Kannada Raghavendra Vijaya

ಶ್ರೀಗುರುಜಗನ್ನಾಥದಾಸರು

(Skip reading and go to the download link)

ರಾಯರನ್ನು ಯೋಗನಿದ್ರೆಗೆ ಕಳುಹಿಸಲು ನಮ್ಮ ತೃಪ್ತಿಗಾಗಿ ನಾವು ಹಾಡುವ ಜೋಗುಳವೊಂದಿದೆ. ಅದು ಅತ್ಯಂತ ಸುಪ್ರಸಿದ್ಧ. ಕನ್ನಡವನ್ನು ಓದಲು ಬರೆಯಲು ಇರಲಿ ಮಾತನಾಡಲು ಬಾರದ ಭಕ್ತರೂ ಸಹ ಹಾಡುವ ಪದವಿದು. ಅದು ಮತ್ತ್ಯಾವುದೋ ಅಲ್ಲ, “ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲತಿಲಕರ” ಎನ್ನುವ ಪ್ರಸಿದ್ಧ ಲಾಲಿಪದ.  ಪ್ರೀತಿಯ ಗುರುಗಳನ್ನು ನಮ್ಮ ಕೂಸಿನೋಪಾದಿಯಲ್ಲಿ ಪ್ರೀತಿಸುತ್ತಾ ಅವರಿಗೆ ವಿಶ್ರಾಂತಿ ಸಿಗಲಿ ಎನ್ನುವ ಮೇಲ್ನೋಟದ ಅರ್ಥದೊಂದಿಗೆ, ಗಹನವಾದ ಆಧ್ಯಾತ್ಮದ ಚಿಂತನೆಯೊಂದಿಗೆ ಗುರುಗಳಲ್ಲಿ ಭಕ್ತಿಯನ್ನು ಮಾಡಿಸುವ ಈ ಲಾಲಿಪದವನ್ನು ರಚಿಸಿದ್ದು ರಾಯರ ಅಪಾರ ಕರುಣೆಗೆ ಪಾತ್ರರಾಗಿದ್ದ ಶ್ರೀಗುರುಜಗನ್ನಾಥದಾಸರು.

ಬಳ್ಳಾರಿ ಹಾಗು ರಾಯಚೂರು ಪ್ರಾಂತ್ಯದ ಸುತ್ತಮುತ್ತಲಿನ ರಣಬಿಸಿಲಿನ ಪ್ರಾಂತ್ಯ, ಎತ್ತ ನೋಡಿದರೂ ಬೃಹದಾಕಾರದ ಬಂಡೆಗಳ ಬೆಟ್ಟಗಳು, ಅವುಗಳ ಮಧ್ಯ ಅಲ್ಲೊಂದು ಇಲ್ಲೊಂದು ಚೂರು ಹಸಿರಿನ ಸೆಲೆ. ಅಂತಹ ಒಂದು ಬೆಟ್ಟದ ಬುಡದಲ್ಲಿ ಇರುವ ಒಂದು ಊರು ಕೌತಾಳಂ. ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿತ್ತು, ಈಗ ಆಂಧ್ರದ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿಗೆ ಸಂಬಂಧಿಸಿದ  ಊರು. ಉರಿವ ಸೂರ್ಯನಿಗೆ ಪರಮಪ್ರೀತಿ ಈ ಊರ ಮೇಲೆ. ಆದರೂ ಭಕ್ತರ ಮನಕ್ಕೆ ಈ ಊರು ತಂಪು ಎನಿಸುವ ಜೀವ ಸೆಲೆಯನ್ನು ಹೊಂದಿದೆ. ಅದೇ ಶ್ರೀಗುರುಜಗನ್ನಾಥದಾಸರ ಸನ್ನಿಧಾನ. ಇದು ಅವರ ತಪೋಭೂಮಿ. ಶ್ರೀರಾಯರ ಕೃಪೆಗಾಗಿ ನಿರಂತರವಾಗಿ ತಪಸ್ಸನ್ನು ಆಚರಿಸಿರುವದರ ಗುರುತ್ವ ಈ ಭೂಮಿಯ ಮೇಲೆ ಇಂದಿಗೂ ಅನುಭವವೇದ್ಯವಾಗುತ್ತದೆ.

