ಪಲಿಮಾರಿನ ಪುಣ್ಯಕೋಟಿಗಳು

ಪುಣ್ಯಕೋಟಿ ಎನ್ನುವುದು ಈಗಿನ ಪೀಳಿಗೆಯ ಬಹುತೇಕರಿಗೆ ತಿಳಿಯದ, ಹಿಂದಿನ ಅನೇಕರಿಗೆ ಮರೆತುಹೋಗಿರುವ ಶಬ್ದ. ನೆನಪಿನ ಸುರುಳಿಯನ್ನು ಬಿಚ್ಚಿದರೆ ಪ್ರಯತ್ನಿಸಿದರೆ ಅಲ್ಲಿಇಲ್ಲಿ ಒಂದು ಚೂರು ನೆನಪಾಗಬಹುದೇನೋ. ಆದರೆ “ಖಂಡವಿದೆಕೋ ಮಾಂಸವಿದೆಕೋ” ಎನ್ನುವ ಒಂದು ಸಾಲು ಹೇಳಿಬಿಟ್ಟರೆ ಆಆಆಹ್ ಹೌದಲ್ಲ ಎಂದು ಸಂಪೂರ್ಣ ಹಾಡು ತಾನಾಗಿಯೆ ನೆನಪಿನ ಪರದೆಯ ಮೇಲೆ ಮೂಡುವುದು. ಬಹಳ ಮನೋಜ್ಞವಾದ ಗೋವು ಅದು, ಪುಣ್ಯಕೋಟಿ. ಈಗ ಸುಮಾರು 30ವರ್ಷಗಳ ಹಿಂದೆ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಪರಿಚಿತವಾದ ಹಾಡಿನ ರೂಪದ ಕಥೆಯಿದು. ಬಹಳ ಸರಳವಾದ ಆದರೆ ಹೃದಯದ ಆಳಕ್ಕೆ ಇಳಿಯುವ ಕಥಾವಸ್ತುವನ್ನು ಹೊಂದಿದೆ.

ಪುಣ್ಯಕೋಟಿ ಎನ್ನುವ ಹಸುವು ಮೇಯಲು ಹೊರಗೆ ಹೋದಾಗ ಅರ್ಬುತನೆಂಬ ಹುಲಿಯೊಂದು ಅದನ್ನು ತಿನ್ನಲು ಪ್ರಯತ್ನಿಸುತ್ತದೆ. ಧೃತಿಗೆಡದ ಹಸುವು ಹುಲಿಯೊಂದಿಗೆ “ಇನ್ನೂ ಹಾಲು ಕುಡಿಯುತ್ತಿರುವ ಮಗುವೊಂದಕ್ಕೆ ತಾಯಿ ನಾನು. ಅದನ್ನು ಇನ್ನೂ ಗೋಶಾಲೆಯಲ್ಲಿಯೇ ಬಿಟ್ಟು ಬಂದಿರುವೆ. ಸಂಜೆ ಅಮ್ಮ ಬರುವಳೆಂದು ಅದು ಎದುರು ನೋಡುತ್ತಿರುತ್ತದೆ. ಅದಕ್ಕೆ ಹಾಲೂಡಿಸಿ, ನಾಳೆಯಿಂದ ನಾನು ಬರುವುದಿಲ್ಲ, ಎದುರು ನೋಡದಿರು ಎಂದು ಹೇಳಿ ಮತ್ತೆ ಮರಳಿ ಬರುತ್ತೇನೆ” ಎಂದು ಪ್ರಾರ್ಥಿಸುತ್ತದೆ.

ಹಸುವಿನ ಮಾತನ್ನು ನಂಬಬೇಕೆಂದು ಹುಲಿಯ ಅಂತರಾತ್ಮವು ನುಡಿಯಿತು. ಹಾಗಾಗಿ ಅದು ಗೋವಿಗೆ “ಹೋಗಿ ಬಾ” ಎಂದು ಹೇಳಿತು. ಪುಣ್ಯಕೋಟಿಯು ಮನೆಗೆ ಬಂದು ಮಗುವಿಗೆ ಹಾಲು ಕುಡಿಸಿ, ವಾಸ್ತವವನ್ನು ಹೇಳಿ, ಅಕ್ಕ ಪಕ್ಕದಲ್ಲಿರುವ ಇತರ ಹಸುಗಳ ಮುಂದೆಲ್ಲ “ನನ್ನ ಮಗು ಇನ್ನು ಮುಂದೆ ಅನಾಥವಾಗುವುದು. ಅದನ್ನು ಒದೆಯದೆ, ಹಾಯದೆ ನಿಮ್ಮದೇ ಎಂದು ಭಾವಿಸಿರಿ” ಎಂದು ಪ್ರಾರ್ಥಿಸಿ ಅಲ್ಲಿಂದ ಹೊರಟು ಹುಲಿಯಿದ್ದಲ್ಲಿಗೆ ಬಂದಿತು.

ಹುಲಿಯು ನಂಬಿಕೆಯಿಂದ ಇದಕ್ಕೆ ಕಾದುಕೊಂಡೇ ಕೂತಿತ್ತು. ಆದರೆ ಮರಳಿ ಬಂದ ಪುಣ್ಯಕೋಟಿಯ ಪ್ರಾಮಾಣಿಕತೆಯ ಮುಂದೆ ಅದರ ಕ್ರೌರ್ಯವೆಲ್ಲ ನಶಿಸಿಹೋಗಿ “ನಿನ್ನಂತಹ ಪ್ರಾಮಾಣಿಕರನ್ನು ಕೊಂದರೆ ಪರಮಾತ್ಮನು ಮೆಚ್ಚನು” ಎಂದು ಬೆಟ್ಟದ ಮೇಲಿಂದ ಹಾರಿ ಬಿದ್ದು ತಾನೇ ತನ್ನ ಪ್ರಾಣವನ್ನು ನೀಗಿಕೊಂಡಿತು. ಇನ್ನು ಮುಂದೆ ಈ ರೀತಿ ಪರರನ್ನು ನೋಯಿಸಬಾರದೆಂದು ಅದಕ್ಕೆ ಎನಿಸಿರಬೇಕು ಅದಕ್ಕೆ. ಅಂತೂ ಪುಣ್ಯಕೋಟಿಯ ಸಾತ್ವಿಕಬಲದೆದುರು ತಾಮಸವು ತಲೆಬಾಗಿತು.

ಇದು ಪುಣ್ಯಕೋಟಿಯ ಕಥೆಯ ಸಂಕ್ಷಿಪ್ತ ವಿವರಣೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಇಂಟರ್ನೆಟ್ಟಿನಲ್ಲಿಯೇ ಲಭ್ಯವಿದೆ. ಆಸಕ್ತಿ ಇದ್ದವರು ನೋಡಬಹುದು. ಸಧ್ಯಕ್ಕೆ ನಾನು ಇಲ್ಲಿ ಹೇಳುತ್ತಿರುವುದು ಪಲಿಮಾರಿನ ಪುಣ್ಯಕೋಟಿಯ ಬಗ್ಗೆ. ಪುಣ್ಯಕೋಟಿಗಳು ಎಂದರೆ ಸರಿಯಾದೀತು.

ಹಿರಿಯರಿಂದ ಕೇಳಿ ತಿಳಿದಿರುವ ವಿಷಯವಿದು.

