ಅತ್ಯಂತ ಆರ್ಭಟದಿಂದ ಕೂಡಿದ ಮಳೆ ಅದು. ಮಧ್ಯದಲ್ಲಿ ಪರ್ವತಗಳೇ ಸೀಳಿದವೇನೋ ಎಂಬ ಸಿಡಿಲುಗಳ ಆರ್ಭಟ ಬೇರೆ. ಸಮಾಧಾನದಿಂದ ಇರುವವರಿಗೆ ನಿಜವಾಗಿಯೂ ಅದು ವೇದಘೋಷದಂತೆ ಕ್ರಮಬದ್ಧವಾಗಿ ಕೇಳಿಸುವುದು. ಇದು ಉತ್ಪ್ರೇಕ್ಷೆಯಲ್ಲ. ಅಷ್ಟೊಂದು ಸುಂದರವಾದ ಅನುಭವ ಅದು. ಕಣ್ಣಿಗೆ ಏನೇನೂ ಕಾಣದು. ಆದರೆ ಮಳೆಯ ಸದ್ದು ಮಾತ್ರ ನಿಮ್ಮ ಹೃದಯದೊಂದಿಗೆ ಮಾತಿಗಿಳಿದಿರುತ್ತದೆ. ಒಮ್ಮೆಯಾದರೂ ಅನುಭವಿಸಿ ಅದನ್ನು. ಇರಲಿ, ತುಂಗನಾಥಪರ್ವತವನ್ನು ಹತ್ತುವ ಉದ್ದೇಶ ಇಲ್ಲದಿದ್ದರೆ ನಾನು ರಾತ್ರಿಯೆಲ್ಲಾ ಆ ಮಳೆಯ ಆರ್ಭಟವನ್ನು ಚೆನ್ನಾಗಿಯೇ ಅಸ್ವಾದಿಸುತ್ತಿದ್ದೆನೇನೋ. ಬೆಳಿಗ್ಗೆಯಾದರೂ ಮಳೆ ನಿಂತಿರುತ್ತದೋ ಇಲ್ಲವೋ ಎನ್ನುವ ತಳಮಳದಲ್ಲಿಯೇ ನಿದ್ರೆ ಬಂದು ರಾತ್ರಿ ಕಳೆಯಿತು.
ಬೆಳಗ್ಗೆ ಸ್ವಾಮೀಜೀ ಚಾಯ್ ಲಾಂವೂ ಕ್ಯಾ ಎನ್ನುವ ಲಕ್ಷ್ಮಣನ ಕ್ಷೀಣಸ್ವರವು ಕೇಳಿಸಿ ಎಚ್ಚರವಾಯಿತು. ಚಹಾ ಬೇಡ ಎಂದು ಹೇಳುತ್ತಾ ಹೊರಗೆ ಬಂದು ನೋಡಿದೆ. ಮಳೆ ಸಂಪೂರ್ಣ ನಿಂತಿತ್ತು. ಆದರೆ ಮೋಡಗಳು ಮಾತ್ರ ದಟ್ಟಗೆ ಮೇಳೈಸಿಯೇ ಇದ್ದವು. ಗಂಟಿಕ್ಕಿದ ಹುಬ್ಬನ್ನು ನೋಡಿ ಲಕ್ಷ್ಮಣ ಮತ್ತೆ ಹೇಳಿದ. “ಮಳೆ ಬರುವುದಿಲ್ಲ ಎಂದು ಹೇಳಲಾಗದು. ಆದರೆ ನೀವು ನೋಡಬೇಕೆಂದಿರುವುದನ್ನು ದೇವರು ತೋರಿಸಿಯೇ ತೋರಿಸುತ್ತಾನೆ. ಹೋಗಿಬನ್ನಿ. “
ಬೆಳಗಿನ ಎಲ್ಲ ವ್ಯವಹಾರಗಳನ್ನೂ ಮುಗಿಸಿ ಆಯಿತು. ಆದದ್ದಾಗಲಿ ಎಂದು ಲಕ್ಷ್ಮಣನ ಮಾತಿನ ಮೇಲೆ ವಿಶ್ವಾಸವಿಟ್ಟು ಬೆಟ್ಟ ಹತ್ತಲು ಪ್ರಾರಂಭಿಸಿದೆ. ಮೂರ್ನಾಲ್ಕು ಚಿಕ್ಕ ಪುಟ್ಟ ಗಂಟೆಗಳನ್ನು ಕಟ್ಟಿರುವ ಒಂದು ಚಿಕ್ಕ ಸ್ವಾಗತದ್ವಾರದ ಮೂಲಕ ಪಯಣ ಶುರುವಾಗುತ್ತದೆ.
