಎರಡನೆ ಬಾರಿ ಆಕೆಯು ಹರಿದಿದ್ದು ಸರಸ್ವತೀ ನದಿಯು ಮೊದಲು ಹರಿದು ಒಣಗಿಹೋಗಿದ್ದ ಪಾತ್ರದಲ್ಲಿ! ಹೀಗೆ ಸರಸ್ವತಿಯ ಪಾತ್ರದಲ್ಲಿ ಹರಿದ ಯಮುನೆಯೊಂದಿಗೆ ಗುಪ್ತವಾಗಿ ಸರಸ್ವತಿಯೂ ಇದ್ದಾಳೆ ಎನ್ನುವ ಅಭಿಪ್ರಾಯವನ್ನು ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ.

ಒಂದು ಕಾಲದಲ್ಲಿ ಹಸಿರು ಉಕ್ಕುತ್ತಿದ್ದ ಈ ಪ್ರದೇಶವು ಈಗ ಮರಳುಗಾಡಿನ ಭಾಗ! ಸ್ವಾರಸ್ಯವೆಂದರೆ ಈ ನದಿಯು ಭೂಮಿಯೊಳಗೆ ಸೇರಿ ಅಂತರ್ವಾಹಿನಿಯಾಗಿ ಹರಿದ ಸ್ಥಳದಲ್ಲಿ ಅಪಾರವಾದ ಸಿಹಿನೀರಿನ ಸಂಗ್ರಹವಿರುವುದನ್ನು ಆಧುನಿಕ ಉಪಗ್ರಹಗಳು ಪತ್ತೆಮಾಡಿವೆ. ಮಾತ್ರವಲ್ಲ, ಹಿಮಾಲಯ ಮೂಲದ ಆ ನೀರು ೧೪ಸಾವಿರ ವರ್ಷ ಹಳೆಯದು ಎಂಬುದಾಗಿ ಸಹ ತಿಳಿದು ಬಂದಿದೆ. ಈ ನೀರು ಮತ್ತ್ಯಾವುದೋ ಅಲ್ಲ. ಸರಸ್ವತೀ ನದಿಯು ತನ್ನ ವೇಗವನ್ನು ಕಳೆದುಕೊಂಡ ನಂತರ ಭೂಮಿಯ ಒಡಲಾಳಕ್ಕೆ ಇಳಿದದ್ದು. ಈ ಆಯಾಮದಲ್ಲಿ ಸರಸ್ವತಿಯು ನಿಜಕ್ಕೂ ಗುಪ್ತಗಾಮಿನಿಯೇ ಹೌದು.

ಹಿಮಾಲಯದ ಬದರೀನಾಥದ ಬಳಿಯಲ್ಲಿಯೂ ಒಂದು ನದಿಯ ಹೆಸರು ಸರಸ್ವತಿ ಎಂಬುದಾಗಿದೆ. ಪಶ್ಚಿಮ ಬಂಗಾಳ ಹೂಗ್ಲಿನದಿಯ ಕವಲೊಂದಕ್ಕೆ ಸರಸ್ವತಿ ಎಂಬ ಹೆಸರಿದೆ. ಆದರೆ ಆದರೆ ಋಗ್ವೇದದಲ್ಲಿ ಉಲ್ಲೇಖಿಸಿರುವ ಸರಸ್ವತಿ ಇವೆರಡೂ ಅಲ್ಲ. ಈ ಸರಸ್ವತಿಯ ಉದ್ದವಾಗಲಿ, ನೀರಿನ ಪ್ರಮಾಣವಾಗಲಿ ಇವುಗಳಿಗೆ ಇಲ್ಲ. ಬದರಿಯ ಸರಸ್ವತೀ ನದಿಯು ಅಲಕನಂದೆಯ ಉಪನದಿ.[7] ಬಂಗಾಲದ ಸರಸ್ವತಿಯು ಹೂಗ್ಲಿಯ ಕವಲು ನದಿ. (Distributary) ಋಗ್ವೇದದ ಸರಸ್ವತಿಯಾದರೋ ಬೃಹದಾಕಾರದ್ದು ಮತ್ತು ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ.

ಶುತುದ್ರಿ : ಪಂಜಾಬ್ ಪ್ರಾಂತ್ಯದಲ್ಲಿರುವ ಚಂಚಲವಾದ ಗತಿಯುಳ್ಳ ನದಿಯಿದು. ಈಗಿನ ಕಾಲದಲ್ಲಿ ಇದರ ಹೆಸರು ಸತಲಜ. ಹಿಮಾಲಯದಲ್ಲಿ ಜನಿಸಿ, ಭಾರತದಲ್ಲಿ ಪ್ರವಹಿಸಿ ಮುಂದೆ ಪಾಕಿಸ್ತಾನದಲ್ಲಿ ಪ್ರವೇಶಿಸಿ, ಚಿನಾಬ್ ನದಿಯೊಂದಿಗೆ ಸೇರಿ ಸಿಂಧುವಿನಲ್ಲಿ ಸಂಗಮಿಸುತ್ತದೆ.[8] ಭಾರತದಲ್ಲಿ ಹಿಮಾಚಲಪ್ರದೇಶ ಹಾಗು ಪಂಜಾಬಿನ ಅನೇಕ ಪ್ರಮುಖನಗರಗಳು ಈ ಸತಲಜ/ಸಟ್ಲೆಜ್ ನದಿಯ ದಂಡೆಯ ಮೇಲೆ ನೆಲೆಸಿವೆ.[9] ಶಿಮ್ಲಾ ಅಥವಾ ಕಿನ್ನೋರ್ ಪ್ರದೇಶಗಳಿಗೆ ನೀವು ಭೇಟಿ ನೀಡಿದ್ದಾದಲ್ಲಿ ಈ ನದಿಯ ನೀರನ್ನು ಪ್ರೋಕ್ಷಿಸಿಕೊಳ್ಳಬಹುದು.

