ಅರೇಬಿಯಾದ ವಿಶಾಲ ಮರುಭೂಮಿ. ಎತ್ತ ನೋಡಿದರೂ ದಿಕ್ಕುಗೆಡಿಸುವಂತಹ ಅಗಾಧ ಪ್ರಮಾಣದ ಮರಳಿನ ದಿಬ್ಬಗಳು. ಅಲ್ಲಲ್ಲೇ ಕೆಲವು ಖರ್ಜೂರದ ಮರಗಳು. ಅಗೋ…. ಅಷ್ಟು ದೂರದಲ್ಲಿ ಒಂದು ಇನ್ನೆಲ್ಲೋ ಊಹೆಗೇ ನಿಲುಕದಷ್ಟು ದೂರದಲ್ಲೆಲ್ಲೋ ಇನ್ನೊಂದು ನೀರಿನ ಸೆಲೆಗಳು. ಒಂದೊಂದರ ಮೇಲೂ ತಮ್ಮದೇ ಆಧಿಪತ್ಯವನ್ನು ಸಾಧಿಸುತ್ತಾ ಹೊಡೆದಾಟದಲ್ಲೇ ತೊಡಗಿರುವ ಹಲವಾರು ಪಂಗಡಗಳು! ಇಂತಹುದೇ ಒಂದು ಕುರುಚಲು ಮುಳ್ಳುಗಾಡಿನಂತಹ ಜನ ವಸತಿಯ “ಸಾಮ್ರಾಜ್ಯಕ್ಕೆ” ಪರಾಕ್ರಮಿ ರಾಜನೊಬ್ಬನಿದ್ದ . ಹೆಸರು ಶಹರ್ಯಾರ್ ಖಾನ್. ಅವನೊಂದು ಹದ್ದನ್ನು ಪ್ರೀತಿಯಿಂದ ಸಾಕಿದ್ದ. ಅದು ಸಹ ಅವನ ಮೇಲೆ ಅತೀವ ಅಭಿಮಾನವನ್ನು ತೋರಿಸುತ್ತಿತ್ತು. ಯಾವಾಗ ರಾಜ ಹೊರಗಡೆ ಹೊರಟರೂ ಹದ್ದೇ ಮೊದಲು ಹಾರಾಡುತ್ತ ಮುಂದೆ ಮುಂದೆ ಹೋಗಿ ಅನುಕೂಲ ಪ್ರತಿಕೂಲಗಳನ್ನು ಕಂಡುಹಿಡಿದು ರಾಜನಿಗೆ ತನ್ನದೇ ಆದ ವಿಧದಲ್ಲಿ ತಿಳಿಸುತ್ತಿತ್ತು.
ಒಮ್ಮೆ ರಾಜನು ತನ್ನ ಚಿಕ್ಕ ಗುಂಪಿನೊಂದಿಗೆ ಬೇಟೆಯಾಡಲು ಹೊರಟ. ಮರಳುಗಾಡಿನಲ್ಲಿ ಬೇಟೆಗೆ ಹೊರಟ ತಕ್ಷಣ ಪ್ರಾಣಿಗಳು ಸಿಗಬೇಕಲ್ಲ. ಹುಡುಕಾಡುತ್ತ ಮೈಲುಗಟ್ಟಲೆ ಬಂದಾಯಿತು. ಯಾವುದೋ ಒಂದು ದೊಡ್ಡ ಪ್ರಾಣಿಯನ್ನು ನೋಡಿ ಹದ್ದು ಮೇಲಿನಿಂದಲೇ ರಾಜನಿಗೆ ಕೇಕೆ ಹಾಕಿ ಸೂಚನೆ ನೀಡಿತು. ಸರಿ! ರಾಜ ಅತ್ತ ದೌಡಾಯಿಸಿದ. ಬೇಟೆಯಾಡುವ ಹುಮ್ಮಸ್ಸಿನಲ್ಲಿ ತನ್ನ ಸಂಗಡಿಗರು ಹಿಂದೆ ಬಿದ್ದಿರುವುದನ್ನೂ ಗಮನಿಸದೆ ಮುಂದೋಡಿದ. ಬೇಟೆಯು ರಾಜನ ಬಾಣಕ್ಕೆ ಬಲಿಯಾಗುವ ಹೊತ್ತಿಗೆ ಸಾಕಷ್ಟು ಹೊತ್ತಾಯಿತು. ಆಮೇಲೆ ರಾಜನಿಗೆ ತಾನು ದಾರಿ ತಪ್ಪಿದ್ದೂ ಅಲ್ಲದೆ ನೀರಿನ ಚೀಲವನ್ನು ಸಹ ಕಳೆದೆಕೊಂಡಿದ್ದರೆ ಅರಿವಾಯಿತು. ಸರಿ ಹದ್ದಿನ ನೆರವಿನೊಂದಿಗೆ ವಾಪಸ್ಸು ಹೋದರಾಯಿತು, ಮೊದಲು ಇಲ್ಲೆಲ್ಲಾದರೂ ಕುಡಿಯುವ ನೀರು ದೊರೆಯುವುದೋ ಎಂದು ಹುಡುಕಲಾರಂಭಿಸಿದ. ಹದ್ದು ಆಗಸದಲ್ಲೇ ಗಿರಕಿ ಹಾಕುತ್ತಿತ್ತು.