ತುಂಗನಾಥವು ಹತ್ತಲು ಅಸಾಧ್ಯವಾದ ಬೆಟ್ಟವೇನೋ ಅಲ್ಲ. ಅದೂ ಅಲ್ಲದೆ ಚೋಪತಾದಿಂದಲೇ ಬೆಟ್ಟವೇರಲು ದಾರಿಯನ್ನು ನಿರ್ಮಿಸಿದ್ದಾರೆ. ಆದಾಗ್ಯೂ ಸಮುದ್ರಮಟ್ಟದಿಂದ ಬಹಳ ಎತ್ತರದಲ್ಲಿ ಇರುವ ಸ್ಥಳವಾದ್ದರಿಂದ ಆಮ್ಲಜನಕದ ಕೊರತೆಯು ಕಾಡುವುದು. ದಕ್ಷಿಣದೇಶದ ಜನರಿಗೆ ಸ್ವಲ್ಪ ಉಸಿರಾಟದ ತೊಂದರೆಯಾಗುವ ಸಾಧ್ಯತೆ ಇದೆ. ಅಭ್ಯಾಸವಿಲ್ಲದವರು ನಿಧಾನವಾಗಿ ಏರಬೇಕು. ಚೋಪತಾದಿಂದ 4-5 ಕಿಲೋಮೀಟರು ದೂರದ ಏರು ನಡಿಗೆಯ ಮಾರ್ಗವಿದು. ಸಾಧಾರಣ ಸ್ಥಳದಲ್ಲಾದರೆ ಈ ದೂರಕ್ಕೆ 40 ನಿಮಿಷಗಳು ಸಾಕಾಗಬಹುದೇನೋ. ಆದರೆ ಇಲ್ಲಿ ಸುಮಾರು 4-5 ಗಂಟೆಗಳಷ್ಟು ಸಮಯ ಬೇಕಾಗಬಹುದು. ಅಂದರೆ ಹೋಗುವುದಕ್ಕೆ ಮತ್ತು ಬರುವುದಕ್ಕೆ ಸೇರಿ ಸುಮಾರು 8-10 ಗಂಟೆಯ ಪ್ರಯಾಸ ಎನ್ನ ಬಹುದು. ಹಣಕಾಸಿನ ಅನುಕೂಲವಿದ್ದವರಿಗೆ ಕುದುರೆಗಳೂ ಉಪಲಬ್ಧವಿವೆ. ಸುಮಾರು 800 ರೂಪಾಯಿಗಳಷ್ಟು ಹಣವು ಕರೆದುಕೊಂಡು ಹೋಗಿ ಬರಲು ವೆಚ್ಚವಾಗುವುದು. ಹೋಗಿ ಬರುವುದಕ್ಕೆ 5ಗಂಟೆಗಳಷ್ಟು ಸಮಯವಾಗುವುದು.
ಪಯಣದ ಶುರುವಿನಲ್ಲಿಯೇ ಸ್ಥಳೀಯ ಕುರಿಗಾಹಿಯೊಬ್ಬ ಜೊತೆಯಾದ. ಹೆಸರೇನೆಂದು ಕೇಳಿದೆ. ಜಗದೀಸ್ ಎಂದು ಹೇಳಿ ನಕ್ಕ. ” ಸ್ ಅಲ್ಲ ಶ್ ಅನ್ನು” ಎಂದರೆ “ಅದೇ ಅನ್ನುತ್ತಿದ್ದೀನಲ್ಲ” ಅಂದ! ಆಗ ನಾನು ನಕ್ಕೆ. ಗಢವಾಲೀ ಶೈಲಿಯ ಅವನ ಗ್ರಾಮ್ಯ ಹಿಂದಿಗೆ ಮನಸೋತು ಅವನೊಡನೆ ಮಾತನಾಡುತ್ತ ಹೆಜ್ಜೆ ಹಾಕಿದೆ. ಮಾತು ಆಡುತ್ತಾ ನಾನು ಬಂದಿರುವ ಮುಖ್ಯ ಉದ್ದೇಶವನ್ನು ಅವನಿಗೆ ಹೇಳಿದೆ. ಮೋಡಗಳೇನೋ ಇಷ್ಟೊಂದು ಇವೆ. ಆದರೆ ಅದೃಷ್ಟ ನಿಮಗೆ ಎದುರಾಗಲಾರದು ಎಂದು ಹೇಗೆ ಹೇಳಲಾದೀತು? ಎಂದು ಆತ ಹೇಳಿ ನನ್ನ ಉತ್ಸಾಹವನ್ನು ಮತ್ತಷ್ಟು ಚಿಗುರಿಸಿದ. ಚಂದ್ರಶಿಲಾ ಪರ್ವತಕ್ಕೆ ಹೋಗುವ ಮನಸ್ಸಿದೆ ಎಂದು ಹೇಳಿದೆ. ಅಷ್ಟು ದೂರ ಯಾಕೆ ಹೋಗ್ತೀರಿ? ಬರೀ ಮೋಡಗಳೇ ಇವೆ. ನಿಮಗೆ ಬೇಕಾಗಿರುವುದು ಇಲ್ಲಿಂದಲೇ ಕಾಣಿಸುವುದಲ್ಲ! ಎಂದು ಹೇಳಿ ಕೋಟಿನ ಜೇಬಿನಲ್ಲಿಯೇ ಇಟ್ಟುಕೊಂಡಿದ್ದ ತನ್ನ ಕೈಯನ್ನು ಹೊರತೆಗೆಯದೇ ಕೈಯನ್ನು ಜೇಬಿನ ಸಮೇತ ಎತ್ತಿ ಕೋಟಿನ ತುದಿಯಿಂದಲೇ ಉತ್ತರ ದಿಕ್ಕನ್ನು ತೋರಿಸಿದ. ಏನಿತ್ತು ಅಲ್ಲಿ? ಲಕ್ಷಗಟ್ಟಲೆ ಎಕರೆ ಬೂದುವರ್ಣದ ಮೋಡಗಳು. ಅಷ್ಟೇ. ಅವುಗಳನ್ನು ನೋಡಿ ಅಷ್ಟೇನೂ ಸಂತಸವೆನಿಸಲಿಲ್ಲ ನನಗೆ.
ಶಿಖರದೆಡೆಗೆ ಹೋಗುವ ಮಾರ್ಗವು ಅತ್ಯಂತ ಮನೋಹರವಾಗಿದೆ. ದಾರಿಯನ್ನು ಚೌಕಾಕಾರದ ಕಲ್ಲುಗಳಿಂದ ನಿರ್ಮಿಸಿದ್ದಾರೆ. ಅವುಗಳ ಮೇಲೆ ನಿರ್ಭಯವಾಗಿ ನಡೆಯಬಹುದು. ಅಕಸ್ಮಾತ್ ಕಾಲು ಜಾರಿದರೂ ಸಹ ಪಾತಾಳಸೇರಿ ಮಾಯವಾಗುವ ಭಯವಿಲ್ಲ. ಏಕೆಂದರೆ, ಬಿದ್ದರೂ ಸಹ ನೀವು ಉರುಳಿಕೊಂಡು ಹೋಗಿ ವಿಶಾಲವಾದ ಹುಲ್ಲು ಹಾಸಿನ ಮೇಲೆಯೇ ಸೇರುತ್ತೀರಿ. ಬರೀ ಹುಲ್ಲುಹಾಸು ಎಂದರೆ ಅರ್ಥವಾಗಲಿಕ್ಕಿಲ್ಲ. ಎಂಥದಪ್ಪಾ ಅಂದರೆ ರಿಶಿಕಪೂರನು ಜಯಪ್ರದಾಳೊಂದಿಗೆ ಪ್ರಣಯದ ಹಾಡು ಹಾಡುತ್ತಾನಲ್ಲ ಅಂತಹ ಹುಲ್ಲುಗಾವಲು! ಎಲ್ಲಿ ನೋಡಿದರೂ ಹಸಿರು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ! ಅರ್ಥವಾಯಿತಲ್ಲ!