ಪರುಷ್ಣೀ : ಇತಿಹಾಸದಲ್ಲಿ ಬಹು ಹೆಸರುವಾಸಿಯಾದ ನದಿಯಿದು. ಪ್ರಸಿದ್ಧವಾದ ದಾಶರಾಜ್ಞಯುದ್ಧ ನಡೆದದ್ದು ಈ ನದಿಯ ದಂಡೆಯಲ್ಲಿಯೇ. ಆಗ ಇದರ ಹೆಸರು ಇರಾವತೀ ಎಂಬುದಾಗಿ ಸಹ ಇತ್ತು. ವರ್ತಮಾನಕಾಲದ ಹೆಸರು ರಾವೀ. ಹಿಮಾಚಲಪ್ರದೇಶದ ಉನ್ನತಶಿಖರಗಳಿಂದ ಧುಮುಕುತ್ತಲೇ ಬರುವ ನದಿಯಿದು. ಹೀಗಾಗಿ ಉಗ್ರವಾದ ರಭಸ ಇಲ್ಲಿ ನಿತ್ಯದ ನೋಟ. ನದಿಯು ಮುಂದೆ ಪಾಕಿಸ್ತಾನದಲ್ಲಿ ಪ್ರವೇಶಿಸಿ ಚಿನಾಬ್ ನದಿಯೊಳಗೆ ಒಂದಾಗುತ್ತದೆ. ಪಾಕಿಸ್ತಾನದ ಪ್ರಸಿದ್ಧ ನಗರವಾದ ಲಾಹೋರ್ ಇರುವುದು ರಾವಿ ನದಿಯ ದಂಡೆಯ ಮೇಲೆ. ಭಾರತ ಹಾಗು ಪಾಕಿಸ್ತಾನದ ಸರಹದ್ದಿಗೆ ಭೇಟಿ ನೀಡುವ ಜನರು ಈ ನದಿಯ ದರ್ಶನ ಮಾಡಬಹುದು.

ಅಸಿಕ್ನೀ : ವೇಗ ಹಾಗು ಜಲಸಂಪನ್ಮೂಲದಲ್ಲಿ ಶುತುದ್ರಿಗೆ ಸಮಾನವಾಗಿ ಹರಿಯುವ ನದಿಯಿದು. ಚಿನಾಬ್ ಎಂಬುದಾಗಿ ಆಧುನಿಕ ಹೆಸರು. ಚನಾಬ್ ಎಂದೂ ಸಹ ಕರೆಯುತ್ತಾರೆ. ಹಿಮಾಚಲಪ್ರದೇಶದಲ್ಲಿ ಇದರ ಜನನ. ಚಂದ್ರಾ ಹಾಗು ಭಾಗಾ ಎರಡು ನದಿಗಳ ಸಂಗಮದಿಂದ ಉಂಟಾದ ನದಿಯಿದು. ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹರಿದು ಮುಂದೆ ಪಾಕಿಸ್ತಾನವನ್ನು ಪ್ರವೇಶಿಸುತ್ತದೆ. ಈ ಪಯಣದಲ್ಲಿ ಪರುಷ್ಣೀ ಹಾಗು ವಿತಸ್ತಾ ನದಿಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತದೆ. ಶುತುದ್ರಿಯೊಂದಿಗೆ ಒಂದಾಗಿ ಪಂಚನದೀ(ಪಂಜನದಿ) ಎನ್ನುವ ಹೊಸಹೆಸರನ್ನು ಪಡೆಯುತ್ತದೆ. ತನ್ನ ಯಾತ್ರೆಯ ಕೊನೆಯ ಹಂತವಾಗಿ ಸಿಂಧುನದಿಯಲ್ಲಿ ಈ ಪಂಜನದಿಯು ಸೇರಿಕೊಳ್ಳುತ್ತದೆ. ಕಾಶ್ಮೀರದ ಕಿಶ್ತ್ವಾರ್, ಅಖ್ನೂರ್ ಪಟ್ಟಣದ ಬಳಿ ಈ ನದಿಯ ಸ್ನಾನ/ಪ್ರೋಕ್ಷಣೆ ಮಾಡಿಕೊಳ್ಳಬಹುದು. ಪಾಕಿಸ್ತಾನದ ಗುಜ್ರನ್ವಾಲ, ಸಿಯಾಲ್ ಕೋಟ್ ಪಟ್ಟಣಗಳು ಈ ನದಿಯ ಮೇಲೆ ನಿರ್ಮಿತವಾಗಿವೆ.

