“ಬಾ ತೋರಿಸು ನಿನ್ನ ಯೋಗ್ಯತೆಯನ್ನು, ನೋಡಿಯೇ ಬಿಡುತ್ತೇನೆ” ಎನ್ನುತ್ತಾ ಏಕಕಾಲದಲ್ಲಿಯೇ ಪೂಜಾಪ್ರಿಯರನ್ನೂ, ಆಧ್ಯಾತ್ಮಜೀವಿಗಳನ್ನೂ, ಬೆಟ್ಟವೇರುವ ಸಾಹಸಿಗಳನ್ನೂ ಕೆಣಕಿ ತನ್ನೆಡೆ ಸೆಳೆಯುವ ಸಾಮರ್ಥ್ಯ ಇರುವ ಪ್ರಾಕೃತಿಕ ನೆಲೆ ಎಂದರೆ ಹಿಮಾಲಯ. ಇದರಲ್ಲಿ ಸಂಶಯವಿಲ್ಲ. ಆದರೆ ಅತ್ತ ಕರ್ಮಠರ ಪಟ್ಟಿಯಲ್ಲಾಗಲಿ ಇತ್ತ ಆಧ್ಯಾತ್ಮ ಚಿಂತಕರ ಮಧ್ಯದಲ್ಲಾಗಲೀ ಅಥವಾ ಈ ಸಾಹಸಿಗಳ ಹಿಂಡಿನಲ್ಲಾಗಲೀ ಎಲ್ಲಿಯೂ ಸ್ಪಷ್ಟವಾಗಿ ಕಾಣಿಸದಿರುವ ನನ್ನಂತಹ ಒಂದು ಚುಕ್ಕೆಗೂ ಸಹ ಹಿಮಾಲಯವು ಆಕರ್ಷಣೆಯ ಕೇಂದ್ರವಾಗಿರುವುದು ನನ್ನ ಮಟ್ಟಿಗೆ ಒಂದು ಸೋಜಿಗವೇ ಸರಿ.
ಹಿಮಾಲಯದ ಬಗ್ಗೆ ಎಲ್ಲಿಯೇ ಆಗಲಿ ಲೇಖನವು ಕಾಣಿಸಿದರೆ ಅದನ್ನು ಮೇಲಿಂದ ಮೇಲೆ ಓದುವ ಹವ್ಯಾಸ ನನಗೆ. ನನ್ನಲ್ಲಿ ಹಿಮಾಲಯವನ್ನು ಕುರಿತಾದ ಅನೇಕ ಪುಸ್ತಕಗಳೂ ಇವೆ. ಎಲ್ಲವನ್ನೂ ಅನೇಕ ಬಾರಿ ಓದಿದ್ದೇನೆ. ಇವುಗಳಲ್ಲಿ ಭಾರತಸಂಚಾರಿ ಕೃಷ್ಣ ಗೋಸಾವಿ ಅವರು ಬರೆದಿರುವ ಹಿಮಾಲಯದರ್ಶನ ಎನ್ನುವ ಪುಸ್ತಕವು ನನ್ನ ಹೃದಯಕ್ಕೆ ಅತಿ ಹತ್ತಿರವಾಗಿರುವ ಪುಸ್ತಕ. ಇದು ೧೯೬೦ರ ಆಸುಪಾಸಿನಲ್ಲಿ ಮುದ್ರಿತವಾದದ್ದು. ಭಾರತೀಯ ದರ್ಶನಗಳ ಹಿನ್ನೆಲೆಯಲ್ಲಿ ಹಿಮಪರ್ವತಗಳ ವರ್ಣನೆ, ಸ್ಥಳ ಮಹಾತ್ಮೆ, ಈ ಶಿಖರಗಳನ್ನು ತಲುಪುವ ಮಾರ್ಗ, ಮಾರ್ಗಮಧ್ಯದಲ್ಲಿ ಒದಗಬಹುದಾದ ಸಂಕಟಗಳು, ಶಿಖರವನ್ನು ತಲುಪಿದ ನಂತರ ಸಿಂಚನವಾಗುವ ಸಂತಸ ಹೀಗೆ ಎಲ್ಲವನ್ನೂ ಅವರು ಬಹಳ ಸುಂದರವಾದ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ. ಆಚಾರ್ಯ ಮಧ್ವರ ಮಾತುಗಳನ್ನು ಸಾಕಷ್ಟು ಸಲ ಉಲ್ಲೇಖಿಸುವ ಈ ಪುಸ್ತಕವನ್ನು ಈಗಾಗಲೇ ೫೦ ಸಲವಾದರೂ ಓದಿದ್ದೇನೆ ಅನಿಸುತ್ತದೆ. ಪ್ರತೀ ಸಲ ಓದಿದಾಗಲೂ ಒಂದೊಂದು ಹೊಸ ಪರ್ವತವನ್ನು ನೋಡಬೇಕೆಂದು ಆಸೆ ಮೂಡುವುದು. ಆದರೆ ಹಣ, ಸಮಯ, ಅದೃಷ್ಟ ಎಲ್ಲವೂ ಒದಗಿ ಬರಬೇಕಲ್ಲವೆ? ಸಮಯ ಮತ್ತು ಅದೃಷ್ಟಕ್ಕಿಂತಲೂ ಹಣದ್ದೇ ನಿಜವಾದ ಅಭಾವ ಎಂದರೆ ಸರಿಯಾದೀತೇನೊ.
ಒಂದಿಷ್ಟು ಅದೃಷ್ಟವಿದೆಯೋ ಏನೊಪ್ಪ!. ಪ್ರತಿ ಸಲವೂ ಯಾರಾದರೂ ಒಬ್ಬ ಮಹಾನುಭಾವರ ಮೂಲಕ ಭಗವಂತ ನನ್ನ ಆನಂದಯಾತ್ರೆಗೆ ಪ್ರಾಯೋಜಕತ್ವವನ್ನು ಕೊಡಿಸುತ್ತಾನೆ. ಈ ಸಲವೂ ಹಾಗೆಯೇ ಆಯಿತು. ಒಬ್ಬ ಸಾತ್ವಿಕರು ನನ್ನ ಯಾತ್ರೆಯ ಸಂಪೂರ್ಣ ವೆಚ್ಚವನ್ನು ನೋಡಿಕೊಂಡರು. ಅವರಿಂದಾಗಿ ಬದರೀನಾರಾಯಣನ ದರ್ಶನವು ಆಯಿತು. ಆದರೆ ನನಗೆ ಅದಕ್ಕಿಂತಲೂ ಹೆಚ್ಚು ಚೆಲುವಿನ ಪ್ರದೇಶವೊಂದನ್ನು ನೋಡುವ ಅಭಿಪ್ರಾಯವು ಇತ್ತು. ಚೋಪತಾ ಮತ್ತು ತುಂಗನಾಥದ ದರ್ಶನವು ಬಹಳದ ಬಯಕೆ ನನ್ನದು. ಅವರಿಂದಾಗಿ ಅದೂ ಕೂಡ ಈ ಬಾರಿ ಕೈಗೂಡಿತು.
ಹಿಮವತ್ಪರ್ವತದಲ್ಲಿ ೫ ಶಿವಕ್ಷೇತ್ರಗಳು ಅತ್ಯಂತ ಪ್ರಸಿದ್ಧ. ಕೇದಾರ, ಮಧ್ಯಮಹೇಶ್ವರ, ತುಂಗನಾಥ, ರುದ್ರನಾಥ ಮತ್ತು ಕಲ್ಪೇಶ್ವರ ಎನ್ನುವವೇ ಆ ಐದು ಕ್ಷೇತ್ರಗಳು. ಇವುಗಳೆಲ್ಲವೂ ಹಿಮಾಲಯದ ಗಡವಾಲ್ ಪ್ರಾಂತ್ಯದ ದೇಗುಲಗಳು. ತುಂಗನಾಥವು ಎಲ್ಲಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿರುವ ಗುಡಿ. ಇದು ರುದ್ರಪ್ರಯಾಗ ಜಿಲ್ಲೆಯಲ್ಲಿದೆ.