ಬುಗ್ಯಾಲ್
ಹಿಮಾಲಯದ ಜೈವಿಕ ವ್ಯವಸ್ಥೆಯು ಕೌತುಕಮಯ ಹಾಗು ಅತ್ಯಂತ ಸಂಕೀರ್ಣವಾಗಿದೆ. ಒಂದೇ ಸ್ಥಳವು ಋತುಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ಜೀವಿಗಳಿಗೆ ವಾಸಸ್ಥಳವಾಗುವುದು ಅಥವಾ ಆಹಾರ ದೊರೆಯುವ ತಾಣವಾಗಿ ಬದಲಾಗುವುದು. ಮೇಲೆ ಹೇಳಿರುವ ಹುಲ್ಲುಗಾವಲು ಕೂಡ ಇಂತಹುದೇ ಒಂದು ಸ್ಥಳ. ಗಢವಾಲೀ ಭಾಷೆಯಲ್ಲಿ ಬುಗ್ಯಾಲ್ ಎಂದು ಕರೆಯುತ್ತಾರೆ. ಅಸಂಖ್ಯವಾದ ಪರ್ವತಗಳ ಮಧ್ಯದಲ್ಲಿ ಅಲ್ಲಲ್ಲೇ ಬೆಟ್ಟಗಳ ಇಳಿಜಾರು ಅಥವಾ ಬೆಟ್ಟದ ಮೇಲಿನ ವಿಶಾಲವಾದ ಸಮತಟ್ಟು ಬಯಲುಗಳಲ್ಲಿ ನಿಸರ್ಗವು ರೂಪಿಸಿರುವ ಸುಂದರ ತೋಟಗಳಿವು. ಬೆಟ್ಟದ ಒಂದು ಬದಿ ದಟ್ಟವಾದ ಕಾಡು ಇದ್ದರೆ ಇನ್ನೊಂದು ಬದಿಗೆ ಹೀಗೆ ವಿಶಾಲವಾದ ಬುಗ್ಯಾಲು ರೂಪುಗೊಂಡಿರುತ್ತದೆ. ಇವು ಅತ್ಯಂತ ಸೂಕ್ಷ್ಮವಾದ ಪ್ರಾಕೃತಿಕ ನೆಲೆಗಳು. ಇಲ್ಲಿಯವರೆಗೂ ನಾಗರಿಕತೆಯ ಸ್ಪರ್ಷವಿಲ್ಲದೆಯೆ ಪರಿಶುದ್ಧವಾಗಿ ಉಳಿದುಕೊಂಡು ಬಂದಿವೆ. ಕೇವಲ ಹುಲ್ಲು ಮಾತ್ರವಲ್ಲದೆ ಅಸಂಖ್ಯವಾದ ವರ್ಣಮಯ ಹೂವಿನ ಗಿಡಗಳಿಗೂ ಈ ಬುಗ್ಯಾಲು ಆಶ್ರಯ ತಾಣ. ಈ ಹೂವುಗಳ ಮಕರಂದಕ್ಕೆ ಆಕರ್ಷಿತವಾಗಿ ಬರುವ ಪುಟ್ಟ ಪುಟ್ಟ ಚಿಟ್ಟೆಗಳದ್ದೂ, ಪತಂಗಗಳದ್ದೂ ಮತ್ತೊಂದು ಲೋಕ.
ಚಳಿಗಾಲದಲ್ಲಿ ಈ ಹುಲ್ಲುಗಾವಲು ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತದೆ. ಬೇಸಿಗೆ ಶುರುವಾದ ನಂತರ ಮತ್ತೆ ಹಸಿರು ಚಿಗುರೊಡೆದು ನಿಧಾನವಾಗಿ ಹಸುಗಳೂ ಕುರಿಗಳೂ ಕುರುಂ ಕುರುಂ ಎಂದು ಹುಲ್ಲು ತಿನ್ನಲು ಬರುತ್ತವೆ. ಪಶುಪಾಲಕರಿಗೆ 3-4 ತಿಂಗಳ ಕಾಲ ಈ ಸ್ಥಳವೇ ಹಳ್ಳಿಯಾಗಿಯೂ ಪರಿವರ್ತನೆಯಾಗುತ್ತದೆ. ಯಾತ್ರಿಕರನ್ನು ಹೊತ್ತು ಬೆಟ್ಟ ಹತ್ತುವ ಕುದುರೆಗಳಿಗೂ ಇದೇ ಜಾಗವು ಊಟದ ಕೇಂದ್ರ.