ಪಲಿಮಾರುಮಠದ 25ನೆಯ ಯತಿಗಳು ಶ್ರೀರಘುಪ್ರವೀರತೀರ್ಥರು. (1718 – 1796) ಇವರು ತಮ್ಮ ತೀವ್ರತರವಾದ ತಪಶ್ಚರ್ಯೆಗೆ ಹೆಸರಾದವರು. ಬಹುವಿಧವಾದ ಮಂತ್ರಸಿದ್ಧರಿವರು. ಘಟಿಕಾಲಚಲದಲ್ಲಿ ಪ್ರಾಣದೇವರನ್ನು ಬಹುಕಾಲ ಉಪಾಸನೆ ಮಾಡಿ ಅವನ ಸಂಪೂರ್ಣಕೃಪೆಗೆ ಪಾತ್ರರಾದವರು. ಘಟಿಕಾಲಚದ ಸರೋವರದಲ್ಲಿ ಅವಗಾಹನಸ್ನಾನ ಮಾಡುತ್ತಿದ್ದಾಗ ಪ್ರಾಣದೇವರ ಸುಂದರವಾದ ವಿಗ್ರಹವೊಂದು ಇವರ ಕೈಗೆ ಬಂದು ಸೇರಿತು. ಈ ಪ್ರಾಣದೇವನು ಇಂದಿಗೂ ಪಲಿಮಾರಿನ ಶ್ರೀಮಠದಲ್ಲಿ ಪೂಜೆ ಸ್ವೀಕಾರ ಮಾಡುತ್ತಿದ್ದಾನೆ. ಶ್ರೀಗಳವರು ರಚಿಸಿರುವ ಹನುಮಭೀಮಮಧ್ವಾಷ್ಟೋತ್ತರ ಶತನಾಮಗಳನ್ನು ಇಂದಿಗೂ ಪಠಿಸುವ ಸಂಪ್ರದಾಯವಿದೆ.

ನರ್ಮದೆ ಎನ್ನುವ ಒಂದು ಹಸು ಶ್ರೀರಘುಪ್ರವೀರತೀರ್ಥರಿಗೆ ಅತ್ಯಂತ ಪ್ರೀತ್ಯಾಸ್ಪದವಾಗಿತ್ತು. ಶ್ರೀಕೃಷ್ಣದೇವರ ಪಂಚಾಮೃತಕ್ಕೆ ನರ್ಮದೆಯೇ ಹಾಲುಕೊಡುವವಳು. ದುರ್ದೈವದ ಗಳಿಗೆಯೊಂದರಲ್ಲಿ ಹುಲಿಯೊಂದು ನರ್ಮದೆಯನ್ನು ತಿಂದುಬಿಟ್ಟಿತು. ಇದನ್ನು ತಿಳಿದ ಶ್ರೀರಘುಪ್ರವೀರತೀರ್ಥರ ಹೃದಯವು ತೀವ್ರವಾಗಿ ನೊಂದಿತು. ವ್ಯಥೆಗೊಂಡ ಅವರು ಪದ್ಮಾಸನದಲ್ಲಿ ಕುಳಿತುಬಿಟ್ಟರು. ಮಧ್ಯಾಹ್ನವಾದರೂ ಪೂಜೆಗೆ ಏಳಲಿಲ್ಲ. ಮಠದ ಸಿಬ್ಬಂದಿಗಳು ಚಿಂತಿತರಾದರು. ಇತ್ತ ಮಠದ ಹೊರಗೆ ವಿಲಕ್ಷಣವಾದ ಘಟನೆಯೊಂದು ನಡೆಯಿತು.