ಹದಿನೆಂಟನೆಯ ಶತಮಾನದ ಕೊನೆಯ ಭಾಗ; ಶ್ರೀವೇಂಕಟಗಿರಿಯಾಚಾರ್ಯ ಮತ್ತು ಶ್ರೀಮತಿ ಸೀತಮ್ಮ ಎನ್ನುವ ಸಾತ್ವಿಕ ದಂಪತಿಗಳಿಗೆ ಜನಿಸಿದ ಶಿಶು ಸ್ವಾಮಿರಾಯಾಚಾರ್ಯ. ಅಪಾರ ಪ್ರತಿಭಾಶಾಲಿಯಾಗಿ ಬೆಳೆದು, ಮುಂದೆ ಶ್ರೀರಾಘವೇಂದ್ರತೀರ್ಥರ ಸಂಪೂರ್ಣ ಕೃಪೆಗೆ ಪಾತ್ರವಾಯಿತು ಈ ಶಿಶು.

ಸ್ವಾರಸ್ಯವೆಂದರೆ ಲೌಕಿಕ ವಿದ್ಯೆಯು ಅನವಶ್ಯಕವಾಗಿ ತೋರಿತೋ ಏನೊ ಬಾಲಕ ಸ್ವಾಮಿರಾಯನು ಶಾಲೆಯನ್ನು ಅರ್ಧಕ್ಕೆ ಬಿಟ್ಟು ಬಿಟ್ಟ! ಆದರೆ ಅಲೌಕಿಕವಾದ ವಿದ್ಯೆಯು ಆತನ ಕೈಹಿಡಿಯಿತು, ದೇವಭಾಷೆಯ ಪ್ರಕಾಂಡ ಪಂಡಿತನಾಗಿ ಸ್ವಾಮಿರಾಯ ಹೊರಹೊಮ್ಮಿದ. ಮುಂದೊಂದು ದಿನ ಶ್ರೀಗೋಪಾಲದಾಸರು ಸ್ವಪ್ನದಲ್ಲಿ ದರ್ಶನವಿತ್ತು ಸ್ವಾಮಿರಾಯನಿಗೆ “ಗುರುಜಗನ್ನಾಥವಿಠಲ” ಎನ್ನುವ ಅಂಕಿತವನ್ನು ಪ್ರದಾನ ಮಾಡಿದರು. ಇದೇ ಅಂಕಿತನಾಮದಲ್ಲಿ ಶ್ರೀಗುರುಜಗನ್ನಾಥದಾಸರು ಸಂಸ್ಕೃತ ಹಾಗು ಕನ್ನಡ ಭಾಷೆಗಳಲ್ಲಿ ಅನೇಕಗ್ರಂಥಗಳನ್ನೂ, ಸ್ತೋತ್ರಗಳನ್ನೂ ಹಾಗು ಕನ್ನಡದಲ್ಲಿ ಕೀರ್ತನೆಗಳನ್ನೂ ರಚನೆ ಮಾಡಿದರು. ಶ್ರೀರಾಯರ ಮೇಲೆ ಅತಿ ಹೆಚ್ಚಿನ ಕೃತಿಗಳನ್ನು ರಚನೆ ಮಾಡಿದ್ದು ಇವರೇ.

ಕೌತಾಳ ಗ್ರಾಮದಲ್ಲಿ ಶ್ರೀಗುರುರಾಜರ ಮೃತ್ತಿಕಾ ವೃಂದಾವನವನ್ನು ಇವರು ಪ್ರತಿಷ್ಠಾಪನೆ ಮಾಡಿದ್ದಾರೆ. ಇದೊಂದು ಪ್ರಶಾಂತವಾದ ಸ್ಥಾನ. ಮಂತ್ರಾಲಯಕ್ಕೆ ಹೋದಾಗ ಅನುಕೂಲ ಮಾಡಿಕೊಂಡು ಈ ಕ್ಷೇತ್ರಕ್ಕೂ ಭೇಟಿ ನೀಡಿ ಬನ್ನಿ. ರಾಯರು, ಶ್ರೀದಾಸರು, ದಾಸರು ಪೂಜಿಸಿದ ಪ್ರತಿಮೆಗಳು, ಅಮೂಲ್ಯವಾದ ಹಸ್ತ್ರಪ್ರತಿಗಳ ದರ್ಶನವನ್ನು ನೀವು ಮಾಡಿಕೊಳ್ಳಬಹುದು.

ದಾಸರು ಹರಿಪದವನ್ನು ಸೇರಿದ್ದು ೧೯೧೮ರಲ್ಲಿ.

ಎಲ್ಲಿದೆ ಈ ಕೌತಾಳಂ?