ನಮಗೆ ತಾರತಮ್ಯವಾಗಿ ಕೇದಾರಕ್ಕಿಂತಲೂ ಬದರಿಯು ಹೆಚ್ಚಿನದು. ಎರಡು ಮಾತಿಲ್ಲ. ಆದಾಗ್ಯೂ ಯಾವುದೇ ಪೂರ್ವಾಗ್ರಹವಿಲ್ಲದೆ ಹೇಳುವುದಾದಲ್ಲಿ ಪ್ರಕೃತಿಯ ಸೌಂದರ್ಯದ ದೃಷ್ಟಿಯಲ್ಲಿ ಕೇದಾರವೇ ಹೆಚ್ಚಿನ ಅಂಕವನ್ನು ಗಳಿಸುವುದು. ಆದರೆ ಇಲ್ಲಿರುವ ಮಹಾದೇವನ ದರ್ಶನವನ್ನು ಯಾಕೋ ನಮ್ಮ ಆಚಾರ್ಯರು ಬೇಡ ಅಂದಿರುವರು. ಗರ್ಭಗೃಹದ ಒಳಗೆ ಹೋಗಿ ತಪೋನಿರತನಾದ ಕೇದಾರನಾಥನಿಗೆ ಕಿರಿ ಕಿರಿ ಮಾಡುವುದರ ಬದಲು ಕೇದಾರ ಪರ್ವತದ ಆರೋಹಣವನ್ನು ಮಾಡಿ ಸುತ್ತಮುತ್ತಲಿನ ಪ್ರಕೃತಿಯನ್ನು ಅನುಭವಿಸುವುದಕ್ಕೆ ಏನೂ ಅಡ್ಡಿ ಇಲ್ಲ ಎಂದು ನನ್ನ ಅಭಿಪ್ರಾಯ. ಬಹು ಸುಂದರವಾದ ಸ್ಥಳ ಇದು. ಆದರೆ ಹತ್ತಲು ಆರೋಗ್ಯವೂ ಸಹ ಬೇಕೇ ಬೇಕು. ೧೧೦೦೦ ಅಡಿಗಳಷ್ಟು ಮೇಲೆ ಇರುವ ಪರ್ವತದ ತುದಿ ಇದು. ವಾಹನಗಳು ಹೋಗಲಾರವು. ಕಾಲ್ನಡಿಗೆಯೇ ಗತಿ. ನಡೆಯಲಾಗದವರು ಕುದುರೆಯನ್ನೋ ಸ್ಥಳೀಯ ಗುಡ್ಡಗಾಡು ಮಂದಿಯು ಹೊರುವ ತೊಟ್ಟಿಲನ್ನೋ ಆಶ್ರಯಿಸಬೇಕು. ಒಟ್ಟು ೧೪ ಕಿಮೀ ದುರ್ಗಮ ಪಯಣವಿದು. ಇತ್ತೀಚೆಗೆ ಹೆಲಿಕಾಪ್ಟರುಗಳು ಕೂಡ ಇವೆ. ಆಟೋ ಸ್ಟ್ಯಾಂಡುಗಳ ರೀತಿಯಲ್ಲಿ ದಾರಿಯುದ್ದಕ್ಕೂ ಸುಮಾರು ೧೪ಕ್ಕೂ ಹೆಚ್ಚಿನ ಹೆಲಿಕಾಪ್ಟರು ಸ್ಟ್ಯಾಂಡುಗಳಿವೆ. ಹೋಗಿ ಬರುವುದಕ್ಕೆ ಒಬ್ಬರಿಗೆ ಸುಮಾರು ೧೫೦೦೦ ವರಹಗಳ ವೆಚ್ಚವಾಗುವುದು!. ಅಂತೂ ಆರೋಗ್ಯದ ಭಾಗ್ಯವಿಲ್ಲದವರಿಗೆ ನಡೆದು ಹೋಗುವುದೂ ಜೇಬಿನ ಭಾಗ್ಯವಿಲ್ಲದವರಿಗೆ ಯಂತ್ರಗಿತ್ತಿಯ ಸಂಗವೂ ಅಸಾಧ್ಯದ ಮಾತೇ ಸರಿ.