ನರ್ಮದೆಯನ್ನು ಕೊಂದ ಹುಲಿಯು ರಥಬೀದಿಯಲ್ಲಿ ಕಾಣಿಸಿಕೊಂಡಿತು. ನಿಧಾನವಾಗಿ ಶ್ರೀಕೃಷ್ಣಮಠದ ಮುಂದೆ ಬಂದು ಬಿದ್ದುಕೊಂಡಿತು. ಅತ್ತಿತ್ತ ಹೊರಳಾಡಿ, ನಾಲಗೆಯನ್ನು ಹೊರಚಾಚಿತು. ಜನರು ಭಯಗ್ರಸ್ತರಾಗಿ ನೋಡುತ್ತಿದ್ದರು. ನಿಧಾನವಾಗಿ ಸ್ವಾಮಿಗಳು ಅಲ್ಲಿಗೆ ಬಂದು “ಹುಲಿಗೆ ಸದ್ಗತಿಯಾಗಲಿ” ಎಂದು ಪ್ರಾರ್ಥಿಸುತ್ತಿದ್ದಂತೆ ಹುಲಿಯ ಪ್ರಾಣವು ಹೊರಟು ಹೋಯಿತು. ಭಯದಿಂದ ದೂರ ನಿಂತಿದ್ದ ಎಲ್ಲ ಜನರು ಈ ಘಟನೆಯನ್ನು ನೋಡಿ ಸೋಜಿಗಗೊಂಡರು. ಅವರೆಲ್ಲರಿಗೂ ಶ್ರೀಗಳವರಿಗೆ ನರ್ಮದೆಯ ಮೇಲೆ ಇದ್ದ ವಾತ್ಸಲ್ಯದ ಬಗ್ಗೆ ತಿಳುವಳಿಕೆ ಇತ್ತು. ಶ್ರೀಗಳವರ ತಪಸ್ಸಿನ ಶಕ್ತಿಯ ಬಗೆಗೆ ಕೂಡ ಅರಿವು ಕೂಡ ಇತ್ತು, ಆದರೆ ಆ ತಪಸ್ಸಿನ ಔನ್ನತ್ಯ ಹಾಗು ವಾತ್ಸಲ್ಯದ ಆಳ ಎರಡನ್ನೂ ಅವರೆಲ್ಲರೂ ಇಂದು ಕಣ್ಣಾರೆ ಕಂಡರು. ಅಂದಿನಿಂದ ಜನರೆಲ್ಲರೂ ಶ್ರೀಗಳವರನ್ನು “ಹುಲಿಕೊಂದ ಸ್ವಾಮಿಗಳು” ಎಂದೇ ಕರೆಯಲಾರಂಭಿಸಿದರು.

ಅರಣ್ಯದಲ್ಲಿ ಹುಲಿಯು ಇತರ ಪ್ರಾಣಿಗಳನ್ನು ತಿಂದೇ ಬದುಕುವುದು ಪ್ರಕೃತಿಯ ನಿಯಮ. ಹೀಗೆ ಇರುವಾಗ ಹುಲಿಯಲ್ಲಿ ದೋಷವನ್ನೆಂತು ಎಣಿಸುವುದು? ಹೀಗಾಗಿ “ಈ ಹುಲಿ ಕೊಂದ ಸ್ವಾಮಿಗಳು” ಎನ್ನುವುದನ್ನು ರೂಢ್ಯರ್ಥದಲ್ಲಿ ಸ್ವೀಕರಿಸದೆ ಯೌಗಿಕ ಅರ್ಥದಲ್ಲಿ ಪರಿಗಣಿಸುವುದು ಹೆಚ್ಚು ಸಮಂಜಸವಾಗಿದೆ. ಇಲ್ಲವಾದಲ್ಲಿ ಶ್ರೀಗಳವರ ತಪಃಶಕ್ತಿಯನ್ನು ಬಹಳ ಸೀಮಿತವಾದ ದೃಷ್ಟಿಯಿಂದ ನೋಡಿದಂತಾಗುತ್ತದೆ.