ಚೋಪತಾ, ತುಂಗನಾಥ, ಔಲಿ ಹಾಗು ಬೇದಿನೀ ಎನ್ನುವ ಬುಗ್ಯಾಲುಗಳು ಬದರಿ ಹಾಗು ಕೇದಾರದ ಸುತ್ತುಮುತ್ತಲಿನ ಪ್ರಾಂತ್ಯದಲ್ಲಿ ಕಂಡುಬರುತ್ತವೆ. ಇವುಗಳನ್ನು ತಲುಪುವ ಮಾರ್ಗವು ಸುಲಭ. ಇನ್ನಿತರ ಚಿಕ್ಕ ಪುಟ್ಟ ಹುಲ್ಲುಗಾವಲುಗಳನ್ನು ಕೂಡ ಅಲ್ಲಲ್ಲಿ ನೋಡಬಹುದು. ಗೋಪೇಶ್ವರದಿಂದ ಚೋಪತಾಕ್ಕೆ ಬರುವ ಮಾರ್ಗದಲ್ಲಿ ಒಂದೆಡೆ ಸುಂದರ ಬುಗ್ಯಾಲಿನಲ್ಲಿ ಆಧುನಿಕರು ಟೆಂಟು ಹೋಟೆಲಿನಂತಹುದನ್ನು ಸ್ಥಾಪಿಸಿ ಏನೇನೋ ಸಾಹಸಕ್ರೀಡೆಗಳನ್ನು ಆಯೋಜಿಸುತ್ತಿದ್ದುದನ್ನು ನಾನು ನೋಡಿದೆ. ಈ ರೀತಿಯ ಚಟುವಟಿಕೆಗಳು ನಿಸರ್ಗಕ್ಕೆ ಹಾನಿಯನ್ನುಂಟು ಮಾಡದಿದ್ದರೆ ಸಾಕು.
ಅಗಾಧವಾಗಿ ಹರಡಿರುವ ತಿಳಿ ಹಸಿರು ಹುಲ್ಲುಗಾವಲು, ಅದರ ಹಿಂದೆ ದಟ್ಟ ಹಸಿರಿನ ಅರಣ್ಯ, ಅವುಗಳ ಹಿಂದೆ ಗಗನಕ್ಕೆ ಮುತ್ತು ಕೊಡುತ್ತಿರುವ ಹಿಮಾಚ್ಛಾದಿತ ಪರ್ವತದ ತುದಿಗಳು, ಅವುಗಳ ಮೇಲೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮೋಡಗಳು, ಆ ಮೋಡಗಳ ಹಿಂದೆ ಪರಿಶುಭ್ರ ನೀಲವರ್ಣದ ಆಗಸ! ಇದು ಬುಗ್ಯಾಲುಗಳ ಬಳಿ ನೀವು ನಿಂತಾಗ ಕಾಣುವ ಸ್ವರ್ಗಸದೃಶವಾದ ನೋಟ. ಆದರೆ ನಾನು ಈ ಮಾರ್ಗದಲ್ಲಿ ನಡೆಯುತ್ತಿದ್ದ ದಿನದಂದು ಮೇಘಗಳೇ ರಾಜ್ಯಭಾರ ನಡೆಸಿದ್ದವು. ಬೂದುವರ್ಣದ ಮಂಜು ಬಿಟ್ಟರೆ ಏನೂ ಕಾಣಲಿಲ್ಲ. ಅಗಾಧವಾದ ಮಂಜಿನ ಮಧ್ಯ ಅನೇಕ ಕುದುರೆಗಳು, ದಟ್ಟ ಕೂದಲಿನ ಹಸುಗಳು ಹಾಗು ಕುರಿಗಳ ಮಂದೆಗಳು ಅಲ್ಲಲ್ಲಿ ಮೇಯುತ್ತಿದ್ದವು. ಕುದುರೆಗಳ ಕೊರಳಗಂಟೆಯ ಇಂಪಾದ ಸದ್ದು ಕೇಳುತ್ತಾ ಮುನ್ನಡೆದೆ. ಮನಸ್ಸು ಮಾತ್ರ ಪದೇ ಪದೇ ಪ್ರಶ್ನಿಸುತ್ತಲೇ ಇತ್ತು. ಮೋಡಗಳು ಸ್ವಲ್ಪವಾದರೂ ತೆರವಾಗುವುವೋ ಇಲ್ಲವೋ ಎಂದು. ಮನಸ್ಸನ್ನು ಓದಿದವನಂತೆ ಜಗದೀಶನೆಂದ. “ಇನ್ನೂ ಸ್ವಲ್ಪ ದೂರ ನಡೆದರೆ ಆ ಸ್ಥಳವು ಬರುತ್ತದೆ. ದೇವರ ಇಚ್ಛೆ ಇರಲಿ”