ಮರುದ್ವೃಧಾ : ಇದಮಿತ್ಥಂ ಎಂದು ಯಾವ ಇತಿಹಾಸಕಾರರೂ ಗುರುತಿಸಲು ಆಗದೆ ಇರುವ ನದಿಯಿದು. ಕೆಲವರು ಇದನ್ನು ಅಸಿಕ್ನಿ ಮತ್ತು ವಿತಸ್ತಾ ನದಿಗಳ ಸಂಗಮದಿಂದ ಉಂಟಾದ ಹೊಸನದಿ ಎಂಬುದಾಗಿ ಹೇಳುತ್ತಾರೆ. ಇನ್ನೂ ಕೆಲವರು ಸಿಂಧೂ ನದಿಯ ಕೊಳ್ಳದ ಒಂದು ನದಿ ಎಂಬುದಾಗಿ ಅಷ್ಟೇ ಪರಿಗಣಿಸಿದ್ದಾರೆ. ಆದರೆ ವಿದ್ವಾನ್ ಶ್ರೀಸಾಣೂರು ಭೀಮಭಟ್ಟರು ನಮ್ಮ ಕಾವೇರಿ ನದಿಯೇ ಮರುದ್ವೃಧಾ ಎಂಬುದಾಗಿ ಪ್ರತಿಪಾದಿಸುತ್ತಾರೆ.[10]

ವಿತಸ್ತಾ: ಕಾಶ್ಮೀರದ ಚೆಲುವನ್ನು ದ್ವಿಗುಣಗೊಳಿಸಿದ ಸುಂದರ ನದಿಯಿದು. ಝೀಲಮ್ ಎಂಬುದು ವರ್ತಮಾನಕಾಲದ ಹೆಸರು. ಶ್ರೀನಗರದ ಬಳಿಯ ವೇರಿನಾಗ್ ಎನ್ನುವಲ್ಲಿ ಸರೋವರವೊಂದರಲ್ಲಿ ಇದರ ಜನನ. ಅಲ್ಲಿಂದ ಮುಂದೆ ಶ್ರೀನಗರವೂ ಸೇರಿದಂತೆ ಕಾಶ್ಮೀರದ ಹಲವು ಪಟ್ಟಣಗಳಲ್ಲಿ ಹರಿದು, ಮುಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳುತ್ತದೆ. ಅತ್ತ ಪಾಕಿಸ್ತಾನವೂ ಅಲ್ಲದ ಇತ್ತ ಭಾರತಕ್ಕೂ ಸೇರಬಯಸದ ಆಜಾದ್ ಕಾಶ್ಮೀರದಲ್ಲಿಯೂ ವಿತಸ್ತಾ ನದಿಯು ಹರಿಯುತ್ತದೆ.

ಅರ್ಜಿಕೀಯಾ: ನಿರುಕ್ತಕಾರರಾದ ಯಾಸ್ಕರು ವಿಪಾಶ ನದಿಯನ್ನು ಅರ್ಜಿಕೀ ಎಂದು ಹೇಳಿದ್ದಾರೆ. [11] ಆದರೆ ಪ್ರಸಕ್ತ ಕಾಲಮಾನದಲ್ಲಿ ಪಾಕಿಸ್ತಾನದ ಹಾರೋ ಎನ್ನುವ ನದಿಯನ್ನು ಇತಿಹಾಸಕಾರರು ಋಗ್ವೇದದ ಅರ್ಜಿಕೀ ನದಿ ಎಂಬುದಾಗಿ ಗುರುತಿಸಲು ಪ್ರಯತ್ನಿಸಿದ್ದಾರೆ. ಇಲ್ಲಿ ನಿರುಕ್ತಕಾರರ ವಚನವೇ ನಮಗೆ ಹೆಚ್ಚು ಆಪ್ತವಾಗುತ್ತದೆ. ವಿಪಾಶ ಹಾಗು ಶುತುದ್ರಿ ನದಿಗಳು ಉನ್ನತ ಪರ್ವತಗಳಿಂದ ಇಳಿದು ಬಂದು ಪರಸ್ಪರ ಸಂಗಮಿಸುತ್ತವೆ. ಇದೊಂದು ಮನೋಹರ ದೃಶ್ಯ.[12] ಸುಪ್ರಸಿದ್ಧ ವಿಹಾರ ತಾಣವಾದ ಮನಾಲಿಗೆ ನೀವು ಭೇಟಿ ನೀಡಿದ್ದಾಗ ಕಾಣುವ ಬಿಯಾಸ್ ನದಿಯೇ ಋಗ್ವೇದವು ವರ್ಣಿಸುವ ಅರ್ಜಿಕಿಯಾ ನದಿ. ವೇದವ್ಯಾಸದೇವರ ನಿತ್ಯಸನ್ನಿಧಾನವುಳ್ಳ ನದಿಯಿದು, ಹಾಗಾಗಿ ವ್ಯಾಸೀ(ಬ್ಯಾಸೀ) ಎನ್ನುವ ಹೆಸರು ಇದಕ್ಕೆ ಎಂದು ಸ್ಥಳೀಯರ ಅಭಿಮತ. ವ್ಯಾಸಿಯೇ ಬಿಯಾಸಿ/ಬಿಯಾಸ್ ಎಂಬುದಾಗಿ ತಿರುಚಿಕೊಂಡಿದೆ. ವಕಾರವನ್ನು ಬಕಾರವಾಗಿ ಉಚ್ಚರಿಸುವುದರ ಪರಿಣಾಮವಿದು.