ರಾಜನ ಸಂಕಟವನ್ನು ಹೆಚ್ಚಿಸಲೋ ಏನೋ ಅವನಿಗೆ ನೀರು ಸಿಗದಾಯಿತು. ಬಸವಳಿದು ಚಿಕ್ಕ ಬಂಡೆಗಳ ಸಮೂಹವೊಂದರ ನೆರಳಿಗೆ ಕುಳಿತ. ಬಂಡೆಗಳಿಂದಾಚೆಗೆ ಭಯಾನಕ ಬಿಸಿಲು. ಗಾಳಿಯ ಪತ್ತೆ ಇಲ್ಲ. ಆಯಾಸದಿಂದ ಇವನೂ ಹಾಗು ಇವನ ಕುದುರೆಯೂ ಹೊರಹಾಕುತ್ತಿದ್ದ ಉಸಿರೇ ರಾಜನಿಗೆ ಕೇಳಿ ಬರುತ್ತಿದ್ದ ಜೋರಾದ ಶಬ್ದ!. ಕೆಲವು ನಿಮಿಷಗಳ ನಂತರ ಉಸಿರಾಟ ತಹಬಂದಿಗೆ ಬಂದ ಬಳಿಕ ಆತನ ಕಿವಿಗೆ ನೀರಿನ ಹನಿಯು ಅತಿ ನಿಧಾನವಾಗಿ ಒಂದೊಂದೆ ಹನಿಯಾಗಿ ಒಣ ಎಲೆಗಳ ಮೇಲೆ ಬೀಳುತ್ತಿರುವ ಪ್ಲಿಪ್………………………………………………………………………. ಪ್ಲಿಪ್………………………………………………. ಪ್ಲಿಪ್………………….. ಸದ್ದು ಕೇಳಿಸಿತು. ಅತ್ತ ನೋಡದಿದ್ದರೆ ಚೆನ್ನಾಗಿತ್ತು. ಆದರೆ ಕುತೂಹಲದಿಂದ ಸದ್ದು ಬಂದತ್ತ ನೋಡಿದ!