ಇಷ್ಟರ ಮಟ್ಟಿನ ಕೋಟಲೆಗಳು ಇಲ್ಲದೆ ಇದಕ್ಕಿಂತಲೂ ಚೆಲುವಿನ ತಾಣವೊಂದನ್ನು ನೋಡಲು ಇಷ್ಟವಿದ್ದಲ್ಲಿ ತುಂಗನಾಥ ನಿಮಗೆ ಹೇಳಿಮಾಡಿಸಿದ ಜಾಗ.
ಹರಿದ್ವಾರದಿಂದ ಮೇಲ್ಭಾಗದಲ್ಲಿ ೧೫೦ ಕಿಮೀ ದೂರದಲ್ಲಿ ರುದ್ರಪ್ರಯಾಗ ಎನ್ನುವ ಸ್ಥಳ ಬರುತ್ತದೆ. ಇದು ಒಂದು ಜಂಕ್ಷನ್. ಕೇದಾರಕ್ಕೆ ಹಾಗು ಬದರೀನಾಥಕ್ಕೆ ಇಲ್ಲ್ಲಿ ದಾರಿ ಕವಲೊಡೆಯುತ್ತದೆ. ಊರಿನ ಮಧ್ಯಭಾಗದಲ್ಲಿ ಅಲಕನಂದಾ ಹಾಗು ಮಂದಾಕಿನಿಯರ ಸಂಗಮವು ಆಗುತ್ತದೆ. ಅಲಕನಂದೆಯ ಕಿರುಬೆರಳನ್ನು ಹಿಡಿದುಕೊಂಡು ಹೋದರೆ ಬದರಿಯೂ ಮಂದಾಕಿನಿಯ ಜೊತೆಗೆ ಮಾತನಾಡುತ್ತ ಹೋದರೆ ಕೇದಾರವೂ ನಿಮ್ಮ ಯಾತ್ರೆಯ ಅಂತಿಮ ಸ್ಥಳವಾಗುತ್ತವೆ. ಕೇದಾರಕ್ಕೆ ಹೋಗುವ ದಾರಿಯಲ್ಲಿ ಸುಮಾರು ೨೦ ಕಿಮೀ ಕ್ರಮಿಸಿದ ನಂತರ ದಾರಿಯು ಮತ್ತೊಮ್ಮೆ ಕವಲಾಗುವುದು. ಎಡದ ದಾರಿ ಕೇದಾರಕ್ಕೆ ಹೋಗುವುದು. ಬಲದ ದಾರಿ ಚೋಪತಾ ಎನ್ನುವ ಊರಿನ ಮೂಲಕ ಗೋಪೇಶ್ವರ ಎನ್ನುವ ಸ್ಥಳಕ್ಕೆ ಹೋಗುತ್ತದೆ. ಅಲ್ಲಿಂದ ಮುಂದೆ ಚಮೋಲಿ ಎನ್ನುವ ಊರಿನಲ್ಲಿ ಪುನಃ ಬದರಿಯ ಹೆದ್ದಾರಿಗೆ ಸೇರುತ್ತದೆ. ನಾನು ಬದರಿಯಿಂದ ಈ ದಾರಿಯ ಮೂಲಕವೇ ಬಂದು ಚೋಪತಾ ಗ್ರಾಮಕ್ಕೆ ಸೇರಿಕೊಂಡಿದ್ದು. ಚೋಪತಾ ಗ್ರಾಮವು ತುಂಗನಾಥದ ಬೇಸ್ ಕ್ಯಾಂಪ್ ಎನ್ನಬಹುದು. ಇಲ್ಲಿಂದ ಸುಮಾರು ೫ ಕಿಮೀ ದೂರದ ಕಷ್ಟಸಾಧ್ಯ ಚಾರಣದ ಮೂಲಕ ತುಂಗನಾಥವನ್ನು ತಲುಪಬಹುದು. ಅಲ್ಲಿಂದ ಮುಂದೆ ಮತ್ತೆ ಸುಮಾರು ೩ ಕಿ.ಮೀ ದೂರ ಇನ್ನಷ್ಟು ಕಷ್ಟಪಟ್ಟು ನಡೆದರೆ ಸ್ವರ್ಗಸದೃಶವಾದ ಚಂದ್ರಶಿಲಾ ಪರ್ವತದ ತುದಿಯನ್ನು ಸೇರಬಹುದು.