ಸುಷೋಮಾ : ಪ್ರಸಕ್ತಕಾಲದಲ್ಲಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿಯೇ ಸೇರಿಹೋಗಿರುವ ನದಿಯಿದು. ಸೋಹನ್/ಸೋನ್ ಎನ್ನುವ ಹೆಸರಿನೊಂದಿಗೆ ಕರೆಯಲ್ಪಡುತ್ತಿದೆ. ಸಿಂಧು ಬಯಲಿನ ನದಿಗಳಲ್ಲಿ ಪ್ರಾಯಶಃ ಅತಿ ಚಿಕ್ಕದು. (ಗಾತ್ರದಲ್ಲಿ). ಆದರೆ ಜನಸಂಸ್ಕೃತಿಗೆ ಹಾಗು ಹೇರಳವಾದ ಪಶುಮಂದೆಗಳಿಗೆ ಜೀವನಾಧಾರವಾಗಿದ್ದ ನದಿಯಿದು ಎನ್ನಲು ಐತಿಹಾಸಿಕ ಕುರುಹುಗಳು ಇವೆ.

ಸಿಂಧು: ಗಂಗೆಯಷ್ಟೇ ಜಗತ್ಪ್ರಸಿದ್ಧವಾದ ನದಿಯಿದು. ಪ್ರಾಚೀನಭಾರತದ ವಾಯವ್ಯ ಭಾಗದ ಬಹುತೇಕ ಎಲ್ಲ ನದಿಗಳ ಅಂತಿಮ ಗುರಿ ಸಿಂಧುವಿನೊಂದಿಗೆ ಕೂಡಿಕೊಳ್ಳುವುದೇ ಆಗಿದೆ. ಕುಭಾ, ಗೋಮತೀ, ಕೃಮು, ಇತ್ಯಾದಿ ಹಾಗು ಅಸಿಕ್ನಿ ಮತ್ತು ಶುತುದ್ರಿಯ ಬಳಗ ಹೀಗೆ ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಸಿಂಧುವು ಪಾಕಿಸ್ತಾನ ಸಿಂಧ್ ಪ್ರಾಂತ್ಯದಲ್ಲಿ ಸಮುದ್ರದೊಳಗೆ ಪ್ರವೇಶಿಸುತ್ತದೆ. ಹರಿವಿನಲ್ಲಿ ಸಿಂಧುವು ಗಂಗೆಗಿಂತ ದೊಡ್ಡದಾಗಿದೆ. ಒಟ್ಟು ಉದ್ದ ೩೧೦೦ ಕಿಲೋಮೀಟರುಗಳು. ಇದರಲ್ಲಿ ಸುಮಾರು ೯೩ಪ್ರತಿಶತದಷ್ಟು ಪಾಕಿಸ್ತಾನದಲ್ಲಿಯೇ ಇದೆ. ಪರ್ಷಿಯನ್ನರು ಇದನ್ನು ಹಿಂದುವೆಂದು ಕರೆದರೆ ಗ್ರೀಕರಿಗೆ ಇದು ಇಂಡಸ್ ಆಗಿಬಿಟ್ಟಿತು. ಇಂಗ್ಲೀಷಿನ ವ್ಯಾಮೋಹಿಗಳಿಗೆ ಈಗಲೂ ಇದು ಇಂಡಸ್! ಅದೃಷ್ಟಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜನರಿಗೆ ಇನ್ನೂ ಸಿಂಧ್ ಆಗಿಯೇ ಉಳಿದಿದೆ. ಭಾರತದ ಲದ್ದಾಖ್ ಪ್ರಾಂತ್ಯದಲ್ಲಿಯೂ ಸಿಂಧುವಿನ ದರ್ಶನ/ಸ್ನಾನ/ಪ್ರೋಕ್ಷಣೆಗೆ ಅವಕಾಶವಿದೆ. ಭಾರತ ಸರ್ಕಾರವೇ ಪ್ರತಿವರ್ಷದ ಅಕ್ಟೋಬರ್ ತಿಂಗಳಿನ ಪೂರ್ಣಿಮೆಯಂದು ಸಿಂಧುದರ್ಶನವನ್ನು ಏರ್ಪಡಿಸುತ್ತದೆ.