ಆಶ್ಚರ್ಯ! ನೀರು ಒಂದೊಂದೇ ಹನಿಯಾಗಿ ಮೇಲಿನಿಂದೆಲ್ಲೋ ಬೀಳುತ್ತಿತ್ತು. ನೀರಿಲ್ಲದೆ ಕಂಗಾಲನಾಗಿ ಹೋಗಿದ್ದ ರಾಜ ಅಂತಹ ಸ್ಥಿತಿಯಲ್ಲೂ ತಲೆ ಓಡಿಸಿ ಅಲ್ಲೇ ಕೈಗೆ ಸಿಕ್ಕ ಮರದ ಎಲೆಯನ್ನು ದೊನ್ನೆಯನ್ನಾಗಿಸಿ ಆ ಹನಿಗಳನ್ನು ಸಂಗ್ರಹಿಸತೊಡಗಿದ. ಅರ್ಧ ತುಂಬುವಷ್ಟರಲ್ಲಿಯೇ ತಾಳ್ಮೆಗೆಟ್ಟು ಇನ್ನೇನು ದೊನ್ನೆಗೆ ಬಾಯಿ ಹಚ್ಚಬೇಕು, ಅಷ್ಟರಲ್ಲಿ ಸಿಡಿಲಿನ ವೇಗದಲ್ಲಿ ಹದ್ದು ಬಂದು ಆ ದೊನ್ನೆಯ ಮೇಲೆರಗಿ ಕೆಳಗೆ ಬೀಳಿಸಿ ಹೋಯಿತು. ರಾಜನಿಗೆ ದುಃಖವಾದರೂ ಮತ್ತೊಂದು ದೊನ್ನೆಯಲ್ಲಿ ಸಂಗ್ರಹಿಸತೊಡಗಿದ, ಮತ್ತೆ ಹದ್ದು ಬೀಳಿಸಿ ಹೋಯಿತು. ಮೂರನೇ ಬಾರಿಯೂ ಇದರ ಪುನರಾವರ್ತನೆಯಾಯಿತು. ಕುಪಿತನಾದ ರಾಜ ನಾಲ್ಕನೆಯ ದೊನ್ನೆಯಲ್ಲಿ ನೀರಿನ ಹನಿಗಳನ್ನು ಹಿಡಿದು ಹದ್ದಿಗಾಗಿ ಕಾಯ್ದ. ಹದ್ದು ವೇಗವಾಗಿ ಬಂದಾಗ ಚಾಣಾಕ್ಷತನದಿಂದ ತನ್ನೆಲ್ಲ ಹತಾಶೆಯನ್ನು ಕತ್ತಿಯಲ್ಲಿ ತುಂಬಿ ಅದನ್ನು ಕೊಂದೇ ಹಾಕಿದ.
ಮತ್ತೆ ಐದನೆ ದೊನ್ನೆಯಲ್ಲಿ ನೀರನ್ನು ಹಿಡಿಯುತ್ತಿರುವಾಗ ಆತನ ತಲೆಯಲ್ಲಿ ಒಂದು ವಿಚಾರ ಬಂತು. ಕಷ್ಟವಾದರೂ ಚಿಂತೆಯಿಲ್ಲ. ಮೇಲೆ ನೀರಿನ ಮೂಲವೇ ಇರುವ ಸ್ಥಳದಲ್ಲಿ ಹೋದರೆ ಇನ್ನೂ ಬೇಗ ಮನಸ್ಸಿಗೆ ಹಿತವಾಗುವಷ್ಟು ನೀರು ಕುಡಿಯಬಹುದಲ್ಲ ಎಂದೆಣಿಸಿ ದೊನ್ನೆಯನ್ನು ಬಿಸುಟು ಬಂಡೆಯನ್ನೇರಿ ಹೋದ. ಏನೂ ಇರಲಿಲ್ಲ. ಸ್ವಲ್ಪ ಮುಂದೆ ಬಾಗಿ ನೋಡಿದ. ಪಕ್ಕದಲ್ಲಿ ಇನ್ನೊಂದು ಚಿಕ್ಕ ಬಂಡೆಯಿತ್ತು. ಎರಡೂ ಬಂಡೆಗಳ ಮಧ್ಯ ಇಣುಕಿ ನೋಡಿದ ತಾನು ಕೆಳಗೆ ಕುಳಿತಿದ್ದ ಸ್ಥಳ, ತನ್ನ ಕುದುರೆ ಹಾಗು ಸತ್ತ ಹದ್ದು ಕಾಣಿಸಿದವು. ಇನ್ನಷ್ಟು ತಿಣುಕಾಡುತ್ತ ಎರಡೂ ಬಂಡೆಗಳ ಮಧ್ಯ ಇಳಿದು ಅಲ್ಲಿ ಇರುವ ಪೊದೆಯ ಕೆಳಗೇನಾದರೂ ನೀರಿದೆಯೋ ಎಂದು ಇಣುಕಿದ. ಎದ ಝಗ್ ಎಂದಿತು! ಭೂಮಿಯು ಗರಗರನೆ ತಿರುಗಿದಂತಾಯಿತು.