ದಾಸಸಾಹಿತ್ಯಕ್ಕೆ ಸಂಬಂಧಿಸಿದಂತೆ ಕವಿತಾಳ ಎನ್ನುವ ಎರಡು ಊರುಗಳು ಇವೆ. ಒಂದು ಕರ್ನಾಟಕದ ಮಾನವಿ ತಾಲ್ಲೂಕಿನಲ್ಲಿದೆ ಇನ್ನೊಂದು ಹಳೆಯ ಕರ್ನಾಟಕದಲ್ಲಿತ್ತು ನಮ್ಮ ಕೈತಪ್ಪಿ ಈಗಿನ ಆಂಧ್ರಪ್ರದೇಶದಲ್ಲಿ ಸೇರಿಬಿಟ್ಟಿದೆ. ಹೀಗೆ ತಪ್ಪಿಸಿಕೊಂಡು ಹೋಗಿರುವ ಕೌತಾಳವೇ ಗುರುಜಗನ್ನಾಥದಾಸರ ಸನ್ನಿಧಾನವಿರುವ ಕ್ಷೇತ್ರ.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ರೈಲಿನಲ್ಲಿ ಪ್ರಯಾಣಮಾಡುವಾಗ ಆದವಾನಿ ದಾಟಿದ ಮೇಲೆ ಕುಪ್ಪಗಲ್ಲು ಮತ್ತು ಕೋಸಿಗಿ ಎನ್ನುವ ಎರಡು ಚಿಕ್ಕ ನಿಲ್ದಾಣಗಳಲ್ಲಿ ಕೆಲವು ರೈಲುಗಳು ನಿಲ್ಲುತ್ತವೆ. ಈ ಎರಡೂ ಊರುಗಳಿಂದಲು ಕೌತಾಳವು ಹತ್ತಿರ.

ಮಂತ್ರಾಲಯಕ್ಕೆ ಬಂದು, ದರ್ಶನ ಮತ್ತು ಊಟ ಎರಡೂ ಮುಗಿದ ನಂತರ ನೀವು ನಿದ್ದೆ ಹೊಡೆದು ಮಂಕುಗೊಳ್ಳುವುದರ ಬದಲು ಕೌತಾಳ, ಕಾಮವರ, ಬಸಲದೊಡ್ಡಿ, ಬುಡುಮುಲದೊಡ್ಡಿ, ಪೆದ್ದತುಂಬಳ, ಚಿನ್ನ ತುಂಬಳದಂತ ಸಮೀಪದ ಕ್ಷೇತ್ರಗಳಿಗೆ ಒಂದು ಗಾಡಿಯನ್ನು ಮಾಡಿಕೊಂಡು ಹೋಗಿಬರುವುದು ಉತ್ತಮ.

ಸ್ವಂತ ಗಾಡಿಯಿದ್ದಲ್ಲಿ ಹೀಗೆ ಮಾಡಿ.

    • ಮಂತ್ರಾಲಯದಿಂದ ಮಾಧವರದವರೆಗೆ ಹೋಗಿ.
    • ರಾಯಚೂರು, ತುಂಗಭದ್ರ ರೈಲ್ವೇ ನಿಲ್ದಾಣ ಮತ್ತು ಆದವಾನಿಗೆ ಹೋಗುವ ಜಂಕ್ಷನ್ನಿನ್ನಲ್ಲಿ ಆದವಾನಿಯ ದಿಕ್ಕಿಗೆ ಮುಂದುವರೆಯಿರಿ.
    • ೮ ಕಿ.ಮೀ ಕ್ರಮಿಸಿದ ನಂತರ ಏತನೀರಾವರಿಯ ಒಂದು ಕೆರೆ ಕಾಣಿಸುತ್ತದೆ. ಅದರ ಪಕ್ಕದಲ್ಲಿರುವ ಕಚ್ಚಾದಾರಿಯಗುಂಟ ಮುಂದುವರೆಯಿರಿ. ಸುಮಾರು ೧೨ ಕಿ.ಮೀ ಆದನಂತರ ಕೋಸಿಗಿ ಎನ್ನುವ ಗ್ರಾಮ ಸಿಗುತ್ತದೆ.
    • ಕನ್ನಡದಲ್ಲಿಯೇ ಕೇಳಿ ಕೌತಾಳಕ್ಕೆ ಹೇಗೆ ಹೋಗುವುದು? ಅಂತ. ಈ ಪ್ರಾಂತ್ಯದಲ್ಲಿ ಇರುವ ಎಲ್ಲ ಗ್ರಾಮಗಳ ಜನರಿಗೆ ಕನ್ನಡ ಚೆನ್ನಾಗಿ ಬರುತ್ತದೆ.
    • ಅಲ್ಲಿಂದ ಮುಂದೆ ಕೌತಾಳಕ್ಕೆ ಹೋಗಿರಿ. ಅಲ್ಲಿ ನಿಮ್ಮ ಮುಖ ನೋಡಿದ ಜನರು ತಾವಾಗಿಯೇ ದಾಸರಾಯರ ಸನ್ನಿಧಾನ ಇರುವ ಸ್ಥಳವನ್ನು ತೋರಿಸುತ್ತಾರೆ.
  •  
  •  

