ತಾಳುವಿಕೆಗಿಂತ ಅನ್ಯ ತಪವಿಲ್ಲ

“ಚೆನ್ನಾಗಿ” ಬದುಕಬೇಕೆಂಬ ಇಚ್ಛೆ ಎಷ್ಟು ಜನಕ್ಕಿರುವುದೋ ಏನೋ ಗೊತ್ತಿಲ್ಲ. ಆದರೆ ಬದುಕಲೇಬೇಕೆನ್ನುವ ಇಚ್ಛೆಯಂತೂ ಎಲ್ಲರಿಗೂ  ಚೆನ್ನಾಗಿಯೇ ಇರುವುದು.  ದೇವರೇನೋ ಬದುಕಬೇಕೆನ್ನುವ ಉತ್ಸಾಹಿಗಳಿಗೆ ಸಾಕಷ್ಟು ಬೆಂಬಲವನ್ನು ಸಿದ್ಧಪಡಿಸಿಯೇ ಇರುತ್ತಾನೆ. ಸಂತೋಷದಿಂದ ಬದುಕಲು ಬೇಕಾಗುವ ಎಲ್ಲ ವ್ಯವಸ್ಥೆಯನ್ನೂ ಆತ ಮಾಡಿದ ನಂತರವೇ ಎಲ್ಲರನ್ನೂ ಭೂಮಿಗೆ ಕಳಿಸಿರುತ್ತಾನೆ. ಆದರೆ ಈ ಎಲ್ಲ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಎಲ್ಲರಿಗೂ ಆಗದು. ಸಾಧಕರಿಗಷ್ಟೆ ಅದು ಸಾಧ್ಯವೇನೋ. ಅನೇಕರು ಎಷ್ಟೋ ಬಾರಿ ಕೆಲವರಿಗೆ ಅವನು ಕೊಡುವ ಬೆಂಬಲವನ್ನು ಸ್ವೀಕಾರ ಮಾಡುವ ಯೋಗ್ಯತೆ ಇಲ್ಲದ ಬಹಳ ಬೇಗ ಸೋಲನ್ನೊಪ್ಪುತ್ತಾರೆ. ಹೀಗೆ ಸೋಲನ್ನೊಪ್ಪಿ ಸಾವನ್ನು ಅಪ್ಪುವರಿಗೆ ಇಲ್ಲೊಂದು ಪಾಠವಿದೆ ನೋಡಿ. ಸಾಕಷ್ಟು ತಾಳ್ಮೆಯಿಂದ ಭಗವಂತನ ದಯಪಾಲಿಸಿದ ಅನುಕೂಲಗಳನ್ನು ಬಳಸಿಕೊಂಡು, ಸೋಲನ್ನೊಪ್ಪದೆ ದೇವನ ಧ್ಯಾನದಲ್ಲಿ ನಿರತರಾದರೆ ಕೊನೆಗೆ ಆನಂದವೇ ಸಿಗುವುದು ಎನ್ನುವುದನ್ನು ಆಫ್ರಿಕೆಯ ಈ ಮೀನಿನ ಮೂಲಕ ಆತ ತೋರಿಸಿಕೊಡುತ್ತಿದ್ದಾನೆ.