ಕುಭಾ: ಅಫಘಾನಿಸ್ತಾನದ ಮತ್ತೊಂದು ಪ್ರಮುಖನದಿಯಿದು. ಗ್ರೀಕರ ನಾಲಗೆಯ ಮೇಲೆ ಇದು ಕೋಫೆನ್ ಎಂದಾಗಿದ್ದರೆ ಇನ್ನುಳಿದವರು ಕಾಬೂಲ್ ಎಂದು ಕರೆದರು. ಅಫಘಾನಿಸ್ಥಾನದ ರಾಜಧಾನಿಯಾದ ಕಾಬೂಲ್ ನಗರವು ಈ ನದಿಯ ದಂಡೆಯ ಮೇಲೆಯೇ ನಿರ್ಮಾಣಗೊಂಡಿದೆ. ಈ ನದಿಯು ಮುಂದೆ ಪಾಕಿಸ್ತಾನದ ಅತ್ತೋಕ್ ಎಂಬಲ್ಲಿ ಸಿಂಧುವಿನೊಂದಿಗೆ ಸಂಗಮಿಸುತ್ತದೆ.

ಗೋಮತೀ: ಭರತವರ್ಷದಲ್ಲಿ ಗೋಮತೀ ಎನ್ನುವ ಹೆಸರಿನ ಹಲವು ನದಿಗಳಿವೆ. ಆದರೆ ಋಗ್ವೇದದ ಈ ಸೂಕ್ತದಲ್ಲಿ ವಿವರಿಸಿರುವ ಗೋಮತಿಯನ್ನು ಈಗ ಗೊಮಾಲ್ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇದು ಸಹ ಅಫಘಾನಿಸ್ಥಾನದಲ್ಲಿದೆ.

ಕ್ರುಮು: ಕುರ್ರಂ ಎನ್ನುವ ಒರಟು ಹೆಸರಿಗೆ ಬದಲಾಗಿ ಹೋಗಿರುವ ವೈದಿಕ ನದಿಯಿದು. ಪಾಕಿಸ್ತಾನ ಹಾಗು ಅಫಘಾನಿಸ್ತಾನದ ಸರಹದ್ದಿನಲ್ಲಿ ಹರಿದು ಮುಂದೆ ಸಿಂಧೂನದಿಯೊಂದಿಗೆ ಸಂಗಮಿಸುತ್ತದೆ.

ಲಹರಿ – ೪

ಸರಿಯಾಗಿ ಗುರುತಿಸಲಾಗದೇ ಇರುವ ನದಿಗಳು

ತೃಷ್ಟಮಾ: ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ಹುಟ್ಟಿ ಸಿಂಧುನದಿಯೊಂದಿಗೆ ಸಂಗಮವಾಗುವ ಮತ್ತೊಂದು ನದಿಯಿದು. ಆಧುನಿಕ ಕಾಲದ ಗಿಲ್ಗಿತ್ ನದಿ ಎನ್ನುವ ಅಭಿಪ್ರಾಯವಿದೆ.

ರಸಾ: ಋಗ್ವೇದದ ಅನೇಕ ಕಡೆಗಳಲ್ಲಿ[13] ಉಲ್ಲೇಖಗೊಂಡಿರುವ ನದಿಯಿದು. ನದಿಯ ಪ್ರಾರ್ಥನೆಯ ಆಳವನ್ನು ಗಮನಿಸಿದಾಗ ಸಿಂಧುನದಿಯಷ್ಟೇ ಹಿರಿದಾದ ಸ್ಥಾನವನ್ನು ಅಂದಿನ ಋಷಿಗಳು ಇದಕ್ಕೆ ಕೊಟ್ಟಿದ್ದರೆಂದು ತಿಳಿಯುತ್ತದೆ.

ಸುಸರ್ತು, ಮೆಹನ್ತು, ಶ್ವೇತೀ, ಊರ್ಣಾವತೀ ಹಾಗು ಸೀಲಮಾವತಿಗಳ ಗುರುತಿಸುವಿಕೆಯು ಸಹ ಸಂಪೂರ್ಣವಾಗಿ ಆಗಿಲ್ಲ.

ಲಹರಿ – 5

ಈ ಮೇಲಿನ ನದೀಸ್ತುತಿ ಸೂಕ್ತದಲ್ಲಿ ಮಾತ್ರವಲ್ಲದೆ ವೇದ ಹಾಗು ಪುರಾಣಗಳ ಇನ್ನಿತರೆಡೆ ಕೂಡ ನದಿಗಳ ವರ್ಣನೆ ಕಾಣಸಿಗುತ್ತವೆ. ಹೆಚ್ಚಿನ ವಿವರಗಳು ಈ ನದಿಗಳ ಬಗ್ಗೆ ಲಭ್ಯವಿದ್ದರೂ ಸಹ ಲೇಖನವನ್ನು ಇನ್ನಷ್ಟು ದೀರ್ಘಕ್ಕೆ ತೆಗೆದುಕೊಂಡು ಹೋಗದೆ ಈ ಸಂಕ್ಷಿಪ್ತ ವಿವರಗಳನ್ನು ನೋಡೋಣ.