ಏನು ಮಾಡಬೇಕು ಕೌತಾಳದಲ್ಲಿ?

  • ಈಗಾಗಲೇ ಹೇಳಿರುವಂತೆ ಕೌತಾಳವು ಒಂದು ಸಾಧನಾಕ್ಷೇತ್ರ. ಶ್ರೀಗುರುಜಗನ್ನಾಥದಾಸರು ಪ್ರತಿನಿತ್ಯ ಶ್ರೀರಾಯರ ಸೇವೆಯಲ್ಲಿ ನಿರತರಾಗಿರುವ ಒಂದು ದಿವ್ಯ ತಪೋಭೂಮಿ. ಇಲ್ಲಿಗೆ ಬಂದು ದಾಸರ ದರ್ಶನ, ಶ್ರೀಗುರುಗಳ ದರ್ಶನ, ಅವರ ಗ್ರಂಥಗಳ ದರ್ಶನವನ್ನು ಮಾಡಿರಿ, ಆ ದಿವ್ಯ ಅನುಭವವನ್ನು ಅನುಭವಿಸಿ.
  • ಗುರುಗಳ ದರ್ಶನವನ್ನು ಬರಿಗೈಯಲ್ಲಿ ಮಾಡಬಾರದು ಎನ್ನುತ್ತಾರೆ. ಬರುವಾಗ ಫಲ, ತೆಂಗಿನಕಾಯಿ ಅಥವಾ ಒಂದು ಹಿಡಿಯಷ್ಟು ಕಲ್ಲುಸಕ್ಕರೆಯನ್ನು ತನ್ನಿರಿ.
  • ಕೈಕಾಲು ತೊಳೆದುಕೊಂಡು ಚೆನ್ನಾಗಿ ಕಾಲು ಒರೆಸಿಕೊಂಡು (ಹೌದು, ಒರೆಸಿಕೊಳ್ಳದೆ ಹಾಗೆಯೇ ಒದ್ದೆ ಕಾಲಿನಲ್ಲಿ ಒಳಗೆ ಹೋಗಿ ಗುಡಿಯನ್ನು ರಾಡಿ ಮಾಡದಿರಿ. ಮಠವನ್ನು ಪದೇ ಪದೇ ಶುಚಿ ಮಾಡುವುದು ತುಂಬ ಕಷ್ಟದ ಕೆಲಸ) ಒಳ ಪ್ರವೇಶಿಸಿ.
  • ಮನದಲ್ಲೇ ಶ್ರೀರಾಯರ ಸ್ತೋತ್ರ ಅಥವಾ ಕೀರ್ತನೆಗಳನ್ನು ಹೇಳಿಕೊಳ್ಳುತ್ತಾ ಪ್ರದಕ್ಷಿಣೆ ಹಾಕಿ.
  • ನಿಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಧ್ಯಾನವನ್ನು ಮಾಡಿರಿ.
  • ಇದು ಹರಿಕಥಾಮೃತಸಾರಮಂದಿರ. ಗದ್ದಲ ಮಾಡದೆ ದರ್ಶನ ಮಾಡಿ. ನೀವು ಇದುವರೆಗೂ ಕೇಳಿರದ ಅನೇಕ ಆಧ್ಯಾತ್ಮಿಕ ವಿಷಯಗಳು ನಿಮಗೆ ಗೊತ್ತಾಗುತ್ತವೆ. ಏನೂ ಅರ್ಥವಾಗದಿದ್ದರೆ, ಹಿರಿಯರಾದ ಶ್ರೀ ಅಪ್ಪಣಾಚಾರ್ಯರು ಮಾರ್ಗದರ್ಶನ ಮಾಡುತ್ತಾರೆ. ಒಂದು ಚಿಕ್ಕ ಪುಸ್ತಕದಲ್ಲಿ ಅವುಗಳನ್ನು ನೋಟ್ ಮಾಡಿಕೊಂಡು ಬನ್ನಿ.
  • ಅತಿ ಮುಖ್ಯವಾಗಿ : ಸನ್ನಿಧಾನವನ್ನು ನಿಮ್ಮ ಕಣ್ಣುಗಳಿಂದಲೇ ನೋಡಿರಿ. ನಿಮ್ಮ ಮೊಬೈಲ್ ಫೋನಿನಿಂದ ಅಲ್ಲ.  ಅಲ್ಲಿ ಸಮಯ ಕಳೆದ ನಂತರವೇ ಫೋಟೋವನ್ನು ತೆಗೆದುಕೊಳ್ಳಿರಿ. ಅಲ್ಲಿಂದ ಬಂದ ನಂತರ ನಿಮ್ಮ ಫೇಸ್‌ಬುಕ್ಕಿನಲ್ಲಿ, ವಾಟ್ಸ್ಯಾಪಿನಲ್ಲಿ ಫೋಟೋ ಮಾತ್ರವಲ್ಲ ಏನೇನು ಕಲಿತಿರಿ ಅನ್ನುವುದನ್ನು ಕೂಡ ಶೇರ್ ಮಾಡಿಕೊಳ್ಳಿ.