ದಕ್ಷಿಣ ಆಫ್ರಿಕದಲ್ಲಿ ಕೆಲವೊಮ್ಮೆ ಬರಗಾಲವು ನಾಲ್ಕಾರು ವರ್ಷಗಳ ಕಾಲ ಒಂದೇ ಪ್ರದೇಶವನ್ನು ಕಾಡುವುದು ಉಂಟು. ಅಲ್ಲಿರುವ ನದಿಗಳು ಬತ್ತಿ ಹೋಗಿ ಅದನ್ನೇ ಅವಲಂಬಿಸಿರುವ ಅನೇಕ ಜೀವಿಗಳು ವಲಸೆಹೋಗುತ್ತವೆ. ಆದರೆ ಮೀನುಗಳೆಲ್ಲಿ ವಲಸೆ ಹೋದಾವು? ಅವುಗಳಿಗೆ ಸಾಯುವುದು ಅನಿವಾರ್ಯವಷ್ಟೇ.  ಅಂತಹ ಪ್ರಸಂಗದಲ್ಲೂ ಸಾಯದಿರುವ, ಬದುಕಲೆಂದೇ ತಾಳ್ಮೆಯಿಂದ ನಾಲ್ಕು ವರ್ಷ ಸತ್ತಂತೆ ಮಲಗುವ ಮೀನಿನ ಜಾತಿ ಇಲ್ಲಿ ಇದೆ ನೋಡಿ. ನೀರಿನಿಂದ ಹೊರಬಿದ್ದು ಚಡಪಡಿಸುವ ಮೀನಿನಂತೆ ಇರುವ ಜನರ ಗುಂಪಿಗೆ ಸೇರದ ಮೀನು ಇದು. ಸಾಧಕರ ಗುಂಪಿಗೆ ಸೇರಿದ್ದು. ನದಿಯಲ್ಲಿ ಉಳಿದಿರುವ ಕೆಸರನ್ನೇ ನುಂಗಿ, ಅದರಲ್ಲಿರುವ ತೇವಾಂಶವನ್ನು ಬಳಸಿ, ತನ್ನ ಜೊಲ್ಲನ್ನೇ ಮೈಗೆ ರಕ್ಷಣಾಕವಚವಾಗಿಸಿಕೊಂಡು, ಒಣಗುವ ಮಣ್ಣಿನಲ್ಲಿ ಮುಚ್ಚಿಕೊಂಡುಬಿಡುತ್ತದೆ. ಮುಂದೆ ನಡೆಯುವುದನ್ನು ನಾನು ಹೇಳಲಾರೆ. ಅದನ್ನು ಬಿಬಿಸಿ ಯ ಈ ಡಾಕ್ಯುಮೆಂಟರಿಯು ಬಹಳ ಚೆನ್ನಾಗಿ ವಿವರಿಸುತ್ತದೆ. ನೋಡಿರಿ.

“ಆಫ್ರಿಕೆಯಲ್ಲಿಯೂ ಕೂಡ ಬರಗಾಲವು ಕೊನೆಗೊಳ್ಳಲೇಬೇಕು” ಎಂದು ಡಾಕ್ಯುಮೆಂಟರಿಯ ವಿವರಣೆಕಾರನು ಹೇಳುವ ಮಾತು ನನಗೆ ಬಹಳ ಇಷ್ಟವಾಯಿತು.

ಈಗ ಸ್ವಲ್ಪ ಹೊತ್ತಿನವರೆಗೆ ನಮ್ಮನ್ನೇ ನಾವು ಮೀನಿನ ರೂಪದಲ್ಲಿ ನೋಡಿಕೊಳ್ಳೋಣ.

ಕೆಲವೊಮ್ಮೆ ನಮ್ಮ ಜೀವನದಲ್ಲಿಯೂ ಸಂತಸಕ್ಕೆ ಬರಗಾಲ ಬರುವುದುಂಟು. ನಮ್ಮ ಕರ್ಮ ಸರಿಯಾಗಿ ಇಲ್ಲದಿದ್ದಾಗ ನಮ್ಮ ಅಕ್ಕಪಕ್ಕದವರು ಈ ಬರಗಾಲದ ಉರಿಗೆ ತುಪ್ಪವನ್ನು ಸೇರಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಇಂತಹ ಸಂದರ್ಭದಲ್ಲಿ ಬಹಳ ಜನ ಹತಾಶರಾಗಿ ಜೀವನವನ್ನೇ ಕೊನೆಗೊಳಿಸಿಕೊಳ್ಳುವ ಬಗೆಗೋ ಅಥವಾ ಆ ಪರಿಸ್ಥಿತಿಯನ್ನು ಎದುರಿಸಲಾಗದೆ ಓಡಿಹೋಗುವ ಬಗೆಗೋ ಯೋಚನೆ ಮಾಡುವುದುಂಟು. ಆದರೆ ಹಾಗೆ ಮಾಡುವುದು ಅನಗತ್ಯ. ಆಫ್ರಿಕೆಯ ಬರಗಾಲಕ್ಕೂ ಕೊನೆ ಇರುವಂತೆ ನಮ್ಮೀ ಪರಿಸ್ಥಿತಿಗೂ ಕೊನೆಯುಂಟು. ತಾಳ್ಮೆ ಇದ್ದಲ್ಲಿ ಬರಗಾಲದ ಕೊನೆಗೆ ಬರುವ ಧಾರಾಕಾರ ಮಳೆಯನ್ನು ನೋಡುವ ಸಂತಸವು ಕೂಡ ಬರುವುದು.  ತಾಳ್ಮೆ ಇದ್ದಲ್ಲಿ ಆ ಮೀನು ನೀರಿನಲ್ಲಿ ಜಾರಿ ಬಿದ್ದಂತೆ ನಾವು ಸಂತಸದಲ್ಲಿ ಬಿದ್ದು ಈಜಾಡಬಹುದು. ಬೇಕಾಗಿರುವುದು ತಾಳ್ಮೆಯಷ್ಟೇ.  ಆ ತಾಳ್ಮೆಯನ್ನು ಹೇಗೆ ಗಳಿಸಿಕೊಳ್ಳಬೇಕು ಎನ್ನುವುದನ್ನು ನಮ್ಮ ಪ್ರೀತಿಯ ವಾದಿರಾಜ ಗುರುಸಾರ್ವಭೌಮರು ಹೇಳಿಕೊಡುತ್ತಾರೆ ನೋಡಿ.