ಹಳೆಯ ಹೆಸರು ಹೊಸ ಹೆಸರು ಎಲ್ಲಿದೆ ದೇಶ ಊರುಗಳು
ಸುವಸ್ತು ಸ್ವಾತ್ ಸ್ವಾತ್ ಪಾಕಿಸ್ತಾನ
ಗೌರಿ ಪಂಜ್ಕೋರ ಪಂಜ್ಕೋರ ಕಣಿವೆ ಪಾಕಿಸ್ತಾನ
ದೃಷದ್ವತೀ ಚೌತಾಂಗ್ / ಚಿತ್ರಾಂಗ್ ರಾಜಸ್ಥಾನ ಭಾರತ
ಸರಯೂ[14]ಹರಿರುದ್ ಹರಿರುದ್ ಪರ್ವತ ಆಫಘಾನಿಸ್ಥಾನ
ವೇತ್ರಾವತೀ ಬೇತ್ವಾ ಮಧ್ಯಪ್ರದೇಶ ಭಾರತ ಓರ್ಛಾ, ಹೊಶಂಗಾಬಾದ್, ವಿದಿಶಾ, ಹಮೀರ್ಪುರ
ಚರ್ಮಣ್ವತೀ ಚಂಬಲ್ ಮಧ್ಯಪ್ರದೇಶ ಭಾರತ
ಲವಣಾವತೀ ಲೂಣೀ ರಾಜಸ್ಥಾನ ಭಾರತ ಪುಷ್ಕರ
ತಮಸಾ ಟೋನ್ಸ್ / ತೋನ್ಸ್ ಬಿಹಾರ / ಉ.ಪ್ರ
ತಪತೀ ತಾಪೀ ಮ.ರಾ/ಗುಜರಾತ್ ಭಾರತ ಭುಸಾವಳ್, ಸೂರತ್
ಕ್ಷಿಪ್ರಾ ಶಿಪ್ರಾ ಮಧ್ಯಪ್ರದೇಶ ಭಾರತ ಉಜ್ಜಯಿನೀ
ಅಜಿರಾವತೀ ರಪ್ತಿ ನೇಪಾಳ / ಭಾರತ ನೇಪಾಳ / ಭಾರತ ಗೋರಖಪುರ
ಹಳೆಯ ಹೆಸರು ಹೊಸ ಹೆಸರು ಎಲ್ಲಿದೆ ದೇಶ ಊರುಗಳು

ಈ ಲೇಖನವನ್ನು ಸಿದ್ಧಪಡಿಸಿದ್ದು ವಿವಿಧ ಕಾರಣಗಳಿಂದ ಈ ಮೇಲೆ ತಿಳಿಸಿರುವ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ. ಇಲ್ಲಿ ತಿಳಿಸಿರುವುದಕ್ಕಿಂತಲೂ ನಿಖರವಾದ ಮಾಹಿತಿಯು ಇನ್ನೂ ಹೆಚ್ಚಿನ ಸಂಶೋಧನೆಯಿಂದ ದೊರಕಿದ್ದಲ್ಲಿ/ದೊರಕಿದಲ್ಲಿ ಅದು ಯಾವಾಗಲೂ ಸ್ವಾಗತಾರ್ಹ.

ಅಡಿಟಿಪ್ಪಣಿಗಳು :-

[1] Si–yu-ki : Budhist Records of Western World

[2] ಅಲೆಕ್ಸಾಂಡರ್ ಹಾಗು ಅವನ ಹಿಂಬಾಲಕರು ಹೇಳಿದ ಜಝಾರ್ತೆಸ್ ನದಿಯು ಇದೇ ಎಂಬ ಅಭಿಪ್ರಾಯವು ಸಹ ಇದೆ. ಆದರೆ ಆ ಹೆಸರು ಭದ್ರಾ ಎನ್ನುವ ಈ ನದಿಗಿಂತ ರಸಾ (ಇದೇ ಲೇಖನದ ೯ನೇ ಪುಟ ನೋಡಿ) ಎಂಬ ಇನ್ನೊಂದು ನದಿಯ ವಿಕೃತಗೊಂಡ ಹೆಸರು ಎನ್ನುವುದು ಹೆಚ್ಚು ಸರಿ ಎನಿಸುತ್ತದೆ.

[3] ಈ ಅರಾಲ್ ಎನ್ನುವುದರ ಜೊತೆಗೆ ಸಮುದ್ರ ಎನ್ನುವ ಹೆಸರಿದ್ದರೂ ಈಗ ಅದು ಸಮುದ್ರವಲ್ಲ; ಕಝಕಿಸ್ತಾನ ಹಾಗು ಉಝ್ಬೆಕಿಸ್ತಾನ ದೇಶಗಳಿಂದ ಸುತ್ತುವರೆಯಲ್ಪಟ್ಟಿರುವ ಒಂದು ಬೃಹದಾಕಾರದ ಸರೋವರವಷ್ಟೇ. ಮಿಲಿಯಾಂತರ ವರ್ಷಗಳ ಹಿಂದೆ ಸಮುದ್ರದ ಒಂದು ಭಾಗವಾಗಿತ್ತು. ಭೂಮಿಯಿಂದ ಮೇಲೆ ಏರುವ ಪರ್ವತಗಳ ಚಟುವಟಿಕೆಯಿಂದ ಕಾಲಕ್ರಮೇಣ ಸಮುದ್ರದಿಂದ ಶಾಶ್ವತವಾಗಿ ಬೇರ್ಪಟ್ಟು ಈಗಿನ ಸರೋವರದ ರೂಪವನ್ನು ತಾಳಿದೆ. ಭಾಗವತವು ಉಲ್ಲೇಖಿಸಿರುವ ಸಮುದ್ರವು ಪ್ರಾಯಶಃ ಈ ಅರಾಲ್ ಸಮುದ್ರವೇ ಆಗಿರಲಿಕ್ಕೆ ಸಾಕು.