ರಾಗಾದಿಗಳನ್ನು ಮೆಟ್ಟಿ ನಿಲ್ಲುವುದು ಸಂನ್ಯಾಸದ ಬಹುಮುಖ್ಯ ನಿಯಮ. ನರ್ಮದೆಯ ಸಾವಿಗೆ ಸಾಮಾನ್ಯರಂತೆ ಶೋಕಿಸಿದರು, ಕೋಪದಿಂದ ಹುಲಿಯ ಸಾವಿಗಾಗಿ ಎದುರು ನೋಡುತ್ತ ಕೂತರು ಎನ್ನುವ ಆಲೋಚನೆಯನ್ನು ಶ್ರೀರಘುಪ್ರವೀರರಂತಹ ತಪಸ್ವಿಗಳ ವಿಷಯದಲ್ಲಿ ಸರ್ವಥಾ ಮಾಡಬಾರದು. ನರ್ಮದೆಯು ಸತ್ವಗುಣಕ್ಕೂ ಹುಲಿಯು ತಮೋಗುಣಕ್ಕೂ ಪ್ರತಿನಿಧಿಗಳು. ಪ್ರತಿನಿತ್ಯ ಅಭಿಷೇಕಕ್ಕೆ ಹಾಲು ಕೊಡುವ ಸಾತ್ವಿಕ ಶಕ್ತಿಯ ಎದುರು ರಕ್ತದಾಹಿಯಾದ ತಮೋಶಕ್ತಿಯು ಮೇಲುಗೈ ಸಾಧಿಸಿದ್ದೇ ಅವರ ದುಃಖಕ್ಕೆ ಕಾರಣವಾಗಿತ್ತು. ಆ ದುಃಖವು ಕೂಡ ರಜೋಮೂಲದಿಂದ ಬರದೆ ಸಾತ್ವಿಕ ಮೂಲದಿಂದ ಬಂದದ್ದು. ಹುಲಿಯ ಮರಣವು ನಿಶ್ಚಿತವಾದದ್ದು. ರಘುಪ್ರವೀರತೀರ್ಥರ ಸಾತ್ವಿಕ ಕೋಪವೇ ಅದರ ಮರಣಕ್ಕೆ ನಿಮಿತ್ತವಾಗಿದ್ದು ದೈವನಿಯಮವೇ ಹೊರತು ಮತ್ತೇನೂ ಅಲ್ಲ.

ಸತ್ತ ಹುಲಿಯ ವಿಷಯದಲ್ಲಿ ಶ್ರೀಗಳವರ ಮುಂದಿನ ನಡೆಯೂ ಕೂಡ ಗಮನಾರ್ಹವಾದುದು. ಶ್ರೀಗಳವರು ಆ ಹುಲಿಯ ದೇಹವನ್ನು ನಿಕೃಷ್ಟವಾಗಿ ಕಾಣಲಿಲ್ಲ. ಅದರ ಅಂತ್ಯ ಸಂಸ್ಕಾರವನ್ನು ಶ್ರೀಮಠದ ಪರಿಸರದಲ್ಲಿಯೇ ಮಾಡಿಸಿದರು. ಕ್ಷಮಾಶೀಲರಾಗಿರದೆ ಹೋದಲ್ಲಿ ಹೀಗೆ ಮಾಡುತ್ತಿದ್ದರೆ?