ತಾಳುವಿಕೆಗಿಂತ ಅನ್ಯ ತಪವು ಇಲ್ಲ |
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ||

ದುಷ್ಟಜನರು ನುಡಿವ ನಿಷ್ಟುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೇ ತಾಳು |
ನೆಟ್ಟ ಸಸಿ ಫಲ ತರುವತನಕ  ಶಾಂತಿಯ ತಾಳು
ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು  || 1 ||

ಹಳಿದು ರಂಜಿಸುವಂತ ಹಗೆಯ ಮಾತನೆ ತಾಳು
ಸುಳಿನುಡಿ ಕುಹಕಾದಿ ಮಂತ್ರವನು ತಾಳು
ಅಳುಕದೆಲೆ ಅರಸುಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಲಿ ತಾಳು || 2 ||

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು
ಉಕ್ಕೋ ಹಾಲಿಗೆ ನೀರನಿಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು || 3 ||

(ಹಾಡು ಕಲಿಯಲು ಇಲ್ಲಿ ಕ್ಲಿಕ್ ಮಾಡಿರಿ https://www.youtube.com/watch?v=MVoBhCXSBmI)

ಸಂಸ್ಕೃತದ ಸುಭಾಷಿತವೊಂದು ಹೆಚ್ಚುಕಡಿಮೆ ಇದೇ ಅರ್ಥದಲ್ಲಿ ತಾಳ್ಮೆಯ ಮಹತ್ವವನ್ನು ಹೇಳುವುದು.

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ
ನ ಕ್ಷಾಂತಿತುಲ್ಯಂ ಹಿತಮನ್ಯದಸ್ತಿ |

ದಾನಕ್ಕಿಂತ ಮಿಗಿಲಾಧ ಧನವಿಲ್ಲ, ಸತ್ಯಕ್ಕೆ ಮಿಗಿಲಾದ ವ್ರತವಿಲ್ಲ, ಸಚ್ಚಾರಿತ್ರ್ಯಕ್ಕಿಂತ ಶುಭಕರವಾಗಿರುವುದು ಬೇರಿಲ್ಲ, ತಾಳ್ಮೆ(ಕ್ಷಾಂತಿ)ಗೆ ಸಮನಾದ ಹಿತವಾದದ್ದು ಬೇರೆ ಇಲ್ಲ ಎಂಬುದು ಇದರ ಅರ್ಥ. (ಕ್ಷಾಂತಿ ಎನ್ನುವ ಶಬ್ದಕ್ಕೆ ಕೋಶವು ಹೀಗೆ ಹೇಳಿದೆ. “ದಂಡಿಸುವ ಸಾಮರ್ಥ್ಯವಿದ್ಧೂ ಕೂಡ ಪರರು ಮಾಡಿದ ತಪ್ಪುಗಳನ್ನು ಮನ್ನಿಸುವುದೇ ಕ್ಷಾಂತಿ”.)  ಭಗವಂತನೇ ಕೊಟ್ಟಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಬದುಕಲು ಶಕ್ತನಾಗಬೇಕು. ಜೊತೆಗೆ ಸೈರಣೆಯನ್ನೂ ಬೆಳೆಸಿಕೊಂಡರೆ ವ್ಯಕ್ತಿತ್ವಕ್ಕೆ ಮೆರುಗು ಬರುವುದು.

ಕ್ಷಾಮವನ್ನು ಕ್ಷಾಂತಿಯಿಂದ ಗೆಲ್ಲಬಹುದು ಎನ್ನುವುದು ನಮಗೆ ಪಾಠವಾಗಬೇಕು.

ಚಿತ್ರಕೃಪೆ : http://www.economist.com/node/21559628

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.