[4] ನದಿಗಳೆರಡು ಸಂಗಮಿಸಿದಾಗ ಆ ಎರಡು ನದಿಗಳಲ್ಲಿ ಒಂದರ ಹೆಸರು ಮರೆಯಾಗಿ ಹೋಗುತ್ತದೆ. ಇನ್ನೊಂದರ ಹೆಸರೇ ಕೊನೆಯವರೆಗೆ ಅಥವಾ ಅದಕ್ಕಿಂತಲೂ ದೊಡ್ಡ ನದಿಯೊಳಗೆ ಸಂಗಮಿಸುವ ಸ್ಥಳದವರೆಗೂ ಮುಂದುವರೆಯುತ್ತದೆ. ಈ ಸಂದರ್ಭಗಳಲ್ಲಿ ಹೆಚ್ಚಿನ ಜಲರಾಶಿಯನ್ನು ಹೊಂದಿದ, ಹಿಂದೆ ಹೆಚ್ಚಿನ ದೂರವನ್ನು ಕ್ರಮಿಸಿರುವ ಮತ್ತು ತಾರತಮ್ಯದಲ್ಲಿ ಉನ್ನತಸ್ಥಾನದಲ್ಲಿ ಇರುವ ನದಿಯ ಹೆಸರೇ ಮುಂದುವರೆಯುವುದು ಸಹಜ. ಉದಾಹರಣೆ : ವರದಾ ನದಿಯು ತುಂಗಭದ್ರೆಯೊಂದಿಗೆ ಸಂಗಮಿಸಿದ ನಂತರ ವರದೆಯ ಹೆಸರು ಕಣ್ಮರೆಯಾಗಿ ತುಂಗಭದ್ರೆಯ ಹೆಸರು ಮುಂದುವರೆಯುತ್ತದೆ. ಗಾತ್ರ, ದ್ರವ್ಯರಾಶಿ ಹಾಗು ತಾರತಮ್ಯಗಳಲ್ಲಿ ತುಂಗಭದ್ರೆಯೇ ವರದೆಗಿಂತ ಉತ್ತಮಳಾಗಿರುವುದು ಇದಕ್ಕೆ ಕಾರಣ. ಮುಂದುವರೆದಾಗ ತುಂಗಭದ್ರೆಯು ಕೃಷ್ಣೆಯೊಂದಿಗೆ ಸಂಗಮಿಸುತ್ತಾಳೆ. ಆಗ ತುಂಗಭದ್ರೆಯ ಹೆಸರು ಮರೆಯಾಗಿ ಕೃಷ್ಣೆಯ ಹೆಸರು ಮುಂದುವರೆಯುತ್ತದೆ. ಕೃಷ್ಣೆಯ ಹರಿವು, ವಿಸ್ತಾರ, ಕ್ರಮಿಸಿದ ದೂರ, ತಾರತಮ್ಯದಲ್ಲಿ ಅವಳಿಗಿರುವ ಸ್ಥಾನವು ತುಂಗಭದ್ರೆಗಿಂತಲೂ ಹೆಚ್ಚಿನದಾದ ಕಾರಣ ಈ ಹಿರಿಮೆ ಅವಳಿಗೇ ಸಲ್ಲುತ್ತದೆ.

ಇದೇ ರೀತಿಯಾಗಿ ಋಷಿಗಂಗಾ+ಅಲಕನಂದಾ, ಪಿಂಡಾರಿಗಂಗಾ+ಅಲಕನಂದಾ, ಮಂದಾಕಿನೀ+ಅಲಕನಂದಾ, ಧವಳಗಂಗಾ+ಅಲಕನಂದಾ ಸಂಗಮಗಳಲ್ಲಿ ಅಲಕನಂದೆಗೆ ಹಿರಿಯಕ್ಕನ ಸ್ಥಾನ. ಭಾಗೀರಥಿನದಿಯ ೨೦೫ ಕಿ.ಮೀ ಉದ್ದದ ಪಯಣದಲ್ಲಿ ಕೇದಾರಗಂಗಾ, ಜಡಗಂಗಾ (ಇದನ್ನೇ ಜಾಹ್ನವೀ ನದೀ ಎಂದು ಸ್ಥಳೀಯರು ಹೇಳುವುದುಂಟು), ಅಸಿಗಂಗಾ, ಭಿಲಾಂಗನಾ ಹಾಗು ಇನ್ನೂ ಅನೇಕ ನದಿಗಳನ್ನು ತನ್ನೊಳಗೆ ಸೇರಿಸಿಕೊಂಡರೂ ಸಹ ತನ್ನ ಹಿರಿಮೆಯನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಈ ಎಲ್ಲರೀತಿಯಿಂದಲೂ ಸಮಾನತೆಯನ್ನೇ ಹೊಂದಿರುವ ಈ ಎರಡು ನದಿಗಳು ಸಂಗಮಿಸಿದಾಗ ಎರಡರಲ್ಲಿ ಒಂದರ ಹೆಸರನ್ನು ಉಳಿಸಿಕೊಳ್ಳುವ ಸಂಪ್ರದಾಯವನ್ನು ಬಿಟ್ಟು ಎರಡೂ ನದಿಗಳ ಮೂಲಹೆಸರಾದ “ಗಂಗಾ” ಎನ್ನುವ ಹೆಸರನ್ನು ಹಿರಿಯರು ಬಳಕೆಗೆ ತಂದರು.