ಈ ಸರಹದ್ದಿನಲ್ಲಿ ಮನುಷ್ಯರ ವಾಸ್ತವ್ಯ ಇರುವ ಸ್ಥಳಗಳಲ್ಲೆಲ್ಲಾ ಚೋಪತಾ ಅತ್ಯಂತ ಸುಂದರವಾದ ಪ್ರದೇಶವೆನ್ನಲು ಅಡ್ಡಿ ಇಲ್ಲ. ಸಮುದ್ರ ಮಟ್ಟದಿಂದ ೮೦೦೦ ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ, ಪರಿಶುಭ್ರವಾದ ಹವಾಮಾನವುಳ್ಳ ಪುಟ್ಟ ಗ್ರಾಮವಿದು. ಇಲ್ಲಿ ನಿಂತು ನೋಡಿದಾಗ ಸುತ್ತಮುತ್ತಲಿನ ಅನೇಕ ಪರ್ವತಗಳ ನೆತ್ತಿಯು ಬಹು ಮೋಹಕವಾಗಿ ಕಾಣಿಸುವುದು. ಭೌಗೋಳಿಕವಾಗಿ ಈ ಸ್ಥಳವು ಕೇದಾರನಾಥ ವನ್ಯಜೀವಿ ಸ್ಥಳದ ಒಂದು ಭಾಗ. ಪರಿಶುದ್ಧ ನೀರಿನ ಪುಟ್ಟ ಝರಿಗಳು, ಊಹಿಸಲೂ ಆಗದ ವರ್ಣದ ಹೂವುಗಳು, ಕೀಟಾಹಾರಿ ಸಸ್ಯಗಳು, ಕಚಗುಳಿ ಇಡುವ ಮೋಡಗಳೇ ನಿಮಗೆ ಈ ಊರಿನಲ್ಲಿ ಸಿಗುವ ಸಂಗಾತಿಗಳು. ಅದೃಷ್ಟವು ಚೆನ್ನಾಗಿ ಇದ್ದರೆ ಕಸ್ತೂರಿ ಮೃಗಗಳು ಕೂಡ ಕಾಣಿಸುತ್ತವೆ.
ನಾನು ಇಲ್ಲಿಗೆ ಬಂದು ಸೇರಿದಾಗ ಸಂಜೆ ಸುಮಾರು ೬ಗಂಟೆ ಆಗಿತ್ತು. ನಮ್ಮನ್ನು ಸ್ವಾಗತಿಸಿದ್ದು ಅಲ್ಲಿಯೇ ಮೇಯುತ್ತಿದ್ದ ಸಾಕು ಕುದುರೆಗಳ ಗಂಟೆಯ ಕಿಣಿ ಕಿಣಿ ಮಾಧುರ್ಯ ಮತ್ತು ಬಹು ಇಂಪಾಗಿ ಆದರೆ ಕ್ಷೀಣವಾಗಿ ಕೇಳಿಸುತ್ತಿದ್ದ ಕಾಡು ಪಕ್ಷಿಗಳ ಕಲರವ. ಇವುಗಳ ಹೊರತಾಗಿ ಅಲ್ಲಿ ಕೇಳಿಬಂದ ದೊಡ್ಡ ಸದ್ದು ಎಂದರೆ ಅಲ್ಲಿಯೇ ಇರುವ ಹೋಟೆಲಿನ ಒಲೆಯ ಮೇಲೆ ಕುದಿಯುತ್ತಿದ್ದ ಚಹಾದ್ದು!