ಏನು ಮಾಡಬಾರದು?

  • ಕೈಕಾಲು ತೊಳೆಯದೆ ಒಳಗೆ ಪ್ರವೇಶಮಾಡದಿರಿ.
  • ಬಾಯಲ್ಲಿ, ಹಲ್ಲಿನ ಸಂದಿಯಲ್ಲಿ ಬೆರಳು ತೂರಿಸಿಕೊಂಡಲ್ಲಿ ಕೈತೊಳೆಯದೆ ಏನನ್ನೂ ಮುಟ್ಟದಿರಿ.
  • ಚಿಕ್ಕ ಮಕ್ಕಳಿದ್ದಲ್ಲಿ ಅವುಗಳನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಿ. ಅವುಗಳ ಆಟವು ನೋಡಲು ಚಂದ ನಿಜ. ಆದರೆ ಅಶಿಸ್ತಿನ ಗದ್ದಲ ಸನ್ನಿಧಾನ ಪಾವಿತ್ರ್ಯತೆಯನ್ನು ಹಾಳು ಮಾಡುತ್ತದೆ.
  • ಸನ್ನಿಧಾನದಲ್ಲಿ ಹರಟೆಯನ್ನು ಸರ್ವಥಾ ಹೊಡೆಯದಿರಿ.
  • ತಂದಿರುವ ತೆಂಗಿನ ಕಾಯಿಯನ್ನು ಸಮರ್ಪಣೆ ಮಾಡಿಸಿದ್ದಲ್ಲಿ, ಅದನ್ನು ಅಲ್ಲಿಯೇ ತಿಂದು ಚಿಪ್ಪು, ಬಾಳೆಯಣ್ಣಿನ ಸಿಪ್ಪೆಯನ್ನು ಅಲ್ಲಿಯೇ ಬಿಟ್ಟು ಬರದಿರಿ. ಕಸದ ಬುಟ್ಟಿಯಲ್ಲಿಯೇ ಹಾಕಿರಿ.
  • ಪರವಾನಗಿ ಇಲ್ಲದಿರುವ ಸ್ಥಳದಲ್ಲಿ ಫೋಟೋ ತೆಗೆಯದಿರಿ.