ಮಧ್ಯದಲ್ಲಿ ಒಂದು ಕಡೆ ಜಲಪಾತವೊಂದು ಮೆಟ್ಟಿಲುಗಳನ್ನು ಧ್ವಂಸಮಾಡಿ ಹಾಕಿತ್ತು. ಅದನ್ನು ಎಗರಿಕೊಂಡು ದಾಟಿದ್ದಾಯ್ತು. ದಾರಿಗುಂಟ ಬೆಳೆದ ವಿವಿಧ ವರ್ಣಗಳ ಪುಟ್ಟ ಪುಟ್ಟ ಹೂವುಗಳನ್ನು ನನ್ನ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿಯುತ್ತಾ ಸಾಗಿದ್ದೆವು. ಸುಮಾರು 1.5 ಕಿ.ಮೀ ದೂರದ ನಂತರ ಒಂದೆಡೆ ಕುಳಿತು ದಟ್ಟಕೆಂಪುವರ್ಣದ ಹೂವಿನ ಫೋಟೋ ತೆಗೆದವನು ಎದ್ದು ನಿಂತೆ. ವಿಮಾನದಲ್ಲಿ ಕುಳಿತಂತೆ ಭಾಸವಾಯಿತು. ವಿಮಾನದ ಕಿಟಕಿಯ ಮೂಲಕ ಕಾಣಿಸುವ ಮೋಡಗಳ ರಾಶಿಯ ಮಧ್ಯದಲ್ಲಿ ಕಾಣಿಸುವ ರೀತಿಯಲ್ಲೇ ನೀಲಾಗಸದ ಕಿಂಚಿತ್ ದರ್ಶನವಾಯಿತು. ಆದರೆ ಅದೊಂದು ಅತ್ಯಪೂರ್ವ ದರ್ಶನ ನನಗೆ ಸಿಕ್ಕಿದ್ದು. ಮತ್ತೆ ಅದನ್ನು ನೋಡಲು ಎಷ್ಟು ವರ್ಷಗಳಾಗುವವೋ, ಎಷ್ಟು ಸಹಸ್ರ ಮೈಲು ಪ್ರಯಾಣಮಾಡಬೇಕಾದೀತೋ ಎನ್ನುವ ಪ್ರಜ್ಞೆಯೇ ನನಗೆ ಇರಲಿಲ್ಲ. ಜಗದೀಶ ನನ್ನ ಕೈಯನ್ನು ಜೋರಾಗಿ ಅಲುಗಿಸಿ “ಬೇಗ ನೋಡಿಬಿಡಿ, ಇದಕ್ಕೆಂದೇ ಅಷ್ಟೊಂದು ದೂರದಿಂದ ಬಂದಿದ್ದೀರಿ” ಎಂದು ಹೇಳಿದ.
ಒಂದು ನಿಮಿಷಕ್ಕೂ ಕಡಿಮೆಯ ಅವಧಿ ಅದು. ಅಷ್ಟು ಮಾತ್ರದ ದರ್ಶನವನ್ನು ಆ ಮಹಾಪರ್ವತ ಕೊಟ್ಟೇಬಿಟ್ಟಿತು. ಸಂಪೂರ್ಣವೇನಲ್ಲ, ಶಿಖರದರ್ಶನ ಮಾತ್ರ ಆಗಿದ್ದು. ಆದರೆ ನೋಡು ನೋಡುತ್ತಿದ್ದಂತೆಯೇ ಪುನಃ ಮೇಘಗಳ ಮಹಾ ಮಾಲೆಯೊಂದು ಮತ್ತೆ ಪರ್ವತವನ್ನು ಮುಚ್ಚಿಯೇ ಬಿಟ್ಟಿತು. ಅಷ್ಟು ಮಾತ್ರಕ್ಕೇ ನನ್ನ ಹೃದಯ ಕುಣಿದಾಡಿತು. ನನಗೆ ಅರಿವಿಲ್ಲದಂತೆ ಕಣ್ಣೀರು ಧಾರೆಯಾಗಿ ಹರಿದು ಬಂದಿತು. ಹತ್ತಾರು ವರ್ಷಗಳ ಕನಸಾಗಿದ್ದ ಚೌಖಂಬಾ ಪರ್ವತವನ್ನು ನಾನು ಮೊದಲಬಾರಿಗೆ ನೋಡಿದ್ದು ಹೀಗೆ.
ಮುಂದುವರೆಯುವುದು.
2 Comments