ಇನ್ನೊಂದು ವಿಷಯವು ಕೂಡ ಗಮನಾರ್ಹವಾಗಿದೆ. ಲೋಕದಲ್ಲಿ ತಾತ್ಕಾಲಿಕವಾಗಿ ಕೆಟ್ಟ ಶಕ್ತಿಯು ಒಳ್ಳೆಯ ಶಕ್ತಿಯ ಮೇಲೆ ಜಯಿಸುವಂತೆ ಕಂಡರೂ ಕೂಡ ಅಂತಿಮವಾಗಿ ಸತ್ವಕ್ಕೇ ಶಾಶ್ವತ ಜಯವು ದೊರೆವುದು. ಈ ರೀತಿಯ ಆಸುರೀಸ್ವಭಾವವನ್ನು ತೊಡೆದು ಹಾಕುವ ಗುಣವು ಶ್ರೀರಘುಪ್ರವೀರತೀರ್ಥರಂತಹ ಮಹಾಜ್ಞಾನಿಗಳಿಗೆ ಇದೆ. ಭಗವಂತನೇ ಇಂತಹ ಪವಾಡಗಳನ್ನು ಇವರ ಮೂಲಕ ಮಾಡಿಸಿ ಜಗತ್ತಿಗೆ ತನ್ನ ಮಹಿಮೆಯನ್ನು ತೋರಿಸುತ್ತಾನೆ. ಒಂದು ವೇಳೆ ಜೀವಿಯ ಯೋಗ್ಯತೆಯು ಮೂಲತಃ ಚೆನ್ನಾಗಿದ್ದು ಪ್ರಾರಬ್ಧವಶಾತ್ ಅವನಿಂದ ಕೆಟ್ಟ ಕೆಲಸಗಳು ಆಗುವ ಸಂಭವವೂ ಇಲ್ಲದಿಲ್ಲ. ಅಂತಹ ಘಟನೆಯಾದಾಗ ಆ ಜೀವಿಯು ತನ್ನ ತಪ್ಪನ್ನು ತಿಳಿದು ಪಾಪದಿಂದ ದೂರವಾಗಲು ಅವಕಾಶವೂ ಉಂಟು. ರಘುಪ್ರವೀರರಂತಹ ಮಹಾನುಭಾವರ ಮುಂದೆ ಶುದ್ಧಾಂತಃಕರಣದಿಂದ ಶರಣಾಗತರಾದಲ್ಲಿ ಅವರು ನಮ್ಮ ತಮೋಭಾವನೆಗಳನ್ನು ನಾಶಮಾಡಿ ಉತ್ತಮಗತಿಯೆಡೆಗೆ ನಡೆಸಬಲ್ಲರು. ಹುಲಿಯ ವಿಷಯದಲ್ಲಿ ಆಗಿರುವುದು ಇದೇ. ಯೋಗ್ಯತೆ ಉತ್ತಮವಾಗಿದ್ದಕ್ಕೇ ಅದು ರಘುಪ್ರವೀರತೀರ್ಥರ ಮುಂದೆ ಬಂದು ತನ್ನ ಪ್ರಾಣವನ್ನು ತ್ಯಾಗ ಮಾಡಿತು. ಇಲ್ಲವಾದಲ್ಲಿ ಅದು ಕಾಡಿನಲ್ಲಿಯೇ ಸತ್ತು ಬೀಳಬೇಕಾಗಿತ್ತು ಅಲ್ಲವೇ? ಪ್ರಾಣ ತ್ಯಾಗದ ನಂತರ ಅದಕ್ಕೆ ಸಿಕ್ಕ ಸ್ಥಳವೇ ಅದರ ಉತ್ತಮ ಯೋಗ್ಯತೆಯನ್ನು ತೋರಿಸುತ್ತದೆ.

ಎಂತಹ ಸ್ಥಳ ಅದು? ಮಠದ ಪೂರ್ವಿಕ ಯತಿಗಳು ವೃಂದಾವನಸ್ಥರಾದ ಪ್ರದೇಶದಲ್ಲಿಯೇ, ಅವರುಗಳ ಮಧ್ಯದಲ್ಲಿ ತನಗೂ ಸ್ಥಳವನ್ನು ಸಂಪಾದಿಸಿಕೊಂಡಿತು ಆ ಹುಲಿ. ಕೃಷ್ಣಮಠದಲ್ಲಿ ಇರುವ ವೃಂದಾವನಗಳ ಮಧ್ಯದಲ್ಲಿ ನಾವೆಲ್ಲ ಇಂದಿಗೂ ನೋಡುವ ಹುಲಿಯ ಬೊಂಬೆಯು ಆ ಹುಲಿಯದ್ದೇ ಪ್ರತಿಕೃತಿ.

ಮಹಾಮಹಿಮರಾದ ರಘುಪ್ರವೀರರ ಅತುಲವಾತ್ಸಲ್ಯಕ್ಕೆ ಪಾತ್ರವಾಗಿದ್ದ ನರ್ಮದೆಯು ಒಂದು ರೀತಿಯ ಪುಣ್ಯಕೋಟಿ; ತಪೋನಿಧಿಗಳ ವೃಂದಾವನಸಂಕುಲದಲ್ಲಿಯೇ ಸ್ಥಳಪ್ರಾಪ್ತಿಮಾಡಿಕೊಂಡ ಹುಲಿಯೂ ಕೂಡ ಬಹುಜನ್ಮದ ಪುಣ್ಯವನ್ನೇ ಹೊಂದಿದ್ದರಲ್ಲಿ ಸಂದೇಹವಿಲ್ಲ. ಹೀಗಾಗಿ ಇಲ್ಲಿ ಅದೂ ಕೂಡ ಪುಣ್ಯಕೋಟಿಯೇ ಆಗಿದೆ; ನರ್ಮದೆ ಹಾಗು ಹುಲಿಗೆ ಎರಡಕ್ಕೂ ತಮ್ಮ ಪುಣ್ಯಬಲವನ್ನಿತ್ತ ಶ್ರೀರಘುಪ್ರವೀರತೀರ್ಥರು ನಿಜವಾದ ಅರ್ಥದಲ್ಲಿ ಪುಣ್ಯಕೋಟಿಯಾಗಿದ್ದಾರೆ.