ಕನ್ನಡ ರಾಘವೇಂದ್ರ ವಿಜಯ

ಬ್ರಹ್ಮಸೂತ್ರಭಾಷ್ಯದ ಹಾಗು ಭಾಗವತದ ಮೇಲೆ ಟೀಕೆಯೂ ಸೇರಿದಂತೆ ಅನೇಕ ಟೀಕಾಗ್ರಂಥಗಳು ಹಾಗು ಸ್ವತಂತ್ರವಾಗಿ ೪೦ಕ್ಕೂ ಹೆಚ್ಚಿನ ಸಂಸ್ಕೃತ ಗ್ರಂಥಗಳು ಸಾರಸ್ವತ ಲೋಕಕ್ಕೆ ಇವರಿತ್ತ ಕೊಡುಗೆಯಾಗಿವೆ. ಕನ್ನಡದಲ್ಲಿ ಅಸಂಖ್ಯವಾದ ದೇವರನಾಮಗಳು ಇವರಿಂದ ರಚಿತವಾಗಿವೆ. ಶ್ರೀರಾಘವೇಂದ್ರ ಗುರುಸಾರ್ವಭೌಮರನ್ನು ಅವರ ಅವತಾರದ ಹಿನ್ನೆಲೆಯ ವರ್ಣನೆಯೊಂದಿಗೆ ಸ್ತುತಿಸುವ ಒಂದು ಕೃತಿ ಕನ್ನಡ ರಾಘವೇಂದ್ರವಿಜಯ. ಭಾಮಿನಿಷಟ್ಪದಿಯಲ್ಲಿ ಈ ಕೃತಿಯು ರಚನೆಗೊಂಡಿದೆ.

ವಿಜಯಕಾವ್ಯಗಳು ಸಾಹಿತ್ಯಲೋಕದ ವಿಶಿಷ್ಟಪ್ರಕಾರದ ಕೃತಿಗಳಾಗಿವೆ. ಇವುಗಳಲ್ಲಿ ಕವಿಯು ಕಥಾನಾಯಕನ ಚರಿತೆಯನ್ನು ತನ್ನೆಲ್ಲ ಭಕ್ತಿಯನ್ನು ಧಾರೆಯೆರೆದು ಸ್ತುತಿಸುತ್ತಾನೆ. ಕಥಾನಾಯಕನ ಪ್ರತಿಯೊಂದು ಚರ್ಯೆಯೂ ಕವಿಗೆ ಇಲ್ಲಿ ಕೌತುಕದ ಸಂಗತಿಯಾಗುತ್ತದೆ. ಆದರೆ ವಾಸ್ತವವನ್ನು ಅರುಹಲು ಯತ್ನಿಸುವ ಕವಿಯು ತನ್ನ ಕವಿತೆಯನ್ನು ಶಬ್ದಗಳ ಜಾಲವಾಗಿಸಲು ಬಿಡುವುದಿಲ್ಲ. ಆತನ ಉದ್ದೇಶವೇನಿದ್ದರೂ ಚರಿತೆಯನ್ನು ಬರೆಯುವಾಗ, ಓದುವಾಗ ಮತ್ತು ಕೇಳುವಾಗ ಭಕ್ತಿಯನ್ನು ಉದ್ದೀಪನಗೊಳಿಸುವುದು ಮಾತ್ರವೇ ಆಗಿರುತ್ತದೆ. ಇನ್ನೂ ಕೆಲವರು ಈ ಭಕ್ತಿಯ ಜೊತೆಗೆ ಓದುಗರಿಗೆ ಜ್ಞಾನದ ಸಂಪನ್ಮೂಲಗಳೇ ಆಗಿಬಿಡುತ್ತಾರೆ. ಆಚಾರ್ಯ ಮಧ್ವರ ಚರಿತ್ರೆಯನ್ನು ಬರೆದ ಶ್ರೀನಾರಾಯಣಪಂಡಿತಾಚಾರ್ಯರು, ಸಂಸ್ಕೃತದಲ್ಲಿ ಶ್ರೀರಾಘವೇಂದ್ರವಿಜಯ ಕಾವ್ಯವನ್ನು ಬರೆದ ಮಹಾಕವಿ ನಾರಾಯಣಾಚಾರ್ಯರು ಇಂತಹ ವರ್ಗಕ್ಕೆ ಸೇರಿದ ಮಹಾತ್ಮರು.

ಈ ಎರಡೂ ಕಾವ್ಯಗಳು ಸಂಸ್ಕೃತಬಲ್ಲವರಿಗೆ ಅತಿ ಮಧುರವೆನಿಸಬಲ್ಲವು. ಸಂಸ್ಕೃತ ಬಾರದಿರುವ ಸಜ್ಜನರು ಈ ಮಾಧುರ್ಯದಿಂದ ವಂಚಿತರಾಗುವುದು ಸಹಜ. ಆದರೆ ಈ ಕೊರತೆಯನ್ನು ನಿವಾರಿಸಲಿಕ್ಕಾಗಿಯೇ ಎನ್ನುವಂತೆ ಶ್ರೀಗುರುಜಗನ್ನಾಥದಾಸರು ಕನ್ನಡದಲ್ಲಿ ಶ್ರೀರಾಘವೇಂದ್ರತೀರ್ಥರ ಚರಿತ್ರೆಯನ್ನು ವಿವರಿಸುವ ಸಂಕ್ಷಿಪ್ತವಾದ ಕಾವ್ಯವನ್ನು ರಚಿಸಿದ್ದಾರೆ. ಇದಕ್ಕೂ ಶ್ರೀರಾಘವೇಂದ್ರವಿಜಯ ಎನ್ನುವ ಹೆಸರನ್ನೇ ಅವರು ಇಟ್ಟಿದ್ದಾರೆ.