[5] ನದಿಯ ಅಭಿಮಾನಿದೇವತೆಗಳನ್ನು ಕುರಿತು ಓ ಗಂಗೆಯೆ, ಯಮುನೆಯೆ, ಶುತುದ್ರಿಯೇ….. ನನ್ನ ಪ್ರಾರ್ಥನೆಯನ್ನು ಕೇಳಿರಿ ಎಂಬುದು ಈ ಮಂತ್ರಗಳ ಸರಳಾನುವಾದ.

[6] ಅಂಬಿತಮೆ ನದೀತಮೆ ದೇವಿತಮೆ ಸರಸ್ವತಿ | ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ನಸ್ಕೃಧಿ || ಋಗ್ವೇದ ೨:೪೨:೧೬

[7] ಬದರಿಯಲ್ಲಿ ಅಲಕನಂದೆಯೊಂದಿಗೆ ಸರಸ್ವತೀ ನದಿಯು ಸಂಗಮಿಸುವ ಸ್ಥಳಕ್ಕೆ ಕೇಶವಪ್ರಯಾಗ ಎಂಬ ಹೆಸರಿದೆ

[8] ಸಾವಿರಾರು ವರ್ಷಗಳ ಹಿಂದೆ ಇದು ಸ್ವತಂತ್ರವಾದ ನದಿಯಾಗಿತ್ತು. ಮುಂದೆ ಸರಸ್ವತಿಯ ಉಪನದಿಯಾಗಿ ಬದಲಾಯಿತು. ಈಗ ಸಧ್ಯದ ಚಿನಾಬ್ ನದಿಯೊಂದಿಗೆ ಪಾಕಿಸ್ತಾನದಲ್ಲಿ ಸಂಗಮಿಸಿ ಪಂಜನದಿ ಎಂಬುವ ಹೊಸನದಿಗೆ ರೂಪವನ್ನು ಕೊಟ್ಟು ಮುಂದೆ ಸಿಂಧೂನದಿಗೆ ಉಪನದಿಯಾಗಿ ಪರಿಣಮಿಸುತ್ತದೆ!

[9] ಭಾಕ್ರಾ ನಂಗಾಲ್ ಅಣೆಕಟ್ಟೆ ಕಟ್ಟಿರುವುದು ಈ ನದಿಗೆ ಅಡ್ಡಲಾಗಿಯೇ

[10] ತೀರ್ಥಪ್ರಬಂಧ. ಪುಟ ೨೪೮. ಪ್ರ: ಪ್ರಸಂಗಾಭರಣತೀರ್ಥ ಪ್ರಕಾಶನ ಅನು: ಆಚಾರ್ಯ ಸಾಣೂರು ಭೀಮಭಟ್ಟರು.

[11] ನಿರುಕ್ತ ೯:೨೦

[12] ಪ್ರ ಪರ್ವತಾನಾಮುಶತೀ ಉಪಸ್ಥಾದಶ್ವೇ ಇವ ವಿಷಿತೇ ಹಾಸಮಾನೇ | ಗಾವೇವ ಶುಭ್ರೇ ಮಾತರಾ ರಿಹಾಣೇ ವಿಪಾಚ್ಛುತುದ್ರೀ ಪಯಸಾ ಜವೇತೇ || (ಋಗ್ವೇದ :೩:೩೩:೧)

[13] ಋ:೪:೪೩:೫, ೫:೪೧:೧೫, ೯:೪೧:೬, ೯:೪೩:೫ ಇತ್ಯಾದಿ

[14] ಅಯೋಧ್ಯೆಯಲ್ಲಿ ಹರಿಯುವ ಸರಯೂ ಇಲ್ಲಿ ಹೇಳಿರುವುದಕ್ಕಿಂತ ಭಿನ್ನವಾದುದು.

ಆಕರಗ್ರಂಥಗಳು :

The Vedas: An Introduction to Hinduism’s Sacred Texts

Gods, Sages and Kings: Vedic Secrets of Ancient Civilization

http://voiceofdharma.org/books/rig/ch4.htm

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

2 Comments

  1. Kousalya
    January 7, 2017
    Reply

    Excellent

Leave a Reply

This site uses Akismet to reduce spam. Learn how your comment data is processed.