ರಘುಪ್ರವೀರತೀರ್ಥರು ವೃಂದಾವನಸ್ಥರಾದದ್ದು ಇನ್ನೊಬ್ಬ ಸುಪ್ರಸಿದ್ಧ ಪುಣ್ಯಕೋಟಿಯ ಆರಾಧನೆಯ ದಿನದಂದು. ಆ ಪುಣ್ಯಕೋಟಿ ಬೇರೆ ಯಾರೋ ಅಲ್ಲ. ಇಡೀ ಜಗತ್ತಿಗೆ ತಮ್ಮ ಪುಣ್ಯವನ್ನು ಧಾರೆ ಎರೆಯುತ್ತಿರುವ ಶ್ರೀರಾಯರು! ಶ್ರಾವಣ ಬಹುಳ ದ್ವಿತೀಯಾದಂದು ನಡೆಯುವ ಕಾಮಧೇನುವಿನ ಆರಾಧನೆಯ ಸಂದರ್ಭದಲ್ಲಿ ಪುಣ್ಯಕೋಟಿಯ ಸ್ಮರಣೆಯೂ ಅವಶ್ಯವಾಗಿ ನಡೆಯಬೇಕಾದದ್ದು ಕರ್ತವ್ಯವಲ್ಲವೇ!

ರಾಯರ ಆರಾಧನೆಯ ದಿನದಂದು ಯಾರಾದರೂ ಉಡುಪಿಯಲ್ಲಿಯೇ ಇದ್ದರೆ ರಾಯರ ದರ್ಶನವಾದ ನಂತರ ತಪ್ಪದೇ ಕೃಷ್ಣಮಠದಲ್ಲಿರುವ ಶ್ರೀರಘುಪ್ರವೀರತೀರ್ಥರ ದರ್ಶನವನ್ನೂ ಮಾಡಿರಿ. ಇದು ರಾಯರ ಸಂತಸಕ್ಕೂ ಕಾರಣವಾಗಬಲ್ಲದು. ಜ್ಞಾನಿಗಳ ದರ್ಶನವೂ ನಮ್ಮ ತಮೋಗುಣದ ಸಂಹಾರಕ್ಕೆ ಒಂದು ಉಪಾಯ. ಮರೆಯದಿರಿ.

  • ಶ್ರೀರಘುಪ್ರವೀರತೀರ್ಥರು ಹಾಗು ಶ್ರೀರಘುಭೂಷಣತೀರ್ಥರ ಫೋಟೋ ಕೃಪೆ : ವಿದ್ವಾನ್ ಶ್ರೀ ಜನಾರ್ದನ ಆಚಾರ್ಯ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

2 Comments

  1. Jagannath Abbur
    August 8, 2017
    Reply

    Excellent writing .. shree raghupraveera teertha gurubhyo namah

  2. Vijayashree Pramod
    August 30, 2018
    Reply

    Dhanyavaadagalu…. Sri Raghupravira thirthara asaadhaarana mahimegaLa bagge athyantha adhbhuthavaada lekhanadinda thiLisikottiddakke ….
    Sri Gurubhyonnamaha…..

Leave a Reply to Jagannath AbburCancel reply

This site uses Akismet to reduce spam. Learn how your comment data is processed.