ಮೇಲ್ನೋಟಕ್ಕೆ ಕೇವಲ ಶ್ರೀರಾಘವೇಂದ್ರರ ಚರಿತೆ ಮಾತ್ರ ಎನಿಸಬಹುದು. ಆದರೆ ನಿಧಾನವಾಗಿ, ಸಮಾಧಾನ ಚಿತ್ತದಿಂದ ಓದಿದರೆ ವೇದ ಹಾಗು ಪುರಾಣಗಳ ಸಾರವನ್ನು, ಅನೇಕ ಪ್ರಮೇಯವಿಷಯಗಳನ್ನು ದಾಸರು ಶ್ರೀ ಕೃತಿಯಲ್ಲಿ ವಿವರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಹರಿಸರ್ವೋತ್ತಮ ತತ್ವದ ಹಿರಿಮೆಯನ್ನು ದಾಸರು ಎತ್ತಿ ಹಿಡಿಯುವುದು ಇಲ್ಲಿನ ಅನೇಕ ಪದ್ಯಗಳಲ್ಲಿ ವೇದ್ಯವಾಗುತ್ತದೆ. ಹಾಗಾಗಿ ಇದು ಶ್ರೀರಾಯರನ್ನು ತಿಳಿದುಕೊಳ್ಳುವ ತವಕದಲ್ಲಿ  ಇರುವವರಿಗೆ ರಾಯರಿಗೂ ಪ್ರಿಯವಾದ ಮಧ್ವಶಾಸ್ತ್ರವನ್ನು ತಿಳಿಸುವ ಕಾವ್ಯವಾಗಿದೆ. ಮಗುವಿಗೆ ಬಾಯಿಗೆ ತಾಯಿಯು ಮೊದಲು ಕಲ್ಲುಸಕ್ಕರೆಯ ತುಣುಕನ್ನು ಹಾಕಿ ಅದರ ಹಿಂದೆ ಔಷಧವನ್ನು ಕುಡಿಸುವ ರೀತಿ ಇದು ಎಂದರೆ ತಪ್ಪಾಗಲಿಕ್ಕಿಲ್ಲ.

ಅಂದ ಹಾಗೆ, ಇದು ಮಹಾಕವಿ ಶ್ರೀನಾರಾಯಣಾಚಾರ್ಯರು ಬರೆದಿರುವ ಸಂಸ್ಕೃತ ರಾಘವೇಂದ್ರವಿಜಯ ಕಾವ್ಯದ ಸಂಸ್ಕೃತ ಅನುವಾದವಲ್ಲ. ಇದು ದಾಸರು ಶ್ರೀರಾಯರನ್ನು ಕಂಡ ನೂರಾರು ಬಗೆಗಳಲ್ಲಿ ಒಂದಿಷ್ಟೇ ಇಷ್ಟು ವಿವರಣೆ ಮಾತ್ರ.

ಶ್ರೀರಾಯರ ಚರಿತ್ರೆಯನ್ನು ಹೇಳುವುದು ಸಾಮಾನ್ಯರ ಕೈಲಾಗುವ ಮಾತಲ್ಲ.  ಅವರ ಕೃಪೆಗೆ ಸಂಪೂರ್ಣವಾಗಿ ಪಾತ್ರರಾದವರಿಗೆ ಮಾತ್ರವೇ ಇದು ಸಾಧ್ಯ. ಹಿಂದೆ ಹೇಳಿದಂತೆ ಶ್ರೀಗುರುಜಗನ್ನಾಥದಾಸರು ಶ್ರೀರಾಯರ ಅಂತರಂಗದ ಭಕ್ತರು. ಆದರೂ ಅವರು ತಮ್ಮ ಬಗ್ಗೆ ಸ್ವಾಹಂಕಾರ ಖಂಡನೆ ಮಾಡಿಕೊಂಡ ನಂತರ “ರಾಯರ ಕರುಣೆಯ ಬಲದಿಂದಲೇ ಅವರ ಚರಿತೆಯನ್ನು ಹೇಳುತ್ತೇನೆ” ಎಂದು ಈ ಕಾವ್ಯವನ್ನು ಪ್ರಾರಂಭಿಸುತ್ತಾರೆ.