ಭಯಗ್ರಸ್ತನಾದರೂ ಸರ ಸರನೆ ಬಂಡೆಯನ್ನು ಹತ್ತಿಳಿದು ಹದ್ದಿನ ದೇಹದತ್ತ ಬಂದು “ಅಯ್ಯೋ ದೇವರೆ! ಮೊದಲೇ ಗೊತ್ತಾಗಿದ್ದರೆ ಈ ಅನಾಹುತವಾಗುತ್ತಿರಲಿಲ್ಲವಲ್ಲ, ನಾನು ಕೆಟ್ಟವನು” ಎಂದೆಲ್ಲ, ಅತಿಶಯ ದುಃಖದಿಂದ ಪ್ರಲಾಪಿಸಿದ. ಅಷ್ಟರಲ್ಲಿ ಆತನಿಂದ ದೂರವಾಗಿದ್ದ ಇತರ ಸವಾರರು ಬಂದು ಹದ್ದು ಮತ್ತು ಶಹರ್ಯಾರ್ ಖಾನನ ಸ್ಥಿತಿಯನ್ನು ನೋಡಿ ಕಳವಳಗೊಂಡು, ಆತನನ್ನು ಉಪಚರಿಸಿ ಮರಳಿ ಕರೆತಂದರು. ರಾಜ ಬಹು ಮರ್ಯಾದೆಯಿಂದ ಹದ್ದಿನ ಸಂಸ್ಕಾರವನ್ನು ಮಾಡಿದ. ಆತನ ಮನ ಯಾರು ಕೇಳಿದರೂ ಹೇಳಲಾಗದಷ್ಟು ದುಗುಡದಿಂದ ತುಂಬಿತ್ತು.
ರಾತ್ರಿ ಆತನ ಕನಸಿನಲ್ಲಿತಾನು ಬಂಡೆಯಿಂದ ಇಳಿದಾಗ ಕಂಡ ಭಾರೀ ಗಾತ್ರದ ಪ್ರಾಣಿಯೊಂದನ್ನು ನುಂಗಿ ಪೊದೆಯೊಂದರ ಮೇಲೆ ವಿಶ್ರಮಿಸುತ್ತಿದ್ದ ನಿದ್ದೆಗಣ್ಣಿನ ಅಜಗರವೂ, ಅದರ ಬಾಯಿಂದ ತಾನೇ ತಾನಾಗಿ ಹನಿ ಹನಿಯಾಗಿ ಹೊರ ಬೀಳುತ್ತಿದ್ದ ವಿಷವೂ ಮತ್ತೆ ಕಾಣಿಸಿದವು! ಅ ವಿಷವು ಬಂಡೆಗಳ ಮಧ್ಯ ಹಾಯ್ದು, ಕೆಳಗಿದ್ದ ತರಗೆಲೆಗಳ ಮೇಲೆ ಪ್ಲಿಪ್………………………………………………………………………. ಪ್ಲಿಪ್………………………………………………. ಪ್ಲಿಪ್………………….. ಎಂದು ಬೀಳುವ ಸದ್ದು ಮತ್ತೆ ಮತ್ತೆ ಕಿವಿಯಲ್ಲಿ ಮೂಡಿ ಬಂದು ಭೂಮಿ ಗರಗರನೆ ತಿರುಗಿದಂತಾಯ್ತು…….! ಮೇಲೆಲ್ಲೊ ಅವನ ಹದ್ದು ಆಗಸದಾಚೆ “ಇಲ್ಲ ಇಲ್ಲ ನನ್ನೊಡೆಯನದ್ದೇನೋ ತಪ್ಪಿಲ್ಲ, ಅಂತಹ ಸ್ಥಿತಿಯಲ್ಲಿ ನಾನೂ ಹಾಗೆ ಮಾಡುತ್ತಿದ್ದೆ” ಎನ್ನುತ್ತ ತಿರುಗಿ ಬಾರದ ಲೋಕದ ಬಾಗಿಲನ್ನು ತಟ್ಟತೊಡಗಿತ್ತು.
Be First to Comment