ಅಲ್ಲಿಯೇ ಇರುವ ಒಂದು ಧರ್ಮಶಾಲೆಯ ಉಸ್ತುವಾರಿಯವನು, ಲಕ್ಷ್ಮಣ ಎಂಬಾತ ಬಂದು ಉಳಿದುಕೊಳ್ಳುವ ವ್ಯವಸ್ಥೆಗೆ ಸಹಾಯ ಮಾಡಿದ. ಆತನೊಡನೆ ಮಾತನಾಡುತ್ತ ವಾತಾವರಣದ ಅರಿವು ಮೂಡಿಸಿಕೊಂಡೆ. ಆದರೆ ಮನದಲ್ಲಿ ಯಾವ ಉದ್ದೇಶಕ್ಕೆ ತುಂಗನಾಥಕ್ಕೆ ಹೊರಟಿದ್ದೆನೋ ಆ ಉದ್ದೇಶವೇ ಈಡೇರದಿರುವ ಭಯವು ಹೊರಗೆ ಇದ್ದ ದಟ್ಟ ಕಾರ್ಮೋಡಗಳಿಗಂತಲೂ ಹೆಚ್ಚಿಗೆ ಕವಿಯಿತು. ಬೇಡವೆಂದರೂ ಕಣ್ಣಂಚಿನಲ್ಲಿ ನೀರು ಮೂಡಿತು. ಅದನ್ನು ನೋಡಿದ ಆತ ದೇವರಿದ್ದಾನೆ. ಪ್ರಯತ್ನ ಮಾಡಿರಿ ಎಂದು ಹೇಳಿ, ತನ್ನ ಮುಂದಿನ ಕೆಲಸಕ್ಕಾಗಿ ಹೊರಟು ಹೋದ.
ಸಂಜೆ ೭ಕ್ಕೆಲ್ಲ ನೀರವ ಮೌನ ವ್ಯಾಪಿಸಿತು. ಧ್ಯಾನಶೀಲ ಮನಸ್ತತ್ವದವರಿಗೆ ಹೇಳಿದ ಮಾಡಿಸಿದ ನಿಃಶಬ್ದವದು. ಆದರೆ ಅಷ್ಟು ಶುದ್ಧ ಮನಸ್ಸು ನನಗೆಲ್ಲಿ ಬರಬೇಕು? ಏನೋ ಆಲೋಚನೆ ಮಾಡುತ್ತ ಕೂತಿದ್ದಾಗ ಮೇಲೆ ಕವಿದಿದ್ದ ಮೋಡಗಳ ಎಲ್ಲ ಹೊಲಿಗೆಗಳೂ ಒಟ್ಟಿಗೇ ಹರಿದು ಬಿಟ್ಟವು! ಹರಿದ ಮೋಡಗಳಿಂದ ಹೊರಬಂದ ವರ್ಷಧಾರೆಯಲ್ಲಿ ನನ್ನ ಕನಸೂ ಕೊಡ ಕರಗಿ ಹೋಗತೊಡಗಿತು. ಇಂತಹ ಸ್ಥಿತಿಯಲ್ಲಿ ಯಾವ ಧ್ಯಾನ ಮಾಡಲಿ? ಆದರೆ ಕನಸು ಪೂರ್ತಿಯಾಗಿ ಕೊಚ್ಚಿಕೊಂಡು ಹೋಗದಂತೆ ತಡೆದದ್ದು ಲಕ್ಷ್ಮಣ ಹೇಳಿದ “ದೇವರಿದ್ದಾನೆ” ಎನ್ನುವ ಭರವಸೆಯೊಂದೆ! ಅಂತೂ ಯಾವುದಕ್ಕೂ ಮನಸ್ಸು ತಯಾರಾಗುತ್ತಿದ್ದಂತೆಯೇ ನಿದ್ರೆಯೂ ಆವರಿಸಿತು. ಬೆಳಗಿನವರೆಗೆ ಮಳೆ ಸುರಿದಂತೆಯೆ ಇತ್ತು.
ಎಚ್ಚರವಾಗಿದ್ದು ಬಹು ಬೇಗನೆ. ಮಂದಹಾಸ ಮೂಡಲು ಕಾರಣವಿತ್ತು. ಮಳೆಯ ಸುದ್ದಿ ಇದ್ದಿಲ್ಲ. ಅಲ್ಲಿಂದ ಮುಂದೆ ನಡೆದದ್ದೆಲ್ಲ ಲಕ್ಷ್ಮಣ ಹೇಳಿದಂತೆ “ದೇವರಿದ್ದಾನೆ” ಎನ್ನುವ ಮಾತಿನ ಮ್ಯಾಜಿಕ್ಕೇ!
– ಮುಂದುವರೆಯುತ್ತದೆ.
2 Comments