ಶ್ರೀನೃಸಿಂಹಾವತರದ ಹಿನ್ನೆಲೆಯನ್ನು ವರ್ಣಿಸಿ, ಶ್ರೀಪ್ರಹ್ಲಾದನ ಭಕ್ತಿಯನ್ನು ಮೊದಲಿನೆರಡು ಸಂಧಿಗಳು ವಿವರಿಸಿದರೆ, ನಂತರದ ನಾಲ್ಕು ಸಂಧಿಗಳು ಶ್ರೀವ್ಯಾಸರಾಜರ ಅವತಾರ, ಅವರ ಕಾಲದ ಐತಿಹಾಸಿಕ ಘಟನೆಗಳನ್ನು ವಿವರಿಸುತ್ತವೆ. ಕೊನೆಯ ಮೂರು ಸಂಧಿಗಳಲ್ಲಿ ಶ್ರೀರಾಘವೇಂದ್ರಪ್ರಭುಗಳ ಮಹಿಮೆಯನ್ನು ಕೊಂಡಾಡುತ್ತವೆ.

ಈ ಕಾವ್ಯರಚನೆ ಅಭಿಪ್ರಾಯವು ಸುಸ್ಪಷ್ಟ. ಮಹಾತ್ಮರಾದವರ ಬಗ್ಗೆ ತಿಳಿದಷ್ಟು ಮಾತುಗಳನ್ನು ಒಳ್ಳೆಯ ಭಾವನೆಯಿಂದ ಆಡುತ್ತಿದ್ದರೆ ಅದು ನಮ್ಮ ಶ್ರೇಯಸ್ಸಿನ ಮಾರ್ಗವಾಗುವುದು ಎಂಬುದು. ಈ ಅಂಶವನ್ನು ಮನಸ್ಸಿನಲ್ಲಿಟ್ಟು ಕೊಂಡು ದಿನಕ್ಕೆ ಒಂದಾದರೂ ಸಂಧಿಯನ್ನು ಓದಿದರೆ ಶ್ರೀಗುರುರಾಜರಿಗೆ ಅದು ಸಂತೋಷವನ್ನು ಕೊಡುತ್ತದೆ.

Download : Download Kannada Raghavendra Vijaya E-Book  File Size : 9.6 MB

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

7 Comments

  1. sadananda sastry
    January 17, 2016
    Reply

    bahaLa chennagide. samagravaada tiLuvaLike mattu adhyayana sundaravaada shili rachaneyalli ide. soochanegaLannu needuvalli swalpa gaambheerya kadime aadanthe anisidarU heLiruva vishayadalli satya ide. mottadamEle baraha santOshavannu kottide. keep it up! – yours- sadananda sastry

    • nirasha
      January 17, 2016
      Reply

      dhanyosmi gurugale.
      Keep it up anta heliddu nange bahala santoshavannu tanditu.
      Gambheeryada bagge kooda innu munde gamana vahisuve.

  2. Giridhar
    February 27, 2017
    Reply

    Excellent info on Sri Guru Jagannatha Dasaru. I would like to visit Koutalam on my next trip Mantralayam. Thanks for publishing Kannada Raghavendra Vijaya.. May Sri Hari Vayu, Guru and Dasaru bless you

  3. Abhilash Desai
    August 27, 2019
    Reply

    Namaskara,

    Is it ok, if I print the pdf and distribute among some folks in my locality who’ll recite with bhakti, with due credit to your website?
    Please let me know.

    Thanks,
    Abhilash

    • ರಘು
      September 1, 2019
      Reply

      Dear Sri Abhilash, I take it as Rayaru accepted my effort. Go ahead and distribute. Jnana is meant for sharing only. You can skip giving the credit either, if u feel it unnecessary. The work belongs to Shri Hari Vayu Gurugalu but not me.

      With best regards
      RNS

  4. Jayateertharao K
    November 8, 2022
    Reply

    Raghavendra vijaya written by sri gurujagannathadasaru book is available

Leave a Reply to nirashaCancel reply

This site uses Akismet to reduce spam. Learn how your comment data is processed.